ಆ ಸಿನಿಮಾ ನಟಿಯೊಡನೆ ದೊರೆಯವರ ರೋಚಕ ಮದುವೆ ಘಟನೆ

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 53


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)


ದೊರೆ ಅವರ ಮದುವೆಯೇ ರೋಚಕವಾಗಿತ್ತು. ಅವರ ಪತ್ನಿ ‘ಅಬ್ಬಾ ಆ ಹುಡುಗಿ’ ಸಿನಿಮಾದಲ್ಲಿ ಎರಡನೇ ನಾಯಕಿಯಾದ್ದಳು. ಆ ಸಿನಿಮಾದ ಕ್ಯಾಮೆರಾಮೆನ್‌ ದೊರೆ. ಆ ಹುಡುಗಿ ಮೈಸೂರಿನವಳು. ನೋಡಲು ಸುಂದರವಾಗಿದ್ದಳು. ಹಾಗಾಗಿ ದೊರೆಯವರು ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದ್ರು. ಇಲ್ಲ ನನಗೆ ಸಿನಿಮಾ ರಂಗದಲ್ಲಿ ಬೆಳೆಯುವ ಆಸೆ ಎಂದು ಆಕೆ ಹೇಳಿದಳು. ನಾನು ಕ್ಯಾಮೆರಾಮೆನ್ ಆಗಿರುವುದರಿಂದ ನಿನಗೆ ನಂತರವೂ ಅವಕಾಶ ಕೊಡಿಸುತ್ತೇನೆ ಎಂದು ಅವರು ಹೇಳಿದ್ರು. ಆಕೆ ಒಪ್ಪಿಕೊಂಡಳು.ಆದರೆ ಆಕೆಯ ಮನೆಯವರು ಒಪ್ಪಲಿಲ್ಲ. ಈ ಮದುವೆ ಆದ್ರೆ ನೀನು ಮದ್ರಾಸ್‌ನಲ್ಲಿಯೇ ಉಳಿದುಕೊಂಡು ಬಿಡ್ತೀಯಾ. ಮೈಸೂರಿನ ಗಂಡನ್ನೇ ನೋಡಿ ಮದುವೆ ಮಾಡೋಣ ಎಂದು ಅವರು ಹೇಳಿದ್ರು. ಆದರೆ, ಇವರು ಬಿಡಲಿಲ್ಲ. ನಾನು ಇವಳನ್ನು ಮದುವೆ ಆಗಬೇಕು ಏನು ಮಾಡುವುದು ಎಂದು ದೊರೆಯವರು ನನ್ನನ್ನು ಮತ್ತು ಅಯ್ಯರ್‌ ಅವರನ್ನು ಕೇಳಿದ್ರು. ಅದಕ್ಕೆ ಅಯ್ಯರ್‌ ಅವರು ನಾನು ಮಾಡಿಸುತ್ತೇನೆ ಎಂದ್ರು. ಭಗವಾನ್‌ ಬಾ ಇಲ್ಲಿ ತಿರುಪತಿಯಲ್ಲಿ ಛತ್ರ ಬುಕ್‌ ಮಾಡು ಎಂದು ಅಯ್ಯರ್‌ ಅವರು ನನಗೆ ಹೇಳಿದ್ರು. ಛತ್ರ ಬುಕ್‌ ಮಾಡಿದೆ. ಎರಡು ಕಾರಿನಲ್ಲಿ ಅಲ್ಲಿಗೆ ಹೋದೆವು. ಅವರ ಮದುವೆಗೆ 100–150 ಖರ್ಚಾಗಿತ್ತು. ರನ್‌ ಅವೇ ಮ್ಯಾರೇಜ್‌ ಮಾಡಿಸಿ ವಾಪಸ್ ಕರೆದುಕೊಂಡು ಬಂದೆವು. ಮದುವೆ ಆದ ಮೇಲೆ ಆಕೆಯ ಮನೆಯವರು ಒಪ್ಪಿಕೊಂಡ್ರು. ಆಮೇಲೆ ಸುಖವಾಗಿ ಜೀವನ ನಡೆಸಿದ್ರು. ಎರಡು ಮಕ್ಕಳು ಹುಟ್ಟಿದ್ರು. ಈಗ ದೊರೆ, ಅವರ ಹೆಂಡತಿ, ಮಗ ಮೂವರು ಇಲ್ಲ. ಮಗಳು ಚೆನ್ನಾಗಿದ್ದಾಳೆ.


ದೊರೆಯವರ ಕಿವಿ ಸರಿಯಾಗಿ ಕೇಳುತ್ತಿರಲಿಲ್ಲ. ಮಿತಭಾಷಿ. ಬಹಳ ತಮಾಷೆ ಮಾಡುತ್ತಿದ್ರು. ಆದರೆ ರಾಜ್‌ಕುಮಾರ್‌ ಹೊರತಾಗಿ ಯಾರ ಬಳಿಯೂ ಹೆಚ್ಚು ಮಾತನಾಡುತ್ತಿರಲಿಲ್ಲ. ನಾನೇ ಹೆಚ್ಚು ಮಾತನಾಡುವುದು.ಮುಂದುವರೆಯುವುದು...

19 views