“ಒಂದೆ ಒಂದು ಏ.ಕೆ 47 ಗುಂಡು, 118 ಆಸ್ಪತ್ರೆಗೆ ಅಡ್ಮಿಟ್‌”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು ಭಾಗ 16


ಮಂಗಳವಾರ ರಾತ್ರಿ ಫುಲ್‌ ಟೀಂ ಬರುತ್ತೆ ಕಾಯ್ರಿ ಅನ್ನುತ್ತಿದ್ರು. ನೀವೆಲ್ಲ ಹೋಗಿ, ತುಂಬಾ ಆಯಾಸ ಆಗಿದ್ದೀರಿ. ನಿಮ್ಮ ಬದಲು ಬೇರೆ ಪೊಲೀಸರು ಬರುತ್ತಾರೆ ಅಂದ್ರು. ಕೆಲವರೆಲ್ಲ ಹೋಗೋಣ ಅಂದ್ರು. ರಮೇಶ್‌ಚಂದ್ರ, ನಾನು, ಬಾಲಾಜಿ ಸಿಂಗ್‌, ಶ್ರೀನಿವಾಸ್‌, ರಾಮಲಿಂಗಪ್ಪ ಮಾತ್ರ ಈ ಕಾರ್ಯಾಚರಣೆ ಮುಗಿಯುವವರೆಗೂ ನಾವು ಹೋಗುವುದಿಲ್ಲ ಅಂದ್ವಿ. ಆಗ ಕೆಂಪಯ್ಯ ಅವರೆಲ್ಲ ಖುಷಿ ಆಗಿಬಿಟ್ಟರು. ಜನಗಳನ್ನು ಕಳುಹಿಸಲು ಕರೆಸಿದ ಪೊಲೀಸರನ್ನು ಬದಲಾಯಿಸುವ ನಿರ್ಧಾರವಾಯಿತು. ಆ ಕರ್ತವ್ಯಕ್ಕೆ ಬೇರೆ, ಬೇರೆ ಆಫೀಸರ್‌ಗಳೆಲ್ಲ ಬರುತ್ತಿದ್ರು. ಆದರೆ, ಬರುವವರೆಗೆ ಮಾಹಿತಿ ಇರಲಿಲ್ಲ. ವಿಶೇಷ ಕಾರ್ಯಾಚರಣೆ ಅಂಥ ಅಷ್ಟೇ ಗೊತ್ತಿತ್ತು ಅವರಿಗೆ. ಅದು ನಾವು ಮಾಡಿದ ತಪ್ಪು. ಬೇರೆ ಕಡೆ ಕರೆಸಿ, ಅವರನ್ನು ಅಲ್ಲಲ್ಲಿ ಕಳುಹಿಸಬೇಕಿತ್ತು. ಇಷ್ಟು ಅಪಾಯಕಾರಿ ಸನ್ನಿವೇಶವಿದೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಎಸಿಪಿ ರ‍್ಯಾಂಕ್‌ ಪೊಲೀಸ್‌ ಅಧಿಕಾರಿಯೊಬ್ಬರು ಸೀದಾ ಮನೆ ಬಾಗಿಲಿಗೆ ಹೋಗುತ್ತಿದ್ರು. ಓಡೋಗಿ ಅವರನ್ನು ಇನ್ನೊಬ್ರು ಕರೆದುಕೊಂಡು ಬಂದ್ರು. ವೈರ್‌ಲೆಸ್‌ನಲ್ಲಿ ಕೂಗುವ ಹಾಗಿರಲಿಲ್ಲ.
ಮಂಗಳವಾರ ಇಳಿಸಂಜೆಯಲ್ಲಿ ಸೌದೆ ಲಾರಿ ಬರುತ್ತಿತ್ತು. ಅವರ ಪರವಾನಗಿ ಇರಲಿಲ್ಲ ಅನಿಸುತ್ತದೆ. ನಮ್ಮನ್ನು ನೋಡಿ ಭಯಬಿದ್ದು, ಎಲ್ಲೋ ಲಾರಿ ನುಗ್ಗಿಸಲು ಹೋದ. ಅದು ಮಳೆ ನೀರಿನಿಂದಾಗಿ ಕೊಚ್ಚೆಯಲ್ಲಿ ಸಿಕ್ಕಾಕಿಕೊಂಡು ಬಿಟ್ಟಿತು. ಅದರಲ್ಲಿದ್ದವರೆಲ್ಲ ಕೆಳಗಿಳಿದು ಗಾಡಿಯನ್ನು ನೋಡುತ್ತಿದ್ರು. ಲಾರಿ ಪಕ್ಕದಲ್ಲಿಯೇ ಪೊಲೀಸ್‌ ಕೂಡ ಒಬ್ಬರು ಬಂದ್ರು. ಅವರು ಯೂನಿಫಾರಂನಲ್ಲೇ ಬರುತ್ತಿದ್ರು. ಮನೆಯ ಒಳಗಿದ್ದವರು ಬಹುಶಃ ಇದನ್ನೆಲ್ಲ ಗಮನಿಸಿದ್ರು ಅನಿಸುತ್ತದೆ. ಮಾರು ವೇಷದಲ್ಲಿ ಪೊಲೀಸ್‌ನವರು ಹಿಡಿಯಲು ಬರುತ್ತಿದ್ದಾರೆ ಎಂದು ಅವರು ಭಾವಿಸಿರಬಹುದು. ಅದಕ್ಕೂ ಮುಂಚೆ ನಾವೆಲ್ಲ ಸುಸ್ತಾಗಿತ್ತೆಂದು ಅಲ್ಲಿಯೇ ಇದ್ದ ಚಪ್ಪಡಿ ಕಲ್ಲಿನ ಮೇಲೆ ಸುತ್ತ ಕೂತು ಟೀ ಕುಡಿದು, ಚೆನ್ನಾಗಿ ನೀರು ಕುಡಿದು ಕೂತಿದ್ವಿ. ನಾನು ಸಂಜೆ ಪೇಪರ್‌ ನೋಡಿಕೊಂಡು ಚಪ್ಪಡಿ ಕಲ್ಲಿನ ಮೇಲೆಯೇ ಮಲಗಿದ್ದೆ. ಮನೆಗೆ ಅಲ್ಲಿಂದ ನಾವು ಕಾಣಿಸುತ್ತಿರಲಿಲ್ಲ. ಒಬ್ಬ ನನ್ನ ತೊಡೆ ಮೇಲೆ, ಇನ್ನೊಬ್ಬ ನನ್ನ ಹೊಟ್ಟೆ ಮೇಲೆ ತಲೆ ಇರಿಸಿ ಮಲಗಿದ. ಈಶ್ವರನ್‌ ಬದಿಗೆ ಇದ್ರು. ನಾನು, ರಮೇಶ್‌ಚಂದ್ರ, ಬಾಲಾಜಿಸಿಂಗ್‌ ಒಂದೇ ಬ್ಯಾಚಿನವರು. ಬಾಲಜಿ ಸಿಂಗ್‌ ಸ್ವಲ್ಪ ದಢೂತಿ ದೇಹ ಇತ್ತು. ಅವರು ನಿಂತೇ ಇದ್ರು.


ನಾವು ಅವರಿಗೆ ಕಾಣುತ್ತೆ, ಕಾಣಿಸಿಕೊಳ್ಳಬೇಡಿ ಅಲ್ಲಲ್ಲೇ ಇರಿ, ಬರಬೇಡಿ ಅನ್ನುತ್ತಿರುವಾಗಲೇ, ಮನೆಯ ಬಾಗಿಲನ್ನು ಒಬ್ಬ ಬಿರುಸಾಗಿ ಒದ್ದು ಹೊರಗೆ ಬಂದು, ಎ.ಕೆ47 ಯಿಂದ ಫೈಯರಿಂಗ್‌ ಶುರು ಮಾಡಿದ. ಚಪ್ಪಡಿ ಕಲ್ಲು ಕಾಪೌಂಡ್‌ಗೆ ಅಡ್ಡ ಇಲ್ಲದಿದ್ರೆ, ನಾವು ಆರು ಮಂದಿ ನೆಲಸಮ ಆಗುತ್ತಿದ್ದೆವು. ನಾವೆಲ್ಲ ತಕ್ಷಣವೆ ಅಲರ್ಟ್‌ ಆಗಿ, ಫೈಯರಿಂಗ್‌ ರೆಡಿ ಆಗುತ್ತಿದ್ವಿ. ಅವನು ಅಷ್ಟರಾಗಲೇ ನೂರಾರು ರೌಂಡ್‌ ಫೈಯರ್‌ ಮಾಡಿದ್ದ. ಲಾರಿ, ದೂರ ನಿಂತಿದ್ದ ಜನಗಳ ಮೇಲೆ ಒಟ್ಟಾರೆಯಾಗಿ ಫೈಯರ್‌ ಮಾಡಿದ. ಹತ್ತಿರ ಇದ್ದಿದ್ರೆ ಕನಿಷ್ಠ 50 ಮಂದಿ ಸತ್ತು ಹೋಗುತ್ತಿದ್ರು.


ಅರ್ಧ ಕಿ.ಮೀ. ದೂರದಲ್ಲಿ ನಿಂತಿದ್ದ ಪೊಲೀಸ್‌ ಒಬ್ಬರಿಗೂ ಗುಂಡು ಬಿತ್ತು. ನಾವು ಫೈಯರ್‌ ಶುರು ಮಾಡಿದ್ವಿ. ಆದರೆ, ಸ್ಟಾಟರ್ಜಿಕ್‌ ಪಾಯಿಂಟ್ಸ್‌ ಮಾಡಿದ್ರಲ್ಲ ಅವರಿಗೆಲ್ಲ ಫೈಯರ್‌ ಮಾಡೋದಕ್ಕೆ ಆಗುತ್ತಿರಲಿಲ್ಲ. ಅವರು ಮಾಡಿದ್ರೆ ನಾವೆಲ್ಲ ಸಿಕ್ಕಿಹಾಕಿಕೊಳ್ಳುತ್ತಿದ್ದೆವು. ನಾವು ಆರು ಜನ ಸಬ್‌ಇನ್‌ಸ್ಪೆಕ್ಟರ್‌ ಸಾವಿನ ಮನೆಯ ಬಾಗಿಲನ್ನು ತಟ್ಟಿ ಅಂದು ವಾಪಸ್‌ ಬಂದಿದ್ದೆವು. ಆ ಕಡೆ ಪೊಲೀಸ್‌ ಗುಂಡಿಗೆ, ಈ ಕಡೆ ಎಲ್‌ಟಿಟಿಇಯ ಗುಂಡಿಗೆ ನಾವು ಸಿಲುಕಿಕೊಳ್ಳಬೇಕಿತ್ತು.

ಫೈಯರ್‌ ಮಾಡಿ, ಅವನೇನೊ ಜೋರಾಗಿ ಕೂಗುತ್ತಿದ್ದ ಪ್ರಭಾಕರನ್‌, ಇಳಂ... ಅಂತೇನೊ ಕೇಳಿಸುತ್ತಿತ್ತು. ತಕ್ಷಣವೇ ಹೋಗಿ ರಪ್ಪನೇ ಬಾಗಿಲು ಹಾಕಿಕೊಂಡ. ಎಲ್ಲ ಎಸ್ಕೇಪ್‌ ಆಗ್ತಾರೇನೊ ಅಂದುಕೊಂಡ್ವಿ. ಆದರೆ ಆಗಲಿಲ್ಲ. ಮನೆಯ ಒಳಗೆ ದೊಡ್ಡ ಬ್ಲಾಸ್ಟ್‌ ಆಯಿತು. ಗ್ರಾನೇಡ್‌ ಹೊಡೆಯಬಹುದು ಎಲ್ಲರೂ ಎಚ್ಚರಿಕೆಯಿಂದಿರಿ ಎಂದು ಮೆಸೇಜ್‌ ರವಾನಿಸಿದ್ರು. ನಿಶಬ್ದ ಆಗೋಯಿತು. ಜನರೆಲ್ಲ ಓಡಿ ಹೋದ್ರು. ಪೊಲೀಸ್‌ನವರೆಲ್ಲ ಅಲ್ಲೋಲ ಕಲ್ಲೋಲ ಆದ್ರು. ಆಗ, ಬಾಲಾಜಿ ಸಿಂಗ್‌ ಅವರು, ಇಲ್ಲೇನೊ ಒದ್ದೆ ಆಗಿದೆ ಎಂದು ಹೊಟ್ಟೆ ತೋರಿಸಿದ್ರು. ನೋಡಿದ್ರೆ ರಕ್ತ ಬರುತ್ತಿದೆ. ಒಂದು ಬುಲೆಟ್‌ ಆಗಿತ್ತು. ಬಹುಶಃ ಅದು ಗೋಡೆಗೆಲ್ಲೋ ಬಿದ್ದು ಆಮೇಲೆ ಅವರನ್ನು ಹೊಕ್ಕಿರಬೇಕು. ಅಣ್ಣಾ, ಅಂದ್ರು. ತಕ್ಷಣ ನಮ್ಮ ಹತ್ತಿರ ಇದ್ದ ಕರ್ಚಿಫ್‌ನೆಲ್ಲ ಸೇರಿಸಿ ಕಟ್ಟಿದ್ವಿ. ನನ್ನ ಆತ್ಮೀಯ ಸ್ನೇಹಿತ. ವಿದ್ಯಾರ್ಥಿಗಳಿಂದ ಕೆಲಸವನ್ನು ಒಟ್ಟಿಗೆ ಮಾಡಿದ್ವಿ. ಆತಂಕ ಶುರುವಾಯಿತು. ಏನೇ ಆದ್ರೂ ಅವನನ್ನು ಉಳಿಸಿಕೊಳ್ಳಬೇಕು ಎಂದು ಆಫೀಸರ್ಸ್‌ ಬಳಿ ಹೇಳಿದ್ವಿ. ಅದು ನಮ್ಮ ಜವಾಬ್ದಾರಿ ಅಂದ್ರು. ನಂತರ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ರು. ಅವರಿಗೆ ಕರುಳಿಗೆ ಪೆಟ್ಟು ಬಿದ್ದಿತ್ತು. ಅದು ಸೆಪ್ಟಿಕ್‌ ಆಗುತ್ತಿತ್ತು. 118 ದಿವಸ ಆಸ್ಪತ್ರೆಯಲ್ಲಿದ್ರು ಅವರು. ಅವರನ್ನು ಬದುಕಿಸಿದ್ರು.

ಮಧ್ಯರಾತ್ರಿಯಲ್ಲಿ ಟೀಂ ಬಂತು. ಬ್ಲ್ಯಾಕ್‌ ಹೆಡ್‌ ಕಮಾಂಡೊ ಎಸ್‌ಪಿಜಿ ಕುಮಾರ್ ಅಂಥ. ನಮ್ಮ ಬಳಿ ಘಟನೆಯ ವಿವರ ಪಡೆದುಕೊಂಡ್ರು. ನಮ್ಮನ್ನು ಪ್ರಶಂಸಿಸಿದ್ರು. ನಾವು ನೋಡಿಕೊಳ್ಳುತ್ತೇವೆ. ನೀವೆಲ್ಲ ಹಿಂದಕ್ಕೆ ಹೋಗಿ ಅಂದ್ರು. ಎಲ್ಲ ಕಪ್ಪು ವಸ್ತ್ರದಲ್ಲಿದ್ದ ಕಾರಣ, ಕತ್ತಲಲ್ಲಿ ಒಬ್ಬರೂ ಕಾಣುತ್ತಿರಲಿಲ್ಲ. ಶಸ್ತ್ರಾಸ್ತ್ರಸಜ್ಜಿತವಾಗಿದ್ರು. ಎಲ್ಲರೂ ಸ್ಟಾಟರ್ಜಿಕ್‌ ಪಾಯಿಂಟ್ಸ್‌ಗಳಿಂದ ಪೊಸಿಷನ್‌ ತೆಗೆದುಕೊಂಡ್ರು. ಎಲ್ಲಾ ಪ್ಲ್ಯಾನ್‌ ಮಾಡಿದ್ರು. ನಾವು ಇನ್ನು ಐದು ದಿವಸ ಇರಬೇಕಾದ್ರು ಇರುವಂತೆ ರೆಡಿಯಾಗುವಷ್ಟರ ಮಟ್ಟಿಗಿತ್ತು ಅವರ ಡೆಡಿಕೇಷನ್‌. ಬಾಗಿಲುಗಳಲ್ಲಿ ಡಿಟಂರ್ಮಿನೇಷನ್ ಇಟ್ರು. ಬುಲೆಟ್‌ಪ್ರೂಫ್‌ ಜಾಕೆಟ್‌, ಬುಲೆಟ್‌ಪ್ರೂಫ್‌ ಹೆಲ್ಮೆಟ್‌, ಎ.ಕೆ.47 ರೈಫಲ್‌ ಹಿಡಿದುಕೊಂಡ್ರು. ಎ.ಕೆ.47 ರೈಫಲ್‌ ಎಲ್ಲರೂ ಬಳಸುವಂತಿಲ್ಲ. ಅದನ್ನು ಎಲ್ಲೆಲ್ಲಿ ಬಳಸಬೇಕು ಎಂದು ನೋಟಿಫಿಕೇಷನ್‌ ಆಗಬೇಕು. ನಮ್ಮನ್ನು ಅವರು ಕಳುಹಿಸಲಿಲ್ಲ. ದೂರದಲ್ಲಿ ನಿಂತು ಗಮನಿಸಿ ಅಂದ್ರು.


ಆ ಪ್ರದೇಶದ ಸುತ್ತಮುತ್ತ ನಿಶಬ್ದ, ಕತ್ತಲಿತ್ತು. ಪೊಲೀಸರು ಎಲ್ಲರನ್ನೂ ಅದಾಗಲೇ ಕಳುಹಿಸಿಬಿಟ್ಟಿದ್ರು. ಒಂದು ಕಿ.ಮೀ.ವರೆಗೂ ಯಾರೂ ಇರಲಿಲ್ಲ. ಒಳಗಡೆ ಚಲನವಲನ ಇರಲಿಲ್ಲ, ಶಬ್ದವೂ ಇರಲಿಲ್ಲ. ಒಳಗಡೆ ಏನೊ ಪ್ಲ್ಯಾನ್‌ ಮಾಡುತ್ತಿರಬಹುದು ಎಂಬ ಶಂಕೆ ವ್ಯಕ್ತವಾಯ್ತು. ಅಪರೇಷನ್‌ ರೆಡಿ ಅಂದ್ರು. ಕಮಾಂಡೊಗಳೆಲ್ಲ ಸಿಗ್ನಲ್‌ ಮಾಡಿಕೊಂಡ್ರು. ಎಸ್‌. ಕ್ಯಾಪ್ಟನ್‌ಕುಮಾರ್‌ ಹಿಯರ್‌, ಜೈ ಹಿಂದ್‌ ಅಂದ್ರು. ಬಾಗಿಲು ಬ್ಲ್ಯಾಸ್ಟ್‌ ಆಗಿ ಹೋಯ್ತು. ಫೈಯರಿಂಗ್‌ ಮಾಡಿ ಅವರೆಲ್ಲ ಒಳಗೆ ನುಗ್ಗಿದ್ರು. ಒಳಗಿನಿಂದ ಫೈರಿಂಗ್‌ ಆಗಿಲ್ಲ. ಒಳಗೆ ಹೋಗಿ ನೋಡಿದ್ರೆ. ಎಲ್ಲ ಸೈನೆಡ್‌ ನುಂಗಿ ಸತ್ತು ಮಲಗಿದ್ರು. ಶಿವರಾಸನ್‌ ತಲೆಗೆ ಗುಂಡು ಹೊಡೆದುಕೊಂಡು ಸತ್ತಿದ್ದ. ಅಷ್ಟು ಜನ ರಾಜೀವ್‌ಗಾಂಧಿ ಹಂತಕರು ಶವವಾಗಿ ನಮಗೆ ಸಿಕ್ಕಿದ್ರು. ನಾವು ಗೆಲುವು ಪಡೆದೆವು.


ತನಿಖೆ, ಸಾಹಸ ಎಲ್ಲ ಮುಗಿಯಿತು. ನಮಗೆ ಸಿಬಿಐಯಿಂದ ನಿಮ್ಮ ಸೇವೆ ಶ್ಲಾಘನೀಯ ಎಂದು ಅದ್ಭುತವಾದ ಸರ್ಟಿಫಿಕೇಟ್‌ ಕೊಟ್ರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಿಗೆಲ್ಲ ನಗದು ಬಹುಮಾನವನ್ನು ಕೊಟ್ರು. ಕಾರ್ತಿಕೇಯನ್‌ ಪ್ರಕರಣದ ತನಿಖೆಯನ್ನು ನಡೆಸಿ, ಆರೋಪಿಗಳು ಜೈಲಿನಲ್ಲಿದ್ದು, ಅವರಿಗೆ ಜೀವಾವಧಿ ಶಿಕ್ಷೆ ಆಗಿದೆ.


ಬುಧವಾರ ಕೆಂಪಯ್ಯ ಅವರು ನಮ್ಮನ್ನು ತಬ್ಬಿಕೊಂಡ್ರು. ಅವರಿಗೆ ಆನಂದ ಭಾಷ್ಪ ಬಂದಿತ್ತು. ಭಾನುವಾರ ಮಳೆಯಲ್ಲಿ ನೆಂದಿದ್ದು. ನಮ್ಮ ಚಡ್ಡಿ ಬುಧವಾರವೂ ಒಳಗಿರಲಿಲ್ಲ. ಅವರು ನಮ್ಮನ್ನು ಪ್ರಶಂಸಿಸಿದ ರೀತಿ ಹೆಮ್ಮೆ ಅನಿಸಿತು.


ನಮ್ಮ ಸರ್ಕಾರ ನಮ್ಮ ಸೇವೆ ಗುರುತಿಸಬೇಕಲ್ವಾ. ಮೊದಲು ಮುಖ್ಯಮಂತ್ರಿ ಅವರ ಚೀನ್ನಾ, ಬೆಳ್ಳಿ, ಕಂಚಿನ ಪದಕವಿತ್ತು. ಈಗ ಒಂದೇ ಇರುವುದು. ನಮ್ಮದೆಲ್ಲ ವಿವರ ತೆಗೆದುಕೊಂಡ್ರು. ನಮ್ಮ ಜೊತೆ ಪ್ರಭಾಕರ್‌ ಅಂಥ ಒಬ್ಬರಿದ್ರು. ಅವರು ಬಹಳ ಕೆಲಸ ಮಾಡಿದ್ರು. ಪೊಲೀಸ್‌ ಫ್ಲ್ಯಾಗ್‌ ಡೇಯಲ್ಲಿ ನಮಗೆ ಮುಖ್ಯಮಂತ್ರಿಗಳ ಪದಕ ಸಿಗುತ್ತದೆ ಎಂದು ಭಾವಿಸಿದೆವು. ಆ ಸಂದರ್ಭದಲ್ಲಿ ನಾನು ವೀರಪ್ಪನ್‌ ಕಾರ್ಯಾಚರಣೆಗೆಂದು ವಿಶೇಷ ತಂಡದೊಂದಿಗೆ ಹೋಗಿದ್ದೆ. ಹರಿಕೃಷ್ಣ, ಶಕೀಲ್ ಅಹಮದ್‌ ಅವರ ತಂಡದಲ್ಲಿದೆ. ಹರಿಕೃ‌ಷ್ಣ ಅವರು, ಶಿವರಾಂ ಮೆಸೇಜ್‌ ಬಂದಿದೆ, ಮುಖ್ಯಮಂತ್ರಿಗಳ ಚಿನ್ನದ ಪದಕ ಬಂದಿದೆ ನಿಮಗೆ. ಹೋಗಿ ತೆಗೆದುಕೊಂಡು ಬಾ ಅಲ್ಲಿಂದ ಬಂದ ಮೇಲೆ ಪಾರ್ಟಿ ಕೊಡಬೇಕು ಅಂದ್ರು. ಸರ್‌ ಖಂಡಿತ ಕೊಡುತ್ತೇನೆ ಅಂದೆ. ಎಂಎಂಎಲ್‌ಸಿಯಲ್ಲಿ ಕ್ಯಾಂಪ್‌ ಇತ್ತು. ಅಲ್ಲಿಂದ ಬೇರೆ ಗಾಡಿಯಲ್ಲಿ ಬೆಂಗಳೂರಿಗೆ ಕಳುಹಿಸಿ ಕೊಟ್ರು.


ಬೆಂಗಳೂರಿಗೆ ಬಂದೆ. ಕಮಿಷನರ್‌ ರಾಮಲಿಂಗಂ ಅವರಿಗೆ ಬಹಳ ಖುಷಿಯಾಯಿತು. ಈ ಕಾರ್ಯಾಚರಣೆ ಮುಗಿದ ತಕ್ಷಣವೇ ಅವರು ಹೇಳಿದ್ರು ವೀರಪ್ಪನ್‌ ಕಾರ್ಯಾಚರಣೆಗೆ ಮಲ್ಲೆಮಹದೇಶ್ವರಕ್ಕೆ ಹೋಗಲು ಅಜೇಯ್‌ಸಿಂಗ್‌ ಅವರು ನಿಮ್ಮ ಹೆಸರನ್ನು ಶಿಫಾರಸು ಮಾಡಿದ್ದಾರೆ ನೀವು ಹೇಗಬೇಕಲ್ಲ ಅಂದ್ರು. ನಾನು ಹೋಗ್ತೇನೆ ಅಂದೆ. ರಮೇಶ್ ಚಂದ್ರ ಅವರಿಗೆ ಮೊದಲು ಕರೆ ಮಾಡಿದೆ. ಅವರು ನಿಮಗೆ ಪದಕ ಬಂದಿದೆಯಂತಲ್ಲಾ ಅಂದ್ರು ಹೌದು ಅಂದೆ. ನನಗೂ ಬಂದಿದೆ ಅಂತ ಹೇಳಿದ್ರು. ಫೋಟೊ ತೆಗೆದುಕೊಂಡು ಹೋಗಬೇಕಂತಲ್ಲ ಅಂಥ ಮಾತಾಡಿಕೊಂಡ್ವಿ. ನಂತರ ನಾನು ರಮೇಶ್‌ಚಂದ್ರ ಫೋಟೊ ತೆಗೆದುಕೊಂಡು ಹೋಗಿ ಕಮಿಷನರ್‌ ಪಿಎಗೆ ಕೊಟ್ವಿ. ಆತ ಆಶ್ಚರ್ಯದಲ್ಲಿ ಯಾಕೆ ಸರ್‌ ಅಂದ. ಮುಖ್ಯಮಂತ್ರಿ ಪದಕ ಬಂದಿದೆಯಂತಲ್ಲಾ ಫೋಟೊ ಕೇಳಿದ್ರು ಅದಕ್ಕೆ ತಂದಿದ್ದೇವೆ ಅಂದ್ವಿ. ನಿಮಗೆ ಬಂದಿಲ್ಲ ಅಂದ್ರು. ರಮೇಶ್‌ಚಂದ್ರಗೆ ಎಂದಿದ್ದಕ್ಕೆ ಅವರಿಗೂ ಬಂದಿಲ್ಲ ಅಂದ್ರು. ನನಗೆ ಅಳಬೇಕೋ, ನಗಬೇಕೋ ಒಂದು ಗೊತ್ತಾಗಿಲ್ಲ. ಅಣ್ಣಾ, ಕೆಲಸ ಮಾಡಿದ್ರೆ ಪ್ರತಿಫಲ ನೋಡು ಅಂದ. ಯಾರಿಗೆ ಬಂದಿದೆ ನೋಡೋಣ ಪಟ್ಟಿ ಕೊಡು ಅಂದ್ವಿ.


ಕಾಫಿ ತಂದಾಗ, ಮನೆ ಹತ್ತಿರ ಬಾ ಅಂದ್ರೆ, ತಲೆಯನ್ನು ಬಂಡೆಗೆ ಹೊಡೆದುಕೊಳ್ಳೋಕೆ ಆಗುತ್ತಾ ಅಂದಿದ್ದ ಪೊಲೀಸ್‌ಗೆ ಮುಖ್ಯಮಂತ್ರಿ ಅವರ ಬೆಳ್ಳಿ ಪದಕ ಬಂದಿತ್ತು. ನಮಗೆ ಮನೆಯ ಮಾಹಿತಿ ನೀಡಿದ್ದ ಮೃದಲಾ ಎಂಬಾಕೆಯನ್ನು ಚರ್ಚ್‌ನಲ್ಲಿ ಕಾಯುತ್ತಿದ್ದ ಮಹಿಳಾ ಪೊಲೀಸ್‌ಗೆ ಪದಕ ಬಂದಿತ್ತು. ನಮಗೆ ದುಃಖ, ಬೇಸರ ಆಯ್ತು. ನಾನು, ರಮೇಶ್‌ಚಂದ್ರ ಇಬ್ಬರೂ ಕಮಿಷನರ್‌ ಬಳಿ ಮಾತನಾಡಲು ಹೋದ್ವಿ. ನಾನಿನ್ನು ಬೆಂಗಳೂರಿಗೆ ಬರಲ್ಲ. ಬೇರೆ ನಗರದಲ್ಲಿ ಕೆಲಸ ಮಾಡ್ತೇನೆ ಎಂದು ಕಮಿಷನರ್‌ಗೆ ಹೇಳಿದೆ. ಅದಕ್ಕವರು. ನನಗೂ ತುಂಬಾ ನೋವಾಗಿದೆ. ಆ ರೀತಿಯ ನೂರು ಪದಕ ನಿಮಗೆ ಕೊಡ್ತೇನೆ ಅಂದ್ರು. ನನಗೆ ಗೊತ್ತಿದೆ ನೀವೇನು ಮಾಡಿದ್ದೀರಿ ಅಂಥ ಅಂದ್ರು.


ನಿಮ್ಮಿಬರಿಗೂ ಈಗಾಗಲೇ ಮುಖ್ಯಮಂತ್ರಿಯವರ ಚಿನ್ನದ ಪದಕ ಬಂದಿದೆ. ಅದಕ್ಕೆ ಎರಡನೇಯದು ಕೊಡುತ್ತಿಲ್ಲ ಅಂದ್ರು. ಕಮಿಷನರ್‌ಗೂ ಬಹಳ ಬೇಜಾರಾಗಿತ್ತು. ಸರ್‌. ಇದು ನಮ್ಮ ಜೀವಮಾನದ ಸಾಹಸಗಾಥೆ. ಎಲ್ಲ ಪೊಲೀಸ್‌ ಅಧಿಕಾರಿಗಳಿಗೂ ಈ ಅವಕಾಶ ಸಿಗುವುದಿಲ್ಲ. ಈ ಕಥೆಯನ್ನು ನಾವು ಎಲ್ಲಾದ್ರು ಹೇಳಿದ್ರೆ ಸುಳ್ಳು ಹೇಳ್ತಾನೆ ಇವನು. ಇವನಿಗೆ ಪದಕನೇ ಬಂದಿಲ್ಲ ಅಂಥಾರೆ ಜನ. ನನಗೆ ಯಾವ ಪದಕನು ಬೇಡ ಸರ್‌, ಹೋಗ್ತೇನೆ ಸರ್‌ ಅಂದೆ. ಕೆಂಪಯ್ಯ ಅವರು ಅಲ್ಲೇ ಇದ್ರು. ಶಿವರಾಂ ಮತ್ತು ರಮೇಶ್‌ಚಂದ್ರ ಅವರಿಗೆ ಪದಕ ಕೊಡದಿದ್ದರೆ ನಾನು ನನ್ನ ಪದಕವನ್ನು ಸ್ವೀಕಾರ ಮಾಡೋಲ್ಲ ಅಂದ್ರು. ಅವರಿಗೂ ಪದಕ ಬಂದಿತ್ತು.


ಆಗ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದರು. ರಾಮಲಿಂಗಂ ಮತ್ತು ಕೆಂಪಯ್ಯ ಅವರು ಸರ್ಕಾರ ಜೊತೆ ಮಾತಾಡಿ, ನನಗೂ, ರಮೇಶ್‌ಚಂದ್ರ ಮತ್ತು ಪ್ರಭಾಕರ್‌, ಪ್ರಭಾರಾಧ್ಯ ಅನ್ನುವ ಇನ್ನೊಬ್ಬ ಅಧಿಕಾರಿಗೆ ವಿಶೇಷವಾಗಿ ಪದಕ ಕೊಡಿಸಿದ್ರು. ಪದಕಕ್ಕೋಸ್ಕರ ಇಷ್ಟು ಕಷ್ಟ ಪಡಬೇಕಾಗಿತ್ತಾ ಅನಿಸಿತು. ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ರು. ಅವರ ಬದಲಾಗಿ ಆಗ ಗೃಹ ಸಚಿವರಾಗಿದ್ದ ಧರ್ಮಸಿಂಗ್‌ ಅವರು ಪದಕ ನೀಡಿದ್ರು. ನಾನು ಕುಟುಂಬ ಸಮೇತ ಹೋಗಿದ್ದೆ.


ಪದಕ ತೆಗೆದುಕೊಂಡು ಕೆಳಗೆ ಬರುತ್ತಿರುವಾಗ, ಅಲ್ಲಿದ್ದ ಅಧಿಕಾರಿಗಳು ನಿನಗೆ ಪದಕ ಬಂದಿಲ್ಲ ವಾಪಸ್‌ ಕೊಡು. ಬೇರೆಯವರಿಗೆ ಬಂದಿದ್ದನ್ನು ನಿನಗೆ ಕೊಟ್ಟಿದ್ದು, ಈಗ ಅವರಿಗೆ ಕೊಡಬೇಕು ಎಂದು ಹೇಳಿ ಇಸ್ಕೊಂಡು ಬಿಟ್ರು. ರಮೇಶ್‌ಚಂದ್ರ ಅವರ ಬಳಿಯೂ ಇಸ್ಕೊಂಡ್ರು. ಆಮೇಲೆ ಪದಕ ಮಾಡಿಸಿ ಕೊಡ್ತೇವೆ. ಈಗ ಇದಿದ್ದು ಇಷ್ಟೇ ಅಂದ್ರು. ಥೂ ಏನಿದು ಅನಿಸಿತು. ಕೆಳಗೆ ಬಂದ್ರೆ ನನ್ನ ಮಗಳು, ‘ಅಪ್ಪ ನಿನ್ನ ಪದಕ ತೋರಿಸಿ’ ಅಂದ್ಲು. ನನ್ನ ಹತ್ತಿರ ಪದಕನೇ ಇರಲಿಲ್ಲ. ಅವಳು ಅಳಲು ಶುರು ಮಾಡಿದ್ಲು. ಪಕ್ಕದಲ್ಲೇ ಎಂ.ಸಿ.ಶ್ರೀನಿವಾಸ್‌ ಇದ್ದ. ಅವನ ಪದಕವನ್ನು ಮಗಳ ಹತ್ತಿರ ಕೊಟ್ಟಿದ್ದ. ಮಗು ಅಳುತ್ತಿದ್ದಾಳೆ ಎಂದು ತಕ್ಷಣವೇ ಅವನ ಪದಕ ಎತ್ತಿ ಕೊಟ್ಟ. ಮಗಳೇ ಇಲ್ಲಿದೆ ನೋಡು ನಿನ್ನ ಡ್ಯಾಡಿ ಪದಕ ಅಂಥ ಕೊಟ್ಟ. ನನ್ನ ಅಪ್ಪನ ಪದಕ ಕಿತ್ತುಕೊಂಡು ಬಿಟ್ರು ಅಂಥ ಅವನ ಮಗಳು ಅಳಲು ಶುರುಮಾಡಿದ್ಲು. ಆಮೇಲೆ ನಮಗೆ ಬೇರೆ ಪದಕ ಮಾಡಿಸಿ ಕೊಟ್ರು. ಇದು ವ್ಯವಸ್ಥೆಯ ವ್ಯಂಗ್ಯ.

ಈ ರೀತಿ ಪದಕಗಳ ವಿಷಯದಲ್ಲಿ ಬಹಳ ನೋವು ಅನುಭವಿಸಿದ್ದೇವೆ. ಬಾಲಾಜಿ ಸಿಂಗ್‌ ಅವರಿಗೆ ಮುಖ್ಯಮಂತ್ರಿಗಳ ಪದಕ ಬಂತು. ಆದರೆ, ಅವರಿಗೆ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಕೊಡಬೇಕಿತ್ತು. ರವಿ ಬೆಳಗೆರೆ ಪದಕಗಳ ಕುರಿತು ಅವರ ಪತ್ರಿಕೆಯಲ್ಲಿ ಬರೆದಿದ್ರು. ಪದಕ ಅರ್ಹರಿಗೂ ಸಿಗತ್ತದೆ. ಅನರ್ಹರೂ ಇರುತ್ತಾರೆ. ಬೇರೆ ಬೇರೆ ಕಾರಣಗಳಿಗೂ ಅವರು ಅದರೊಳಗೆ ಸೇರಿಕೊಂಡಿರುತ್ತಾರೆ. ಕತ್ತಲನೂ ಕಂಡರೆ ಕಿಟ್ಟಾರನೇ ಕಿರುಚುವ ಪೊಲೀಸ್‌ ಅಧಿಕಾರಿಗಳಿಗೂ ರಾಷ್ಟ್ರಪತಿಯ ಶ್ಲಾಘನೀಯ ಪ್ರಶಸ್ತಿ ಬಂದಿರುವುದು ನಾನು ಕಂಡಿದ್ದೇನೆ ಎಂದು ಬರೆದಿದ್ರು. ಅದು ನಿಜ ಕೂಡ.


ಇದು ಶಿವರಾಸನ್‌ ಪ್ರಕರಣದ ತನಿಖೆಯ ಒಂದು ಭಾಗ. ಆರೋಪಿಗಳಲ್ಲಿ ಹಲವರಿಗೆ ಮರಣ ದಂಡನೆ, ಜೀವಾವಧಿ ಶಿಕ್ಷೆಯಾಗಿದೆ. ಈ ಪ್ರಕರಣದ ತನಿಖಾ ಭಾಗ ಬಹಳ ದೊಡ್ಡದು. ಕಾರ್ತಿಕೇಯನ್‌ ಅವರು ಈ ಕುರಿತು ಪುಸ್ತಕ ಬರೆದಿದ್ದಾರೆ. ಭಾರತದ ಪೊಲೀಸ್‌ ಇತಿಹಾಸದಲ್ಲಿ ಬಹುದೊಡ್ಡ ತನಿಖೆ, ಯಶಸ್ಸು ಕಂಡ ಪ್ರಕರಣ.


ಪೊಲೀಸರು ಈ ಮೊದಲು ಬಂಧಿಸಿದ್ದ ರಂಗನಾಥ್‌ ಎಲ್‌ಟಿಟಿಇ ಕುರಿತು ಅನುಕಂಪ ಹೊಂದಿದವನಾಗಿದ್ದ. ಮೃದುಲಾ ಗಂಡ ಆತ. ಯಶವಂತಪುರದಲ್ಲಿ ಸೈಕಲ್‌ ಶಾಪ್‌ ಇಟ್ಟುಕೊಂಡಿದ್ದ. ಎಲ್‌ಟಿಟಿಇ ಯವರಿಗೆ ಮನೆ ಕೊಡಿಸುತ್ತಿದ್ದ. ಪುಟ್ಟೇನಹಳ್ಳಿ, ಕೋಣನಕುಂಟೆ ಮನೆಯನ್ನು ಆತನೇ ಕೊಡಿಸಿದ್ದು. ಅವನು ಮತ್ತು ಆತನ ಹೆಂಡತಿ ಈ ಪ್ರಕರಣದಲ್ಲಿ ಸಾಕ್ಷಿಗಳಾಗಿದ್ದರು. ತಮಿಳನಾಗಿದ್ದ ಆತ ಬೆಂಗಳೂರಿನವನು.

ಮುಂದುವರೆಯುವುದು…

ಸಂದರ್ಶಕರು-ಕೆ.ಎಸ್. ಪರಮೇಶ್ವರ68 views