ಅರಸೀಕೆರೆಯ ಬಸ್‌ ಸ್ಟ್ಯಾಂಡ್ ನಲ್ಲಿ ಸಿಕ್ಕ ಆ ಅನಾಥ ಮಗು ಮುಂದೆ ದೊಡ್ಡ ನಟನಾದ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 59


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ನರಸಿಂಹರಾಜು ಅವರು ರಾಜ್‌ಕುಮಾರ್‌ ಅವರಿಗೆ ಬಹಳ ಆಪ್ತರು. ಇವರೆಲ್ಲ ಗುಬ್ಬಿ ಕಂಪನಿಯಿಂದ ಬಂದವರು. ಜಿ.ವಿ.ಅಯ್ಯರ್‌, ಬಾಲಕೃಷ್ಣ ಅವರು ಗುಬ್ಬಿ ಕಂಪನಿಯಲ್ಲಿ ಜತೆಗಿದ್ದರು. ಬಾಲಕೃಷ್ಣ ಅವರ ಬಗ್ಗೆ ರಾಜ್‌ಕುಮಾರ್‌ ಅವರಿಗೆ ಬಹಳ ಗೌರವವಿತ್ತು. ಬಾಲಕೃಷ್ಣ ಅವರ ಜೀವನವನ್ನೇ ಒಂದು ಸಿನಿಮಾ ಮಾಡಬಹುದು. ಅವರಿಗೆ ತಂದೆ, ತಾಯಿ ಯಾರೆಂದು ಗೊತ್ತಿರಲಿಲ್ಲ. ಅರಸೀಕೆರೆಯ ಬಸ್‌ ಸ್ಟ್ಯಾಂಡ್‌ನಲ್ಲಿದ್ದ ಅವರನ್ನು ಯಾರೋ ಒಬ್ಬ ಹೆಂಗಸು ತಂದು ಸಾಕಿದರು. ಅವರನ್ನು ಆರೈಕೆ ಮಾಡಿದ್ರು. ಆ ವೇಳೆಯಲ್ಲಿ ಅವರು ಊಟ ಮಾಡದೇ ಎರಡು ದಿನ ಆಗಿತ್ತಂತೆ.


ಅವರು ಹೆಚ್ಚಿನ ಶಿಕ್ಷಣ ಪಡೆದಿರಲಿಲ್ಲ ಆದರೆ, ಬಾಲ್ಯದಲ್ಲಿಯೇ ಅವರು ಪೇಂಟಿಂಗ್‌ ಕಲಿತರು. ಒಮ್ಮೆ ನಾಟಕದ ಕಂಪನಿ ಅರಸೀಕರೆಗೆ ಬಂತು. ಆ ನಾಟಕ ಕಂಪನಿಗೆ ಹೋಗಿ ಅವರು ಸೇರಿಕೊಂಡರು. ಬಾಲ್ಯದಿಂದಲೂ ಅವರಿಗೆ ಕೊಂಚ ಕಿವಿ ಕೇಳಿಸುತ್ತಿರಲಿಲ್ಲ. ಹಾಗಾಗಿ ಅವರಿಗೆ ಲಿಪ್ ರೀಡಿಂಗ್‌ ಅಭ್ಯಾಸ ಆಗಿತ್ತು. ಮಾತನಾಡಿದ್ದು, ಗೊತ್ತಾಗದಿದ್ರೆ ಎರಡನೇ ಸಲ ಕೇಳುತ್ತಿದ್ರು. ಅದ್ಭುತ ಪೇಂಟರ್‌ ಅವರು. ಬೋರ್ಡ್‌ ಬರೆಯಲು ಹೋಗಿ ಕಂಪನಿಗೆ ಸೇರಿಕೊಂಡರು. ಆದರೆ, ನಟನೆಯೇ ಅವರ ವೃತ್ತಿ ಆಯ್ತು. ನಂತರ ಗುಬ್ಬಿ ಕಂಪನಿ ಬಂದು ಸೇರಿದ್ರು. ಕಾಮಿಡಿ ರೋಲ್‌ ಮಾಡುತ್ತಿದ್ರು. ಗುಬ್ಬಿ ಕಂಪನಿ ಮಾಡುತ್ತಿದ್ದ ಸಾಹುಕಾರ ನಾಟಕದಲ್ಲಿ ಬಾಲಕೃಷ್ಣ ಮತ್ತು ನರಸಿಂಹರಾಜು ಅವರು ಹಾಸ್ಯ ಕಲಾವಿದರಾಗಿದ್ದರು. ಅಲ್ಲಿ ಜಿ.ವಿ. ಅಯ್ಯರ್‌ ಸಾಹುಕಾರನ ಪಾತ್ರ ಮಾಡುತ್ತಿದ್ರು. ಅದೊಂದು ಹಾಸ್ಯಮಯ ನಾಟಕ. ನಕ್ಕು, ನಕ್ಕು ಸಾಕಾಗಿ ಹೋಗುತ್ತಿತ್ತು. ಆ ನಾಟಕಕ್ಕೆ ಒಳ್ಳೆಯ ಬೆಲೆ ಇತ್ತು. ಗುಬ್ಬಿ ಕಂಪನಿಯಿಂದ ರಾಜ್‌ಕುಮಾರ್ ಸಖ್ಯ ಅವರಿಗೆ ಬೆಳೆಯಿತು.ಮುಂದುವರೆಯುವುದು...

24 views