ಅಣ್ಣಾವ್ರ ಶಬರಿಮಲೆ ಟೀಂ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 111


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ನಿಯಮ ನಿಷ್ಠೆಯಿಂದ ವ್ರತ ಆಚರಿಸಿ, ಶಬರಿಮಲೆಗೆ ಹೋಗುತ್ತಿದ್ವಿ. ಪ್ರತಿವರ್ಷ ನಂಬಿಯಾರ್‌ ತಂಡದಲ್ಲಿಯೇ ಹೋಗುತ್ತಿದೆವು. 16 ವರ್ಷಗಳಲ್ಲಿ ನಮ್ಮ ಜೊತೆಗೆ ಹೋಗುವವರ ಪ್ರಮಾಣ ಹೆಚ್ಚಾಗುತ್ತ ಬಂತು. ಇದಕ್ಕೆ ನೇತೃತ್ವ ವಹಿಸುತ್ತಿದುದ್ದು ‘ರಾಶಿ ಬ್ರದರ್ಸ್‌’ನ ಶಿವರಾಂ ಮತ್ತು ಅವರ ಅಣ್ಣ ರಾಮನಾಥನ್‌.


ಸಿನಿಮಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಬಾರಿ ಶಬರಿಮಲೆಗೆ ಹೋದವರಲ್ಲಿ ಶಿವರಾಂ ಅವರೇ ಮೊದಲಿಗರು. ಅವರು ವರ್ಷಕ್ಕೆ ಎರಡರಿಂದ ಮೂರು ಸಲ ಶಬರಿಮಲೆಗೆ ಹೋಗುತ್ತಾರೆ. ಶಿವರಾಂ ಅವರು ಗುರು ಸ್ವಾಮಿಗಳು. ಅವರಿಗೆ ಅಯ್ಯಪ್ಪನ ಪೂಜೆ ಮಾಡುವ ಅಧಿಕಾರ ಇದೆ. ಹೋಗುತ್ತಿದ್ದವರ ಖರ್ಚನೆಲ್ಲ ನಂಬಿಯಾರ್‌ ವಹಿಸಿಕೊಳ್ಳುತ್ತಿದ್ದರು. ನಾವು ಇಷ್ಟೊಂದು ಜನ ಹೋಗುವುದರಿಂದ ನಂಬಿಯಾರ್‌ ಅವರಿಗೆ ಹೊರೆ ಆಗುತ್ತದೆ ಎಂದು ರಾಜ್‌ಕುಮಾರ್‌ ಅವರಿಗೆ ಅನಿಸಿತು. ಹಾಗಾಗಿ, ನಾವೇ ಒಂದು ತಂಡ ಮಾಡಿಕೊಂಡು ಹೋಗೋಣ ಎಂದು ನಿರ್ಧರಿಸಿದರು.


ಶಿವಣ್ಣ ಎಲ್ಲ ದೊಡ್ಡವರಾಗಿದ್ದರು. ಒಂದು ಬಸ್‌ ಇನ್ನೊಂದು ವ್ಯಾನ್ ಮಾಡಿಕೊಂಡು ಹೋಗುತ್ತಿದೆವು. 30–40 ಜನ ಹೋಗುತ್ತಿದ್ವಿ. ರಾಜ್‌ಕುಮಾರ್‌ ಅವರ ಮನೆಯಲ್ಲಿ ರಾತ್ರಿ ಪೂಜೆ ಇರುತ್ತಿತ್ತು. ಎಲ್ಲರಿಗೂ ಊಟ, ತಿಂಡಿ ಇರುತ್ತಿತ್ತು. ಆ 45 ದಿವಸ ಅವರ ಮನೆಯಲ್ಲಿ ಮಾಂಸ ಮಾಡುತ್ತಿರಲಿಲ್ಲ. ನಿಯಮಗಳನ್ನು ಶಿಸ್ತುಬದ್ಧವಾಗಿ ಆಚರಿಸುವುದರಲ್ಲಿ ರಾಜ್‌ಕುಮಾರ್‌ ಎತ್ತಿದ ಕೈ. ರಾಜ್‌ಕುಮಾರ್‌ ಅವರು ಹೋದ ಮೇಲೆ ಈಗ ಶಿವಣ್ಣನ ತಂಡ ಶಬರಿಮಲೆಗೆ ಹೋಗುತ್ತಿದೆ. ಅವರ ಪಕ್ಕಾ ಅಭಿಮಾನಿಗಳು ಸೇರಿಕೊಂಡಿರುವುದರಿಂದ ಎರಡು ಬಸ್‌ ಮಾಡಿಕೊಂಡು ಹೋಗುತ್ತಾರೆ. ಪುನೀತ್‌ ಕೂಡ ಹೋಗುತ್ತಾನೆ. ರಾಜ್‌ಕುಮಾರ್‌ ಅವರಿಗೆ ರಾಘವೇಂದ್ರ ಸ್ವಾಮಿಗಳ ಮೇಲೆ ಎಷ್ಟು ಭಕ್ತಿ ಇತ್ತೋ, ಅಯ್ಯಪ್ಪ ಸ್ವಾಮಿಯ ಮೇಲೂ ಅಷ್ಟೇ ಇತ್ತು. ದೈವ ಭಕ್ತಿಯೇ ಅವರಿಗೆ ನೈತಿಕ ಬಲ. ಅವರು ಆ ಸ್ಥಾನಕ್ಕೆ ಏರಲು ಅವರಲ್ಲಿದ್ದ ದೈವ ಭಕ್ತಿಯೇ ಕಾರಣ.ಮುಂದುವರೆಯುವುದು...

12 views