ಕಲಾವಿದನಿಗೆ ವೇದಿಕೆ ಎಷ್ಟು ಮುಖ್ಯ, ಅದನ್ನ ಹೇಗೆ ಬಳಸಿಕೊಳ್ಳಬೇಕು

ಮಿಮಿಕ್ರಿ ದಯಾನಂದ ಲೈಫ್‌ ಸ್ಟೋರಿ ಭಾಗ 62ಕಲಾವಿದನೆಂದರೆ ಸುಮ್ನೆ ಅಲ್ಲ. ಪ್ರೇಕ್ಷಕರ ಪ್ರೀತಿ ಗಳಿಸುವುದು ಸಾಮಾನ್ಯವಲ್ಲ. ನಾವು ಕಾರ್ಯಕ್ರಮ ಮಾಡಬೇಕಾದರೆ, ಜನ ನಮ್ಮ ಕಾಲ ಮುಂದೆ ಕೂತಿರುತ್ತಾರೆ. ಈ ಮಾತನ್ನು ನಾನು ಅಹಂಕಾರದಿಂದ ಹೇಳುತ್ತಿಲ್ಲ. ಒಬ್ಬೊಬ್ಬರದು ಒಂದು ನಿಮಿಷಕ್ಕೆ ಒಂದು ರೂಪಾಯಿ ಎಂದ್ರು ಎಷ್ಟು ದುಡ್ಡು ಆಗುತ್ತದೆ. ಈ ಮನುಷ್ಯ ಏನೋ ಮಾತಾಡುತ್ತಾನೆ. ನನಗೆ ಆತ್ಮತೃಪ್ತಿ ಸಿಗುತ್ತದೆ. ನಾನು ಬದಲಾಗುತ್ತೇನೆ. ನನ್ನ ಜೀವನದಲ್ಲಿ ಬದಲಾವಣೆ ಆಗುತ್ತದೆ. ನಾನು ಇನ್ನು ಮೇಲೆ ನಡೆದುಕೊಳ್ಳುವ ರೀತಿ ಬದಲಾವಣೆ ಆಗುತ್ತದೆ ಎಂಬ ಭರವಸೆಯಿಂದ ಅವರು ಅಲ್ಲಿ ಸೇರಿರುತ್ತಾರೆ.


ವೇದಿಕೆ, ನಮ್ಮ ಆಹಾರ, ಬಟ್ಟೆ, ಮೈಕ್‌ ಎಲ್ಲವೂ ಪ್ರೇಕ್ಷಕರದ್ದು. ಹಾಗಾಗಿ ವೇದಿಕೆ ಮೇಲೆ ಕೆಟ್ಟ ಮಾತುಗಳನ್ನು ಆಡಬಾರದು. ಹಾಗಾಗಿ ಜನರಿಗೆ ಏನು ಒಳ್ಳೆಯದಾಗುತ್ತದೆ, ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದು ಮಾತಾಡಬೇಕು. ಇದಿಷ್ಟು ಮಾತನಾಡುವ ಜವಾಬ್ದಾರಿಯನ್ನು ಅವರು ನಮಗೆ ಕೊಟ್ಟಿರುತ್ತಾರೆ.


ನನ್ನ ಸ್ವಂತ ವಿಷಯ, ಹುಡುಗಿ ವಿಷಯ ಹೇಳಲು, ಉಂಗುರ ಬದಲಿಸಲು, ಲವ್‌ ಮಾಡಲು ಆ ವೇದಿಕೆ ಇಲ್ಲ. ವೇದಿಕೆ ಜೀವನ ಪಾಠ ಕಲಿಸುತ್ತದೆ. ಆ ಜಾಗಕ್ಕೆ ತಲುಪಲು ಎಷ್ಟೋ ವರ್ಷಗಳ ಕಷ್ಟವಿರುತ್ತದೆ. ಅಲ್ಲಿ ಹೋಗಿ ಕೆಟ್ಟ ಮಾತುಗಳನ್ನು ಆಡಲು ಸಾಧ್ಯವೇ?. ಕುಡಿದು ವೇದಿಕೆ ಹತ್ತುವವರು ಇದ್ದಾರೆ. ವೇದಿಕೆ ತಾಯಿ ಮಡಿಲು ಇದ್ದ ಹಾಗೆ.


ವೇದಿಕೆಗೆ ನಮ್ಮನ್ನು ಕರೆಸಿ, ಹೂವಿನ ಹಾರ ಹಾಕಿ, ಮಾತಿಗೆ ಚಪ್ಪಾಳೆ ಹೊಡೆಯುವುದರ ಜೊತೆಗೆ ಸಂಭಾವನೆಯನ್ನು ಕೊಟ್ಟು ನಮಸ್ಕಾರ ಮಾಡಿ ಕಳುಹಿಸುತ್ತಾರೆ. ಇದಕ್ಕಿಂತ ದೊಡ್ಡ ಕೆಲಸ ನಮ್ಮ ಜೀವನಕ್ಕೆ ಅಗತ್ಯವಿದೆಯೇ?. ನಾವು ಸಾಯುವವರೆಗೂ ಜನರು ಗೌರವ ಕೊಡುತ್ತಾರೆ. ಇಂಥ ಒಳ್ಳೆಯ ಕೆಲಸದಲ್ಲಿ ಅಹಂಕಾರ, ದುರಹಂಕಾರ ತೋರಿಸುವ ಮೂಲಕ ದುರುಪಯೋಗ ಪಡಿಸಿಕೊಳ್ಳುತ್ತಿದ್ದೇವೆ.ಮುಂದುವರಿಯುವುದು...

ಸಂದರ್ಶನ: ಕೆ.ಎಸ್‌.ಪರಮೇಶ್ವರ

19 views