“ಕಳ್ಳನ ಅರೆಸ್ಟ್‌ ಮಾಡೋಕೆ ಅವನ ಮನೇಲಿ ಒಂದು ವಾರ ತಂಗಿದ್ದ ಪೊಲೀಸ್‌ ಪೇದೆ”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು ಭಾಗ 2


ನೀವುಗಳು ನಿಮ್ಮ ನೆಮ್ಮದಿ ಹಾಳಾಗುತ್ತಿರುವ ಬಗ್ಗೆ ಹೇಳುತ್ತೀರಿ. ಆದರೆ, ಆ ಮಗುವಿನ ನೆಮ್ಮದಿ ಹಾಳಾಗುತ್ತಿರುವ ಕುರಿತು ನೀವು ಕಾಳಜಿಯೇ ವಹಿಸಿಲ್ಲ ಎಂದೆ. ಆ ಮಗುವಿಗೆ ತಂದೆ, ತಾಯಿ ಇಲ್ಲದೆ ನಿದ್ದೆ ಬಂದಿರುವುದಿಲ್ಲ. ಆ ಕಾಲಘಟ್ಟದಲ್ಲಿ ನನ್ನ ಪೊಲೀಸ್‌ ಕಾನ್‌ಸ್ಟೆಬಲ್‌ ಗಸ್ತಿನಲ್ಲಿ ಹೊಡೆಯುವ ವಿಷಲ್‌, ಅವರು ಕಂಬಕ್ಕೆ ಹೊಡೆಯುವ ಲಾಠಿಯ ಶಬ್ದದಿಂದ ಮಗುವಿಗೆ ಕಳ್ಳರನ್ನು, ಸುಳ್ಳರನ್ನು ಓಡಿಸಲು ಒಬ್ಬ ವ್ಯಕ್ತಿ ಇದ್ದಾನೆ. ಆ ಶಕ್ತಿ ಬರುತ್ತಿದೆ. ನಾನು ನೆಮ್ಮದಿಯಾಗಿ ಮಲಗಬಹುದು ಎಂಬ ಭಾವನೆ ಬರುತ್ತದೆ. ಮಕ್ಕಳಲ್ಲಿ ’ಸೆನ್ಸ್‌ ಆಫ್‌ ಸೆಕ್ಯುರಿಟಿ’ ಸೃಷ್ಟಿಸುತ್ತದೆ. ಇದು ನಾನ್‌ಸೆನ್ಸ್‌ ಅಲ್ಲ, ನ್ಯೂ ಸೆನ್ಸ್‌ಕೂಡ ಅಲ್ಲ ಎಂದೆ. ಇದು ಪೊಲೀಸ್‌ನವರ ಮಾನವೀಯ ಮುಖ.


ಕಾನ್‌ಸ್ಟೆಬಲ್‌ ಮತ್ತು ಹೆಡ್‌ ಕಾನ್‌ಸ್ಟೆಬಲ್‌ಗಳಿಂದ ಪೊಲೀಸ್‌ ಇಲಾಖೆ ಪಡೆದಿರುವ ಗೌರವದ ಕುರಿತು 200 ಉದಾಹರಣೆಗಳನ್ನು ಕೊಡಬಲ್ಲೆ. ನನಗೆ ಸಿಕ್ಕಾಪಟ್ಟೆ ವೃತ್ತಿ ಸಂತೃಪ್ತಿ ಕೊಟ್ಟಿದೆ ಈ ಇಲಾಖೆ. ಶೇ100 ಕ್ಕಿಂತ ಹೆಚ್ಚಿನ ತೃಪ್ತಿಯನ್ನೇ ಈ ಇಲಾಖೆ ನೀಡಿದೆ. ವೃತ್ತಿ ಮಾತ್ಸರ್ಯದಿಂದ ನಲುಗಿರುವುದು ನಿಜ. ಕೆಲಸ ಮಾಡುವಾಗ ಕಾಲೆಳೆಯುವವರು ಇರುತ್ತಾರೆ. ರಾಜಕಾರಣಿಗಳು, ಕೆಲವು ಅಧಿಕಾರಿಗಳು, ನಮ್ಮ ಸಹೋದ್ಯೋಗಿಗಳಿಗೆ ನಮ್ಮ ಬಗ್ಗೆ ಕೋಪ ಇರುತ್ತದೆ. ಹೀಗೆ ವೃತ್ತಿ ಮಾತ್ಸರ್ಯವನ್ನು ಅನುಭವಿಸಿರುತ್ತೇವೆ. ಆದರೆ, ಸಂಪೂರ್ಣ ವೃತ್ತಿ ತೃಪ್ತಿ ದೊರಕಿದೆ.ಯಾವುದೇ ಪೊಲೀಸ್‌ ಅಧಿಕಾರಿಯ ಯಶಸ್ಸಿನ ಹಿಂದೆ ಪೊಲೀಸ್‌ ಕಾನ್‌ಸ್ಟೆಬಲ್ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಶ್ರಮ ಇರುತ್ತದೆ. ನಾನು ಹಲವು ಪ್ರಶಸ್ತಿಗಳನ್ನು ಪಡೆದಿದ್ದೇನೆ. ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ, ಶ್ಲಾಘನೀಯ ಸೇವೆಗಾಗಿ ಚಿನ್ನದ ಪದಕ, ಮುಖ್ಯಮಂತ್ರಿಗಳ ಚಿನ್ನದ ಪದಕ, ಬೆಳ್ಳಿ ಪದಕ ಪಡೆದಿದ್ದೇನೆ. ಹಲವಾರು ಮುಖ್ಯಮಂತ್ರಿಗಳು ಶ್ಲಾಘನೀಯ ಸೇವೆಗಾಗಿ ಸರ್ಟಿಫಿಕೆಟ್‌ ಕೊಟ್ಟಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯಿಂದ ಎರಡು ಬಾರಿ ಕೆಂಪೇಗೌಡ ಪ್ರಶಸ್ತಿ ದೊರಕಿದೆ. ನನ್ನ ಗೆಳೆಯರು ಬಹಳ ಅಭಿಮಾನದಿಂದ ಈ ಪ್ರಶಸ್ತಿಗಳನ್ನು ಯಾರಿಗೆ ಅರ್ಪಿಸುತ್ತೀರಿ ಎಂದು ಯಾವಾಗಲೂ ಕೇಳುತ್ತಾರೆ. ಇಬ್ಬರಿಗೆ ಇದನ್ನು ಅರ್ಪಿಸುತ್ತೇನೆ. ಮೊದಲನೆಯದಾಗಿ ನನ್ನನ್ನು ಪೋಷಿಸಿ ಬೆಳೆಸಿದ ತಾಯಿ, ತಂದೆ. ಇನ್ನೊಂದು ಮುಖ್ಯವಾಗಿ ನನ್ನ ಜೊತೆ ಜೀವಕ್ಕೆ ಜೀವ, ಬೆನ್ನಿಗೆ ಬೆನ್ನು ಕೊಟ್ಟು ಕೆಲಸ ಮಾಡಿದ ಪೊಲೀಸ್‌ ಕಾನ್‌ಸ್ಟೆಬಲ್‌ ಮತ್ತು ಹೆಡ್‌ ಕಾನ್‌ಸ್ಟೆಬಲ್‌ಗಳಿಗೆ ಅರ್ಪಿಸುತ್ತೇನೆ ಎಂದು ಹೇಳುತ್ತೇನೆ.


ಅವರಿಲ್ಲದಿದ್ದರೆ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಮಾಹಿತಿಯನ್ನು ಸಂಗ್ರಹಿಸುವುದು ಅವರು. ಜೀವದ ಹಂಗನ್ನು ತೊರೆದು ಹೋರಾಡುವವರು ಅವರು. ನಾವು ನೇತೃತ್ವ ವಹಿಸುತ್ತಿರುತ್ತೇವೆ. ಆದರೆ, ಹೆಜ್ಜೆ ಹೆಜ್ಜೆಗೂ ನಮ್ಮನ್ನು ಎಚ್ಚರಿಸುತ್ತಿರುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ನಮ್ಮನ್ನು ಕಾಪಾಡುತ್ತಾರೆ. ನಾನು, ನೀವು ಸೇರಿದಂತೆ ಎಲ್ಲರೂ ಮನೆಯಿಂದ ಹೊರಗೆ ಬರಬೇಕಾದರೆ ಕಮಿಷನರ್‌, ಡಿಜಿ ಕಾರಣ ಅಲ್ಲ. ಕಾನ್‌ಸ್ಟೆಬಲ್ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಅವರೇ ಕಾರಣ. ನಾವುಗಳು ಮಾತ್ರವಲ್ಲ ರಾಜ್ಯಪಾಲರು ಹೊರಗೆ ಬರಬೇಕೆಂದರೂ ಟ್ರಾಫಿಕ್‌ ಕಾನ್‌ಸ್ಟೆಬಲ್‌ ಇರಬೇಕು.


ಎಲೆಕ್ಟ್ರಿಕ್‌ ವೈಯರ್‌ ಬಿದ್ದಾಗ ಬೆಸ್ಕಾಂಗೆ ಕರೆ ಮಾಡಬೇಕು. ಆದರೆ ಯಾರೂ ಅಲ್ಲಿಗೆ ಕರೆ ಮಾಡದೇ ಪೊಲೀಸ್‌ ಕಂಟ್ರೋಲ್‌ ರೂಂಗೆ ಫೋನ್‌ ಮಾಡ್ತಾರೆ. ಮರ ಬಿದ್ದು ರೋಡ್‌ ಬ್ಲಾಕ್‌ ಆದರೂ, ಬೆಂಕಿ ಬಿದ್ದರೂ ನಮಗೇ ಕರೆ ಮಾಡ್ತಾರೆ. ನಾವೇನು ದೈವಾಂಶ ಸಂಭೂತರಲ್ಲ. ನಾವು ಕಾರ್ಪೊರೇಷನ್‌, ಎಲೆಕ್ಟ್ರಿಕ್‌, ಫೈಯರ್‌ ಅವರನ್ನು ಕರೆದುಕೊಂಡು ಬರುತ್ತೇವೆ. ಈ ನಂಬಿಕೆ ಜನಗಳಿಗಿದೆ. ಇದ್ಯಾವುದೂ ಬೇಡ, ಮನೆಗೆ ಹಾವು ಬಂದರೂ ನಮಗೆ ಕರೆ ಮಾಡ್ತಾರೆ. ನೀವು ಭಯ ಬೀಳುವಷ್ಟೇ ಹಾವನ್ನು ಕಂಡರೆ ನಾನೂ ಭಯ ಬೀಳುತ್ತೇನೆ. ನಾವು ತಕ್ಷಣ ಬರುತ್ತೇವೆ. ಬರಬೇಕಾದರೆ ಹಾವು ಹಿಡಿಯುವ ಪಟ್ಟಿ ಇಟ್ಟುಕೊಂಡಿರುತ್ತೇವೆ. ಹಾವು ಹಿಡಿಯುವವರನ್ನು ಕರೆದುಕೊಂಡು ಬರುತ್ತೇವೆ. ಪೊಲೀಸ್‌ಎಷ್ಟು ಮುಖ್ಯ ಎಂಬುದು ಇದರಿಂದ ತಿಳಿಯುತ್ತದೆ.


ರಾಜ್ಯಪಾಲರು ಅವೆನ್ಯೂ ರಸ್ತೆಗೆ ಬರಬೇಕಿರುತ್ತದೆ. ಅದು ತೀರಾ ಚಿಕ್ಕ ರಸ್ತೆ. ಸಾಧ್ಯನೇ ಇಲ್ಲ ಆ ರಸ್ತೆಯಲ್ಲಿ ಬರಲು ಅಂತಾರೆ. ಆದರೆ, ನಾವು ಕರೆದುಕೊಂಡು ಬರುತ್ತೇವೆ. ಪೊಲೀಸ್‌ ಕಾನ್‌ಸ್ಟೆಬಲ್ ದಾರಿ ಮಾಡಿದರೇನೇ ಅವರು ಆ ರಸ್ತೆ ದಾಟಲು ಸಾಧ್ಯವಾಗುವುದು. ಅಷ್ಟಿಲ್ಲದಿದ್ರೆ ಕಾಫಿಬೋರ್ಡ್ ಸರ್ಕಲ್‌ನಲ್ಲಿ ಪೊಲೀಸ್ ತಿಮ್ಮಯ್ಯನಿಗೆ ಪ್ರತಿಮೆ ಮಾಡಿ ಇಡುವುದು ಸಾಧ್ಯವೇ ಇರಲಿಲ್ಲ. ಅಲ್ಲೇನು ಟ್ರಾಫಿಕ್‌ ಡಿಸಿಪಿ, ಡಿಜಿ, ಕಮಿಷನರ್‌, ಗೃಹ ಸಚಿವರ ಪ್ರತಿಮೆ ಇಟ್ಟಿಲ್ಲ. ಅಲ್ಲಿ ಇರಿಸಿರುವುದು ಹೆಮ್ಮೆಯ ಹೆಡ್‌ ಕಾನ್‌ಸ್ಟೆಬಲ್‌ ಮೀಸೆ ತಿಮ್ಮಯ್ಯನವರ ಪ್ರತಿಮೆ.


ಜನ ಒತ್ತಾಯ ಮಾಡಿ ಅವರ ಪ್ರತಿಮೆ ಇರಿಸಿರುವುದು. ಯಾರನ್ನೋ ಉಳಿಸಲು ಹೋಗಿ ಅಪಘಾತದಲ್ಲಿ ಅವರು ಸಾವನ್ನಪ್ಪಿದರು. ಅವರ ಮೀಸೆ ನೋಡುವ ಸಲುವಾಗಿಯೇ ಜನ ವಾಹನಗಳನ್ನು ಆ ಜಂಕ್ಷನ್‌ನಲ್ಲಿ ನಿಧಾನವಾಗಿ ಓಡಿಸುತ್ತಿದ್ರು. ರಾಜಕಾರಣಿ, ಪೊಲೀಸ್‌ ಅಧಿಕಾರಿಗಳು, ಗವರ್ನರ್‌ ಓಡಾಡುತ್ತಿದ್ದ ಪ್ರಮುಖ ಜಂಕ್ಷನ್‌. ಖಡಕ್ ಯೂನಿಫಾರಂ. ಯೂನಿಫಾರಂ ನೋಡಿಯೇ ಜನ ಭಯ ಬೀಳುತ್ತಿದ್ರು. ಯೂನಿಫಾರಂಗೆ ಆಗೆಲ್ಲ ದೊಡ್ಡ ಅಲೊಯನ್ಸ್‌ ಕೊಡುತ್ತಿರಲಿಲ್ಲ. 10 ರೂಪಾಯಿ ಕೊಡುತ್ತಿದ್ರು. ಅಂಥದರಲ್ಲೂ ಗರಿಗರಿಯಾದ ವಸ್ತ್ರ, ಬಿಳಿ ಶರ್ಟ್‌, ಖಾಕಿ ಪ್ಯಾಂಟ್‌, ಕ್ಯಾಪ್‌ ಮಿರಮಿರ ಎನ್ನುತ್ತಿತ್ತು. ದೊಡ್ಡದಾದ ಗಿರಿಜಾ ಮೀಸೆಯನ್ನು ನೋಡಿ ಮಕ್ಕಳು ಮೀಸೆ ಮಾಮ ಎನ್ನುತ್ತಿದ್ರು. ಮಕ್ಕಳಿಗೆ ಗದರದೇ ವಿಶ್‌ ಮಾಡುತ್ತಿದ್ರು. ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ರು. ಕಾನ್‌ಸ್ಟೆಬಲ್‌, ಹೆಡ್‌ ಕಾನ್‌ಸ್ಟೆಬಲ್‌ ಇಲಾಖೆಯ ಶಕ್ತಿ ಎನ್ನಲು ಇದಕ್ಕಿಂತ ಒಳ್ಳೆಯ ಉದಾಹರಣೆ ಅಗತ್ಯವಿದೆಯಾ?


ಅವರು ಮಾಹಿತಿ ಕಲೆಹಾಕುವುದರ ಕುರಿತೇ ನೂರು ದಿನ ನಾನು ಮಾತನಾಡಬಲ್ಲೆ. ಹೀಗೆ ಒಬ್ಬೊಬ್ಬ ಪೊಲೀಸ್‌ ಅಧಿಕಾರಿಗಳ ಬಳಿಯೂ ಹಲವು ಘಟನೆಗಳಿರುತ್ತವೆ. ಆದರೆ, ಅವರ ಕೆಲಸವನ್ನು ಶ್ಲಾಘಿಸುವ ಮನಸು ಮೇಲಧಿಕಾರಿಗಳಿಗೆ ಇರಬೇಕು. ಎಲ್ಲ ನಾನೇ ಮಾಡಿದೆ ಎನ್ನಲು ಸಾಧ್ಯವೇ ಇಲ್ಲ. ನಾನು ಮಾಡಿದ್ದೇನೆ ಆದರೆ, ಅವರ ಬೆಂಬಲ, ಶಕ್ತಿಯಿಂದಲೇ ಮಾಡಿರುವುದು. ಇಂದು, ನಾಳೆ ಎಂದೆಂದಿಗೂ ಅವರಿಗೊಂದು ಸಲಾಂ ಹೊಡೆಯುತ್ತೇನೆ.


ಜನರ ಮಧ್ಯೆಯೇ ಇದ್ದು, ಮಾಹಿತಿ ತೆಗೆಯುವುದೇ ಅವರು. ಸಾಹಿತಿ, ವಿಚಾರವಂತರು, ಹೋರಾಟಗಾರ, ಕರ್ನಾಟಕ ಕಂಡಂತಹ ಅಪ್ರತಿಮ ವ್ಯಕ್ತಿ ಕೋ.ಚನ್ನಬಸಪ್ಪ. ಇವರು ಜಿಲ್ಲಾ ನ್ಯಾಯಾಧೀಶರಾಗಿದ್ದರು. ನಾನು ಪೊಲೀಸ್‌ ಕಂಡ ಕಥೆಗಳು ಎಂದು ‘ಪ್ರಜಾವಾಣಿ’ಗೆ ಬರೆಯುತ್ತಿದ್ದೆ. ಆ ವೇಳೆ ಅವರು ನಾನು ನಿಮ್ಮ ಬಳಿ ಮಾತನಾಡಬಹುದಾ ಎಂದ್ರು. ಖಂಡಿತ ಮಾತನಾಡಿ ಸರ್‌. ನನಗೆ ಇದಕ್ಕಿಂತ ಹೆಮ್ಮೆ, ಭಾಗ್ಯ ಏನಿದೆ ಎಂದೆ. ಆಗ, ಶಿವರಾಂ, ಪೊಲೀಸ್‌ ಕಾನ್‌ಸ್ಟೆಬಲ್‌ ಬಗ್ಗೆ ನೀವು ಬರೆಯುತ್ತಿರುವುದು ಬಹಳ ಹೆಮ್ಮೆ ಎನಿಸುತ್ತದೆ. ನಾನು ಒಂದು ಸಲ ಹೋಗುತ್ತಿದ್ದಾಗ ಸಿಗ್ನಲ್‌ನಲ್ಲಿ ಕಾನ್‌ಸ್ಟೆಬಲ್‌ ಕಾರು ನಿಲ್ಲಿಸಿದ್ರು. ಕಾರಿನಲ್ಲಿ ಜಿಲ್ಲಾ ನ್ಯಾಯಾಧೀಶ ಎಂದಿರುತ್ತದೆ. ಹಾಗಾಗಿ ಡ್ರೈವರ್‌ ಅಸಮಾಧಾನ ಪಟ್ಟುಕೊಂಡ್ರು. ಏನ್‌ ಸರ್‌ ನಿಮ್ಮ ಕಾರು ನಿಲ್ಲಿಸುತ್ತಾರೆ ಎಂದ್ರು. ಸುಮ್ನಿರು ಅವರ ಕೆಲಸ ಮಾಡುತ್ತಾರೆ ಎಂದೆ. ನನ್ನನ್ನು ನೋಡಿ ಒಂದು ಸೆಲ್ಯುಟ್‌ ಮಾಡಿದ್ರು. ನಾನು ಇಳಿದು ಹೋಗಿ, ಕರ್ತವ್ಯದಲ್ಲಿದ್ದಾಗ ಯಾವುದೇ ಕಾರಣಕ್ಕೂ ನನಗೆ ಸೆಲ್ಯೂಟ್‌ ಮಾಡಬೇಡ. ನೀನು ಕರ್ತವ್ಯ ಮಾಡುವುದೇ ದೊಡ್ಡದು ನನಗೆ. ಅದರ ನಡುವೆ ನಿನ್ನ ಸೆಲ್ಯೂಟ್‌ ತೆಗೆದುಕೊಳ್ಳಲು ಅರ್ಹನಲ್ಲ ಎಂದಿದ್ದೆ. ನಾನು ಸರ್‌. ಎಂದೆ. ಅದಕ್ಕವರು ಶಿವರಾಂ ಅಲ್ಲಿ ನಿಂತಿರುವುದು ಕಾನ್‌ಸ್ಟೆಬಲ್‌ ಎಂದು ಅವರಿಗೆ ಪೇದೆ ಎನ್ನಬೇಡಿ. ಈ ರಾಜ್ಯವನ್ನು ಪ್ರತಿನಿಧಿಸುವ ಪ್ರತಿನಿಧಿ ಅವರು ಎಂದ್ರು. ಸರ್‌ ಅದು ಹೇಗೆ ಅದು ಅವರ ಕರ್ತವ್ಯ ಎಂದೆ. ಅದಕ್ಕವರು ಅವರ ಬೆಲ್ಟ್‌ನಲ್ಲಿ ಏನಿದೆ ಎಂದ್ರು. ಕರ್ನಾಟಕ ರಾಜ್ಯ ಬೆಂಗಳೂರು ನಗರ ಪೊಲೀಸ್‌ ಎಂದಿದೆ ಎಂದೆ. ಆಮೇಲೆ ಏನಿದೆ ಎಂದ್ರು. ರಾಜ್ಯದ ಲಾಂಛನವನ್ನು ಅವರ ಬೆಲ್ಟ್‌ ಮೇಲೆ ಇಟ್ಟುಕೊಂಡಿದ್ದಾರೆ. ಅವರ ಪ್ರತಿ ಬಟನ್‌ ಮೇಲೆ ರಾಜ್ಯದ ಲಾಂಛನ ಗಂಡಬೇರುಂಡ ಗುರುತಿದೆ. ನೀವು ರಾಜ್ಯಕ್ಕೆ ಗೌರವ ಕೊಡಬೇಕು. ಅವರನ್ನು ಮುಟ್ಟಿದ್ರೆ ಕ್ರಮ ಜರುಗಿಸಬಹುದು. ಅವರನ್ನು ತಳ್ಳಿದ್ರೆ ಅಪರಾಧವಾಗುತ್ತದೆ ಎಂದ್ರು. ಆ ದಿನ ಅವರು ನನ್ನ ಕಣ್ತೆರೆಸಿದ್ರು.


ಕಾನ್‌ಸ್ಟೆಬಲ್‌ಗೆ ಅಧಿಕಾರಿಗಳ ಮೇಲೆ ನಂಬಿಕೆ ಬಂದ್ರೆ, ಈತ ಆರೋಪಿಗಳ ಜೊತೆ ಶಾಮೀಲಾಗುವುದಿಲ್ಲ ರಾಜಕಾರಣಿಗಳ ಒತ್ತಡಕ್ಕೆ ಬಲಿಯಾಗುವುದಿಲ್ಲ ಎಂಬುದು ಗೊತ್ತಾದ್ರೆ ಮಾಹಿತಿಗಳನ್ನು ಕೊಡುತ್ತಲೇ ಇರುತ್ತಾರೆ.


ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಸರಗಳ್ಳತನ, ದರೋಡೆ ಆಗುತ್ತಿತ್ತು. ಆ ದರೋಡೆ ತಂಡದ ಮುಖ್ಯಸ್ಥ ಕುಖ್ಯಾತ ಕಳ್ಳ. ವಿಮಾನದಲ್ಲಿಯೇ ಓಡಾಡುತ್ತಿದ್ದ. ಅವನಿಗೆ ಮೂರರಿಂದ ನಾಲ್ಕು ಪತ್ನಿಯರು. ಒಬ್ಬಾಕೆ ಆಂಧ್ರ, ಮತ್ತೊಬ್ಬಳು ಬೆಂಗಳೂರು, ಇನ್ನೊಬ್ಬಳು ತಮಿಳುನಾಡು, ಇನ್ನೊಬ್ಬಾಕೆ ಇನ್ಯಾವುದೋ ರಾಜ್ಯದಲ್ಲಿ ಇದ್ದಳು. ಆತನ ಬಗ್ಗೆ ನಟರಾಜ್‌ ಎಂಬುವವರೊಬ್ಬರು ಸಿಸಿಬಿಯಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಆಗಿದ್ರು. ಅವರು ಮಾಹಿತಿ ಕಲೆ ಹಾಕುತ್ತಾರೆ. ಆಂಧ್ರಪ್ರದೇಶದ ಮದನ್‌ಪಲ್ಲಿ ಬಳಿ ಈ ಕಳ್ಳ ಹೆಂಡತಿಯನ್ನು ಇರಿಸಿದ್ದಾನೆ ಎಂಬ ಮಾಹಿತಿ ದೊರಕುತ್ತದೆ. ಒಂದು ಕೆರೆಯ ಬಳಿ ಮನೆ. ಹಿಂಬದಿಯ ಬಾಗಿಲು ತೆಗೆದ್ರೆ ಕೆರೆ ಇರುತ್ತದೆ. ಕಳ್ಳ ಅಲ್ಲಿದ್ದಾನೆ ಎಂಬ ಮಾಹಿತಿ ದೊರಕುತ್ತದೆ. ಈ ಹೆಡ್‌ ಕಾನ್‌ಸ್ಟೆಬಲ್‌ ಆತನನ್ನು ಹಿಡಿಯಲು ತಂಡ ಕಟ್ಟಿಕೊಂಡು ಅವರೇ ಲೀಡ್‌ ಮಾಡ್ತಾರೆ. ಯಾವ ಸಬ್‌ ಇನ್‌ಸ್ಪೆಕ್ಟರ್‌, ಇನ್‌ಸ್ಪೆಕ್ಟರ್‌ ಕೂಡ ಬರುವುದಿಲ್ಲ.. ಏ ಹೋಗಪ್ಪ ನೀನೇ ಹಿಡ್ಕೊಂಡು ಬಾ ಅಂತಾರೆ. ಆಂಧ್ರಕ್ಕೆ ಹೋಗಬೇಕು. ಬಸ್ಸಿನಲ್ಲಿ ಓಡಾಡಬೇಕು. ಆಗೆಲ್ಲ ಈಗಿನ ರೀತಿಯ ವಾಹನಗಳ ಸೌಕರ್ಯಗಳಿರಲಿಲ್ಲ. ಮೊಬೈಲ್‌, ವಾಕಿಟಾಕಿ ಇರಲಿಲ್ಲ. ನಮ್ಮ ಬಳಿ ಮಾತನಾಡಬೇಕಂದ್ರೆ ಟ್ರಂಕ್‌ ಕಾಲ್‌ ಮಾಡಿ ಕನಿಷ್ಠ ಅರ್ಧ ಗಂಟೆ ಕಾಯಬೇಕಿತ್ತು. ಅಂಥ ಕಾಲಘಟ್ಟದಲ್ಲಿ ಇವರು ಅಲ್ಲಿಗೆ ಹೋಗುತ್ತಾರೆ. ಅವನು ಎಷ್ಟು ಕುಖ್ಯಾತ ರೌಡಿ ಅಂದ್ರೆ ಪೊಲೀಸರನ್ನು ಕೇರ್‌ ಮಾಡುತ್ತಿರಲಿಲ್ಲ. ಬೇಕಿದ್ರೆ ಅವರನ್ನೇ ಸಾಯಿಸಿ ಓಡಿ ಹೋಗುತ್ತಿದ್ದ.


ಮದನಪಲ್ಲಿಯಲ್ಲಿ ಮನೆ ಪತ್ತೆ ಮಾಡಿ ರಾತ್ರಿ ಹನ್ನೆರಡು ಗಂಟೆಗೆ ದಾಳಿ ಮಾಡುತ್ತಾರೆ. ನೋಡಿದ್ರೆ ಅವನು ಅಲ್ಲಿರಲಿಲ್ಲ. ಮಾಹಿತಿ ತಪ್ಪಾಗಿಬಿಟ್ಟಿರುತ್ತದೆ. ಆದರೆ, ಮನೆ ಅವನ ಹೆಂಡತಿಯದೇ ಆಗಿರುತ್ತದೆ, ಇಂಥ ಸಮಯದಲ್ಲಿ ನಾವೆಲ್ಲ ಆಗಿದ್ರೆ ಮಾಹಿತಿ ಕೊಟ್ಟವನಿಗೆ ಬೈಯುತ್ತಿದ್ವಿ. ಕರೆದುಕೊಂಡು ಹೋಗಿದ್ದ ಪೊಲೀಸ್‌ಗೆ ಬೈಯುತ್ತಿದ್ವಿ. ತಾಳ್ಮೆ ಕೆಟ್ಟುಹೋಗಿ ಬಿಡುತ್ತಿತ್ತು. ಆದರೆ ಆ ಹೆಡ್‌ ಕಾನ್‌ಸ್ಟೆಬಲ್‌ಗೆ ಇದ್ಯಾವುದೂ ಆಗಲಿಲ್ಲ. ಮನೆಯೊಳಗೆ ಸೇರಿಕೊಂಡು ಕಳ್ಳನ ಹೆಂಡತಿಯ ಬಳಿ ಆತನ ಬಗ್ಗೆ ಒಳ್ಳೆಯ ಮಾತಿನಲ್ಲಿ ಮಾಹಿತಿ ಕೇಳಿಕೊಂಡ್ರು. ಆತ ಬಂದ್ರೆ ವಾರಕ್ಕೊಮ್ಮೆ ಬರುತ್ತಾನೆ. ನನ್ನ ಹತ್ತಿರ ಬರಲೇಬೇಕು ಸರ್‌ ಅವನು. ನಾನೇ ಅವನಿಗೆ ಪ್ರೀತಿ ಪಾತ್ರ ಹೆಂಡತಿ. ನಾನೇನು ಮಾಡ್ಲಿ ಸರ್‌, ಅವನನ್ನು ಒಳ್ಳೆಯ ದಾರಿಗೆ ತರಲು ಸಾಧ್ಯವಾಗಿಲ್ಲ ಸರ್‌ ನನಗೆ ಎಂದಳು. ಆಕೆಯ ಮನವೊಲಿಸಿ ಅದೇ ಮನೆಯಲ್ಲಿ ಈ ಪೊಲೀಸರು ಉಳಿದುಕೊಳ್ಳುತ್ತಾರೆ. ಗೌರವಯುತವಾಗಿ ನಡೆಸಿಕೊಂಡು ಅಲ್ಲಿಯೇ ಇರುತ್ತಾರೆ. ಪೊಲೀಸರ ಬಳಿ ದುಡ್ಡು ಮುಗಿದು ಹೋಗುತ್ತದೆ. ದಿನದ ಮೂರು ಹೊತ್ತು ಊಟ ಮಾಡುತ್ತಿದ್ದವರು ಒಂದು ಹೊತ್ತಿನ ಊಟ ಮಾಡಲು ಆರಂಭಿಸಿದರು. ಅಕ್ಕ ಪಕ್ಕದವರಿಗೆ ಇವರು ಮನೆಯಲ್ಲಿ ಸೇರಿಕೊಂಡಿರುವುದು ಗೊತ್ತಾಗಬಾರದೆಂದು ಸೂರ್ಯ ಹುಟ್ಟುವ ಮುಂಚೆಯೇ ಕೆರೆ ದಂಡೆಯಲ್ಲಿ ಟಾಯ್ಲೆಟ್‌ಗೆ ಹೋಗಿ ಪುನಃ ಬಂದು ಮನೆ ಸೇರಿಕೊಳ್ಳುತ್ತಿದ್ರು. ಸೂರ್ಯ ಮುಳುಗಿದ ಮೇಲೆ ಊಟ, ತಿಂಡಿ ತರಲು ಹೊರಗೆ ಬರಬೇಕಿತ್ತು. ಮಧ್ಯಾಹ್ನ ಊಟ ಇರಲಿಲ್ಲ. ಹಾಲು ತಂದಿಟ್ಟುಕೊಂಡು ಆಕೆಯ ಬಳಿ ಟೀ ಮಾಡಿಸಿಕೊಂಡು ಕುಡಿಯುತ್ತಿದ್ರು. ಬ್ರೆಡ್ಡು ಇಟ್ಟುಕೊಂಡು ತಿನ್ನುತ್ತಿದ್ರು. ಇದನ್ನೆಲ್ಲ ಯಾರಾದ್ರೂ ಮಾಡಕ್ಕೆ ಸಾಧ್ಯವೇ. ಆದರೂ ಅವರು ಇದನ್ನೆಲ್ಲ ಮಾಡ್ತಾರೆ. ಕೆಲವರು ನಾವಿರಲ್ಲ ಎಂದು ವಾಪಸು ಬರುತ್ತಾರೆ. ನಾಲ್ಕರಿಂದ ಐದು ಪೊಲೀಸರು ಮಾತ್ರವೇ ಉಳಿದುಕೊಳ್ಳುತ್ತಾರೆ. ಏನಮ್ಮ ಯಾವಾಗ ಬರ್ತಾನೆ ಎಂದಾಗ, ಬಂದೇ ಬರುತ್ತಾನೆ ಸರ್‌.. ಎಂದು ಅವಳು ಹೇಳುತ್ತಾಳೆ.


ಒಂದು ದಿನ ರಾತ್ರಿ 12 ಗಂಟೆಗೆ ಮನೆಯ ಬಾಗಿಲು ಬಡಿಯುತ್ತದೆ. ಇವಳು ಕೂಗಿಕೊಳ್ಳುತ್ತಾಳೆ ಎಂದು ಇವಳಿಗೆ ಬೆದರಿಕೆ ಹಾಕಿ, ಬಾಗಿಲು ತೆರೆಯುತ್ತಾರೆ. ಒಳಗೆ ಬರುತ್ತಾನೆ, ಹಿಡ್ಕೊಂಡು ಬಿಡುತ್ತಾರೆ.


ಮುಂದುವರೆಯುವುದು…

ಸಂದರ್ಶಕರು - ಕೆ.ಎಸ್. ಪರಮೇಶ್ವರ49 views