ಉದಯಶಂಕರ್‌ ಮತ್ತು ದೊರೈ ಅವರ ಅಕಾಲ ಮರಣಕ್ಕೆ ಕಾರಣ?

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 90


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)ಉದಯ್‌ಶಂಕರ್‌ದು ಅಕಾಲ ಮರಣ ಎಂದೇ ಹೇಳಬಹುದು. ಅವನಿಗೆ ಸಾಯುವ ವಯಸ್ಸಾಗಿರಲಿಲ್ಲ. ನಂಜುಂಡಿ ಕಲ್ಯಾಣ ಸಿನಿಮಾದ 25 ವರ್ಷ ಸಂಭ್ರಮಾಚರಣೆ ವೇಳೆ ಮದ್ರಾಸ್‌ನಿಂದ ಅವರ ಮಗ ರವಿ ಮತ್ತು ವಿಕ್ರಂ ಶ್ರೀಧರ್‌ ಮಗ ಎಲ್ಲ ಬರುತ್ತಿದ್ರು ಆಗ ಕೋಲಾರದ ಬಳಿ ಅಪಘಾತವಾಗಿ ಹೋಗಿಬಿಟ್ಟರು. ಪುತ್ರ ಶೋಕ ಅವರನ್ನು ಕುಗ್ಗಿಸಿಬಿಟ್ಟಿತ್ತು. ದೊರೆ ಅವರ ಮಗನದು ಅಕಾಲ ಮರಣ. ತುಂಬಾ ಚೆನ್ನಾಗಿದ್ದವನು, ಹೆಂಡತಿ ಮಕ್ಕಳ ಜತೆ ಆಟವಾಡುತ್ತಿದ್ದವನು, ಯಾಕೋ ಎದೆನೋವು ಎಂದ. ತಕ್ಷಣವೇ ಕ್ಲಿನಿಕ್‌ಗೆ ಕರೆದುಕೊಂಡು ಹೋದ್ರು. ಬಿ.ಪಿ ನೋಡಲು ಡಾಕ್ಟರ್‌ ಬರುವಷ್ಟರಲ್ಲಿಯೇ ಆತ ಹೋಗಿ ಬಿಟ್ಟಿದ್ದ. ದೊರೆಯವರು ಹೋಗುವುದಕ್ಕೂ ಅದೇ ಕಾರಣ. ಮಕ್ಕಳನ್ನು ಕಳೆದುಕೊಂಡು ಬಿಟ್ಟರೆ ಬಹಳ ಕಷ್ಟ. ಪ್ರೀತಿ ಪಾತ್ರರಾದವರು ಕಣ್ಮರೆಯಾದಾಗ ಮನುಷ್ಯನ ಹೃದಯ ನುಚ್ಚುನುರಾಗುತ್ತಾರೆ.


ಉದಯ್‌ಶಂಕರ್‌ ಬಗ್ಗೆ ಜನರಿಗೆ ಗೊತ್ತಿದೆ. ಅವನ ಪ್ರತಿಯೊಂದು ಹಾಡು, ಸಂಭಾಷಣೆ ಜನರ ಮನಸ್ಸಿನಲ್ಲಿ ನೆಲೆಯೂರಿದೆ. ಕಸ್ತೂರಿ ನಿವಾಸ ಸಿನಿಮಾವನ್ನು ಜನ ಈಗಲೂ ಹೊಗಳುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಉದಯ್‌ಶಂಕರ್. ಕಥೆಯನ್ನು ಕೇಳಿ ಅವನಿಗೆ ಇಷ್ಟವಾಗಿ ನಾವೇ ನಿರ್ದೇಶನಕ್ಕೆ ಸರಿ ಎಂದು ಯೋಚಿಸಿ ನಮ್ಮನ್ನು ಕರೆದುಕೊಂಡು ಹೋದವನೇ ಅವನು.


ನಮ್ಮ ಸಮಕಾಲೀನವರೆಲ್ಲ ಹೆಚ್ಚುಕಮ್ಮಿ ಕಣ್ಮರೆಯಾಗಿದ್ದಾರೆ. ಭಗವಂತನ ದಯೆಯಿಂದ ನಾನು ಉಳಿದುಕೊಂಡಿದ್ದೇನೆ. ಹಾಗಾಗಿ ಇಷ್ಟೆಲ್ಲ ನೆನಪುಗಳಿಗೆ ಜೀವ ಕೊಟ್ಟು ಹೇಳಲು ಸಾಧ್ಯವಾಗುತ್ತಿದೆ.ಮುಂದುವರಿಯುವುದು...

ಸಂದರ್ಶನ: ಕೆ.ಎಸ್‌ಪರಮೇಶ್ವರ

40 views