ಎಲ್ಲರೂ ತಲೆಕೆಡಿಸಿಕೊಂಡಿದ್ದ ಸಮಸ್ಯೆಗೆ ಊಟಮಾಡುತ್ತಲೇ ಐಡಿಯಾ ಕೊಟ್ಟಿದ್ದರು ಅಣ್ಣಾವ್ರು

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 28


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)
ಈ ಹಾಡನ್ನು ಹೇಗೆ ಬಳಸಿಕೊಳ್ಳೋದು ಎಂಬುದನ್ನೇ ಮೂರು ದಿವಸ ನಾನು, ದೊರೆ, ಉದಯ್‌ಶಂಕರ್‌, ವರದಪ್ಪ ಚರ್ಚೆ ಮಾಡಿದ್ದೆವು. ಆದ್ರೂ ಹೊಳೆಯುತ್ತಲೇ ಇರಲಿಲ್ಲ. ಒಂದು ದಿವಸ ರಾಜ್‌ಕುಮಾರ್ ಬಂದ್ರು, ಏನು ಯೋಚನೆ ಮಾಡುತ್ತಿದ್ದೀರಾ? ಏಕೆ ಮೌನವಾಗಿ ಕೂತಿದ್ದೀರಿ ಅಂದ್ರು. ಹಾಡಿಗೆ ಒಪನಿಂಗ್‌ ಸಿಗುತ್ತಿಲ್ಲ ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ ಅಂದೆವು. ಸರಿ ಊಟಕ್ಕೆ ಬನ್ನಿ ಅಂದ್ರು.


1.30 ಗಂಟೆಗೆ ಊಟಕ್ಕೆ ಹೋಗಿ ಬಂದೆವು. ನಂತರ 3.30 ಗಂಟೆಗೆ ಮತ್ತೆ ರಾಜ್‌ಕುಮಾರ್ ಬಂದ್ರು. ನನ್ನೊಂದು ಐಡಿಯಾ ಹೇಳ್ತೇನೆ ಸರಿ ಇದೆ ಅನಿಸಿದ್ರೆ ಮಾಡಿ ಅಂದ್ರು. ಹೇಳಿ ಅಂದೆವು. ಬಸ್‌ ಆ್ಯಕ್ಸಿಡೆಂಟ್‌ ಆಗಿ ಜ್ಞಾಪಕ ಶಕ್ತಿ ಕಳೆದುಕೊಂಡ ಹೀರೊ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾನೆ. ಆಗ ಭಿಕ್ಷಕರು ಸಿಗುತ್ತಾರೆ ಅವರ ಜೊತೆಗೆ ಹೋಗ್ತಾನೆ. ಹೋಗ್ತಾ, ಹೋಗ್ತಾ ಸಾಧುಗಳ ಗುಂಪಿನ ಜೊತೆ ಹೋಗ್ತಾನೆ. ಅವರ ಜೊತೆಗೆ ಹರಿದ್ವಾರ, ಋಷಿಕೇಷ ಹೋಗ್ತಾನೆ. ಅಲ್ಲಿಂದ ಹಿಮಾಲಯಕ್ಕೆ ಹೋಗುತ್ತಾನೆ. ಅಲ್ಲಿ ಹೊಟ್ಟೆಗಿಲ್ಲದೇ ಒಮ್ಮೆ ಬಿದ್ದುಬಿಟ್ಟಿರುತ್ತಾನೆ. ಆಗ ಅವನ ಮೇಲೆ ಐಸಿನ ತುಣುಕುಗಳು ಬೀಳುತ್ತದೆ. ಮತ್ತೆ ಎಚ್ಚರವಾದಾಗ, ಹಳೆಯ ಜ್ಞಾಪಕ ಬರುತ್ತದೆ. ಕಣ್ಣು ಬಿಟ್ಟಾಗ ಅಲ್ಲಿಯ ಝರಿಯ ಶಬ್ದ ಕೇಳುತ್ತದೆ. ಅಲ್ಲಿಯೇ ಒಂದು ಮರ ಇರುತ್ತದೆ. ಗಾಳಿ ಬೀಸುತ್ತಿರುತ್ತದೆ. ಹಕ್ಕಿಗಳ ಚಿಲಿಪಿಲಿ ಶಬ್ದವೂ ಕೇಳುತ್ತದೆ. ಆಗ ಅವನಲ್ಲಿದ್ದ ಸಂಗೀತ ಶಕ್ತಿ ಸ್ಫೋಟವಾಗುತ್ತದೆ. ಆಗ ಈ ಹಾಡನ್ನು ಹಾಡುತ್ತಾನೆ. ಹೇಗಿದೆ ಐಡಿಯಾ ಎಂದು ಕೇಳಿದ್ರು. ಇದು ನಿಮಗೆ ಸರಿ ಹೋಗುತ್ತಾ ನೋಡಿ ಅಂದ್ರು. ನಮಗೆ ಇದು ಹೊಳೆಯಲೇ ಇಲ್ಲ. ಎಷ್ಟು ಚೆನ್ನಾಗಿದೆ. ಇದನ್ನು ಪಿಕ್ಚರೈಸ್‌ ಮಾಡಿದ್ರೆ ಎಷ್ಟು ಚೆನ್ನಾಗಿರುತ್ತದೆ ಅಂದೆವು.

ನ್ಯಾಷನಲ್‌ ಅವಾರ್ಡ್‌ ತಂದುಕೊಟ್ಟ ಈ ಹಾಡಿನ ಶೂಂಟಿಂಗ್ ಮಾಡಿದ್ದು ಕೇವಲ 5 ಜನ

ಅವರು ಹೇಳಿದ ಹಾಗೆಯೇ ಹರಿದ್ವಾರ, ಋಷಿಕೇಶ, ಹಿಮಾಲಯಕ್ಕೆ ಹೋದೆವು. ರಘುನಂದನ್ ಎಂದು ನಮ್ಮ ಅಸಿಸ್ಟೆಂಟ್‌. ಆತ ಮೊದಲೇ ಹೋಗಿ ಸಿದ್ಧತೆ ಮಾಡುತ್ತಿದ್ದ. 15–16 ಜನರಿದ್ದ ಯೂನಿಟ್‌ನ ಕರೆದುಕೊಂಡು ಹೋಗಲು ಖರ್ಚಿನ ಬಗ್ಗೆ ತುಂಬಾ ಯೋಚನೆ ಮಾಡುತ್ತಿದ್ದೆವು. ಈಗ ಒಂದು ಸಿನಿಮಾ ಒಂದೊಂದು ಹಾಡು ವಿದೇಶದ ಭಿನ್ನ ಸ್ಥಳದಲ್ಲಿ ಶೂಟಿಂಗ್‌ ನಡೆಯುತ್ತದೆ. ಆಗ ಹಿಮಾಲಯಕ್ಕೆ ಹೋಗೋದಕ್ಕೆ ಕಷ್ಟ ಪಡುತ್ತಿದ್ದೆವು. ಅಲ್ಲಿಯ ಚಳಿಗೆ ತಡೆದುಕೊಳ್ಳಲು ಆಗುವುದಿಲ್ಲ ನಾನು ಬರುವುದಿಲ್ಲ. ನೀವು ಹೋಗಿ ಚಿತ್ರೀಕರಣ ಮಾಡಿಕೊಂಡು ಬನ್ನಿ ಎಂದು ದೊರೆಯವರು ಹೇಳಿದ್ರು. ಶ್ರೀಕಾಂತ್‌ ಆ ಸಿನಿಮಾಕ್ಕೆ ಕ್ಯಾಮೆರಾಮೆನ್‌. ನಮಗೆ ಕಡಿಮೆ ಜನರನ್ನು ಕರೆದುಕೊಂಡು ಹೋಗಬೇಕಿತ್ತು. ಹಿಮಾಲಯದಲ್ಲಿ ಐಸ್‌ ಇರುವುದರಿಂದ ಒಳ್ಳೆಯ ಲೈಟ್‌ ಇರುತ್ತದೆ. ಹಾಗಾಗಿ ಲೈಟ್‌ ಯೂನಿಟ್‌ ಬೇಕಾಗುವುದಿಲ್ಲ. ಕ್ಯಾಮೆರಾ ಫೋಕಸ್‌ ಮಾಡಲು ಅಸಿಸ್ಟೆಂಟ್‌ ಕರೆದುಕೊಳ್ಳಿ ಎಂದೆ. ಮೇಕಪ್‌ ಮ್ಯಾನ್‌ ಇರಲಿ. ಕಾಸ್ಟ್ಯೂಮ್ ಡಿಸೈನರ್‌ ಬೇಡ ಎಂದೆಲ್ಲ ತೀರ್ಮಾನಿಸಿ ಹೋದೆವು. ‘ನಾದಮಯ’ ಹಾಡಿನ ಚಿತ್ರೀಕರಣಕ್ಕೆ ಇದಿದ್ದು ಕೇವಲ ಐದು ಮಂದಿ. ಯಾರಿಗೂ ಇದನ್ನು ನಂಬಲು ಸಾಧ್ಯವೇ ಇಲ್ಲ. ಈ ಹಾಡಿಗೆ ನ್ಯಾಷನಲ್‌ ಅವಾರ್ಡ್‌ ಕೂಡ ಬಂತು.


ಡಾ.ರಾಜ್‌ ಸೆಟ್‌ ಅಲ್ಲಿ ಇರುತ್ತಿದ್ದ ರೀತಿ

ನಾನು ಶಾಟ್ಸ್‌ಗಳನ್ನು ತೆಗೆಯಬೇಕಾದ್ರೆ ರಾಜ್‌ಕುಮಾರ್‌ ಅವರು, ಭಗವಾನ್‌ ಡಾನ್ಸ್‌ ತೆಗೆದ ಹಾಗೆ ಶಾಟ್ಸ್‌ ತೆಗೆಯುತ್ತಿದ್ದೀರಲ್ಲ ಎಂದ್ರು. ನಾನು ಮುತ್ತುರಾಜಣ್ಣ, ಇದು ಒಂಬತ್ತು ನಿಮಿಷದ ಹಾಡು. ಜನರನ್ನು ಕಟ್ಟಿ ಕೂರಿಸಬೇಕಾದರೆ, ಈ ರೀತಿಯ ಹಲವು ಶಾಟ್ಸ್‌ಗಳು ಇದ್ದರೆ ಮಾತ್ರವೇ ಸಾಧ್ಯ ಎಂದು ಹೇಳಿದೆ. ಆಗ ಅವರು ಸರಿ ತಗೋಳಿ ಅಂದ್ರು. ರಾಜ್‌ಕುಮಾರ್‌ ಅವರು ಹೆಚ್ಚು ವಾದ ಮಾಡುವುದಿಲ್ಲ, ಅಭಿಪ್ರಾಯ ಹೇಳುತ್ತಾರಷ್ಟೇ. 205 ಚಿತ್ರಗಳಲ್ಲೂ ರಾಜ್‌ಕುಮಾರ್‌ ಅವರು ಆ ಹಿರಿಯ ಗುಣವನ್ನು ಕಾಪಾಡಿಕೊಂಡು ಬಂದಿದ್ದರು. ಅವರಿಗೆ ಅನೇಕರು ನಿರ್ದೇಶನ ಮಾಡುವಂತೆ ಹೇಳಿದ್ರು. ಆದರೆ ಅವರು, ಅದು ನನ್ನ ಕೆಲಸವಲ್ಲ. ನಿರ್ದೇಶನ ಮಾಡುವವರು ನಿರ್ದೇಶಿಸಬೇಕು. ನಟಿಸುವವರು ನಟಿಸಬೇಕು ಅನ್ನುತ್ತಿದ್ರು. ಈಗ ನಿರ್ದೇಶಕರೇ ನಟರಾಗಿದ್ದಾರೆ, ನಟರು ನಿರ್ದೇಶಕರಾಗಿದ್ದಾರೆ. ಅದು ಅವರವರ ಪ್ರತಿಭೆ ಮೇಲೆ ಅವಲಂಬಿತವಾಗಿರುತ್ತದೆ. ಅದನ್ನು ತಪ್ಪು ಎಂದು ಖಂಡಿತವಾಗಿಯೂ ಹೇಳಲು ಸಾಧ್ಯವಿಲ್ಲ. ಅದು ಒಂದು ಲೆಕ್ಕಕ್ಕೆ ಒಳ್ಳೆಯದೇ.


205 ಚಿತ್ರಗಳಲ್ಲೂ ರಾಜ್‌ಕುಮಾರ್‌ ನಿರ್ದೇಶಕನ ನಟನಾಗಿದ್ದರು. ಚಿತ್ರೀಕರಣದ ವೇಳೆ ಎಂದಿಗೂ ನಿರ್ದೇಶಕರಿಗೆ ಅಭಿಪ್ರಾಯ ಕೊಡುವುದು, ತಿದ್ದುವ ಕೆಲಸ ಮಾಡುತ್ತಿರಲಿಲ್ಲ. ನಿರ್ದೇಶಕರೇ ಅವರಿಗೆ ಸುಪ್ರೀಂ ಆಗಿದ್ದರು.ಮುಂದುವರಿಯುವುದು...

22 views