ಊಟಿಯಲ್ಲಿ ಅಣ್ಣಾವ್ರಿಗೆ ಹೊಡೆದ ಕಿಡಿಗೇಡಿಗಳು...

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 97


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)‌ಕನ್ನಡ ನಾಡು, ನುಡಿ, ಜಲಕ್ಕೆ ತೊಂದರೆಯಾದರೆ ಮುಂಚೂಣಿಯಲ್ಲಿ ರಾಜ್‌ಕುಮಾರ್‌ ನಿಲ್ಲುತ್ತಿದ್ದರು. ರಾಜ್‌ಕುಮಾರ್‌ ಅವರು ಆ ಸಮಯದಲ್ಲಿ ಕಲಾವಿದರ ಸಂಘದ ಅಧ್ಯಕ್ಷರು ಆಗಿದ್ದರು. ಕಾವೇರಿ ಜಲ ವಿವಾದ ಪ್ರಾರಂಭವಾದಾಗ ರಾಜ್‌ಕುಮಾರ್‌ ಅವರು ಚಲನಚಿತ್ರ ವಿಭಾಗದಿಂದ ಮುಂದೆ ನಿಂತು ಆ ಚಳವಳಿಗಾಗಿ ಹೊರಾಡಿದರು. ಜನಗಳಲ್ಲಿ ಜಾಗೃತಿ ಮೂಡಿಸಿದರು. ಇದರಿಂದ ಜನರ ಕೋಪಕ್ಕೂ ತುತ್ತಾದರು. ಈ ಕಾವೇರಿ ಜಲದ ಹೋರಾಟದಲ್ಲಿ ಇವರು ಕರ್ನಾಟಕದ ಪರವಾಗಿ ನಿಂತಿದ್ದರಿಂದ ತಮಿಳುನಾಡಿನ ಜನರಿಗೆ ಇವರ ಬಗ್ಗೆ ಅಸಮಾಧಾನ, ಅತೃಪ್ತಿ ಇತ್ತು.


ಊಟಿಯಲ್ಲಿ ‘ಯಾರಿವನು’ ಚಿತ್ರದ ಶೂಟಿಂಗ್‌ ಮಾಡಿತ್ತಿದ್ದೆವು. ಆಗ ಕಾವೇರಿ ಜಲ ವಿವಾದವಿತ್ತು. ತಮಿಳರ ವಿರುದ್ಧವಾಗಿ ರಾಜ್‌ಕುಮಾರ್‌ ಮಾತನಾಡಿದ್ರು ಎನ್ನುವ ಕಲ್ಪನೆ ಮೇರೆಗೆ, ಊಟಿಗೆ ತಮಿಳರು ಗುಂಪು ಕಟ್ಟಿಕೊಂಡು ಬಂದು, ನಮ್ಮ ಶೂಟಿಂಗ್‌ ನಿಲ್ಲಿಸಿ, ಹಾಳು ಮಾಡಿ, ಕ್ಯಾಮೆರಾಗಳನ್ನೆಲ್ಲ ಹೊಡೆಯಲು ಬಂದರು. ಕೊನೆಗೆ ರಾಜ್‌ಕುಮಾರ್‌ ಅವರಿಗೆ ಹೊಡೆದು ಬಿಟ್ಟರು. ಆಗ ಅದನ್ನು ತಡೆದವರು ವಿಕ್ರಂ ಶ್ರೀಧರ್‌ ಎಂಬುವವರು ಮತ್ತು ನಮ್ಮ ಕ್ಯಾಮೆರಾ ಬಾಯ್‌ಗಳು. ಆಗ ತಾನೇ ರಾಜ್‌ಕುಮಾರ್‌ ಅವರು ತುಂಬಾ ಇಷ್ಟಪಟ್ಟಂತಹ ‘ಯೆರಿ ಕ್ಯಾಮೆರಾ’ವನ್ನು 35 ಲಕ್ಷ ಕೊಟ್ಟು ತರಿಸಿದ್ದೆವು. ಅದರಲ್ಲಿ ಶೂಟ್‌ ಮಾಡುತ್ತಿದ್ದಂತಹ ಮೊದಲನೇ ಚಿತ್ರವದು. ಕ್ಯಾಮೆರಾಮೆನ್‌ ನಾವು ದೋಣಿಯಲ್ಲಿ ಇದ್ದೆವು. ನಾನು ಕ್ಯಾಮೆರಾ ತೆಗೆದುಕೊಂಡು ಇನ್ನೊಂದು ದೋಣಿಯಲ್ಲಿ ಹೋಗಿಬಿಟ್ಟೆ. ಪೊಲೀಸ್‌ನವರು ನೀವು ಇಲ್ಲಿ ಇರಬೇಡಿ ಹೊರಟು ಹೋಗಿ ಎಂದರು. ನಾವು ಶೂಟಿಂಗನ್ನು ಅಲ್ಲಿಗೆ ನಿಲ್ಲಿಸಿ, ಗಂಟುಮೂಟೆ ಕಟ್ಟಿ ವಾಪಸ್ ಬಂದುಬಿಟ್ಟೆವು.


ಇಲ್ಲಿಗೆ ಬಂದರೆ, ರಾಜ್‌ಕುಮಾರ್‌ ಅವರಿಗೆ ತಮಿಳರು ಹೊಡೆದಿದ್ದಾರೆ. ನಾವು ತಮಿಳರಿಗೆ ಹೊಡೆಯುತ್ತೇವೆ ಎಂದು ಇಲ್ಲಿಯವರು ಗಲಾಟೆ ಶುರು ಮಾಡಿಕೊಂಡಿದ್ದರು. ರಾಜ್‌ಕುಮಾರ್‌ ಅವರು ಅವರನ್ನೆಲ್ಲ ಸಮಾಧಾನ ಮಾಡಿದ್ರು. ರಾಜ್‌ಕುಮಾರ್‌ ಅವರನ್ನು ಕಾಪಾಡಿಲ್ಲ ಎಂದು ನಮ್ಮನ್ನು ಹೊಡೆಯಲು ಬಂದಿದ್ದರು. ರಾಜ್‌ಕುಮಾರ್‌ ಅವರನ್ನು ನಾವು ಕಾಪಾಡದೇ ಇದಿದ್ದರೆ ಅವರು ಇಲ್ಲಿಗೆ ಹೇಗೆ ಬರುತ್ತಿದ್ದರು ಎಂದು ನಾವು ಕೇಳಿದೆವು. ಆದರೂ ಅವರಿಗೆಲ್ಲ ಸಮಾಧಾನವೇ ಇರಲಿಲ್ಲ. ನಂತರ ಸಾ.ರಾ.ಗೋವಿಂದು ಬಂದು ಎಲ್ಲರನ್ನು ಸಮಾಧಾನ ಮಾಡಿ, ಕಳುಹಿಸಿಕೊಟ್ಟರು.ಮುಂದುವರೆಯುವುದು...

19 views