ಅಣ್ಣಾವ್ರು ನನ್ನ ಬಟ್ಟೆ ನೋಡಿ ಎಲ್ಲಿ ಹೊಲಿಸ್ಕೊಂಡಿದ್ದು ಅಂತ ಕೇಳಿದ್ರು

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 12ಅಣ್ಣಾವ್ರ ಜೊತೆಗಿನ ಮಾತಿನ ನಂತರ ಅವರು ಶಾಟ್ ಗೆ ಹೋದರು. ಆಮೇಲೆ ಬೇರೆಯವರೆಲ್ಲ ನನ್ನನ್ನೇ ನೋಡುತ್ತಿದ್ರು. ಅಣ್ಣವ್ರ ಜೊತೆಗೆ ಕೂಳಿತುಕೊಳ್ಳುವಷ್ಟು ದೊಡ್ಡವನಾದೀಯಾ ನೀನು ಎಂಬ ಭಾವನೆ ಅವರಲ್ಲಿತ್ತು ಎಂದು ನನಗೆ ಅನಿಸಿತು. ನಂತರ, ಇನ್‌ಸ್ಪೆಕ್ಟರ್‌ ಯಾರ್ರಿ ಬನ್ನಿ ಎಂದ್ರು. ಒಳಗೆ ಹೋದೆ. ಆಗ ರಾಜ್‌ಕುಮಾರ್‌ ಅವರು, ನೀವು ಪಾತ್ರ ಮಾಡಲು ಬಂದಿದ್ದ. ನಾನು ಯಾರೋ ಇನ್‌ಸ್ಪೆಕ್ಟರ್‌ ಬಂದಿದ್ದಾರೆ ಎಂದುಕೊಂಡಿದ್ದೆ ಎಂದ್ರು. ನಂತರ ಎಷ್ಟು ಚೆನ್ನಾಗಿದೆ ನಿಮ್ಮ ಬಟ್ಟೆ. ಬಹಳ ಚೆನ್ನಾಗಿ ಹೊಲಿಸಿಕೊಂಡಿದ್ದೀರಿ. ಯಾರು ಹೊಲಿದಿದ್ದು ಎಂದು ಕೇಳಿದ್ರು. ಯೂನಿಟ್‌ದಲ್ಲ ಸರ್‌. ಬೇರೆಡೆ ಹೊಲಿಸಿದ್ದು ಅಂದೆ. ಅದಕ್ಕವರು ಅದೇ ಅಂದುಕೊಂಡೆ. ನಮ್ಮವರು ಇಷ್ಟು ಚೆನ್ನಾಗಿ ಹೊಲಿಯುವುದಿಲ್ಲ. ಬಹಳ ಚೆನ್ನಾಗಿದೆ. ಹಿಂದಿಯಲ್ಲಿ ಇಫ್ತೇಖರ್‌ ಎಂದಿದ್ರು. ಅವರು ಸಿನಿಮಾಗಳಿಗೆ ಅವರದೇ ಆದ ಬಟ್ಟೆ ಇಟ್ಟುಕೊಳ್ಳುತ್ತಿದ್ರು. ಎಂಥ ಶ್ರದ್ಧೆ ನೋಡಿ ಎಂದ್ರು. ನನ್ನದು ಎರಡನೇ ಸಿನಿಮಾ ಸರ್‌ ಅಂದೆ. ಎರಡನೇ ಸಿನಿಮಾ ಆದ್ರೂ ಎಷ್ಟು ಚೆನ್ನಾಗಿ ಡೈಲಾಗ್‌ ಹೇಳುತ್ತಾರೆ ನೋಡಿ ಇವರು. ಅಬ್ಬಬ್ಬಾ ಎಂದ್ರು.


ನನ್ನ ಶಾಟ್‌ ಬಂದಾಗ ಓಡಿ ಬಂದು ಫೈಯರ್‌ ಮಾಡಬೇಕಿತ್ತು. ಆದರೆ ಆ ಬಂದೂಕಿನಲ್ಲಿ ಫೈಯರ್‌ ಆಗುತ್ತಲೇ ಇರಲಿಲ್ಲ. ಅಷ್ಟರಲ್ಲಿ ಭಗವಾನ್‌ ನನಗೆ ಬೈಯಲು ಪ್ರಾರಂಭಿಸಿದ್ರು. ಬಂದೂಕು ಸರಿ ಇರಲಿಲ್ಲ ನಾನೇನು ಮಾಡಲು ಆಗುತ್ತೆ. ಅಲ್ಲಿಯೇ ಇದ್ದ ಪುನೀತ್‌ ಬಂದೂಕು ಕೊಡಿ ಅಂಕಲ್‌, ನಾನು ಡಿಶುಂ ಅನಿಸಬೇಕು ಕೊಡಿ ಅನ್ನುತ್ತಿದ್ದ. ನಾನು ಕೊಡಲ್ಲ ಎಂದ್ರೆ, ಬಿಡುತ್ತಲೇ ಇರಲಿಲ್ಲ. ನಾನು ಬೈಯುವ ಹಾಗೂ ಇಲ್ಲ ರಾಜ್‌ಕುಮಾರ್‌ ಮಗ ಬೇರೆ ಏನು ಮಾಡ್ಲಿ ಎಂದು ಯೋಚಿಸಿ, ಆಮೇಲೆ ಕೊಡುತ್ತೇನೆ ಎಂದೆ. ಆದರೆ, ಅವರು ಒಪ್ಪಲಿಲ್ಲ. ನಂತರ ಯಾರೋ ಸಮಧಾನ ಮಾಡಿ ಕರೆದುಕೊಂಡು ಹೋದರು. ಸುದರ್ಶನ್‌ ಅವರನ್ನು ಅರೆಸ್ಟ್‌ ಮಾಡೋ ದೃಶ್ಯ ಅದು. ಶಾಟ್‌ ಮುಗಿದ ಮೇಲೆ ರಾಜ್‌ಕುಮಾರ್‌ ಅವರು ಬಹಳ ಶ್ರದ್ಧೆ ಇದೆ ನಿಮಗೆ. ಬಹಳ ಮುಂದುವರಿಯುತ್ತೀರಿ ಎಂದ್ರು. ನಾನು ಮಿಮಿಕ್ರಿ ಮಾಡುತ್ತೇನೆ ಎಂಬುದು ಆ ಸಂದರ್ಭದಲ್ಲಿ ಅವರಿಗೆ ಗೊತ್ತಿರಲಿಲ್ಲ.ಮುಂದುವರಿಯುವುದು...

13 views