
“ಅಣ್ಣಾವ್ರು ಹೊಡೆಯಲು ಹೋಗಿದ್ದು ಯಾರಿಗೆ”
ದೊರೈ-ಭಗವಾನ್ ಲೈಫ್ ಸ್ಟೋರಿ - ಭಾಗ 5
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)
1958ರಲ್ಲಿ ಕನ್ನಡ ಚಿತ್ರರಂಗ ಸ್ಥಗಿತವಾಗಿ ಹೋಗಿತ್ತು. ಯಾರಿಗೂ ಕೆಲಸ ಇರಲಿಲ್ಲ. ಆಗ, ನಾಟಕ ಮಾಡೋಣ ಎಂಬ ನಿರ್ಧಾರವಾಯ್ತು. ರಾಜ್ಕುಮಾರ್ ಅವರು ಬೇಡರ ಕಣ್ಣಪ್ಪ ಸಿನಿಮಾದಲ್ಲಿ ನಟಿಸಿದ್ದರಿಂದ ಅವರನ್ನು ಹಾಕಿಕೊಂಡು ‘ಬೇಡರ ಕಣ್ಣಪ್ಪ’ ಮಾಡೋದು, ಜತೆಗೆ ‘ಎಚ್ಚಮ ನಾಯಕ’ ಮತ್ತು ಹಾಸ್ಯ ಭರಿತವಾದ ‘ಸಾಹುಕಾರ’ ನಾಟಕ ಮಾಡುವುದೆಂದು ನಿರ್ಧಾರವಾಯ್ತು. ನಾಟಕ ಪ್ರಾಕ್ಟೀಸ್ ಶುರುವಾಯ್ತು.
ನಾಟಕಗಳ ತವರೂರು ಮೈಸೂರು ಆದ್ದರಿಂದ ಅಲ್ಲಿಂದಲೇ ಪ್ರಾರಂಭಿಸೋಣ ಎಂದು ಯೋಚಿಸಿ, ಮೈಸೂರು ಟೌನ್ ಹಾಲ್ನಲ್ಲಿ ನಾಟಕ ಮಾಡಲು ತಯಾರಿ ನಡೆಯಿತು. ಆ ನಾಟಕ ಕಂಪನಿಗೆ ನಾನು ಮ್ಯಾನೇಜರ್. ಟೌನ್ಹಾಲ್ನಲ್ಲಿ ಪರದೆ ಇತ್ತು. ಪರದೆ, ವೇದಿಕೆ ಇರುವಲ್ಲಿಯೇ ನಾವು ನಾಟಕ ಮಾಡುತ್ತಿದೆವು. ನಾವು ತೆಗೆದುಕೊಂಡು ಹೋಗುತ್ತಿರಲಿಲ್ಲ. ಮೊದಲ ದಿನವೇ 57 ರೂಪಾಯಿ ಕಲೆಕ್ಷನ್ ಆಯ್ತು. ಮಳೆ ಬರುತ್ತಿತ್ತು. ಮರುದಿನವು 90 ರೂಪಾಯಿ, ಮೂರನೇ ದಿನ 100 ರೂಪಾಯಿ ಕಲೆಕ್ಷನ್ ಆಯ್ತು. ಆಗಲೂ ಮಳೆ ಹನಿ ಬರುತ್ತಿತ್ತು. ಅಷ್ಟು ಹಣ ಸಾಕಾಗುತ್ತಿರಲಿಲ್ಲ. ನಮ್ಮ ಖರ್ಚು ಕಳೆದು ಲಾಭ ಬರಬೇಕೆಂದರೆ ಕನಿಷ್ಠ 300 ರೂಪಾಯಿ ಕಲೆಕ್ಷನ್ ಆಗಬೇಕಿತ್ತು. ಬೋಣಿಯೇ ಆಗುತ್ತಿಲ್ವಲ್ಲ ಎಂಬ ಯೋಚನೆಯಾಯ್ತು ಎಲ್ಲರಿಗೂ. ಎಲ್ಲರೂ, ತಮ್ಮಲ್ಲಿರುವ ದುಡ್ಡನ್ನು ಹಾಕಿ ನಾಟಕ ಶುರುಮಾಡಿದ್ದು.
ಸರಿ, ಮಡಿಕೇರಿಗೆ ಹೋಗೊಣ. ಅಲ್ಲೂ ಟೌನ್ಹಾಲ್ ಇದೆ, ಪರದೆ ಇದೆ. ಅಲ್ಲಿ ನಾಟಕ ಮಾಡೋಣ ಎಂದು ಜಿ.ವಿ.ಅಯ್ಯರ್ ಹೇಳಿದ್ರು. ಅಲ್ಲಿ ಹೋದ್ರೆ ಅಲ್ಲೂ ಮಳೆ. ಅಲ್ಲಿಯ ಮಳೆ ಬಗ್ಗೆ ಹೇಳಬೇಕಾ... ಮೂರು ದಿನಗಳಲ್ಲಿ ನೂರು ರೂಪಾಯಿ ಮೇಲೆ ಕಲೆಕ್ಷನ್ ಹೋಗಲಿಲ್ಲ.
ನಂತರ, ಮಂಗಳೂರಿಗೆ ಹೋದೆವು. ಅಲ್ಲಿ ಕಲಾಮಂದಿರ, ಪರದೆ ಇತ್ತು. ಅಲ್ಲಿಯೂ ನಾಟಕ ಮೇಲೆಳಲಿಲ್ಲ. ಕೈಯಿಂದಲೇ ದುಡ್ಡು ಹೋಯ್ತು. ಅಲ್ಲಿ ಡಿಸೋಜ ಎಂಬುವನ ಹೋಟೆಲ್ನಲ್ಲಿ ಉಳಿದುಕೊಂಡಿದ್ದೆವು. 430 ರೂಪಾಯಿ ಬಿಲ್ ಆಗಿತ್ತು. ಅವನು ಎಲ್ಲ ಕೋಣೆಗೂ ಬೀಗ ಜಡಿದು, 430 ಬಿಲ್ ಕೊಡುವವರೆಗೂ ನಿಮ್ಮನು ಬಿಡುವುದಿಲ್ಲ ಎಂದು ಪಟ್ಟುಹಿಡಿದ. 430 ಕೊಟ್ಟು ಸಾಮಾನು ತೆಗೆದುಕೊಂಡು ಹೋಗಿ ಎಂದ. ಏನು ಮಾಡೋದು ಎಲ್ಲಿಂದ ತರುವುದು 430 ಎಂದು ಜಿ.ವಿ.ಅಯ್ಯರ್ ತಲೆ ಕೆಡಿಸಿಕೊಂಡು ಕೂತಿದ್ರು. ಆಗ ಯಾರೋ ಒಬ್ರು, ಬಿಳಿ ಜುಬ್ಬ, ಬಿಳಿ ಕಚ್ಚೆ, ಪಂಚೆ, ತಲೆಗೆ ಗಾಂಧಿ ಟೋಪಿ ಹಾಕಿಕೊಂಡು, ಅಯ್ಯರ್ ಎಲ್ಲಿದ್ದಾರೆ ಎಂದು ಹುಡುಕಿಕೊಂಡು ಹೋಟೆಲ್ಗೆ ಬಂದ್ರು. ಅಯ್ಯರ್ ಅವರು ನಾನೇ ಎಂದ್ರು. ನೀವು ನಾಟಕ ಆಡುತ್ತಿದ್ದೀರಂತೆ, ನಮ್ಮ ಊರಿಗೆ ಬರಬೇಕು ಬಂದು ನಾಟಕ ಆಡಬೇಕು ಸ್ವಾಮಿ. ಬೆಳಗಾವಿಯಿಂದ ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇವೆ. ರಾಜ್ಕುಮಾರ್ ಅವರು ನಾಟಕಗಳಲ್ಲಿ ನಟಿಸುತ್ತಿದ್ದಾರಂತೆ, ಅವರನ್ನು ನೋಡಲು ಜನ ಅಪೇಕ್ಷೆ ಪಡುತ್ತಿದ್ದಾರೆ ಎಂದ್ರು.
ಹೂಂ ಸರಿ, ನಾಟಕಕ್ಕೆ ಎಷ್ಟು ದುಡ್ಡು ಕೊಡ್ತೀರಾ ಎಂದ್ರು. ಜಿ.ವಿ.ಅಯ್ಯರ್ ಅವರಂಥ ವ್ಯವಹಾರಿಕ ಮನುಷ್ಯರನ್ನೇ ನಾನು ಕಂಡಿಲ್ಲ. ಅಷ್ಟು ಒಳ್ಳೆಯ ವ್ಯವಹಾರ ಜಾಣ್ಮೆ ಅವರದು. ಸ್ವಾಮಿ, ಒಂದು ನಾಟಕಕ್ಕೆ 1 ಸಾವಿರ ಕೊಡ್ತೇವೆ ಅಂದ್ರು. ಅಯ್ಯೋ ಹೋಗ್ರಿ, ಸಾವಿರ ರೂಪಾಯಿಗೆ ಬಂದು ನಾವು ನಾಟಕ ಮಾಡಬೇಕಾ ಅಂದ್ರು. ಇನ್ನೆಷ್ಟು ಕೊಡಬೇಕು ಸ್ವಾಮಿ ಎಂದ್ರು. 2 ಸಾವಿರ ಕೊಡುತ್ತಿರೇನ್ರಿ ಅಂದ್ರು. ಅಷ್ಟೆಲ್ಲಾ ಆಗೋಲ್ಲ ಸ್ವಾಮಿ ಎಂದ್ರು ಅವರು. ಅದಕ್ಕೆ ಎಷ್ಟು ಕೊಡ್ತೀರಾ ಹೇಳಿ. ನಮಗೂ ಬೇಡ, ನಿಮಗೂ ಬೇಡ, 1,500 ಕೊಡ್ತೀರಾ ಎಂದ್ರು. ಹೂಂ ಕೊಡ್ತೇವೆ ಅಂದ್ರು. ಎಷ್ಟು ನಾಟಕ ಬೇಕು ಎಂದ್ರು. 10 ನಾಟಕ ಬೇಕು ಸ್ವಾಮಿ ಎಂದ ಆತ. ಆಗ ಜಿ.ವಿ.ಅಯ್ಯರ್, ಸರಿ, ಬೆಳಗಾವಿಗೆ ಬರ್ತೀವಿ. ಯಾವತ್ತಿಂದ ಬರಬೇಕು ಅಂದ್ರು. ನೀವು ಯಾವತ್ತು ಬರುತ್ತೀರೋ ಅವತ್ತಿನಿಂದ ಶುರುಮಾಡೋಣ. ವೇದಿಕೆ, ಪರದೆ ಎಲ್ಲ ಇದೆ ಅಂದ್ರು. ಅಡ್ವಾನ್ಸ್ ಎಷ್ಟು ತಂದಿದ್ದೀರಾ ಅಂದ್ರು. 3 ಸಾವಿರ ತಂದಿದ್ದೇವೆ ಅಂದ್ರು ಅವರು. ಆಗ ಅಯ್ಯರ್, ಕೊಡಿ ಅದನ್ನು ಉಳಿದ ಹಣವನ್ನು ಅಲ್ಲಿಗೆ ಬಂದ ಮೇಲೆ ಕೊಡ್ತೀರಾ ಎಂದ್ರು. ಅದೆಲ್ಲ ನಾವು ಕೊಡ್ತೇವೆ ಎಂದ್ರು. ಯಾವತ್ತಿನಿಂದ ನಾವು ನಾಟಕ ಮಾಡುವುದೆಂದು ನಿಮಗೆ ಫೋನ್ ಮಾಡ್ತೇನೆ ಅಂಥ ಹೇಳಿದ್ರು. ಆಗೆಲ್ಲ ಪೋಸ್ಟ್ ಆಫೀಸ್ಗೆ ಹೋಗಿ ಫೋನ್ ಮಾಡಬೇಕಿತ್ತು. ಅವನ ಫೋನ್ ನಂಬರ್ ಇತ್ತು. ಅವನು ಆಯ್ತು ಎಂದು ಹೋದ.
ಅವನು ಹೋದ ಮೇಲೆ, ಭಗವಾನ್, ಹೇಗೋ ಅಲ್ಲಿಗೆ ಹೋಗಿ ಮಾಡೋದು ಎಂದ್ರು. ನಾನು ಬಸ್ ಸ್ಟ್ಯಾಂಡ್ಗೆ ಹೋದೆ. ಯಾವ ಬಸ್ಗೆ ಕೇಳಿದ್ರೂ ಬರುವುದಿಲ್ಲ ಅಂದ್ರು. ಕೊನೆಗೆ ಅಲ್ಲಿ ಒಬ್ಬ ಟ್ರಾವೆಲ್ ಅಂಗಡಿ ಇಟ್ಟುಕೊಂಡಿದ್ದ. ಅವನನ್ನು ಹೋಗಿ, ಇಲ್ಲಿಂದ ಬೆಳಗಾವಿಗೆ ಹೋಗಬೇಕು ಹೇಗೆ ಹೋಗುವುದು ಎಂದು ಕೇಳಿದೆ. ಒಂದು ಕೆಲಸ ಮಾಡಿ, ಇವತ್ತು ರಾತ್ರಿ ಮುಂಬೈಯಿಂದ ಕೊಚ್ಚಿಗೆ ಹಡಗೊಂದು ಹೋಗುತ್ತದೆ. ಅದು ಇಲ್ಲಿ ರಾತ್ರಿ 7 ಗಂಟೆಗೆ ಬಂದು ನಿಲ್ಲುತ್ತದೆ. ಅದರಲ್ಲಿ ಟಿಕೆಟ್ ಎಲ್ಲ ಬುಕ್ ಮಾಡ್ತೇನೆ. ಬೆಳಗಿನ ಜಾವ ಕಾರವಾರಕ್ಕೆ ಹೋಗುತ್ತದೆ. ಅಲ್ಲಿಂದ ಬೆಳಗಾವಿಗೆ ಹೋಗುವುದು ನಿಮಗೆ ಸುಲಭ ಅಂದ. ಅಲ್ಲಿಂದ ಬಸ್ ಸಿಕ್ಕೇ ಸಿಗುತ್ತದೆ ಎಂಬುದು ಏನು ಗ್ಯಾರಂಟಿ ಎಂದೆ. ಅಲ್ಲಿಂದ ಸಿಗುತ್ತದೆ ಎಂಬ ಐಡಿಯಾ ಇದೆ. ಆದ್ರೆ, ಗ್ಯಾರಂಟಿ ಹೇಳಲಾರೆ. ನೀವು ಪ್ರಯತ್ನಿಸಬೇಕು. ಇದೊಂದೇ ನಿಮಗಿರುವ ಮಾರ್ಗ ಅಂದ.
ಅಯ್ಯರ್ ಅವರ ಬಳಿ ಬಂದು ಏನು ಮಾಡೋದು ಎಂದು ಕೇಳಿದೆ. ಟಿಕೆಟ್ ತೆಗೆದುಕೊಂಡು ಬಿಡೋಣ ಎಂದ್ರು. ತಕ್ಷಣ ಹೋಗಿ 30 ಟಿಕೆಟ್ ತೆಗೆದುಕೊಂಡು ಬಂದೆ. ಎಲ್ಲರನ್ನು ಮಂಗಳೂರಿನ ಬಂದರಿಗೆ ಕರೆದುಕೊಂಡು ಹೋದೆ. ಹಡಗು ಬಂತು. ಅದೇ ಮೊದಲ ಬಾರಿಗೆ ಎಲ್ರೂ ಹಡಗಿನಲ್ಲಿ ಪ್ರಯಾಣಿಸಿದ್ದು. ಅವತ್ತು ಬೆಳದಿಂಗಳು ಬೇರೆ. ರಾಜ್ಕುಮಾರ್ ಅವರು ಇದೊಂದು ಅದ್ಭುತ ಅನುಭವ. ಯಾರ ಐಡಿಯಾ ಎಂದ್ರು. ನನ್ನದು ಎಂದೆ. ವೆರಿ ಗುಡ್ ಐಡಿಯಾ ಎಂದು ಮುಂದುಗಡೆ ಹೋಗಿ ಮಲಗಿ ಬೆಳದಿಂಗಳನ್ನು ಎಂಜಾಯ್ ಮಾಡಿದ್ರು. ಪ್ರಶಾಂತವಾದ ಸಮುದ್ರ, ಅದರಲ್ಲಿ ತೇಲಿಕೊಂಡು ಹೋಗುತ್ತಿದ್ದ ಹಡಗು, ಮೇಲೆ ಚಂದ್ರನ ಬೆಳಕು... ಅವರು ಪ್ರಕೃತಿ ಸೌಂದರ್ಯವನ್ನು ಎಷ್ಟು ಹೊಗಳಿದ್ರೂ ಎಂದ್ರೆ ಪದಗಳೇ ಸಾಲದು. ಮೂರು ಜಾಗದಲ್ಲಿ ಆದ ನಾಟಕಗಳ ನೋವನ್ನೆಲ್ಲ ಮರೆತರು.
ಕಾರವಾರಕ್ಕೆ ಹೋದೆವು. ಹಡಗಿನಲ್ಲಿ ಇಳಿದ ತಕ್ಷಣ ಛತ್ರಕ್ಕೆ ಹೋದೆವು. ಶಿವರಾಂ ಎಂದಿದ್ರು ಅವರು ಕ್ಯಾಷಿಯರ್. ವರದಪ್ಪ ಮೇಕಪ್ ಮತ್ತು ಕಾಸ್ಟ್ಯೂಮ್ ಇನ್ಚಾರ್ಜ್ ಆಗಿದ್ರು. ಬಸ್ ಸ್ಟ್ಯಾಂಡ್ ಹೋದೆ. ನನಗೆ ಬೆಳಗಾವಿಗೆ ಹೋಗಬೇಕು ಏನು ಮಾಡುವುದು ಎಂದು ಏಜೆಂಟರನ್ನು ಕೇಳಿದೆ. ಅವರು ಮಾಲೀಕರನ್ನೆಲ್ಲ ವಿಚಾರಿಸಿದ್ರು. ಎಲ್ಲ ಬಸ್ ಕೊಡೋದಿಲ್ಲ ಅಂದ್ರು. ಕೊನೆಗೆ ಒಬ್ರು ಒಪ್ಪಿಕೊಂಡ್ರು. ಒಟ್ಟು 3 ಸಾವಿರ ಕೊಟ್ರೆ ಬಸ್ ಕೊಡ್ತೇವೆ ಅಂದ್ರು. ಅಯ್ಯರ್ ಅವರು ನಾಟಕ ಮಾಡಲು ಬರುವಂತೆ ಕರೆದವನಿಗೆ ಫೋನ್ ಮಾಡಿ ಹೀಗೆ ಬರುತ್ತಿದ್ದೇವೆ 3 ಸಾವಿರ ಕೊಡಬೇಕು ಅಂದ್ರು. ಸರಿ ಆಯ್ತು ನಾಳೆನೇ ಬನ್ನಿ ಅಂದ. ನಾಳೆ ಅಲ್ಲ, ಇವತ್ತೇ ಬರುತ್ತೇವೆ ಬಂದ ತಕ್ಷಣ ದುಡ್ಡು ಕೊಡಬೇಕು ಅಂದ್ರು. ಇದು ನಮ್ಮ ಪ್ರಯಾಣದ ಖರ್ಚು. ನಾಟಕ ಖರ್ಚೆಂದು ತಿಳಿಯಬೇಡಿ ಅಂದ್ರು. ಇಲ್ಲ ಸ್ವಾಮಿ, ನೀವು ಬನ್ನಿ ಅಂದ. ಸರಿ, ಬಸ್ ಏರ್ಪಾಡು ಆಯ್ತು. ಬೆಳಗಾವಿಯಲ್ಲಿ ಇಳಿದೆವು.
ಬೆಳಗಾವಿಗೆ ಹೋದ ಮರುದಿನ ನಾಟಕ ಅನೌನ್ಸ್ ಮಾಡಿದ್ರು. ಕನ್ನಡ ಚಿತ್ರರಂಗದ ಕಲಾವಿದರ ಭರ್ಜರಿ ನಾಟಕ ಎಂದೆಲ್ಲ ಪ್ರಚಾರ ಕೊಟ್ರು. ನಾಟಕ ಆಡಲು ಹೋದ್ರೆ, ಎರಡು ಥಿಯೆಟರ್ ಜನ ಟಿಕೆಟ್ ಇಲ್ಲದೇ ವಾಪಸ್ ಹೋಗಿದ್ರು. ಉತ್ತರ ಕರ್ನಾಟಕದ ಜನರು ಕನ್ನಡ, ನಾಟಕ, ಕಲಾವಿದರ ಮೇಲಿಟ್ಟಿರುವ ಅಭಿಮಾನಕ್ಕೆ ಸಾವಿರ, ಕೋಟಿ ಅಭಿನಂದನೆಗಳನ್ನು ಅರ್ಪಿಸಿದರೂ ಸಾಲದು. ಕೈ ಮುಗಿದು ಹೇಳ್ತೇನೆ ಇವತ್ತಿಗೂ ಉತ್ತರ ಕರ್ನಾಟಕದ ಜನರೇ ನಮ್ಮ ಕಲೆಗೆ ಶ್ರೀರಕ್ಷೆ.
ನಾಟಕಗಳ ಟಿಕೆಟ್ಗೆ ದುಪ್ಪಟ್ಟು ಶುಲ್ಕ ಮಾಡಿದ್ರು, ಜನ ಬಂದು ಟಿಕೆಟ್ ಸಿಗದೇ ವಾಪಸ್ ಹೋಗುವಂತಾಯ್ತು. 10 ನಾಟಕಗಳನ್ನು ಆಡಿದ್ರೂ, ಜನರು ಬರುವುದು ಕಡಿಮೆಯಾಲಿಲ್ಲ. ಮೂರು ನಾಟಕ ಮಾಡುತ್ತಿದ್ದ ಹಾಗೆನೇ, ಹುಬ್ಬಳ್ಳಿಯಿಂದ ಜನ ಬಂದು, ನಮ್ಮಲ್ಲಿ ಬಂದು ನಾಟಕ ಮಾಡಿ ಅಂದ್ರು. ಅಯ್ಯರ್ ಅವರು ಒಂದು ನಾಟಕಕ್ಕೆ 3 ಸಾವಿರ ರೂಪಾಯಿ ಕೇಳಿದ್ರು. ಕೊನೆಗೆ 2 ಸಾವಿರಕ್ಕೆ ಫೈನಲ್ ಮಾಡಿದ್ರು. ರಾಣೆಬೆನ್ನೂರು, ಬಾಗಲಕೋಟೆ... ಹೀಗೆ ಉತ್ತರ ಕರ್ನಾಟಕ ತುಂಬಾ ನಾಟಕ ಮಾಡಿದ್ವಿ. ಚೆನ್ನಾಗಿ ದುಡ್ಡಾಯಿತು. ಉತ್ತರ ಕರ್ನಾಟಕ ಜನ ಕೊಟ್ಟ ದುಡ್ಡನ್ನು ಇಡಲು ಅಯ್ಯರ್ ಅವರಿಗೆ ಜಾಗ ಇಲ್ಲದಂತಾಯ್ತು. ಅಷ್ಟು ದುಡ್ಡು ಬಂತು. ನಾಟಕಗಳು ಉಳಿದಿರುವುದೇ ಉತ್ತರ ಕರ್ನಾಟಕದ ಜನರಿಂದ. ಅದರಲ್ಲೂ ಸಿನಿಮಾದವರು ಬಂದು ನಾಟಕ ಮಾಡ್ತಾರೆ ಎಂದ್ರೆ ಕಲೆಕ್ಷನ್ ಡಬಲ್ ಆಗುತ್ತದೆ. ಮಂಡ್ಯ, ಚನ್ನಪಟ್ಟಣ, ಮೈಸೂರು, ನಂಜನಗೂಡು, ಚಾಮರಾಜನಗರದಲ್ಲೂ ನಾಟಕ ಮಾಡಿದೆವು.
ಕಲ್ಪನಾ ಒಂದು ನಾಟಕಕ್ಕೆ 5 ಸಾವಿರ ಚಾರ್ಜ್ ಮಾಡುತ್ತಿದ್ದಳು. ಇವಳಿಗೆ 5 ಸಾವಿರ ಕೊಟ್ರೆ, ಅವರಿಗೆ 50 ಸಾವಿರ ಕಲೆಕ್ಷನ್ ಆಗುತ್ತಿತ್ತು. ಉತ್ತರ ಕರ್ನಾಟದಲ್ಲಿ ಆ ಮಟ್ಟಿಗೆ ನಾಟಕಗಳ ಕ್ರೇಜ್ ಇದೆ. ನಂಜನಗೂಡಿನಲ್ಲಿ ಒಂದು ನಾಟಕಕ್ಕೆ 3 ಸಾವಿರಕ್ಕೆ ಏರಿಸಿದ್ರು. ಅಲ್ಲಿ ಮೂರೇ ನಾಟಕ ಕೊಟ್ಟೆವು.
ಬೇರೆ ಕಡೆ ಎಲ್ಲೂ ನಮಗೆ ನಾಟಕ ಮಾಡುವಾಗ ತೊಂದರೆ ಆಗಿಲ್ಲ. ಆದ್ರೆ ನಂಜನಗೂಡಿನಲ್ಲಿ ನಾಟಕದ ಗುತ್ತಿಗೆ ತೆಗೆದುಕೊಂಡಿದ್ದವನು ಅಯ್ಯರ್ಗೆ ಬಹಳ ಬೇಕಾಗಿದ್ದ ಸ್ನೇಹಿತ. ಅವನು ಮೂರು ಸಾವಿರ ಮಾತ್ರ ಕೊಟ್ಟಿದ್ದ. ಎರಡನೇ ನಾಟಕಕ್ಕೆ ದುಡ್ಡು ಕೊಟ್ಟಿರಲಿಲ್ಲ. ಮೊದಲನೇ ನಾಟಕಕ್ಕೆ ಅವನಿಗೆ ಭರ್ಜರಿ ಕಲೆಕ್ಷನ್ ಆಗಿತ್ತು. ಉಳಿದ ಆರು ಸಾವಿರ ತಂದುಕೊಡ್ತಾನೆ ಎಂದು ಬೆಳಿಗ್ಗಿನಿಂದ ಅಯ್ಯರ್ ಕಾಯುತ್ತಿದ್ರು. ಆದ್ರೆ ಆತ ಸಂಜೆ ಆದ್ರೂ ದುಡ್ಡು ತಂದುಕೊಡಲಿಲ್ಲ. ಅವನು ದುಡ್ಡು ತಂದು ಕೊಡುವವರೆಗೂ ಪರದೆ ಎತ್ತ ಬೇಡ ಎಂದು ಜಿ.ವಿ.ಅಯ್ಯರ್ ಅವರು ನನಗೆ ಆರ್ಡರ್ ಮಾಡಿದ್ರು. ಆಯ್ತು ಎಂದೆ. ಅವನು ಬಂದ, ಆರು ಗಂಟೆ ಆಯ್ತು ಇನ್ನೂ ಪರದೆ ಪೂಜೆನೇ ಮಾಡಿಲ್ಲ ನೀವು ಎಂದ. ಅಯ್ಯರ್ ಅವರನ್ನು ಕೇಳಿಕೊಂಡು ಬನ್ನಿ, ನೀವು ದುಡ್ಡು ಕೊಡುವವರೆಗೂ ಪರದೆ ಎತ್ತ ಬೇಡಿ ಅಂದಿದ್ದಾರೆ ಎಂದೆ. ಹೌದಾ, ಹಾಗೆ ಹೇಳಿದ್ದಾನಾ ಆ ಬಡ್ಡಿ ಮಗ ಎಂದು ಅಯ್ಯರ್ ಬಳಿ ಹೋದ. ಓ.. ಅಯ್ಯರೀ ದುಡ್ಡು ಕೊಡದಿದ್ದರೆ ಪರದೆ ಎತ್ತ ಬೇಡ ಅಂಥ ಹೇಳಿದ್ದಿಯಂತೆ. ಕೊಡದೇ ಓಡಿ ಹೋಗಿ ಬಿಡ್ತೀನಾ, ಪರದೇ ಎತ್ತಿಸೋ ಅಂದ. ದುಡ್ಡು ಕೊಡುವವರೆಗೂ ಎತ್ತಿಸುವುದಿಲ್ಲ. ನೀನು ನನ್ನ ಸ್ನೇಹಿತನಾಗಿರಬಹುದು ಎಂದ್ರು. ಹೇಳಿದ ಹಾಗೆ ಕೇಳ್ತಿಯೋ ಇಲ್ವೋ, ಬಡ್ಡಿ ಮಗನೇ, ಹೇಳಿದ ಹಾಗೆ ಕೇಳೋ... ದುಡ್ಡು ಕೊಡೋದು ಆಮೇಲೆ ನೋಡ್ತೇನೆ ಎಂದ. ಇಲ್ಲಪ್ಪ ಪರದೆ ತೆಗೆಸೋಲ್ಲ ಅಂದ್ರು. ಒಳ್ಳೆ ಮಾತಿನಲ್ಲಿ ಪರದೆ ಎತ್ತಿಸದೇ ಹೋದ್ರೆ ನಿನ್ನ ಭುಜದ ಮೇಲೆ ಬುರುಡೆ ಇರೋದಿಲ್ಲ. ಬೋಳು ಬುರುಡೆಯನ್ನು ಎರಡು ಮಾಡ್ತೇನೆ, ಹುಷಾರ್ ಎಂದ.
ಅಲ್ಲಿ ಮೇಕಪ್ ಹಾಕಿಕೊಳ್ಳುತ್ತಿದ್ದ ರಾಜ್ಕುಮಾರ್ ಅವರಿಗೆ ಎಲ್ಲಿತ್ತೋ ಕೋಪ ಗೊತ್ತಿಲ್ಲ, ಎದಿದ್ದೇ, ಅಲ್ಲಿದ್ದ ಕತ್ತಿಯನ್ನು ಎತ್ತಿಕೊಂಡು, ಏನಂದೆ, ಬೋಳು ಬುರುಡೆಯನ್ನು ಎರಡು ಮಾಡ್ತೇನೆ ಅಂತಿಯಾ, ಏಯ್... ಭುಜದ ಮೇಲೆ ನಿನ್ನ ಕತ್ತು ಇರುತ್ತದಾ ನೋಡಿಕೊಳ್ಳೋ ಎಂದ್ರು. ಅವರ ಕಣ್ಣಲ್ಲಿ ರಕ್ತ ಸುರಿಯುತ್ತಿತ್ತು. ಅಯ್ಯರ್ ಅವರಿಗೆ ಇನ್ನೊಂದು ಮಾತೆನ್ನಾದ್ರೂ ಹೇಳು ನಿನ್ನ ತಲೆ ಕತ್ತರಿಸಿ ಬಿಡ್ತೇನೆ. ಏನಂಥ ತಿಳಿದುಕೊಂಡಿದ್ದೀಯಾ, ದುಡ್ಡು ಕೊಡು ಅಂದ್ರೆ, ಆಟಾಡಿಸುತ್ತಿದ್ದೀಯಾ ನೀನು, ಎಂದು ಕತ್ತಿ ಹಿಡಿದುಕೊಂಡು ನಿಂತಿದ್ರು. ಅವನು ಇವರ ಆಕಾರ ನೋಡಿ ಭಯಬಿದ್ದ.
ರಾಜ್ಕುಮಾರ್ ಅವರು ಅವರ ತಂದೆಯ ಪ್ರತಿರೂಪದಲ್ಲಿ ಕಾಣಿಸಿಬಿಟ್ರು ಅನಿಸುತ್ತದೆ. ಅವರ ತಂದೆ ಕಂಸ, ರಾವಣ, ಹಿರಣ್ಯ ಕಶಿಪು ಪಾತ್ರದಲ್ಲಿ ಪ್ರಖ್ಯಾತರಾದವರು. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರು ಯಮನ ಪಾತ್ರದಲ್ಲಿ ಎಮ್ಮೆ ಮೇಲೆ ಕೂತುಕೊಂಡು ವೇದಿಕೆಗೆ ಬಂದ್ರು ಅಂದ್ರೆ, ಪ್ರೇಕ್ಷಕರಲ್ಲಿ ಅನೇಕರು ಹೆದರಿ ಓಡಿಹೋಗಿದ್ದು ಇದೆ. ಅಂತಹ ಧ್ವನಿ, ಗತ್ತು, ದೇಹ ಅವರದಿತ್ತು. ಅದೇ ರೀತಿ ಅವನಿಗೆ ಇವರು ಕಾಣಿಸಿರಬೇಕು. ಆಯ್ತಪ್ಪ ತಂದು ಕೊಡ್ತೇನೆ ಎಂದ. ನಾಳೆದ್ದು ಕೊಡು ಅಂದ್ರು. ಆಯ್ತಪ್ಪ ಈವಾಗ್ಲೇ ತಂದು ಕೊಡ್ತೇನೆ ಎಂದ. ದುಡ್ಡು ಕೊಟ್ಟ ಮೇಲೆ ಪರದೆ ಎಳಿಸಿ ಎಂದು ಹೇಳಿ ಹೋದವ ಮತ್ತೆ ಬಂದು ದುಡ್ಡು ತಂದು ಕೊಟ್ಟ. ಈ ಮೂರು ಸಾವಿರ ಇಟ್ಕೊ ಇನ್ನು ಮೂರು ಸಾವಿರ ನಾಟಕ ನಡೆಯುವಾಗ ಕೊಡ್ತೇನೆ ಎಂದ. ಆಯ್ತು ಹೋಗು ಅಂದ್ರು ಅಯ್ಯರ್. ರಾಜ್ಕುಮಾರ್ ಅವರ ಕೋಪವನ್ನು ನಾನು ಕಂಡಿದ್ದು ಎರಡೇ ಬಾರಿ. ಅದರಲ್ಲಿ ಮೊದಲನೇ ಸಂದರ್ಭ ಇದು.
ಕರ್ನಾಟಕದಲ್ಲೆಲ್ಲ ನಾಟಕ ಮುಗಿಸಿಕೊಂಡು ಬಂದೆವು. 1958ರಲ್ಲಿ ಖರ್ಚು ಕಳೆದು 3 ಲಕ್ಷ ಉಳಿದಿತ್ತು. ಉತ್ತರ ಕರ್ನಾಟಕ ಜನರ ಪ್ರೀತಿ, ವಿಶ್ವಾಸ, ಅಭಿಮಾನ ಹೇಗಿತ್ತು ಎಂದು ಯೋಚಿಸಿ. 3 ಲಕ್ಷದಲ್ಲಿ 75 ಸಾವಿರವನ್ನು ನಾಲ್ಕು ಜನ ಪ್ರೊಪ್ರೈಟರ್ಸ್ಗಳೇ ಹಂಚಿಕೊಳ್ಳುವುದು ಎಂಬ ಚರ್ಚೆ ನಡೆಯಿತು. ಆಗ ಪಾರ್ವತಮ್ಮ ಅವರು ಹೇಳಿದ್ರು, ಇದು 3 ಲಕ್ಷವನ್ನ ನೀವು ನಾಲ್ಕು ಜನ ಸಂಪಾದನೆ ಮಾಡಿರುವುದಲ್ಲ. 30 ಜನರ ಬೆವರಿದೆ. ಅವರಿಗೂ ಇದನ್ನು ಹಂಚಿ ಅಂದ್ರು. ಆಗಿನ ಕಾಲದಲ್ಲಿಯೇ ಅವರ ಬ್ಯುಸಿನೆಸ್ ಐಡಿಯಾ ಹೇಗಿತ್ತು ನೋಡಿ. 30 ಜನಕ್ಕೆ ಹೇಗೆ ಹಂಚೋದಕ್ಕೆ ಆಗುತ್ತೇ ಎಂಬುದು ಅಯ್ಯರ್ ಅವರ ಪ್ರಶ್ನೆ. ಒಂದು ಕೆಲಸ ಮಾಡಿ, ಒಂದು ಪಿಕ್ಚರ್ ಮಾಡಿ. ಅದೇ ಅವರಿಗೆ ಬದುಕು. ಈ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ರೆ, ಅವರಿಗೆ ಇನ್ನೊಂದು ಸಿನಿಮಾದಲ್ಲಿ ಪಾತ್ರ ಸಿಗುತ್ತೆ. ಕಲಾವಿದರಿಗೆ ಕಲೆಯ ಮೂಲಕವೇ ದುಡ್ಡು ಹಂಚಿ ಅಂದ್ರು. ಅದರ ಪ್ರತಿಫಲವೇ ‘ರಣಧೀರ ಕಂಠೀರವ’.
ಮುಂದುವರೆಯುವುದು...
ಸಂದರ್ಶಕರು - ಕೆ.ಎಸ್ ಪರಮೇಶ್ವರ