ʼಶ್‌ʼ ಸಿನಿಮಾದ ಭಯಾನಕ ಉದ್ದಿನ ವಡೆ ಘಟನೆ

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 32


‘ಶ್‌’ ಸಿನಿಮಾ ಚಿತ್ರೀಕರಣ ಮುಗಿಸಿ ಹೋಗುವಾಗ ನಾನು ಉಪೇಂದ್ರ ಅವರ ಬಳಿ, ದೊಡ್ಡ ಡೈರೆಕ್ಟರ್‌ ಜೊತೆಗೆ ಕೆಲಸ ಮಾಡಿದ ಹೆಮ್ಮೆಯಲ್ಲಿ ಹೋಗುತ್ತಿದ್ದೇನೆ. ನನಗೆ ಪೇಮೆಂಟ್‌ ಬೇಡ ಎಂದು ಆ ಸಮಯದಲ್ಲಿಯೇ ಹೇಳಿದ್ದೆ. ನಾವು ಯಾವ ದೊಡ್ಡ ಡೈರೆಕ್ಟರ್‌ ಎಂದು ಅವರು ಹೇಳಿದ್ರು.


ನಾವೆಲ್ಲ ಮಧ್ಯಾಹ್ನ ವಡೆ ತಿನ್ನುತ್ತಿದ್ವಿ. ಅಡುಗೆಯವ ಎಲ್ಲರ ಮುಖ ನೋಡುತ್ತಿದ್ದ. ನನಗೆ ಬಾಯಲ್ಲಿ ಏನೋ ಗಟ್ಟಿಯಾದ ವಸ್ತು ಸಿಕ್ಕಿದಂತಾಯ್ತು. ಅವನು ಓಡಿ ಬಂದು ಕೊಡಿ ಕೊಡಿ ಎಂದ. ನೋಡಿದ್ರೆ, ಮಿಕ್ಸಿಯ ನಟ್‌ ಕಳೆದುಹೋಗಿತ್ತಂತೆ, ಅದು ಉದ್ದಿನ ಹಿಟ್ಟಿನಲ್ಲಿ ಬಿದ್ದಿತ್ತಂತೆ, ಅದು ಯಾರ ಬಾಯಿಗೆ ಬರುತ್ತದೆಯೆಂದು ಅವನು ಕಾಯುತ್ತಿದ್ದನಂತೆ. ಅದಕ್ಕೆ ನಾನು ಬ್ಲೇಡ್‌ ಇದೆಯೋ ಇಲ್ವೋ ನೋಡು, ಸಾರಲ್ಲಿ ಸೇರಿ ಯಾರದಾದರೂ, ಹೊಟ್ಟೆಗೆ ಹೋಗಬಹುದು ಎಂದು ಹೇಳಿದೆ. ಉಪೇಂದ್ರ ಅವರು ಆಪರೇಷನ್‌ ಅಂಥ ಸಿನಿಮಾದಲ್ಲಿಯೂ ನನಗೆ ಪಾತ್ರ ಕೊಟ್ಟಿದ್ರು. ನನ್ನನ್ನು ಹೆಜ್ಜೆ ಹೆಜ್ಜೆಗೂ ಅವರು ತಿದ್ದುತ್ತಿದ್ದರು.


ಒಂದು ದಿವಸವೂ ನಾನು ಅವರ ಮನೆಗೆ ಹೋಗಿಲ್ಲ. ಕೆಲಸ ಇಲ್ಲದೇ ಅವರು ಮಾಡುತ್ತಿದ್ದ ಸಿನಿಮಾಗಳ ಚಿತ್ರೀಕರಣಕ್ಕೂ ಹೋಗಿಲ್ಲ. ಫೋನ್‌ ಕೂಡ ಮಾಡುವುದಿಲ್ಲ. ಆದರೂ, ಅವರ ಸಿನಿಮಾಗಳಲ್ಲಿ ನಿಮ್ಮಗೊಂದು ಪಾತ್ರವಿದೆ ಎಂದು ಕರೆಯುತ್ತಾರೆ. ನಾನೇ ಊರಲ್ಲಿ ಇಲ್ಲದ ಸಂದರ್ಭದಲ್ಲಿ ಅವರ ಸಿನಿಮಾಗಳಲ್ಲಿ ಮಾಡದೇ ಹೋಗಿರಬಹುದು. ಇಲ್ಲದಿದ್ದರೆ ಯಾವುದಾರೂ, ಒಂದು ಪಾತ್ರ ಕೊಟ್ಟೇ ಕೊಡುತ್ತಾರೆ. ಅವರ ಮನೆಯ ಗೃಹಪ್ರವೇಶಕ್ಕೆ ನನ್ನನ್ನು ಕರೆದಿದ್ರು.


ಉಪ್ಪಿ 2 ಸಿನಿಮಾದ ಪ್ರಚಾರ ಕಾರ್ಯಕ್ರಮದ ವೇಳೆ ನನ್ನನ್ನು ಕ್ಯಾರವಾನ್‌ನಲ್ಲಿ ಕೂರಿಸಿ, ಆ ಸಿನಿಮಾದಲ್ಲಿ ಅವರು ಹಾಕಿದ್ದ ವಿಗ್‌ ನನ್ನ ತಲೆಗೆ ಹಾಕಿ, ಉದ್ದದ ಡೈಲಾಗ್‌ ಕೊಟ್ರು. ನಾನು ಬರುವವರೆಗೂ ಜನರನ್ನು ಸಂಭಾಳಿಸಿ ಎಂದ್ರು. ವೇದಿಕೆ ಮುಂದೆ ಸಾವಿರಾರು ಜನ ಇದ್ರು. 9 ಪುಟವೇನೋ ಇತ್ತು. ಅವತ್ತು ಆರು ತರಹದ ಉಪ್ಪಿಟ್ಟು ಮಾಡಿಸಿದ್ರು. ಅವರ ಮೇಕಪ್ ಮ್ಯಾನ್‌ ರಾಮಕೃಷ್ಣ ಅವರಿಗೆ ಹೇಳಿ, ನನಗೂ ಮೇಕಪ್‌ ಮಾಡಿಸಿದ್ರು. ಪ್ರದರ್ಶನ ಕೊಟ್ಟಾದ ಮೇಲೆ, ಹಾಗೆಯೇ ಹೋಗಬೇಡಿ. ಇಸ್ಕೊಂಡು ಹೋಗಬೇಕು ನೀವು ಎಂದ್ರು, ಪೇಮೆಂಟ್‌ ಬಂತೋ ಇಲ್ವೋ ಎಂಬುದನ್ನು ಸ್ಥಳದಲ್ಲಿಯೇ ಚೆಕ್‌ ಮಾಡುತ್ತಾರೆ ಅವರು.


ಪ್ರೆಸ್‌ ಮೀಟ್‌ಗೂ ಬನ್ನಿ ಎಂದ್ರು. ದೊಡ್ಡ ಸ್ಟಾರ್‌ಗಳಿದ್ದಾಗ ನಮ್ಮನ್ನು ಯಾರೂ ಅಲ್ಲಿ ಕೇಳುವುದಿಲ್ಲ. ಆದರೂ, ಅವರು ಬಿಡಲಿಲ್ಲ. ನೀವು ಬರಲೇಬೇಕು ಎಂದ್ರು. ಉಪ್ಪಿ ರೆಸಾರ್ಟ್‌ನಲ್ಲಿ ಪ್ರೆಸ್‌ ಮೀಟ್‌ ಇತ್ತು. ನಾನು ಹೋದೆ. ಅವರು ಬಂದ್ರು. ಆ ಹುಡುಗಿ ಮೈಕ್‌ ಕಸಿದು ಈಗ ನೀವು ಮಾತಾಡಬೇಕು ಎಂದ್ರು. ನಾನಾ ಎಂದೆ. ಹೌದು ನೀವೇ ಮಾತಾಡಬೇಕು. ಬೇಕಾ ಹಾಡಿಗೆ ನಿಮ್ಮದೇ ಲೀಡ್ ಎಂದು ಹೇಳಿ ಹೊರಟೇ ಬಿಟ್ರು. ನಾನು ರೆಡಿಯಾಗಿ ಕುಡುಕನ ತರಹ ವೇದಿಕೆ ಮೇಲೆ ಹೋಗಿ, ಕೊಡ್ರಿ ಮೈಕ್‌ ಎಂದು ಕಿತ್ತುಕೊಂಡೆ. ‘ಬೇಕು, ಬೇಕು ಎಲ್ಲರಿಗೂ ಬೇಕು ಪ್ರೆಸ್‌ನವರಿಗೂ ಬೇಕು ಫೂಟೇಜ್‌’ ಎಂದು ಆರೇಳು ನಿಮಿಷ ಮಾತಾಡಿ ಬಂದೆ. ನೋಡಿ, ಇದನ್ನು ಬೇರೆಯವರು ಮಾಡಲು ಆಗುತ್ತಾ ಅದಕ್ಕೆ ನಿಮ್ಮನ್ನು ಕರೆಸಿದ್ದು ಎಂದ್ರು. ಈಜು ಬರದವನನ್ನು ನೀರಿಗೆ ಹಾಕಿದ್ರೆ ಅವನು ಈಜುತ್ತಾನೆ ಎಂಬ ನಂಬಿಕೆ ಅವರದು. ಈ ಕಲಾವಿದನಿಂದ ಇದನ್ನು ಮಾಡಿಸಲೇಬಹುದು ಎಂಬ ಭರವಸೆ ಅವರಿಗಿದೆ. ಆ ಭರವಸೆಯೇ ಅವರ ಜೀವನ. ಆದರೆ, ಎದುರಿಗೆ ಹೊಗಳುವುದು, ತೆಗಳುವುದನ್ನು ಅವರು ಮಾಡುವುದಿಲ್ಲ. ಆದರೆ, ಕೆಲಸ ತೆಗೆಸುವುದರಲ್ಲಿ ಅತ್ಯಂತ ಅದ್ಭುತವಾದ ನಿರ್ದೇಶಕ. ಸಾಕು ಎನ್ನುವವನು ಸಾಹುಕಾರ. ಬೇಕು ಎನ್ನುವವನು ಭಿಕ್ಷುಕ. ಅವರಿಗೆ ದುಡ್ಡಿನ ಬಗ್ಗೆ ಆತ್ಮತೃಪ್ತಿ ಇದೆ. ಆದರೆ, ಕೆಲಸದ ಬಗ್ಗೆ ಇಲ್ಲ.ಮುಂದುವರೆಯುವುದು...

16 views