ಅಣ್ಣಾವ್ರು 108 ದಿನಗಳಲ್ಲಿ ಬರುತ್ತಾರೆ ಎಂಬ ಆ ಮ್ಯಾನೇಜರ್‌ ಶಾಸ್ತ್ರ ನಿಜವಾಗಿತ್ತು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 47


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ರಾಜ್‌ಕುಮಾರ್‌ ಅವರು ಬೇಗ ಮನೆಗೆ ಬರಲಿ ಎಂದು ಬೇಡಿಕೊಂಡು ನಾನು, ಪಾರ್ವತಮ್ಮನವರು ಹೋಗದಿರುವ ದೇವಸ್ಥಾನ, ಚರ್ಚ್‌, ಮಸೀದಿಗಳಿಲ್ಲ. ಕೇಳದಿರುವ ಜ್ಯೋತಿಷಿಗಳಿಲ್ಲ. ಅವರು ಜೀವಂತವಾಗಿ ವಾಪಸ್ಸು ಬರುತ್ತಾರೆ. 84 ವರ್ಷ ಬದುಕಿರುತ್ತಾರೆ ಎಂದು ಇಬ್ಬರು, ಮೂವರು ಜ್ಯೋತಿಷಿಗಳು ಹೇಳಿದ್ರು. ಆದರೆ, ಅವರು ಬದುಕಿದ್ದು 76 ವರ್ಷ. ಯಾವಾಗ ಬರುತ್ತಾರೆ ಎಂದು ಕೇಳಿದ್ರೆ, ಯಾವ ಜ್ಯೋತಿಷಿಗಳು ಹೇಳುತ್ತಿರಲಿಲ್ಲ.


ಹೊಸೂರು ರಸ್ತೆಯಲ್ಲಿರುವ ಸುಜುಕಿ ಶೋ ರೂಂನ ರೀಜನಲ್‌ ಮ್ಯಾನೇಜರ್‌ ಉದಯ್‌ಶಂಕರ್‌ ಎಂಬುವವರು ಶಾಸ್ತ್ರ ಹೇಳುತ್ತಾರೆ ಅವರನ್ನು ಕೇಳಿ ನಿಮಗೆ ಉತ್ತರ ಸಿಗುತ್ತದೆ ಎಂದು ಯಾರೋ ಹೇಳಿದ್ರು. ನಾನು, ಗೋವಿಂದರಾಜು ಅವರನ್ನು ಹುಡುಕಿಕೊಂಡು ಸಂಜೆ 5 ಗಂಟೆ ಸುಮಾರಿಗೆ ಹೋದೆವು. ಲೈನ್‌ನಲ್ಲಿ ಜನ ಕೂತಿದ್ರು. 5.30ಗೆ ಆಫೀಸ್‌ ಮುಗಿಯುತ್ತಿತ್ತು. ಅಲ್ಲಿಯೇ ಪಕ್ಕದಲ್ಲಿಯೇ ಅವರ ಕಚೇರಿ ಇತ್ತು. 6 ಗಂಟೆ ಮೇಲೆ ಅವರು ಶಾಸ್ತ್ರ ಹೇಳುತ್ತಿದ್ರು. ಆದರೆ, ದುಡ್ಡು ತೆಗೆದುಕೊಳ್ಳುತ್ತಿರಲಿಲ್ಲ.


ರಾಜ್‌ಕುಮಾರ್‌ ಅವರ ಮನೆಯಿಂದ ಬಂದಿದ್ದೇವೆ ಎಂದು ಅವರಿಗೆ ಗೊತ್ತಾಯ್ತು. ನಮ್ಮನ್ನು ಮೊದಲು ಕರೆಸಿದ್ರು. ನಾವು ವಿಷಯ ವಿವರಿಸಲು ಹೋದೆವು. ಅದಕ್ಕವರು ನಾನು ದಿನಪತ್ರಿಕೆ ಓದುತ್ತೇನೆ. ನನಗೆ ವಿಷಯ ಎಲ್ಲ ಗೊತ್ತು. ನಾಳೆ ಬೆಳಿಗ್ಗೆ 5.30ಗಂಟೆಗೆ ನಿಮ್ಮ ಮನೆಗೆ ಬರುತ್ತೇನೆ. ನಿಮ್ಮ ಮನೆಯನ್ನು ಮೊದಲು ನೋಡಬೇಕು ಎಂದ್ರು. ಮರುದಿನ 5.30ಗೆ ಮನೆಗೆ ಬಂದ್ರು. ಸೂಟ್‌, ಟೈ, ಬೂಟ್‌ ಹಾಕಿಕೊಂಡೇ ಬಂದಿದ್ರು. ಒಂದು ತೆಂಗಿನಕಾಯಿ ಕೊಡಿ ನನ್ನ ಕೈಗೆ ಅಂದ್ರು. ಅದನ್ನು ಹಿಡಿದುಕೊಂಡು ಮನೆ ಸುತ್ತ ರೌಂಡ್‌ ಹಾಕಿದ್ರು. ನಂತರ, ಇನ್ನು 108 ದಿವಸಕ್ಕೆ ಸರಿಯಾಗಿ ರಾಜ್‌ಕುಮಾರ್ ಮನೆಗೆ ಬರುತ್ತಾರೆ ನೀವು ಯೋಚನೆ ಮಾಡಬೇಡಿ. ಪಾರ್ವತಮ್ಮ ಅವರಿಗೂ ತಿಳಿಸಿ ಅಂದ್ರು. ನೀವೇ ಬಂದು ಹೇಳಿ ಎಂದು ಅವರನ್ನು ಒಳಗೆ ಕರೆದುಕೊಂಡು ಹೋದೆವು. ಪಾರ್ವತಮ್ಮ ಅವರು ಅಳುತ್ತ ಕೂತಿದ್ರು. ನೀವೇನು ಹೆದರಿಕೊಳ್ಳಬೇಡಿ ಅವರು ಬರುತ್ತಾರೆ ಎಂದು ಧೈರ್ಯ ಹೇಳಿ ಅವರು ಹೋದರು. ಬೇರೆ ಯಾವ ಜ್ಯೋತಿಷಿಗಳು ಈ ರೀತಿ ಹೇಳಿರಲಿಲ್ಲ. ರಾಜ್‌ಕುಮಾರ್‌ ಅವರು ಬಂದ ಮೇಲೆ ನಾವು ಹೋಗಿ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಿ ಬಂದೆವು.
ಮುಂದುವರೆಯುವುದು...

19 views