ಆ ಗಿಳಿಯನ್ನ ತಗೊಂಡು ಹೋಗಿದ್ರೆ ಶಂಕರ್‌ ಬದುಕ್ತಿದ್ರು ಅನ್ಸುತ್ತೆ

ಮೇಕಿಂಗ್ ಆಫ್ ಮಾಲ್ಗುಡಿ ಡೇಸ್ - ಭಾಗ 72

(ಮಾಲ್ಗುಡಿ ಡೇಸ್ ಆರ್ಟ್ ಡೈರಕ್ಟರ್, ಜಾನ್ ದೇವರಾಜ್ ಅವರ ನೆನಪುಗಳು.)
ಸಾಯುವ ಹಿಂದಿನ ದಿನ ಶಂಕರ್ ಅವರ ಮನೆ ಮುಂದೆ ಮಾತಾಡ್ತಿದ್ದಾಗ “ಹೇಯ್ ಜಾನ್ ನನ್ದು ಒಂದು ಸ್ಕಲ್ಪಚರ್ ಮಾಡು ಇಲ್ಲಿ” ಅಂತ ಹೇಳ್ದ. ನಾನ್ಹೇಳ್ದೆ “ಶಂಕರ್ ನಾನು ನಿನ್ನ ಸ್ಕಲ್ಪಚರ್ ಮಾಡ್ಬೇಕಾ? ನೀನೇ ಹೋಗಿ ಬಟ್ಟೆ ಬಿಚ್ಚಿ ನಿಂತ್ಬಿಡು ಅಲ್ಲಿ”ಅಂತ ಹೇಳ್ದೆ. ರಮೇಶ್ ಭಟ್ ಹೇಳಿದ್ರು “ನೀನು ಹಂಗೆಲ್ಲ ಹೇಳ್ಬಾರ್ದು ಶಂಕರ್” ಅಂತ. ಹಾಗೇ ಮಾತಾಡ್ತಾ, ನಾನು ಮನೆಗೆ ಹೋಗೋದು ಲೇಟ್ ಅಂದ್ರೆ ಸುಮಾರು 12 ಗಂಟೆ ಆಗ್ಹೋಯ್ತು. ಮನೆಗೆ ವಾಪಸ್ ಬರ್ತಾ ಇದ್ದೀನಿ, ಶಂಕರ್ ಗೆ ದಾವಣಗೆರೆಯಲ್ಲಿ ಮುಹೂರ್ತ ಶಾಟ್, ನಾಲ್ಕುವರೆ ಗಂಟೆಗೆ ಇತ್ತು. ನಮ್ಮ ಮನೆ ಬಸವನಗುಡಿ ಯಲ್ಲಿತ್ತು. ಬಸವನಗುಡಿಯಲ್ಲಿ ನಾನು ಆ ಒಂದು ಪಿಚ್ಚರ್ ಗೆ ಜೋಕುಮಾರ ಸ್ವಾಮಿಗೆ ಒಂದು ಗಿಣಿ ಮಾಡಿಟ್ಟಿದ್ದೀನಿ. ಶಂಕರ್ ನನಗೆ ಕೇಳ್ದ “ ಹೇಯ್ ಜಾನ್ ಗಿಣಿ ರೆಡಿಯಾಗಿದ್ಯಾ?” ಅಂತ ನಾನು ಎರಡನೇ ದಿನ ಆಮ್ಸ್ಟಡಾಮ್ ಗೆ ಅವಾರ್ಡ್ ಬಂದಿದ್ರಿಂದ ಫಿಲ್ಮ್ ಫೆಸ್ಟಿವಲ್ ಗೆ ಹೂಗ್ಬೇಕಾಗಿತ್ತು. ಶಂಕರ್ ನಾಗ್ “ನೋಡು ನಾನು ನಿನ್ನ ಮನೆಗೆ ಬಂದು ತಗೊಂಡು ಹೋಗ್ಬಿಡ್ತೀನಿ, ನೀನು ಗಿಣಿ ಮಾಡಿಲ್ಲ ಅಂದ್ರೆ ನಿನ್ನ ಪಾಸ್ಪೋರ್ಟ್ ಸೀಜ್ ಮಾಡ್ಬಿಡ್ತೀನಿ” ಅಂತೆಲ್ಲಾ ಹೇಳ್ದ. ನಾನು “ಇಲ್ಲಪ್ಪಾ ರಡಿಯಾಗಿದೆ ಬಂದು ತಗೊಂಡು ಹೋಗು” ಅಂತ ಶಂಕರ್ ಗೆ ಹೇಳ್ದೆ.


ಸೋ ಶಂಕರ್ ನಮ್ಮ ಮನೆ ಕಡೆ ಪಾಸ್ ಆದ್ರು, ಏನು ಒಂದು ಗಂಟೆಗೋ, ಎರಡು ಗಂಟೆಗೋ ಪಾಸ್ ಆಗಿರ್ಬೇಕು, ಬಟ್ ನಮ್ಮ ಮನೆಯ ಹತ್ರ ನಿಲ್ಸಿಲ್ಲ. ಆ ಗಿಣಿನೇ ಓಪನಿಂಗ್ ಶಾಟ್ ಆಗಿದ್ರೂ, ಅದನ್ನ ತಗೊಂಡು ಹೋಗ್ಲಿಲ್ಲ. ಮನೆ ಹತ್ರ ಪಾಸ್ ಆದ್ರೂ ಕೂಡ, ಅದನ್ನ ತಗೊಂಡು ಹೋಗ್ಲಿಲ್ಲ. ನಾನು ವೆಯ್ಟ್ ಮಾಡಿ ಆರು ಗಂಟೆಗೆ ಫುಟ್ ಬಾಲ್ ಆಡಕ್ಕೆ ಹೋಗಿದ್ದೆ ನ್ಯಾಷನಲ್ ಕಾಲೇಜಲ್ಲಿ. ಫುಟ್ ಬಾಲ್ ಅಡ್ತಿದ್ದಾಗ ನನಗೆ ಗೋಲ್ ಹೊಡಿಯುವ ಒಂದು ಅವಕಾಶ ಸಿಗ್ತು. ಗೋಲ್ ಹೊಡ್ದು, ಗೋಲ್ ಅಂತ ಕೂಗಿ ತಿರ್ಗಿ ನೋಡ್ದೆ, ನಮ್ಮ ಮ್ಯಾನೇಜರ್ ರಾಮಚಂದ್ರ ಬಂದು ಹೇಳ್ದ “ಜಾನ್, ಶಂಕರ್ ಹೋಗ್ಬಿಟ್ಟ” ಅಂತ. ನಾನು ಮೇಲಿಂದ ಕೆಳಗೆ ಬಿದ್ದು ಜೋರಾಗಿ ಅಳ್ತಿದ್ದೆ, ಏನು ಹೀಗಾಗೋಯ್ತು? ಅಂತ. ಆಮೇಲೆ ಬಹಳ ಬೇಜಾರಲ್ಲೇ ಮನೆಗೆ ಹೋದಾಗ, ರಮೇಶ್ ಭಟ್ ಬಂದು, ನನಗೆ ಹೇಳಿದ್ರು, “ಜಾನ್, ಶಂಕರ್ ನಿನಗೆ ಸ್ಕಲ್ಪಚರ್ ಮಾಡಕ್ಕೆ ಹೇಳ್ದ ಅಲ್ವ, ನೀನು ಮಾಡ್ಬೇಕು ಅದನ್ನ ಈಗ” ಅಂತ.ಮುಂದುವರೆಯುವುದು…

19 views