ಅಣ್ಣಾವ್ರ ಅವರ ಇನ್ನೊಂದು ಅವತಾರ ಅವತ್ತು ಕಂಡೆ

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 48ಇದಕ್ಕಿದ್ದಂತೆ ಒಬ್ರು ಬಂದು, ಇನ್ನು ಮುಂದೆ ರಾಜ್‌ಕುಮಾರ್‌ ಅವರ ಮಿಮಿಕ್ರಿ ಮಾಡಬೇಡಿ ಎಂದು ಹೇಳಿದ್ರು. ನಾನು ಏನಾಯ್ತು ಸರ್‌ ಎಂದೆ. ಮಾಡಬೇಡಿ ಅಷ್ಟೆ. ಯಾರು ಹೇಳಿ ಕಳುಹಿಸಿದ್ರು, ಎಂಬುದೆಲ್ಲ ನಿಮಗೆ ಬೇಡ. ಇನ್ನು ಮುಂದೆ ಮಾಡಬೇಡಿ ಅಷ್ಟೇ ಎಂದ್ರು. ಬೇರೆಯವರಿಗೆ ನಾವು ಬೇರೆ ತರಹ ಹೇಳುತ್ತೇವೆ. ನಿಮಗೆ ನಾವು ಹಾಗೆ ಹೇಳಲು ಆಗುವುದಿಲ್ಲ ಎಂದ್ರು. ಹಾಗೆ ಹೇಳಿದ್ದು, ರೌಡಿ ಎಂಬುದು ನನಗೆ ಗೊತ್ತಿತ್ತು.


ನನಗೆ ತುಂಬಾ ಬೇಸರ ಆಯ್ತು. ಯಾಕಾದ್ರೂ ಇವತ್ತು ಸೂರ್ಯ ಹುಟ್ಟಿದ್ನೋ ಅನಿಸಿಬಿಡ್ತು. ಆ ವಾರ ಪೂರ್ತಿ ನನಗೆ ಎಲ್ಲರ ಮೇಲೂ ಬೇಸರವಾಯ್ತು. ಯಾರೋ ಹೇಳಿ ಕಳುಹಿಸಿದ್ದಾರೆ ಎನ್ನುವ ರೀತಿಯಲ್ಲಿ ಅವರು ಹೇಳಿದ್ರು. ಇದಾದ ಏಳು ದಿನಕ್ಕೆ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನನ್ನ ಪ್ರೋಗ್ರಾಂ ಇತ್ತು. ರಾಜ್‌ಕುಮಾರ್‌ ಅವರು ಕೂತಿದ್ರು. ನಾನು ನಮಸ್ಕಾರ ಎಂದೆ. ಅವರು ಬನ್ನಿ, ಬನ್ನಿ ಜಮಾಯಿಸಿ ಬಿಡಬೇಕು ಇವತ್ತು ಎಂದ್ರು. ನಾನು ಆಯ್ತಣ್ಣ ಎಂದೆ. ಶಿವರಾಜ್‌ಕುಮಾರ್‌, ಪಾರ್ವತಮ್ಮ, ಕುಮಾರ್‌ ಗೋವಿಂದ್‌ ಸೇರಿದಂತೆ ಬಹಳಷ್ಟು ಜನ ಇದ್ರು. ನಾನು ಎಲ್ಲರ ಮಿಮಿಕ್ರಿ ಮಾಡ್ತೀನಿ ಅಣ್ಣ. ನಿಮ್ದು ಮಾಡುವುದಿಲ್ಲ ಎಂದೆ. ಅವರು ಹೇಳಿ ಕಳುಹಿಸಿದ್ದಾರೆ ಎನ್ನುವ ಭಾವನೆ ಇತ್ತು ನನಗೆ. ಯಾಕೆ ಅನ್ನುತ್ತಿದ್ರು. ಅಷ್ಟೊತ್ತಿಗೆ ಸಚಿವರೊಬ್ಬರು ಬಂದ್ರು. ಸ್ವಲ್ಪ ಹೊತ್ತಿಗೆ ಮಿಮಿಕ್ರಿ ದಯಾನಂದ್‌ ಎಂದು ವೇದಿಕೆಯಲ್ಲಿ ಅನೌನ್ಸ್‌ ಆಯ್ತು. ಎಲ್ಲರ ಮಿಮಿಕ್ರಿ ಮಾಡ್ದೆ. ಎಲ್ಲರೂ, ರಾಜ್‌ಕುಮಾರ್‌, ರಾಜ್‌ಕುಮಾರ್‌ ಎಂದು ಕೇಳಿದ್ರು. ರಾಜ್‌ಕುಮಾರ್‌ ಅವರ ಮಿಮಿಕ್ರಿ ಮಾಡಲು ಹೇಳುತ್ತಿದ್ದಾರೆ ಎಂಬುದು ನನಗೆ ಗೊತ್ತಾಯ್ತು. ಅವರೇ ಬರ್ತಾರೆ ಎಂದು ಸುಮ್ನೆ ಹೇಳಿ ನಾನು ಬಂದೆ. ರಾಜ್‌ಕುಮಾರ್‌ ಅವರು ಜನ ಕೇಳ್ತಿದ್ದಾರೆ ಮಾಡಿ ಎಂದ್ರು. ನನಗೆ ಏನು ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ. ಹೇಳುವ ಹಾಗಿಲ್ಲ, ಸುಮ್ಮನಿರುವ ಹಾಗೂ ಇಲ್ಲ. ಮಾಡ್ರಿ ಕೇಳುತ್ತಿದ್ದಾರೆ ಎಂದ್ರು. ನನಗೆ ಹೆದರಿಸಿದವನು ಅಲ್ಲಿಯೇ ಇದ್ದ. ಅವನು, ನಾನೇ ಹೇಳಿದ್ದು ಅಣ್ಣ ಮಾಡಬೇಡ ಅಂಥ ಎಂದ.

ರಾಜ್‌ಕುಮಾರ್‌ ಅವರು ತಿರುಗಿ, ಯಾರು ಅಧಿಕಾರ ಕೊಟ್ರು ನಿಮಗೆ ಹಾಗೆ ಹೇಳಲು. ಹಲವು ವರ್ಷಗಳ ಸಾಧನೆ ಅದು. ಅದಕ್ಕಾಗಿ ಎಷ್ಟು ವರ್ಷ ತಪಸ್ಸು ಮಾಡಿರುತ್ತಾರೆ ಗೊತ್ತಾ?. ಅವರ ಜೊತೆ ಮಾತನಾಡಲು ನಿಮಗೇನು ಯೋಗ್ಯತೆ ಇದೆ. ಅವರುಂಟು ಪ್ರೇಕ್ಷಕರುಂಟು. ಸಾವಿರಾರು ಕಾರ್ಯಕ್ರಮ ಮಾಡಿರುವವರು ಅವರು. ಅವರಿಗೆ ಗೊತ್ತಿಲ್ವಾ, ನೀವ್ಯಾರು ಅದನ್ನೆಲ್ಲ ಹೇಳಲು. ಕಲಾವಿದವರು, ತಪಸ್ವಿಗಳು ಅವರು. ನೀವು ಮಾತನಾಡಬಾರದು, ಅಧಿಕ ಪ್ರಸಂಗ ಅದು. ಕಲಾವಿದರವರು. ಅವರಿಗೆಲ್ಲ ಹೇಳಲು ನೀವ್ಯಾರು. ವೇದಿಕೆಯೇನು ನಮ್ಮದಾ? ಅದು ಕಲಾವಿದರದ್ದು, ಅದು ತಾಯಿ. ಅವರ ಮಾತನ್ನೆಲ್ಲ ನೀವು ಕೇಳಬೇಡಿ ಎಂದ್ರು. ನನ್ನ ಶರ್ಟ್‌ ಎಲ್ಲ ಓದ್ದೆ ಆಯ್ತು. ಅಷ್ಟು ಅಳು ಬಂತು ನನಗೆ. ಕುಮಾರ್‌ ಬಂಗಾರಪ್ಪ ಬಂದು, ಬಿಡ್ರಿ, ಇನ್ನು ಮೇಲೆ ನೀವು ಅಥರೈಸ್ಡ್‌ ಡೀಲರ್‌ ಎಂದ್ರು. ಅವರ ಕಾಲಿಗೆ ನಮಸ್ಕಾರ ಮಾಡಿ ಬಂದೆ. ಇದು ರಾಜ್‌ಕುಮಾರ್‌ ವ್ಯಕ್ತಿತ್ವ. ಅವರ ಹೊಸ ಅವತಾರವನ್ನು ನಾನು ಅಂದು ಕಂಡಿದ್ದೆ.ಮುಂದುವರೆಯುವುದು...

33 views