ಇಳಯರಾಜ ಅವರ ಆರ್ಕೆಸ್ಟ್ರಾ ಬೇಕೆಂಬ ಕಂಡೀಷನ್

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 96


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)‌ಒಳ್ಳೊಳ್ಳೆ ಸಂಗೀತ ನಿರ್ದೇಶಕರ ಹಾಡುಗಳಿಗೆ ರಾಜ್‌ಕುಮಾರ್‌ ಅವರು ಧ್ವನಿಯಾಗಿದ್ದಾರೆ. ಇಳಯರಾಜರ ಹಾಡುಗಳನ್ನು ರಾಜ್‌ಕುಮಾರ್‌ ತುಂಬಾ ಇಷ್ಟಪಡುತ್ತಿದ್ದರು. ಇಳಯರಾಜ ಅವರಿಗೆ ನಮ್ಮ ಬಗ್ಗೆ ಬಹಳ ಗೌರವ ಇತ್ತು. ನನಗೆ ನಾಲ್ಕು ಜನ ಮಕ್ಕಳು. ಅದರಲ್ಲಿ ಮೊದಲನೆಯವಳು ಹೆಣ್ಣುಮಗಳು. ಅವಳ ವಿದ್ಯಾಭ್ಯಾಸ ಮುಗಿದ ಬಳಿಕ ಮದುವೆಗೆ ತಯಾರಿ ನಡೆಸಿದೆ. ಆಗ ಅವಳು, ನೀನು ಯಾರನ್ನು ಬೇಕಾದರೂ ತೋರಿಸು, ನಾನು ಮದುವೆ ಆಗಲು ತಯಾರಿದ್ದೇನೆ. ಆದರೆ ಎರಡು ಷರತ್ತಿದೆ. ನನ್ನ ಮದುವೆ ಆರತಕ್ಷತೆಗೆ ಇಳಯರಾಜ ಅವರ ಮ್ಯೂಸಿಕ್‌ ಇರಬೇಕು. ರಜನೀಕಾಂತ್‌ ನನ್ನ ರಿಸೆಪ್ಷನ್‌ಗೆ ಬರಬೇಕು. ಇವರೆಡರು ಷರತ್ತುಗಳಿಗೆ ಒಪ್ಪಿದರೆ ನೀನು ಯಾರನ್ನು ಮದುವೆ ಮಾಡಿಸಿದ್ರು ಆಗುತ್ತೇನೆ ಎಂದಳು.


ಮದುವೆಗೆ ಹುಡುಗ ಹುಡುಕಿದೆ ಎಲ್ಲ ಒಪ್ಪಿಗೆ ಆದ ಮೇಲೆ ಇಳಯರಾಜ ಅವರ ಬಳಿ ಹೋಗಿ ಕೇಳಿಕೊಂಡೆ. ಅದಕ್ಕವರು, ನಾನು ಆರ್ಕೆಸ್ಟ್ರಾ ಮಾಡುವುದಿಲ್ಲ. ನನ್ನ ತಮ್ಮ ಮಾಡುತ್ತಾನೆ. ನನ್ನ ಕೈಯಲ್ಲಿ ಆಗುವುದಿಲ್ಲ ಎಂದರು. ನಾನು ಬಿಡಲಿಲ್ಲ. ನನ್ನ ಮಗಳ ಷರತ್ತಿದು ಸರ್. ನೀನು ನನ್ನನ್ನು ಗುರು ಎನ್ನುತ್ತೀಯ. ನೀನು ಮಾಡಲೇಬೇಕು. ಇದು ಗುರು ಆಜ್ಞೆ ಎಂದು ತಿಳಿದಿಕೊ ಎಂದೆ. ಸರಿ ಎಂದು ಒಪ್ಪಿಕೊಂಡರು. ಆಮಂತ್ರಣ ಪತ್ರಿಕೆಯಲ್ಲೂ ಇಳಯರಾಜ ಮ್ಯೂಸಿಕ್‌‌ ಎಂದು ಹಾಕಿದೆ. ಆಮಂತ್ರಣ ಪತ್ರಿಕೆಯನ್ನು ರಜನೀಕಾಂತ್‌ಗೆ ಕೊಡುವೆ ವೇಳೆ ಅವರಿಗೆ ಮಗಳ ಷರತ್ತನ್ನು ಹೇಳಿ, ಆರತಕ್ಷತೆಗೆ ಬರುವಂತೆ ತಿಳಿಸಿದೆ. ಅಯ್ಯೋ, ನಿಮ್ಮ ಮಗಳ ಮದುವೆಗೆ ನಾನು ಬರದೇ ಇರುತ್ತೇನಾ? ನಾನೇ ಮೊದಲು ಬರುತ್ತೇನೆ ಎಂದರು. ಹಾಗೆ ಎರಡು ಷರತ್ತುಗಳನ್ನು ಪೂರ್ಣಗೊಳಿಸಿದ್ದೆ.


ಆರತಕ್ಷತೆಯನ್ನು ವುಡ್‌ಲ್ಯಾಂಡ್ಸ್‌ ಹೋಟೆಲ್‌ನಲ್ಲಿ ಇರಿಸಿದ್ದೆ. ಮೂರು ಸಾವಿರ ಜನಕ್ಕೆ ಊಟಕ್ಕೆ ತಯಾರು ಮಾಡಿದ್ದೆ. ಇಳಯರಾಜ ಸಂಗೀತ ಎಂದು ಆಮಂತ್ರಣ ಪತ್ರಿಕೆಯಲ್ಲಿ ಇದ್ದಿದ್ದರಿಂದ, ಹೆಚ್ಚುಕಮ್ಮಿ ಆರೇಳು ಸಾವಿರ ಜನ ಬಂದಿದ್ದರು. ಹಾಡನ್ನು ಕೇಳಿ ಎಲ್ಲ ಊಟಕ್ಕೆ ಹೋಗಿಬಿಟ್ಟರು. ಕೊನೆಗೆ ನಮಗೇ ಊಟ ಇರಲಿಲ್ಲ. ಪಕ್ಕದಲ್ಲಿ ಸವೆರಾ ಹೋಟೆಲ್‌ ಇತ್ತು. ಅದು ರಾತ್ರಿ 12 ಗಂಟೆವರೆಗೂ ತೆರೆದಿರುತ್ತದೆ. ಅಲ್ಲಿ ಗಂಡಿನ ಮನೆಯವರು ಮತ್ತು ನಾವು ಎಲ್ಲ ಹೋಗಿ ಊಟ ಮಾಡಿದೆವು. ನನ್ನ ಮಾತಿಗೆ ಬೆಲೆ ಕೊಟ್ಟು ಅವರಿಬ್ಬರು ಬಂದಿದ್ದಕ್ಕೆ ಇವತ್ತಿಗೂ ನಾನು ಅವರಿಬ್ಬರಿಗೂ ಆಭಾರಿಯಾಗಿದ್ದೇನೆ. ನಾನೆಷ್ಟು ಕೃತಜ್ಞನಾಗಿದ್ದರೂ ಸಾಲದು.ಮುಂದುವರೆಯುವುದು...

34 views