
ಅಣ್ಣಾವ್ರ ಶಬರಿಮಲೆ ಯಾತ್ರೆಗಳು...
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 110
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)

ಡಿಸೆಂಬರ್ ತಿಂಗಳಲ್ಲಿ ಅವರು 45 ದಿವಸ ಮಾಲೆ ಹಾಕಿಕೊಳ್ಳುತ್ತಿದ್ದರು. ಶಬರಿಮಲೆಗೆ ಹೋಗಲು ವ್ರತದಲ್ಲಿ ಇರುತ್ತಿದ್ದರು. ಈಗಿನವರು ಶಬರಿಮಲೆಗೆ ಹೋಗಲು ಹಿಂದಿನ ದಿನವೂ ಮಾಲೆ ಹಾಕಿಕೊಳ್ಳುತ್ತಾರೆ. ಆಗ ಹಾಗಿರಲಿಲ್ಲ. ನಾನು ಅವರ ಜೊತೆ ಹದಿನಾರು ಸಲ ಅಲ್ಲಿಗೆ ಹೋಗಿದ್ದೇನೆ. ಆಗಿನ ಕಾಲದಲ್ಲಿ ಪುನೀತ್ಗೂ ಮಾಲೆ ಹಾಕಿಸುತ್ತಿದ್ದರು. ಅವನಿಗೂ ಸ್ವಾಮಿ ಎಂದೇ ಕರೆಯುತ್ತಿದ್ದರು. ಮಲೆಗೆ ಹೋಗಲು ನಮ್ಮದೇ ಒಂದು ತಂಡ ಇತ್ತು.
ತಮಿಳು ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡುವ ನಂಬಿಯಾರ್ ಅದಕ್ಕೆ ನಾಯಕ. ಯಾಕಂದ್ರೆ ಶಬರಿಮಲೆಯಲ್ಲಿ ಅವರಿಗೆ ಗೌರವವಿತ್ತು. ಅಲ್ಲಿ ಅವರದೇ ಕಟ್ಟಡವಿತ್ತು. ಮೂರು ದಿವಸ ಅಲ್ಲಿ ಉಳಿಯಬಹುದಿತ್ತು. ನಡೆದುಕೊಂಡೇ ಹೋಗಬೇಕಿತ್ತು. ಹಾಗಾಗಿ 45 ದಿವಸ ಚಪ್ಪಲಿ ಹಾಕಿಕೊಳ್ಳದೇ ಮದ್ರಾಸ್ ಬಿಸಿಲಿನಲ್ಲಿ ಟಾರ್ ರಸ್ತೆಯಲ್ಲಿ ರಾಜ್ಕುಮಾರ್ ನಡೆಯುತ್ತಿದ್ದರು. ಬೆಟ್ಟ ಹತ್ತುವುದು ಅಭ್ಯಾಸವಾಗಬೇಕು ಎಂದು ಬೀಚ್ ಸಮೀಪ ಸ್ಲೋಪ್ ಹತ್ತೋದು ಇಳಿಯೋದು ಮಾಡುತ್ತಿದ್ರು. ನಿಯಮ, ನಿಷ್ಠೆಯನ್ನು ಚಾಚುತಪ್ಪದೇ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು.
ಮುಂದುವರಿಯುವುದು...
ಸಂದರ್ಶನ: ಕೆ.ಎಸ್. ಪರಮೇಶ್ವರ