ಎತ್ತಿನ ಗಾಡಿಯಿಂದ ಬೀಳುತ್ತಿದ್ದ ಅಣ್ಣಾವ್ರ ಪ್ರಾಣ ಉಳಿಸಿದ ಅಂಬರೀಶ್

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 37


(ಎಸ್.ಕೆ ಭಗವಾನ್‌ ಅವರ ನಿರೂಪಣೆಯ
ಒಡಹುಟ್ಟಿದವರು ಸಿನಿಮಾದಲ್ಲಿ ಎತ್ತಿನಗಾಡಿಯ ರೇಸ್‌ ದೃಶ್ಯವಿದೆ. ಆ ವೇಳೆ ರಾಜ್‌ಕುಮಾರ್‌, ಅಂಬರೀಷ್‌ ಇದ್ದ ಗಾಡಿಯ ಕಡಾಣಿ ಕಣಚಿಕೊಂಡು ಬಿಟ್ಟಿತ್ತು. ರಾಜ್‌ಕುಮಾರ್‌ ಅವರು ಇನ್ನೇನು ಬಿದ್ದು, ಅವರ ಮೇಲೆ ಗಾಡಿ ಹತ್ತಿಬಿಡುತ್ತಿತ್ತು. ಆದರೆ, ಅಷ್ಟರಲ್ಲೇ ಅಂಬರೀಷ್‌ ಅವರನ್ನು ಬೀಳದ ಹಾಗೆ ತಬ್ಬಿ ಹಿಡ್ಕೊಂಡು ಬಿಟ್ಟ. ಗಾಡಿ ಓಡುತ್ತಲೇ ಇತ್ತು. ಒಂದು ಕೈಯಲ್ಲಿ ರಾಜ್‌ಕುಮಾರ್‌ ಅವರನ್ನು ಹಿಡ್ಕೊಂಡು, ಇನ್ನೊಂದು ಕೈಯಲ್ಲಿ ಹಗ್ಗವನ್ನು ಹಿಡ್ಕೊಂಡು ಗಾಡಿಯನ್ನು ನಿಲ್ಲಿಸಿದ. ರಾಜ್‌ಕುಮಾರ್‌ ಜೀವಕ್ಕೆ ಕುತ್ತು ಬಂದಂತಹ ಎರಡನೇ ಘಟನೆ ಇದು.


‘ಒಡಹುಟ್ಟಿದವರು’ ಕೌಟುಂಬಿಕ ಸಿನಿಮಾ. ನನಗೆ ತಿಳಿದಿದ್ದ ಒಂದು ಸಂಸಾರದಲ್ಲಿ ಅಣ್ಣ, ತಮ್ಮಂದಿರ ಜಗಳವಾಗಿತ್ತು. ತಮ್ಮನ ಹೆಂಡತಿ ಮಾಡಿದ ಕುಯುಕ್ತಿಗೆ ಇಡೀ ಸಂಸಾರ ಬೇರೆ, ಬೇರೆ ಆಗಿ ಹೋಗಿತ್ತು. ಇಬ್ಬರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ರು. ಆ ಎಳೆಯನ್ನು ಪ್ರೇರಣೆಯಾಗಿ ತೆಗೆದುಕೊಂಡು ಈ ಕಥೆ ಮಾಡಿದೆ. ಈ ಸಿನಿಮಾ ಒಳ್ಳೆಯ ಪ್ರದರ್ಶನ ಕಂಡಿತು.


ಇದಾದ ಮೇಲೆ ರಾಜ್‌ಕುಮಾರ್‌ ಅವರು ಮತ್ತೆ ಸಿನಿಮಾ ಮಾಡುವುದಿಲ್ಲ ಎಂದು ಸನ್ಯಾಸ ಸ್ವೀಕರಿಸಿದ್ರು. ಆದರೆ, ಅಪ್ಪು ಬಿಡಲಿಲ್ಲ. ನೀವು ಸಿನಿಮಾ ಮಾಡಲೇಬೇಕು ಅಪ್ಪಾಜಿ. ಮನೆಯಲ್ಲಿ ಕುಳಿತುಕೊಂಡ್ರೆ ಚೆನ್ನಾಗಿರಲ್ಲ ಎಂದು ಗಲಾಟೆ ಮಾಡಿದ. ಅಷ್ಟರಾಗಲೇ ಎಸ್‌.ನಾರಾಯಣ್‌ ಒಳ್ಳೊಳ್ಳೆ ಸಿನಿಮಾ ಕೊಟ್ಟಿದ್ರು. ಆಮೇಲೆ ಅವರದೇ ನಿರ್ದೇಶನದ ‘ಶಬ್ದವೇಧಿ’ ಸಿನಿಮಾದಲ್ಲಿ ಅವರು ನಟಿಸಿದ್ರು.ಮುಂದುವರೆಯುವುದು...

23 views