ಆ ಹುಡುಗಿಯನ್ನ ಕಾಪಾಡಲು ಪೊಲೀಸ್‌ ವೇಷ ಹಾಕಿದ್ದೆ

ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 78
ಕಲಾ ಎಂಬ ಹುಡುಗಿ ಇದ್ದಳು. ಕಲಾಕ್ಷೇತ್ರದಲ್ಲಿ ಅವರ ನಾಟಕ ನಡೆಯುತ್ತಿದ್ರೆ. ಆಕೆ ಹಾಕಿಕೊಂಡ ಮೇಕಪ್‌ ನೋಡಿಕೊಂಡು ಹೋಗಲು ಕನಿಷ್ಠ 10 ಮೋಟಾರ್‌ ಬೈಕ್‌ ಬರುತ್ತಿತ್ತು. ಆಕೆಯ ಸೌಂದರ್ಯ ಮತ್ತು ಗೆಟಪ್ ನೋಡಿಕೊಂಡು ಹೋಗಲು ಬರುತ್ತಿದ್ದ ಫ್ಯಾನ್ಸ್‌ ಇದ್ರು. ಈಗಿನ ಒಬ್ಬ ದೊಡ್ಡ ಸಂಗೀತ ನಿರ್ದೇಶಕ ಆ ನಾಟಕದ ಮ್ಯೂಸಿಕ್‌ ನಿರ್ದೇಶನ ಮಾಡಿದ್ರು. ಬಹಳ ಅದ್ಭುತವಾದ ಕಲಾವಿದರು, ದೊಡ್ಡ ನಾಟಕವದು. ನಾನು ನೋಡಲು ಹೋಗುತ್ತಿದ್ದೆ. ಬಹಳ ಚಿಕ್ಕ ಹುಡುಗಿ ಆಕೆ. ಮಹಾರಾಣಿ ಪಾತ್ರ ಮಾಡಿದ್ರೆ, ಮಹಾರಾಣಿಯಂತೆ ಕಾಣಿಸುತ್ತಿದ್ದಳು. ಕೈಮುಗಿಯುವ ಮನಸ್ಸಾಗುತ್ತಿತ್ತು.


ಆ ಹುಡುಗಿಯಿಂದ ‘ಕಲಾ ಕುಟೀರ’ದ ನಾಟಕದಲ್ಲಿ ಮಾಡಿಸುತ್ತೇನೆ ಎಂದು ರಘು ಹೇಳಿದ್ರು. ನಾನೇ ಆ ಕಾಲದಲ್ಲಿ ನಾಟಕ ಬರೆದಿದ್ದೆ. ಸಂಡೂರಿನಲ್ಲಿ ನಾಟಕ ಮಾಡಲು ಹೋದೆವು. ಚೆನ್ನಾಗಿ ನಾಟಕ ಮಾಡಿದ್ವಿ. ಮೋಟಾರ್‌ ಬೈಕ್‌ನಲ್ಲಿ ಒಬ್ಬ ವ್ಯಕ್ತಿ ಬಂದ. ಹಿಂದೆ ಜೀಪ್, ವ್ಯಾನ್ ಬಂತು. ಕುಡಿದಿದ್ರು. ರಾತ್ರಿ ಬಸ್‌ ಇದೆ ಎಂದು ಯಾರೋ ಹೇಳಿತ್ತಿದ್ರು. ಆಗ ಅವನು ಯಾವ ಬಸ್ಸು ಇಲ್ಲ. ಎಲ್ಲ ಐಬಿಯಲ್ಲಿ ಇರ್ರಿ.. ಎಂದು ಹೇಳುವುದು ನನಗೆ ಕೇಳಿಸಿತು. ಆ ಹುಡುಗಿ ಬಳಿ ಹೋದ ಆತ, ಬನ್ನಿ ನಮ್ಮ ಮನೆಗೆ ಇಲ್ಲೇ ತೋಟದ ಮನೆ ಇದೆ. ಅರ್ಥ ಆಯ್ತಲ್ವಾ ನಿಮಗೆ ಎಂದ. ಎಲ್ಲರಿಗೂ ನಾನ್‌ವೆಜ್‌ ಊಟ. ಬೇರೆ ಏನಾದ್ರೂ ತೆಗೆದುಕೊಳ್ಳುವವರು ಇದ್ದೀರಾ ಎಂದ.


ಬಹಳ ಒಳ್ಳೆಯ ಹುಡುಗಿ ಅವಳು. ತರಗೆಲೆ ತರಹ ನಡುಗಿ ಹೋದಳು. ನನಗೆ ಏನು ಮಾಡ್ಲಿ ಎಂಬ ಯೋಚನೆಯಾಯ್ತು. ದೇವರೇ ಎಂದು ಕೈಮುಗಿದೆ. ತಕ್ಷಣವೇ ನಾನು ಎಲ್ರೀ ಆ ಕಾನ್‌ಸ್ಟೆಬಲ್‌, ಸಬ್‌ಇನ್‌ಸ್ಪೆಕ್ಟರ್‌ ಇಬ್ಬರನ್ನು ಬರಲು ಹೇಳಿದ್ನಲ್ಲ ಎಲ್ಲಿ ಅವರು. ಏನು ಇವರೆಲ್ಲ ಹುಡುಗಾಟ ಆಡುತ್ತಿದ್ದಾರಾ ನಾನ್‌ಸೆನ್ಸ್‌. ಎಸ್ಪಿ ಅವರಿಗೆ ಹೇಳಿದ್ನಲ್ಲಾ ಎಂದು ಪೊಲೀಸ್‌ ಅವರಂತೆ ಮಾತನಾಡಲು ಆರಂಭಿಸಿದೆ. ನನ್ನ ಆ್ಯಟಿಟ್ಯೂಡ್‌, ಸ್ಟೈಲ್‌ ಎಲ್ಲ ಬದಲಾಯ್ತು. ಪಕ್ಕ ಇದ್ದವರು ಎಸ್‌ ಸರ್‌.. ಅಂದ್ರು. ಆತ ಯಾರಿವರು ಎಂದ. ಬೆಂಗಳೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂದೆ. ಅವನ ಮುಖದಲ್ಲಿ ಬದಲಾವಣೆ ಕಾಣ್ತು. ನಾಳೆ ಡ್ಯೂಟಿ ಇದೆ ಹೋಗಬೇಕು. ನಿಮಗೇನಾಗಬೇಕು ಎಂದೆ. ಏನಿಲ್ಲ ಸರ್‌ ಎಂದ.


ನಮ್ಮನ್ನೆಲ್ಲ ವ್ಯಾನ್‌ಗೆ ಹತ್ತಿಸಿ, ಬಳ್ಳಾರಿ ಬಸ್‌ಸ್ಟ್ಯಾಂಡ್‌ ತಂದು ಬಿಟ್ಟು ಊಟ ಕೊಡಿಸಿ ಹೋದ ಆ ಮನುಷ್ಯ. ನಾಟಕ ಮುಗಿದ ಮೇಲೆ ನಾನು ಮಾಡಿದ ಪಾತ್ರವದು. ಆ ಹುಡುಗಿ ಅಳುತ್ತಿದ್ದಳು. ನಾನು ನಿಮ್ಮ ಜೊತೆಗೆ ಕೂರುತ್ತೇನೆ ಎಂದು ಬೆಂಗಳೂರಿಗೆ ಬರುವವರೆಗೂ ನನ್ನ ಪಕ್ಕದಲ್ಲಿಯೇ ಕುಳಿತಳು. ನನ್ನ ತಂದೆ, ಅಣ್ಣ ಇದಿದ್ರೂ ಆ ಸಂದರ್ಭದಲ್ಲಿ ನಾನು ಉಳಿಯುತ್ತಿರಲಿಲ್ಲ ಎಂದಳು.


ನಮ್ಮ ಜೊತೆಗಿರುವ ಕಲಾವಿದರನ್ನು ತಂಗಿ, ತಾಯಿ ಅವರಿಗಿಂತ ಹೆಚ್ಚಾಗಿ ನೋಡಿಕೊಳ್ಳಬೇಕು. ತಾಯಿ, ಸಹೋದರಿಯರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಆದರೆ, ಇದು ಅದಕ್ಕಿಂತ ದೊಡ್ಡ ಕರ್ತವ್ಯ. ಅವರು ನಮ್ಮನ್ನು ನಂಬಿಕೊಂಡು ಬಂದಿರುತ್ತಾರೆ. ಅವಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸದೇ ಹೋಗಿದ್ದರೆ ಇವತ್ತು ಇಷ್ಟು ಸಂತೋಷವಾಗಿ ನಾನು ಬದುಕುತ್ತಿರಲಿಲ್ಲ. ಪ್ರತಿಯೊಬ್ಬ ಕಲಾವಿದನಿಗೂ ಅವನ ಸಹ ಕಲಾವಿದನ ಬಗ್ಗೆ ಬಹಳಷ್ಟು ಗೌರವ ಇರಬೇಕು.


ಸಹಕಲಾವಿದರಿಗೆ ಗೌರವ ಕೊಟ್ಟರೆ ನಿಮಗೆ ಡಬಲ್‌ ಗೌರವ ಸಿಗುತ್ತದೆ. ಇದು ನನ್ನ ಅನುಭವ. ಮನೆ ಬಿಟ್ಟು ನಾಟಕ, ವೇದಿಕೆ ಕಾರ್ಯಕ್ರಮ ಬಂದಿರುತ್ತಾರೆ ಎಂದರೆ, ಅವರಿಗೆ ಮನೆಯಲ್ಲೂ ಸಮಸ್ಯೆ ಇರಬಹುದು. ಇಲ್ಲವೇ ಅವರೊಳಗೆ ಒಬ್ಬ ಕಲಾವಿದೆ ಇರುತ್ತಾರೆ. ದೈಹಿಕ ಸುಖಕ್ಕೋ ಅಥವಾ ಇನ್ನೆನ್ನೋ ಅಹಂಕಾರಕ್ಕೋ ಅವರು ಬಂದಿರುವುದಿಲ್ಲ. ಪ್ರತಿಯೊಬ್ಬರಿಗೂ ಮನಸ್ಸು, ಬದುಕು ಇರುತ್ತದೆ. ಅದನ್ನು ನಾಶಗೊಳಿಸುವ ಅಧಿಕಾರ ಯಾರಿಗೂ ಇಲ್ಲ.ಮುಂದುವರೆಯುವುದು...

17 views