“ಅಣ್ಣಾವ್ರು ಕಸ್ತೂರಿ ನಿವಾಸ ಮಾಡೊಲ್ಲ ಅಂದಿದ್ರು”

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 12


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)


ಸರಳವಾದ ಕಥೆಯನ್ನು ಹುಡುಕುತ್ತಿದ್ದೆವು. ಅದೇ ಸಮಯಕ್ಕೆ ಸರಿಯಾಗಿ ರಾಜ್‌ಕುಮಾರ್‌ ತಮ್ಮ ವರದಪ್ಪ ಮತ್ತು ಉದಯಶಂಕರ ಇಬ್ರೂ ಬಂದು ಈ ಕಥೆಯನ್ನು ಸಿನಿಮಾ ಮಾಡಲು ನೀವೇ ಸರಿ. ಅದ್ಭುತ ಕಥೆಯನ್ನು ಹುಡುಕಿದ್ದೇವೆ ಎಂದು ನಮಗೆ ಕಥೆ ಕೇಳಿಸಿದ್ರು. ಆಗ ಮಧ್ಯಾಹ್ನ ಸುಮಾರು 1.30 ಗಂಟೆಯಾಗಿತ್ತು. ಈ ಕಥೆ ಕೇಳಿದ್ರೆ ನೀವು ಊಟನೇ ಮಾಡಲ್ಲ ಅಷ್ಟು ಚೆನ್ನಾಗಿದೆ ಎಂದ್ರು, ಆ ಹೊತ್ತಲ್ಲಿ ಜಿಬಿಎಸ್‌ ಅವರ ಮನೆಗೆ ಕರೆದುಕೊಂಡು ಹೋದ್ರು ಕಥೆ ಕೇಳಲು. ಕಥೆ ಹೇಳಿ ಮುಗಿಸಲು ಸಂಜೆ 4.30 ಆಯ್ತು. ಊಟದ ಗಮನವೇ ಇರಲಿಲ್ಲ. 4.30 ರ ಮೇಲೆ ಊಟ ಮಾಡಿದೆವು.


ಕಸ್ತೂರಿ ನಿವಾಸ ಕಥೆ ಕೇಳಿ ಬಂದೆವು. ಸಂಧ್ಯಾರಾಗ ದಂತಹ ಸಿನಿಮಾಗಳನ್ನೆಲ್ಲ ಮಾಡಿದ್ದರಿಂದ ಅವರಿಗೆ ನಮ್ಮ ಸಾಮರ್ಥ್ಯ ಗೊತ್ತಿತ್ತು. 1956 ರಿಂದ ಸಿನಿಮಾ ಮಾಡಿಕೊಂಡು ಬಂದಿದ್ದರಿಂದ ಅವರಿಗೆ ನಮ್ಮ ಯೋಗ್ಯತೆ ತಿಳಿದಿತ್ತು. ಕಥೆ ಒಕೆ ಆಯ್ತು. ಕಥೆ ರೈಟ್ಸ್‌ ಕೊಡಿ ಸಿನಿಮಾ ಮಾಡ್ತೇವೆ ಎಂದು ಜಿಬಿಎಸ್‌ ಅವರಿಗೆ ಹೇಳಿದೆವು. ಇಲ್ಲ 25 ಸಾವಿರಕ್ಕೆ ಕಥೆಯ ರೈಟ್ಸ್‌ ಬೇರೆಯವರಿಗೆ ಕೊಟ್ಟಿದ್ದೇನೆ ಅಂದ್ರು. ಶಿವಾಜಿ ಗಣೇಶನ್‌ ಅವರಿಗೆ ಮಾಡಿದಂತಹ ಕಥೆ ಇದು ಅಂದ್ರು. ಐಬಿಎಂ ಎಂದಿದೆ ಅಲ್ಲಿ ಹೋಗಿ ಕೇಳಿ ಅಂದ್ರು. ಅಲ್ಲಿ ಹೋಗಿ ಕೇಳಿದಾಗ, ಈ ಬಗ್ಗೆ ಶಿವಾಜಿ ಗಣೇಶನ್‌ ಅವರ ಹತ್ತಿರ ಮಾತನಾಡಿದ್ವಿ, ಆದ್ರೆ ಅವರು ಕಥೆ ಬೇಡ ಅಂದಿದ್ದಾರೆ. ಸ್ಕ್ರೀನ್‌ಪ್ಲೇ ಎಲ್ಲ ಮಾಡಿದ್ವಿ. ಅದಕ್ಕೆ 14 ಸಾವಿರ ಖರ್ಚಾಗಿದೆ. ಹೇಗಿದ್ರೂ ವೇಸ್ಟ್‌ ಆಗಿ ಬಿದ್ದಿದೆ. ಒಟ್ಟು 39 ಸಾವಿರ ಕೊಟ್ರೆ ನಿಮಗೆ ಕೊಟ್ಟು ಬಿಡ್ತೇವೆ ಅಂದ್ರು. ಅಲ್ಲೇ ಚೆಕ್‌ ಬರೆದು ಕೊಟ್ಟು ಕಥೆ ತೆಗೆದುಕೊಂಡು ಬಂದೆವು.
ವರದರಾಜ್ ಅವರು ರಾಜ್‌ಕುಮಾರ್‌ ಅವರಿಗೆ ಕಥೆ ಹೇಳಿದ್ರು. ಕಥೆ ಚೆನ್ನಾಗಿಲ್ಲ ಎಂದು ಶಿವಾಜಿ ಗಣೇಶನ್‌ ಬೇಡ ಎಂದಿದ್ದನ್ನು ಹೇಳಿದ್ರು. ಅವರು ಕಥೆ ಚೆನ್ನಾಗಿಲ್ಲ ಅಂದ್ಮೇಲೆ ನನಗೇನು ಚೆನ್ನಾಗಿರೋದು ನನಗೂ ಬೇಡ ಅಂದು ಬಿಟ್ರು. 39 ಸಾವಿರ ಕೊಟ್ಟು ತೆಗೆದುಕೊಂಡು ಬಂದ ಕಥೆಯನ್ನು ಬೇಡ ಅಂದಿದ್ದಕ್ಕೆ ನಮಗೂ ಯೋಚನೆ ಶುರುವಾಯ್ತು. ರಾಜ್‌ಕುಮಾರ್‌ ಅವರಿಗೆ ಚೆನ್ನಾಗಿರುತ್ತದೆ ಎಂದು ಯೋಚಿಸಿ ತಂದ ಕಥೆಯನ್ನು ಬೇಡ ಅಂದು ಬಿಟ್ರಲ್ಲ ಅನಿಸಿತು. ಕೊನೆಯಲ್ಲಿ ಹೀರೊ ಸತ್ತು ಹೋಗುತ್ತಾನೆಂದು ಶಿವಾಜಿ ಗಣೇಶನ್‌ ಬೇಡ ಅಂದ್ರು. ಆದ್ರೆ ನೀನು ಈ ಹಿಂದೆ ಸಂಧ್ಯಾರಾಗ ಮತ್ತು ಮಂತ್ರಾಲಯ ಮಹಾತ್ಮೆ ಸಿನಿಮಾಗಳಲ್ಲೆಲ್ಲ ನೀನು ಆ ರೀತಿಯ ಪಾತ್ರ ಮಾಡಿದ್ದೀಯಾ ನೀನೇ ಮಾಡು ಎಂದು ವರದಪ್ಪದು ಒಂದೇ ಹಟ, ಜನಗಳು ಒಪ್ಪಿಕೊಳ್ಳುತ್ತಾರೆ ನಿನ್ನ ಅಂದ್ರು.


ವರದಪ್ಪ ಹೇಳಿದ್ದನ್ನು ರಾಜ್‌ಕುಮಾರ್‌ ಮೀರ್ತಿರಲಿಲ್ಲ. ಆಯ್ತಪ್ಪ ನೀನು ಹೇಳಿದ ಮೇಲೆ ಮಾಡುತ್ತೇನೆ ಎಂದು ಒಪ್ಪಿಕೊಂಡು ಮಾಡಿದ್ರು. ಅದು ಇತಿಹಾಸವನ್ನೇ ಸೃಷ್ಟಿ ಮಾಡಿತು.


ಆಡುವ ಗೊಂಬೆ ಐಡಿಯಾ ಹೇಗೆ ಬಂತು ಎಂದು ಬಹಳಷ್ಟು ಜನ ಕೇಳ್ತಾರೆ. ಜಿಬಿಎಸ್‌ ತಮಿಳಿನವರು. ಅವರು ತಮಿಳಲ್ಲಿ ಕಥೆ ಹೇಳಬೇಕಾದ್ರೆ. ಹೀರೊ ತಂಜಾವೂರು ಗೊಂಬೆಯ ಮಾದರಿ ಎಂದು ಒಂದು ಲೈನ್‌ನಲ್ಲಿ ವಿವರಿಸಿದ್ರು. ಅದನ್ನು ಉದಯಶಂಕರ್‌ ಅವರಿಗೆ ಜ್ಞಾಪಕ ಮಾಡಿದೆವು. ಆ ರೀತಿಯ ಗೊಂಬೆ ಎಲ್ಲಿ ಸಿಗುತ್ತದೆ ನೋಡು ಎಂದ ಅವನು. ಮದ್ರಾಸ್‌ ಬಳಿ ಹ್ಯಾಂಡ್‌ಕ್ರಾಫ್ಟ್‌ ಎಂಪೋರಿಯಂನಲ್ಲಿ ಸಿಗುತ್ತದೆ ಎಂಬುದು ನನಗೆ ಗೊತ್ತಿತ್ತು. ತಂಜಾವೂರು ಗೊಂಬೆ ಎಂದು ಅದಕ್ಕೆ ಹೆಸರು ಎಂದು ನಾನು ಹೇಳಿದೆ. ಆದ್ರೆ ಅಲ್ಲಿ ಹೋಗಿ ನೋಡಿದ್ರೆ ಸ್ಟಾಕ್ ಇಲ್ಲ ಎಂದ್ರು. ಅದು ಯಾವಾಗ್ಲೋ ಒಮ್ಮೊಮ್ಮೆ ಬರುತ್ತೆ. ಯಾವಾಗ ಬರುತ್ತೋ ಗೊತ್ತಿಲ್ಲ ಎಂದ್ರು. ಆಗ ಒಬ್ಬ ಸೇಲ್ಸ್‌ಮನ್‌ ಒಂದೇ ಒಂದು ಗೊಂಬೆ ಇರಬೇಕು ಎಂದು, ಹುಡುಕಿ ತೆಗೆದುಕೊಂಡು ಬಂದು ಕೊಟ್ಟ. ಆ ಗೊಂಬೆಯನ್ನು ಉದಯಶಂಕರ್‌ ಆಡಿಸ್ತಾ ಇದ್ದ. ಆಗ ಇದಕ್ಕೊಂದು ಒಳ್ಳೆಯ ಐಡಿಯಾ ಬರುತ್ತಿದೆ ಎಂದ. ಏನು ಎಂದೆ. ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು’ ಹೇಗಿದೆ ಇದು ಎಂದ. ಚೆನ್ನಾಗಿದೆ, ವೆಂಕಟೇಶ್‌ಗೆ ಹೇಳು ಎಂದೆ. ಅದನ್ನೇ ಅವನು ಹಾಡು ಮಾಡಿದ. ಹೀಗೆ ಆ ಹಾಡಿನ ಜನನವಾಯ್ತು. ಅದು ಜನಪ್ರಿಯವೂ ಆಯ್ತು.


ರಾಜ್‌ಕುಮಾರ್‌ ಅವರು ಆ ಕಥೆಯನ್ನು ಮಾಡಲು ಒಪ್ಪಿಕೊಂಡ ಮೇಲೆ ಅದರಲ್ಲಿ ಸಂಪೂರ್ಣ ತೊಡಗಿಸಿಕೊಂಡರು. ಅದಕ್ಕೆ ಜೀವ ತುಂಬಿದ್ದೇ ರಾಜ್‌ಕುಮಾರ್‌ ನಟನೆ ಮತ್ತು ಉದಯ ಶಂಕರ್‌ ಸಂಭಾಷಣೆ ಮತ್ತು ವೆಂಕಟೇಶ್‌ ಸಂಗೀತ. ಕಸ್ತೂರಿ ನಿವಾಸದ ಶ್ರೇಷ್ಠತೆ ಇವತ್ತಿನವರೆಗೂ ಇದೆ. ಅಂದ್ರೆ, ಕನ್ನಡ ಸಿನಿಮಾ ಇರುವವರೆಗೂ ಆ ಸಿನಿಮಾ ಜೀವಂತವಾಗಿರುತ್ತದೆ ಎಂದು ಜನರೂ ಹೇಳುತ್ತಿರುವುದು ನಿಜವಾದರೆ ಅದರ ಶೇ 100 ಕ್ರೆಡಿಟ್‌ ಅವರಿಗೇ ಸಲ್ಲಬೇಕು. ನಾವೆಲ್ಲ ಏನೂ ಅಲ್ಲ ಅದರಲ್ಲಿ. ಸಿನಿಮಾದಲ್ಲಿ ಮಗುವನ್ನು ಮಣ್ಣು ಮಾಡಿ ಬರಬೇಕಾದ್ರೆ, ರಾಜ್‌ಕುಮಾರ್‌ ಅವರಿಗೆ ದುಃಖ ತಡೆಯೋಕೆ ಆಗಿರಲಿಲ್ಲ.


ರೆಕಾರ್ಡಿಂಗ್‌ ನಡೆಯುತ್ತಿತ್ತು. ಎಲ್‌. ಸುಬ್ರಮಣಿಯಂ ಅವರ ಅಣ್ಣ ಎಲ್‌. ವೈದ್ಯನಾಥನ್‌ ಎಂದು. ಅವನು ಜಿ.ಕೆ ವೆಂಕಟೇಶ್‌ ಅವರಿಗೆ ಅಸಿಸ್ಟೆಂಟ್‌. ಇಳಯರಾಜ ಮತ್ತು ಅವನು ಮುಖ್ಯ ಅಸಿಸ್ಟೆಂಟ್‌ ಆಗಿದ್ರು. ವೈದ್ಯನಾಥನ್‌ ಅಣ್ಣನ ಹಾಗೆಯೇ ಒಳ್ಳೆಯ ಪಿಟೀಲು ವಾದಕ. ‘ಆಡಿಸು ನೋಡು, ಬಿಳಿಸು ನೋಡು’ ಹಾಡನ್ನು ಸೊಲೊ ವಯೋಲಿನ್‌ನಲ್ಲಿ ಬಾರಿಸು. ಪ್ಯಾಥೆಟಿಕ್‌ ಆಗಿ ಬಾರಿಸು ಎಂದ. ಅವನು ಬಾರಿಸಿದ. ಇದು ಸನ್ನಿವೇಶಕ್ಕೆ ತುಂಬಾ ಹೊಂದುತ್ತದೆ ಎಂದು ನನಗೆ ಅನಿಸಿತು. ಇದಕ್ಕೆ ಸಾಹಿತ್ಯ ಬರೆಸಿದ್ರೆ ಹೇಗೆ ವೆಂಕಟೇಶ್‌ ಎಂದೆ. ಕರೆಸು ಉದಯಶಂಕರ್‌ನ ಅಂದ ಅವನು. ಕಾರು ಕಳುಹಿಸಿ, ಕರೆಸಿದೆ. ತುಂಬಾ ಚೆನ್ನಾಗಿದೆ ಎಂದು ಸಾಹಿತ್ಯ ಬರೆಯುತ್ತೇನೆ ಎಂದು ಸಿಗರೇಟ್‌ ಹಚ್ಚಿಕೊಂಡ, ಅದು ಸೇದಿ ಬೂದಿ ಆಗುವುದರೊಳಗೆ ಸಾಹಿತ್ಯ ಬರೆದುಬಿಟ್ಟಿದ್ದ.


‘ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ ಸೂತ್ರವ ಹರಿದ ಬೊಂಬೆಯ ಮುರಿದ ಮಣ್ಣಾಗಿಸಿದ’ ಎಂದು ಬರೆದಿದ್ದ. ಏನೋ ಇದು ಇಷ್ಟು ಅದ್ಭುತವಾಗಿದೆ ಎಂದೆ. ವೆಂಕಟೇಶ್‌ಗೆ ಮಾತೇ ಹೊರಡಲಿಲ್ಲ. ಅವನು ಟ್ಯೂನ್‌ಗೆ ಹಾಕಿ ನೋಡಿದ. ಶ್ರೀನಿವಾಸ್‌ನ ಕರೆಸಿಬಿಡು ಎಂದ. ಶ್ರೀನಿವಾಸ್‌ಗೆ ಕೇಳಿದ್ರೆ ನಾನು 10 ಗಂಟೆ ಮೇಲೆ ಬರೋಕೆ ಆಗೋದು ಈಗ ಬರೋದಕ್ಕೆ ಆಗೋಲ್ಲ ಅಂದ. ಸರಿ, ನಾನು ಟ್ರ್ಯಾಕ್‌ ಹಾಡ್ತೇನೆ. ಶ್ರೀನಿವಾಸ್‌ ಬಂದ ಮೇಲೆ ವರ್ಜಿನಲ್‌ ಆಗಿ ಹಾಡಲಿ ಎಂದು ವೆಂಕಟೇಶ್‌ ಟ್ರ್ಯಾಕ್‌ ಹಾಡಿದ. ಅತ್ಯಂತ ಭಾವಪೂರ್ವಕವಾಗಿ ಹಾಡಿದ್ದ. ಭಗವಾನ್‌ ಇದನ್ನು ಬದಲಾಯಿಸಲು ಹೋಗಬೇಡ. ವೆಂಕಟೇಶ ಸಂಪೂರ್ಣ ಜೀವ ತುಂಬಿ ಹಾಡಿದ್ದಾನೆ. ಶ್ರೀನಿವಾಸ್‌ ಕೈಯಲ್ಲಿ ಹಾಡಿಸಲು ಹೋಗಬೇಡ. ಶ್ರೀನಿವಾಸ್‌ ಆ ಮಟ್ಟಿಗೆ ಅದಕ್ಕೆ ಜೀವ ತುಂಬುತಾನೋ, ಇಲ್ವೋ ಅನ್ನೋ ನಂಬಿಕೆ ನನಗಿಲ್ಲ. ಅದ್ಭುತವಾಗಿ ಹಾಡಿದ್ದಾನೆ ಇದನ್ನೇ ಇಟ್ಕೋ ಎಂದ. ಅದನ್ನೇ ಉಳಿಸಿದೆ. ಅವನು ಫೀಲ್‌ ಮಾಡಿ ಹಾಡಿದ್ದ. ಹಾಗಾಗಿಯೇ ಅದರಲ್ಲಿ ಗದ್ಗತೆ ತುಂಬಿದೆ.


‘ನೀ ಬಂದು ನಿಂತಾಗ’, ‘ಎಲ್ಲೇ ಇರು ಹೇಗೇ ಇರು’... ಹೀಗೆ ಎಂಥ ಒಳ್ಳೊಳ್ಳೆ ಹಾಡುಗಳಿವೆ ಅದರಲ್ಲಿ. ನಾವು ಏನೇ ಹೇಳಿದ್ರು ವೆಂಕಟೇಶ್ ಮಾಡುತ್ತಿದ್ದ. ಚೆನ್ನಾಗಿಲ್ಲ ಎಂದ್ರೆ ಬೇರೆ ಮಾಡುತ್ತಿದ್ದ. ನಮ್ಮಲ್ಲಿ ಒಳ್ಳೆಯ ತಂಡ ಇತ್ತು. ಹಾಗಾಗಿ ಒಳ್ಳೊಳ್ಳೆ ಪಿಕ್ಚರ್‌ ಕೊಡುವುದು ಸಾಧ್ಯವಾಯ್ತು.


ದೊರೆ–ಭಗವಾನ್‌ಗೆ ಬೇರೆ ಕೆಲಸವಿಲ್ಲ. ಒಂದೆ ಫೈಟಿಂಗ್‌, ಇಲ್ಲಂದ್ರೆ ಕಣ್ಣೀರು ತರಿಸುವಂತಹ ಸಿನಿಮಾ ಕೊಡ್ತಾರೆ. ಇವೆರಡಕ್ಕೂ ಬ್ರಿಡ್ಜ್‌ ಮಾಡುವಂತಹ ಪಿಕ್ಚರ್‌ಗಳೇ ಬರೋಲ್ಲ ಅನ್ನುತ್ತಿದ್ರು. ಆಗಲೇ, ಪ್ರತಿಧ್ವನಿ ಸಿನಿಮಾ ಕೊಟ್ಟೆವು. ಶಂಕರ್‌, ನಾನು, ಉದಯಶಂಕರ್‌ ಎಲ್ಲ ಸೇರಿ ಕಥೆ ರೆಡಿ ಮಾಡಿದೆವು. ಸಲೀಂ–ಜಾವೀದ್‌ ಅವರು ನಮ್ಮ ಸಿನಿಮಾ ನೋಡಿ ಪ್ರೇರಿತರಾಗಿ ಹಿಂದಿಯಲ್ಲಿ ‘ದೀವಾರ್‌’ ತೆರೆಗೆ ತಂದ್ರು. ಅದರಲ್ಲಿ ಅಮಿತಾಭ್‌, ಶಶಿ ಕಪೂರ್‌ ನಟಿಸಿದ್ರು.


ಆಗಿನ ಕಾಲದಲ್ಲಿ ‘ಗುಡ್‌ ಬ್ಯಾಡ್‌ ಅಗ್ಲಿ’ ಎಂಬ ಸಿನಿಮಾ ಬಂದಿತು. ಅದರಿಂದ ಪ್ರೇರಿತರಾಗಿ ಪ್ರತಿಧ್ವನಿ ಸಿನಿಮಾ ಮಾಡಿದೆವು. ಕಸ್ತೂರಿ ನಿವಾಸದ ನಂತರ ಚಿ. ಉದಯಶಂಕರ್‌ ನಮ್ಮ ಬಲಗೈಯಾಗಿದ್ದ. ನಂತರ ಯಾವ ಸಿನಿಮಾದಲ್ಲಿಯೂ ಅವನನ್ನು ಬಿಡಲಿಲ್ಲ. ‘ಎರಡು ಕನಸು’ ನಮ್ಮನ್ನು ಇನ್ನಷ್ಟು ಗಾಢವಾಗಿ ಬೆಸೆಯಿತು.


ಪ್ರತಿಧ್ವನಿ ಆದ ಮೇಲೆ ಎರಡು ವರ್ಷ ನಮಗೆ ಕೆಲಸ ಇರಲಿಲ್ಲ. ರಾಜ್‌ಕುಮಾರ್‌ ಕಾಲ್‌ಶೀಟ್‌ ಇರಲಿಲ್ಲ. ಅವರಿಲ್ಲದೇ ನಾವು ಸಿನಿಮಾ ಮಾಡುತ್ತಿರಲಿಲ್ಲ. ಕಸ್ತೂರಿ ನಿವಾಸದೇ ದುಡ್ಡಿತ್ತು. ಸಿನಿಮಾ ತಯಾರಿಕೆ 3.45 ಲಕ್ಷ ಖರ್ಚಾಗಿತ್ತು. 25 ವಾರ ಓಡಿ ಆಗಲೇ 10– 15 ಲಕ್ಷ ಸಂಪಾದನೆ ಮಾಡಿಬಿಟ್ಟಿದ್ವಿ. ಹಾಗಾಗಿ, ಸಿನಿಮಾ ಮಾಡಲೇಬೇಕು ಎಂಬ ತುಡಿತ ಇರಲಿಲ್ಲ.


1973 ರಲ್ಲಿ ಎರಡುಕನಸು ಶುರು ಮಾಡಿದೆವು. ಎಂಥಹ ಸಿನಿಮಾ ಮಾಡಬೇಕು ಎಂದು ಯೋಚಿಸುತ್ತಿದ್ದೆವು. ಪಾರ್ವತಮ್ಮನವರಿಗೆ ಕಾದಂಬರಿಗಳನ್ನು ಓದುವ ಹವ್ಯಾಸ ಹೆಚ್ಚಿತ್ತು. ಅವರು ಈ ಕಾದಂಬರಿ ಬಹಳ ಚೆನ್ನಾಗಿದೆ. ನೀವು ಬಹಳ ಚೆನ್ನಾಗಿ ಸಿನಿಮಾ ಮಾಡ್ತೀರಾ ನಿಮಗೆ ಆಗುತ್ತಾ ನೋಡಿ ಎಂದು ವಾಣಿ ಬರೆದಿರುವ ಎರಡು ಕನಸು ಪುಸ್ತಕ ತಂದು ಕೊಟ್ರು. ದೊರೆ ಮತ್ತು ನಾನು ಓದಿದೆವು. ಇಡೀ ಪುಸ್ತಕದಲ್ಲಿ ಆರರಿಂದ ಎಂಟು ಪೇಜ್‌ ಅಷ್ಟೇ ಹೀರೊ ಬಗ್ಗೆ ಇತ್ತು. ಉಳಿದದ್ದು ಅವಳ ಮೇಲಿನ ಶೋಷಣೆಯೇ ಹೆಚ್ಚಿತ್ತು. ಅಲ್ಲ ಅತ್ತಿಗೆ, ಇದರಲ್ಲಿ ಹೀರೊ ಇಲ್ಲೇ ಇಲ್ವಲ್ಲಾ ಇದನ್ನು ನಮ್ಮ ಕೈಗೆ ತಂದುಕೊಟ್ಟಿದ್ದೀರಲ್ಲ ಎಂದು ಪಾರ್ವತಮ್ಮನವರಿಗೆ ಹೇಳಿದೆವು. ಹೀರೊ ಇಲ್ಲ ಅಂತಾನೇ ನಿಮಗೆ ಕೊಟ್ಟಿದ್ದು, ಕಥೆ ಚೆನ್ನಾಗಿದೆ. ಅದರಲ್ಲಿ ಹೀರೊ ಪಾತ್ರವನ್ನು ಚೆನ್ನಾಗಿ ಬೆಳೆಸುತ್ತೀರಾ ನೀವು, ಆ ಸಾಮರ್ಥ್ಯ ನಿಮಗಿದೆ ಅಂದ್ರು. ಹೀರೊನನ್ನು ನೀವೇ ಕ್ರಿಯೆಟ್‌ಮಾಡಿ ಅಂದ್ರು.

ಇಲ್ಲ, ಕಷ್ಟ ಮಾಡೋಕೆ ಆಗೋಲ್ಲ ಅತ್ತಿಗೆ ಅಂದ್ವಿ. ನಿಮ್ಮ ಕೈಯಲ್ಲಿ ಆಗುತ್ತೆ, ಮಾಡಬೇಕು ಅಂದ್ರು. ಸರಿ, ಎಂದು ಸವಾಲಾಗಿ ತೆಗೆದುಕೊಂಡೆವು. ಉದಯಶಂಕರ್‌, ವರದಪ್ಪ, ನಾವು ಎಲ್ಲ ಕುಳಿತುಕೊಂಡು ಅದಕ್ಕೊಂದು ಆಕಾರ ಕೊಟ್ಟು, ರಾಜ್‌ಕುಮಾರ್‌ ಇಮೇಜ್‌ಗೆ ತಕ್ಕಂತೆ ಬೆಳೆಸಿಕೊಂಡು ಹೋದೆವು.

ಆಕೆ ಬಹಳ ಚೆನ್ನಾಗಿರಬೇಕು. ಯಾವಾಗಲೂ ರೇಷ್ಮೆ ಸೀರೆಯನ್ನೇ ಉಟ್ಟಿರಬೇಕು ಎಂದು ಪಾರ್ವತಮ್ಮ ಹೇಳಿದ್ರು. ಆಗ ಬೆಂಗಳೂರಿಗೆ ರುಕ್ಮಿಣಿ ಹಾಲ್‌ ಬಹಳ ಜನಪ್ರಿಯ. ಚಿಕ್ಕಪೇಟೆಯಲ್ಲಿದೆ ಅದು. ಅಲ್ಲಿಂದ ನಾನು 34 ಸೀರೆಗಳನ್ನು ಆರಿಸಿಕೊಂಡು ಬಂದು, ನೀವೇ ಆಯ್ಕೆ ಮಾಡಿ ಎಂದೆ. ಅವರು 10–12 ಸೀರೆ ಆರಿಸಿದ್ರು. ಉಳಿದಿದ್ದನ್ನು ವಾಪಸು ಕೊಟ್ಟೆ. 3 ಸಾವಿರ ಒಂದು ಜರ್ತಾರಿ ಸೀರೆ. 35 ಸಾವಿರ ಬಿಲ್‌ಕೊಟ್ಟೆ. ನನಗೆ ರಿಯಾಯಿತಿ ಇತ್ತು.

ಸಂಗೀತಕ್ಕೆ ವೆಂಕಟೇಶ್‌ಗೆ ಹೇಳಿದೆ. ತಮಿಳಿನಲ್ಲಿ ಬಹಳ ಜನಪ್ರಿಯರಾದ ವಿಶ್ವನಾಥನ್‌– ರಾಮಮೂರ್ತಿ ಮ್ಯೂಸಿಕ್‌ ಡೈರೆಕ್ಟರ್ಸ್‌, ಅವರು ಪಿಕ್ಚರ್‌ಗಳಿಗೆ ಹಾಡುಗಳನ್ನು ಮಾಡುತ್ತಿದ್ರು. ಇವನು ರಿಕಾರ್ಡಿಂಗ್‌ ಜವಾಬ್ದಾರಿಯನ್ನು ವೆಂಕಟೇಶ್‌ಗೆ ಕೊಟ್ಟಿದ್ದರು. ಅವರ ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡು ಬಿಟ್ಟಿದ್ದ. ಬಿಡುವೇ ಇರಲಿಲ್ಲ. ಬೆಳಿಗ್ಗೆ ಹೋದ್ರೆ ರಾತ್ರಿ ಬರುತ್ತಿದ್ದ. ನನ್ನ ಕೈಯಲ್ಲಿ ಆಗೋಲ್ಲ. ಇದೊಂದು ಪಿಕ್ಚರ್‌ ಬಿಟ್ಟುಬಿಡು ಎಂದ. ಯಾರನ್ನು ಹಾಕೋದು ಎಂದು ಯೋಚಿಸುತ್ತಿದ್ದಾಗ, ಮಂತ್ರಾಲಯ ಮಹಾತ್ಮೆಯಲ್ಲಿ ಇದೇ ರೀತಿಯ ಸನ್ನಿವೇಶ ಎದುರಾದಾಗ ರಾಜನ್‌–ನಾಗೇಂದ್ರ ಹಾಕಿಕೊಂಡಿದ್ದೆವು. ಹಾಗಾಗಿ, ಅವರನ್ನೇ ಕರೆಸಿದೆವು. ಸನ್ನಿವೇಶವನ್ನು ಅವರಿಗೆ ವಿವರಿಸಿದೆವು. ಒಂದು ಸಿನಿಮಾದಲ್ಲಿ ಒಂದು ಹಾಡು ಜನಪ್ರಿಯವಾಗೋದು ಕಷ್ಟ. ಆದರೆ ಈ ಸಿನಿಮಾದಲ್ಲಿ ಆರು ಹಾಡುಗಳು ಜನಪ್ರಿಯವಾಯ್ತು. ಹಾಗಾಗಿ, ಸಹವಾಗಿಯೇ ಪಿಕ್ಚರ್‌ ಕೂಡ ಯಶಸ್ಸು ಕಾಣ್ತು. ಹೆಚ್ಚುಕಮ್ಮಿ ಒಂದು ವರ್ಷ ಓಡ್ತು.


ಕೊನೆಯಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ಕಲ್ಪನಾ ಅವಳ ಆ್ಯಕ್ಟಿಂಗ್‌ ಮೂಲಕ ರಾಜ್‌ಕುಮಾರ್‌ ಪಾತ್ರವನ್ನೇ ನುಂಗಿಹಾಕಿ ಬಿಟ್ಟಳು. ರಾಜ್‌ಕುಮಾರ್‌ ಸೈಲೆಂಟ್‌ ಆಗಿ ನಿಂತಿರುತ್ತಾರೆ. ಅವಳೇ ಎಲ್ಲ ಮಾತನಾಡುತ್ತಾಳೆ. ಅವರಿಗೆ ಏನೂ ಆ್ಯಕ್ಷನ್‌ ಇರಲಿಲ್ಲ. ಇಲ್ಲಿ ಅವರ ಪಾತ್ರ ಬಿದ್ದು ಹೋಗುವ ಹಾಗೆ ಕಾಣ್ತಿತ್ತು. ನೆಗೆಟಿವ್‌ ತರಹ ಕಾಣ್ತಿತ್ತು. ಆಗ ನಾವು ಯೋಚನೆ ಮಾಡಿ, ಇದು ಹೀಗೆ ಬಿಟ್ರೆ ಸರಿ ಆಗೋಲ್ಲ ಎಂದು ಯೋಚಿಸಿದ್ವಿ. ಇವೆಲ್ಲ ಆದ ಮೇಲೆ ರಾಜ್‌ಕುಮಾರ್‌ ಸೈಲೆಂಟಾಗಿ ನಡೆದುಕೊಂಡು ಹೋಗಿ, ಗೋಡೆಯನ್ನು ಹಿಡ್ಕೊಂಡು ಬಿಕ್ಕಳಿಸಿ ಅಳುವ ತರಹ ತೋರಿಸಿ, ಮುಕ್ತಾಯ ಮಾಡಿದ್ವಿ. ಅದರಿಂದಾಗಿ ಅವರ ಪಾತ್ರ ಉಳಿದುಕೊಂಡಿತು.


ಅದಾದ ಮೇಲೆ ಮೂರು ವರ್ಷ ಪುನಃ ನಮಗೆ ರಾಜ್‌ಕುಮಾರ್‌ ಕಾಲ್‌ಶೀಟ್‌ ಇರಲಿಲ್ಲ.


ಮುಂದುವರೆಯುವುದು...

ಸಂದರ್ಶಕರು - ಕೆ.ಎಸ್‌ ಪರಮೇಶ್ವರ


36 views