“ಅಣ್ಣಾವ್ರು ಜೇಮ್ಸ್ ಬಾಂಡ್‌ ಆಗೋದಕ್ಕೆ ಮಾಡಿಕೊಂಡ ತಯಾರಿ”

ದೊರೈ-ಭಗವಾನ್ ಲೈಫ್ ಸ್ಟೋರಿ - ಭಾಗ 8


(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)


ಮಂತ್ರಾಲಯ ಮಹಾತ್ಮೆ ಸಿನಿಮಾ ಪ್ರಾರಂಭಿಸಿದ ಸಂದರ್ಭದಲ್ಲಿ ಜುಪಿಟರ್‌ ಕಂಪನಿಗೆ ರಾಜೀನಾಮೆ ನೀಡುವುದು ಅನಿವಾರ್ಯ ಆಯ್ತು. ವಿಷಯ ಹೇಳಿದಾಗ, ಕಂಪನಿಯವರು ನನ್ನನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ನಿಮ್ಮಂಥ ನೌಕರ ನಮಗೆ ಸಿಗುವುದೇ ಇಲ್ಲ ಎಂದ್ರು. ಆದರೆ, ನನಗೆ ಅನಿವಾರ್ಯ ಸ್ವಂತ ಪ್ರೊಡಕ್ಷನ್‌ ಪ್ರಾರಂಭಿಸುತ್ತಿದ್ದೇನೆ ಬಿಡಲೇಬೇಕು ಎಂದಾಗ, ನಿಮ್ಮಷ್ಟೇ ಪ್ರತಿಭಾವಂತ ಯಾರಾದ್ರು ಇದ್ರೆ, ನೀವೇ ಕರೆದುಕೊಂಡು ಬಂದು ಕನ್ನಡ ಡಿಪಾರ್ಟ್‌ಮೆಂಟ್‌ಗೆ ಸೇರಿಸಿ. ಆಮೇಲೆ ಬೇಕಾದ್ರೆ ಹೋಗಿ. ಅಲ್ಲಿಯವರೆಗೂ ನಿಮ್ಮನ್ನು ಬಿಟ್ಟುಕೊಡುವುದಿಲ್ಲ ಎಂದು ಶರತ್ತು ಹಾಕಿದ್ರು.

ಆಗ ನಾನು ಸಿದ್ದಲಿಂಗಯ್ಯ ಅವರನ್ನು ಸಂಪರ್ಕಿಸಿದೆ. ಕನ್ನಡ ಇನ್‌ಚಾರ್ಜ್‌ ಕೆಲಸ ಇದೆ. 300 ರೂಪಾಯಿ ಸಂಬಳ ಕೊಡುತ್ತಾರೆ. ದಯವಿಟ್ಟು ಒಪ್ಪಿಕೊಳ್ಳುತ್ತೀರಾ ಎಂದೆ. ಅವರಿಗೆ ಆ ಸಂದರ್ಭದಲ್ಲಿ ಕೆಲಸ ಇರಲಿಲ್ಲ. ಹಾಗಾಗಿ ಅವರು ತಕ್ಷಣ ಒಪ್ಪಿಕೊಂಡ್ರು. ನಂತರ ಜುಪಿಟರ್‌ನಲ್ಲಿ ಕನ್ನಡ ಇನ್‌ಚಾರ್ಜ್‌ ಆಗಿ ಸೇರಿಕೊಂಡ್ರು.
‘ಭಾಗ್ಯೋದಯ’ದಲ್ಲಿ ಚಿತ್ರಕಥೆ, ಸಂಭಾಷಣೆ, ಗೀತೆ ರಚನೆ ಎಲ್ಲ ಪ್ರಭಾಕರ ಶಾಸ್ತ್ರಿಯವರದು. ಅವರ ಸಹೋದಯ ಪುಟ್ಟಣ್ಣ ಕಣಗಾಲ್‌. ಮೈಸೂರಿನ ಗ್ಯಾರೇಜ್‌ವೊಂದರಲ್ಲಿ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ರು. ಅಣ್ಣ ಸಿನಿಮಾದಲ್ಲಿದ್ದಾನೆ, ನಾನು ಸಿನಿಮಾದಲ್ಲಿ ಕೆಲಸ ಮಾಡಬೇಕೆಂದು ಮದ್ರಾಸ್‌ಗೆ ಬಂದಿದ್ದ. ನಮ್ಮ ಕಚೇರಿಯಲ್ಲಿಯೇ ಅವನ ಊಟ, ತಿಂಡಿ, ವಸತಿ. ನಮ್ಮಿಬ್ಬರದು ಒಂದೇ ತಟ್ಟೆಯಲ್ಲಿ ಊಟ. ಅಕ್ಕಪಕ್ಕದ ಹಾಸಿಗೆಯಲ್ಲಿಯೇ ಮಲಗುತ್ತಿದೆವು. ನಾನು ಶೂಟಿಂಗ್‌ಗೆ ಹೋದ್ರೆ ಅವನು ಪುಸ್ತಕ ಓದುತ್ತ ಕುಳಿತಿರುತ್ತಿದ್ದ. ಸಾಹಿತ್ಯದಲ್ಲಿ ಆಸಕ್ತಿ ಇರುವಂತಹ ವ್ಯಕ್ತಿ. ಪಂತಲು ಅವರ ಕಚೇರಿಯಿಂದ ಮುಂದಿನ ಸಿನಿಮಾಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ನನಗೆ ಕರೆ ಬಂತು. ಆಗ, ಪ್ರಭಾಕರ ಶಾಸ್ತ್ರಿಯವರು ನೀನು ಇಲ್ಲಿ ಕೆಲಸ ಮಾಡ್ತಿದ್ದೀಯಾ ಅಲ್ವಾ, ನೀನು ಆ ಕೆಲಸವನ್ನು ಪುಟ್ಟಣ್ಣಗೆ ಕೊಡಿಸಬಹುದಲ್ವಾ. ನಾನು ಕೈಮುಗಿದು ಬೇಡಿಕೊಳ್ಳುತ್ತೇನೆ ಅಂದ್ರು. ನೀವ್ಯಾಕೆ ಕೈ ಮುಗಿಯುತ್ತೀರಾ? ನೀವು ಅಪ್ಪಣೆ ಮಾಡಿದ್ರೆ ಸಾಕು. ಹೇಗಿದ್ರು ನೀವೇ ಅದಕ್ಕೆ ಸಂಭಾಷಣೆ ಬರೆಯುತ್ತಿದ್ದೀರಲ್ಲ, ನೀವೇ ನಿಮ್ಮ ತಮ್ಮನನ್ನು ಕರೆದುಕೊಂಡು ಹೋಗಿ ಅಂದೆ. ಇಲ್ಲಪ್ಪ, ಅವರು ನಿನ್ನನ್ನು ಕೇಳುತ್ತಿದ್ದಾರೆ ಅಂದ್ರು. ಅವನು ಅಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿ ಎಂದೆ. ನಂತರ ಅವರು ತಮ್ಮನನ್ನು ಕರೆದುಕೊಂಡು ಹೋದ್ರು. ನಂತರ ನನಗೆ ಬಂದ ಕೆಲಸವನ್ನು ಪುಟ್ಟಣ್ಣಗೆ ಕೊಡಿಸಿದ್ರು.


ಪುಟ್ಟಣ್ಣ ಚರಿತ್ರೆ ನಿರ್ಮಿಸಿದ. ಅವನ ಶಕ್ತಿ ಮತ್ತು ಪ್ರತಿಭೆಯನ್ನು ಅಳೆಯಲು ಸಾಧ್ಯವಿಲ್ಲ. ಅವನು ತುಂಬಾ ಒಳ್ಳೆಯ ವ್ಯಕ್ತಿ ಆಗುತ್ತಾನೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಅವನು ನನ್ನ ತರಹವೇ. ಆದರೆ, ನನಗೆ ಅವನಿಗೆ ಒಂದು ವ್ಯತ್ಯಾಸ ಇತ್ತು. ಅನೇಕ ಒಳ್ಳೆಯ ಸಿನಿಮಾಗಳನ್ನು ಮಾಡುವ ಮೂಲಕ ಹೆಸರು ಸಂಪಾದಿಸಿದ. ನಾನು ಕೂಡ ಒಳ್ಳೆಯ ಸಿನಿಮಾಗಳನ್ನು ಮಾಡಿ, ಹೆಸರು ಸಂಪಾದಿಸಿದೆ. ನಾವಿಬ್ಬರೂ ಸ್ನೇಹಿತರೇ. ಬೆಳಗಾದ್ರೆ ಸುಖನಿವಾಸ್‌ ಹೋಟೆಲ್‌ನಲ್ಲಿ ಇಡ್ಲಿ ತಿನ್ನಲು ಇಬ್ರೂ ಹೋಗುತ್ತಿದೆವು. ಅವರ ಮನೆಯಲ್ಲಿ ಹಲವು ಬಾರಿ ಊಟ ಮಾಡಿದ್ದೇನೆ. ಅವನು ಕಾಲೇಜು ದಿನಗಳಿಂದಲೂ ನನಗೆ ಗೊತ್ತಿತ್ತು. ಅವನು ಸೆಟ್‌ನಲ್ಲಿ ಎಲ್ಲರ ಮೇಲೆಯೂ ರೇಗುತ್ತಾನೆ ಎಂದು. ಆರ್ಟಿಸ್ಟ್‌ಗಳು ಸರಿಯಾಗಿ ಕೆಲಸ ಮಾಡದಿದ್ದರೆ ಬೈತಾನೆ ಎಂದು ನನಗೆ ಅವನ ಬಗ್ಗೆ ಅಪಶೃತಿ ಕೇಳಿಸುತ್ತಿತ್ತು.


ನಮ್ಮ ಸೆಟ್‌ನಲ್ಲಿ ಯಾರ ಮೇಲೂ ಕೋಪ ಮಾಡುವುದಿಲ್ಲ. ನಗು, ನಗುತ್ತ ಕೆಲಸ ತೆಗೆದುಕೊಳ್ಳುತ್ತಾರೆ. ಯಾರನ್ನು ಅಸಡ್ಡೆ ಮಾಡುವುದಿಲ್ಲ. ತಪ್ಪು ಮಾಡಿದ್ರೆ ತಿದ್ದುತ್ತಾರೆ, ಸ್ನೇಹ ಪರವಾಗಿ ಎಲ್ಲರೂ ಹೋಗುತ್ತೇವೆ ಎಂಬ ಹೆಸರಿತ್ತು. ಒಂದು ದಿನ ಹೀಗೆ ಮಾತಾಡುತ್ತಿದ್ದಾಗ, ಪುಟ್ಟು ನೀನು ದೊಡ್ಡ ತಪ್ಪು ಮಾಡುತ್ತಿದ್ದೀಯ ಎಂದೆ. ಏನು ತಪ್ಪು ಮಾಡುತ್ತಿದ್ದೀನಿ ಎಂದ. ನೀನು ಸೆಟ್‌ನಲ್ಲಿ ಸಿಕ್ಕಾಪಟ್ಟೆ ರೂಡ್‌ ಆಗಿ ವರ್ತಿಸುತ್ತೀಯಾ, ಅವರಿವರಿಗೆ ಬೈತೀಯ, ಚಿಕ್ಕ ವಿಷಯಕ್ಕೆ ಕೋಪ ಮಾಡಿಕೊಳ್ಳುತ್ತೀಯ ಎನ್ನುತ್ತಾರೆ. ಯಾಕೋ ಈ ತರಹ ಮಾಡ್ತೀಯ. ಏನೇ ಬಂದರೂ, ಸಮಾಧಾನವಾಗಿ ತೆಗೆದುಕೋ ಎಂದೆ. ಓಹೋ... ಬುದ್ಧಿವಾದ ಹೇಳುವುದು ಬಹಳ ಸುಲಭ ಎಂದ. ಸೆಟ್‌ನಲ್ಲಿ ಕೆಲಸ ಮಾಡುವಾಗ ಸರಿಯಾಗಿ ಕೆಲಸ ಆಗದೇ ಹೋದ್ರೆ ಕೋಪ ಬರದೇ ಇರುತ್ತದಾ? ನಿನ್ನಂಥ ಸಹನೆ ನನಗಿಲ್ಲ. ಕೋಪ ಬಂದೇ ಬರುತ್ತದೆ ನನಗೆ ಅಂದ. ಆಗ ನಾನು, ನೀನು ಹೆಸರು ಮಾಡಿದ್ದೀಯ, ನಾನು ಮಾಡಿದ್ದೇನೆ. ಆದ್ರೆ, ನನಗೂ, ನಿನಗೂ ದೊಡ್ಡ ವ್ಯತ್ಯಾಸ ಇದೆ ಎಂದೆ. ಏನದೂ, ನನಗೂ, ನಿನಗಿರುವ ದೊಡ್ಡ ವ್ಯತ್ಯಾಸ ಎಂದ. ಇಬ್ಬರಿಗೂ ಹೆಸರಿದೆ ಒಪ್ಪಿಕೊಳ್ಳುತ್ತೇನೆ. ಆದ್ರೆ, ನಾನು ಹೆಸರು ಮಾಡಿಕೊಳ್ಳುತ್ತಿರುವುದೇ ಬೇರೆ, ನೀನು ಹೆಸರು ಮಾಡುತ್ತಿರುವುದೇ ಬೇರೆ. ನೀನು ಹೆಸರು ಮಾಡುತ್ತಿರುವುದನ್ನು ತಲೆಗೆ ತೆಗೆದುಕೊಳ್ಳುತ್ತಿದ್ದೀಯ. ನಾನು ಹೆಸರು ಮಾಡುತ್ತಿರುವುದನ್ನು ಜೇಬಿಗೆ ತೆಗೆದುಕೊಂಡು, ದುಡ್ಡು ಮಾಡಿಕೊಳ್ಳುತ್ತಿದ್ದೇನೆ. ನೀನು ಹೆಸರನ್ನು ತಲೆಗೆ ತೆಗೆದುಕೊಂಡು ಅಹಂಕಾರ ಜಾಸ್ತಿ ಮಾಡಿಕೊಳ್ಳುತ್ತಿದ್ದೀಯ. ನನ್ನ ಎಲ್ಲ ಸಿನಿಮಾಗಳು ಯಶಸ್ಸು ಗಳಿಸಿದೆ. ನಿನ್ನ ನಾಲ್ಕೈದು ಸಿನಿಮಾ ನಷ್ಟ ಗಳಿಸಿದೆ. ಅದನ್ನು ಯೋಚನೆ ಮಾಡಬೇಕು ಪುಟ್ಟು ಎಂದೆ. ಸಿನಿಮಾ ನಿರ್ದೇಶಕನಿಗೆ ಇವೆಲ್ಲ ಇರಬೇಕಾದ ಗುಣಗಳು ಎಂದೆ. ವೇದಾಂತ ಹೇಳುವುದು ಬಹಳ ಸುಲಭ ಕಣೋ ಎಂದ. ನಾನು ಹೇಳುವುದು ಹೇಳಿದ್ದೇನೆ. ತೆಗೆದುಕೊಳ್ಳುವುದು ಬಿಡುವುದು ನಿನ್ನಿಷ್ಟ ಎಂದು ಅಲ್ಲಿಗೆ ಬಿಟ್ಟುಬಿಟ್ಟೆ. ಅವನು ಉತ್ತಮವಾದ ಸ್ಥಾನದಲ್ಲಿದ್ದ. ಅವನಿಗೆ ಬುದ್ಧಿ ಹೇಳುವ ಶಕ್ತಿ ನಮಗಿರಲಿಲ್ಲ.

ಚಂದವಳ್ಳಿ ತೋಟ ಸಿನಿಮಾದಲ್ಲಿನ ಕೋ–ಡೈರೆಕ್ಷನ್‌ಗೆ ನನಗೆ ರಾಷ್ಟ್ರಪತಿ ಪದಕ ಬಂದಿತ್ತು. ‘ಸಂಧ್ಯಾರಾಗ’ದ ನಿರ್ದೇಶನಕ್ಕೆ ರಾಷ್ಟ್ರಪತಿಗಳ ಪದಕ ಬಂತು. ಅದರಲ್ಲಿ ಒಳ್ಳೆಯ ಹಾಡು, ದೃಶ್ಯ ಇತ್ತು. ಭಾರತಿಗೆ ಒಳ್ಳೆಯ ನಟಿ ಪ್ರಶಸ್ತಿಯೂ ಬಂತು. ಈ ಸಿನಿಮಾದಲ್ಲಿ ಹೀರೊಯಿನ್ ಪಾತ್ರದಲ್ಲಿ ಮಾಡು ಎಂದು ಭಾರತಿಯನ್ನು ಕೇಳಿದಾಗ ನಾನು ಬರುವುದಿಲ್ಲ, ಅರ್ಧದಲ್ಲಿ ಬಂದು ಸತ್ತು ಹೋಗುವ ಪಾತ್ರವದು. ಚಿಕ್ಕ ರೋಲ್‌ ಮಾಡುವುದಿಲ್ಲ ಎಂದಿದ್ದಳು. ಆಗ ನಾನು ಮಾಡಲ್ಲ ಅಂಥ ಹೇಳಬೇಡಮ್ಮ ಆ ಚಿಕ್ಕ ರೋಲ್‌ ಎಷ್ಟು ಚೆನ್ನಾಗಿದೆ ಅಂದ್ರೆ ನಿನಗೆ ಅವಾರ್ಡ್‌ ಖಂಡಿತ ಸಿಗುತ್ತದೆ ಎಂದು ಪಿಕ್ಚರ್‌ ಶುರು ಮಾಡುವ ಮೊದಲು ಹೇಳಿದ್ದೆ. ಅದು ನಿಜವಾಯಿತು. ಅದು ಆಕೆಯ ಪ್ರತಿಭೆಗೆ ಸಿಕ್ಕ ಫಲ.


ಆಗಿನ ಹೀರೊಯಿನ್‌ಗಳೆಲ್ಲ ದೊರೆಯವರ ಕ್ಯಾಮೆರಾ ಬೇಕು ಅನ್ನುತ್ತಿದ್ರು. ಅದರಲ್ಲೂ ಪಂಡರೀಬಾಯಿ ಅವರಂತೂ ದೊರೆಯವರ ಕ್ಯಾಮೆರಾ ಬೇಕು ಎಂದು ಸೋದರಿ ಸಿನಿಮಾದಿಂದಲೂ ಗಲಾಟೆ ಮಾಡುತ್ತಿದ್ರು. ಸೋದರಿ, ಹರಿಭಕ್ತ, ಓಹಿಲೇಶ್ವರ ಎಲ್ಲ ಸಿನಿಮಾಗಳಲ್ಲೂ ದೊರೆಯವರ ಕ್ಯಾಮೆರಾದ ಕೈಚಳಕವಿದೆ. ಭಾರತಿಯವರನ್ನು ಎಷ್ಟು ಮುದ್ದಾಗಿ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ ಎಂಬುದನ್ನು ವರ್ಣಿಸಲು ಸಾಧ್ಯವಿಲ್ಲ.

ಚಂದವಳ್ಳಿಯ ತೋಟದಲ್ಲಿ ಜಯಂತಿ ಹೀರೊಯಿನ್. ಆಕೆಯನ್ನು ತೋರಿಸುವಾಗ ಅದೆಷ್ಟು ಚೆನ್ನಾಗಿ ಲೈಟಿಂಗ್‌ ಮಾಡುತ್ತಿದ್ರು. ಹೀರೊಯಿನ್‌ಗಳನ್ನು ಸುಂದರವಾಗಿ ಕಾಣುವಂತೆ ಲೈಟಿಂಗ್‌ ಮಾಡುವುದು ಅವರ ವಿಶೇಷತೆ. ದೊರೆಯವರು ಹೇಗೆ ಲೈಟಿಂಗ್ ಮಾಡುತ್ತಾರೆ ಎಂಬುದನ್ನು ನೋಡಲು ಅನೇಕ ಕನ್ನಡ ಕಲಾವಿದರು ಬರುತ್ತಿದ್ರು. ಅಷ್ಟು ಒಳ್ಳೆಯ ಕ್ಯಾಮೆರಾಮನ್‌ ಅವರು.


ರಾಜ್‌ಕುಮಾರ್‌ ಅವರ ಮೊದಲ ದ್ವಿಪಾತ್ರದ ಸಿನಿಮಾ ‘ರಾಜದುರ್ಗದ ರಹಸ್ಯ’. ನರಸಿಂಹಮೂರ್ತಿ ಅವರು ಇನ್ನೊಂದು ಸಿನಿಮಾ ಮಾಡಿಕೊಡುವಂತೆ ಕೇಳಿದ್ರು. ಮಲ್ಲೇಶ್ವರಂನಲ್ಲಿರುವ ಅವರ ಮನೆ ಮಾರಾಟಕ್ಕೆ ಬಂದು ಬಿಟ್ಟಿತ್ತು. ಸಿನಿಮಾ ಮಾಡಿಕೊಟ್ರೆ ನಾನು ನನ್ನ ಮನೆ ಉಳಿಸಿಕೊಳ್ಳುತ್ತೇನೆ ಎಂದ್ರು. ‘ರಾಜದುರ್ಗದ ರಹಸ್ಯ’ ಮಾಡಿಕೊಟ್ಟು ಅವರ ಮನೆ ಉಳಿಸಿಕೊಟ್ಟೆವು.

‘ಭಾಗ್ಯೋದಯ’ದಲ್ಲಿ ನನಗೆ ಅವರು ಬಾಸ್‌ ಆಗಿದ್ದವರು. ಅವರು ಬಂದು ಮನೆ ಉಳಿಸಿಕೊಳ್ಳಲು ಸಿನಿಮಾ ಮಾಡಿಕೊಡಿ ಎಂದು ಕೇಳುತ್ತಾರೆ ಎಂದಾದರೆ ನಮ್ಮ ಸಿನಿಮಾ ಪಯಣ ಎಲ್ಲಿಂದ ಎಲ್ಲಿಗೆ ಬಂದಿತ್ತು ಎಂಬುದನ್ನು ತಿಳಿಯಬಹುದು. ಸಿನಿಮಾ ರಂಗದಲ್ಲಿ ಬೆಳಗಾಗುವುದರೊಳಗೆ ಏನು ಬೇಕಾದ್ರು ಆಗಬಹುದು. ಒಬ್ಬ ಸಾಮಾನ್ಯ ಮನುಷ್ಯ ಹೀರೊ ಆಗಬಹುದು.


ರಾಜದುರ್ಗದ ರಹಸ್ಯ ಮುಗಿಸಿದ ಮೇಲೆ ಕಹಿ ಘಟನೆ ನಮ್ಮ ಜೀವನದಲ್ಲಿ ನಡೆಯಿತು. ಅದನ್ನು ಹೇಳಲು ನನಗೆ ಇಷ್ಟವಿಲ್ಲ. ರಾಜ್‌ಕುಮಾರ್‌ ಅವರ ಕಾಲ್‌ಶೀಟ್‌ ಪಡೆದು, ಅಷ್ಟು ದೊಡ್ಡ ಸಿನಿಮಾ ಮಾಡಿಕೊಟ್ಟರೂ, ನರಸಿಂಹಮೂರ್ತಿ ಅವರು ಚಿಕ್ಕ ಮಾತೊಂದನ್ನು ಆಡಿಬಿಟ್ರು. ಅದರಿಂದ ನನಗೂ ಮತ್ತು ದೊರೆಯವರಿಗೆ ಬಹಳ ಬೇಜಾರಾಗಿ ಹೋಯ್ತು. ಇನ್ನು ಮೇಲೆ ಯಾರೇ ಬಂದ್ರೂ, ಎಷ್ಟೇ ದೊಡ್ಡ ಮನುಷ್ಯರಾಗಿ, ಆತ್ಮೀಯರಾಗಿ, ದಾರಿ ತೋರಿಸಿದವರಾಗಿದ್ರೂ ಬಂದು ಕೇಳಿದಾಗ ಸಿನಿಮಾ ಮಾಡಬಾರದು. ನಮ್ಮ ದುಡ್ಡಲ್ಲಿ ನಾವೇ ಮಾಡಬೇಕು ಎಂದು ನಿರ್ಧಾರ ಮಾಡಿಬಿಟ್ಟೆವು.


ಮಂತ್ರಾಲಯ ಮಹಾತ್ಮೆ ನಂತರ ನಾವು ಸಿನಿಮಾ ಮಾಡಿರಲಿಲ್ಲ. 64 ರಿಂದ 68ನೇ ಇಸವಿ ಆಗಿತ್ತು. ಕೂತುಕೊಂಡು ತಿನ್ನುವವರಿಗೆ ಕುಡಿಕೆ ಹಣ ಸಾಲುವುದಿಲ್ಲ ಎನ್ನುವಂತಾಗಿತ್ತು ನಮ್ಮ ಪರಿಸ್ಥಿತಿ. ಆ ವೇಳೆ ಚಿಕ್ಕಪುಟ್ಟ ಆಸ್ತಿಗಳನ್ನು ಮಾಡಿಕೊಂಡಿದ್ದೆವು. ಇನ್ನೊಂದು ಪಿಕ್ಚರ್‌ ಪ್ರೊಡ್ಯೂಸ್ ಮಾಡಬೇಕಾದ್ರೆ ನಮಗೆ ಹಣ ಬೇಕಿತ್ತು. ಏನು ಮಾಡಬೇಕು ಎಂದು ಯೋಚಿಸುತ್ತಿದೆವು. ನನ್ನ ಬಳಿ ಹಣ ಕೇಳಲು ದೊರೆಯವರಿಗೆ ಇಷ್ಟವಿರಲಿಲ್ಲ. ನಂತರ ಅವರ ಭಾವ ವೇಣುಗೋಪಾಲ್‌ ಅವರನ್ನು ಕೇಳಿದ್ರು. ದೊರೆಯವರ ತಂಗಿ ಗಂಡ ಅವರು. ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿಸಿಕೊಂಡಿದ್ರು. 25 ಸಾವಿರ ಕೊಡ್ರಿ ಪಿಕ್ಚರ್‌ ಶುರು ಮಾಡ್ತೇವೆ ಅಂದ್ರು. ಅವರು ಕೊಡ್ತೇನೆ ಅಂದ್ರು. 15 ಸಾವಿರ ಮೊದಲು ಕೊಟ್ಟು, ನೀವು ಶುರು ಮಾಡಿಕೊಳ್ಳಿ ಉಳಿದ 10 ಸಾವಿರ ನಂತರ ಕೊಡ್ತೇನೆ ಅಂದ್ರು. ದೊರೆ ಅವರು ಅದನ್ನು ಒಪ್ಪಲಿಲ್ಲ. ದುಡ್ಡು ಕೊಟ್ಟ ಮೇಲೆಯೇ ಸಿನಿಮಾ ಶುರು ಮಾಡುವುದು ಎಂದ್ರು. ಒಂದು ತಿಂಗಳ ನಂತರ ಅವರು 10 ಸಾವಿರ ತಂದು ಕೊಟ್ರು.


25 ಸಾವಿರದಲ್ಲಿ 1968ರಲ್ಲಿ ಪಿಕ್ಚರ್‌ ಶುರು ಮಾಡಿದೆವು ಅದುವೇ ‘ಜೇಡರ ಬಲೆ’. ಸಿನಿಮಾಕ್ಕಾಗಿ ಉದಯ್‌ಕುಮಾರ್‌ ಮೇಕಪ್‌ ಹಾಕಿಕೊಳ್ಳುತ್ತಿದ್ದ. ಅವನ ಮೇಕಪ್‌ ಹೇಗಾಗಿದೆ ಎಂದು ನೋಡಲು ಹೋದೆ. ಆಗ ಅವನು ಏನೋ ನನಗೆ ಹೀರೊ ಪಾತ್ರ ಮಾಡುವ ಯೋಗ್ಯತೆ ಇಲ್ವಾ ಎಂದ. ಯಾರೋ ಇಲ್ಲ ಎಂದವರು ಎಂದೆ? ಮತ್ತೆ ಅವನಿಗೆ ಕೊಟ್ಟಿದ್ದೀಯಾ, ನಾನು ಮಾಡಲು ಆಗುತ್ತಿರಲಿಲ್ವಾ ಆ ಪಾತ್ರವನ್ನು. ನಿನಗೆ ಬೇಕಾದವನು ಎಂದು ಅವನ ಕಾಲ ಕೆಳಗೆ ತೂರುತ್ತೀಯಲ್ಲಾ ಎಂದ. ನನಗೆ ಎಲ್ಲಿಲ್ಲದ ಕೋಪ ಬಂತು. ಏ... ಕುರ್ಚಿಯಿಂದ ಇಳಿಯೋ ನೀನು, ಇವನಿಗೆ ಮೇಕಪ್‌ ಹಾಕಬೇಡಿ. ಪ್ಯಾಕ್‌ಅಪ್‌ ಮಾಡಿ ಎಂದೆ. ಯಾಕೋ ಕೋಪ ಮಾಡ್ಕೊತ್ತಿದ್ದೀಯ ಎಂದ. ಅದೆಲ್ಲ ಬೇಡ, ಇಳಿಯೋ, ಸ್ಟುಡಿಯೊದಿಂದ ಆಚೆ ಹೋಗು ಕಾರು ಕೊಡ್ತೇನೆ ಎಂದೆ. ನಾನು ಡೈರೆಕ್ಟರ್‌, ಯಾರಿಗೆ ಯಾವ್ಯಾವ ಪಾತ್ರ ಚೆನ್ನಾಗಿರುತ್ತದೆ ನೋಡಿಕೊಂಡು ಕೊಡ್ತೇನೆ. ಅವನಿಗ್ಯಾಕೆ ಕೊಟ್ಟೆ, ಇವರಿಗ್ಯಾಕೆ ಕೊಟ್ಟೆ ಎನ್ನುವ ಅಧಿಕಾರ ನಿನಗ್ಯಾರು ಕೊಟ್ಟವರು? ನಿನಗೆ ಇಷ್ಟ ಇದ್ರೆ ಮಾಡು. ಕಷ್ಟ ಆದ್ರೆ ಹೋಗ್ತಾ ಇರು. ನೀನು ಇರದಿದ್ರೆ ಮತ್ತೊಬ್ಬ ಮಾಡ್ತಾನೆ ಎಂದೆ. ರಾಜ್‌ಕುಮಾರ್‌ ಬಗ್ಗೆ ಕೀಳಾಗಿ ಮಾತನಾಡಿದ್ದನ್ನು ನನಗೆ ತಡೆಯಲು ಆಗಲಿಲ್ಲ. ಬೇಡಪ್ಪ, ಬೇಡಪ್ಪ.... ನಾನು ಮಾಡ್ತೇನೆ ಎಂದ. ಹಂಗೆ ಬಾಯಿ ಮುಚ್ಚಿಕೊಂಡು ಮಾಡುವುದಾದರೆ ಮಾಡು. ಇಲ್ಲಂದ್ರೆ ನಡಿತ್ತಿರು ಎಂದೆ. ಇಲ್ಲಪ್ಪ ನೀನು ಹೇಳಿದ ಹಾಗೆ ಮಾಡ್ತೇನೆ ಎಂದು ಕೈಮುಗಿದು, ಕೂತುಕೊಂಡು ಬಣ್ಣ ಹಚ್ಚಿಸಿಕೊಂಡ.


ಜೇಡರ ಬಲೆ ಸಿನಿಮಾವನ್ನು ಮಾಡುವುದೆಂದು ನಿರ್ಧಾರ ಆದ ಮೇಲೆ ರಾಜ್‌ಕುಮಾರ್‌ ಅವರು ತಮ್ಮನ ಜೊತೆಗೆ ಬಾಂಡ್‌ ಸಿನಿಮಾವನ್ನು ನಾಲ್ಕು ಬಾರಿ ನೋಡಿದ್ರು. ನಾವು ಬ್ಯುಸಿ ಇರುತ್ತೇವೆಂದು ನಮಗೆ ಹೇಳಿಯೇ ಇರಲಿಲ್ಲ. ಕರಾಟೆ ತರಹ ಫೈಟಿಂಗ್‌ ಇದೆ ಸಿನಿಮಾದಲ್ಲಿ ನನಗೆ ಕರಾಟೆ ಬರೋಲ್ಲ ಭಗವಾನ್‌ ಎಂದ್ರು. ಕರಾಟೆ ಮಣಿ ಎಂದು ಮದ್ರಾಸ್‌ನಲ್ಲಿದ್ರು. ಅವರ ಬಳಿ ಹೋಗಿ ರಾಜ್‌ಕುಮಾರ್‌ ಅವರಿಗೆ ಕಲಿಸುವಂತೆ ಮನವಿ ಮಾಡಿದೆವು. ಅವರು ಸಂಜೆ ಏಳು ಗಂಟೆವರೆಗೆ ನನಗೆ ಕ್ಲಾಸ್‌ ಇರುತ್ತೆ. 7 ಗಂಟೆ ನಂತರ ಕರೆದುಕೊಂಡು ಬನ್ನಿ ಅವರೊಬ್ಬರಿಗೆ ಹೇಳಿಕೊಡ್ತೇನೆ ಅಂದ್ರು. 1 ಸಾವಿರ ಫೀಸ್‌ ಫಿಕ್ಸ್‌ ಮಾಡಿದ್ರು. ಒಂದು ವಾರ ಏಳು ಗಂಟೆಗೆ ಕರೆದುಕೊಂಡು ಹೋಗಿ 8 ಗಂಟೆಗೆ ಕರೆದುಕೊಂಡು ಬರುತ್ತಿದ್ದೆ.

ಮುಂದುವರಿಯುವುದು...


ಸಂದರ್ಶನ: ಕೆ.ಎಸ್‌. ಪರಮೇಶ್ವರ

32 views