ಕರುನಾಡೇ.. ಹಾಡಿನ ಹಿಂದಿನ ಕಥೆ

ಸುಮಾ - ಎಲ್. ಎನ್‌ ಶಾಸ್ತ್ರಿ ಲೈಫ್ ಸ್ಟೋರಿ ಭಾಗ-25
ಗೆದ್ದ ಎತ್ತಿನ ಬಾಲ ಹಿಡಿಯಬೇಡಿ. ನೀವೇ ಗೆಲ್ಲುವ ಎತ್ತಾಗಿ. ಪ್ರೊಡ್ಯೂಸರ್‌ಗಳು ಗೆದ್ದ ಎತ್ತಿನ ಬಾಲ ಹಿಡ್ಕೊಂಡು ಹೋಗುತ್ತಾರೆ. ಶ್ರೇಯಾ ಘೋಷಾಲ್‌, ಸೋನು ನಿಗಂ ಹಾಡಿದಾಕ್ಷಣ ಸಿನಿಮಾ ಹಿಟ್‌ ಆಗುವುದಿಲ್ಲ. ಕಥೆ, ಕಲಾವಿದರು, ನಟನೆ ಎಲ್ಲಾ ಚೆನ್ನಾಗಿದ್ದರಷ್ಟೆ ಸಿನಿಮಾ ಜನರ ಮನಸ್ಸು ಗೆಲ್ಲುತ್ತದೆ.

ಶಾಸ್ತ್ರಿ ಅವರಿಗೆ ಈ ವಿಷಯವಾಗಿ ಬಹಳ ನೋವಿತ್ತು. ಅವರು ಆದಷ್ಟು ಕನ್ನಡದ ಗಾಯಕರನ್ನೇ ಬಳಸಲು ಪ್ರಯತ್ನಿಸುತ್ತಿದ್ದರು. ಕರುನಾಡೇ ಹಾಡನ್ನು ಮೊದಲು ಶಾಸ್ತ್ರಿ ಅವರೇ ಹಾಡಿದ್ರು. ಶೂಟಿಂಗ್‌ ಸ್ಪಾಟ್‌ಗೆ ಹೋಗಿ ಅದನ್ನು ಎಲ್ಲರಿಗೂ ಕೇಳಿಸಿದ್ರು. ಆಮೇಲೆ ರವಿಚಂದ್ರನ್‌ ಅದನ್ನು ಶಂಕರ್ ಮಹದೇವನ್‌ ಅವರ ಬಳಿ ಹಾಡಿಸಿಕೊಂಡು ಬರುವಂತೆ ಹೇಳಿದ್ರು. ಶಾಸ್ತ್ರಿ ಅವರಿಗೆ ಅದೆಲ್ಲ ರೂಢಿ ಆಗಿತ್ತು. ನನಗೆ ಅದು ಬಹಳ ದುಃಖವಾಗಿತ್ತು.


ಆದರೆ, ಶಾಸ್ತ್ರಿ ಅವರೇ ಬಾಂಬೆಗೆ ಹೋದರು. ಹಾಡಿಸಿಕೊಂಡು ಬಂದು ಶೂಟಿಂಗ್‌ ಸ್ಪಾಟಲ್ಲೇ ಎಲ್ಲರಿಗೂ ಅದನ್ನು ಕೇಳಿಸಿದರಂತೆ. ಅಲ್ಲಿದ್ದವರೆಲ್ಲ ಇದೇನಿದು ಡಬ್ಬಾ ತರಹ ಇದೆ. ಮೊದಲು ಶಾಸ್ತ್ರಿ ಅವರು ಹಾಡಿದ್ದೆ ಚೆನ್ನಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ರಂತೆ. ರವಿ ಸರ್‌ ನಂತರವೂ ಹತ್ತು ಜನರಿಗೆ ಹಾಡನ್ನು ಕೇಳಿಸಿ, ಅಭಿಪ್ರಾಯ ಕೇಳಿದ್ದಾರೆ. ಯಾರ ಬಳಿ ಕೇಳಿದ್ರು, ಶಾಸ್ತ್ರಿ ಅವರ ಧ್ವನಿಯೇ ಎಲ್ಲರೂ ಇಷ್ಟಪಟ್ಟರು. ಕೊನೆಗೆ ಅವರು ಹಾಡಿದ ಹಾಡೇ ಉಳಿಯಿತು. ಆದರೆ, ಆ ವಿಷಯದಲ್ಲಿ ರವಿಚಂದ್ರನ್ ಸಹೃದಯಿ. ಶಂಕರ್‌ ಮಹದೇವನ್‌ ಬಳಿ ಹಾಡಿಸಲು ಒಂದು ಲಕ್ಷದವರೆಗೂ ಖರ್ಚಾಗಿತ್ತು. ಆದರೆ, ಅವರು ದುಡ್ಡು ಹೋದರೆ ಹೋಯಿತು. ಜನ ನೀನು ಹಾಡಿರುವುದನ್ನೇ ಇಷ್ಟ ಪಡುತ್ತಿದ್ದಾರೆ ಎಂದು ಅದನ್ನು ಉಳಿಸಿದ್ರು. ರವಿಚಂದ್ರನ್‌ ವಿಶಾಲ ಹೃದಯಿ. ಪೇಮೆಂಟ್‌ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯಾರೇ ಸಲಹೆ ಕೊಟ್ಟರೂ, ಅದನ್ನು ತೆಗೆದುಕೊಳ್ಳುವ ದೊಡ್ಡ ಮನಸ್ಸು ಅವರದು.


ಶಾಸ್ತ್ರಿ ಅವರಿಗೆ ಟ್ರ್ಯಾಕ್‌ ಪೇಮೆಂಟ್‌ ಎಂದು ಪ್ರಾರಂಭದಲ್ಲಿ 250ರೂ ಸಿಗುತ್ತಿತ್ತು. ಅದು ಕೊನೆಗೆ 1,500ರೂ ಕ್ಕೆ ಬಂದಿತ್ತು. ಅದೇ ಹೊರಗಿನವರಿಗೆ ಎಷ್ಟು ಬೇಕಾದರೂ ಸುರಿಯುತ್ತಾರೆ.

ಎಲ್ಲರೂ ಅವರವರ ಉಸಿರು ಎಷ್ಟು ದಿವಸ ಇರುತ್ತದೆಯೋ ಅಷ್ಟು ದಿವಸ ಶಾಸ್ತ್ರಿ ಅವರನ್ನು ನೆನಪಿಸಿಕೊಳ್ಳಿ ಎಂದು ಕನ್ನಡ ಜನತೆಯಲ್ಲಿ ಕೇಳಿಕೊಳ್ಳುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಯಸುತ್ತೇನೆ. ಅವರನ್ನು ಗಂಡನಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ಅವರಿಂದ ಬೇಕಾದಷ್ಟು ಪಾಠ ಕಲಿತಿದ್ದೇನೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು, ಜೀವನ ನಡೆಸುತ್ತೇನೆ.ಇಲ್ಲಿಗೆ ಸುಮಾ ಶಾಸ್ತ್ರಿ ಅವರ ಸಂದರ್ಶನ ಮುಕ್ತಾಯವಾಯಿತು

ಸಂದರ್ಶನ: ಕೆ.ಎಸ್‌. ಪರಮೇಶ್ವರ

34 views