“ಆಪರೇಷನ್‌ ಶಿವರಸನ್‌ & ಶೋಭಾ ಇಂಚಿಂಚು ವಿವರ”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು ಭಾಗ 13


ಪೊಲೀಸ್ ವ್ಯವಸ್ಥೆಯಲ್ಲಿ ತನಿಖೆ ಬಹಳ ಮುಖ್ಯವಾದುದು. ನಮ್ಮ ದೇಶದ ಇತಿಹಾಸದ ಬಹುದೊಡ್ಡ, ವ್ಯವಸ್ಥಿತ ಮತ್ತು ತಾಂತ್ರಿಕ ಶ್ರೀಮಂತಿಕೆಯ ತನಿಖೆಯೆಂದರೆ ದೇಶದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆಯ ಪತ್ತೇದಾರಿಕೆ. ದೇಶದ ಎಲ್ಲಾ ತನಿಖಾ ಸಂಸ್ಥೆಗಳು, ಪೊಲೀಸರು, ಮಾಧ್ಯಮದವರು, ಟೆಲಿಫೋನ್‌ ಎಕ್ಸ್‌ಚೇಂಜ್‌ ಅವರು, ನೌಕಾದಳ ಮತ್ತು ಸೇನಾದಳ ಕೂಡಿ ಮಾಡಿದ್ದಂತಹ ತನಿಖೆ ಅದು.

ಎಲ್‌ಟಿಟಿಇ ಮಾನವಬಾಂಬ್‌ ಸ್ಫೋಟಿಸಿ, ಶ್ರೀಪೆರುಂಬುದೂರಿನಲ್ಲಿ ರಾಜೀವ್‌ ಗಾಂಧಿ ಹತ್ಯೆ ಮಾಡಿತ್ತು. ಈ ಘಟನೆ ಇಡೀ ಪ್ರಪಂಚವನ್ನು ಅಲ್ಲುಗಾಡಿಸಿತ್ತು. ಮಾನವಬಾಂಬ್‌ ಆತ್ಮಹತ್ಯಾದಳದವರು ಮಾಡಿದಂತಹ ಪ್ರಮುಖ ಘಟನೆ ಇದು. ಇದರ ತನಿಖೆ ಹೇಗೆ ಪ್ರಾರಂಭಿಸಬೇಕು? ತಮಿಳುನಾಡು ಪೊಲೀಸರು ನಡೆಸಬೇಕಾ? ಅಲ್ಲಿಯ ಸಿಐಡಿ ವಿಭಾಗದವರು ನಡೆಸಬೇಕಾ? ಎಂದೆಲ್ಲ ಚರ್ಚೆ ನಡೆಯುತ್ತಿತ್ತು. ತನಿಖೆಯ ಉಸ್ತುವಾರಿಯನ್ನು ಕೇಂದ್ರ ಸರ್ಕಾರ ಸಿಬಿಐಗೆ ವಹಿಸಿತು. ಸಿಬಿಐನಲ್ಲಿ ವಿಶೇಷ ದಳವನ್ನು (ಎಸ್‌ಐಟಿ) ರಚನೆ ಮಾಡಿತು. ಅದಕ್ಕೆ ಕರ್ನಾಟಕದ ಕೇಡರ್‌ನ ಹಿರಿಯ ಐಪಿಎಸ್‌ ಅಧಿಕಾರಿ ಡಿ.ಆರ್‌.ಕಾರ್ತಿಕೇಯನ್‌ ಅವರನ್ನು ನೇಮಕ ಮಾಡಲಾಯಿತು. ಅವರು ಆಗ ಕೇಂದ್ರ ಸರ್ಕಾರದ ಸೇವೆಯಲ್ಲಿದ್ರು.


ಎಲ್‌ಟಿಟಿಇಯ ದ್ವೇಷ ಸಾಧನೆ, ಹಗೆಯ ಕುರಿತು ವಿಭಿನ್ನ ಮಾಹಿತಿಗಳು ಮಾಧ್ಯಮಗಳಲ್ಲಿ ಬಂದಿದೆ. ಆದರೆ, ಈ ತನಿಖೆಯ ವಿಚಾರದಲ್ಲಿ ನಾನು ಪಾತ್ರಧಾರಿ ಆಗಿರುವುದರಿಂದ ತನಿಖೆಯ ಅಂಶಗಳ ಕುರಿತು ತಿಳಿಸಲು ಇಚ್ಚಿಸುತ್ತೇನೆ.

ರಾಜೀವ್‌ ಗಾಂಧಿ ಹತ್ಯೆಯ ನಂತರ, ಅವರ ಛಿದ್ರ ಛಿದ್ರ ದೇಹವನ್ನು ನೋಡಿ ದೇಶವೇ ಮರುಗಿತ್ತು. ಪ್ರಕರಣದ ಕುರಿತು ವಿಶೇಷ ತನಿಖಾ ದಳ ತನಿಖೆ ಪ್ರಾರಂಭಿಸದಾಗ, ಅವರಿಗೆ ಆ ತಮಿಳುನಾಡಿನಲ್ಲಿ ಕೆಲವು ಮಾಹಿತಿ ಸಿಗಲು ಆರಂಭವಾಗುತ್ತದೆ. ಅದನ್ನು ಮಾಡಿದವನು ಶಿವರಾಸನ್‌ ಎಂದು. ಅವನಿಗೆ ಒಂದು ಕಣ್ಣಿಲ್ಲ. ಎಲ್‌ಟಿಟಿಇಯ ಪ್ರಮುಖ ಕೇಡರ್‌ ಅವನು. ಪ್ರಭಾಕರನ್ ಆನಂತರದ ಸ್ಥಾನದಲ್ಲಿದ್ದ. ಅವರೆಲ್ಲ ಕತ್ತಿನಲ್ಲಿ ಸೈನೆಡ್‌ನ ಮಾತ್ರೆ ಇಟ್ಟುಕೊಂಡಿರುತ್ತಾರೆ. ಯಾವುದೇ ಕಾರಣಕ್ಕೂ ಅವರು ಪೊಲೀಸರಿಗೆ ಸಿಗುವುದಿಲ್ಲ. ಸಿಕ್ಕ ತಕ್ಷಣ ಅದನ್ನು ನುಂಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಷ್ಟೊಂದು ಬದ್ಧತೆಯ ಉಗ್ರಗಾಮಿಗಳು ಅವರು. ಭಯೋತ್ಪಾದನೆ ಇಷ್ಟು ಕ್ರೂರವಾಗಿ ಪ್ರಾರಂಭವಾಗಿದ್ದು ಬಹುಶಃ ಅವರಿಂದಲೇ ಅನಿಸುತ್ತದೆ.


ಈ ಪ್ರಕರಣದಲ್ಲಿ ಎಲ್‌ಟಿಟಿಇಯ ಶಿವರಾಸನ್‌, ಶುಭಾ ಪಾತ್ರ ಇದೆ ಎಂಬ ಕುರಿತು ಮಾಹಿತಿ ದೊರಕುತ್ತದೆ. ಹಾರ ಹಾಕಲು ಹೋಗಿದ್ದ ಧನು ಎಂಬಾಕೆ ತನ್ನನ್ನೇ ಸ್ಫೋಟಿಸಿಕೊಳ್ಳುತ್ತಾಳೆ. ಸುತ್ತಮುತ್ತ ಇದ್ದ ಒಂದಷ್ಟು ಜನ ಅಲ್ಲಿ ಮೃತಪಡುತ್ತಾರೆ. ತುಂಬಾ ಮುತುವರ್ಜಿಯಿಂದ ಮಾಡಬೇಕಾದ ತನಿಖೆ ಇದಾಗಿತ್ತು. ತನಿಖೆ ನಡೆಸುವಾಗ, ಶಿವರಾಸನ್‌ ಪಾತ್ರ ಇದೆ ಎಂಬುದು ಗೊತ್ತಾದ ತಕ್ಷಣ ಎಲ್ಲಾ ಮಾಧ್ಯಮಗಳಲ್ಲಿಯೂ ಅವನ ಛಾಯಾಚಿತ್ರವನ್ನು ಬಿತ್ತರ ಮಾಡಲಾಗುತ್ತದೆ. ಒಂದು ಹಂತದಲ್ಲಿ ತನಿಖೆ ನಿಂತು ಬಿಡುತ್ತದೆ. ಆದರೆ, ಒಮ್ಮೆ ಮುತ್ತತ್ತಿ ಬಳಿ ಒಂದು ಘಟನೆ ನಡೆಯುತ್ತದೆ. ಅಲ್ಲಿ ಯಾರೋ ಬಂದಿದ್ದಾರೆ ಅವರು ದರೋಡೆಕೋರರಿರಬಹುದು ಎಂದು ಸುತ್ತಮುತ್ತ ಹಳ್ಳಿಯವರು ಪೊಲೀಸರಿಗೆ ಮಾಹಿತಿ ಕೊಡ್ತಾರೆ. ಆಗ ಸಿ.ಕೆ. ನಾಗರಾಜ್‌ ಅಲ್ಲಿ ಇನ್‌ಸ್ಪೆಕ್ಟರ್‌ ಆಗಿದ್ರು. ಅವರು ಮತ್ತು ಸಬ್‌ಇನ್‌ಸ್ಪೆಕ್ಟರ್‌ ಮುತ್ತುರಾಯ ಆ ಪ್ರದೇಶದಲ್ಲಿ ದಾಳಿ ನಡೆಸುತ್ತಾರೆ. ದಾಳಿ ಮಾಡಿದಾಗ, ಕೆಲವರು ಸೈನೆಡ್‌ ಮಾತ್ರೆ ನುಂಗುತ್ತಾರೆ. ಆಗ ಇವರಿಗೆ ಬಹಳ ಆಶ್ಚರ್ಯ ಮತ್ತು ದಿಗ್ಭ್ರಮೆ ಆಗುತ್ತದೆ. ಕೆಲವರು ಸತ್ತು ಹೋಗ್ತಾರೆ. ಮತ್ತೆ ಕೆಲವರನ್ನು ಬದುಕಿಸಿ, ಬೆಂಗಳೂರಿಗೆ ಚಿಕಿತ್ಸೆಗೆ ಕಳುಹಿಸುತ್ತಾರೆ. ಸತ್ತು ಹೋದ ಒಬ್ಬ ವ್ಯಕ್ತಿಯ ಜೇಬಿನಲ್ಲಿ ಚೀಟಿ ಸಿಗುತ್ತದೆ. ಅದರಲ್ಲಿ ಆಂಜಿನಪ್ಪ ಕೋಣನಕುಂಟೆ ಅಂಥ ಬರೆದಿರುತ್ತದೆ. ಬೆಂಗಳೂರಿಗೆ ಅವರನ್ನೆಲ್ಲ ಕಳುಹಿಸಿದಾಗ ಅವರು ಎಲ್‌ಟಿಟಿಇಗೆ ಸೇರಿದವರು ಎಂಬುದು ತಿಳಿಯುತ್ತದೆ. ಅವರು ಒಪ್ಪಿಕೊಳ್ಳುತ್ತಾರೆ. ಇದು ಗೊತ್ತಾದ ತಕ್ಷಣ ಎಲ್‌ಟಿಟಿಇ ಅವರು ಕರ್ನಾಟಕ ಪ್ರವೇಶಿಸಿದ್ದಾರೆ ಎಂಬುದು ಗೊತ್ತಾಗುತ್ತದೆ. ಸತ್ತವನ ಜೇಬಿನಲ್ಲಿ ಸಿಕ್ಕ ಚೀಟಿಯಿಂದಾಗಿ ಅವರು ಬೆಂಗಳೂರಿಗೆ ಬಂದಿದ್ದಾರೆ ಎಂಬುದು ತಿಳಿಯುತ್ತದೆ. ಇಡೀ ಪೊಲೀಸ್‌ ವ್ಯವಸ್ಥೆ ಬೆಚ್ಚಿ ಬೀಳುತ್ತದೆ.


ಶ್ರೀಲಂಕಾ ಸರ್ಕಾರದ ವಿರುದ್ಧ ತಮಿಳು ಉಗ್ರಗಾಮಿಗಳು ಹೋರಾಟ ಮಾಡುತ್ತಿದ್ರು. ಗೆರಿಲ್ಲಾ ಮಾದರಿಯ ಯುದ್ಧವದು. ಶಸ್ತ್ರಾಸ್ತ್ರಗಳ ಮಹಾಪೂರವೇ ಅವರ ಬಳಿ ಇತ್ತು. ಸೇನೆ ಮತ್ತು ಉಗ್ರಗಾಮಿಗಳ ನಡುವಿನ ಕಾದಾಟದಲ್ಲಿ ಉಗ್ರಗಾಮಿಗಳು ಗಾಯಾಳುಗಳಾದಾಗ, ಶ್ರೀಲಂಕಾದಲ್ಲಿ ಅವರಿಗೆ ಚಿಕಿತ್ಸೆ ಪಡೆಯಲು ಆಗುತ್ತಿರಲಿಲ್ಲ. ಅಲ್ಲಿಂದ ಅವರು ತಮಿಳುನಾಡಿನ ಕೋಸ್ಟಲ್‌ ಪ್ರದೇಶಕ್ಕೆ ಸಮುದ್ರದಲ್ಲಿ ಸ್ಪೀಡ್‌ ಬೋಟ್‌ಗಳಲ್ಲಿ ಬರುತ್ತಿದ್ರು. ತೆಪ್ಪ ಅಥವಾ ಸಣ್ಣ ಬೋಟ್‌ಗಳಿಗೆ, ಹಿರೋ ಹೊಂಡಾದಂತಹ ಮೋಟಾರ್‌ ಸೈಕಲ್‌ಗಳ ಎಂಜಿನ್‌ ಹಾಕಿಕೊಂಡು ಬರುತ್ತಿದ್ರು. ಅದು ಅವರೇ ಮಾಡಿಕೊಂಡಿದ್ದ ವ್ಯವಸ್ಥೆಯಾಗಿತ್ತು. ತಮಿಳುನಾಡಿನಿಂದ ಅವರಿಗೆ ಡಿಸೇಲ್, ಪೆಟ್ರೋಲ್‌, ಕಾಫಿಪುಡಿ, ಹಾಲಿನಪುಡಿ ಸಪ್ಲೈ ಆಗುತ್ತಿತ್ತು. ಅವರ ಮೇಲೆ ಸಹಾನುಭೂತಿ ಹೊಂದಿರುವವರು ಕರ್ನಾಟಕ, ತಮಿಳುನಾಡಿನಲ್ಲಿ ತುಂಬಾ ಜನ ಇದ್ರು. ಶ್ರೀಲಂಕಾದಿಂದ ಹತ್ತು, ಹನ್ನೇರಡು ಗಂಟೆಯೊಳಗೆ ಅವರು ಬೆಂಗಳೂರು ಸೇರುತ್ತಿದ್ರು. ತಮಿಳುನಾಡಿನಿಂದ ಜಿಪ್ಸಿ ವಾಹನಗಳಿಂದ ಬೆಂಗಳೂರಿಗೆ ಬರುತ್ತಿದ್ರು. ಇಲ್ಲಿಗೆ ಬಂದು ಅವರ ಮೇಲೆ ಅನುಕಂಪ ಹೊಂದಿರುವಂತಹ ಆಸ್ಪತ್ರೆಗಳಲ್ಲಿಯೇ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿ, ಗೋಪ್ಯ ಪ್ರದೇಶದಲ್ಲಿ ಇರಿಸುತ್ತಿದ್ರು. ಕಲಾಸಿಪಾಳ್ಯ, ಇಂದಿರಾನಗರದಲ್ಲಿ ಅಂಥ ಆಸ್ಪತ್ರೆಗಳಿದ್ದವು.


ಮುತ್ತತ್ತಿಗೆ ಬಂದವರು ಗಾಯಾಳುಗಳೇ. ದರೋಡೆಕೋರರೆಂದು ಬಿಟ್ಟುಬಿಟ್ಟಿದ್ರೆ ಈ ಕೇಸ್‌ ಪತ್ತೆಯಾಗುತ್ತಿರಲಿಲ್ಲ. ಈ ದೇಶಕ್ಕೆ ಅವಮಾನ ಆಗಿಬಿಡುತ್ತಿತ್ತು. ಈ ಪ್ರಕರಣದಿಂದಾಗಿ ಅವರು ದಕ್ಷಿಣ ಭಾರತದ ತಮಿಳುನಾಡಿನಲ್ಲಿ ಮಾತ್ರವೇ ಇಲ್ಲ. ಬೇರೆ ರಾಜ್ಯಗಳಿಗೂ ಎಂಟ್ರಿ ಕೊಟ್ಟಿದ್ದಾರೆ ಎಂಬುದು ತಿಳಿಯಿತು. ಇಲ್ಲಿಯ ಎಲ್ಲ ಆಸ್ಪತ್ರೆಗಳಲ್ಲಿ ನಾವು ಚೆಕ್‌ ಮಾಡಲು ಆರಂಭಿಸಿದೆವು. ಡಬಲ್‌ ರೋಡ್‌ನಲ್ಲಿ ಒಂದು ಆಸ್ಪತ್ರೆ ಇತ್ತು. ಅಲ್ಲಿ ಕೆಲವರು ಅಡ್ಮಿಟ್‌ ಆಗಿದ್ರು. ಪೊಲೀಸ್‌ನವರು ಹೋದ ಸಂದರ್ಭದಲ್ಲಿ ಕೆಲವರು ಸೈನೆಡ್‌ ನುಂಗಿದ್ರು. ಅವರಲ್ಲಿ ಕೆಲವರನ್ನು ಬದುಕಿಸಲಾಯಿತು. ಆಗ, ಪೊಲೀಸರಿಗೆ ಸಣ್ಣ ಮಾಹಿತಿ ಲಭಿಸಿತು. ನಂತರ ಸಿಬಿಐ, ವಿಶೇಷ ತನಿಖಾ ದಳದವರೆಲ್ಲ ಅಲ್ಲಿಗೆ ಬಂದ್ರು. ಆಗ, ಸಿಬಿಐ ಅವರಿಗೆ ಒಂದು ಮಾಹಿತಿ ಸಿಕ್ತು. ಆ ಮಾಹಿತಿ ಏನಪ್ಪ ಅಂದ್ರೆ, ಹೆಚ್‌ಎಎಲ್‌ನಲ್ಲಿ ಕ್ಲಾಸ್‌4 ಉದ್ಯೋಗಿಯೊಬ್ಬ ಇದ್ದ. ಅವನು ಎನ್‌ಟಿಟಿಇ ಬಗ್ಗೆ ಬಹಳ ಅನುಕಂಪ ಹೊಂದಿದ್ದ. ಆತನನ್ನು ಸಿಬಿಐ ಕರೆದುಕೊಂಡು ಹೋಗಿ, ವಿಚಾರಣೆ ನಡೆಸುತ್ತಿದ್ರು. ಆಗ ನಾನು ವಿಲ್ಸನ್‌ ಗಾರ್ಡನ್‌ ಸಬ್‌ಇನ್‌ಸ್ಪೆಕ್ಟರ್‌ ಆಗಿದ್ದೆ. ರಮೇಶ್‌ಚಂದ್ರ ಅವರು ಆಡುಗೋಡಿ ಸಬ್‌ಇನ್‌ಸ್ಪೆಕ್ಟರ್‌ ಆಗಿದ್ರು. ನೋಡ್ರಿ ಅವನು ಸಿಕ್ಕಾಕ್ಕಿಕೊಂಡಿದ್ದಾನೆ ಸ್ವಲ್ಪ ವಿಚಾರಣೆ ಮಾಡೋಣ ಬನ್ನಿ ಎಂದು ನಮ್ಮನ್ನು ಡಿಸಿಪಿ ಕೆಂಪಯ್ಯ ಅವರು ಅಲ್ಲಿಗೆ ಕರೆದುಕೊಂಡು ಹೋಗಿದ್ರು. ಅವನು ಆರಾಮಾಗಿ ಕೂತಿದ್ದ. ಸಿಬಿಐನ ದೊಡ್ಡ, ದೊಡ್ಡ ಐಪಿಎಸ್‌ ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ರು ಅವನು ಬಾಯಿ ಬಿಡುತ್ತಿರಲಿಲ್ಲ. ನಾನು ರಮೇಶ್‌ ಚಂದ್ರ ಅವರೆಲ್ಲ ಊಟಕ್ಕೆ ಹೋದಾಗ ಮಾತಾಡುತ್ತಿದ್ವಿ. ಆಗ, ಈ ದೇಶದ ಪ್ರಧಾನಿಗೆ ಹೀಗೆ ಮಾಡಿದ್ದು ಸರಿನಾ ಅಂದ್ವಿ. ಸರ್‌, ಅವರು ತಮಿಳರಿಗೆ ಬಹಳ ಅನ್ಯಾಯ ಮಾಡಿದ್ದಾರೆ. ನನಗೆ ಬಹಳ ಸಂತೋಷವಾಗಿದೆ. ರಾಜೀವ್‌ ಗಾಂಧಿ ಅವರು ತೀರಿಹೋದಾಗ ನಾನು ನನ್ನ ಮನೆ ಹತ್ತಿರ ಪಾಯಸ ಹಂಚಿದ್ದೀನಿ ಸರ್‌ ಅಂದ. ಇಂದಿರಾನಗರದ ಹತ್ತಿರ ವಾಸವಿದ್ದ ಆತ. ಅಲ್ಲೆಲ್ಲ ತಮಿಳರೇ ಹೆಚ್ಚು ವಾಸ ಇದ್ರು. ಆಗ ನಾನು, ರಮೇಶ್‌ ಚಂದ್ರ ಎರಡು ಬಿಟ್ಟಿದ್ವಿ ಅವನಿಗೆ. ಆದರೆ, ನಾವು ಹಾಗೆಲ್ಲ ಹೊಡೆಯೋದಿಲ್ಲ. ಆತನನ್ನು ಮುಟ್ಟಬೇಡಿ ಎಂದು ಸಿಬಿಐಯಿಂದ ಆದೇಶ ಬಂತು. ನಮ್ಮದಲ್ಲದ ಕೇಸ್‌, ಮತ್ತೆ ನಾವೇನೊ ಮಾಡಿ ತಪ್ಪಾಗುತ್ತದೆ ಅಂಥ ಸುಮ್ಮನಾದ್ವಿ. ನಂತರ ಸಿಬಿಐ ಅವರೇ ಬಾಯಿ ಬಿಡಿಸಿದ್ರು. ಎಲ್‌ಟಿಟಿಇ ಅವರು ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರನ್ನು ಬೇರೆ, ಬೇರೆ ಕಡೆ ವ್ಯವಸ್ಥೆ ಮಾಡಿ ಇಟ್ಟಿದ್ದೀವಿ ಎಂದು ಅವನು ಮಾಹಿತಿ ಕೊಟ್ಟ. ಹೆಚ್‌ಎಎಲ್‌ ಎರಡನೇ ಹಂತದಲ್ಲಿ ಮನೆ ಮಾಡಿದ್ದಾರೆ ಎಂಬುದು ವಿಚಾರಣೆ ವೇಳೆ ಗೊತ್ತಾಯಿತು.


ಮುಂದುವರೆಯುವುದು…

ಸಂದರ್ಶಕರು - ಕೆ.ಎಸ್. ಪರಮೇಶ್ವರ31 views