
ಅವರ ಎದುರಲ್ಲೇ ನನ್ನ ಹೊಗಳಿದಾಗ ವಿಷ್ಣು ಮಾಡಿದ್ದೇನು
ಮಿಮಿಕ್ರಿ ದಯಾನಂದ ಲೈಫ್ಸ್ಟೋರಿ ಭಾಗ 84

ವಿಷ್ಣುವರ್ಧನ್ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿದ್ದ ಸಂದರ್ಭದಲ್ಲಿ ಇನ್ನೊಂದು ಘಟನೆ ನಡೆಯಿತು. ಅದನ್ನು ನನಗೆ ಮರೆಯಲು ಸಾಧ್ಯವೇ ಇಲ್ಲ. ನಾನು ನಿಂತಿದ್ದೆ. ನನ್ನ ಮುಖಕ್ಕೆ ಎದುರಾಗಿ ವಿಷ್ಣುವರ್ಧನ್ ನಿಂತಿದ್ರು. ಅವರ ಹಿಂದಿನಿಂದ ಬಂದ ಕುಟುಂಬವೊಂದು ನಮಸ್ಕಾರ ದಯಾನಂದ್ ಅವರೇ. ತುಂಬಾ ಚೆನ್ನಾಗಿ ವಿಷ್ಣುವರ್ಧನ್, ರಾಜ್ಕುಮಾರ್ ಅವರ ಅನುಕರಣೆ ಮಾಡ್ತೀರ ನೀವು. ಅದರಲ್ಲೂ ವಿಷ್ಣುವರ್ಧನ್ ಅವರ ಡ್ಯಾನ್ಸ್, ಸ್ಕಾರ್ಫ್ ಹಾಕಿಕೊಳ್ಳುವ ಶೈಲಿ ಬಹಳ ಚೆನ್ನಾಗಿರುತ್ತೆ ಎಂದ್ರು. ನಾನು ವಿಷ್ಣುವರ್ಧನ್ ಅವರನ್ನು ನೋಡಿದೆ. ಅದಕ್ಕವರು ನೋ.. ಹೇಳಬೇಡಿ ಎಂದ್ರು. ನಾನು ಆಯ್ತಮ್ಮ, ಥ್ಯಾಂಕ್ಸ್ ಎಂದೆ. ಅವರು ತುಂಬಾ ಚೆನ್ನಾಗಿರತ್ತೇ ಎಂದು ಹೇಳಿ ಹೋದ್ರು.
ಆಗ ವಿಷ್ಣುವರ್ಧನ್ ಅವರು, ಜನ ನಮ್ಮ ಮುಂದೆ ಮಾತನಾಡುವುದು ಮುಖ್ಯವಲ್ಲ. ನಮ್ಮ ಹಿಂದೆ ಏನು ಹೇಳ್ತಾರೆ ಎಂಬುದು ಮುಖ್ಯ. ನಮ್ಮ ಆ್ಯಕ್ಟಿಂಗ್ ಮಾಡಿದ್ದಕ್ಕೆ ನಿಮ್ಮನ್ನೇ ಅಷ್ಟು ಹೊಗಳುತ್ತಿದ್ದಾರೆ ಅಲ್ವಾ ಅವರು, ನಾವೆಲ್ಲ ಧನ್ಯಾರೀ ಎಂದ್ರು. ಏನು ಹೇಳುವ ಇಂತಹ ವ್ಯಕ್ತಿತ್ವಕ್ಕೆ. ಬೆಂಗಳೂರು ಏರ್ಪೋರ್ಟ್ನಲ್ಲಿ ಇಳಿದ್ವಿ. ನನ್ನ ಕಾರು ಬರುತ್ತೆ ನೀವು ಹೋಗಿ ಸರ್ ಎಂದೆ. ನಿಮ್ಮ ಕಾರು ಮೊದಲು ಬರ್ಲಿ. ನಿಮ್ಮ ಕಾರು ನೋಡಬೇಕು ಎಂದ್ರು. ನನ್ನ ಬಳಿ ಕಾರು ಇತ್ತು. ಆದರೆ ಅಲ್ಲಿಗೆ ಅವತ್ತು ಬಂದಿರಲಿಲ್ಲ. ನಾನು ಎಷ್ಟು ಬೇಡ ಅಂದ್ರು ಬಿಡದೇ ಅವರ ಕಾರಿನಲ್ಲಿಯೇ ನನಗೆ ಡ್ರಾಪ್ ಕೊಟ್ರು.
ಮುಂದು ವರೆಯುವುದು...