“ಅವನನ್ನು ಹಿಡಿದಾಗ ಅವನು ಅವನ ಪ್ರೇಯಸಿ ಸಂಪೂರ್ಣ ಬೆತ್ತಲಾಗಿದ್ದರು”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು ಭಾಗ 8


80ರ ದಶಕದಲ್ಲಿ ಬೆಂಗಳೂರು ನಗರದಲ್ಲಿ ಸಿಕ್ಕಾಪಟ್ಟೆ ಕಾರುಗಳ ಕಳ್ಳತನವಾಗುತ್ತಿತ್ತು. ಆ ಕಳ್ಳತನ ಬಹುತೇಕ ಪ್ರತಿಷ್ಠಿತ ಬಡಾವಣೆಗಳಾದ ಸದಾಶಿವನಗರ, ಕೋರಮಂಗಲ, ಇಂದಿರಾ ನಗರಗಳಲ್ಲಿ ಆಗುತ್ತಿತ್ತು. ಇದನ್ನು ತಡೆಯೋದು ಪೊಲೀಸರಿಗೆ ದೊಡ್ಡ ಸವಾಲಾಯಿತು.


ಏನು ಹೀಗಾಗುತ್ತಿದೆಯಲ್ಲಾ? ಎಂದು ಮಾಹಿತಿ ಕಲೆ ಹಾಕಲು ಶುರು ಮಾಡಿದಾಗ, ಕದ್ದ ಕಾರುಗಳು ಫಾರೆಸ್ಟ್‌ಕಚೇರಿಯಲ್ಲಿ ಸೀಜ್‌ಆಗಲು ಶುರುವಾಯಿತು. ಚಿಕ್ಕಮಗಳೂರು, ಹಾಸನ, ಕಾಸರಗೋಡು ಗಡಿ, ಕೇರಳದಲ್ಲಿ ಕಳುವಾದ ಕಾರುಗಳು ಸಿಗುತ್ತಿತ್ತು. ಇದರೊಳಗೆ ಶ್ರೀಗಂಧ ಕಳ್ಳರ ಕೈವಾಡ ಇದೆ ಎಂಬುದು ತಿಳಿಯಿತು.


ಒಂದಷ್ಟು ಶ್ರೀಗಂಧ ಕಳ್ಳರಿದ್ದರು. ಮೈಸೂರಿನ ಕಿಫಾಯತ್‌, ಮಡಿಕೇರಿಯ ಜಿಂಗಾ, ಹಾಸನದಲ್ಲಿ ಹಸನರ್‌, ಸುಲೇಮಾನ್‌ಎಂಬ ಕಳ್ಳರಿದ್ದರು. ಇವರೆಲ್ಲರಿಗೂ ರಘು ಎಂಬಾತ ಕಿಂಗ್‌ಪಿನ್‌ತರಹ ಒಬ್ಬ ಇದ್ದಾನೆ. ಅವನೇ ಸರ್‌ಎಲ್ಲ ಮಾಡೋದು. ಬಹಳ ಚಾಲಾಕಿ ಕಳ್ಳ ಅವನು ಎಂಬ ಮಾಹಿತಿ ಸಿಕ್ತು. ಯಾರಪ್ಪ ರಘು ಎಂದು ನೋಡಿದಾಗ, ಆತ ಮಡಿಕೇರಿ ನಿವಾಸಿ. ಅವರನನ್ನು ನೋಡಿದವರೇ ಕಡಿಮೆ ಜನ. ಅವನ ಕುರಿತು ಮಡಿಕೇರಿ ಅಧಿಕಾರಿ ಬಳಿ ವಿಚಾರಿಸಿದಾಗ, ಹೌದು, ನಾವು ಅವನನ್ನು ಹಿಡಿಯಲು ಪ್ರಯತ್ನ ಮಾಡ್ತಿದ್ದೇವೆ. ಹಿಡಿಯಲು ಪ್ರಯತ್ನಿಸಿದಾಗಲೆಲ್ಲ ತಪ್ಪಿಸಿಕೊಳ್ಳುತ್ತಾನೆ. ಗುಂಡೆಲ್ಲ ಹೊಡೆದಿದ್ದೇವೆ, ಆದ್ರೂ ತಪ್ಪಿಸಿಕೊಂಡಿದ್ದಾನೆ ಅಂದ್ರು.
ರಘುಗೆ ಒಬ್ಬ ಪ್ರೇಯಸಿ ಇದ್ದಾಳೆ. ಆಕೆ ಟಿ.ನರಸೀಪುರದವಳು ಎಂಬ ಮಾಹಿತಿ ನಮಗೆ ಸಿಕ್ತು. ಎಲ್ಲಿಯ ಬೆಂಗಳೂರು.. ಎಲ್ಲಿಯ ಮೈಸೂರು.. ಎಲ್ಲಿಯ ಮಡಿಕೇರಿ.. ಎಲ್ಲಿಯ ಟಿ.ನರಸೀಪುರ. ಇದೇನು ವಿಶೇಷವಾಗಿದ್ದೇಯಲ್ಲ ಎನಿಸಿತು.


ತುಂಬ ಸ್ಪುರದ್ರೂಪಿ ಹೆಣ್ಣುಮಗಳು. ಅವಳಿಗೋಸ್ಕರ ಜೀವ ಬಿಡುತ್ತಾನೆ ಎಂಬುದು ತಿಳಿಯಿತು. ಅಲ್ಲಿಗೆ ನಮ್ಮ ತಂಡ ಹೋಯಿತು. ಸಿ.ವಿ.ತಿಮ್ಮಯ್ಯ ಮತ್ತು ಶ್ರೀನಿವಾಸ್‌ಎಂಬ ಪೊಲೀಸರಿದ್ದರು. ಅವರಿಬ್ಬರು ಅಲ್ಲಿಗೆ ಹೋಗಿ, ಆಕೆಯ ಮನೆ ಪತ್ತೆ ಮಾಡಿದ್ರು. ಆಗ ವೈರ್‌ಲೆಸ್‌ ಮೊಬೈಲ್‌ಫೋನ್‌ಕೂಡ ಇರಲಿಲ್ಲ. 86ರ ನಂತರ ಅವೆಲ್ಲ ಬಂದಿದ್ದು. ಸೈಕಲನ್ನು ಬಾಡಿಗೆ ಪಡೆದು ಅದರಲ್ಲಿ ಸೊಪ್ಪು ಮಾರುವ ಮೂಲಕ ಪೊಲೀಸರು ಅಕ್ಕಪಕ್ಕದ ಬಳಿ ಆಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ರು. ಮನೆ ನೋಡಿದ್ವಿ, ಆದರೆ, ಆಕೆ ಇಲ್ಲ. ಯಾರೋ ದೊಡ್ಡ ವ್ಯಕ್ತಿಯನ್ನು ಇಟ್ಟುಕೊಂಡಿದ್ದಾಳೆ ಎಂದು ಜನರೆಲ್ಲ ಮಾತಾಡ್ತಾರೆ. ಅವಳ ಬಗ್ಗೆ ಅಷ್ಟು ಒಳ್ಳೆಯ ಅಭಿಪ್ರಾಯ ಇಲ್ಲ ಸರ್‌. ಅಂದು ಪೊಲೀಸರು ಹೇಳಿದ್ರು. ನಂತರ ಒಂದು ದಿನ ಈ ಪೊಲೀಸರಿಬ್ಬರ ಮಾಹಿತಿದಾರ ಅವರಿಗೆ ಫೋನ್‌ಮಾಡಿ ಆಕೆ ಬಂದಿದ್ದಾಳೆ ಎಂದು ಟ್ರಕ್‌ಕಾಲ್‌ಮಾಡಿ ತಿಳಿಸಿದ. ಮಾಹಿತಿದಾರನಿಗೆ ದುಡ್ಡು ಕೊಟ್ಟು, ಅವರು ಪೋಷಣೆ ಮಾಡಿದ್ರು.


ಇನ್ನೊಂದೆರೆಡು ದಿನಗಳಲ್ಲಿ ಹೊರಟು ಬಿಡ್ತಾಳೆ ಅಂದ. ಇವರು ಕೂಡಲೇ ಹೊರಡುತ್ತಾರೆ. ಅವರೆಲ್ಲ ಸ್ಪಲ್ಪ ದುಡ್ಡು ಇಟ್ಟುಕೊಂಡು ಹೋಗಿರುತ್ತಾರೆ. ಟಿ.ನರಸೀಪುರ ಬಸ್‌ಸ್ಟ್ಯಾಂಡ್‌ನಿಂದ ಮಾತಾಡುತ್ತಿದ್ದೇವೆ. ಆಕೆ ಮನೆ0ಯಿಂದ ಬಸ್‌ಸ್ಟ್ಯಾಂಡ್‌ಗೆ ಬಂದು ಬಿಟ್ಟಿದ್ದಾಳೆ ಅಂದು ಈ ಪೊಲೀಸರು ನಮಗೆ ಫೋನ್‌ಮಾಡಿ ಹೇಳಿದ್ರು. ಯಾವ ಬಸ್‌ಹತ್ತುತ್ತಾಳೆ ಗೊತ್ತಿಲ್ಲ. ಮೈಸೂರು ಕಡೆಯ ಬಸ್‌ಬಳಿ ನಿಂತಿದ್ದಾಳೆ ಅಂದ್ರು. ನೀವು ಅವಳನ್ನು ಫಾಲೊ ಮಾಡ್ಲೇ ಬೇಕು. ನೀವು ಎಲ್ಲಿ ಹೋಗ್ತಿರೋ ಅಲ್ಲಿ ನಿಮಗೆ ದುಡ್ಡಿನ ವ್ಯವಸ್ಥೆ ಮಾಡ್ತೇವೆ ಅಂದ್ವಿ. ಎಷ್ಟೋ ಗಂಟೆಗಳ ನಂತರ ಪೊಲೀಸರು ಫೋನ್‌ಮಾಡಿದ್ರು. ಸರ್‌, ಅವಳು ಸೀದಾ ಮೈಸೂರಿಗೆ ಬಂದಳು. ಇಲ್ಲಿಯ ಬಸ್‌ಸ್ಟ್ಯಾಂಡ್‌ನಿಂದ ಮಾತಾಡುತ್ತಿದ್ದೇವೆ ಅಂದ್ರು. ಅವಳನ್ನು ಹಿಡ್ಕೊಳ್ಳಕ್ಕೆ ಹೋಗ್ಬೇಡಿ. ಒಂದು ವೇಳೆ ಇವಳನ್ನು ಹಿಡ್ಕೊಂಡ್ರೆ ಅವನು ಎಸ್ಕೇಪ್‌ಆಗಬಹುದು ಅಂದೆ. ಅವಳು ಮಡಿಕೇರಿ ಬಸ್‌ಸ್ಟ್ಯಾಂಡ್‌ನಲ್ಲಿ ನಿಂತಿದ್ದಾಳೆ ಅಂದ್ರು. ಹಾಗಾದ್ರೆ ನೀವು ಫಾಲೋ ಮಾಡಿ ಅಂದ್ವಿ. ನಂತರ ಅವರು ಮಡಿಕೇರಿ ರೀಚ್‌ಆದ್ರು. ಟಿ.ನರಸೀಪುರದಿಂದ ಫಾಲೊ ಮಾಡುತ್ತಿದ್ರು. ಅವಳಿಗೆ ಕಿಂಚಿತ್ತೂ ಅನುಮಾನ ಬಂದಿರಲಿಲ್ಲ. ಮಡಿಕೇರಿಯಿಂದ ಆಟೊ ಹತ್ತಿದ್ಲು ಸರ್‌. ನಾವು ಏನು ಮಾಡೋದಕ್ಕೆ ಆಗಿಲ್ಲ. ನಮಗೆ ಕೂಡಲೇ ಆಟೊ ಸಿಕ್ಕಿಲ್ಲ. ಮಡಿಕೇರಿಯ ಶಾಲೆ ಪಕ್ಕದಲ್ಲಿ ಆಟೊ ಹೊರಟು ಹೋಯಿತು ಅಂದ್ರು. ನೀವು ಅಲ್ಲೇ ಇರಿ. ನಾವು ಇವತ್ತು ರಾತ್ರಿಯೊಳಗೆ ಬರ‍್ತೇವೆ. ಹೇಗೊ ಅವನ ಮನೆ ನೋಡಿದ್ದೇವೆ ಅಲ್ವಾ ಅಂದ್ವಿ.


ದೊಡ್ಡ ತಂಡ ವ್ಯಾನ್‌ನಲ್ಲಿ ಹೊರಟೆವು. ನಮ್ಮಲ್ಲಿ ಪ್ರಾರ್ಥಸ್ಮರಣೀಯ ಹಿರಿಯ ಹೆಡ್‌ಕಾನ್‌ಸ್ಪೆಬಲ್ ‌ಒಬ್ರಿದ್ರು. ಆರಡಿ ಎತ್ತರದ ಅಜಾನುಬಾಹು ದೇಹ. ಅವರ ಹೆಸರು ಕೃಷ್ಣೋಜಿ ರಾವ್‌. ಎಂಥ ಪತ್ತೇದಾರಿ ಪೊಲೀಸ್ ‌ಅಧಿಕಾರಿ ಎಂದ್ರೆ, ಸಿಸಿಬಿಯಲ್ಲಿ ಇದ್ದಾಗ ಕೊಲೆ, ದರೋಡೆ, ಕಳ್ಳತನ ಆದ್ರೆ ನಮ್ಮ ಜೊತೆಗೆ ಇವರನ್ನು ಕರೆದುಕೊಂಡು ಹೋಗುತ್ತಿದ್ವಿ. ಸ್ಥಳಕ್ಕೆ ಹೋಗಿ ಸುತ್ತ ನೋಡಿ ಪರಿಶೀಲನೆ ಮಾಡುವುದರೊಳಗೆ ಸರ್‌, ಬನ್ನಿ ಹೊಗೋಣ ಅನ್ನೋರು. ಕಮಿಷನರ್‌, ಡಿಸಿಪಿ ಬರ್ತಾರೆ ಇರಿ, ಕೃಷ್ಣೋಜಿ ರಾವ್‌ ಅವರೇ ಅಂದಾಗ, ಕಳ್ಳ ಹೊರಟು ಹೋಗಿ ಬಿಡ್ತಾನೆ. ಇದು ಯಾರು ಎಂದು ಗೊತ್ತಾಗಿದೆ ಬನ್ನಿ, ಬನ್ನಿ ಅನ್ನೋರು. ಅಂಥ ಮೇಧಾವಿ ಪೊಲೀಸ್ ‌ಅಧಿಕಾರಿ ಅವರು. ಇವರೇ ಮಾಡಿಸ್ತಾರೆ, ಇವರೇ ಹಿಡಿತಾರೆ ಎಂದು ಅವರ ಮೇಲೂ ಗೂಬೆ ಕೂರಿಸುವವರು ಇದ್ರು. ನಾನು ಈ ಹಿಂದೆ ಮೇಲಯ್ಯ ಎಂದು ಹೇಳಿದ್ನಲ್ಲಾ ಅವರ ಮೇಲೂ ಇದೇ ಕಥೆ ಕಟ್ಟುತ್ತಿದ್ರು. ‘ಕುಣಿಯಲಾಗದವಳು ನೆಲ ಡೊಂಕು ಅಂತ್ತಾಳೆ’ ಅಂತಾರಲ್ವಾ ಹಾಗೆ, ಮಾಡೋಕೆ ಆಗದವರೆಲ್ಲ ಹೀಗೆ ಗೂಬೆ ಕೂರಿಸುತ್ತಿದ್ರು. ಆದರೆ ಅವೆಲ್ಲ ಸುಳ್ಳು. ಬಹಳ ದಿಟ್ಟ ಪೊಲೀಸ್ ‌ಅಧಿಕಾರಿ ಅವರೆಲ್ಲ.


ಕೃಷ್ಣೋಜಿ ರಾವ್ ‌ಆ ತಂಡದ ಮುಖ್ಯಸ್ಥರಾಗಿದ್ರು. ಇಬ್ಬರು ಇನ್‌ಸ್ಪೆಕ್ಟರ್‌, ಇಬ್ಬರು ಸಬ್‌ಇನ್‌ಸ್ಪೆಕ್ಟರ್ ‌ಇದ್ರು. ಡ್ರೈವರ್ ‌ಸೇರಿ ಹತ್ತು ಜನ ಸ್ಥಳಕ್ಕೆ ಹೋದ್ವಿ. ನಮ್ಮ ತಂಡಕ್ಕೆ ಕೃಷ್ಣೋಜಿ ರಾವ್ ‌ಮನೆಯ ಯಜಮಾನ ಇದ್ದಂತೆ. ಮಡಿಕೇರಿ ತಲುಪಿದ್ವಿ. ನಮ್ಮ ತಂಡದವರನ್ನು ಕಾಫಿ, ಟೀ, ಊಟ, ತಿಂಡಿಗೆ ಎಲ್ಲಿ ನಿಲ್ಲಿಸಬೇಕು ಎಂದೆಲ್ಲ ಅವರೇ ಡಿಸೈಡ್ ‌ಮಾಡ್ತಿದ್ರು. ಅವರು ಯಾವ ಊಟ ಕೊಡಿಸ್ತಾರೋ ಅದನ್ನು ನಾವು ತಿನ್ನಬೇಕಿತ್ತು. ನಮಗೆ ಚಿಕನ್ ‌ಕಬಾಬ್ ‌ಬೇಕು ಅಂದ್ರೆ ಅವರು ಕೊಡಿಸ್ತಿರಲಿಲ್ಲ. ಅವರಿಗೆ ಬೇಕು ಅಂದ್ರೆ ಮಾತ್ರ ಕೊಡಿಸೋರು. ಊಟ, ತಿಂಡಿಯ ಜವಾಬ್ದಾರಿಯನ್ನು ಮನೆಯ ಹಿರಿಯರಂತೆ ವಹಿಸಿಕೊಳ್ಳೋರು.


ಮಡಿಕೇರಿ ತಲುಪಿದ್ವಿ. ಅಲ್ಲಿಯ ಪೊಲೀಸ್ ‌ಸ್ಟೇಷನ್‌ನಲ್ಲಿದ್ದ ಮೊದಲೇ ಹೋಗಿದ್ದ ಪೊಲೀಸರನ್ನು ಕರೆದುಕೊಂಡು ಹೋದ್ವಿ. ರಾತ್ರಿ 12 ಗಂಟೆ ಮೇಲೆ ದಾಳಿ ಮಾಡೋಣ ಎಂದು ಪ್ಲ್ಯಾನ್ ‌ಮಾಡಿದ್ವಿ. ಮಡಿಕೇರಿಯಲ್ಲಿ ಇಬ್ಬರು ನನ್ನ ಬ್ಯಾಚ್‌ನ ಪೊಲೀಸ್ ‌ಅಧಿಕಾರಿ ಇದ್ರು. ಒಬ್ರು ಲಾರೆನ್ಸ್. ಇನ್ನೊಬ್ರು ಕೆ.ಎನ್. ಜಿತೇಂದ್ರ ನಾಥ್‌ಎಂದು. ನನ್ನ ಆತ್ಮೀಯ ಸ್ನೇಹಿತರು ಅವರು. ನಾವು ಸಹಾಯ ಮಾಡ್ತೇವೆ ಬಿಡಿ ಅಂದ್ರು. ಲಾರೆನ್ಸ್‌ ಅವರಿಗೆ ಅಪರೇಷನ್‌ ಆಗಿತ್ತು. ಹೊರಗೆ ಬರುವ ಹಾಗಿರಲಿಲ್ಲ. ಜಿತೇಂದ್ರ ಎಲ್ಲ ಸಹಾಯ ಮಾಡ್ತಾರೆ. ನನ್ನ ಬೆಂಬಲ ಇರುತ್ತೇ ಅಂದ್ರು. ಹೊರಗಡೆ ಹೋದಾಗ ನಮಗೆ ಆ ರೀತಿಯ ಸಪೋರ್ಟ್ ‌ಅಗತ್ಯ ಇರುತ್ತೆ. ರಾತ್ರಿ 12 ಗಂಟೆಗೆ ಜಿತೇಂದ್ರ ಅವರು ಬಂದ್ರು.


ಮಡಿಕೇರಿಯಲ್ಲಿ ರಾತ್ರಿಯ ಮಂಜಿಗೆ ಎದುರುಗಡೆಯ ವ್ಯಕ್ತಿಯೂ ಕಾಣುತ್ತಿರಲಿಲ್ಲ. ಕಳ್ಳನ ಮನೆಗೆ ಹೋದ್ವಿ. ಜಿತೇಂದ್ರ ಅವರೇ ಲೀಡ್ ‌ಮಾಡಿದ್ರು. ನಮ್ಮ ಪೊಲೀಸ್‌ನವರು ಯಾರೋ ಇದೇ ಮನೆ ಅಂದ್ರು. ನುಗ್ಗಿ ಬಿಟ್ವಿ. ಅದು ನೋಡಿದ್ರೆ, ನಿವೃತ್ತ ಸೇನಾ ಅಧಿಕಾರಿ ಮನೆ. ಅವರು ಗುಂಡು ಹಾಕಿಕೊಂಡು ಕೂತಿದ್ರು. ಗನ್ ‌ಎತ್ತಿಕೊಂಡ್ರು. ಕೊಡಗು ಭಾಷೆಯಲ್ಲಿ ಕೆಟ್ಟದಾಗಿ ಬೈದ್ರು. ಯಾವಾಗಲೂ ಕಳ್ಳನ ಮನೆಗೆ ಹೋಗುವ ಬದ್ಲು ನನ್ನ ಮನೆಗೆ ಬಂದು ತೊಂದರೆ ಕೊಡ್ತೀರಾ, ಸುಟ್ಟು ಬಿಡ್ತೀನಿ ಎಂದು ಗನ್ ‌ಎತ್ತಿ ನಿಂತುಕೊಂಡ್ರು. ನಮ್ಮ ಪುಣ್ಯಕ್ಕೆ ಜಿತೇಂದ್ರ ನಾಥ್ ‌ಯೂನಿಫಾರಂನಲ್ಲಿ ಬಂದಿದ್ರು. ನಾವೆಲ್ಲ ಸಿಸಿಬಿಯವರು ಮಫ್ತಿಯಲ್ಲಿ ಇದ್ವಿ. ಜಿತೇಂದ್ರನಾಥ್ ‌ಅವರು ತಕ್ಷಣ ಕೊಡಗು ಭಾಷೆಯಲ್ಲಿ ಮಾತಾಡಲು ಶುರು ಮಾಡಿದ್ರು. ಅಂಕಲ್ ‌ನಾವು ಪೊಲೀಸ್ ‌ಅಂದ್ರು. ಪೊಲೀಸ್ ‌ಆದ್ರೇನು, ಎಂದು ಕೆಟ್ಟ ಭಾಷೆಯಲ್ಲಿ ಬೈಯಲು ಶುರು ಹಚ್ಚಿಕೊಂಡ್ರು. ನಮಗೆ ಯಾಕಪ್ಪ ಬೇಕು ಈ ನಡುರಾತ್ರಿಯಲ್ಲಿ ಇಂಥ ಬೈಗುಳ ಅಂಥ ಅನಿಸಿತು. ಕತ್ತಲಲ್ಲಿ ಯಾರಿಗೊ ಗುಂಡು ಹೊಡೆದು ಯಾರಿಗೋ ಬಿದ್ದು ಅಂಥ ಭಯ ಶುರುವಾಯಿತು. ಜಿತೇಂದ್ರ ನಾಥ್ ‌ಮತ್ತೆ ಮಾತಾಡಿದ ನಂತರ, ಆಮೇಲೆ ಕರೆದು ಹುಷಾರಪ್ಪ, ಕಳ್ಳ ನಮ್ಮನೆಗ್ಯಾಕೆ ಬರ್ತಾನೆ ಅಂಥೆಲ್ಲ ಅಂದ್ರು.


ನೆಲದಲ್ಲಿ ಕಾಲಿಟ್ರೆ ಜಾರುತ್ತೆ ಅಷ್ಟು ಮಳೆ, ಚಳಿ ಇತ್ತು. ನಂತರ ಆ ನಿವೃತ್ತ ಸೇನಾಧಿಕಾರಿಯೇ ಕಳ್ಳನ ಮನೆ ತೋರಿಸಿ, ಅದೇ ಅವನ ಮನೆ ಅಂದ್ರು. ಹೋಗಿ ದಾಳಿ ಮಾಡ್ರಿ, ಅಂಥವರನ್ನೆಲ್ಲ ಬಡೀರಿ ಅಂದ್ರು. ಆ ಮನೆ ದಾಳಿ ಮಾಡಿದ್ವಿ. ಅಲ್ಲಿ ಜನ ಇದ್ರು. ಆದರೆ, ರಘು ಇರಲಿಲ್ಲ. ಅವಳು ಇರಲಿಲ್ಲ. ಆಗ ರಘು ತಮ್ಮ ಸಿಕ್ಕಿದ. ಅವನನ್ನು ಕರೆದುಕೊಂಡು ಬರೋದಕ್ಕೆ ನೋಡಿದ್ರೆ ಆತನ ತಾಯಿ ಅಡ್ಡಿ ಪಡಿಸಿದಳು. ರಘು ಬೇಕು ಎಂದಾಗ ಅವನು ಬಂದೇ ಇಲ್ಲ ಅಂದ್ಲು. ಆ ಹುಡುಗಿ ಬಂದಿಲ್ವಾ ಅಂದ್ವಿ. ಆ ಹುಡುಗಿ ಹೆಸರು ಗೀತಾ ಬಾಯಿ ಅಂತೇನೊ ಇತ್ತು. ಅವಳ್ಯಾಕೆ ಬರ್ತಾಳೆ ನಮ್ಮನೆಗೆ ಎಂದು ಗಲಾಟೆ ಮಾಡಿದ್ಲು. ಆ ರಸ್ತೆಯಲ್ಲಿ ಆಕೆ ಲಗೇಜ್ ‌ತಗೊಂಡು ಬಂದಿದ್ದನ್ನು ಪೊಲೀಸರು ನೋಡಿದ್ದಾರೆ. ಇನ್ನೇಲ್ಲಿ ಹೋಗೊಕ್ಕೆ ಸಾಧ್ಯ ಅವಳು. ಎಷ್ಟು ಕೇಳಿದ್ರು ಅವರು ಹೇಳಕ್ಕೆ ತಯಾರಿಲಿಲ್ಲ. ಗಲಾಟೆ, ಶುರು ಮಾಡಿದ್ರು. ತಮ್ಮನನ್ನು ಎತ್ತಾಕೊಂಡು ಬಂದುಬಿಟ್ವಿ.


ಮಡಿಕೇರಿಯಿಂದ ಹತ್ತು ಕಿ.ಮೀ. ಹೋಗೊಕ್ಕೆ ಆಗುತ್ತಿರಲಿಲ್ಲ. ನಮ್ಮ ಗಾಡಿಗೆ ಫಾಗ್‌ ಲ್ಯಾಂಪ್‌ಇರಲಿಲ್ಲ. ಒಂದು ಸ್ವಲ್ಪ ತಪ್ಪಿದ್ರೂ, ಹಳ್ಳಕ್ಕೆ ಬೀಳುತ್ತಿದ್ದೆವು. ಮಂಗಳೂರು ರಸ್ತೆಗೆ ಇಳಿಸಿ, ಎರಡು ಬಿಟ್ವಿ ಅವನಿಗೆ. ನೀನು ಹೇಳದಿದ್ರೆ ನಿನಗೆ ತೊಂದರೆ ಇದೆ ಅಂದ್ವಿ. ಹೊಡಿಬೇಡಿ ಸರ್‌ ಅಂದ. ಸರಿ, ಎಲ್ಲಿದ್ದಾನೆ ಹೇಳಿಬಿಡು ನಿನ್ನನ್ನು ಗೌರವವಾಗಿ ಬಿಡ್ತೇವೆ ಅಂದ್ವಿ. ಸರಿ ಹೇಳ್ತೀನಿ, ಆದರೆ, ನನಗೆ ಹೊಡಿಬಾರದು, ಕೇಸ್ ‌ಹಾಕಬಾರದು ಅಂದ. ನಾನು ಮಾತುಕೊಡ್ತೇನೆ, ಅದೆಲ್ಲ ಮಾಡೋದೆ ಇಲ್ಲ ಅಂದೆ. ಬೆಂಗಳೂರಿನಿಂದ ಬಂದಿರುವ ಸಿಸಿಬಿ ಪೊಲೀಸ್‌ನವರು ನಾವು ಅಂದ್ವಿ. ಅದಕ್ಕೆ ಸಿಸಿಬಿಯವರು ಬಹಳ ಟಫ್‌ ಅಂತೆ ಅಂದ. ಜಿತೇಂದ್ರ ಅವರು ಆತನಿಗೆ ಅಡ್ವೈಸ್‌ಮಾಡಿದ್ರು. ನೀನು ಹೇಳಿಲ್ಲ ಅಂದ್ರೆ ಜೀವನವನ್ನೇ ನರಕ ಮಾಡ್ತೇವೆ.. ಅವರ ಜೊತೆ ಹೋಗಿ ಸಹಕರಿಸು. ಅವರೇನು ಮಾಡಲ್ಲ ನಾನು ಜವಾಬ್ದಾರಿ ಅಂದ್ರು.


ಗೀತಾಬಾಯಿ ಮನೆಗೆ ಬಂದಿದ್ಲು. ಸುಳ್ಯದಲ್ಲಿ ನಮ್ಮ ಸಂಬಂಧಿಕರ ಮನೆಯಿದೆ. ಅಲ್ಲಿಗೆ ಹೋಗಿದ್ದಾರೆ. ದಯವಿಟ್ಟು ನನ್ನ ಬಿಟ್ಟುಬಿಡಿ ಸರ್‌ ಅಂದ. ಮಡಿಕೇರಿಯಿಂದ ಸುಳ್ಯಕ್ಕೆ ಹೋಗಬೇಕು. ನದಿಗಳು, ತೊರೆಗಳು ತುಂಬಿ ಹರಿಯುತ್ತಿವೆ. ಆ ಶಬ್ದವೇ ಭಯಾನಕ. ಗಾಡಿ ವೈಪರ್ ‌ಸರಿ ಇರಲಿಲ್ಲ. ಚಾರ್‌ಮಿನಾರ್ ‌ಸಿಗರೆಟ್ ‌ಹಾಕಿ ಗಾಜನ್ನು ಉಜ್ಜುತ್ತಿದ್ರು. ನೀರು ಜಾರುತ್ತಿತ್ತು. ಅದೊಂದು ಟೆಕ್ನಾಲಜಿ ಪೊಲೀಸ್‌ನವರದು. ತಲೆ ಗಾಡಿಯಿಂದ ಹೊರಗೆ ಹಾಕಿ ಉಜ್ಜಬೇಕು. ಮಂಜು ಮಳೆಗೆ ತಲೆ ಕೊಡಬೇಕು.

ಸುಳ್ಯ ತಲುಪಿದೆವು. ದೊಡ್ಡ ಆರೇಳು ಮೀಟರ್‌ಅಗಲದ ತೊರೆ. ಪ್ರವಾಹ ಹರಿದ ಹಾಗೆ ನೀರು ಹರಿಯುತ್ತಿತ್ತು. ಅದರ ಮೇಲೆ ಪಾಲೆ ಅಂಥ ಹಾಕಿರುತ್ತಾರೆ. ಈ ಕಡೆಯಿಂದ ಆ ಕಡೆ ಹೋಗಲು ಮರದಿಂದ ಬ್ರಿಡ್ಜ್ ‌ತರಹ ಮಾಡಿರುತ್ತಾರೆ. ಇದನ್ನು ದಾಟಿ ಹೋಗಬೇಕು. ಅದೇ ಮನೆ ಎಂದು ತೋರಿಸಿದ. ಅವನು ಕೂಗಿಕೊಂಡ್ರೆ ಕಳ್ಳ ಓಡಿ ಹೋಗ್ತಾನೆ ಅಂತ, ಅವನ ಬಾಯಿಗೆ ಬಟ್ಟೆ ಕಟ್ಟಿದ್ವಿ. ತೊರೆ ಮೇಲೆ ಹೋಗುವಾಗ ದಿಂಬಿ ಮೇಲೆ ಆತ ಅಲ್ಲಾಡಿದ್ರೆ ಎಲ್ಲ ನೀರಿಗೆ ಬೀಳ್ತೇವೆ ಬಹಳ ಕಷ್ಟ ಆಗುತ್ತದೆ ಎಂದು ಪೊಲೀಸ್ ‌ಒಬ್ರು ಹೇಳಿದ್ರು. ಆಮೇಲೆ ಅವನಿಗೆ ಹೇಳಿದ್ವಿ, ಏನಾದ್ರು ಹೆಚ್ಚು ಕಮ್ಮಿ ಆದ್ರೆ ನಿನ್ನನ್ನು ಸುಮ್ನೆ ಬಿಡೊಲ್ಲ ಎಂದು. ಇಲ್ಲ ಸರ್‌, ಬನ್ನಿ ಫಾಲೊ ಮಾಡ್ಕೊಂಡು ಅಂದ. ನಮ್ಮ ಗಾಡಿಯಲ್ಲಿ ವಯಸ್ಸಾಗಿರೋ ಇನ್‌ಸ್ಪೆಕ್ಟರೊಬ್ಬರನ್ನು ಅಲ್ಲಿಯೇ ಬಿಟ್ವಿ. ಬಾಕಿ ಎಲ್ಲರು ಹೋದೆವು. ಕೃಷ್ಣೋಜಿರಾವ್‌ ಅವರಿಗೆ ಕತ್ತಲಲ್ಲಿ ಸ್ವಲ್ಪ ಕಾಣುತ್ತಿರಲಿಲ್ಲ. ಅವರಿಗೆ ಗಾಡಿಯಲ್ಲೇ ಇರಿ ಅಂದ್ವಿ. ಅದಕ್ಕೆ, ಇಲ್ಲ ನಾನು ಬರ್ತೇನೆ. ಹುಡುಗಾಟಿಕೆ ಅವರು ನೀವು ಏನಾದ್ರು ಮಾಡ್ಕೊಂಡು ಬಿಡ್ತೀರಾ, ನಾನು ಬರ್ತೇನೆ ಅಂದ್ರು. ಆ ತೊರೆ ದಾಟಿಕೊಂಡು ಆ ಕಡೆ ಹೋದ್ವಿ. ತೋಟದ ಮನೆ ಇತ್ತು. ಸುತ್ತ ತೋಟ, ಆ ಕಡೆ ಕಾಡು. ನಾಯಿಗಳು ಬೊಗಳಲು ಶುರು ಮಾಡಿದ್ವು. ಮನೆಯೊಳಗೆ ಚರಚರ ಶಬ್ದ ಶುರುವಾಯಿತು. ಈ ಕೃಷ್ಣೋಜಿರಾವ್ ‌ಗೇಟ್‌ನಲ್ಲಿ ನಿಂತುಕೊಂಡ್ರು. ಆಗ ನಮ್ಮಲ್ಲೇ ಇದ್ದ ಅವರಿಗಾಗದ ಪೊಲೀಸ್‌ನವರು, ನೋಡಿ ನಮ್ಮನ್ನು ಕರೆದುಕೊಂಡು ಬಂದು ಅಲ್ಲೇ ನಿಂತುಕೊಂಡ್ರು. ಭಯ ನೋಡಿ ಅಂದ್ರು. ಕೃಷ್ಣೋಜಿ ರಾವ್ ‌ಅವರು ಅಲ್ಲಿ ಹೋಗಿ, ಇಲ್ಲಿ ನಿಂತುಕೊಳ್ಳಿ ಅಂತಿದ್ರು. ಆಗ ಅವರು, ನೋಡಿ ಸರ್‌, ಅವರು ಸೇಫ್‌ ಜಾಗದಲ್ಲಿ ನಿಂತಿದ್ದಾರೆ. ನೀವೇನ್ ‌ಸರ್‌, ಅವನಿಗೆ ನುಗ್ಗೋಕೆ ಹೇಳಿ ಸರ್ ‌ಅಂತಿದ್ರು. ಏ ಸುಮ್ನೀರಿ ಅಂದೆ. ಆಗ ಕೃಷ್ಣೋಜಿ ರಾವ್‌ ನನ್ನ ಜೊತೆ ನಿಂತುಕೊಳ್ಳಿ ಎಂದು ನನ್ನನ್ನು ಕರೆದ್ರು. ನಮ್ಮ ಹತ್ತಿರ ಪಿಸ್ತೂಲ್ ಇರುತ್ತೆ. ಅವರ ಹತ್ತಿರ ಇರೊಲ್ಲ.

ಮನೆ ದಾಳಿ ಮಾಡಿ, ಎಲ್ಲ ನುಗ್ಗಿದ್ರು. ಇದಕ್ಕಿದ್ದಂತೆ. ದನದ ಕೊಟ್ಟಿಗೆ ಬಳಿ ಚರಚರ ಶಬ್ದ ಬಂತು. ಸರ್‌, ಆ ಕಡೆ ಕವರ್ ‌ಮಾಡಿ ಎಂದ್ರು. ಒಳಗೆ ಹೋದಾಗ ಅಟ್ಟದ ಮೇಲೆ ಚಲನವಲನ ಕಾಣಿಸಿತು. ಅಲ್ಲಿ ನುಗ್ಗಿ ಎಂದು ಅಡ್ಡ ಹಾಕಿದ್ರು. ಒಳಗೆ ಹೋಗಿ ನೋಡಿದಾಗ ಇಬ್ಬರೂ ಸಂಪೂರ್ಣ ಬೆತ್ತಲಾಗಿದ್ರು.


ಮುಂದುವರೆಯುವುದು…


ಸಂದರ್ಶಕರು - ಕೆ.ಎಸ್. ಪರಮೇಶ್ವರ


35 views