ʼಸೂಪರ್‌ʼ ಸಿನಿಮಾ ಮತ್ತು ಪೇನ್‌ ಕಿಲ್ಲರ್‌ ಮಾತ್ರೆ

ಮಿಮಿಕ್ರಿ ದಯಾನಂದ್‌ ಲೈಫ್‌ ಸ್ಟೋರಿ ಭಾಗ 37
‘ಸೂಪರ್‌’ ಸಿನಿಮಾದ ಕಾರ್ಯಕ್ರಮದ ವೇಳೆ ಹೊರ ರಾಜ್ಯದಲ್ಲಿದ್ದೆ. ಉಪೇಂದ್ರ ಅವರು ಕರೆ ಮಾಡಿ ನೀವು ಕಾರ್ಯಕ್ರಮ ನಡೆಸಿಕೊಡಬೇಕು. ಇಬ್ಬರು ಕಲಾವಿದರು ಒಪ್ಪಿಕೊಂಡಿದ್ರು. ಆದರೆ, ಅವರಿಗೆ ಮಾಡಲು ಆಗುತ್ತಿಲ್ಲ. ನೀವೇ ಅದನ್ನು ನಡೆಸಿಕೊಡಬೇಕು. ನೀವು ನಾಳೆ 7 ಗಂಟೆ ಒಳಗೆ ಇಲ್ಲಿರಬೇಕು. ವಿಮಾನದಲ್ಲಿಯಾದರೂ, ಬನ್ನಿ ಎಂದ್ರು. ಕಾರು ತೆಗೆದುಕೊಂಡು ಬಂದಿದ್ದೇನೆ. ಅದರಲ್ಲೇ ಬರುತ್ತೇನೆ ಎಂದೆ. ಊಟ ಮಾಡುತ್ತಿದ್ದವನು ಅರ್ಧಕ್ಕೆ ನಿಲ್ಲಿಸಿ, 13 ಗಂಟೆ ಟ್ರಾವೆಲ್‌ ಮಾಡಿ ಬಂದೆ.


ಇಲ್ಲಿ ಬಂದಾಗ ಸಂಜೆ 5 ಗಂಟೆ ಆಗಿ ಹೋಗಿತ್ತು. ಸ್ಟೇಡಿಯಂ ಬಳಿ ಹೋದೆ. ಪೂರ್ತಿ ಸ್ಟೇಡಿಯಂನಲ್ಲಿ ಪ್ಲಸ್‌ ಶೈಲಿಯಲ್ಲಿ ವೇದಿಕೆ ಸಿದ್ಧಪಡಿಸಿದ್ರು. 25 ಪುಟದ ಡೈಲಾಗ್‌ ಇತ್ತು. ಹಿಂದೆ ಕ್ಲಿಪಿಂಗ್‌ ತಕ್ಕಂತೆ 15 ನಿಮಿಷ ಉಪೇಂದ್ರ ಅವರ ಹಿಸ್ಟರಿ ಹೇಳಬೇಕು. ನಂತರ ಕನ್ನಡ ಇಂಡಸ್ಟ್ರಿಯಲ್ಲಿ ಉಪೇಂದ್ರ ಅವರು ಏನು ಮಾಡಿದ್ರು ಎಂಬುದನ್ನು ಹೇಳಬೇಕಿತ್ತು. ರಾಜಕಾರಣಿಗಳು, ದೊಡ್ಡ, ದೊಡ್ಡ ವ್ಯಕ್ತಿಗಳಿದ್ದ ಅದ್ದೂರಿ ಕಾರ್ಯಕ್ರಮವದು. ಸ್ಟೇಡಿಯಂ ಮಧ್ಯೆ ಓಡಿ ನಾನು ವೇದಿಕೆ ಹತ್ತಬೇಕಿತ್ತು. ಅಲ್ಲಿ 360 ಡಿಗ್ರಿ ತಿರುಗಿ ಮಾತನಾಡಬೇಕು. 9 ಕ್ಯಾಮೆರಾ ಸೆರೆ ಹಿಡಿಯುತ್ತಿತ್ತು. ಡೈಲಾಗ್‌ ನೋಡುತ್ತಿದ್ದೆ. ಉಪೇಂದ್ರ ಬಂದು, ಆ ಹಾಳೆಗಳನ್ನು ಬದಿಗೆ ಇಟ್ರು. ಅದ್ಯಾಕೆ ಬೇಕು ನಿಮಗೆ. ಬನ್ನಿ ನಾನೇ ಹೇಳ್ತೇನೆ ಎಂದ್ರು. ಏನೇನು ಮಾಡಬೇಕು ಎಂಬುದನ್ನು ಎಲ್ಲ ಹೇಳಿ, ನಿಮ್ಮ ತಲೆಯೊಳಗೆ ಇವೆಲ್ಲ ಇದೆ. ಮಾಡ್ತೀರ ಹೋಗಿ ಎಂದ್ರು. ಕ್ಲಿಪಿಂಗ್‌ ತಕ್ಕಂತೆ ಹೇಳುವುದು ನನಗೆ ಚಾಲೆಂಜ್‌ ಆಗಿತ್ತು. ಹಿಂದೆ, ಮುಂದೆ ಹೇಳಲು ಆಗುತ್ತಿರಲಿಲ್ಲ. ದೇವರ ದಯೆ ಮಾಡಿ ಕೆಳಗೆ ಬರುತ್ತಿರಬೇಕಾದರೆ, ಡ್ಯಾನ್ಸರ್‌ಗಳೆಲ್ಲ ನಿಂತಿದ್ರು. ಮೆಟ್ಟಿಲಲ್ಲಿ ಹತ್ತಿಕೊಂಡು ಹೋಗಿದ್ದೆ. ನಾನು ವಾಪಸ್‌ ಬರಬೇಕಾದ್ರೆ ಲೈಟ್‌ಗಳು ಆಫ್‌ ಆಗಿತ್ತು. ಜನರೇಟರ್‌ ಕೆಟ್ಟು ಹೋಗಿತ್ತು. ಅಮಾವಾಸ್ಯೆ ಕತ್ತಲಾಗಿತ್ತು. ನಾನು ಮೆಟ್ಟಿಲಿದೆ ಎಂದು ಓಡಿಹೋಗಿ ಇಳಿದುಬಿಟ್ಟೆ. ಶೂಟಿಂಗ್‌ನವರು ಮೆಟ್ಟಿಲ್ಲನ್ನು ಎತ್ತಿಕೊಂಡು ಹೋಗಿಬಿಟ್ಟಿದ್ರು. ಎತ್ತರದಿಂದ ಬಿದ್ದ ಕಾರಣಕ್ಕೆ ಮೂಳೆ ನೆಲಕ್ಕೆ ಹೊಡಿತು. ಶೋ ನಡೆಯುತ್ತಿತ್ತು. ಉಪೇಂದ್ರ ಅವರ ಸಿನಿಮಾ ಅಲ್ವಾ, ಎಲ್ಲರೂ ನಾನು ಬಿದ್ದಿದ್ದು ಗಿಮಿಕ್‌ ಎಂದುಕೊಂಡ್ರು. ಯಾರೂ ಬಂದು ನನ್ನನ್ನು ಎತ್ತಲಿಲ್ಲ. ದೊಡ್ಡಣ್ಣ ಅವರು ದಯಾನಂದ್‌, ನಿಜವಾಗಲೂ ಬಿದ್ದವ್ನೆ ಎಂದ್ರು. ಬೌನ್ಸರ್ಸ್‌ ಬಂದು ಎತ್ತಿದ್ರು. ಕಾಲು ಊದಿತ್ತು. ಆಸ್ಪತ್ರೆಯೆಲ್ಲ ಏನು ಬೇಡ ನನಗೆ ಮನೆಗೆ ಬಿಡಿ ಎಂದೆ. ನನ್ನ ಕಾರಲ್ಲಿ ಡ್ರೈವರ್‌ ಜೊತೆ ಮನೆಗೆ ಬಂದೆ. ಉಪೇಂದ್ರ ಏನು ಹೇಳಿದ್ರೂ, ಆಸ್ಪತ್ರೆಗೆ ನಾನು ಹೋಗಲಿಲ್ಲ. ಮರುದಿನ ಕಾಲು ಸಿಕ್ಕಾಪಟ್ಟೆ ಊದಿಕೊಂಡುಬಿಟ್ಟಿತ್ತು. ಕಾಲಿಗೆ ಚಿಕಿತ್ಸೆ ಕೊಟ್ರು. ರಾಕ್‌ಲೈನ್‌ ವೆಂಕಟೇಶ್‌, ಉಪೇಂದ್ರ ಅವರು ಆರೋಗ್ಯ ವಿಚಾರಿಸಿ, ಮನೆಗೆ ಬಂದು ನೋಡಿಕೊಂಡು ಹೋದ್ರು.


ಈ ಘಟನೆ ಆದ ಮೇಲೆ ಕುಂಟಲು ಶುರು ಮಾಡಿದೆ. ನನ್ನ ವಿದೇಶಿ ಶೋಗಳನ್ನು ಕುಂಟುತ್ತಲೇ ಮಾಡಿದ್ದೇನೆ. ಮನೆಯಲ್ಲಿ ಕಾಲು ನೋವು ಎಂದ್ರೆ ಹೊರಗೆ ಹೋಗಲು ಬಿಡುವುದಿಲ್ಲ. ಹಾಗಾಗಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಪೇನ್‌ ಕಿಲ್ಲರ್‌ ತೆಗೆದುಕೊಳ್ಳುತ್ತಿದ್ದೆ. ಶೋ ಇದ್ರೆ ಮತ್ತೊಂದು ತಿನ್ನುತ್ತಿದ್ದೆ. ಅದರ ಜೊತೆ ವ್ಯಾಯಾಮ ಇರಲಿಲ್ಲ. ಯೂರಿಕ್‌ ಆ್ಯಸಿಡ್‌ ಹೆಚ್ಚಾಯಿತು. 14 ಸಾವಿರ ಶೋ ಮಾಡಿದ್ದೇನೆ. ನನ್ನ ಸೊಂಟವೂ ಸವೆದು ಹೋಯ್ತು.ಮುಂದುವರೆಯುವುದು...

19 views