ಅಣ್ಣಾವ್ರು ಆ ಲೈಟ್‌ ಬಾಯ್‌ಗೆ ಕಯ್ಯಾರೆ ಎಳನೀರು ಕುಡಿಸಿದ್ರು

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 49ಯಾಕೆ ಎಲ್ಲರೂ, ರಾಜ್‌ಕುಮಾರ್‌ ಎನ್ನುತ್ತಾರೆ ಎಂದು ಹಲವರು ಅಂದುಕೊಳ್ಳುತ್ತಾರೆ. ಈ ರೀತಿಯ ಅವರ ಗುಣಗಳು ನನ್ನಂಥ ಪುಟ್ಟ ಕಲಾವಿದನಿಗೆ ಗೊತ್ತಿರುವಾಗ, ಇನ್ನು ದೊಡ್ಡವರ ಬಳಿ ಇನ್ನೆಂಥ ಘಟನೆಗಳು ಇರಬಹುದು ಯೋಚಿಸಿ.


ಪರಶುರಾಮ ಸಿನಿಮಾದಲ್ಲಿ ನಾನು ಮಿಲಿಟರಿ ಆಫೀಸರ್‌ ಪಾತ್ರ ಮಾಡಿದ್ದೆ. ಅದರಲ್ಲಿ ಅವರು ನನ್ನನ್ನು ಎತ್ತುಕೊಂಡು ರೌಂಡ್‌ ಹೊಡೆಯುವ ಸನ್ನಿವೇಶ ಇದೆ. ನಾವೆಲ್ಲ ಕೂತಿದ್ವಿ. ಎಲ್ಲರಿಗೂ ಟೀ ಬಂತು. ಅಣ್ಣಾವ್ರು, ಹಿರೋಯಿನ್‌, ನಿರ್ದೇಶಕರು ಸೇರಿದಂತೆ ನಾಲ್ಕೈದು ಜನರಿಗೆ ಎಳನೀರು ಬಂತು. ನಾನು ಅಣ್ಣಾವ್ರ ಪಕ್ಕದಲ್ಲೇ ಕೂತಿದ್ದರಿಂದ ಎಳನೀರು ಕೊಟ್ರು. ಲೈಟ್‌ ಬಾಯ್‌ ಒಬ್ಬ ಎಳನೀರಿಗೆ ಕೈ ಹಾಕಿದ. ಆಗ, ತೆಗೆದುಕೊಂಡು ಬಂದವನು, ಅಣ್ಣಾವ್ರಿಗೆ ತಂದಿದ್ದು ಎಂದು ಗದರಿದ. ಎಲ್ಲರೂ ಎಳನೀರು ಕುಡಿದ್ವಿ. ರಾಜ್‌ಕುಮಾರ್‌ ಕುಡಿದಿರಲಿಲ್ಲ.


ಯಾಕೆ ಕುಡಿದಿಲ್ಲ ಎಂದು ನಾನು ನೋಡುತ್ತಿದ್ದೆ. ಸ್ವಲ್ಪ ಹೊತ್ತಿನ ನಂತರ ನಡೆದುಕೊಂಡು ಹೋಗಿ, ಎಳನೀರು ಕೇಳಿದ ಹುಡುಗನಿಗೆ ಕುಡಿಸುತ್ತಿದ್ರು. ಅವನಿಗೆ ಕಣ್ಣೀರು ಬರುತ್ತಿತ್ತು. ನೀನು ಬಿಸಿಲಲ್ಲಿ ಇರುವುದು ಕುಡಿ, ಕುಡಿ ನಾವೆಲ್ಲ ತಣ್ಣಗೆ ಇದ್ದೇವೆ. ಛತ್ರಿ ಹಿಡಿಯುವವರು ಇದ್ದಾರೆ ಎಂದು ಅವರು ಹೇಳುತ್ತಿದ್ರು. ಅವತ್ತಿಂದ ಇಡೀ ಯೂನಿಟ್‌ಗೆ ಎಳನೀರು ಬರುತ್ತಿತ್ತು. ಅದು ಅಣ್ಣಾವ್ರ ಆರ್ಡರ್‌. ರಾಜ್‌ಕುಮಾರ್‌ ಕುರಿತು ಈ ರೀತಿಯ ಹಲವು ಉದಾಹರಣೆಗಳಿವೆ. ಸುಮ್ನೆ ಎಲ್ಲರೂ ದೊಡ್ಡವರಾಗಲು ಸಾಧ್ಯವಿಲ್ಲ. ಯಾರೂ ಇನ್ನೊಬ್ಬರನ್ನು ಸುಮ್ನೆ ಹೊಗಳುವುದಿಲ್ಲ. ನಾವು ಸಾಯುವುದರೊಳಗೆ ರಾಜ್‌ಕುಮಾರ್‌ ಜೊತೆ ನಟಿಸಿದ್ದೇವೆ ಎಂಬುದೇ ನಮಗೆ ಸಂತೋಷ. ಅದೊಂದು ನ್ಯಾಷನಲ್‌ ಅವಾರ್ಡ್‌ ಇದ್ದ ಹಾಗೆ.ಮುಂದುವರೆಯುವುದು...

13 views