ಅಬ್ದುಲ್‌ಕಲಾಂ ಮತ್ತು ಭಗವಾನ್‌ ಅವರ ನಡುವಿನ ಒಡನಾಟ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 123


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಫಿಲ್ಮ್‌ಡಿ ವಿಷನ್‌ಗಾಗಿ ‘ಡಾ. ರಾಜ್‌ಕುಮಾರ್‌ ದಿ ಲೀವಿಂಗ್‌ ಲೆಜೆಂಡ್‌’, ಕೆಎಂಎಫ್‌, ಗುಲ್ಬರ್ಗಾ ಡಿಸ್ಟ್ರಿಕ್ಟ್‌ ಎಂಬ ಡಾಕ್ಯುಮೆಂಟರಿ ಮಾಡಿದ್ದೇನೆ. ಗಂಗಾ ಮತ್ತು ಕಾವೇರಿಯನ್ನು ಸೇರಿಸಿದರೆ, ನೆರೆ ಮತ್ತು ಬರಗಾಲ ಇರುವುದಿಲ್ಲ ಎಂಬ ವಿಷಯಾಧಾರಿತವಾದ ಲೀಕಿಂಗ್‌ ಆಫ್‌ ಗಂಗಾ-ಕಾವೇರಿ ಡಾಕ್ಯುಮೆಂಟರಿ ಮಾಡಿದ್ದೆ. 2020 ಯಲ್ಲಿ ಇಂಡಿಯಾ ಹೇಗಿರುತ್ತೆ ಎಂದು ಅಬ್ದುಲ್‌ಕಲಾಂ ಬರೆದಿರುವ ‘ವಿಷನ್‌ 2020’ ಯಲ್ಲಿ ಇದರ ಉಲ್ಲೇಖವಿದೆ. ಅಬ್ದುಲ್‌ಕಲಾಂ ಅವರ ಬಳಿ ನಾನು ಹೀಗೆ ಡಾಕ್ಯುಮೆಂಟರಿ ಮಾಡುತ್ತಿದ್ದೇನೆ. ನಿಮ್ಮ ಮಾರ್ಗದರ್ಶನ ಬೇಕು ಎಂದು ಕೇಳಿದೆ. ನೀವೇ ಅದರಲ್ಲಿ ಮಾತುಗಳನ್ನು ಆಡಿದರೆ ಬಹಳ ಚೆನ್ನಾಗಿರುತ್ತದೆ ಎಂದೆ. ನೀವು ಕೇಳುವ ಪ್ರಶ್ನೆಗಳನ್ನು ಪಟ್ಟಿ ಮಾಡಿ ಕೊಡಿ. ಅದಕ್ಕೆ ಉತ್ತರವನ್ನು ನಾನು ರೆಡಿ ಮಾಡಿಕೊಳ್ಳುತ್ತೇನೆ ಎಂದರು. ನಾನೊಂದು ಹದಿನಾರು ಪ್ರಶ್ನೆಗಳನ್ನು ಬರೆದು ಅವರ ಕೈಗೆ ಕೊಟ್ಟೆ. ಈ ಪ್ರಶ್ನೆಗಳನ್ನು ತಯಾರಿಸಿದ್ದು ಯಾರು ಎಂದ್ರು. ನಾನೇ ಎಂದೆ. ಅದ್ಭುತವಾದ ಪ್ರಶ್ನೆಗಳು ಎಂದರು. ಇದನ್ನು ಬರೆದವರು ಯಾರು ಎಂದ್ರು. ನಾನೇ ಬರೆದದ್ದು ಎಂದೆ. ಸುಂದರವಾದ ಅಕ್ಷರಗಳು ಎಂದರು. ಧನ್ಯವಾದ ತಿಳಿಸಿದೆ. ಅವರಿಂದ ಪ್ರಶಂಸೆಯ ಮಾತು ಕೇಳಿದಾಗ ಬಹಳ ಸಂತೋಷವಾಯಿತು.


ನಾನು ಇನ್ನು ಹದಿನೈದು ದಿನಗಳಲ್ಲಿ ಮೈಸೂರಿಗೆ ಬರುವುದಿದೆ. ಆಗ ಬನ್ನಿ ಉತ್ತರಗಳನ್ನು ಕೊಡುತ್ತೇನೆ ಎಂದರು. ಲಲಿತ್‌ಮಹಲ್‌ ಪೂರ್ತಿ ಕಲಾಂ ಅವರಿಗೆ ರಿಸರ್ವ್‌ ಆಗಿತ್ತು. ಬೆಳಿಗ್ಗೆ 9ಗಂಟೆಗೆ ರೂಂ ನಂ. 13 ಬರುವಂತೆ ತಿಳಿಸಿದ್ದರು. ಏಳು ಗಂಟೆಗೆ ಬಂದು ಕ್ಯಾಮೆರಾಗಳನ್ನೆಲ್ಲ ಸೆಟ್‌ಅಪ್‌ ಮಾಡಿರಬೇಕು. ಅವರು ಬಂದ ಮೇಲೆ ಬದಲಾಯಿಸುವಂತೆ ಇಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದರು. 9 ಗಂಟೆಗೆ ಸರಿಯಾಗಿ ಬಂದ ಅವರು, ನಾನು ಉತ್ತರ ಹೇಳಲು ತಯಾರಿದ್ದೇನೆ ಎಂದು ಲಾಪ್‌ಟಾಪ್‌ ಓಪನ್‌ ಮಾಡಿದ್ರು. ನಾನು ಎಲ್ಲ ಉತ್ತರಗಳನ್ನು ಟೈಪ್‌ಮಾಡಿ ಲ್ಯಾಪ್‌ಟಾಪ್‌ನಲ್ಲಿ ಇಟ್ಟುಕೊಂಡಿದ್ದೇನೆ ಎಂದ್ರು. ಕ್ಯಾಮೆರಾದಲ್ಲಿ ಲ್ಯಾಪ್‌ಟಾಪ್‌ ಸೆರೆಯಾಗುತ್ತಿತ್ತು. ಹಾಗಾಗಿ ಅವರ ಬಳಿ ಐದು ನಿಮಿಷ ಸಮಯ ಕೇಳಿ, ನಂತರ ಲ್ಯಾಪ್‌ಟಾಪ್‌ ಕಾಣದಂತೆ ಕ್ಯಾಮೆರಾವನ್ನು ಸೆಟ್‌ ಮಾಡಿದೆವು. ಅವರು ಮಾತನಾಡಿದ್ದು ಮುಗಿದ ಮೇಲೆ ನಿಮಗೆ ತೃಪ್ತಿ ಆಯಿತಾ, ಇನ್ನೇನಾದ್ರೂ ಬೇಕಿದ್ರೆ ಕೇಳಿ ಎಂದರು. ಅಷ್ಟು ಮೃದುತ್ವ ಇತ್ತು ಅವರ ಮಾತಿನಲ್ಲಿ. ಅದೇ ಕಾರಣಕ್ಕೆ ಅವರು ರಾಷ್ಟ್ರಪತಿ ಆಗಿದ್ದರು. ಅವರ ಸರಳ ಜೀವನದಿಂದಾಗಿಯೇ ಇವತ್ತಿಗೂ ಅವರನ್ನು ಎಲ್ಲರೂ ಹಾಡಿ ಹೊಗಳುತ್ತಾರೆ. ಅವರ ನಡತೆ, ಗುಣ, ಮಾತಿನಲ್ಲಿ ರಾಜ್‌ಕುಮಾರ್‌ ಅವರನ್ನೆ ಕಂಡೇ ನಾನು.


ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಡಾಕ್ಯುಮೆಂಟರಿ ಮಾಡುವ ಅವಕಾಶ ದೊರಕಿತು. ಕಿರಣ್‌ಬೇಡಿ ಅವರನ್ನು ಮಾತನಾಡಿಸುವ ಮಾಡುವ ಯೋಚನೆ ಬಂತು. ಕಿರಣ್‌ಬೇಡಿ ಅವರನ್ನು ಕೇಳಿದ ತಕ್ಷಣ ನಾನು ಬಂದು ಮಾತನಾಡುವೆ ಎಂದರು. ‘ದಿ ಮೋಸ್ಟ್‌ ಅನ್‌ ವಾಂಟೆಡ್‌’ ಎಂಬ ಡಾಕ್ಯುಮೆಂಟರಿ ಅದು. ನಮ್ಮ ಡಾಕ್ಯುಮೆಂಟರಿಯನ್ನು ಮೆಚ್ಚಿದ ಫಿಲ್ಮ್‌ಡಿವಿಷನ್‌ ಮಾತೃಭೂಮಿ ಪತ್ರಿಕೆಯ ಸಂಸ್ಥಾಪಕರಲ್ಲೊಬ್ಬರಾದ ಕೇಲಪ್ಪನ್‌ ಕುರಿತು ಡಾಕ್ಯುಮೆಂಟರಿ ಮಾಡಲು ಹೇಳಿದರು. ಕಾಂಗ್ರೆಸ್‌ ಲೀಡರ್‌ ಅವರು.ಮುಂದುವರೆಯುವುದು...

14 views