ಉಪ್ಪಿ ಎಲ್ಲರಿಗೂ ಗುರುವೇ ಎಂದು ಕರೆಯಲು ಕಾರಣ?

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 31
ಉಪೇಂದ್ರ ಅವರು ಮಾತನಾಡುವಾಗ ಗುರುವೇ ಎಂದು ಸಂಬೋಧಿಸುತ್ತಲೇ ಮಾತನಾಡುತ್ತಾರೆ. ಬಹಳ ಜನ ಹಾಗೇ ಮಾತಾಡುತ್ತಾರೆ. ಆದರೆ ನಡವಳಿಕೆಯಲ್ಲಿಯೂ ಹಾಗೆಯೇ ನಡೆದುಕೊಳ್ಳುವವರು ಕಡಿಮೆ. ದುಬೈಗೆ ಶೋಗೆಂದು ಹೋಗಿದ್ವಿ. ಎಲ್ಲ ಉಪೇಂದ್ರ ಎಂದು ಕೂಗುತ್ತಿದ್ರು. ಉಪೇಂದ್ರ ಅವರು ಒಂದು ಹಾಡು ಹೇಳಿ, ಡೈಲಾಗ್‌ ಹೊಡೆದು ಬಂದು ಬಿಟ್ರು. ನಂತರ ನನ್ನನ್ನು ಕಳುಹಿಸಿದ್ರು. 1 ಗಂಟೆ ಶೋ ಮಾಡಿ ಕೆಳಗೆ ಬಂದೆ. ಹೊರಗಡೆ ಹೋಗುವಾಗ ಉಪೇಂದ್ರ ಅವರು, ಎಲ್ಲ ನಾವು ಹೀರೊ ಎನ್ನುತ್ತಾರೆ. ಆದರೆ, ನಿಜವಾಗಿಯು ನೀವು ಹೀರೊ. ಒಂದೂವರೆ ಗಂಟೆ ಯಾರ್ರಿ ಮಾತಾಡುತ್ತಾರೆ. ನೀವು ನಿಜವಾದ ಹೀರೊ ಅಂದ್ರು. ಅದಕ್ಕೆ ನಾನು, ನಾವು ಹೀರೊ ಆಗಲು ದಿನ ಶೋ ನಡೆಸಬೇಕು. ಇಲ್ಲವಾದರೆ ಜನ ನಮ್ಮನ್ನು ಮರೆತು ಹೋಗುತ್ತಾರೆ. ನೀವು ಒಂದು ಪಿಕ್ಚರ್ ಮಾಡಿದ್ರು, ನೀವು ಹೀರೊನೇ. ನಾವು ದಿವಸ ಶೋನಲ್ಲಿ ಆಟವಾಡಬೇಕು. ನಮ್ಮದೆಲ್ಲ ಟಿವಿ ಸೀರಿಯಲ್ ತರಹ. ಇವತ್ತು ನೋಡಿ ಜನ ಮರೆತು ಬಿಡ್ತಾರೆ. ಆದರೆ, ಸಿನಿಮಾ ಪುಸ್ತಕ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತ್ಯುತ್ತಮ ನಿರ್ದೇಶಕರ ಸಾಲಿನಲ್ಲಿ ಉಪೇಂದ್ರ ಇರುತ್ತಾರೆ. ನಾನು ಇಷ್ಟೆಲ್ಲಾ ಮಾತನಾಡುವಾಗ, ನೋಡಿ ನಿಮ್ಮ ಬಾಯಿ ಕಟ್ಟುತ್ತೇನೆ ಎಂದು ಹೇಳುತ್ತಾರೆಯೇ ಹೊರತು, ನಾನೇ ಗ್ರೇಟ್‌ ಎಂದು ಅವರು ಹೇಳಲಿಲ್ಲ.


ಇಬ್ಬರೂ ನಡೆದುಕೊಂಡು ಹೋಗುತ್ತಿದೆವು. ಆಗ ಕಾಲು ನೋವಾಯ್ತು. ಅವರು ಫುಟ್‌ ಪಾತ್‌ ಮೇಲೆಯೇ ಕುಳಿತುಕೊಂಡ್ರು. ದುಬೈನಲ್ಲೂ ಯಾರು ನೋಡ್ತಾರೆ ಬನ್ನಿ ಎಂದ್ರು.

ನನಗೆ ಕಾಲು ನೋವಿತ್ತು. ಹಾಗಾಗಿ, ಏರ್‌ಪೋರ್ಟ್‌ಗೆ ಹೋದಾಗ ನನ್ನ ಸೂಟ್‌ಕೇಸ್‌ ಎತ್ತುಕೊಂಡು ಹೋದ್ರು. ಒಬ್ಬ ಸ್ಟಾರ್‌ ನಟ, ರಸ್ತೆಯಲ್ಲಿ ಮಿಮಿಕ್ರಿ ಮಾಡುವವರ ಸೂಟ್‌ಕೇಸ್ ಎತ್ತುವ ಅಗತ್ಯವಿದೆಯಾ? ಅಷ್ಟು ದೊಡ್ಡತನ ಅವರದು. ಕೈ ಹಿಡ್ಕೊಂಡು, ಕಲಾವಿದರು... ನಮಗೂ ಸ್ವಲ್ಪ ಕಲೆ ಬರಲಿ ಅಂತಾರೆ.


ಶ್‌ ಸಿನಿಮಾದ ಶೂಟಿಂಗ್‌ ವೇಳೆ, ಕೆಲಗೂರ್‌ ಹತ್ತಿರ ಯಾವುದೋ ಊರಿಗೆ ಹೋಗಬೇಕಿತ್ತು. ಬಸ್ಸಿನಲ್ಲಿ ಹೋಗಿದ್ದೆ. ಮುಂಜಾನೆ ನನ್ನ ಸ್ಟಾಪ್‌ನಲ್ಲಿ ಇಳಿಸಿದ್ರು. ಪೂರ್ತಿ ಕತ್ತಲಲ್ಲಿ ಸ್ವಲ್ಪ ಮುಂದೆ ಹೋಗುತ್ತಿದ್ದ ಹಾಗೆ ಮನೆ ಕಾಣಿಸಿತು. ಅವರ ಬಳಿ ಹೋಗಿ ಶೂಟಿಂಗ್‌ ಎಲ್ಲಿ ಎಂದು ಕೇಳಿದ್ರೆ, ಇನ್ನೊಂದು ಬೆಟ್ಟ ಹತ್ತಲು ಹೇಳಿದ್ರು. ಸುಮಾರು 4.30 ಇರಬಹುದು. ಶೂಟಿಂಗ್ ನಡೆಯುತ್ತಿದ್ದ ಸ್ಥಳದ ಬಳಿ ಹೋದಾಗ, ಹೃದಯವೇ ಬಾಯಿಗೆ ಬಂದಂತೆ ಆಯ್ತು. ಅಲ್ಲೊಬ್ಬರು ಹತ್ತಿರ ಬಂದು ಎಲ್ಲಿಗೆ ಹೋಗಬೇಕು ಶೂಟಿಂಗ್‌ಗಾ ಎಂದು ಕೇಳಿದ್ರು. ಅವರ ಕಣ್ಣಿನ ಗುಡ್ಡೆಗಳು ನೇತಾಡುತ್ತಿತ್ತು, ಕೆನ್ನೆಯ ಅರ್ಧ ಭಾಗ ಕತ್ತರಿಸಿದಂತಿತ್ತು. ನೋಡಿದ್ರೆ, ಎಲ್ಲಾ ನ್ಯಾಚುರಲ್‌ ಆಗಿರಬೇಕೆಂದು, ಗ್ಯಾಸ್‌ನಿಂದ ಕಣ್ಣು ಹೋಗಿರುವ ವ್ಯಕ್ತಿಯನ್ನು ಉಪೇಂದ್ರ ಕರೆಸಿದ್ರು. ಅವರ ಕ್ರಿಯೇಷನ್ನೇ ಬೇರೆ. ಅದನ್ನು ಯೋಚಿಸಲೂ ಸಾಧ್ಯವಿಲ್ಲ.ಮುಂದುವರಿಯುವುದು...


34 views