“ಅಕ್ಕನ ಮಗಳನ್ನು ಕಿತ್ತು ತಿನ್ನುತ್ತಿದ್ದ ಕಿರಾತಕ ಸೋದರಮಾವನ ವಿಚಿತ್ರ ಕೇಸ್”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು ಭಾಗ 6


ಪೊಲೀಸ್ ‌ಅಧಿಕಾರಿಗಳನ್ನು ಸಮಾಜದ ಬೇರೆ ಭಾಗವಾಗಿ ಯಾರೂ ನೋಡಬಾರದು. ಪೊಲೀಸರು ಸಮಾಜದ ಮಧ್ಯದಿಂದ ಬಂದು ಅಧಿಕಾರಿಗಳಾಗಿರುತ್ತಾರೆ. ಅವರು ಸಮಾಜದ ಭಾಗವೇ ಆಗಿರುತ್ತಾರೆ. ಎಲ್ಲ ಪೊಲೀಸರು ಜನ ತಿಳಿದುಕೊಂಡಿರುವ ಹಾಗೆ ರಾಕ್ಷಕ ಪ್ರವೃತ್ತಿಯವರು ಅಲ್ಲವೇ ಅಲ್ಲ. ಅಪಘಾತವಾದಾಗ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಂತಹದು, ಆ ವ್ಯಕ್ತಿಗೆ ಯಾರು ರಕ್ತವನ್ನು ಕೊಡದಿದ್ದಾಗ ಅವರೇ ಕೊಡುವ ಎಷ್ಟೋ ಘಟನೆಗಳು ನಡೆದಿವೆ. ಇದು ಪೊಲೀಸರ ಮಾನವೀಯ ಮುಖವನ್ನು ತೋರಿಸುತ್ತದೆ.


ಸಾಯಲು ಅರ್ಹನಾದ ರೌಡಿಗಳ ಮೇಲೆ ಹಲ್ಲೆ ಆದಾಗ ಆತನನನ್ನು ಯಾರೂ ಆಸ್ಪತ್ರೆಗೆ ಕರೆದುಕೊಂಡು ಹೋಗುವುದೇ ಇಲ್ಲ. ಸಾಯ್ಲಿ ಅಂಥ ಬಿಡ್ತಾರೆ. ಆದರೆ ಪೊಲೀಸ್‌ನವರು ಹಾಗೆ ಮಾಡೋಕೆ ಬರಲ್ಲ. ರೌಡಿಗಳು ಸಮಾಜಕ್ಕೆ ಕಂಟಕವಾಗಿದ್ದರೂ, ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲು ಮಾಡ್ತಾರೆ. ಕಣ್ಣ ಮುಂದೆ ಇಂಥ ಘಟನೆ ನಡೆದಾಗ ಪ್ರಾಥಮಿಕ ಚಿಕಿತ್ಸೆ ನೀಡುವುದು ಮತ್ತು ಚಿಕಿತ್ಸೆ ಕೊಡಿಸುವುದು ಪೊಲೀಸರ ಆದ್ಯ ಕರ್ತವ್ಯ. ಹೀಗೆ ರೌಡಿಗಳನ್ನು ದಾಖಲು ಮಾಡಿದಾಗ ಆತನ ಸಂಬಂಧಿಕರ್‍ಯಾರು ಬರುವುದಿಲ್ಲ. ಅಂಥ ಸಂದರ್ಭದಲ್ಲಿ ಈತನಿಗೆ ಕೂಡಲೇ ರಕ್ತ ಕೊಡಬೇಕು ಎಂದು ವೈದ್ಯರು ಹೇಳಿದಾಗ, ಪೊಲೀಸರು ರಕ್ತದ ವ್ಯವಸ್ಥೆ ಮಾಡಿ ಬದುಕಿಸಿರುವ ಘಟನೆಗಳು ಬಹಳಷ್ಟಿವೆ. ಇದು ಮಾನವೀಯ ಮುಖ ಅಲ್ವಾ? ನಿಮಗೆ ಮಾಡೋದಕ್ಕೆ ಕೆಲಸ ಇಲ್ಲ ಬದುಕಿಸಿದ್ರಿ ಅನ್ನುವವರು ಇದ್ದಾರೆ. ಆದರೆ, ಅದು ನಿಮ್ಮ ತರ್ಕ. ಅದು ವ್ಯವಸ್ಥೆಯ ತರ್ಕ ಅಲ್ಲ.ಬಡವರನ್ನು ಕಾಪಾಡುವುದು ಪೊಲೀಸರಿಗೇ ಸಾಧ್ಯ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ರಾಜಕಾರಣಿಗಳಿಗೆ ಬಡವರನ್ನು ಯಾವ ಕಾಲಕ್ಕೆ ಉಪಯೋಗಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಉಪಯೋಗಿಸಿ ಬಿಡುತ್ತಾರೆ. ಸಮಾಜ ಬಡವನನ್ನು ಎಷ್ಟು ದೂರ ಇಡಬೇಕೋ, ಅಷ್ಟು ದೂರು ಇಡುತ್ತದೆ. ಯಾವ ಧರ್ಮವೂ, ನಾಯಕನು ರಾಜಕಾರಣಿಗಳು ಬಡವರನ್ನು ಕಾಪಾಡುವುದಿಲ್ಲ. ಧರ್ಮಗಳು, ಧರ್ಮ ಅಫೀಮನ್ನು ಬಡವರ ತಲೆಗೆ ತುಂಬುತ್ತದೆ. ಇದರಿಂದ ಕೋಮು ಗಲಭೆ ಆಗುತ್ತದೆ. ಕೋಮು ಗಲಭೆ ಆದ ನಂತರ ಬಡವರನ್ನು ಕಾಪಾಡಲು ಸಾಧ್ಯವಾಗುವುದು ಪೊಲೀಸರಿಗೆ ಮಾತ್ರ. ಇದು ಪೊಲೀಸರ ಇನ್ನೊಂದು ಮುಖ. ಇದು ಯಾರಿಗೂ ಗೊತ್ತಿರುವುದಿಲ್ಲ. ಅನುಭವಿಸಿದವರಿಗೆ ಮಾತ್ರವೇ ಗೊತ್ತಿರುತ್ತದೆ. ಎಷ್ಟೋ ಇಂತಹ ಘಟನೆಗಳು ಆಗಿವೆ.


ಪೊಲೀಸರ ಬಳಿಯೇ ನಿಜವಾದ ನ್ಯಾಯ ಸಿಗುವುದು ಎಂದು ಎಷ್ಟೋ ನ್ಯಾಯಾಧೀಶರು ವಕೀಲರ ಬಳಿ ಹೇಳಿದ್ದಾರೆ. ನಾವು ಪ್ರಾಸಿಕ್ಯೂಷನ್‌ದಾಖಲೆಗಳನ್ನು ನೋಡಿಯೇ ವಿಚಾರಣೆ ಮಾಡಬೇಕು. ಇದನ್ನು ಬಿಟ್ಟು ಆಚೆ ಹೋಗುವ ಹಾಗಿಲ್ಲ. ಆದ್ರೆ ಪೊಲೀಸ್‌ನವರು ಒಂದು ಹೆಜ್ಜೆ ಆ ಕಡೆ ಹೋಗಿ ನ್ಯಾಯ ಒದಗಿಸಬಹುದು ಎಂದು ಹೇಳುತ್ತಾರೆ. ಇದನ್ನು ನ್ಯಾಯಾಲಯದಲ್ಲಿಯೇ ಹೇಳಿದ್ದಾರೆ.


ನೊಂದವರು ಪೊಲೀಸರಿಂದ ಸಹಾಯ ಪಡೆದಿದ್ದರೆ ಯಾವತ್ತಿಗೂ ಅವರು ಮರೆಯುವುದಿಲ್ಲ. ಇಲಾಖೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮಾತ್ರವಲ್ಲದೇ ಬಿಟ್ಟ ನಂತರವೂ, ನಾಲ್ಕು ದಶಮಾನಗಳ ಬಳಿಕವೂ ನಮ್ಮಿಂದ ನೆರವು ಪಡೆದವರು ಮಾತನಾಡಿಸುತ್ತಾರೆ. ಎಲ್ಲಾದ್ರೂ ಸಿಕ್ಕರೆ ನಿಮ್ಮ ಬಗ್ಗೆ ನಮ್ಮ ತಂದೆ, ತಾತ ಹೇಳುತ್ತಿದ್ರು ಎಂದು ಮಾತನಾಡಿಸಿದಾಗ, ನಮ್ಮ ವೃತ್ತಿಯಲ್ಲಿ ಅನುಭವಿಸಿದ ಸಂತೃಪ್ತಿಯನ್ನು ನೆನಪಿಸಿಕೊಂಡು ಖುಷಿಯಾಗುತ್ತದೆ. ನಮ್ಮ ಜೊತೆಗಿರುವವರು ಏನು ಇನ್ನು ನೆನಪಿಟ್ಟುಕೊಂಡಿದ್ದಾರೆ ಎಂದಾಗ ಬಹಳ ಸಂತೋಷವಾಗುತ್ತದೆ. ಇಲಾಖೆಯ ಬಗ್ಗೆ ಹೆಮ್ಮೆ ಎನಿಸುತ್ತದೆ.


ನೋಡಿ ನಾನು 80ನೇ ಇಸವಿಯಿಂದ 3 ವರ್ಷಗಳ ಕಾಲ ಬಾಣಸವಾಡಿ ಪೊಲೀಸ್‌ಠಾಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ಆಗಿದ್ದೆ. ಈ ಪೊಲೀಸ್‌ಠಾಣೆಯಲ್ಲಿ ಕಾನೂನು ಸುವ್ಯವಸ್ಥೆಯ ಸಬ್‌ ಇನ್‌ಸ್ಪೆಕ್ಟರ್‌ಆಗಿ ನೇಮಕಗೊಂಡಿದ್ದೆ. ಆ ಕಾಲದಲ್ಲಿ ಅದು ನಗರದ ಹೊರವಲಯವಾಗಿತ್ತು. ರಾತ್ರಿ ಹೊತ್ತು ಡಕಾಯಿತಿ, ದರೋಡೆ, ಹೊರವಲಯಗಳಲ್ಲಿ ಆಗುವ ಅಪರಾಧಗಳೆಲ್ಲ ನಡೆಯುತ್ತಿತ್ತು ಅಲ್ಲಿ. ನನಗೆ ಅಲ್ಲಿಗೆ ನೇಮಕ ಮಾಡಿದಾಗ ನಮಗ್ಯಾಕೆ ಬೇಕು ಈ ಕೆಲಸಗಳೆಲ್ಲ ಎಂದು ನನಗೆ ಅನಿಸಿತ್ತು. ಒಬ್ಬನೇ ಮೋಟರ್‌ಬೈಕ್‌ನಲ್ಲಿ ಕಾನ್‌ಸ್ಟೆಬಲ್‌ಇಟ್ಟುಕೊಂಡು ಓಡಾಡಬೇಕಿತ್ತು. ಮಳೆ, ಚಳಿಯಲ್ಲಿ ನೈಟ್‌ರೌಂಡ್ಸ್ ಮಾಡಬೇಕಿತ್ತು. ಆದರೆ, ವಲಸಿಗರ ಸಂಖ್ಯೆ ಬಹಳ ಕಡಿಮೆಯಿತ್ತು. ಪೊಲೀಸ್‌ಮತ್ತು ಜನ ಒಂದಾಗಿ ಹೋಗುತ್ತಿದ್ರು. ಅನ್ಯೋನ್ಯವಾಗಿದ್ರು. ಪೊಲೀಸರ ವಿರುದ್ಧ ಮತ್ತು ಪರ ಮಾತನಾಡುವವರು ಇದ್ದೇ ಇರುತ್ತಾರೆ. ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆ ಇತ್ತು. ಒಂದು ಠಾಣೆಯಲ್ಲಿ 30 ರಿಂದ 40 ಜನ ಇದ್ರೆ ಅದೇ ಹೆಚ್ಚು. ಈಗೆಲ್ಲ ನೂರರವರೆಗೆ ಇರುತ್ತಾರೆ. ಆದ್ರೂ ಬಹಳಷ್ಟು ಹುದ್ದೆಗಳು ಖಾಲಿ ಇವೆ.


ನಮ್ಮ ಹೆಡ್‌ ಕಾನ್‌ಸ್ಟೆಬಲ್‌ಒಬ್ರಿದ್ರು. ಬಹಳ ಒಳ್ಳೆಯ ಹಿರಿಯ ವ್ಯಕ್ತಿ ಅವರು. ಬಾಲಯ್ಯ ಎಂದು ಅವರ ಹೆಸರು. ಅವರಿಗೆ ಅಪಘಾತದಲ್ಲಿ ಕಾಲಿಗೆ ಏಟಾಗಿ, ರಾತ್ರಿ ಪಾಳಿಯಲ್ಲೇ ಅತಿ ಹೆಚ್ಚು ಕೆಲಸ ಮಾಡುತ್ತಿದ್ರು ಪಾಪ. ಅವರನ್ನ ನಂಬಿ ಪೊಲೀಸ್‌ಠಾಣೆಯನ್ನು ಅವರ ವಶಕ್ಕೆ ಕೊಟ್ಟು ಬರುತ್ತಿದ್ವಿ. ಅಷ್ಟು ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ರು. ನಾನು ಒಂದು ದಿವಸ ಪೊಲೀಸ್ ಠಾಣೆಯಲ್ಲಿ ಕೂತಿದ್ದೆ. ಒಂದು ಹೆಣ್ಣುಮಗಳು ಬಂದು, ಬಾಲಯ್ಯ ಅವರ ಹತ್ತಿರ ಜೋರಾಗಿ ಅಳುತ್ತಿದ್ರು, ಕೂಗಾಟ ಕೇಳಿಸುತ್ತಿತ್ತು. ಪೊಲೀಸ್ ಠಾಣೆಯಲ್ಲಿ ಏನು ಹೀಗೆ ಕೂಗಾಟ ಕೇಳಿಸುತ್ತಿದೆ. ಆಕೆಯ ಜೊತೆಗಿದ್ದ ಒಬ್ಬ ಮಧ್ಯಮ ವಯಸ್ಸಿನ ವ್ಯಕ್ತಿ ಅವಳಿಗೆ ಬೈಯುತ್ತಿದ್ದ. ಆ ಹೆಣ್ಣುಮಗಳು ಕಂಕಳಲ್ಲಿ ಮಗುವನ್ನು ಇಟ್ಟುಕೊಂಡಿದ್ದಳು. ಆ ಮಗು ಪೊಲೀಯೊ ಪೀಡಿತವಾಗಿತ್ತು. ಹೆಣ್ಣುಮಗಳು ಆ ಮಗುವನ್ನು ಬಿಡಲಿಕ್ಕೆ ತಯಾರಿರಲಿಲ್ಲ. ಆ ವ್ಯಕ್ತಿ ಮಗುವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದ. ಹೀಗೆ ಜಗಳವಾಗುತ್ತಿತ್ತು. ನಾನು ವಿಚಾರಣೆ ಮಾಡಲು ಇಲ್ಲಿಗೆ ಕಳುಹಿಸಿ, ಇಷ್ಟೊತ್ತಿಗೆ ಜಗಳವಾಗುತ್ತಿದೆ ಎಂದೆ. ಆ ಹೆಂಗಸು, ಈಕೆ ನನ್ನ ತಂಗಿ ನಾನು ಬಿಡೋದಿಲ್ಲ ಎಂದಳು. ಆತ ಇಲ್ಲ, ಮಗುವನ್ನು ನಾನು ನೋಡಿಕೊಳ್ಳಬೇಕು, ಅದರ ಕೇರ್‌ಟೇಕರ್‌ನಾನು ಎಂದು ಅವನು. ಅಲ್ಲಪ್ಪ ಕೇರ್‌ಟೇಕರ್‌ಎಂದು ಹೇಳುತ್ತಿದ್ದೀಯಾ ನೀನು ಯಾರು ಎಂದೆ. ಆ ಮಗುವಿನ ಸೋದರ ಮಾವ ನಾನು ಅಂದ. ನನಗೆ ಬಹಳ ಆಶ್ಚರ್ಯವಾಯಿತು.

ನಿಜ ಹೇಳಬೇಕಂದ್ರೆ ಮಕ್ಕಳಿಗೆ ಸೋದರ ಮಾವನ ಮೇಲೆ ಬಹಳ ಪ್ರೀತಿ ಇರುತ್ತದೆ. ಈ ಮಗು ನೋಡಿದ್ರೆ ಸೋದರ ಮಾವನನ್ನ ಶತ್ರುವಿಗಿಂತ ಕಡೆಯಾಗಿ, ರಾಕ್ಷಸನ ರೀತಿಯಲ್ಲಿ ನೋಡುತ್ತಿದೆ. ಅವನನ್ನು ನೋಡಿದ್ರೆ ಮಗು ಅಳುತ್ತೆ, ನಡುಗುತ್ತದೆ, ಅಕ್ಕ ಅಂದಳಲ್ಲ ಆಕೆಯನ್ನು ತಬ್ಬಿ ಹಿಡಿದುಕೊಳ್ಳುತ್ತೆ. ನೀನು ಅಕ್ಕ ಅನ್ನುತ್ತಿ, ಮಗು ನಿನ್ನ ಜೊತೆ ಬರಕ್ಕೆ ಕಷ್ಟ ಏನು ಅಂದೆ. ಅದಕ್ಕವಳು, ಆ ಮಗು ಮೈನರ್. ನಾನು ಕೇರ್‌ಟೇಕರ್‌. ಇವರ ತಾಯಿ ನನ್ನ ತಂಗಿ. ತಾಯಿ ದುಬೈಗೆ ಹೋಗಿದ್ದಾರೆ. ನನ್ನ ವಶದಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದ. ನಾನು ಈ ಮಗುವನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಮಗುವನ್ನು ಸಾಕುವುದು ನನ್ನ ಜವಾಬ್ದಾರಿ ಎಂದ್ಳು. ನಿನ್ನನ್ನು ನೋಡಿದ್ರೆ 18 ರಿಂದ 20 ವರ್ಷದ ಹುಡುಗಿ ತರಹ ಕಾಣುತ್ತೀಯ. ನಿನೇನು ಕೆಲಸ ಮಾಡ್ತೀಯ ಎಂದೆ. ನನ್ನ ಕೆಲಸಗಳ ಬಗ್ಗೆ ಆಮೇಲೆ ಹೇಳುತ್ತೇನೆ, ಅದೊಂದು ದೊಡ್ಡ ಕಥೆ ಇದೆ ಸರ್‌ಅಂದ್ಲು. ಇಲ್ಲ ಹಾಗೆಲ್ಲ ಮಾಡೋಕೆ ಆಗಲ್ಲ. ಮಗುವಿನ ಜಾವಾಬ್ದಾರಿಯನ್ನು ನಿನ್ನ ತಾಯಿ ಆತನಿಗೆ ಕೊಟ್ಟಾಗ ನೀನು ಒಪ್ಪಿಕೊಳ್ಳಬೇಕು ಮತ್ತು ಸಹಕರಿಸಬೇಕು ಎಂದೆ. ಆ ಮಗುವಿಗೆ ಪೊಲೀಯೊ ಇದೆ. ಆರೋಗ್ಯ ಸರಿ ಇಲ್ಲ ಎಂದೆ. ನೋಡಿ ಸರ್‌ಮಗು ಹೇಗೆ ಹೆದರುತ್ತಿದೆ. ಆತನನ್ನು ನೋಡಿದ್ರೆ ಬೆದರುತ್ತೆ. ಮಗುವನ್ನು ಆತನಿಗೆ ಕೊಟ್ರೆ ನಾನು ಬದುಕಲ್ಲ ಸರ್‌ಅಂದ್ಲು. ನನಗೆ ಏನು ಬೇಕಾದ್ರು ಮಾಡಿ ಸರ್ ನಾನು ಮಗುವನ್ನು ಬಿಡೋಲ್ಲ. ಅವಳು ನನ್ನ ರಕ್ತವನ್ನು ಹಂಚಿಕೊಂಡು ಹುಟ್ಟಿರುವ ತಂಗಿ ಸರ್‌ಅಂದಳು.


ಆಗ ನನಗೆ ಕುತೂಹಲ ಅನಿಸಿತು. ಏನು ಆ ಮಗು ನಡುಗುತ್ತದೆ. ಇವರ ಕೋಪ, ಭಯ, ದುಃಖ, ಜೋರಾಗಿ ಅಳುತ್ತಾಳೆ. ನನಗೆ ಇದರಲ್ಲಿ ಏನೋ ಇದೆ ಅನಿಸಿತು. ಅವಳಿಗೆ ಮೊದಲಿನಿಂದ ಏನು ನಡೆದಿದೆ ಕಥೆ ಹೇಳು ಅಂದೆ. ಸರ್‌ನಾನು ಹೇಳ್ತೀನಿ ಅಂದ ಮಾವ. ಅದಕ್ಕವಳು ಅವನು ಹೇಳುವುದು ಬೇಡ ನಾನು ಹೇಳ್ತೇನೆ ಅಂದ್ಲು. ಆ ಪೊಲೀಯೊ ಪೀಡಿತ ಮಗು ಅಕ್ಕನನ್ನು ಗಟ್ಟಿಯಾಗಿ ಹಿಡಿದುಕೊಂಡು ಅಳ್ತಿತ್ತು. ಒಂಚೂರು ಆಕೆಯನ್ನು ಬಿಡಲಿಕ್ಕೆ ತಯಾರಿರಲಿಲ್ಲ. ನಾನು ಜೋರು ಮಾಡಿ, ಇಬ್ಬರಿಗೂ ಮಾತನಾಡಲು ಅವಕಾಶ ಕೊಡುತ್ತೇನೆ ಎಂದೆ.


ಮೊದಲು ನೀನೆ ಮಾತಾಡಪ್ಪ ಎಂದೆ. ಸರ್‌, ನಮ್ಮ ಅಕ್ಕ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿಕೊಂಡಿದ್ರು. ಗಂಡ ತೀರಿ ಹೋದ ನಂತರ ನಾನೇ ಸಾಕಿಕೊಂಡಿದ್ದೆ. ಅವಾಗ ಯಾರೋ ಹೇಳಿದ್ರು ದುಬೈನಲ್ಲಿ ಮನೆ ಕೆಲಸಕ್ಕೆ ಹೋದ್ರೆ ಒಳ್ಳೆಯ ಸಂಬಳ ಬರುತ್ತದೆ ಚೆನ್ನಾಗಿ ಬದುಕಬಹುದು ಎಂದ್ರು. ಪಾಸ್‌ಪೋರ್ಸ್‌ಮಾಡಿಸಿ ಏಜೆಂಟ್‌ಗಳು ದುಬೈಗೆ ಕರೆದುಕೊಂಡು ಹೋದ್ರು ಸರ್ ಅಂದ. ಅಕ್ಕ ದುಬೈನಿಂದ ಎರಡು ವರ್ಷಗಳಿಗೊಮ್ಮೆ ಬಂದು ಹೋಗುತ್ತಿದ್ಲು. ನಾನು ಸುಮಾರು ವರ್ಷದಿಂದ ಮಗುವನ್ನು ನೋಡ್ಕೊತ್ತಿದ್ದೇನೆ. ಈ ಹುಡುಗಿನೂ ನನ್ನ ಜೊತೆನೆ ಇದ್ದದ್ದು ಸರ್‌. ಮಗುವನ್ನು ಮತ್ತು ಇವಳನ್ನು ನೋಡ್ಕೋಳದ್ದಕ್ಕೆ ಅಕ್ಕ ದುಡ್ಡು ಕಳುಹಿಸುತ್ತಿದ್ರು. ನಾನು ಚೆನ್ನಾಗಿ ನೋಡ್ಕೋತ್ತಿದ್ದೇನೆ. ಇವಳು ಸುಳ್ಳು ಹೇಳುತ್ತಾಳೆ ಅಂದ. ನಾನು ಮಗುವನ್ನು ಯಾವ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ. ಬೇಕಿದ್ರೆ ನನ್ನ ಲಾಯರ್‌ನ ಕರೆದುಕೊಂಡು ಬರ್ತೇನೆ. ಐ ಆ್ಯಮ್‌ದಿ ಕೇರ್‌ ಟೇಕರ್‌, ಗಾರ್ಡಿಯನ್‌ಅಂತೆಲ್ಲ ಲೀಗಲ್‌ಪಾಯಿಂಟ್ಸ್‌ಮಾತಾಡಕ್ಕೆ ಶುರು ಮಾಡ್ದ. ಇದು ಫ್ಯಾಮಿಲಿ ಜಗಳ. ಇದರಲ್ಲಿ ಪೊಲೀಸರಿಗೆ ಕೆಲಸಾನೇ ಇಲ್ಲ. ನೀವು ತಲೆ ಹಾಕುವ ಹಾಗೆನೇ ಎನ್ನುವ ಹಾಗೆ ಅದು ಇದು ಮಾತಾಡ್ದ.


ನಿನ್ನ ಮಾತು ಮುಗೀತಲ್ಲ. ಮಗುವಿಗೆ ಮಾತನಾಡಲು ಅವಕಾಶ ಕೊಡು ಅಂದೆ. ಅವಳೇನು ಸರ್‌ಮಾತನಾಡುವುದು. ಅವಳೇನು ಸರ್‌ ಮಾತನಾಡುವುದು. ಅವಳು ಇಲ್ವೇ ಇಲ್ಲ ಮನೆ ಬಿಟ್ಟು ಓಡಿಹೋಗಿದ್ದಾಳೆ. ಮದ್ರಾಸ್‌ಗೆ ಹೋಗಿದ್ಲು. ಅಲ್ಲಿಂದ ಬಂದು ಹೀಗೆ ಮಾಡ್ತಿದ್ದಾಳೆ ಎಂದ. ಆ ಹೆಣ್ಣುಮಗುವನ್ನು ಅಶ್ಲೀಲವಾಗಿ ಬೈಯಲು ಶುರು ಮಾಡಿದ. ಆಗ ನಾನು ಹೇಳಿದೆ, ಅಶ್ಲೀಲವಾಗಿ ಹೆಣ್ಣು ಮಕ್ಕಳಿಗೆ ನನ್ನ ಮುಂದೆ ಬೈದರೆ ಕಪಾಳಕ್ಕೆ ಬಾರಿಸುತ್ತೇನೆ ಎಂದೆ. ಆಗ ಸ್ವಲ್ಪ ಮೆತ್ತಗಾದ.


ಅಷ್ಟೊತ್ತಿನವರೆಗೂ ಸಮಾಧಾನವಾಗಿ ಕೇಳಿಸಿಕೊಳ್ಳುತ್ತಿದ್ದ ಆ ಹೆಣ್ಣು ಮಗಳು, ಸರ್‌, ನಾನು ಮಾತನಾಡಬಹುದಾ ಅಂದ್ಲು. ಅವರು ಹೇಳಾಯಿತು. ಇನ್ನು ನಾನು ಹೇಳ್ತೇನೆ ಅಂದ್ಲು. ಹೇಳಮ್ಮ ಅಂದೆ. ಅವರು ಹೇಳಿದ್ದೆಲ್ಲ ನಿಜ ಸರ್. ನನ್ನ ತಾಯಿ ದುಬೈಗೋ ಸೌದಿಗೋ ಹೋಗಿದ್ದಾರೆ, ವರ್ಷಕ್ಕೆ ಒಂದು ಸಲ ಅಥವಾ ಎರಡು ವರ್ಷಕ್ಕೆ ಒಂದು ಸಲ ಬರೋರು. ನಮಗೆಲ್ಲ ಚೆನ್ನಾಗಿ ನೋಡಿಕೊಳ್ಳೋರು. ಒಳ್ಳೆ ದುಡ್ಡು ಕಳ್ಸೋರು. ಯಾರಾದ್ರು ಬೇರೆಯವರು ಅಲ್ಲಿಂದ ಬರುವಾಗಲೂ ಚಾಕಲೆಟ್‌ಸೇರಿದಂತೆ ಅದು ಇದು ಕಳ್ಸೋರು. ನಾವು ತುಂಬ ಚೆನ್ನಾಗಿದ್ವಿ. ನನ್ನ ಅಮ್ಮ ದುಡ್ಡು ಕಳುಹಿಸುತ್ತಿದ್ರು ಇವನಿಗೆ. ಮೊದಲು ಆರು ತಿಂಗಳು ಚೆನ್ನಾಗಿ ನೋಡಿಕೊಂಡ. ಆಮೇಲೆ ನಮ್ಮನ್ನು ಕೇರ್‌ಮಾಡುತ್ತಿರಲಿಲ್ಲ. ನಮಗೆ ಎಷ್ಟು ಅನ್ಯಾಯ ಮಾಡಲು ಶುರು ಮಾಡಿದ ಅಂದ್ರೆ. ಒಂದು ಹೊತ್ತಿನ ಊಟ ಕೊಡುತ್ತಿದ್ದ. ನಾನ್ಯಾಕೆ ನಿಮ್ಮನ್ನು ನೋಡ್ಕೊಬೇಕು ಬಿದ್ದಿರು ಮನೆಯಲ್ಲಿ ಅನ್ನುವ ಮಟ್ಟಕ್ಕೆ ಮಾಡ್ತಿದ್ದ. ರಾಕ್ಷಸ ಪ್ರವೃತ್ತಿಯನ್ನು ರೂಢಿಸಿಕೊಂಡ ಅಂದ್ಲು.

ಅಲ್ಲಮ್ಮ ನಿಮ್ಮ ತಾಯಿ ಬಂದಾಗ ಇದನ್ನೆಲ್ಲ ಹೇಳಿ ನೀವು ಅನಾಥಶ್ರಮದಲ್ಲಿ ಇರಬಹುದಲ್ವಾ. ನಿಮ್ಮ ತಾಯಿ ಅಲ್ಲಿಗೆ ದುಡ್ಡು ಕಳುಹಿಸಬಹುದಲ್ವಾ ಅಂದೆ. ಸರ್. ಆ ತರಾನೆ ನಾವು ಪ್ಲಾನ್‌ಮಾಡಿದ್ವಿ. ಆದರೆ, ನಮ್ಮ ತಾಯಿ ಇತ್ತೀಚೆಗೆ ಬರೋದು ನಿಲ್ಸಿದಾರೆ. ಅವರೆಲ್ಲಿದ್ದಾರೆ ಎಂದೇ ಯಾರಿಗೂ ಗೊತ್ತಿಲ್ಲ ಸರ್‌. ಇವರೊಬ್ರಿಗೆ ದುಡ್ಡು ಬರುತ್ತೆ. ಯಾರಾದ್ರು ಬರುವಾಗ ದುಡ್ಡು ಕೊಡ್ತಾರೆ. ನಮ್ಮ ತಾಯಿದು ಪಾಸ್‌ಪೋರ್ಟ್‌ಕಾಪಿನು ನಮ್ಮ ಹತ್ತಿರ ಇಲ್ಲ. ಇವರಿಗೆ ದುಡ್ಡು ಬರುತ್ತದೆ. ಅದಕ್ಕೆ ಇವರು ನನ್ನ ತಂಗಿನ ಬಿಡುತ್ತಿಲ್ಲ ಸರ್‌ಅಂದ್ಲು. ಅದರಿಂದ ಏನು ತೊಂದ್ರೆ ಅಂದೆ. ತುಂಬಾ ತೊಂದರೆ ಅನುಭವಿಸಿದ್ದೇನೆ. ಇವನು ಕುಡಿದು ಬಂದು ನನ್ನ ಮೇಲೆ ಬೀಳ್ತಿದ್ದ ಸರ್. ಇವನು ನನ್ನ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಾಗ, ಸೋದರ ಮಾವನೇ ಹೀಗೆ ಮಾಡ್ತಿದ್ದಾನೆ ಎಂದು ಬಹಳ ಬೇಸರವಾಯಿತು. ಆದ್ರೆ, ನಾನು ಪ್ರತಿಭಟಿಸಿ ಅವನಿಗೆ ಯಾವುದೇ ಕಾರಣಕ್ಕೂ ಅವಕಾಶ ಕೊಟ್ಟಿಲ್ಲ. ಅಲ್ಲಿಂದ ಇವನು ರಾಕ್ಷಸನ ತರಹ ಆಡಲು ಶುರು ಮಾಡಿದ. ಅದನ್ನೆಲ್ಲ ತಡ್ಕೊಂದು ನಾನು ಇದ್ದೆ. ಆಮೇಲೆ ನನ್ನ ತಾಯಿಯ ಸಂಪರ್ಕ ಸಂಪೂರ್ಣ ಕಟ್‌ಆಗೋಯ್ತು. ಆತನಿಗೂ ದುಡ್ಡು ಬರುತ್ತಿದೆಯೋ ಇಲ್ವೋ ಈಗ ಗೊತ್ತಿಲ್ಲ ಅಂದ್ಲು.


ನಮ್ಮ ತಾಯಿಯ ಸಂಪರ್ಕ ಸಂಪೂರ್ಣ ಕಟ್‌ಆಗಿದೆ. ಯಾರೋ ದುಬೈನಿಂದ ಬಂದವರು, ನಿಮ್ಮ ತಾಯಿ ಕೆಲಸ ಮಾಡುತ್ತಿದ್ದ ಮನೆಯ ಶೇಠ್‌ನನ್ನು ಮದುವೆ ಆಗಿ ಅಲ್ಲಿಯೇ ಇದ್ದಾರೆ ಅಂದ್ರು. ಈಗ ಅವಳು ಬರೋದು ಡೌಟೇ ಅಂದಳು. ನಿನ್ನ ತಾಯಿಯನ್ನು ನೀನು ಮರೆತು ಬಿಡು ಅಂದ್ರು. ಆಗ ನನಗೆ ಏನು ಮಾಡಬೇಕು ಅಂಥ ತೋಚಲೇ ಇಲ್ಲ. ಅದು ಇವನಿಗೂ ಗೊತ್ತಾಗಿ, ಇವನ ಪ್ರವೃತ್ತಿನೇ ಬದಲಾವಣೆಯಾಯಿತು ಅಂದ್ಲು. ನೀವು ಹೈಕಮಿಷನರ್‌ಗೆ ಮಾತನಾಡಬಹುದಲ್ವಾ ಎಂದಾಗ, ಯಾರ್‌ಸರ್‌ಮಾತಡ್‌ಬೇಕು. ನಮ್ಮ ಹತ್ತಿರ ಹೆಸರು ದಾಖಲೆ ಬಿಟ್ರೆ ಏನು ಇಲ್ವಾಲ್ಲ ಅಂದ್ಲು. ಆಗಿನ ಕಾಲದಲ್ಲಿ ವಿದೇಶಕ್ಕೆ ಹೋಗುವವರ ಪರಿಸ್ಥಿತಿನೇ ಹಾಗಿತ್ತು. ಈಗಿನ ಹಾಗೆ ಯಾವ ಟೆಕ್ನಾಲಜಿನೂ ಇರಲಿಲ್ಲ. ಕಮ್ಯುನಿಕೇಷನ್‌ಎಲ್ಲ ಬಹಳ ಕಷ್ಟವಿತ್ತು.


ಪೊಲೀಯೊ ಪೀಡಿತ ಮಗುವಿಗೆ ಆತ ತೊಂದರೆ ಕೊಡಲು ಪ್ರಾರಂಭಿಸಿದ್ದ. ನಿನ್ನ ಅಮ್ಮ ದುಡ್ಡು ಕೊಡುವುದಿಲ್ಲ. ಯಾರೋ ಬಂದಾಗ ದುಡ್ಡು ಕಳುಹಿಸುತ್ತಾಳೆ ಎಂದೆಲ್ಲ ಅನ್ನುತ್ತಿದ್ದ. ದೊಡ್ಡ ಹುಡುಗಿ ಮೇಲೆ ಒತ್ತಡ ಹೆಚ್ಚಾದಾಗ ಆಕೆ ಅವನ ಸಹವಾಸವೇ ಬೇಡ ಎಂದು ಮನೆ ಬಿಟ್ಟು ಹೊರಟು ಹೋಗ್ತಾಳೆ. ಮದ್ರಾಸ್‌ಗೆ ಹೋಗಿರುತ್ತಾಳೆ. ಬ್ಯುಟಿಷಿಯನ್‌ಸಣ್ಣ ಕೋರ್ಸ್‌ಮಾಡಿಕೊಂಡಿರುತ್ತಾಳೆ. ಮದ್ರಾಸ್‌ನಲ್ಲಿ ಬ್ಯೂಟಿ ಪಾರ್ಲರ್‌ಸೇರುತ್ತಾಳೆ.


ನಾನು ಸಂಪಾದನೆ ಮಾಡಲು ಶುರು ಮಾಡಿದೆ ಸರ್. ಆದ್ರೆ ಯಾವ ಹೆಣ್ಣು ಮಗಳು ಒಂಟಿಯಾಗಿ ಬದುಕಬಾರದು ಸರ್‌ಅಂದಳು. ಯಾಕಮ್ಮ ಅಂದೆ. ನನ್ನನ್ನು ಹಿಂಡಿ ತಿಂದು ಬಿಟ್ರು ಸರ್‌ ಮದ್ರಾಸ್‌ನಲ್ಲಿ. ಬ್ಯೂಟಿಪಾರ್ಲರ್‌ನಲ್ಲಿ ಇದ್ದ ನನ್ನನ್ನು ವೇಶ್ಯಾವೃತ್ತಿಗೆ ತಂದು ಬಿಟ್ರು. ನಾನು ಪ್ರಾಸ್‌ಟ್ಯೂಟರ್ ‌ಸರ್‌ ಎಂದು ನೇರವಾಗಿ ಹೇಳಿದ್ಲು. ಆಗ ಅವನು ನೋಡಿ ಸರ್‌, ಅವಳೇ ಒಪ್ಪಿಕೊಳ್ಳುತ್ತಿದ್ದಾಳೆ. ನೀವು ಅಂಥವರಿಗೆಲ್ಲ ಸಪೋರ್ಟ್‌ ಮಾಡ್ತೀರಲ್ಲ ಅಂದ ಅವನು. ಅವಳಿಗೆ ಈ ಮಗುನಾ ಕೊಡಿ ಅಂಥಿರಲ್ಲ. ನಾನು ಕೊಡೋಕ್ಕೆ ಸಾಧ್ಯನಾ ಅಂದ. ನೋಡಿ ಅವಳು ಅಕ್ಕನಾಗಿ ಕೇಳ್ತಿದ್ದಾಳೆ. ನೀನು ಅದನ್ನು ಆಮೇಲೆ ಮಾತನಾಡು ಅಂದೆ. ಆಗ ಅವಳು ಮಗುವಿನ ಬೆನ್ನನ್ನು ತೆಗೆದು ತೋರಿಸ್ತಾಳೆ. ಬೆನ್ನಲೆಲ್ಲ ಬರೆ ಬಿದ್ದಿದೆ. ಪೊಲೀಯೊ ಪೀಡಿತ ಅನಾರೋಗ್ಯಕರವಾದ ಮಗುವಿನ ಮೇಲೆ ಹಲ್ಲೆ ಗುರುತುಗಳಿವೆ. ಇದಕ್ಕಿಂತ ಏನಾದ್ರು ಬೇಕಾ ಸರ್‌. ನಾನೇನು ಮಾಡ್ಲಿ. ನನ್ನ ತಂಗಿನಾ ನಾನು ಬಿಟ್ಟು ಕೊಡುವುದೇ ಇಲ್ಲ ಸರ್ ‌ಅಂದ್ಲು. ಅಕ್ಕ, ತಂಗಿ ಇಬ್ಬರೂ ತಬ್ಬಿಕೊಂಡು ಗೊಳೋ ಎಂದು ಅಳಲು ಶುರು ಮಾಡಿದ್ರು. ನಾನು ಪ್ರಾಸಿಟ್ಯೂಟೇ ಸರ್‌. ನಾನು ಸುಳ್ಳು ಹೇಳಬಹುದಿತ್ತು ಬ್ಯೂಟಿಷಿಯನ್ ‌ಎಂದು. ನೀವು ನನ್ನನ್ನು ನಿಧಾನವಾಗಿ ಕೇಳ್ತಿದ್ದೀರಲ್ಲಾ, ನನಗೆ ನೀವು ನ್ಯಾಯ ಕೊಡಬಹುದು ಎಂದು ಎಲ್ಲವನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ ಸರ್‌. ನನ್ನ ಮಗುವನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ ಅಂದ್ಲು. ಆ ಗಾಯಗಳನ್ನು ನೋಡಿದ ಮೇಲೆ, ಯಾವುದೇ ಕಾರಣಕ್ಕೂ ಮಗುವನ್ನು ನಿನಗೆ ಕೊಡುವುದಿಲ್ಲ. ಬೇಕಿದ್ರೆ ರಿಮ್ಯಾಂಡ್ ‌ರೂಂನಲ್ಲಿ ಇರಿಸುತ್ತೇನೆ. ಇಲ್ಲಂದ್ರೆ ಅವಳಿಂದ ನಿನ್ನ ಮೇಲೆ ಕೇಸ್‌ ದಾಖಲಿಸಿಕೊಳ್ಳುತ್ತೇನೆ ಎಂದೆ. ಆಗ ಸ್ವಲ್ಪ ಮೆತ್ತಗೆ ಆದ. ಆದ್ರೂ, ಮಗುವನ್ನು ಅವಳಿಗೆ ಕೊಟ್ರೆ ನಾನು ಕೇಸ್ ಹಾಕ್ತೇನೆ. ನಮ್ಮ ಲಾಯರ್ ‌ಬಂದು ನೋಡ್ಕೊತ್ತಾರೆ ಅಂದ. ಆಗ ನನಗೆ ಸಿಟ್ಟು ಬಂದು, ಇದುವರೆಗೂ ಪೊಲೀಸ್‌ನವರ ಒಂದು ಮುಖ ನೋಡಿದ್ದೀಯಾ, ಇನ್ನೊಂದು ಮುಖ ನೋಡ್ಬೇಕಾಗುತ್ತೆ. ನಿನಗೆ.... ಏನು ಬೇಕಾದ್ರು ಮಾಡ್ಕೊ ಆದ್ರೆ, ಮಗುವನ್ನು ಅವಳ ಜೊತೆ ಕಳುಹಿಸಿಕೊಡ್ತೇನೆ. ನಿನಗೆ ಮನುಷತ್ವ ಬೇಡ್ವ. ಮೃಗೀಯ ಮನಸ್ಸಿನಿಂದ ಮಗುವಿಗೆ ಹಾಗೆ ಹೊಡೆದಿದ್ದಿಯಾ? ಇವಳ ಜೊತೆಗೆ ಹೀಗೆ ಮಾತಾಡ್ತಿಯಾ... ನಿನ್ನ ಜೊತೆ ಮಗುವನ್ನು ಕಳುಹಿಸಲು ಸಾಧ್ಯಾನೇ ಇಲ್ಲ ಎಂದು ಆ ಹೆಣ್ಣು ಮಗು ಜೊತೆ ಆ ಮಗುವನ್ನು ಕಳುಹಿಸಿಕೊಟ್ಟೆ. ಆ ಹೆಣ್ಣುಮಗು ಹೋಗಬೇಕಾದ್ರೆ ಸಂತೋಷದಲ್ಲಿ ನನ್ನ ಅಣ್ಣ, ತಂದೆ ಏನು ಬೇಕಾದ್ರು ನಾನು ನಿಮ್ಮನ್ನು ಅನ್ನಲು ತಯಾರಿದ್ದೇನೆ. ದೇವರ ರೂಪದಲ್ಲಿ ಬಂದಿದ್ದೀರಿ. ಈ ಮಗುವನ್ನು ಇಲ್ಲಿಂದ ಚೆನ್ನೈಗೆ ಕರೆದುಕೊಂಡು ಹೋಗುವರೆಗೂ ನನಗೆ ರಕ್ಷಣೆ ಬೇಕು. ನನ್ನನ್ನು ರೈಲಿನಲ್ಲಿ ಕೂರಿಸಿ ಇವನನ್ನು ಇಟ್ಟುಕೊಂಡ್ರೆನೇ ನಾನು ಇಲ್ಲಿಂದ ಹೋಗೋದು. ಇಲ್ಲಂದ್ರೆ ಇವನು ಬಂದು ನನ್ನನ್ನು ತಂಗಿಯನ್ನು ಸಾಯಿಸುತ್ತಾನೆ ಅಂದ್ಲು. ಅನನನ್ನು ನಾನು ಪೊಲೀಸ್‌ಠಾಣೆಯಲ್ಲಿ ಕೂಡು ಹಾಕಿ ಇವಳನ್ನು ರೈಲಿಗೆ ಹತ್ತಿಸಿ ಚೆನ್ನೈಗೆ ಕಳುಹಿಸಿದೆ.

ಮೈಮಾರಿಕೊಂಡಾದ್ರು ನನ್ನ ತಂಗಿನಾ ಕಾಪಾಡುತ್ತೇನೆ. ನನ್ನ ತಾಯಿ ಬರೋದಿಲ್ಲ ಸರ್‌. ಅವಳು ಬದುಕಿದಾಳೋ ಇಲ್ವೋ ಗೊತ್ತಿಲ್ಲ. ಅಮ್ಮ ನಮಿಗೊಂದು ಮಾತು ಹೇಳಿ, ನಮಗೆ ವ್ಯವಸ್ಥೆ ಮಾಡಿ ಹೋಗಿದ್ರು ಬೇಜಾರಾಗುತ್ತಿರಲಿಲ್ಲ. ಆದ್ರೆ, ಆಕೆ ಎಲ್ಲವನ್ನು ಧಿಕ್ಕರಿಸಿ ತನ್ನ ಪಾಡು ತಾನು ನೋಡಿಕೊಂಡ್ಲು. ನಾನು ನನ್ನ ಬದುಕನ್ನು ಕಳೆದುಕೊಂಡೆ. ಈಕೆ ಜೀವನದಲ್ಲಿ ಏನು ಸಾಧಿಸಲು ಸಾಧ್ಯವಿಲ್ಲ. ಆದರೆ, ಈಕೆ ಬದುಕಿರೋ ವರೆಗೂ ಈಕೆಯನ್ನು ಸಾಕುವ ಜವಾಬ್ದಾರಿ ನನ್ನದು. ತಾಯಿಯಾಗಿ, ಅಕ್ಕನಾಗಿ ನಾನಿರುತ್ತೇನೆ ಸರ್‌. ಅಲ್ಲಿಯವರೆಗೂ ನಾನು ಬದುಕಿರಲೇ ಬೇಕು ಸರ್‌ಎಂದು... ನನಗೊಂದು ನಮಸ್ಕಾರ ಮಾಡಿ ಹೋದ್ಲು. ಇದು ಮಾನವೀಯ ಮುಖನೋ, ಅವನ ಪ್ರಕಾರ ನಾವು ಕಾನೂನು ಬಾಹಿರ ನಡೆದುಕೊಂಡಿದ್ದೇವೆ. ಅವನು ಅಮಾನವೀಯ ಆದ ಎಂದು ಬಿಟ್ಟು, ಕಾನೂನು ಪ್ರಕಾರ ನಾವು ಮಾತಾಡಿದ್ರೆ ಮಗುವನ್ನು ಅವನ ಕೈಗೆ ಕೊಡಬೇಕಾಗಿತ್ತು. ಆ ಮಗುವಿನ ಸಂಪರ್ಕ ಇಲ್ಲ. ಆದರೆ ನನಗೊಂದು ಸಂತೃಪ್ತಿ ಸಿಕ್ಕಿದೆ.


ಮುಂದುವರೆಯುವುದು…


ಸಂದರ್ಶಕರು - ಕೆ.ಎಸ್. ಪರಮೇಶ್ವರ31 views