“ಅಣ್ಣಾವ್ರು ಮಾಡಿದ್ದು ಕಂಡು ಇಡೀ ಸೆಟ್‌ ದಂಗಾಗಿತ್ತು”

ದೊರೆ-ಭಗವಾನ್‌ ಲೈಫ್‌ ಸ್ಟೋರಿ - ಭಾಗ 6


(ಎಸ್.ಕೆ ಭಗವಾನ್‌ನಿರೂಪಣೆಯಲ್ಲಿ)


ರಣಧೀರ ಕಂಠೀರವದಲ್ಲಿ ತಮಿಳುನಾಳು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ತಾಯಿ ಸಂಧ್ಯಾ ಅವರು ನಟಿಸಿರುವುದು ಒಂದು ವಿಶೇಷವಾದರೆ, ಇನ್ನೊಂದು ಆ ಸಿನಿಮಾದಲ್ಲಿ ಸಾಹಸ ದೃಶ್ಯವೊಂದಿದೆ, ಕಂಠೀರವನ ಶಯನ ಗೃಹದಲ್ಲಿ ನೂರಾರು ಸೈನಿಕರು ಬಂದು ದಾಳಿ ನಡೆಸುತ್ತಾರೆ. ಆಗೊಂದು ಫೈಟ್‌ ದೃಶ್ಯವಿದೆ. ಅಲ್ಲೊಂದು ದೀಪದ ಹಿತ್ತಾಳೆ ಕಂಬವಿರುತ್ತದೆ. ಅದನ್ನೇ ತೆಗೆದು ಅದರಿಂದಲೇ ಹೊಡೆದು ಸಾಹಿಸುವ ದೃಶ್ಯವದು. ಆ ದೃಶ್ಯಕ್ಕೆ ಹಿತ್ತಾಳೆ ಕಂಬವೇ ಇದ್ದಿದ್ರೆ ಚೆನ್ನಾಗಿರುತ್ತಿತ್ತು. ಮೌಲ್ಡ್‌ನಲ್ಲಿ ಮಾಡಿದ್ರೆ ಚೆನ್ನಾಗಿರುವುದಿಲ್ಲ ಎಂದು ಶಿವಯ್ಯ ಹೇಳ್ದ. ಆದರೆ ಅದನ್ನು ರಾಜ್‌ಕುಮಾರ್‌ ಅವರು ಎತ್ತುತ್ತಾರೋ ಇಲ್ವೋ ಗೊತ್ತಿಲ್ಲ ಎಂದ.
ರಾಜ್‌ಕುಮಾರ್‌ ಅವರಿಗೆ ಹೇಳಿದಾಗ, ಮೌಲ್ಡ್‌ ಎಲ್ಲ ಬೇಡ. ಮೌಲ್ಡ್‌ನಲ್ಲಿ ಮಾಡಿದ್ರೆ ನೋಡಲು ಚೆನ್ನಾಗಿ ಕಾಣಿಸುವುದಿಲ್ಲ. ಹಿತ್ತಾಳೆ ಕಂಬವನ್ನೆ ತರಿಸಿ ಅಂದ್ರು. ಮದ್ರಾಸ್‌ನಲ್ಲೆಲ್ಲ ಹುಡುಕಿದ್ರೂ ಹಿತ್ತಾಳೆ ಕಂಬ ಸಿಗಲಿಲ್ಲ. ದೇವಸ್ಥಾನದವರು ಶೂಟಿಂಗ್‌ಗೆ ಅದನ್ನು ಕೊಡುವುದಿಲ್ಲ. ಸಿನಿಮಾಗಳಿಗೆ ಬೇಕಾದ ಪರಿಕರಗಳನ್ನೆಲ್ಲ ಕೊಡುತ್ತಿದ್ದ ‘ಸಿನಿ ಕ್ರಾಫ್ಟ್ಸ್’ ಅಂಗಡಿಯಲ್ಲೂ ಹಿತ್ತಾಳೆ ಕಂಬ ಇರಲಿಲ್ಲ. ಕೇರಳದಲ್ಲಿ ಒಬ್ಬರ ಮನೆಯಲ್ಲಿ ಹಿತ್ತಾಳೆ ಕಂಬವಿದೆ ಎಂಬುದು ಗೊತ್ತಾಯ್ತು. ಅವರ ಮನೆಗೆ ಹೋಗಿ ಕೇಳಿದೆ. ನೀವು ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ, ವಾಪಸ್‌ ತಂದು ಕೊಟ್ರೆ ನನಗೇನು ಕೊಡಲು ಅಭ್ಯಂತರವಿಲ್ಲ ಅಂದ್ರು. ಅವರ ಮನೆಯಿಂದ ಗೂಡ್ಸ್‌ ಟೆಂಪೊಗೆ ಅದನ್ನು ಹಾಕಲು ಮೂರು ಮಂದಿ ಬೇಕಾಯ್ತು. ಆರ್ಟ್‌ ಡೈರೆಕ್ಟರ್‌ ಸಹಾಯಕರು ಅದನ್ನು ತೆಗೆದುಕೊಂಡು ಬಂದು ಇಟ್ಟರು. ಅದನ್ನು ಎತ್ತಿ ಫೈಟ್ ಮಾಡಬೇಕಿತ್ತು. ರಾಜ್‌ಕುಮಾರ್‌ ಅವರು ಎರಡು ಮೂರು ಸಲ ಸ್ವಲ್ಪ ಕಷ್ಟದಲ್ಲಿಯೇ ಎತ್ತಿದ್ರು. ಆದ್ರೆ, ನೀವು ಟೇಕ್‌ ತೆಗೀರಿ ನಾನು ಎತ್ತುತ್ತೇನೆ ಅಂದ್ರು. ಎರಡು ಕೈಯಿಂದ ಎತ್ತಿ ಫೈಟ್‌ ಮಾಡಿಯೇ ಬಿಟ್ರು. ನಾಲ್ಕು ಜನ ಎತ್ತಬೇಕಾದ ಕಂಬವನ್ನು ಒಬ್ಬರೇ ಎತ್ತುತ್ತಾರೆ ಎಂದ್ರೆ ಅವರ ಮನಸ್ಥೈರ್ಯ ಎಷ್ಟಿರಬೇಕು, ಅವರ ತೋಳ್ಬಲ ಎಷ್ಟಿರಬೇಕು ಎಂಬುದನ್ನು ಯೋಚಿಸಿ. ಆ ದೃಶ್ಯ ಮುಗಿದ ಮೇಲೆ ಫೈಟರ್ಸ್‌, ಶಿವಯ್ಯ ಎಲ್ಲರೂ ಅವರಿಗೆ ನಮಸ್ಕಾರ ಮಾಡಿ, ಚಪ್ಪಾಳೆ ಹೊಡೆದ್ರು. ಆ ದೃಶ್ಯ ಇವತ್ತಿಗೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ಆ ಫೈಟ್‌ ದೃಶ್ಯ ಅಪರೂಪ ಮತ್ತು ಅಮೋಘವಾದದ್ದು. ವರ್ಣಿಸಲು ಅಸಾಧ್ಯವಾದ ದೃಶ್ಯ ಎನ್ನಲು ನನಗೆ ಕೊಂಚವೂ ಹಿಂಜರಿಕೆಯಿಲ್ಲ.

ಈ ಚಿತ್ರದಿಂದಾಗಿ ಸಂಘ ಬಲದಲ್ಲಿ ಎಷ್ಟು ಶಕ್ತಿಯಿದೆ ಎಂಬುದು ಗೊತ್ತಾಯಿತು. ಚಿತ್ರೀಕರಣದ ವೇಳೆ ಒಂದು ಕುಟುಂಬದ ತರಹ ಇದ್ವಿ. ಆಗಿನ ಕಾಲದಲ್ಲಿ ಹಾಗೆಯೇ ಇತ್ತು. ಒಬ್ಬರ ಕಷ್ಟಕ್ಕೆ ಇನ್ನೊಬ್ರು ನೆರವಾಗುತ್ತಿದೆವು. ಒತ್ತಾಸೆಯಾಗಿ ಇರುತ್ತಿದೆವು. ಬಹಳ ಒಳ್ಳೆಯ ಕಾಲ ಅದು.


ನಾವೆಲ್ಲ ಸೇರಿ ಯಾಕೆ ಸಿಂಡಿಕೇಟ್‌ ತರಹ ಮಾಡಬಾರದು ಎಂಬ ಯೋಚನೆ ಜಿ.ವಿ.ಅಯ್ಯರ್‌ಗೆ ಬಂತು. ಸಿಂಗ್‌ ಠಾಕೂರ್‌ ಅವರು ಹೆಸರಿಗೆ ಡೈರೆಕ್ಟರ್‌ ಆಗಿರಲಿ. ಇಷ್ಟು ದಿವಸ ಕೆಲಸ ಮಾಡಿದ್ದಾರೆ ಅವರು ಇದ್ದುಕೊಂಡು ಹೋಗಲಿ. ಹೇಗೋ ವಯಸ್ಸಾಗಿದೆ ಅವರಿಗೆ. ಭಗವಾನ್‌ ಅವರ ಜಾಗದಲ್ಲಿ ಕೆಲಸ ಮಾಡುತ್ತಾನೆ. ಭಗವಾನ್‌ ಕೋ–ಡೈರೆಕ್ಟರ್‌ ಆಗಿರಲಿ. ನಾನು ರೈಟರ್ ಆಗಿರುತ್ತೇನೆ. ರಾಜ್‌ಕುಮಾರ್ ಅವರು ಹೀರೊ, ದೊರೆ ಕ್ಯಾಮೆರಾಮೆನ್, ವೆಂಕಟೇಶ್‌ ಮ್ಯೂಸಿಕ್‌ ಡೈರೆಕ್ಟರ್‌ ಆಗಿರಲಿ, ಇನ್ನು ಮಿಕ್ಕವರು ಅಸಿಸ್ಟೆಂಟ್‌ ಆಗಿರಲಿ ಎಂದು ಯೋಚಿಸಿ ಗ್ರೂಪ್‌ ಮಾಡಿದರು. ನಮ್ಮ ಸ್ಟೋರಿನಾ ಓಕೆ ಮಾಡಿದ್ರೆ ಪಿಕ್ಚರ್‌ ಮಾಡಿಕೊಡಲು 3–3.50 ಲಕ್ಷಕ್ಕೆ ಕಾಂಟ್ರಾಕ್ಟ್‌ ತೆಗೆದುಕೊಳ್ಳುತ್ತಿದೆವು. ಎಲ್ಲರೂ ಅವರವರ ಯೋಗ್ಯತೆ ತಕ್ಕಂತೆ ದುಡ್ಡನ್ನು ಹಂಚಿಕೊಳ್ಳುವುದು ಎಂದಾಯಿತು.

ಸಿಂಡಿಕೇಟ್ ಪ್ರಾರಂಭಿಸಿದ ಮೇಲೆ ಮಾಡಿದ ಮೊದಲ ಸಿನಿಮಾ ‘ಕಣ್ತೆರೆದು ನೋಡು’. ಕಂಠೀರವ ಸಿನಿಮಾವನ್ನು ವಿಕ್ರಂ ಸ್ಟುಡಿಯೊದಲ್ಲಿ ಚಿತ್ರೀಕರಣ ಮಾಡಿದೆವು. ಬಿ.ಎಸ್‌.ರಂಗರಾವ್‌ ಅದರ ಮಾಲೀಕ. ಎಲ್ಲ ಸೇರಿ ಪಿಕ್ಚರ್‌ ಮಾಡಿ ಕೊಡಿ ಎಂದು ಕೇಳಿದ್ರು ಆಗ ದಶವತಾರ ಮಾಡಿಕೊಟ್ಟೆವು. ಅದು ಸೂಪರ್‌, ಡೂಪರ್‌ ಯಶಸ್ಸು ಕಂಡಿತು. ಮುಂದೆ ‘ಕಣ್ತೆರೆದು ನೋಡು’ ಮಾಡಿಕೊಡುವಂತೆ ಕೇಳಿದ್ರು. ಅದೂ ಯಶಸ್ಸು ಕಂಡಿತು. ರಾಜ್‌ಕುಮಾರ್‌, ಲೀಲಾವತಿ, ಬಾಲಕೃಷ್ಣ ಅವರೆಲ್ಲ ಸಿನಿಮಾದಲ್ಲಿದ್ರು. ಅದ್ಭುತವಾದ ಕಥೆ ಅದು. ಸಾಂಸ್ಥಿಕವಾದ ಮನೋಭಾವ ನಮ್ಮಲ್ಲಿ ಬೆಳೆದುಕೊಂಡು ಬಂತು. ಸಿನಿಮಾದಿಂದ ಸಿನಿಮಾಕ್ಕೆ ನನ್ನ, ರಾಜ್‌ಕುಮಾರ್‌, ದೊರೆ ಬಾಂಧವ್ಯ ತ್ರಿಮೂರ್ತಿಗಳ ಬಂಧದಂತೆ ಬಲವಾಗುತ್ತ ಹೋಯಿತು. ಕಣ್ತೆರದು ನೋಡು, ‘ಕೈವಾರ ಮಹಾತ್ಮೆ’ ಸಿನಿಮಾ ಮಾಡಿದೆವು. ಠಾಕೂರ್‌ ಸಿಂಗ್ ಅವರ ಸಂಬಂಧಿ ನಾರಾಯಣ್‌ ಸಿಂಗ್‌ ಅವರು ಕೈವಾರ ಮಹಾತ್ಮೆ ಸಿನಿಮಾ ಮಾಡುವಂತೆ ಕೇಳಿಕೊಂಡ್ರು. ಎಲ್ಲಾ ಸಿನಿಮಾಗಳಲ್ಲಿಯೂ ರಾಜ್‌ಕುಮಾರ್‌ ಹೀರೊ. ಅವರಿಲ್ಲದೇ ಸಿನಿಮಾ ಮಾಡುವುದಿಲ್ಲವೆಂದು ಆಗಲೇ ನಿರ್ಧಾರ ಮಾಡಿದ್ವಿ. ಎ.ಸಿ. ನರಸಿಂಹಮೂರ್ತಿ ಅವರು ಪಿಕ್ಚರ್‌ ಮಾಡಿಕೊಂಡುವಂತೆ ಕೇಳಿದ್ರು. ಸಿಂಗ್ ಠಾಕೂರ್‌ ಹೆಂಡತಿ ಕನ್ನಡದವರು. ಅವರು ಕೃಷ್ಣಮೂರ್ತಿ ಪುರಾಣಿಕ ಅವರ ಧರ್ಮದೇವತೆ ಕಾದಂಬರಿ ಓದಿದ್ರಂತೆ. ಅವರು ಠಾಕೂರ್‌ ಬಳಿ ಈ ಕಥೆ ಆಧಾರಿತ ಸಿನಿಮಾ ಮಾಡಿದ್ರೆ ಚೆನ್ನಾಗಿ ಓಡುತ್ತದೆ ಎಂದು ನನಗೆ ಅನಿಸುತ್ತದೆ ಎಂದಿದ್ರಂತೆ. ನರಸಿಂಹಮೂರ್ತಿ ಅವರ ಬಳಿ ಈ ಕಥೆಯ ಸಿನಿಮಾ ಮಾಡೋಣ್ವ ಎಂದು ಕೇಳಿದ್ವಿ. ಆಗ ಅವರು ಕಾದಂಬರಿಗಳೆಂದರೆ ನನಗೆ ತುಂಬ ಇಷ್ಟ. ದಯವಿಟ್ಟು ಮಾಡಿ ಎಂದ್ರು.

ಕನ್ನಡ ಸಿನಿಮಾ ಇತಿಹಾಸದಲ್ಲಿಯೇ ಕಾದಂಬರಿ ಆಧಾರಿತ ಮೊದಲ ಸಿನಿಮಾ ‘ಕರುಣೆಯೆ ಕುಟುಂಬದ ಕಣ್ಣು’. ಅದು ಧರ್ಮದೇವತೆ ಕಾದಂಬರಿ ಆಧಾರಿತವಾದುದು. ಆಗ ತೆಲುಗಿನಲ್ಲಿ ಧರ್ಮದೇವತೆ ಎಂಬ ಸಿನಿಮಾ ಹೆಚ್ಚು ಜನಪ್ರಿಯವಾಗಿತ್ತು. ಹಾಗಾಗಿ, ನಾವು ಹೆಸರು ಬದಲಾಯಿದೆವು. ಅದು ಬಹಳ ಚೆನ್ನಾಗಿ ಓಡ್ತು. ಆಗಿನ ಕಾಲದಲ್ಲಿ ಕನ್ನಡ ಸಿನಿಮಾ ಚೆನ್ನಾಗಿಯೇ ಓಡುತ್ತಿತ್ತು. ಎಂ.ಆರ್‌.ವಿಠಲ್‌, ವೈ.ಆರ್‌.ಸ್ವಾಮಿ, ಬಿ.ಆರ್.ಪಂತುಲು, ಕೆ.ಆರ್. ಸೀತಾರಾಮ್ ಶಾಸ್ತ್ರಿ ಸೇರಿದಂತೆ ಹಲವು ಒಳ್ಳೊಳ್ಳೆ ನಿರ್ದೇಶಕರಿದ್ರು. ದಿಗ್ಗಜರೇ ಇದ್ದ ಕಾಲವದು. ಕಳಪೆ ಸಿನಿಮಾ ಬರಲು ಸಾಧ್ಯವೇ ಇರಲಿಲ್ಲ. ಕನ್ನಡದಲ್ಲಿ ಚಿತ್ರಗಳು ವಿರಳವಾಗಿದ್ದವು.


ಈ ಸಿನಿಮಾ ಚೆನ್ನಾಗಿ ಹೋದ ಕಾರಣ ಇನ್ನೊಂದು ಸಿನಿಮಾ ಮಾಡ್ರಿ ಎಂದ್ರು. ನಾನು ಕುಲವಧು ಕಾದಂಬರಿ ಓದಿದ್ದೆ. ಚೆನ್ನಾಗಿದೆ ಎಂದೆ. ಅದನ್ನೇ ಮಾಡೋಣ ಎಂದೆ. ಸಂಭಾಷಣೆ ನಾನೇ ಬರೆದಿದ್ದೆ. ಆದ್ರೆ, ಕೃಷ್ಣಮೂರ್ತಿ ಪುರಾಣಿಕ್‌ ಕಾದಂಬರಿಯ ಆಯ್ದ ಹಲವು ಭಾಗಗಳನ್ನು ಆರಿಸಿಕೊಂಡಿದ್ದರಿಂದ ಅವರ ಹೆಸರನ್ನೇ ಹಾಕಿದೆ. ಯೋಗ್ಯತೆಗೆ ತಕ್ಕ ಪುರಸ್ಕಾರವನ್ನು ಕೊಡಲೇಬೇಕು. ಇಲ್ಲವಾದರೆ ಕರ್ತವ್ಯ ಲೋಪವಾಗುತ್ತದೆ. ಇದರಲ್ಲಿ ಶ್ರೇಷ್ಠ ಕವಿಗಳ ಕವನಗಳನ್ನು ಏಕೆ ಬಳಸಬಾರದು ಎಂಬ ಯೋಚನೆ ನನಗೆ ಬಂತು. ‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ’. ‘ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು’, ‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ’ ಇದನ್ನು ಬಳಸಿಕೊಂಡೆವು. ನಾಲ್ಕನೇ ಹಾಡಿಗೆ ಸಂದರ್ಭಕ್ಕೆ ತಕ್ಕ ಕವನ ಸಿಕ್ಕಿಲ್ಲ. ಆಗ ಪ್ರಭಾಕರ ಶಾಸ್ತ್ರಿಯವರು ‘ಒಲವಿನ ಪ್ರಿಯಲತೆ’ ಬರೆದರು. ಅದರ ಸಾಹಿತ್ಯ ಅದ್ಭುತವಾಗಿದ್ದು, ಜಿ.ಕೆ.ವೆಂಕಟೇಶ್‌ ಅಷ್ಟೇ ಸುಂದರವಾದ ಟ್ಯೂನ್‌ ಮಾಡಿದ್ದಾನೆ.


ನಮ್ಮ ಸಿನಿಮಾಗಳ ಹಾಡುಗಳು ಅದ್ಭುತವಾಗಿರಲು ಜಿ.ಕೆ.ವೆಂಕಟೇಶ್‌ ಪ್ರಮುಖ ಕಾರಣವಾದರೆ, ಅದರ ಜೊತೆಗೆ ನಮ್ಮ ತಂಡದವರಲ್ಲಿದ್ದ ಸಂಗೀತ ಜ್ಞಾನ ಮತ್ತೊಂದು ಕಾರಣ. ಎಲ್ಲರೂ ನಾಟಕದ ಹಿನ್ನೆಲೆಯಿಂದ ಬಂದವರಾದ್ದರಿಂದ ಎಲ್ಲರಿಗೂ ಸಂಗೀತದ ಅರಿವಿತ್ತು.


ನಮ್ಮ ಯಶಸ್ಸನ್ನು ಕಂಡು, ಮದ್ರಾಸ್‌ನಲ್ಲಿದ್ದ ಪಾಲ್‌& ಎಂಬ ಚಿಕ್ಕ ಪ್ರೊಡಕ್ಷನ್‌ ಕಂಪನಿ ಅವರು ನಮಗೊಂದು ಒಳ್ಳೆಯ ಕಥೆ ಮಾಡಿಕೊಡಿ ಎಂದು ಕೇಳಿದ್ರು. ಆಗ ತರಾಸು ಅವರ ಚಂದವಳ್ಳಿಯ ತೋಟ ಕಾದಂಬರಿಯನ್ನು ಸಿನಿಮಾವಾಗಿಸುವ ಸಿದ್ಧತೆ ನಡೆಯಿತು. ಆ ಸಿನಿಮಾದಲ್ಲಿ ರಾಜ್‌ಕುಮಾರ್‌ ಅವರು ತಂದೆಯ ಪಾತ್ರ ಮಾಡಿದ್ರು. ಹೀರೊ ಪಾತ್ರವನ್ನೇ ಮಾಡಬೇಕು ಎಂಬ ಮನೋಭಾವ ಆಗಿನ ಕಾಲದ ನಟರಲ್ಲಿ ಇರಲಿಲ್ಲ. ಪ್ರತಿಭೆ ಪ್ರಕಾಶಕ್ಕೆ ಬರಲು ಅವಕಾಶ ದೊರಕಬೇಕೆಂಬ ಧ್ಯೇಯ ಮಾತ್ರವೇ ಅವರಲ್ಲಿತ್ತು. ಉದಯ್‌ಕುಮಾರ್ ಹೀರೊ ಆಗಿದ್ದ ಕಾಲದಲ್ಲಿ ವಿಲನ್ ಪಾತ್ರಗಳನ್ನು ಮಾಡಿದ್ದಾನೆ.


ನರಸಿಂಹಮೂರ್ತಿಯವರು ಮತ್ತೆ ಬಂದು, ನಮಗೊಂದು ಪಿಕ್ಚರ್‌ ಮಾಡಿ ಎಂದ್ರು. ಚೆಂದವಳ್ಳಿಯತೋಟ ಪಿಕ್ಚರ್‌ ಮಾಡುವ ಸಂದರ್ಭದಲ್ಲಿ ಅವರು ಬೇರೆ ಎರಡು ಚಿತ್ರ ಮಾಡಿ ಕೈ ಸುಟ್ಟುಕೊಂಡಿದ್ದರು. ಹಾಗಾಗಿ, ಪುನಃ ನಮ್ಮ ಬಳಿ ಬಂದು ಸಿನಿಮಾ ಮಾಡಿಕೊಡುವಂತೆ ಕೇಳಿದ್ರು. ‘ಕವಲೆರಡು ಕುಲ ಒಂದು’ ಸಿನಿಮಾ ಮಾಡಿದ್ವಿ. ಅದು ಚೆನ್ನಾಗಿ ಲಾಭ ಗಳಿಸಿತು. ರಾಜ್‌ಕುಮಾರ್‌ ಕಾಲ್‌ಶೀಟ್‌ ಇರಲಿಲ್ಲ. ಹಾಗಾಗಿ ಉದಯ್‌ಕುಮಾರ್‌, ರಾಜೇಶ್‌ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದ್ವಿ. ಈ ಸಿನಿಮಾ ಯಶಸ್ಸು ಕಂಡ ಮೇಲೆ ನರಸಿಂಹಮೂರ್ತಿ ಅವರಿಗೆ ಧೈರ್ಯ ಬಂತು. ‘ಕಲಾವತಿ’ ಎಂಬ ಕಥೆ ತೆಗೆದುಕೊಂಡು ಬಂದ್ರು. ಜಿ.ವಿ.ಅಯ್ಯರ್‌ ಸೇರಿದಂತೆ ಹಲವರು ಓಕೆ ಅಂದ್ರು ಕಥೆಗೆ. ಆದ್ರೆ, ಈ ಕಥೆ ಚೆನ್ನಾಗಿಲ್ಲ ಸಿನಿಮಾ ಮಾಡಿದ್ರೆ ಓಡಲ್ಲ ಎಂದು ನಾನು, ದೊರೆ ಹಟ ಹಿಡಿದ್ವಿ. ಇಲ್ಲಿಯವರೆಗೂ ಮಾಡಿರುವ ಸಿನಿಮಾಗಳಿಗೆಲ್ಲ ಯಶಸ್ಸು ಸಿಕ್ಕಿದೆ. ಇದು ಮಾಡುವುದರಿಂದ ನಷ್ಟ ಆಗಬಹುದು ಬೇಡ ಎಂದು ಅಯ್ಯರ್‌ ಅವರಿಗೆ ಹೇಳಿದ್ವಿ. ನಿಮಗೆ ಬೇಡ ಅಂದ್ರೆ ನನಗೂ ಬೇಡ ಬಿಟ್ಟು ಬಿಡೋಣ ಅಂದ್ರು. ಆದ್ರೆ ಸಿಂಗ್‌ ಠಾಕೂರ್‌ ಅವರು ಗಲಾಟೆ ಮಾಡಿದ್ರು. ನೀವು ಮಾಡಲ್ಲ ಅಂದ್ರೆ ಬೇರೆಯವರ ಹತ್ತಿರ ಅವರು ಮಾಡಿಸಿಕೊಳ್ತಾರೆ ನನ್ನ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಬೀಳುತ್ತೆ. ಹೇಗಾದ್ರು ಮಾಡಿ ಒಪ್ಪಿಕೊಳ್ಳಿ ಅಂದ್ರು.


ಅವರು ಹಾಗೆಲ್ಲ ಅಂದ ಮೇಲೆ ದೊರೆ ಅವರು ಇದೊಂದು ಪಿಕ್ಚರ್ ಮಾಡಿ ಕೊಡೋಣ ಅಂದ್ರು. ನಾನು ದೊರೆಯವರ ಮಾತನ್ನು ಮೀರುತ್ತಿರಲಿಲ್ಲ. ಸರಿ ಎಂದು ಒಪ್ಪಿಕೊಂಡೆ. ನಾವು ಹೇಳಿದ ಹಾಗೆ ಅದು ಡಬ್ಬಾ ಆಗಿ ಹೋಯ್ತು. ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಲತಾ ಅದರಲ್ಲಿ ಹಿರೋಯಿನ್‌.

ಸೆಟ್‌ನಲ್ಲಿ ಕಷ್ಟಪಡೋದು ನಾನು, ದೊರೆ ಮಾತ್ರ. ನಮ್ಮಿಬ್ಬರ ಶ್ರಮದ ಮೇಲೆ ಇವರು ದಬ್ಬಾಳಿಕೆ ಮಾಡುತ್ತಿದ್ದಾರೆ. ಇದನ್ನೆಲ್ಲ ಬಿಟ್ಟು, ನಾವಿಬ್ಬರೇ ಯಾಕೆ ಚಿತ್ರ ತಯಾರಿಸಬಾರದು ಎಂಬ ಯೋಚನೆ ದೊರೆಯವರಿಗೆ ಬಂತು.


ಮುಂದುವರಿಯುವುದು...


ಸಂದರ್ಶನ: ಕೆ.ಎಸ್‌. ಪರಮೇಶ್ವರ್‌

59 views