“ಆಯುಧ ಪೋಜೆಗೆ ಇಟ್ಟಿದ್ದ ರಿವಾಲ್ವರ್ ನಿಂದ ಮೊದಲ ಏನ್‌ಕೌಂಟರ್”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು ಭಾಗ 9


ನಾನು ಒಳಗಡೆ ಹೋಗಿ ನೋಡಿದಾಗ ಅವಳು, ಅವನು ಸಂಪೂರ್ಣ ಬೆತ್ತಲಾಗಿದ್ರು. ತಕ್ಷಣವೇ ಆಕೆಗೆ ಬಟ್ಟೆ ಹಾಕಲು ಹೇಳಿದ್ರು. ಅವನೂ ಬಟ್ಟೆ ಹಾಕಿಕೊಂಡ. ಅವನ ಕೈ ಕಟ್ಟಿ, ಇಬ್ಬರನ್ನು ಕರೆದುಕೊಂಡು ಬಂದ್ವಿ. ತಮ್ಮನನ್ನು ಬಿಟ್ವಿ. ನೀನು ಸಹಕಾರ ಮಾಡಿದೆ. ಇನ್ನು ಮುಂದೆಯೂ ಮಾಡು, ನಿನಗೆ ಸಹಕರಿಸುತ್ತೇವೆ ಅಂದ್ವಿ. ಆದರೆ, ಅವನು ಬಂದವನೇ ವಕೀಲರನ್ನು ಇಟ್ಟುಕೊಂಡು ಹೈಕೋರ್ಟ್‌ನಲ್ಲಿ ಹೆಬಿಯಸ್‌ಕಾರ್ಪಸ್‌ ಹಾಕಿದ. ಹೆಬಿಯಸ್‌ ಕಾರ್ಪಸ್‌ರಿಟ್‌ ಅಂದ್ರೆ ಪೊಲೀಸರಿಗೆ ಬಹಳ ಆತಂಕ. ತಕ್ಷಣ ಅವನನ್ನು ಕೋರ್ಟ್‌ಗೆ ಪ್ರೊಡ್ಯೂಸ್‌ ಮಾಡಬೇಕು. ನಾವಿನ್ನು ಅವನ ಹತ್ತಿರ ಬಾಯಿಯೇ ಬಿಡಿಸಿರಲಿಲ್ಲ.


50 ಕಾರು ಕದ್ದಿದ್ದೀನಿ ಎಂದಿದ್ದ. ಅದೆಲ್ಲದರ ಮಾಹಿತಿ ಕೇಳಬೇಕಿತ್ತು ನಮಗೆ. ಈ ವೇಳೆ ನ್ಯಾಯಾಂಗ ನಮಗೆ ಬಹಳ ಸಹಕರಿಸಿತು. ಹೆಬಿಯಸ್‌ಕಾರ್ಪಸ್‌ ರದ್ದಾಯಿತು. ಇವನನ್ನು ವಿಚಾರಣೆ ಮಾಡಿ, 26–27 ಕಾರನ್ನು ವಾಪಸು ಪಡೆದೆವು. ಆ ಕಾಲಕ್ಕೆ ದೊಡ್ಡ ಪ್ರಕರಣ. ವ್ಯವಸ್ಥಿತವಾಗಿ ಮಾರುತ್ತಿದ್ರು. ಪಾಂಡಿಚೇರಿಯಲ್ಲಿ ಈ ಕಾರುಗಳಿಗೆಲ್ಲ ದಾಖಲೆ ಮಾಡುತ್ತಿದ್ರು. ಕಾರಿನ ಮಾಹಿತಿ ಪಡೆದು ಹೋದ್ರೆ. ಅಸಲಿ ಆರ್‌ಸಿ ಬುಕ್‌ ಕೊಡೋರು. ಎಂಜಿನ್‌ ನಂಬರ್‌, ಚಾಸಿ ನಂಬರ್‌ ಕೂಡ ಅಸಲಿ ಇರುತ್ತಿತ್ತು. ಚಾಸಿ ನಂಬರ್‌ ಅಳಸಿ ಬಿಟ್ಟಿರುತ್ತಿದ್ದರು. ಈ ಪ್ರಕರಣ ಭೇಧಿಸುವುದು ಬಿಕ್ಕಟ್ಟಾಗಿತ್ತು. ಈ ರೀತಿಯ ದಾಖಲೆ ಮಾಡಲು ಅವರ ಪ್ರತ್ಯೇಕ ತಂಡ ಇತ್ತು. ಮೈಗ್ರೇಟ್‌ ಆಗಿರುವ ವಾಹನಗಳಿಗೆ ಎನ್‌ಒಸಿ ಅಗತ್ಯವಿರುತ್ತದೆ. ಬೆಂಗಳೂರಿನ ಗಾಡಿಗೆ ತಮಿಳುನಾಡಿನ ನಂಬರ್‌ ಸಿಗೋದಕ್ಕೆ ಇಲ್ಲಿಯ ಆರ್‌ಟಿಒ ಎನ್‌ಒಸಿ ಕೊಡಬೇಕು. ಆರ್‌ಟಿಒಗೆ ಹೋಗಿ ಕೇಳಿದ್ರೆ, ಹೌದು ಸರ್‌, ರಿಜಿಸ್ಟರ್‌ ಆಗಿದೆ ಅನ್ನೋರು. ಆಗ ತನಿಖೆ ಶುರು ಮಾಡಿದೆವು. ಟ್ರಾನ್ಸ್‌ಫರ್‌ ಆಗಿರೋ ಗಾಡಿಯ ನಂಬರ್‌ ಅಲ್ಲಿರುತ್ತದೆ. ಆ ನಂಬರ್‌ಗಳನ್ನೆಲ್ಲ ತೆಗೆದುಕೊಂಡು ಬೆಂಗಳೂರಿನಲ್ಲಿ ಪರಿಶೀಲಿಸಿದ್ರೆ, ಅದು ಯಾವುದೋ ಸ್ಕೂಟರ್‌, ಆಟೊರಿಕ್ಷಾ, ಲಾರಿ ನಂಬರ್‌ಗಳು. ಇಲ್ಲಿಯ ಬ್ರೋಕರ್‌ನ ಇಟ್ಟುಕೊಂಡು, ನಮ್ಮ ಗಾಡಿ ಟ್ರಾನ್ಸ್‌ಫರ್‌ ಇದೆ ಅಂದ್ರೆ ಇಲ್ಲಿಯ ಆರ್‌ಟಿಒ ಕೊಡುವುದಿಲ್ಲ. ಹಾಗಾಗಿ, ಅವರು ತಮಿಳುನಾಡಿನಲ್ಲಿಯೇ ನಮ್ಮ ಗಾಡಿ ಟ್ರಾನ್ಸ್‌ಫರ್‌ ಇದೆ ಎಂದು ಅರ್ಜಿ ಹಾಕುತ್ತಿದ್ರು. ಅಪ್ಲಿಕೇಷನ್‌ ಹಾಕುವ ಸಂದರ್ಭದಲ್ಲಿ ಅವರು ಎನ್‌ಒಸಿ ಕೇಳುತ್ತಾರೆ. ಆಗ, ನಾವು ತರಿಸುತ್ತೇವೆ. ಅಪ್ಲಿಕೇಷನ್‌ ಕೊಡಿ ಅನ್ನೋರು. ಅವರು ಅಪ್ಲಿಕೇಷನ್‌ ಕೊಟ್ಟ ತಕ್ಷಣ ಅದರ ಮೇಲೆ ಈ ಕಳ್ಳರೇ ‘ಆಲ್‌ಇಂಡಿಯಾ ಗವರ್ನ್ ಮೆಂಟ್’ ಎಂದು ನಕಲಿ ಸೀಲ್‌ ಹೊಡೆದು, ಅಲ್ಲಿ ಲಂಚ ಕೊಡೋರು. ಅಲ್ಲಿ ಕೊಡುವ ಅಪ್ಲಿಕೇಷನ್‌ ಅನ್ನು ಕೈಯಲ್ಲಿ ಇಸ್ಕೊಂಡು ಹರಿದು ಹಾಕಿ ಇವರು ಬೋಗಸ್‌ ಅಪ್ಲಿಕೇಶನ್‌ ತಯಾರಿಸಿ ಅದನ್ನು ಬೆಂಗಳೂರಿನ ಆರ್‌ಟಿಒ ಕಚೇರಿಗೆ ಪೋಸ್ಟ್‌ ಮಾಡುತ್ತಿದ್ರು. ಇದನ್ನು ಪತ್ತೆ ಮಾಡಿ ಎಲ್ಲ ಗಾಡಿ ಸೀಜ್‌ ಮಾಡಿದ್ವಿ.
ರಾಜಕಾರಣಿಗಳು, ಸಿನಿಮಾ ಥಿಯೇಟರ್‌ ಮಾಲೀಕರು, ದೊಡ್ಡ ಉದ್ಯಮಿ ಸೇರಿದಂತೆ ಪ್ರತಿಷ್ಠಿತರು ಕಾರು ತೆಗೆದುಕೊಂಡಿದ್ರು. ಪ್ರತಿಷ್ಠಿತ ಲಾಯರ್‌ ಒಬ್ಬರಿಗೆ ಫೀಸಾಗಿ ಕಾರೊಂದನ್ನು ಕೊಟ್ಟಿದ್ದ. ಅವರು ಅದನ್ನು ವಾಪಸ್‌ ಕೊಟ್ರು. ಇಲ್ಲ ಅವರನ್ನು ಬಂಧಿಸಬೇಕಿತ್ತು. ಅವನು ಜೈಲಿಗೆ ಹೋದ. ಬಹಳ ಸುದ್ದಿ ಮಾಡಿದ ಪ್ರಕರಣ ಇದು. ನಮಗೆಲ್ಲ ಬಹುಮಾನ ಕೊಟ್ರು, ಬೆನ್ನು ತಟ್ಟಿದ್ರು.


ಇದ್ದಕ್ಕಿದ್ದಂತೆ ಒಂದು ದಿವಸ ಅವನಿಗೆ ಜಾಮೀನು ಸಿಕ್ಕಿದೆ ಎಂಬ ಸುದ್ದಿ ಬಂತು. ಬೆಳಿಗ್ಗೆ ನೋಡಿದ್ರೆ ಜೆ.ಸಿ. ನಗರ ಪೊಲೀಸ್‌ಠಾಣೆ ಸರಹದ್ದಿನಲ್ಲಿ ಎರಡು ಕಾರು ಕಳುವಾಯಿತು. ಜಾಮೀನು ತಗೊಂಡು ವಾಪಸು ಹೋಗುವಾಗ ಎರಡು ಕಾರು ಕಳವು ಮಾಡಿ ತಗೊಂಡು ಹೋಗಿ ಬಿಟ್ಟಿದ್ರು. ನೀವೇನು ಮಾಡ್ತೀರಾ ಅನ್ನುವ ತರಹ ನಮಗೆ ಹಾಕಿದ ಸವಾಲಾಗಿತ್ತು ಅದು. ವ್ಯವಸ್ಥೆಗೆ ಚಾಲೆಂಜ್‌ ಮಾಡಿದ್ದ ಅವನು. ಅಧಿಕಾರಿಗಳ ಮುಂದೆ ನಾವು ಮಾತು ಆಡದ ಹಾಗೆ ಆಯಿತು. ಏನ್ರಿ ನೀವು ಜಾಮೀನು ಸಿಗುವ ಹಾಗೆ ಮಾಡಿಬಿಟ್ರಲ್ಲಾ ಅಂಥೆಲ್ಲ ಅನಿಸಿಕೊಳ್ಳುವ ಹಾಗಾಯ್ತು. ಹಾಸನ ಜೈಲಿನಲ್ಲಿ ಇಬ್ಬರು ಕಳ್ಳರಿದ್ದಾರೆ. ರಘು ಗ್ಯಾಂಗ್‌ನವರು. ಅವರನ್ನು ಕಸ್ಟಡಿಗೆ ತಗೊಂಡ್ರೆ ಇವರನ್ನು ಪತ್ತೆ ಮಾಡಬಹುದು ಎಂಬ ಮಾಹಿತಿ ನಮಗೆ ಸಿಕ್ತು.

ಹಾಸನ ಕೋರ್ಟ್‌ಗೆ ಮತ್ತು ನಮ್ಮ ಕೋರ್ಟ್‌ಗೆ ಅರ್ಜಿ ಹಾಕಿಕೊಂಡು ಬಾಡಿ ವಾರಂಟ್‌ ತಗೊಂಡು ಅವರನ್ನು ನಮ್ಮ ಕಸ್ಟಡಿಗೆ ತೆಗೆದುಕೊಂಡ್ವಿ. ಹಾಸನ ಜೈಲಿನಿಂದ ಸಕಲೇಶಪುರಕ್ಕೆ ಹೊರಟ್ವಿ. ಹಸನರ್‌ ಎಂಬ ದೊಡ್ಡ ಕಾರು ಕಳ್ಳ. ಜಿಲ್ಲಾ ಪಂಚಾಯಿತಿ ಸದಸ್ಯನೂ ಆಗಿದ್ದ. ಅವನು ಈಗ ಇದ್ದಿದ್ರೆ ಮಿನಿಸ್ಟರ್‌ ಆಗುತ್ತಿದ್ದ. ಆದರೆ, ಪೊಲೀಸರು ಚೇಸ್‌ ಮಾಡುವಾಗ ಮರಕ್ಕೆ ಗುದ್ದಿ ಸತ್ತುಹೋದ. ಅವನ ಮನೆ ಹತ್ತಿರ ರಘು ಬಂದೇ ಬರುತ್ತಾನೆ ಎಂಬ ಮಾಹಿತಿಯನ್ನು ಅವರು ಕೊಟ್ರು. ಬನ್ನಿ ಸರ್‌ ನಾವು ತೋರಿಸ್ತೇವೆ ಅಂದ್ರು. ಕಾರು ಕಳ್ಳತನ ಮಾಡಿದಾರೆ ಅಂದ್ರೆ, ಶ್ರೀಗಂಧವನ್ನು ತುಂಬಿಕೊಂಡು ಕಾಸರಗೋಡಿಗೆ ಹೋಗ್ತಾರೆ ಅವರು. ಅಲ್ಲಿ ಫ್ಯಾಕ್ಟರಿ ಇದೆ. ಮುಸ್ಲಿಂ ಲೀಗ್‌ ನಾಯಕ ಇದ್ದ, ಮೊಹಮ್ಮದ್‌ಕೊಯಾ ಅಂಥ. ಅವನ ಬೀಗನ ಫ್ಯಾಕ್ಟರಿ ಅದು. ಅಂದೂಕ ಅಂಥ ಅವನ ಹೆಸರು. ಅಂದೂಕ ಸ್ಯಾಂಡಲ್‌ವುಡ್‌ ಫ್ಯಾಕ್ಟರಿ ಅಂದ್ರೆ ಅಲ್ಲಿ ಪೊಲೀಸ್‌ನವರು ಹೆಜ್ಜೆ ಇಡೋದಕ್ಕೆ ಆಗುತ್ತಿರಲಿಲ್ಲ. ಚಂದ್ರಗಿರಿ ನದಿಯ ಈ ಕಡೆ ಭಾಗದಲ್ಲಿ ಕಾರುಗಳನ್ನು ನಿಲ್ಲಿಸಿ ಶ್ರೀಗಂಧವನ್ನು ಅನ್‌ಲೋಡ್‌ ಮಾಡುತ್ತಿದ್ರು. ದೋಣಿಗಳಲ್ಲಿ ತುಂಬಿ ಆ ಕಡೆ ತೆಗೆದುಕೊಂಡು ಹೋಗುತ್ತಿದ್ರು. ಪೊಲೀಸ್‌ ಬರುವಷ್ಟರಲ್ಲಿ ಅದನ್ನು ಪುಡಿ ಮಾಡಿ ಎಣ್ಣೆ ತೆಗೆಯುತ್ತಿದ್ರು. ಅದರ ಕುರುಹೇ ಸಿಗುತ್ತಿರಲಿಲ್ಲ. ಕಳ್ಳರಿಗೆ ರಾಜಾತಿಥ್ಯ ಸಿಗುತ್ತಿತ್ತು. ಕಾರನ್ನು ಸರ್ವಿಸ್‌ ಮಾಡಿ ಕೊಡುತ್ತಿದ್ರು. ಅವರಿಗೆ ದುಡ್ಡನ್ನೂ ಕೊಡುತ್ತಿದ್ರು. ಮಾರನೇ ದಿನ ಅವರು ಕಾರು ತೆಗೆದುಕೊಂಡು ಹೋಗುತ್ತಿದ್ರು. ಇವೆಲ್ಲ ಮಾಹಿತಿಯನ್ನು ಕಳ್ಳರು ಕೊಟ್ಟಿದ್ರು. ಮೊದಲು ಹಸನಾರ್‌ ಮನೆ ಹತ್ತಿರ ಹೋಗೋಣ ಅಂದ್ರು. ಅಲ್ಲಿ ಹಸನಾರ್‌ ಇಲ್ಲಂದ್ರೆ ಸುಲೇಮಾನ್‌ ಸಿಕ್ಕೇ ಸಿಗುತ್ತಾರೆ ಅಂದ್ರು.


ನಾವು ಹೊರಟಿದ್ದು 12 ಗಂಟೆ ರಾತ್ರಿ ಇರಬಹುದು. ಆಯುಧ ಪೂಜೆ ದಿವಸ ಅದು. ನನ್ನ ರಿವಾಲ್ವಾರನ್ನು ಪೂಜೆಗೆ ಇಟ್ಟಿದ್ದನ್ನು ತೆಗೆದುಕೊಂಡು ಹೊರಟಿದ್ದೆ. ಹಾಸನ ರಸ್ತೆಯಲ್ಲಿ ಬಾಳ್ಳುಪೇಟೆ ಎಂಬ ಊರಿದೆ. ಅಲ್ಲಿ ಎಡಕ್ಕೆ ತಿರುಗಿದ್ರೆ ಕೆಂಚಮ್ಮನ ಹೊಸಕೋಟೆ ಅನ್ನುವ ಊರು. ಆ ರಸ್ತೆಯಲ್ಲಿ ಹೋದ್ರೆ ಕೇರಳ ತಲುಪುತ್ತದೆ. ದೂರದಲ್ಲಿ ಗಾಡಿಯ ಹಾರ್ನ್‌ ಶಬ್ದ ಕೇಳಿತು. ಆಗ ಅವನು ಇದು ಗ್ಯಾಂಗ್‌ನವರದೇ ಶಬ್ದ ಅಂದ. ಹೇಗೆ ಗೊತ್ತಾಯಿತು ಅಂದಿದ್ದಕ್ಕೆ, ಇದು ಸಿಗ್ನಲ್‌ ಸರ್‌ ಅಂದ. ಕಿಕ್‌..ಕಿಕ್‌..ಕಿಕ್‌ಕಿಕ್‌ಕಿಕ್‌... ಕೇರಳದವರೆಗೂ ಎಲ್ಲಾ ಟೋಲ್‌ಗಳಲ್ಲಿ ಈ ಸಿಗ್ನಲ್‌ ಒತ್ತಿದ ತಕ್ಷಣ ಗೇಟ್‌ ಓಪನ್‌ ಆಗುತ್ತದೆ. ಅವರು ದುಡ್ಡಿ ಬಿಸಾಕಿ ಹೋಗುತ್ತಿರುತ್ತಾರೆ ಅಂದ. ಒಂದು ಕಾರು, ಒಂದು ಮೆಟಡಾರ್‌ನಲ್ಲಿ ಹೋಗುತ್ತಿದ್ವಿ. ಕಾರಿನಲ್ಲಿ ಎಸಿಪಿ, ಇನ್‌ಸ್ಪೆಕ್ಟರ್‌ ಇದ್ರು. ಮೆಟಡಾರ್‌ನಲ್ಲಿ ಹತ್ತು ಜನ ಇದ್ವಿ. ಎಲ್ಲ ಸೇರಿ 14 ಜನರ ತಂಡ ಇತ್ತು. ಸಡನ್‌ ಆಗಿ ಹೊರಟಿದ್ದು ಅದು. ಮಲ್ಲೇಗೌಡ ಅನ್ನುವ ಡ್ರೈವರ್‌, ಸಿ.ವಿ.ತಿಮ್ಮಯ್ಯ, ಎಂ.ಎಲ್‌ ರಾಮಣ್ಣ ಅನ್ನುವ ಇನ್‌ಸ್ಪೆಕ್ಟರ್‌ ಮತ್ತು ಎಸಿಪಿ ಕ್ರೈಂ ಇದ್ರು.

ಕಾರು ಬರ್ತಿದೆ, ಬರ್ತಿದೆ ಎಂದ. ನೀವು ಅಡ್ಡ ಹಾಕಿ ನಿಲ್ಸಿ ಸರ್‌ ಅವರು ಕಾರು ಬಿಟ್ಟು ಓಡಿ ಹೋಗ್ತಾರೆ ಅಂದ. ನಮ್ಮ ಎಸಿಪಿ, ಇನ್‌ಸ್ಪೆಕ್ಟರ್‌ ಹಿಂದೆ, ಮುಂದೆ ನೋಡಲಿಕ್ಕೆ ಶುರು ಮಾಡಿದ್ರು. ನಿಲ್ಲಿಸಲು ಹೋಗುವಷ್ಟರಲ್ಲಿ ಕಾರು ಬಂದಿದ್ದೇ ನಮ್ಮ ಮೇಲೆ ಹತ್ತಿಸಲು ಶುರು ಮಾಡಿಬಿಟ್ಟ. ಎಲ್ಲ ಹೊರಗೆ ಧುಮುಕಿ ಬಿಟ್ವಿ. ಫೈರ್‌ಮಾಡಿ, ಅವರೇ ಸರ್‌ ಅಂದ. ರಿವಾಲ್ವಾರ್‌ ತೆಗೆದುಕೊಂಡು ಒಂದು ರೌಂಡ್‌ ಫೈಯರ್‌ ಮಾಡಿದೆ. ಕಾರಿಗೆ ಅದು ಬೀಳಲೇ ಇಲ್ಲ. ಅವರು ಹೋಗೇ ಬಿಟ್ರು.


ಫೈಯರ್ ಮಾಡಲು ಯಾರು ಆದೇಶ ಕೊಟ್ಟಿದ್ದು ನಿಮಗೆ ಎಂದು ಎಸಿಪಿ ನನಗೆ ಬೈಯಲು ಆರಂಭಿಸಿದ್ರು. ನಮ್ಮ ಮೇಲೆ ಕಾರು ಹತ್ತಿಸಲು ಬಂದ್ರೆ ಇನ್ನೇನು ಮಾಡ್ಲಿ ಸರ್‌, ನಾವು ಜೀವ ಕಳೆದುಕೊಳ್ಳಲು ಆಗುತ್ತಾ ಅಂದೆ. ನನ್ನ ಆದೇಶ ಇಲ್ದೆ ಹೇಗೆ ಫೈಯರ್‌ ಮಾಡ್ದೆ ಎಂದು ಮತ್ತೆ ಕೇಳಿದ್ರು. ದಯವಿಟ್ಟು ಕ್ಷಮಿಸಬೇಕು ಅಂದೆ. ಇನ್‌ಸ್ಪೆಕ್ಟರ್‌ ಸಮಾಧಾನ ಮಾಡಿದ್ರು. ಅವನು ಸಿಕ್ಕಿಲ್ಲ. ಮನೆನೂ ರೈಡ್‌ ಮಾಡಲಿಕ್ಕೆ ಆಗಿಲ್ಲ. ಫೈಯರಿಂಗ್‌ ಎಲ್ಲ ಆದ ಮೇಲೆ ಅವನು ಇರೊಲ್ಲ ಅಂಥ ಗೊತ್ತಾಯಿತು. ಅವನ ಮನೆಯ ಸ್ವಲ್ಪ ದೂರದಲ್ಲೇ ಇದು ಆಗಿದ್ದು.


ಎಂಥ ಛಾನ್ಸ್‌ ಸರ್‌. ಎರಡು ಕಾರು ತುಂಬಾ ಇದ್ರು ಅಂದ್ರು. ಆಮೇಲೆ ಕಳ್ಳರೇ ಹೇಳಿದ್ರು ಇವರು ಕಾಡಿನಲ್ಲಿ ಇರ್ತಾರೆ. ಆ ಜಾಗ ಗೊತ್ತು ಕರೆದುಕೊಂಡು ಹೋಗ್ತೇವೆ ಅಂದ್ರು. ಆಗ ನಮ್ಮಲ್ಲೇ ಚರ್ಚೆ ಶುರುವಾಯಿತು. ನಮ್ಮನ್ನು ಟ್ರ್ಯಾಪ್‌ ಮಾಡಲು ಹೀಗೆ ಆಡ್ತಿದ್ದಾರೆ. ಕಾಡಿನಲ್ಲಿ ಹೋಗಿ ಟ್ರ್ಯಾಪ್‌ ಮಾಡಿದ್ರೆ ದಾಳಿ ಮಾಡ್ತಾರೆ ಅಂಥ. ಕೆಲವರು ಬೇಕು, ಕೆಲವರು ಬೇಡ ಅಂಥ. ಆಮೇಲೆ ಎಲ್ಲ ತೀರ್ಮಾನಿಸಿ ಹೋಗೋದು ಎಂದು ನಿರ್ಧರಿಸಿದ್ವಿ. ಅಷ್ಟೊತ್ತಿಗೆ ರಾತ್ರಿ 2 ಗಂಟೆ ಆಯ್ತು. ಸ್ವಲ್ಪ ದೂರ ಬಂದ್ವಿ. ಕಾಡ್ಲೂರು ಕುಡಿಗೆ ಅನ್ನುವ ರಸ್ತೆ. ಒಬ್ಬ ಕಳ್ಳನನ್ನು ಕಾರಿನಲ್ಲಿ, ಇನ್ನೊಬ್ಬನನ್ನು ಮೆಟಡಾರ್‌ನಲ್ಲಿ ಕೂರಿಸಿಕೊಂಡು ಹೊರಟ್ವಿ.


ಸ್ವಲ್ಪ ಮುಂದೆ ಬಂದಾಗ ಮೆಟ್ರೊಮ್ಯಾಕ್ಸ್‌ ಇಟ್ಟಿರುವ ಬೆಳಕು ಕಾಣಿಸಿತು. ನಾವೇನು ಅಂದುಕೊಂಡ್ವಿ ಅಂದರೆ, ಹಳ್ಳಿಯವರಿರಬಹುದು. ನಾಟಕ ಏನಾದ್ರು ಮಾಡಿ ಮುಗಿದು ಹೋಗಿರಬಹುದು ಅಂಥ. ಆಗ ಕಳ್ಳ, ಸರ್‌ ಅವರು ಇಲ್ಲೇ ಇರ್ತಾರೆ ಅಂದ. ನಾವು ಹೋಗ್ತಾ ಅಲ್ಲಿ 10–15 ಜನ ಓಡಾಡಿಕೊಂಡು ಇದ್ರು. ಸರ್‌, ಫುಲ್‌ ಗ್ಯಾಂಗ್‌ ಇದೆ ಅಂದ ಕಳ್ಳ. ನಾವು ಗಾಡಿ ನಿಲ್ಲಿಸಿ ಎಷ್ಟು ಆಗುತ್ತೋ ಅಷ್ಟು ನುಗ್ಗಿದ್ವಿ ಹಿಡ್ಕೊಳಕ್ಕೆ. ಎಲ್ಲ ಮಚ್ಚುಗಳನ್ನು ತಗೊಂಡು ನಿಂತ್ಕೊಂಡ್ರು. ಅವರಿಗೆ ನಾವು ಪೊಲೀಸ್‌ ಅನ್ನೋದು ಗೊತ್ತಾಯ್ತು. ಏ ಪೊಲೀಸ್‌ ಕಣೋ, ಪೊಲೀಸ್‌, ಸಿಸಿಬಿ ಅವರು ಇರಬೇಕು ಅಂಥ ಎಲ್ಲ ಓಡಿ ಹೋಗಿಬಿಟ್ರು.


ಮೆಟ್ರೊಮ್ಯಾಕ್ಸ್‌ ಹತ್ತಿರ ಹೋಗಿ ನೋಡಿದ್ರೆ, ಕಾರಿನ ಜ್ಯಾಕ್‌, ಟೈಯರ್‌, ಸ್ಟೆಪ್ನಿಗಳೆಲ್ಲ ಇತ್ತು. ಪಕ್ಕದಲ್ಲಿ ನೋಡಿದ್ರೆ, ಎರಡು ಕಾರು ಶ್ರೀಗಂಧದ ದಿಬ್ಬಿಗಳನ್ನು ಚೆನ್ನಾಗಿ ಜೋಡಿಸಿ ಇಟ್ಟಿದ್ರು. ಎಂಥ ಅವಕಾಶ ಕಳೆದುಕೊಂಡ್ವಿ ಎಂದು ಬೇಜಾರಾಗೋತು. ಇಷ್ಟು ದೂರ ಬಂದು ಒಬ್ಬ ಸಿಕ್ಕಿಲ್ಲ ಅಂಥ. ಚೇಸ್‌ ಮಾಡುವ ಹಾಗಿಲ್ಲ. ಕತ್ತಲಲ್ಲಿ ಮಾಡಿದ್ರೆ ದಾಳಿ ಮಾಡಿ ಬಿಡ್ತಾರೆ. ನಡು ಕಾಡು. ನಮಗೆ ಎಲ್ಲ ತರಹದ ಪ್ರಾಣಿಗಳ ಶಬ್ದ ಕೇಳಲು ಶುರುವಾಯ್ತು. ಇಷ್ಟೆಲ್ಲಾ ಮಾಡಿ ವಿಫಲ ಆಯ್ತಲ್ಲ ಎಂದು ಮಾತಾಡಿಕೊಂಡ್ವಿ. ಆಗ ಕಳ್ಳನೇ ಒಂದು ಸಲಹೆ ಕೊಟ್ಟ. ಸರ್‌, ಹಿಂದೆ ಕಾರು ಹತ್ತಿಸಿ ಎಸ್ಕೇಪ್‌ ಆಗಿದ್ರಲ್ಲ ಅವರು ಇನ್ನು ಇಲ್ಲಿಗೆ ಬಂದಿಲ್ಲ. ಅವರು ಈ ಶ್ರೀಗಂಧವನ್ನು ಲೋಡ್‌ ಮಾಡೋದಕ್ಕೆ ಬಂದಿರೋದು. ಅವರು ಅಲ್ಲಿ ಮುಂದೆ ಟೀ ಕುಡಿತಾ ಇರ್ತಾರೆ ಅಂದ. ಅಲ್ಲಿಗೆ ಹೋಗೋದು ಅಂಥ ತೀರ್ಮಾನ ಆಯ್ತು.


ಇದು ಇದ್ರೆ ಇರ್ಲಿ. ಹೋಗ್‌ಬಿಟ್ಟು ಬರೋಣ ಎರಡು ಟೀಂ ಹೋಗ್ಲಿ ಅಂದ್ರು. ನಾವು ಇದನ್ನು ಕಾಯ್ಲೇಬೇಕು. ಎರಡು ಕಾರು ತುಂಬೋ ಶ್ರೀಗಂಧ ಸಿಕ್ಕಿದೆ ಅಂದ್ರೆ ಅದೇ ದೊಡ್ಡ ಕೇಸ್‌ ನಮಗೆ. ಅದು ನಮ್ಮ ಸಕ್ಸಸ್‌. ನಾನು ಇನ್‌ಸ್ಪೆಕ್ಟರ್‌, ಒಬ್ಬ ಡ್ರೈವರ್‌, ಕಳ್ಳ ಮತ್ತು ಸಿ.ವಿ ತಿಮ್ಮಯ್ಯ ಐದು ಕಾರಿನಲ್ಲಿ ಇರಬೇಕು. ಕಾರನ್ನು ಹಳ್ಳದಲ್ಲಿ ಹಾಕಿದ್ವಿ. ಯಾರಿಗೂ ಕಾಣಿಸಬಾರದೆಂದು. ಇನ್ನೊಂದು ಟೀಂ ಎಸಿಪಿ ಅವರ ಜೊತೆ ಗೇಟ್‌ಬಳಿ ಹೋಗಬೇಕು ಅಂಥ ತೀರ್ಮಾನ ಆಯ್ತು. ಹೋಗಬೇಕಾದ್ರೆ, ಎಸಿಪಿ ಅವರು ನಿನ್ನ ರಿವಾಲ್ವಾರ್‌ ಕೊಡು ಅಂದ್ರು. ಸರ್‌, ಇಲ್ಲ ನಾನು ಕಾಡಿನೊಳಗೆ ಇರುತ್ತೇನೆ ಅಲ್ವಾ ಕೊಡೋಕ್ಕೆ ಆಗಲ್ಲ. ತಿಮ್ಮಯ್ಯನ ಹತ್ತಿರ ಬರೀ ಲಾಠಿ ಇರೋದು. ಬೇಕೇ ಬೇಕು ಅಂದೆ. ನೀವೇನು ಎಸಿಪಿಗೆ ವೆಪನ್‌ ಕೊಡೊಲ್ಲ ಅಂತಿರಲ್ಲ ಅಂಥ ಜೋರು ಮಾಡಿದ್ರು. ನನ್ನ ವೆಪನ್‌ ನಾನು ತಂದಿದ್ದೇನೆ. ನಿಮ್ದು ನೀವು ತರಬೇಕಿತ್ತು ಅಂದೆ. ನಾನೊಬ್ಬ ಬಿಟ್ರೆ ಯಾರೂ ತಂದಿರಲಿಲ್ಲ. ಅವರು ಬೈಕೊಂಡು ಹೋದ್ರು.


ಮೆತ್ತಗೆ ಕಳ್ಳನ ಜೊತೆಗೆ ಮಾತಾಡುತ್ತಿದ್ವಿ. ಹೆಚ್ಚುಕಮ್ಮಿ ಆದ್ರೆ ಶೂಟ್‌ ಮಾಡ್ತೇವೆ ಅಂಥ ಭಯ ಬೀಳುಸುತ್ತಿದ್ವಿ. ಮಾತಾಡ್ತ ಇದ್ದಂಗೇನೆ ಕಾಡಿನೊಳಗೆ ಎರಡು ಕಾರು ಬರಲು ಶುರುವಾಯಿತು. ಬೆಳಕು ಕಾಣಿಸುತ್ತಿದೆ. ಬಂತು ಸರ್‌, ಗ್ಯಾಂಗ್‌ ಅಂದ. ಎಲ್ಲ ಕುಡಿದಿರುತ್ತಾರೆ. ಪೂರ್ತಿ ರೆಡಿಯಾಗಿರ್ತಾರೆ. ದಯವಿಟ್ಟು ರಿಸ್ಕ್‌ ತೆಗೆದುಕೊಳ್ಳಬೇಡಿ. ನೀವಿಬ್ರು ಏನು ಮಾಡೋದಕ್ಕೆ ಆಗಲ್ಲ ಅಂದ. ಕಾರು ತುಂಬಾ ಜನ ಇರ್ತಾರೆ ಅಂದ. ಶ್ರೀಗಂಧ ಇಟ್ಟ ಜಾಗಕ್ಕೆ ಬಂದು ನಿಂತುಕೊಂಡ್ರು. ಕೇಕೆ ಹಾಕ್ತಾರೆ, ಮಾತಾಡ್ತಾರೆ, ಅವರ ಕಥೆ ಹೇಳ್ತಾರೆ. ಸಿಸಿಬಿ ಅವರಿಗೆ ಮಾಡಬೇಕು ಅಂತೆಲ್ಲ ಅನೋದು ನಮಗೆ ಕೇಳ್ತಿದೆ. ಕಾರಿನ ರೂಫ್‌ ಲೈಟ್‌ ಹಾಕಿ ಬಿಯರ್‌ ಕುಡ್ಕೊಂಡು ಕೂತಿದ್ರು. ಯಾರು ಇಲ್ಲ ಏನು ಅಂತೆಲ್ಲ ಅಂತಿದ್ರು. ವಿಷಲ್‌ ಹೊಡೆದ್ರು, ಅವರದೇ ಸಿಗ್ನಲ್‌ ಮಾಡಿದ್ರು. ಯಾರೂ ಬಂದಿಲ್ಲ. ಆಗ ನಾನು ಈ ಅವಕಾಶ ಕಳೆದುಕೊಳ್ಳೋದು ಬೇಡ. ಕಾರನ್ನು ಹಿಡಿಯಲೇ ಬೇಕು ಎಂದು ತೀರ್ಮಾನಿಸಿದೆ. ಎರಡು ಅಂಬಾಸಿಡರ್ ಕಾರು. ಸರ್‌, ಹೋಗ್ತೇನೆ ಅಂದೆ. ನಮ್ಮ ಇನ್‌ಸ್ಪೆಕ್ಟರ್‌ ಬೇಡ ಅವರೆಲ್ಲ ಹೋದವರು ಬರ್ಲಿ ಆಮೇಲೆ ಹೋಗಿ ಅಂದ್ರು. ಅಷ್ಟೊತ್ತಿಗೆ ಎಸ್ಕೇಪ್‌ ಆಗಿಬಿಟ್ರೆ ಕಷ್ಟ ಆಗುತ್ತೆ. ತಿಮ್ಮಯ್ಯ ಅವರಿಗೆ ಕೇಳಿದಾಗ ನೀವು ಹೋಗೋದಾದ್ರೆ ನಾನು ಬರ್ತೇನೆ. ನನ್ನ ಹತ್ತಿರ ಲಾಠಿ ಇದೆ ಅಂದ್ರು.


ದೂರದಲ್ಲಿ ಅವರೆಲ್ಲ ಕಾಣಿಸುತ್ತಿದ್ರು. ಮಾತಾಡೋದು ಮಂದವಾಗಿ ಕೇಳಿಸುತ್ತಿತ್ತು. ಕಾರು ಹತ್ತಿರ ಹೋಗೋಣ ಎಂದೆ. ತಿಮ್ಮಯ್ಯ ಹೆಂಗೆ ಸರ್‌ ಹೋಗ್ತೀರಾ ಅಂದ್ರು. ನಂದು ಬಿಳಿ ಶರ್ಟ್‌, ಕಪ್ಪು ಪ್ಯಾಂಟ್‌. ತಿಮ್ಮಯ್ಯ ಅವರು ಅದೇ ಬಣ್ಣದ ಶರ್ಟ್‌, ಪ್ಯಾಂಟ್‌ ಹಾಕಿದ್ರು. ಎದ್ದು ಕಾಣುವುದರಿಂದ ಮುಂದೆ ಹೋಗೋದು ಕಷ್ಟ. ಶರ್ಟ್‌ ಬಿಚ್ಚೋಣ ಅಂದ್ರೆ ತುಂಬಾ ಚಳಿ. ಶರ್ಟ್‌ ತೆಗೆಯಲೇ ಬೇಕು ಎಂದೆ. ತಿಮ್ಮಯ್ಯ ಆಯ್ತು ಅಂದ್ರು. ಆದ್ರೆ ಬನಿಯನ್‌ ಕೂಡ ಬಿಳಿ. ಬನಿಯನ್‌ ಕೂಡ ಇಬ್ಬರೂ ತೆಗೆದ್ವಿ. ಇವೆಲ್ಲವನ್ನೂ ಅಲ್ಲಿಗೆ ಇಟ್ಕೊಂಡು ಹೋಗೋದು ಮೂರ್ಖತನ. ಬಟ್ಟೆಯೆಲ್ಲ ಇಟ್ಟು ಅದರ ಮೇಲೆ ಕಲ್ಲು ಇಟ್ಟು ಹೋಗೋಣ ಅಂದುಕೊಂಡ್ವಿ. ನಡೆದುಕೊಂಡು ಹೋಗಕ್ಕೆ ಆಗ್ತಿರಲಿಲ್ಲ. ಇಬ್ಬರೇ ಇದ್ದೀವಿ ಅಂಥ ದಾಳಿ ಮಾಡಿ ಬಿಡ್ತಾರೆ. ಆನೆಗಳು ಬರಬಾರದು ಅಂತಾ ಟ್ರೆಂಚ್‌ ಮಾಡಿದ್ರು. ಅದರ ಪಕ್ಕದಲ್ಲಿ ಸಣ್ಣ ಮೋರಿಯಿತ್ತು. ಅದರೊಳಗೆ ಹರಿದುಕೊಂಡು ಹೋದ್ವಿ. ತಿಮ್ಮಯ್ಯ ಹಾವು, ಚೇಳುಗಳು ಇದ್ರೆ ಹೆಂಗೆ ಸರ್‌ ಅಂದ್ರು. ಇದಕ್ಕಿಂತ ಒಳ್ಳೆಯ ಅವಕಾಶ ಸಿಗೊಲ್ಲ. ಹೇಗಾದ್ರು ಮಾಡಿ ರೀಚ್‌ ಆಗಬೇಕು ಅಂದೆ. ಅವರಿಗಿಂತ ನಾವು 30 ಮೀಟರ್‌ದೂರ ಇದ್ವಿ. ಅವರು ಮಾತಾಡೋದು ನಮಗೆ ಕೇಳಿಸುತ್ತಿತ್ತು. ಉಸಿರು ಬಿಡುವುದು ಕೇಳುತ್ತದೆ. ಅಷ್ಟು ನಿಶಬ್ದ ಇತ್ತು. ರಿವಾಲ್ವಾರ್‌ ಫುಲ್‌ ಲೋಡ್‌ ಆಗಿತ್ತು. ನಮ್ಮ ಮೆಟಡಾರ್‌ ವ್ಯಾನ್‌ ಮೇನ್‌ ರೋಡ್‌ನಲ್ಲಿ ಬಂತು. ತಿಮ್ಮಯ್ಯ ನನಗೆ ಸಿಗ್ನಲ್‌ ಮಾಡಿದ್ರು. ಇಬ್ರೂ ರೆಡಿ ಆದ್ವಿ. ಕಾಡಿನೊಳಗೆ ತಿರುಗಿತು. ಕಾಡಿನೊಳಗೆ ಒಂದು ಕಿ.ಮೀ. ಬರಬೇಕಿತ್ತು. ನಾವು ಆತುರ ಮಾಡಿದ್ವೊ, ಅಥವಾ ಅವರು ಬರುವುದು ಸ್ಲೋ ಮಾಡಿದ್ರೊ ಗೊತ್ತಿಲ್ಲ. ಆ ಟೈಮ್‌ನಲ್ಲಿ ಟೆನ್ಷನ್‌ ಶುರುವಾಗುತ್ತೆ. ಅವರನ್ನು ಹಿಡಿಯುವ ಹಟ ನಮಗೆ.


20 ಮೀಟರ್‌ ಹತ್ತಿರ ಬಂದ್ವಿ. ಹೊಸ ಜಾಗ ಅಲ್ವಾ. ಅಂತರವನ್ನು ಗುರುತಿಸುವುದು ಸಾಧ್ಯವಾಗಿಲ್ಲ. ಇಬ್ಬರೇ ನುಗ್ಗಿಬಿಟ್ವಿ. ಅಲ್ಲಾಡ ಬೇಡ್ರಿ ಯಾರೂ ಅಂದೆ. ಕೆಟ್ಟ ಮಾತುಗಳು ಅವರದು. ಎರಡು ಗಾಡಿ ಫುಲ್‌ ಜನ. ಮಚ್ಚಿದೆ ಕಡೀರಿ ಕಡೀರಿ ಅಂದ್ರು. ತಿಮ್ಮಯ್ಯ ಬರೀ ಲಾಠಿ ಇಟ್ಟುಕೊಂಡಿದ್ದಾರೆ, ನಮ್ಮ ಮೇಲೆ ದಾಳಿ ಮಾಡ್ತಾರೆ ಅನ್ನುವ ಆತಂಕ, ಎಲ್ಲಿ ತಪ್ಪಿಸಿಕೊಳ್ತಾರೋ ಅನ್ನುವ ಭಯ.. ಕತ್ತಲಲ್ಲಿ ದುಡುಕುವ ಹಾಗಿರಲಿಲ್ಲ. ತಕ್ಷಣ ಫೈಯರ್‌ ಮಾಡಿದೆ. ಟೈಯರ್‌ಗೆ ಹೊಡೆಯಲು ಹೋದೆ. ಟೆನ್ಷನ್‌ಗೆ ಅದು ಟೈಯರ್‌ಗೆ ಬಿದ್ದಿಲ್ಲ. ಡಿಸ್ಕ್‌ಗೆ ಬಿದ್ದು ರಿಬಾಂಡ್‌ ಆಯ್ತು. ಏ ಫೈಯರಿಂಗ್ ಮಾಡ್ತಿದ್ದಾರೆ ಇವರು ಖಂಡಿತ ಸಿಸಿಬಿಯವರು. ಇಬ್ರಿದ್ದಾರೆ ಹಾಕ್ರಿ ಅಂತೆಲ್ಲಾ ಕೆಟ್ಟದಾಗಿ ಬೈಯಲು ಆರಂಭಿಸಿದ್ರು. ನುಗ್ಗಲು ಆರಂಭಿಸಿದ್ರು. ನಾನು ಟೈಯರ್‌ಗೆ ಇನ್ನೊಂದು ಗುಂಡು ಹೊಡೆದು, ಅದು ಬ್ಲ್ಯಾಸ್ಟ್‌ ಆಯ್ತು. ಆ ಶಬ್ದಕ್ಕೆ ಹೆದರಿಕೊಂಡ್ರು. ಹಿಂದಗಡೆ ಗಾಡಿ ಬಿಟ್ರು. ಟೈಯರ್‌ ಬ್ಲ್ಯಾಸ್ಟ್‌ ಆಗಿದ್ದ ಗಾಡಿಯಲ್ಲಿ ಕೂತಿದವ್ರೆಲ್ಲ ಸ್ಟಾರ್ಟ್‌ ಮಾಡಿ ಹೊರಟುಬಿಟ್ರು. ಆ ಗಾಡಿಯನ್ನು ಮೆಟಡಾರ್‌ನಲ್ಲಿ ಬರುತ್ತಿದ್ದ ಪೊಲೀಸರು ಹಿಡ್ಕೋತಾರೆ ಅನ್ನುವ ನಂಬಿಕೆ. ಆ ಕಾರು ಹಿಡಿಯೋಕೆ ಹೋದಾಗ ಮಚ್ಚನ್ನು ಎತ್ತಿ ಹೊಡೆಯಲು ಹೋದ. ತಕ್ಷಣವೇ ನಾನು ತಿಮ್ಮಯ್ಯನ ಬದುಕಿಸಲು ಫೈಯರ್ ಮಾಡಿದೆ. ಡ್ರೈವರ್ ಕುಸಿದು ಹೋದ. ಫ್ರಂಟ್‌ನಲ್ಲಿ ಕೂತಿದ್ದವನು ಆ ಪಂಕ್ಚರ್ ಆದ ಗಾಡಿಯನ್ನು ಸ್ಟಾರ್ಟ್ ಮಾಡಿಕೊಂಡು ಹೊರಟೇಬಿಟ್ಟ. ಅಲ್ಲಿಯೇ ಇದ್ದ ಕಾರ್‌ನ್ನು ತೆಗೆದುಕೊಂಡು ನಾನು, ತಿಮ್ಮಯ್ಯ ಮುಂದೆ ಹೋಗುತ್ತಿದ್ದ ಕಾರನ್ನು ಹಿಡಿಯಲು ‌ಹೊರಟ್ವಿ. ತಿಮ್ಮಯ್ಯ ತಲೆಯನ್ನು ಹೊರಗೆ ಹಾಕಿ ಮೆಟಡಾರ್‌ನಲ್ಲಿದ್ದ ಪೊಲೀಸರಿಗೆ ಅಟ್ಯಾಕ್‌, ಅಟ್ಯಾಕ್‌ ಅಂತಿದ್ದಾರೆ. ಆದ್ರೆ ಅವರಿಗೆ ಕೇಳಿಸಿಲ್ಲ. ಅವರು ಆ ಕಾರಿಗೆ ಸೈಡ್‌ ಕೊಟ್ಟು ಬಿಟ್ರು.


ಮುಂದುವರೆಯುವುದು…


ಸಂದರ್ಶಕರು - ಕೆ.ಎಸ್. ಪರಮೇಶ್ವರ24 views