ಆದರ್ಶ ಫಿಲ್ಮ್‌ ಇನ್ ಸ್ಟಿಟ್ಯೂಟ್‌ & ನಟರು


ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 50


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
‘ಅಂಬರೀಷ’ ಸಿನಿಮಾ ಮಾಡಬೇಕು ಎಂದು ಸ್ವಲ್ಪ ಒಡಾಡಿದೆವು. ಆದರೆ ಅವರು ಮನಸ್ಸು ಮಾಡಲಿಲ್ಲ. ಇಷ್ಟವಿಲ್ಲ ಎಂದು ಕಾಲ ತಳ್ಳಿದ್ರು. ಅದೇ ವೇಳೆಗೆ ಅಂದ್ರೆ 1995 ರಲ್ಲಿ ಆದರ್ಶ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗೆ ಪ್ರಿನ್ಸಿಪಾಲ್‌ ಆಗುತ್ತೀರಾ ಎಂದು ಸರ್ಕಾರದಿಂದ ನನಗೆ ಕರೆ ಬಂತು. ರಾಜ್‌ಕುಮಾರ್‌ ಸಿನಿಮಾದಲ್ಲಿ ಮಾಡುವುದಿಲ್ಲ ಅಂದುಬಿಟ್ಟಿದ್ರಲ್ಲಾ ಹಾಗಾಗಿ, ನಮಗೂ ಆಗ ಕೆಲಸ ಇರಲಿಲ್ಲ. ಆದ್ದರಿಂದ, ನಾನು ಒಪ್ಪಿಕೊಂಡೆ. ದೊರೆಯವರಿಗೆ ಹೇಳಿದೆ. ಅವರೂ ಒಳ್ಳೆಯ ಕೆಲಸ ಹೋಗು ಅಂದಿದ್ರು. ಪ್ರತಿ ಎರಡು ವರ್ಷಕ್ಕೊಮ್ಮೆ ಅಲ್ಲಿ ಪ್ರಿನ್ಸಿಪಾಲರನ್ನು ಬದಲಾಯಿಸಬೇಕು. ಆದ್ರೆ, ನನ್ನನ್ನ 9 ವರ್ಷ ಬದಲಾಯಿಸದೇ ಉಳಿಸಿಕೊಂಡ್ರು. ನನ್ನ ಪಾಠ, ಹುಡುಗರನ್ನು ನೋಡಿಕೊಳ್ಳುತ್ತಿದ್ದ ರೀತಿ ತುಂಬಾ ಚೆನ್ನಾಗಿತ್ತು.


ಸಂಸ್ಥೆಗೆ ನಾನು ಹೋದಾಗ 16 ಹುಡುಗರಿದ್ರು. ಸಂಸ್ಥೆ ಬಿಡುವಾಗ 106 ಜನ ಇದ್ರು. ಮೂರು ಸೆಕ್ಷನ್‌ ಮಾಡಿದ್ದೆ. ಎರಡು ಹೆಸರಘಟ್ಟದಲ್ಲಿ. ಒಂದು ಮಲ್ವೇಶ್ವರಂದಲ್ಲಿ ಇದೆ. ಬೆಂಗಳೂರಿನವರನ್ನು ಮಲ್ಲೇಶ್ವರಂಗೆ ಬೇರೆ ಊರಿನಿಂದ ಬಂದವರನ್ನು ಹೆಸರುಘಟ್ಟಕ್ಕೆ ಹಾಕುತ್ತಿದ್ದೆ. ಅಲ್ಲಿ ನಮ್ಮ ಹಾಸ್ಟೆಲ್‌ ಕೂಡ ಇತ್ತು. ಅಲ್ಲಿ ಕಲಿತವರು ಎಷ್ಟೋ ಜನ ಹೆಸರು ಗಳಿಸಿದ್ದಾರೆ. ಗೋಲ್ಡನ್‌ ಸ್ಟಾರ್‌ ಗಣೇಶ್‌, ಮೇಘನಾ ಗಾಂವ್ಕರ್‌, ಪ್ರಿಯಾ ಹಾಸನ್‌, ಅನುತೇಜ... ಹೀಗೆ ಸಾಕಷ್ಟು ಮಂದಿ ಇದ್ದಾರೆ. ಆದರ್ಶ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತಿ ಪಡೆದ 200–250 ಜನ ಬಣ್ಣದ ಲೋಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿಯ ವಾರ್ಷಿಕ ಶುಲ್ಕ 25 ಸಾವಿರ.
ಮುಂದುವರೆಯುವುದು...

20 views