ಅವರು ಗುಂಡು ಹಾಕ್ತಾ ಮಾತಾಡಿದ್ದನ್ನ ಗುಂಡಗೇ ಬರಿಯೋದು ನನ್ನ ಕೆಲಸ

ಮೇಕಿಂಗ್ ಸ್ಟೋರೀಸ್ ಆಫ್ ಮಾಲ್ಗುಡಿ ಡೇಸ್ - ಭಾಗ 128

(ಶಂಕರ್ ನಾಗ್ ಅವರ‌ ಒಡನಾಡಿ‌ ಬಿ.ಸುರೇಶ ಅವರ ನೆನಪುಗಳು)ಅವ್ರು ಆಕ್ಸಿಡೆಂಟ್ ಸಿನಿಮಾದ ಚಿತ್ರಕತೆ ಮಾಡ್ತಾ ಇದ್ದ ಸಮಯದಲ್ಲಿ “ನೀನು ಬರ್ಬೇಕು ಸಾಯಂಕಾಲ”ಅಂತಿದ್ರು. ಪ್ಯಾಕ್ಟರಿನಲ್ಲಿ ಕೆಲಸ ಮುಗಿಯೋದು ನಾಲ್ಕುವರೆ ಗಂಟೆಗೆ. ಯಶವಂತಪುರದಿಂದ ಸಿಂಗಸಂದ್ರಕ್ಕೆ ಬೈಕಿನಲ್ಲಿ ಹೋಗ್ತಿದ್ದೆ. ನನ್ನ ಕೆಲಸ ಏನಂದ್ರೆ ಇವ್ರೆಲ್ಲಾ ಆಡ್ತಾ ಇದ್ದಂತಹ ಮಾತನ್ನ ಗುಂಡಗೆ ಬರೆಯುವುದು. ನನಿಗೆ ಅವಾಗ ಸಿನಿಮಾದ ವ್ಯಾಕರಣ, ಸಿನಿಮಾ ಹೇಗೆ ಕೆಲ್ಸ ಮಾಡುತ್ತೆ ಅದ್ಯಾವುದೂ ಕೂಡ ಗೊತ್ತಿರ್ಲಿಲ್ಲ. ಅದನ್ನ ಹೇಗೆ ಹೇಳಬಹುದು ಅಂದ್ರೆ ಅವ್ರು ಗುಂಡು ಹಾಕಿಕೊಂಡು ಮಾತಾಡುತ್ತಿದ್ದದ್ದನ್ನ ನಾನು ಗುಂಡಗೆ ಬರೆಯುತ್ತಿದ್ದೆ, ಅಂತ. ಇನ್ನೇನೂ ಕೆಲ್ಸ ಇರ್ಲಿಲ್ಲ ನನಿಗೆ.

ರಂಗಣ್ಣಿ, ನರಸಿಂಹನ್, ವಸಂತ್ ಮುಕಾಶಿ ಅಂತಹ ಬ್ರಿಲಿಯಂಟ್ ಪೀಪಲ್ಸ್ ವರ್ ದೇರ್. ನಾನು ಒಂದು ನಾಲ್ಕೈದು ದಿವ್ಸ ಅವ್ರ ಹತ್ರ ಹೋಗಿ ಆ ಕೆಲಸಗಳನ್ನ ಮಾಡ್ತಾ ಇದ್ದೆ. ನಾನು ನಾಲ್ಕುವರೆ ಗಂಟೆಗೆ ಹೊರಟರೆ ಸುಮಾರು ಆರು ಗಂಟೆಗೆ ಅವ್ರ ಮನೆ ತಲುಪ್ತಾ ಇರ್ತಿದ್ದೆ. ತಲುಪಿದ ತಕ್ಷಣ ಆರುಂಧತಿ ಅವ್ರು ಅಥವಾ ನಮ್ಮ ಜಗದೀಶ್ ಮಲ್ನಾಡ್ ಯಾರಾದ್ರೂ ನನಿಗೆ ಟೀ ಮಾಡಿ ಕೊಡ್ತಿದ್ರು. ಆರುವರೆ ಗಂಟೆಗೆ ಶಂಕರ್ ಬರ್ತಿದ್ರು, ಇನ್ನುಳಿದವ್ರೆಲ್ಲಾ ಸೇರುವಾಗ ಏಳು ಗಂಟೆ ಆಗ್ತಿತ್ತು. ಅವ್ರು ಆಡಿದ ಮಾತುಗಳನ್ನೆಲ್ಲಾ ಬರೆಯುವುದು ನಾನು. ರಾತ್ರಿ ಒಂದು ಗಂಟೆ ಆಗ್ಬಿಡ್ತಾ ಇತ್ತು. ಎಲ್ರೂ ಮಲ್ಗಕ್ಕೆ ಹೊರಡುವಾಗ ನಾನು ಹೊರಡ್ತೀನಿ ಅಂತ ಹೇಳ್ತಿದ್ದೆ. ಆಗ ಅವ್ರು “ರಾತ್ರಿ ಒಂದು ಗಂಟೆಗೆ ನೀನೊಬ್ಬನೇ ಹೋಗೋದಾ? ನಿನ್ಹತ್ರ ಬೈಕ್ ಇದ್ರೆ ಹೋಗ್ಬಹುದು ಅಂತನಾ?” ಅನ್ನೋರು.ಮುಂದುವರೆಯುವುದು…

31 views