ಆ ಘಟನೆ ಇಂದ ಸುಧೀರ್ ನೊಂದಿದ್ದರು

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 18

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ಪರಮ್: ನಿಮ್ಮ ಹಾಗೂ ಸುಧೀರ್ ಅವರ ಬದುಕಿನಲ್ಲಿ ಯಾವುದಾದ್ರೂ ಮರೆಯಲಾರದ ಘಟನೆಗಳು ಹೇಳಿ?


ಮಾಲತಿ ಸುಧೀರ್: ಮರೆಯಲಾಗದ ಘಟನೆಗಳು ಅಂದ್ರೆ ತುಂಬನೇ ಇದ್ದಾವೆ.


ಪರಮ್: ಕೆಲವನ್ನ ಹೇಳಿ?


ಮಾಲತಿ ಸುಧೀರ್: ಸುಧೀರ್ ಅವರು ಮಂಗಳೂರಿನ ಹತ್ರ ಬೆಳ್ತಂಗಡಿ ಅಂತೇನೋ ಒಂದು ಊರಲ್ಲಿ ನಾಟಕ ಮಾಡಿದ್ರು. ಗೌಡರ ಗದ್ದಲ ನಾಟಕ ರೈ ಅಂತ ಒಬ್ಬರು ಕಂಪೆನಿ ಮಾಡಿದ್ರು. ಆ ನಾಟಕಕ್ಕೆ ಐದು ದಿವ್ಸ ಡೇಟ್ ಕೊಟ್ಟಿದ್ರು. ಆನಾಟಕಕ್ಕೆ ಜನ ಸುಧೀರ್ ಅವರ ಬಗ್ಗೆ ಹುಚ್ಚರಾಗ್ಬಿಟ್ರು. ಲಾರಿಗಳಲ್ಲಿ ಜನ ತುಂಬಿಸ್ಕೊಂಡು ಬಂದು ಆನಾಟಕ ತೋರಿಸ್ತಿದ್ರು. ಹಳ್ಳಿಗಳಲ್ಲೆಲ್ಲಾ ಒಂದೊಂದು ಗುಡ್ಡದಲ್ಲಿ ಇಪ್ಪತ್ತಿಪ್ಪತ್ತು ಮನೆಗಳಿರುತ್ತೆ. ಆಗುಡ್ಡದಲ್ಲಿರೋವವರನ್ನೆಲ್ಲಾ ಲಾರಿಯವರು ಕರ್ಕೊಂಡು ಬರ್ತಿದ್ರು. ಲಾರಿಯವರಿಗೂ ಅದೊಂದು ಬ್ಯುಸ್ನೆಸ್ ಆಗಿತ್ತು. ಒಬ್ಬರಿಂದ ಐವತ್ತು ರೂಪಾಯಿ ತಗೊಂಡು ಕರ್ಕೊಂಡು ಬಂದ್ರೆ ನಂಗೂ ದುಡಿಮೆ ಆಗುತ್ತೆ ಅಂತ ದಿನಾಲೂ ಕರ್ಕೊಂಡು ಬಂದು ಕರ್ಕೊಂಡೋಗ್ತಿದ್ದ. ಲಾಸ್ಟ್ ಡೇ ಅಂತೂ ಹೌಸ್‍ಫುಲ್ ಕಲೆಕ್ಷನ್. ಜನಗಳಿಗೆ ನಿಲ್ಲೊದಕ್ಕೂ ಜಾಗ ಇರ್ಲಿಲ್ಲ. ನಾಟಕ ಮುಗಿದ ನಂತರ ಎಲ್ಲರನ್ನೂ ಲಾರಿಯಲ್ಲಿ ಕೂರಿಸ್ಕೊಂಡು ಕರ್ಕೊಂಡೋದ್ರು. ಜನಗಳೆಲ್ಲಾ “ನಾಟಕ ನೋಡಿದ್ವಿ, ಸುಧೀರ್ ಅವರನ್ನ ನೋಡಿದ್ವಿ, ಖಳನಾಯಕನ ನೋಡಿದ್ವಿ” ಅನ್ನೋ ಸಂತೋಷದಲ್ಲಿ ಲಾರಿ ಡ್ರೈವರ್ ಹಾಗೂ ಜನಗಳೆಲ್ಲಾ ಹೋಗ್ತಾ ಇದ್ದಾರೆ. ಲಾರಿ ಡ್ರೈವರ್ ನಾಲ್ಕು ಗಂಟೆಯವರೆಗೂ ನಾಟಕ ನೋಡಿ ಲಾರಿ ಓಡಿಸ್ತಿದ್ದ, ಎಲ್ಲೋ ನಿದ್ದೆ ಎಳೆದ್ಬಿಟ್ಟಿದೆ. ಗುಡ್ಡದಿಂದ ಕೆಳಗೆ ಲಾರಿ ಮಗುಚಿ ಬಿತ್ತು. ಅದರಲ್ಲಿ ಸುಮಾರು ಜನ ಸತ್ತೋಗ್ಬಿಟ್ರು. ಸುಧೀರ್ ಅವರನ್ನ ನೋಡಕ್ಕೆ ಬಂದು ಸುಮಾರು ಜನ ಸತ್ತೋದ್ರು ಅಂತ ನಮ್ಮ ಸುಧೀರ್ ಅವರಿಗೆ ಕೊನೇ ವರೆಗೂ ಆನೋವು ಇತ್ತು. “ನನ್ನ ಅಭಿಮಾನಿಗಳು ನನ್ನ ನಾಟಕ ನೋಡಿ ಲಾರಿ ಪಲ್ಟಿ ಹೊಡ್ದು ಸುಮಾರು ಜನ ಸತ್ತೋದ್ರಲ್ಲಾ”ಅಂತ. ಇದೊಂದು ಅವರಿಗೆ ತುಂಬಾ ನೋವಾಗಿರುವ ವಿಷಯ.ಮುಂದುವರೆಯುವುದು…

12 views