ಎಲ್. ಎನ್‌ ಶಾಸ್ತ್ರಿ ಅವರ ಬಾಲ್ಯ

ಸುಮಾ - ಎಲ್. ಎನ್‌ ಶಾಸ್ತ್ರಿ ಲೈಫ್ ಸ್ಟೋರಿ ಭಾಗ-2
ಶಾಸ್ತ್ರಿ ಅವರ ಊರು ಮಂಡ್ಯ. ಆದರೆ, ಮಾತೃಭಾಷೆ ತೆಲುಗು. ಅವರ ಅಮ್ಮ ಹೇಳುವ ಪ್ರಕಾರ ಕರ್ನೂಲು ಕಡೆಯ ವಂಶಸ್ಥರು ಅವರು. ಮಂಡ್ಯಕ್ಕೆ ವಲಸೆ ಬಂದು ಸುಮಾರು ವರ್ಷಗಳೇ ಕಳೆದಿದೆ. ಅವರ ಬಾಲ್ಯದ ಕಥೆಯನ್ನು ಕೇಳಿ ನಾನು ಬಹಳ ಪ್ರೇರಣೆ ಪಡೆದಿದ್ದೇನೆ. ನೀನು ಆಗಲೇ ನನಗೆ ಪರಿಚಿತನಾಗಿರಬೇಕಿತ್ತು ಎಂದು ನಾನು ಅವರಿಗೆ ಹೇಳುತ್ತಿದ್ದೆ.


ಅವರು ಮೂರು ವರ್ಷದ ಮಗುವಿರುವಾಗಲೇ ತಂದೆಯ ಬೈಕ್‌ ಮೇಲೆ ಕುಳಿತುಕೊಂಡು ಸಂತೋಷ ಅಹಾ... ಹಾಡನ್ನು ಜೋರಾಗಿ ಹಾಡುತ್ತಿದ್ದರಂತೆ. ಆಗ, ಬೀದಿಯ ಜನ‌ರೆಲ್ಲ ಒಟ್ಟು ಗೂಡುತ್ತಿದ್ದರಂತೆ ಅಷ್ಟು ಚೆನ್ನಾಗಿ ಹಾಡುತ್ತಿದ್ದರಂತೆ. ಆಗ ಅವರ ತಂದೆ, ಇವನನ್ನು ಬೇಗ ಶಾಸ್ತ್ರೀಯ ಸಂಗೀತಕ್ಕೆ ಹಾಕಬೇಕು. ಇಲ್ಲದಿದ್ರೆ ಹೀಗೆ ಸಿನಿಮಾ ಹಾಡುಗಳನ್ನು ಹಾಡಿ ಕೆಟ್ಟುಹೋಗುತ್ತಾನೆ ಎಂದುಕೊಂಡಿದ್ದರಂತೆ. ಅವರು ಹುಟ್ಟು ಕಲಾವಿದ. ಒಬ್ಬ ದೊಡ್ಡ ವ್ಯಕ್ತಿ, ‘ಕಲಾವಿದರೆಲ್ಲ ಶಾಪಗ್ರಸ್ತ ಗಂಧರ್ವರು. ಅದಕ್ಕೆ ಶಾಸ್ತ್ರಿ ಅವರನ್ನು ತೋರಿಸಿ ಇವರೇ ಉದಾಹರಣೆ’ ಎಂದು ಹೇಳಿದ್ರು. ಶಾಸ್ತ್ರಿ ಹಾಡಲು ಕಷ್ಟವೇ ಪಡಬೇಕಿರಲಿಲ್ಲ. ಅವರು ಹುಟ್ಟುತ್ತಲೇ ಸಂಗೀತಗಾರ.


ಅವರ ಸೋದರತ್ತೆ ಸೀತಾಲಕ್ಷ್ಮಿ. ಅವರು ಜನಪ್ರಿಯ ಪಿಟೀಲು ಕಲಾವಿದೆ. ಶಾಸ್ತ್ರೀಯ ಸಂಗೀತದಲ್ಲಿ ಒಳ್ಳೆಯ ಜ್ಞಾನವಿತ್ತು ಅವರಿಗೆ. ಅವರೇ ಇವರಿಗೆ ಪ್ರಥಮ ಸಂಗೀತ ಗುರು. ರಾಮನವಮಿ ಸೇರಿದಂತೆ ಹಲವು ಸಮಾರಂಭಗಳಿಗೆ ಸಂಗೀತ ಸ್ಪರ್ಧೆ ನಡೆಯುತ್ತಿದ್ದಾಗ ಇವರು ಎಲ್ಲೋ ಆಟಾಡಿಕೊಂಡು ಇರುತ್ತಿದ್ದರಂತೆ. ಬಂದಿರುವವರೆಲ್ಲ ಕೆಟ್ಟದಾಗಿ ಹಾಡುವಾಗ, ಇವರ ಅತ್ತೆ ಇಷ್ಟು ಕೆಟ್ಟದಾಗಿ ಎಲ್ಲಾ ಹಾಡುತ್ತಿದ್ದಾರೆ, ಶಾಸ್ತ್ರಿಯಾದರೂ ಬಂದು ಹಾಡಬಾರದಾ ಎಂದುಕೊಳ್ಳುತ್ತಿದ್ದರಂತೆ. ಶಾಸ್ತ್ರಿ ಅವರನ್ನು ಕರೆದರೆ ಬರುತ್ತಲೇ ಇರಲಿಲ್ಲವಂತೆ. ಕೊನೆಗೆ ಓಡಿ ಬಂದು ಹಾಡಿ, ಮೊದಲ ಬಹುಮಾನವನ್ನು ಗೆಲ್ಲುತ್ತಿದ್ದರಂತೆ. ಅಷ್ಟು ತುಂಟತನ ಅವರದು. ಚಿಕ್ಕದರಿಂದಲೂ ಶಾಸ್ತ್ರೀಯ ಸಂಗೀತವನ್ನು ಗಂಭೀರವಾಗಿ ಕಲಿಯುತ್ತಿರಲಿಲ್ಲ. ಅವರಿಗೆ ಸಿನಿಮಾ ಹಾಡುಗಳ ಮೇಲೆ ಒಲವಿತ್ತು. ತಂದೆಯ ಭಯಕ್ಕೆ ಶಾಸ್ತ್ರೀಯ ಸಂಗೀತ ತರಬೇತಿಗೆ ಹೋಗುತ್ತಿದ್ದರು. ಆದರೆ ಆ ಸಮಯದಲ್ಲಿ ತಾನೊಬ್ಬ ಸಿನಿಮಾಗಳ ಹಿನ್ನೆಲೆ ಗಾಯಕ ಆಗುತ್ತೇನೆ ಎಂದು ಅವರು ಅಂದುಕೊಂಡಿರಲಿಲ್ಲವಂತೆ.ಮುಂದುವರೆಯುವುದು...

24 views