
ಅಮಿತಾಬ್ ಬಚ್ಚನ್ ಮತ್ತು ಅಣ್ಣಾವ್ರ ಭೇಟಿಲಿ ಏನೇನಾಗಿತ್ತು...
ಮಿಮಿಕ್ರಿ ದಯಾನಂದ ಲೈಫ್ಸ್ಟೋರಿ ಭಾಗ 83

ಇದೇ ವೇಳೆ ಇನ್ನೊಂದು ಘಟನೆಯೂ ನೆನಪಾಗುತ್ತಿದೆ. ಪರಶುರಾಮ ಸಿನಿಮಾದ ಶೂಟಿಂಗ್ ವೇಳೆ ರಾಜ್ಕುಮಾರ್ ಜೊತೆ ನಾನು ಕೂತಿದ್ದೆ. ಅಮಿತಾಭ್ ಬಚ್ಚನ್ ಅವರ ಸಿನಿಮಾದ ಚಿತ್ರೀಕರಣವೂ ಅಲ್ಲಿಯೇ ನಡೆಯುತ್ತಿತ್ತು. ಅಮಿತಾಭ್ ಅವರನ್ನು ನೋಡಲು ಹೋಗಬಹುದಾ? ಬಿಡ್ತಾರ ಎಂದು ರಾಜ್ಕುಮಾರ್ ಅವರು ನನ್ನನ್ನು ಕೇಳಿದ್ರು. ಅಣ್ಣಾ ನೀವು ಹೋದ್ರೆ ಬಿಡ್ತಾರೆ ಎಂದೆ. ಅಲ್ಲಿ ಸೆಕ್ಯುರಿಟಿ ಬಹಳ ಇರ್ತಾರೆ ಅಲ್ವಾ ಅಂದ್ರು. ನಿಮಗೆ ಬಿಡದೇ ಇರುತ್ತಾರಾ ಅಣ್ಣ ಎಂದೆ.
ಇವರು ಹೋದ್ರೆ ಹೇಗಾದ್ರೂ ನಾನು ಅವರ ಜೊತೆ ಹೋಗೋಣ ಎಂಬ ಆಸೆ. ನಾನು ರಾಜ್ಕುಮಾರ್ ಅವರು ಹೋಗ್ತಾ ಇದ್ವಿ. ಹಿಂದೆ ನೂರಾರು ಜನ ಅಣ್ಣವ್ರಿಗೆ ಜಯವಾಗಲಿ ಎಂದು ಕೂಗಿಕೊಂಡು ಬರುತ್ತಿದ್ರು. ರಾಜೀವ್ ಗಾಂಧಿ ಕಾಲವದು. ಅಮಿತಾಭ್ ಬಚ್ಚನ್ ಅವರಿಗೆ ಆಗ ಬ್ಲಾಕ್ ಕ್ಯಾಟ್ ಸೆಕ್ಯುರಿಟಿ ಇತ್ತು. ಇಡೀ ಪ್ಯಾಲೇಸ್ಗೆ ಬಂದೋಬಸ್ತ್ ಮಾಡಲಾಗಿತ್ತು. ಅಮಿತಾಬ್ ಅವರಿದ್ದ ಸ್ಥಳದಿಂದ ಅರ್ಧ ಕಿ.ಮೀ. ದೂರದವರೆಗೂ ಯಾರೂ ಹೋಗುವಂತಿರಲಿಲ್ಲ. ನಮ್ಮ ಹಿಂದೆ ಬರುತ್ತಿದ್ದವರನ್ನು ಸೆಕ್ಯುರಿಟಿಯವರು ಎಳೆದು ಹಾಕಿದ್ರು. ಅಣ್ಣವ್ರು ನನ್ನ ಜೊತೆ ಮಾತಾಡುತ್ತ ಇದ್ರು. ಹಾಗಾಗಿ ನನ್ನನ್ನು ಎಳೆದು ಹಾಕಿರಲಿಲ್ಲ.
ಚಿತ್ರೀಕರಣಲ್ಲಿದ್ದ ಅಮಿತಾಭ್ ಅವರು ದಾಡಿ ಅಂಟಿಸಿಕೊಳ್ಳುತ್ತಿದ್ರು. ಅಣ್ಣಾವ್ರನ್ನು ನೋಡಿದ್ದವರೇ, ಸ್ಕೂಲ್ಗೆ ಅಪ್ಪ ಬಂದಾಗ ಮಕ್ಕಳು ಓಡಿ ಬರುವಂತೆ ಅವರು ದಾಡಿಯನ್ನು ಅರ್ಧಕ್ಕೆ ಬಿಟ್ಟು, ಓಡೋಡಿ ಬಂದ್ರು. ರಾಜ್ಕುಮಾರ್ಗೆ ನಮಸ್ಕಾರ ಮಾಡಿದ ಅವರು, ನೀವು ಒಂದು ಮಾತು ಹೇಳಿದ್ರೆ ನಾನೇ ಬರುತ್ತಿದ್ದೆ ಎಂದ್ರು. ನನ್ನ ಮಕ್ಕಳೆಲ್ಲ ನಿಮ್ಮ ಫ್ಯಾನ್ ಎಂದ ರಾಜ್ಕುಮಾರ್, ಅವರ ಯೋಗ ಕ್ಷೇಮ ವಿಚಾರಿಸಿದ್ರು. ಅದೇ ಮೊದಲು ರಾಜ್ಕುಮಾರ್ ಅವರು ಇಂಗ್ಲಿಷ್ನಲ್ಲಿ ಮಾತನಾಡಿದ್ದನ್ನು ಕೇಳಿದ್ದು ನಾನು. ನನಗೆ ಬಹಳ ಆನಂದ ಆಯ್ತು.
ಅಮಿತಾಭ್ ಅವರು ಮಾರನೇ ದಿನ ಸೆಕ್ಯುರಿಟಿ ಜೊತೆ ಪರಶುರಾಮ ಚಿತ್ರೀಕರಣದ ಸ್ಥಳಕ್ಕೆ ಬಂದ್ರು. ಆಗ ಎಲ್ಲರೂ ಫೋಟೊ ತೆಗೆಸಿಕೊಂಡ್ರು.
ಮುಂದುವರೆಯುವುದು...