ಒಡವೆ ಮೇಲಿನ ನನ್ನ ವ್ಯಾಮೋಹ ಕಡಿಮೆಯಾಗಲು ಕಾರಣ…

ಖ್ಯಾತ ಕಳನಟ ಸುಧೀರ್ ಲೈಫ್ ಸ್ಟೋರಿ ಭಾಗ 19

( ಪತ್ನಿ ಮಾಲತಿ ಸುಧೀರ್ ಅವರು ಕಂಡಂತೆ)ರಾಯಚೂರಿನ ಹತ್ರ ನೀರ್ಮಾನವಿ ಅಂತ ಒಂದು ಕ್ಯಾಂಪ್ ಹಾಕಿದ್ರು. ಅಲ್ಲಿ ಭೂಮಿ ತೂಕದ ಹೆಣ್ಣು ನಾಟಕ ಮಾಡ್ತಾ ಇದ್ವಿ. ನಂಗೆ ಸುಧೀರ್ ಅವರು ನಾಟಕದಲ್ಲಿ ಪಾರ್ಟ್ ಮಾಡ್ಬೇಡ ಅಂದ್ರೂ ಕೂಡ ನಾನು ಯಾವಾಗ್ಲಾದ್ರೂ ಒಂದ್ಸಲ ಪಾರ್ಟ್ ಮಾಡ್ತಿದ್ದೆ.


ಪರಮ್: ಅಂದ್ರೆ ಅವರು ಸ್ಟಾರ್ ಆದ್ಮೇಲೆ?


ಮಾಲತಿ ಸುಧೀರ್: ಹೌದು ದೊಡ್ಡ ಸ್ಟಾರ್ ಆದ್ಮೇಲೆ ಕಂಪೆನಿಗೆ ಯಾವಾಗ್ಲಾದ್ರೂ ಹೋಗ್ತಾ ಇದ್ದೆ.

ಪರಮ್: ನೀವು ನಾಟಕಕ್ಕೆ ಹೋದ್ರಿ?


ಮಾಲತಿ ಸುಧೀರ್: ಹೋದೆ, ಭೂಮಿ ತೂಕದ ಹೆಣ್ಣು ನಾಟಕ ನಮ್ಮ ಲೈಫ್‍ಗೆ ಬಹಳ ಹತ್ತಿರವಾದದ್ದು. ದೊಡ್ಡ ಜಮೀನ್ದಾರರು ಇರ್ತಾರೆ, ಅವರು ಆಸ್ತಿಗೋಸ್ಕರ ಜಗಳ ಆಡಿ ಹಾರ್ಟ್ ಅಟ್ಯಾಕ್ ಆಗಿ ಸತ್ತೋಗ್ತಾರೆ. ಆ ಯಮ್ಮ ಚಿಕ್ಕ ವಯಸ್ಸಿರುತ್ತೆ. ಸೋ ಹಾರ್ಟ್ ಅಟ್ಯಾಕ್ ಆಗಿ ಸತ್ತೋದಾಗ ನಂದೊಂದು ಸೀನ್ ಇತ್ತು. ಏನು ಅಂದ್ರೆ ಎಲ್ಲಾ ಒಡವೆ ಬಂಗಾರದ್ದೇ ಹಾಕೊಳ್ತಾ ಇದ್ದೆ ನಾನು. ತಾಳಿಸರ, ಬಳೆ, ಓಲೆ ಎಲ್ಲನೂ ಬಂಗಾರದ್ದೇ ಹಾಕೊಳ್ತಾ ಇದ್ದೆ. ಆಗಿನ ಕಾಲಕ್ಕೆ ನಾಲಕ್ಕು ಲಕ್ಷ ರೂಪಾಯಿ ಒಡವೆ ಅವು. ಅಂದ್ರೆ ಜಮೀನ್ದಾರರ ಹೆಣ್ಣು ಮಕ್ಕಳು ಹೇಗಿರ್ತಾರೆ? ದೊಡ್ಡ ತಾಳಿ ಹಾಕೊಂಡು, ತುಂಬಾ ರಿಚ್ ಆಗಿ ಆಸ್ಟೇಟಸ್ ಮೇಂಟೇನ್ ಮಾಡ್ತಿರ್ತಾರೆ. ಗಂಡ ಸತ್ತೋದ್ಮೇಲೆ ಆಕೆ ಆಒಡವೆಗಳನ್ನೆಲ್ಲಾ ತೆಗೆದು ಬಿಡ್ಬೇಕು. ನಾನು ಆ ಒರಿಜಿನಲ್ ಒಡವೆ ಎಲ್ಲಾ ತೆಗ್ದೆ. ಆಸೀನಲ್ಲೇ ಒಂದು ಪ್ಯಾಥೋ ಸಾಂಗ್ ಬರುತ್ತೆ. ಆಗ ಒಡವೆ ಎಲ್ಲಾ ಬಿಚ್ಚಿ ತಗೊಂಡೋಗಿ ಮೇಕಪ್ ರೂಮಲ್ಲಿದ್ದ ಬ್ಯಾಗಲ್ಲಿಟ್ಟು ಮತ್ತೆ ವೈಟ್ ಸಾರಿ ಉಟ್ಕೊಂಡು ಇಮೀಡಿಯಟ್ ಆಗಿ ಸೀನ್‍ಗೆ ಬರ್ಬೇಕು. ಒಡವೆ ಅಲ್ಲೇ ಇಟ್ಟು ಸೀನ್‍ಗೆ ಬಂದೆ. ನಾಟಕ ಆದ್ಮೇಲೆ ನೋಡಿದ್ರೆ ಒಡವೆಗಳನ್ನ ಯಾರೋ ಎತ್ಬಿಟ್ಟಿದ್ದಾರೆ.


ಪರಮ್: ಒರಿಜಿನಲ್ ಒಡವೆಗಳು?


ಮಾಲತಿ ಸುಧೀರ್: ಹೌದು ಒರಿಜಿನಲ್. ಯಾರು ಎತ್ಬಿಟ್ಟಿದ್ದಾರೆ ಅಂತ ಗೊತ್ತಿಲ್ಲ. ಕಲಾವಿದರು ಎತ್ತಿದ್ರೋ? ಹೊರಗಿನವರಂತೂ ಯಾರೂ ಬರಕ್ಕೆ ಸಾಧ್ಯನೇ ಇಲ್ಲ. ಆ ಲೇಡೀಸ್ ಗ್ರೀನ್ ರೂಮಲ್ಲಿ ಬೇರೆ ಯಾರು ಬರ್ತಾರೆ?


ಪರಮ್: ನಿಮ್ಮವರೇ ಯಾರೋ?


ಮಾಲತಿ ಸುಧೀರ್: ಯಾರೋ ಕದ್ದು ಬಿಟ್ಟಿದ್ದಾರೆ. ಅವತ್ತು ನಮ್ಮ ನಾಟಕ ನೋಡಕ್ಕೆ ಡಿ.ಒ.ಎಸ್.ಪಿ ಪಾಟೀಲ್ ಅವರು ಹಾಗೂ ಸರ್ಕಲ್ ಇನ್ಸ್‍ಪೆಕ್ಟರ್ ಮಂಜುನಾಥ್ ಚೌದ್ರಿ ಅವರು ಬಂದಿದ್ರು. ಅವರು ಈಗ್ಲೂ ಶಿವಾಜಿನಗರದಲ್ಲಿ ಡ್ಯೂಟಿಯಲ್ಲಿದ್ದಾರೆ.


ಪರಮ್: ಬೆಂಗಳೂರಲ್ಲಿ?


ಮಾಲತಿ ಸುಧೀರ್: ಹೌದು ಬೆಂಗ್ಳೂರಲ್ಲಿದ್ದಾರೆ. ಪಾಟೀಲ್ ಸರ್ ರೀಸೆಂಟಾಗಿ ರಿಟಾಯರ್ ಆಗಿದ್ದಾರೆ. ಅವರು ನಾಟಕ ನೋಡಿ ಹೋಗಿದ್ದಾರೆ. ನನಗೆ ತುಂಬಾ ನೋವಾಗಿ ನಾನು ಅವರ ಮನೆಗೆ ಹೋಗಿ ಹೇಳ್ದೆ. “ನನ್ನ ಒಡವೆಗಳೆಲ್ಲಾ ಯಾರೋ ಕದ್ದು ಬಿಟ್ಟಿದ್ದಾರೆ, ನಂಗೆ ಹಿಂಗಾಯ್ತು ನಾಟಕದಲ್ಲಿ” ಅಂದ್ರೆ “ಏನ್ರೀ ನಿಮ್ಮ ವಿಷಯನೇ ಮಾತಾಡ್ತಾ ಇದ್ದೀವಿ. ಇನ್ನೂ ಊಟ ಮಾಡಿಲ್ಲ ನಾವು. ಸುಧೀರ್ ಹೆಂಡ್ತಿ ಅದ್ಭುತವಾಗಿ ಆಕ್ಟಿಂಗ್ ಮಾಡ್ತಾಳೆ. ಅಂತ ಮಾತಾಡ್ತಾ ಇದ್ವಿ. ನೀವು ನೋಡಿದ್ರೆ ನಮ್ಮ ಮನೆಗೆ ಬಂದಿದ್ದೀರ” ಅಂತ ಅವರು ಇಮೀಡಿಯಟ್ ಆಗಿ ಡ್ರೆಸ್ ಮಾಡ್ಕೊಂಡು ಜೀಪ್ ತಗೊಂಡು ಬಂದ್ರು. ಬಂದು “ಸುಧೀರ್ ನಿಮಗೆ ಯಾರ ಮೇಲೆ ಡೌಟ್ ಇದೆ ಹೇಳಿ, ನಾನು ಅವರನ್ನ ಕರ್ಕೊಂಡೋಗ್ತೀನಿ.” ಅಂದ್ರು. ನಮ್ಮ ಸುಧೀರ್ ಒಂದೇ ಮಾತು ಹೇಳಿದ್ರು “ಈನಲವತ್ತು ಜನರಲ್ಲಿ ಒಬ್ಬನು ಕದ್ದಿದಾನೆ. ಅವನು ಇಲ್ಲಿ ಇದ್ದಾನೋ ಇಲ್ವೋ ಗೊತ್ತಿಲ್ಲ. ಆದರೆ ನೀವು ಎಲ್ಲಾ ನಲವತ್ತು ಜನಕ್ಕೂ ಶಿಕ್ಷೆ ಕೊಡ್ತೀರಾ? ನಲವತ್ತು ಜನನೂ ಅನುಮಾನದಿಂದನೇ ನೋಡ್ತೀರ. ಒಬ್ಬನಿಗೋಸ್ಕರ ಉಳಿದ ಮೂವತ್ತೊಂಬತ್ತು ಜನ ನೋವು ಪಡ್ಬೇಕಾ? ಬೇಡ. ನನ್ನ ಹೆಂಡ್ತಿಗೆ ಇವತ್ತಲ್ಲ ನಾಳೆ ಒಡವೆ ಮಾಡಿಸಿ ಕೊಡುವ ತಾಕತ್ತು ನಂಗಿದೆ. ಅದು ಹೋದ್ರೆ ಹೋಗ್ಲಿ. ನೀವು ಇಲ್ಲಿರೋವವರನ್ನ ಯಾರನ್ನೂ ಅನುಮಾನದ ದೃಷ್ಟಿಯಿಂದ ನೋಡ್ಬಾರ್ದು. ಯಾರನ್ನೂ ಪೊಲೀಸ್ ಸ್ಟೇಷನ್‍ಗೆ ಕರ್ಕೊಂಡೋಗ್ಬಾರ್ದು. ಸೋ ನಲವತ್ತು ಜನ ನಿರಪರಾಧಿಗಳನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸ್ಬೇಕಾಗುತ್ತೆ. ಅವರು ನನ್ನ ಕಲಾವಿದರು. ಅವರು ನನ್ನ ಒಡ ಹುಟ್ಟಿದವರಿದ್ದ ಹಾಗೆ. ಕಲಾರಂಗದಲ್ಲಿ ಇದ್ದೀವಿ ಅಂದ್ರೆ ನನ್ನ ಬಳಗ ಅದು. ನನ್ನ ಹೆಂಡ್ತಿಗೆ ಇವತ್ತಲ್ಲಾ ನಾಳೆ ಒಡವೆ ಮಾಡ್ಸಿ ಹಾಕ್ಬೊದು. ಆದ್ರೆ ಇವರ ಪ್ರೀತಿನ ನಾನು ಕಳ್ಕೋಬೇಕಾಗುತ್ತೆ. ಅವರೆಲ್ಲಾ ನಂಗೆ ಶಾಪ ಹಾಕ್ತಾರೆ ಅಣ್ಣ ಸುಮ್ಮನೆ ನಿರಪರಾಧಿಗಳನ್ನೆಲ್ಲಾ ಜೈಲಿಗೆ ಕಳಿಸ್ದ ಅಂತ. ಬೇಡ ಐಆಮ್ ಎಕ್ಸ್‍ಟ್ರೀಮ್ಲೀ ಸಾರಿ ಇದನ್ನ ಇಲ್ಲೇ ಬಿಟ್ಬಿಡಿ” ಅಂತ ಹೇಳಿ ಅವರನ್ನ ಕಳ್ಸಿದ್ರು. ಅವರು “ಸುಧೀರ್‍ಗೆ ಹ್ಯಾಟ್ಸ್ ಆಫ್” ಅಂತ ಹೇಳಿ ಹೋದ್ರು.


ನಾವು ಆ ಕ್ಯಾಂಪ್ ಕ್ಲೋಸ್ ಮಾಡಿ ಬಂದ್ವಿ. ಅದಾಗಿ ಮೂರು ತಿಂಗಳಲ್ಲಿ ಸುಧೀರ್ ಅವರು ತೀರ್ಕೊಂಡ್ರು. ಆಒಡವೆ ಕಳ್ದೋಗಿ ಮೂರು ತಿಂಗಳಲ್ಲಿ ಅವರು ತೀರ್ಕೊಂಡ್ರು. ಅವರು ಇನ್ನೂ ಒಡವೆ ಮಾಡ್ಸಿಲ್ಲ. ನಾನು ಹಾಕೊಳ್ಳೂ ಇಲ್ಲ. ಅದಕ್ಕೇ ನಂಗೆ ಇವತ್ತಿಗೂ ಬಂಗಾರ ಅಂದ್ರೆ ಅಲರ್ಜಿ. ಅಷ್ಟು ಬಂಗಾರ ಹಾಕೊಳ್ತಿದ್ದೆ ನಾನು. ನಂಗೆ ಬಹಳ ಬಂಗಾರದ ಹುಚ್ಚು ಇತ್ತು. ಸುಧೀರ್ ಅವರು ಸಾಯೋದಕ್ಕಿಂತ ಮುಂಚೆ ನನ್ನ ಒಡವೆಗಳು ಕಳೆದು ಹೋದ ನಂತರ ನಂಗೆ ಒಡವೆಗಳ ಆಸೆನೇ ಹೋಗ್ಬಿಡ್ತು. ಇವತ್ತಿಗೂ ನಾನು ಏನೂ ಹಾಕ್ಕೊಳೋದಿಲ್ಲ. ಇಷ್ಟ ಇಲ್ಲ. ಸುಧೀರ್ ಅವರ ಒಳ್ಳೆತನಕ್ಕೆ ಇದೂ ಒಂದು ಸಾಕ್ಷಿ.ಮುಂದುವರೆಯುವುದು…

31 views