ಅಮೆರಿಕದಲ್ಲಿ ಕಸ ಗುಡಿಸುವ ಸುಂದರಿಯನ್ನು ಕಂಡು ಅಣ್ಣಾವ್ರು ಹೇಳಿದ್ದೇನು?

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 20


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)

ಮಹಾರಾಜರ ವರ್ಧಂತಿ ಉತ್ಸವ ನಡೆಯುತ್ತಿತ್ತು. ಅಲ್ಲಿಗೆ ಬಹಳ ಜನ ಬರುತ್ತಿದ್ರು. ಅಲ್ಲಿ ಊಟ ಬಡಿಸಲು ಸೇರಿದಂತೆ ಹಲವು ಕೆಲಸಗಳಿಗೆ ಜನ ಬೇಕಾಗುತ್ತಿತ್ತು. ನಾವೆಲ್ಲ ಸಣ್ಣ ಹುಡುಗರಾದ್ದರಿಂದ ನಮಗೆ ನೀರು ಹಾಕುವ ಜವಾಬ್ದಾರಿ ಕೊಡುತ್ತಿದ್ರು. ನೀರು ಹಾಕಿದ್ರೆ ದಿನಕ್ಕೆ ನಾಲ್ಕಾಣೆ ಸಿಗುತ್ತಿತ್ತು. ಊಟ ಬಡಿಸುವವರಿಗೆ ಎಂಟಾಣೆ ಕೊಡುತ್ತಿದ್ರು. ನೀರು ಹಾಕಿ, ಎರಡು ಗಂಟೆಗೆ ಊಟ ಮುಗಿಸಿದ್ರೆ, ನಾಲ್ಕು ಗಂಟೆಗೆ ಗುಮಾಸ್ಥರು ಬಂದು ದುಡ್ಡು ಕೊಡುತ್ತಿದ್ರು. ಆ ನಾಲ್ಕಾಣೆಯಲ್ಲಿ ಎರಡು ಸಿನಿಮಾ ನೋಡುತ್ತಿದ್ದೆ. ಎಂಥಹ ಸಿನಿಮಾ ಹುಚ್ಚು ಎಂದ್ರೆ, ನಶೆ ಏರಿದ ಹಾಗಿತ್ತು.


ಸಿಟಿ ಮಾರ್ಕೆಟ್‌ನಲ್ಲಿ ಕೃಷ್ಣಯ್ಯ ಶೆಟ್ರು ಎಂದಿದ್ರು. ಅವರು ನನ್ನ ತಂದೆಯ ಪರಿಚಯಸ್ಥರು. ದಸರಾದಲ್ಲಿ ಮಹಾರಾಜರ ಫೋಟೊ ಮಾರಾಟವಾಗುತ್ತಿತ್ತು. ಅವರು ಫೋಟೊಗಳನ್ನು ಕೊಡುತ್ತಿದ್ರು. ನಾನು ಅರಮನೆ ಬಳಿ ಬೆಡ್‌ಶೀಟ್‌ ಹಾಕಿಕೊಂಡು ಫೋಟೊ ಮಾರುತ್ತಿದ್ದೆ. ಒಂದಾಣೆಗೆ ಒಂದು ಫೋಟೊ. ಒಂದು ಫೋಟೊ ಮಾರಿದ್ರೆ ನನಗೆ ಮೂರುಕಾಸು ಕಮಿಷನ್‌ ಕೊಡುತ್ತಿದ್ರು. ದಸರಾದಲ್ಲಿ ಶಾಲೆಗೆ ರಜೆ ಇರುತ್ತಿತ್ತು. ಮಧ್ಯಾಹ್ನ ಹೋಗಿ ಕೂತರೆ, ಸಂಜೆಯವರೆಗೂ ಮಾರಾಟ ಮಾಡುತ್ತಿದ್ದೆ. ಅವರು ತಂದೆಯ ಸ್ನೇಹಿತರಾದ್ದರಿಂದ ಮೊದಲ ದಿನ ಸಾಲಕ್ಕೆ ಫೋಟೊ ಕೊಡುತ್ತಿದ್ರು. ನಂತರ ಮಾರಿದ ದುಡ್ಡನ್ನು ಕೊಟ್ಟು, ಫೋಟೊ ತೆಗೆದುಕೊಂಡು ಬರುತ್ತಿದ್ದೆ. ದಸರಾದ ಹತ್ತು ದಿವಸವೂ ನನಗೆ ಕೈತುಂಬ ದುಡ್ಡು. ನಾನಂತೂ ಸುಮ್ನೆ ಕೂರುತ್ತಿರಲಿಲ್ಲ. ಎಲ್ಲೆಲ್ಲಿ ಅವಕಾಶಗಳಿವೆಯೋ, ಅದನ್ನು ಬಳಸಿಕೊಳ್ಳುತ್ತಿದ್ದೆ. ಅಷ್ಟೊಂದು ಸಿನಿಮಾ ಹುಚ್ಚು ಹತ್ತಿಸಿಕೊಂಡಿದ್ದ ನನಗೆ, ನಾʻನ್ಯಾಕೆ ಹಾಡುಗಾರನಾಗಬಾರದು, ನಟನಾಗಬಾರದು ಎಂದೆನಿಸುತ್ತಿತ್ತು. ಆಗೆಲ್ಲ ನಾಯಕ ನಟರೇ ಹಾಡುತ್ತಿದ್ರು.ನಟನಾಗುವ ಕನಸು ಕಾಣಲು ಶುರು ಮಾಡಿದೆ. ಡೈಮಂಡ್‌ ರಾಕೆಟ್‌ ಶೂಟಿಂಗ್‌ ಸಂದರ್ಭದಲ್ಲಿ, ನಾನು ಚಿಕ್ಕ ವಯಸ್ಸಿನಲ್ಲಿ ಕಂಡ ಕನಸೆಲ್ಲ ಈಗ ನನಸಾಗಿದೆ. ದೇವರ ಕೃಪೆ ಎಷ್ಟು ಚೆನ್ನಾಗಿರಬೇಕು. ದೇವರು, ದೊಡ್ಡವರ ಆಶೀರ್ವಾದ ಇದ್ದರೆ ಜೀವನ ಹೇಗೆ ಬದಲಾಗುತ್ತದೆ. ಎಷ್ಟು ಜನರಿಗೆ ಕಂಡ ಕನಸು ನನಸಾಗುತ್ತದೆ ಎಂದು ಯೋಜನೆ ಮಾಡಿಕೊಂಡು ಕೂತಿದ್ದೆ.


ಡೈಮಂಡ್‌ ರಾಕೆಟ್‌ ಬಿಡುಗಡೆಯಾಯ್ತು. ದ್ವಾರಕನಾಥ್‌ ಅದರ ಡಿಸ್ಟ್ರಿಬ್ಯೂಟರ್‌. ಸಿನಿಮಾ ಯಶಸ್ಸಾಗಿ ಕೈತುಂಬ ದುಡ್ಡು ಬರುತ್ತಿತ್ತು. ಇಷ್ಟೊಂದು ದುಡ್ಡು ಬರುತ್ತಿದೆ. ಒಂದು ಟೀಂ ಮಾಡಿಕೊಂಡು ಏಕೆ ವಿದೇಶ ಪ್ರವಾಸ ಮಾಡಬಾರದು ಎಂದು ಯೋಚನೆ ಆತನಿಗೆ ಬಂತು. ಅಮೇರಿಕ ಮತ್ತು ಕೆನಡಾದಲ್ಲಿ ಅವನಿಗೆ ಸಂಪರ್ಕವಿತ್ತು. ಅವನ ಸಂಬಂಧಿಕರು ಕೆನಡಾದಲ್ಲಿ ಹೋಟೆಲ್‌ ಬ್ಯುಸಿನೆಸ್‌ ಮಾಡುತ್ತಿದ್ರು. ಅಮೆರಿಕದಲ್ಲಿ ಸ್ನೇಹಿತರಿದ್ರು. ದ್ವಾರಕನಾಥ್‌ ನನಗೆ ಸಂಬಂಧದವನೇ. ಟೂರ್‌ ಅರೆಂಜ್‌ ಮಾಡಿದ. ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ಅವರ ತಮ್ಮ ಗೋವಿಂದರಾಜ್‌, ನಾನು ಮತ್ತು ದೊರೆ, ಚಿತ್ರದುರ್ಗದ ಡಿಸ್ಟ್ರಿಬ್ಯೂಟರ್‌, ವಿಕ್ರಂ ಶ್ರೀಧರ್‌ ಸೇರಿದಂತೆ ಏಳೆಂಟು ಜನರ ತಂಡ ಹೋಗುವುದೆಂದು ನಿರ್ಧಾರವಾಯ್ತು. 47 ದಿವಸದ ವರ್ಲ್ಡ್‌ ಟೂರ್‌ಗೆ ಪ್ಲಾನ್‌ ಮಾಡಲಾಯಿತು. ಟಿಕೆಟ್‌ ಆಗಿ ಹೋಗಿತ್ತು. ರಾಜ್‌ಕುಮಾರ್‌ ಅವರಿಗೆ ಇನ್ನೊಂದು ತಿಂಗಳಿಗೆ ಫಾರಿನ್‌ ಟೂರ್‌ಗೆ ಹೋಗಲು ತಯಾರಾಗಿ ಎಂದು ಹೇಳಿದ್ವಿ. ಈ ಮೊದಲು ಅವರಿಗೆ ವಿಷಯ ಗೊತ್ತಿತ್ತು. ಟಿಕೆಟ್‌ ಬಂದಾದ ಮೇಲೆ ಮೂರು ಜನರ ಟಿಕೆಟ್‌ ಕ್ಯಾನ್ಸಲ್‌ ಮಾಡಿ ಅಂದ್ರು. ನಾನು ಏಕೆ ಅಂದೆ. ನನಗ್ಯಾಕೊ ಬರಲು ಮನಸ್ಸಾಗುತ್ತಿಲ್ಲ ಎಂದ್ರು. ಇಷ್ಟು ದಿವಸ ಪ್ರಪಂಚ ನೋಡಬೇಕು ಎಂಬ ಹುಮ್ಮಸ್ಸಿನಲ್ಲಿದ್ರಿ. ಧಿಡೀರನೆ ಮನಸ್ಸು ಬದಲಾಯಿಸಿದ್ದು ಏಕೆ ಎಂದೆ. ಇಲ್ಲ, ನನಗೆ ಮನಸ್ಸಿಲ್ಲ ಅಂದ್ರು. ನಾನು ಹೋಗಿ ಅತ್ತಿಗೆಯನ್ನು ಕೇಳಿದೆ. ಯಾಕೆ ಮನಸ್ಸು ಬದಲಾಯಿಸಿಕೊಂಡ್ರು ಎಂದೆ. ಏನಿಲ್ಲ ಭಗವಾನ್‌, ಅವರ ಅಮ್ಮ ಬರುತ್ತಿಲ್ಲ ಎಂದು ಅವರು ಬರಲು ಮನಸ್ಸು ಮಾಡುತ್ತಿಲ್ಲ. ಅಮ್ಮನಿಗೆ ಪ್ರಪಂಚ ತೋರಿಸಬೇಕು ಎಂಬಾಸೆ ಇತ್ತು. ಅವರನ್ನು ಕರೆದುಕೊಂಡು ಹೋಗಲು ಆಗುತ್ತಿಲ್ಲ ಎಂಬ ಅಳುಕು ಅವರ ಮನಸ್ಸಿನಲ್ಲಿ ಕೂತುಬಿಟ್ಟಿದೆ. ಅದಕ್ಕೋಸ್ಕರ ಆಗಲ್ಲ ಎನ್ನುತ್ತಿದ್ದಾರೆ ಅಂದ್ರು.


ನಾನು ಈ ವಿಷಯವನ್ನು ದ್ವಾರಕನಾಥ್‌ಗೆ ಹೇಳಿದೆ. ಅವನು ಕುಸಿದುಹೋಗಿ ಬಿಟ್ಟ. ರಾಜ್‌ಕುಮಾರ್‌ ಅವರು ಬರಲ್ಲ ಎಂದ್ರೆ ನಾವು ಹೋಗುವುದು ಉಪಯೋಗವಿಲ್ಲದಂತೆ. ರಾಜ್‌ಕುಮಾರ್‌ ಉತ್ಸವ ಮೂರ್ತಿ ಇದ್ದಂತೆ. ದ್ವಾರಕನಾಥ್‌ ತುಂಬಾ ಯೋಚನೆ ಮಾಡಿ, ಹಲವರಿಗೆ ಕರೆ ಮಾಡಿದ. ನಮ್ಮ ಟ್ರಾವೆಲ್‌ ಏಜೆಂಟ್‌ಗೂ ಫೋನ್‌ ಮಾಡಿದ. ಪಾಸ್‌ಪೋರ್ಟ್‌ ಅರೆಂಜ್‌ ಮಾಡ್ತೇವೆ ನೀವು ಯೋಚನೆ ಮಾಡಬೇಡಿ ಎಂದು ಅವರು ಹೇಳಿದ್ರು. ರಾಜ್‌ಕುಮಾರ್‌ ಅಮ್ಮನ ಪಾಸ್‌ಪೋರ್ಟ್‌ ರೆಡಿಯಾಯ್ತು. ರಾಜ್‌ಕುಮಾರ್‌ ಅವರಿಗೆ ವಿಷಯ ಹೇಳಿದಾಗ, ಅಮ್ಮ ಬರುವುದಾದ್ರೆ ನಾನು ಬರ್ತೇನೆ. ಇಲ್ಲದಿದ್ರೆ ಬರಲ್ಲ ಅಂದ್ರು.


ಅಮ್ಮನಿಗೆ ವಯಸ್ಸಾಗಿದೆ ಅವರಿಗೆ ಆಗುವುದಿಲ್ಲ ಅಂದ್ರು ಅವರು ಕೇಳಲಿಲ್ಲ. ಹೋಗೊ ಜೀವ ಹೋಗುವುದಾದ್ರೆ ಅಲ್ಲಿಯೇ ಹೋಗಲಿ ಬಿಡಿ. ಆದರೆ, ಅವರಿಗೆ ನಾನು ಪ್ರಪಂಚ ತೋರಿಸಬೇಕು. ಮಗನಾಗಿ ಇನ್ನೇನು ಮಾಡಲು ಸಾಧ್ಯ ಅಂದ್ರು. ತಂದೆ, ತಾಯಿ ಮೇಲಿನ ಭಕ್ತಿಯನ್ನು ರಾಜ್‌ಕುಮಾರ್‌ ಅವರಿಂದ ಕಲಿಯಬೇಕು. ಅವರು ಯಾವುದೇ ಕಾರ್ಯಕ್ರಮದಲ್ಲಿಯೂ ತಂದೆಯನ್ನು ನೆನಪಿಸಿಕೊಳ್ಳದ ಮಾತೇ ಇಲ್ಲ. ತಾಯಿಯನ್ನು ಕಂಡ್ರೆ ಭಕ್ತಿ ಅವರಿಗೆ. ಶೂಟಿಂಗ್‌ಗೆ ಹೋಗುವ ಮುಂಚೆ ತಾಯಿ ಕಾಲಿಗೆ ನಮಸ್ಕಾರ ಮಾಡಿಯೇ ಹೊರಡುತ್ತಿದ್ರು. ಅದೇ ರೀತಿಯ ಭಕ್ತಿಯನ್ನು ನಾನು ನೋಡಿದ್ದು, ರಾಜನ್‌– ನಾಗೇಂದ್ರ ಅವರಿಂದ. ಅವರು ಪ್ರತಿ ಸಿನಿಮಾದ ಮೊದಲ ಹಾಡಿನ ರೆಕಾರ್ಡಿಂಗ್ ಮುಂಚೆ ತಾಯಿಯನ್ನು ಕರೆಸಿ ನಮಸ್ಕಾರ ಮಾಡಿ, ರೆಕಾರ್ಡಿಂಗ್‌ ಶುರು ಮಾಡುತ್ತಿದ್ರು.

ಇದನ್ನೆಲ್ಲ ನೋಡಿ ಉದಯ್‌ಶಂಕರ್‌ ಚಿಕ್ಕ ಗಾದೆಯನ್ನು ಮಾಡಿದ್ದ. ರಾಜ್‌ಕುಮಾರ್‌ ಅವರ ಪಿತೃ ಭಕ್ತಿ, ರಾಜನ್‌ ನಾಗೇಂದ್ರ ಅವರ ಮಾತೃ ಭಕ್ತಿ, ದೊರೆ–ಭಗವಾನ್‌ ಅವರ ಮಿತ್ರ ಭಕ್ತಿ ಇದಕ್ಕೆ ಎಣೆನೇ ಇಲ್ಲ ಎಂದಿದ್ದ.


ಐವತ್ತು ವರ್ಷ ಗೆಳೆತನ ನಮ್ಮಿಬ್ಬರದು. ಒಂದು ದಿವಸವೂ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇರಲಿಲ್ಲ. ರೈಲು ಎರಡು ಹಳಿಗಳ ಮೇಲೆ ಹೇಗೆ ಹೋಗುತ್ತದೋ ಅದೇ ರೀತಿ ನಾವಿಬ್ಬರೂ ಎರಡು ಹಳಿಗಳ ತರಹ ಇದ್ದೆವು. ಅಷ್ಟು ಸಾಮರಸ್ಯ ನಮ್ಮಿಬ್ಬರ ನಡುವೆ ಇತ್ತು. ದೊರೆ ಅವರಂತಹ ದೊಡ್ಡ ಗುಣವನ್ನು ನಾನೆಲ್ಲೂ ಕಂಡಿಲ್ಲ. ನಮ್ಮನ್ನು ಅನುಕರಿಸಲು ಬಹಳಷ್ಟು ಜನ ಪ್ರಯತ್ನಿಸಿದ್ರು. ಕನ್ನಡ ಚಿತ್ರರಂಗದಲ್ಲಿ ನಮ್ಮ ಜೋಡಿಯ ಗೆಲುವು, ಯಶಸ್ಸನ್ನು ಕಂಡು ಹಲವರು ನಮ್ಮಂತೆ ಆಗಲು ಪ್ರಯತ್ನಿಸಿದ್ರು. ಆದರೆ ಯಾವುದು ಯಶಸ್ಸು ಕಾಣಲಿಲ್ಲ. ಒಂದೆರಡು ಸಿನಿಮಾ ಮಾಡಿ ಜಗಳವಾಡಿಕೊಂಡು ಬೇರೆಯಾಗಿಬಿಟ್ರು.

ವಿದೇಶಕ್ಕೆ ಹೊರಟೆವು. ದೆಹಲಿ-ಎಥೆನ್ಸ್‌-ಆಂಸ್ಟರ್ಡ್ಯಾಮ್-ಫ್ರಾಂಕ್‌ಫರ್ಟ್‌–ಜನೇವಾ–ರೋಮ್‌– ಪ್ಯಾರಿಸ್‌– ಇಂಗ್ಲೆಂಡ್‌–ಟೊರೆಂಟೊ–ಮಾಂಟ್ರಿಯಲ್‌–ನಯಾಗರ– ನ್ಯಾಯಾರ್ಕ್ ಇಷ್ಟು ನಗರಗಳಿಗೂ ಅಮ್ಮನನ್ನು ಕರೆದುಕೊಂಡು ಹೋಗಿದ್ದೆವು. ಎಥೆನ್ಸ್‌ ಹೋಟೆಲ್‌ನಲ್ಲಿ ಬಫೆ ಊಟ ಇತ್ತು. ಅಲ್ಲಿ ರಾಜ್‌ಕುಮಾರ್‌ ಮಾಂಸವನ್ನು ಹಾಕಿಕೊಂಡ್ರು, ಬಾಯಿಗೆ ಇಟ್ಟವರೇ ತೆಗೆದಿಟ್ರು. ಏಕೆ ಮುತ್ತರಾಜಣ್ಣ ಎಂದೆ, ಹಸು ಮಾಂಸ ಇದ್ದ ಹಾಗಿದೆ. ನಾವು ಟೂರ್‌ ಮುಗಿಸಿ ಚೆನ್ನೈಗೆ ಹೋಗುವವರೆಗೂ ಎಲ್ಲಿಯೂ ಮಾಂಸ ಮುಟ್ಟುವುದು ಬೇಡ. ಮನೆಯವರಿಗೂ ಹೇಳಿಬಿಡ್ತೇನೆ ಅಂದ್ರು. ಅವರು ನಂತರ ಹಾಗೆಯೇ ಮಾಡಿದರು.


ನಯಾಗರವನ್ನು ನಮ್ಮ ಜೀವಮಾನದಲ್ಲಿ ಮರೆಯಲು ಸಾಧ್ಯವಿಲ್ಲ. ಅಷ್ಟು ಅದ್ಭುತವಾಗಿದೆ. ಅಲ್ಲಿಂದ ನ್ಯೂಯಾರ್ಕ್‌ಗೆ ಹೋದೆವು. ಅಲ್ಲಿ ಎರಡು ದಿವಸ ಇದ್ದೆವು. ಟೊರೆಂಟೊದಲ್ಲಿ ಕೆಲವು ಕನ್ನಡಿಗರು ಅವರದೇ ಚಾನಲ್‌ ಮಾಡಿಕೊಂಡಿದ್ರು. ರಾಜ್‌ಕುಮಾರ್‌ ಅವರು ಬಂದಿದ್ದಾರೆ ಎಂದು ಗೊತ್ತಾದ ತಕ್ಷಣ ಒಂದು ಗಂಟೆ ಸಂಗೀತ ಕಾರ್ಯಕ್ರಮ ನಡೆಸಿಕೊಡಿ ಅಂದ್ರು. ರಾಜ್‌ಕುಮಾರ್‌ ಅವರು ಏನು ಮಾಡಲಿ ಎಂದು ನನ್ನ ಹತ್ತಿರ ಕೇಳಿದ್ರು. ಆಗ ನಾನು, ಹಾರ್ಮೊನಿಯಂ ತರಿಸಲು ಪ್ರಯತ್ನಿಸುತ್ತೇನೆ. ಅದನ್ನು ಬಾರಿಸಿಕೊಂಡು ಹಾಡಿ ಎಂದೆ. ತಾಳ, ವಾದ್ಯ ಇಲ್ಲದೇ ಹಾಡುವುದು ಕಷ್ಟವಾಗುತ್ತದಲ್ವಾ ಅಂದ್ರು. ಅಲ್ಲೊಬ್ಬ ಕೇಶವ ಎಂದಿದ್ದ ಅವನ ಹತ್ತಿರ ತಬಲ ಬಾರಿಸುವವರೂ ಯಾರದ್ರು ಇದ್ದಾರ ಎಂದೆ. ಒಬ್ಬ ಅಮೆಚೂರ್‌ ಕಲಾವಿದ ಇದ್ದಾನೆ ಎಂದ. ಕರೆಸು ಅವನನ್ನು ಎಂದೆ. ಹಾರ್ಮೊನಿಯಂ, ತಬಲಾ ಹಿಡಿದುಕೊಂಡು ಒಂದು ಗಂಟೆ ಹಾಡಿದ್ರು. ನ್ಯೂಯಾರ್ಕ್‌ನಲ್ಲಿ ನಮಗೂ ಮ್ಯೂಸಿಕಲ್‌ ನೈಟ್‌ ಕಾರ್ಯಕ್ರಮ ನಡೆಸಿಕೊಡಿ ಎಂದು ಒತ್ತಾಯ ಮಾಡಿದ್ರು. 50–60 ಜನ ಕನ್ನಡಿಗರು ಸೇರುತ್ತೇವೆ ಅಲ್ಲಿ ನೀವು ಹಾಡಿದ್ರೆ ಸಾಕು ಎಂದ್ರು. ನ್ಯೂಯಾರ್ಕ್‌ನಲ್ಲಿ ಮಾಡಲು ಆಗಿಲ್ಲ. ವಾಷಿಂಗ್ಟನ್‌ನಲ್ಲಿ ಪುಟ್ಟ ಸಂಗೀತ ಕಚೇರಿ ನಡೆಸಿಕೊಟ್ಟೆವು. ವೈಟ್‌ಹೌಸ್‌ ನೋಡಲು ಎರಡು ಕಣ್ಣು ಸಾಲದು. ಅಲ್ಲಿಂದ ಒರ್ಲ್ಯಾಂಡೊಗೆ ಬಂದೆವು. ಡಿಸ್ನಿ ವರ್ಲ್ಡ್‌ನಲ್ಲಿ ಮೂರು ದಿವಸ ಇದೆವು. ಅದೊಂದು ವಿಭಿನ್ನ ಪ್ರಪಂಚ.


ಅಲ್ಲಿ ಕಸ ಗುಡಿಸುವವರು ತುಂಬಾ ಸುಂದರವಾಗಿರುತ್ತಿದ್ರು. ರಾಜ್‌ಕುಮಾರ್‌ ಅವರು ಅವರನ್ನು ಕಂಡು ಎಂತೆಂಥ ಹುಡುಗಿಯರು ಕಸ ಗುಡಿಸಲು ಬಂದಿದ್ದಾರಲ್ಲ. ರಾಜಕುಮಾರರನ್ನು ಬೇಕಾದ್ರು ಮದುವೆ ಆಗಬಹುದು ಅಂಥವರು ಇಲ್ಲಿ ಬಂದು ಕಸ ಗುಡಿಸುತ್ತಿದ್ದಾರಲ್ಲ ಎಂದರು. ನನಗೂ ಆಶ್ಚರ್ಯವಾಯ್ತು. ರಾಜ್‌ಕುಮಾರ್‌ ಅವರ ಪ್ರಶ್ನೆಗೆ ಉತ್ತರ ಹುಡುಕುವ ಸಲುವಾಗಿ, ಧೈರ್ಯ ಮಾಡಿ ಒಂದು ಹುಡುಗಿಯ ಬಳಿ ಹೋಗಿ, ಇಷ್ಟೊಂದು ಸುಂದರವಾಗಿದ್ದೀಯಾ, ಡಿಸ್ನಿ ವರ್ಲ್ಡ್‌ನಲ್ಲಿ ಏಕೆ ಕಸ ಗುಡಿಸುತ್ತಿದ್ದೀಯಾ ಎಂದು ಇಂಗ್ಲಿಷ್‌ನಲ್ಲಿ ಕೇಳಿದೆ. ಅದಕ್ಕವಳು, ಇದು ನನ್ನ ವೃತ್ತಿ. ನಾನು ಆರು ಗಂಟೆ ಇಲ್ಲಿ ಕೆಲಸ ಮಾಡುತ್ತೇನೆ. ನನಗೆ ಆರು ಡಾಲರ್‌ ಸಿಗುತ್ತದೆ. ನಾನು ವಿದ್ಯಾರ್ಥಿ. ಕೆಲಸ ಮಾಡಿ ದುಡ್ಡು ಸಂಪಾದಿಸುತ್ತೇನೆ ಅಂದಳು. ನಾನು ರಾಜ್‌ಕುಮಾರ್‌ ಅವರ ಬಳಿ, ಆಕೆ ವಿದ್ಯಾರ್ಥಿ. ಬಿಡುವಿನ ಅವಧಿಯಲ್ಲಿ ಇಲ್ಲಿ ಕೆಲಸ ಮಾಡಿ ದಿನಕ್ಕೆ ಆರು ಡಾಲರ್‌ ಸಂಪಾದಿಸುತ್ತಾಳೆ ಎಂದೆ. ಅವರು, ಹಂಗಾ... ಎಂದು ಹುಬ್ಬೇರಿಸಿದ್ರು. ಇದು ನಡೆದಿದ್ದು 78 ನೇ ಇಸವಿಯಲ್ಲಿ. ವಿದ್ಯೆ ಎಂದ್ರೆ ರಾಜ್‌ಕುಮಾರ್‌ ಅವರು ಬಹಳ ಬೆಲೆ ಕೊಡುತ್ತಿದ್ರು.


ಡಿಸ್ನಿ ಲ್ಯಾಂಡ್‌ನಿಂದ ಲಾಸ್ ವೇಗಾಸ್‌ಗೆ ಬಂದೆವು. ಭೂಮಿಯ ಮೇಲೆ ಸ್ವರ್ಗ ಇದೆಯಾ ಅಂದ್ರೆ ಅದಕ್ಕೆ ಉತ್ತರ ಲಾಸ್ ವೇಗಾಸ್‌. ಅಲ್ಲಿ ಹಣಕ್ಕೆ ಬೆಲೆಯೇ ಇಲ್ಲ. ಹೆಜ್ಜೆಗೊಂದು ಕ್ಯಾಸಿನೊ ಇದೆ. ಅಲ್ಲಿ ಎಂಜಿಎಂ ಗ್ರ್ಯಾಂಡ್‌ ಎಂಬ ಕ್ಯಾಸಿನೊ ಇದೆ. ಬಹಳ ದೊಡ್ಡದದು. ಅಷ್ಟು ದೊಡ್ಡ ಕ್ಯಾಸಿನೊವನ್ನು ನಾನು ನೋಡಿಯೇ ಇಲ್ಲ. ಅಲ್ಲಿ ಹದಿನಾರು ತೂಗುದೀಪಗಳಿದ್ದು, ಒಂದೊಂದು ತೂಗುದೀಪದ ತಳಭಾಗದಲ್ಲಿ ಮೂವತ್ತು ಅಡಿ ಅಗಲವಿದೆ. ಕ್ರಿಸ್ಟಲ್‌ನಿಂದ ಅವುಗಳು ಕಂಗೊಳಿಸುತ್ತವೆ. ಅದರ ಪಕ್ಕದಲ್ಲಿ ಸಂಜೆ ಡಾನ್ಸ್‌ ಕಾರ್ಯಕ್ರಮ ನಡೆಯುತ್ತಿತ್ತು. 6 ಕ್ಕೆ ಶುರುವಾಗಿ 8.30ಕ್ಕೆ ಮುಗಿಯುತ್ತಿತ್ತು. ಒಂದು ಟಿಕೆಟ್‌ಗೆ 10 ಡಾಲರ್‌. ನಾವು ಟೇಬಲ್‌ ಬುಕ್‌ ಮಾಡಿ, ಹೋಗಿ ಕುಳಿತುಕೊಂಡೆವು. ಟೇಬಲ್‌ ಮೇಲೆ ಷಾಂಪೇನ್ ಇಟ್ಟಿರುತ್ತಾರೆ. ಯಾರು ಎಷ್ಟು ಬೇಕಾದ್ರು ಕುಡಿಯಬಹುದು. ಅದ್ಭುತವಾದ ಡಾನ್ಸ್. ಒಂದರ ಮೇಲೊಂದರಂತೆ ಮೂರು ವೇದಿಕೆ ಇರುತ್ತದೆ. ಒಂದು ಸ್ಟೇಜ್‌ನಲ್ಲಿ ಕಾರ್ಯಕ್ರಮ ಮುಗಿದ ತಕ್ಷಣ ಇನ್ನೊಂದು ಸ್ಟೇಜ್‌ ಬರುತ್ತದೆ. ಒಂದು ಸ್ಟೇಜ್ ಮೇಲಕ್ಕೆ ಹೋಗಿ, ಕೆಳಗಿನ ವೇದಿಕೆ ಮೇಲೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಅದು ಮುಗಿದ ತಕ್ಷಣ, ಮೂರನೇ ಫ್ಲೋರ್‌ನಿಂದ ಡಾನ್ಸ್‌ ಪ್ರಾರಂಭವಾಗುತ್ತದೆ. ಮೂರು ವೇದಿಕೆಯಲ್ಲಿಯೂ ನಾನ್‌ಸ್ಟಾಪ್‌ ಆಗಿ ಕಾರ್ಯಕ್ರಮ ನಡೆಯುತ್ತಿರುತ್ತದೆ. ಕೊನೆಯದಾಗಿ ‘ಕ್ರೆಸೆಂಡೊ ಡಾನ್ಸ್’ ಎಂದಿರುತ್ತದೆ. ಅದು ಆ ಸಂಜೆಯ ಕೊನೆಯ ನೃತ್ಯವಾಗಿರುತ್ತದೆ. ಮೇಲಿನಿಂದ ಕೆಳಗೆ ಅಟ್ಟಗಳು ಬರುತ್ತವೆ. ಹೆಚ್ಚುಕಮ್ಮಿ ಅಟ್ಟಗಳು ನಮ್ಮ ತಲೆಯ ಮೇಲೆಯೇ ಇರುತ್ತವೆ. 125 ಹುಡುಗರು, 125 ಹುಡುಗಿಯರು ಸೇರಿದಂತೆ 250 ಜನ ಅದರ ಮೇಲೆ ಡಾನ್ಸ್‌ ಮಾಡ್ತಾರೆ. ಆ ನೃತ್ಯಗಾರರನ್ನು ಕೈತೊಳೆದು ಮುಟ್ಟಬೇಕು ಅಷ್ಟು ಸುಂದರವಾಗಿರುತ್ತಾರೆ. ಅದ್ಭುತವಾದ ಮ್ಯೂಸಿಕ್‌. ರಂಬೆ, ಊರ್ವಶಿ , ಮೇನಕೆಯವರನ್ನು ಅಲ್ಲಿ ನೋಡಬಹುದು. ರಸ್ತೆ ಉದ್ದಕ್ಕೂ ಕ್ಯಾಸಿನೊಗಳೇ. ಅಲ್ಲಿಂದ ಮುಂದೆ ಲಾಸ್‌ ಏಂಜಲೀಸ್‌ಗೆ ಹೋದೆವು.


ಮುಂದುವರಿಯುವುದು...

ಸಂದರ್ಶನ: ಕೆ.ಎಸ್‌.ಪರಮೇಶ್ವರ

40 views