
ಇಂಡಸ್ರ್ಟಿ ಬಗ್ಗೆ ವಿಷ್ಣುವರ್ಧನ್ಗಿದ್ದ ಅಭಿಮಾನ ಎಂಥದ್ದು?
ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 79

ವಿಷ್ಣುವರ್ಧನ್ ಸರ್ ಅವರಿಂದ ನಾನು ಶಿಸ್ತು ಕಲಿತೆ. ವಿಷ್ಣುವರ್ಧನ್ ಅವರು ಮೊದಮೊದಲು ನನ್ನ ನೋಡಿದಾಗ ನನ್ನನ್ನೇ ಅನುಕರಣೆ ಮಾಡುತ್ತೀರಾ ಅಂತೆಲ್ಲ ಅನ್ನುತ್ತಿದ್ರು. ಆದರೆ, ನಂತರದಲ್ಲಿ ನನ್ನನ್ನು ಬಹಳ ಇಷ್ಟಪಡುತ್ತಿದ್ರು. ಫಣಿ ರಾಮಚಂದ್ರ ಅವರ ಚಿತ್ರವೊಂದರಲ್ಲಿ ನನ್ನದೇ ಯೂನಿಫಾರಂ ಇದೆ ಅಂದ್ರು ಯೂನಿಟ್ದೇ ಹಾಕಬೇಕು ಅಂದ್ರು. ನಾನು ಹಾಕಿಕೊಂಡೆ. ಪ್ಯಾಂಟ್ ಅಲ್ಲಲ್ಲಿ ಸುಕ್ಕು ಗಟ್ಟಿದಂತೆ ಇತ್ತು. ಬೆಲ್ಟ್ ಸರಿಯಾಗಿ ಕೂತಿರಲಿಲ್ಲ. ನಾನೇನು ಜನಪ್ರಿಯ ಕಲಾವಿದನಾಗಿರಲಿಲ್ಲ. ಏನು ಹೇಳುವಂತೆಯೂ ಇರಲಿಲ್ಲ. ಅದೇ ವೇಳೆ ವಿಷ್ಣುವರ್ಧನ್ ಸರ್ ಬಂದ್ರು. ಕಾಸ್ಟ್ಯೂಮರ್ ಅವರನ್ನು ಕರೆದು, ನನ್ನ ಬಟ್ಟೆ ತೋರಿಸಿ, ನೀನೇ ಸಿನಿಮಾ ಪ್ರೊಡ್ಯೂಸರ್ ಆಗಿದ್ರೆ ಈ ಬಟ್ಟೆ ಹಾಕಿಸುತ್ತಿದ್ದೀಯಾ ಹೇಳ್ಳಣ್ಣ ಎಂದ್ರು. ಯಾವುದೇ ಕೆಟ್ಟ ಮಾತನ್ನು ಅವರು ಬಳಸಲಿಲ್ಲ. ಬೇರೆ ಭಾಷೆಯವರು ಸಿನಿಮಾದಲ್ಲಿ ಈ ಉಡುಪು ನೋಡಿದ್ರೆ, ಕನ್ನಡ ಇಂಡಸ್ಟ್ರಿಯವರು ಕಳಪೆ ಬಟ್ಟೆ ಹಾಕಿಸುತ್ತಾರೆ ಅಂದುಕೊಳ್ಳುತ್ತಾರೆ. ತಪ್ಪಲ್ವಾ ನೀವು ಮಾಡಿದ್ದು. ನೋ.. ಈ ತರಹ ಮಾಡಬಾರದು ನೀವು. ಅವರು ಕಲಾವಿದರು ಎಂದ್ರು. ನಾನು ಸರ್ ಇರ್ಲಿ ಅಂಥೆನೋ ಅಂದೆ. ಅದಕ್ಕೆ, ದಯಾನಂದ್, ನಾನು ನನ್ನ, ನಿಮ್ಮ ಬಗ್ಗೆ ಮಾತನಾಡುತ್ತಿಲ್ಲ. ಇಂಡಸ್ಟ್ರಿಯ ಮರ್ಯಾದೆ ಬಗ್ಗೆ ಮಾತನಾಡುತ್ತಿದ್ದೇನೆ ಎಂದ್ರು. ನಾನು 10 ನಿಮಿಷ ಸಮಯ ಕೊಡಿ ಎಂದು ಹೇಳಿ ಹೋಗಿ, ನನ್ನದೇ ಬಟ್ಟೆ ಹಾಕಿಕೊಂಡು ಬಂದೆ. ಈವಾಗ ಹೇಗೆ ಬಂತು ಎಂದು ಅವನನ್ನು ಕೇಳಿದ್ರು. ಆಗ ನಾನು ಇದು ನನ್ನ ಹತ್ತಿರ ಇದ್ದ ಬಟ್ಟೆ. ಇದನ್ನು ಮೊದಲೇ ಯಾಕೆ ಹಾಕಿಲ್ಲ ಎಂದ್ರು. ಅವರು ಬೇಡ ಎಂದ್ರು ಎಂದೆ.
ಇವತ್ತಿಗೂ ಇನ್ಸ್ಪೆಕ್ಟರ್ ಪಾತ್ರ ಮಾಡುವಾಗ ಬೆಲ್ಟ್ಹಾಕುವ ವೇಳೆ ವಿಷ್ಣುವರ್ಧನ್ ನೆನಪಿಗೆ ಬರುತ್ತಾರೆ. ಒಂದು ದಿವಸ ಶರ್ಟ್ ಮಾತ್ರ ಹಾಕಿದ್ದೆ. ಆಗ ಅವರು, ಎಲ್ಲಿ ಕೋಟ್.. ಅದನ್ನು ಹಾಕಿಕೊಂಡೆ ಬನ್ನಿ. ನಿಮ್ಮದೇ ಆದ ಒಂದು ಬ್ರ್ಯಾಂಡ್ ಇದೆ. ನೀವು ಕೋಟ್, ವಿಗ್, ಮೇಕಪ್ ಹಾಕಿಕೊಂಡು ಬರುವುದು ತುಂಬಾ ಮುಖ್ಯ. ಜನ ನಿಮ್ಮ ಮುಖವನ್ನು ಒಂದು ಗಂಟೆ ನೋಡಬೇಕು. ನೀವು ಶಿಸ್ತಾಗಿದ್ದು, ಒಳ್ಳೆಯ ಬಟ್ಟೆಯನ್ನು ಹಾಕಿಕೊಂಡು ಬರಬೇಕು ಎನ್ನುತ್ತಿದ್ರು. ರಸ್ತೆಯಲ್ಲಿ ಮಿಮಿಕ್ರಿ ಮಾಡುವ ಒಬ್ಬ ಪುಟ್ಟ ಕಲಾವಿದನನ್ನು ಇಂಡಸ್ಟ್ರಿಯ ಒಂದು ಭಾಗ ಎಂದು ಅವರು ಹೇಳಿದ್ರು. ಅದು ವಿಷ್ಣುವರ್ಧನ್ ಅವರ ವ್ಯಕ್ತಿತ್ವ.
ಮುಂದುವರಿಯುವುದು...