“ಕಳ್ಳಭಟ್ಟಿ ಮಾರುತ್ತಿದ್ದವನು ಬೆಂಗಳೂರಿನ ಮೇಯರ್‌ ಆಗ್ಬಿಡ್ತಿದ್ದ ನಾನು ತಪ್ಪಿಸಿದೆ”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು ಭಾಗ 3


ಕಳ್ಳಭಟ್ಟಿ ಸಾರಾಯಿ ಮಾರುವವನೊಬ್ಬ ಮೇಯರ್‌ ಆಗ್ಬಿಡ್ತಿದ್ದ. ನಾನು ತಪ್ಪಿಸಿದೆ. ಹಿರಿಯ ರಾಜಕಾರಣಿಯೊಬ್ಬರಿಗೆ ಹೇಳಿದೆ, ಗೂಂಡಾ ಕಾಯ್ದೆಯಲ್ಲಿ ಕೇಸ್ ಹಾಕಿರುವವನಿಗೆ ಮಾಡುವುದು ಬೇಡ ಸರ್‌. ನಾನು ಅವನಿಗೆ ಪೂಜ್ಯನೀಯ ಮೇಯರ್‌ ಎಂದು ಕರೆಯಬೇಕಾಗುತ್ತದೆ ಬೇಡ ಸರ್‌ ಎಂದಿದ್ದೆ.


ಅಂಥ ಕೊಂಪೆಯಲ್ಲಿ ನಾನು ಹೋದಾಗ ಕಳ್ಳಬಟ್ಟಿ ಸಾರಾಯಿ ದಂಧೆ ಎಗ್ಗಿಲ್ಲದೆ ನಡೆಯುತ್ತಿತ್ತು. ರಾಜಕಾರಣಿಗಳು, ಪೊಲೀಸರ ಬೆಂಬಲದಿಂದಾಗಿ ಮುಕ್ತವಾಗಿ ಕಳ್ಳಭಟ್ಟಿ ವ್ಯಾಪಾರ ನಡೆಯುತ್ತಿತ್ತು. ಟೇಬಲ್‌ ಹಾಕಿ ಕೂತುಕೊಂಡು ಕಳ್ಳಭಟ್ಟಿ ಸಾರಾಯಿ ಮಾರುತ್ತಿದ್ರು. ಕಳ್ಳಭಟ್ಟಿ ಸಾರಾಯಿ ಮಾರುವವರಿಗೆ ಬೆಂಗಳೂರು ನಗರದಲ್ಲಿ ಮೊದಲಿಗೆ ಗೂಂಡಾ ಆಕ್ಟ್‌ ಆಗಿದ್ದು ಹರ್ಲಂಕರ್‌, ಮರಿಸ್ವಾಮಿಯವರು ಇದ್ದಾಗ, ನಾನು ಆಗ ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದೆ. ಕಳ್ಳಭಟ್ಟಿ ಮಾರುವವಳೊಬ್ಬಳು ನಗರ ಸಭೆಯ ಗೌರವಾನ್ವಿತ ಸದಸ್ಯೆಯಾಗಿದ್ದಳು. ಈಗಲೂ ಇದ್ದಾಳೆ. ಅದು ಇರ್ಲಿ ಬಿಡಿ.


ಆ ಕೊಂಪೆಯಲ್ಲಿ ಎಲ್ಲ ನಡೆಯುತ್ತಿತ್ತು. ನನಗೊಮ್ಮೆ ಮಾಹಿತಿ ಬಂತು, ಏಕಾಂಬರ್‌ ಎಂಬ ರೌಡಿ ಇದ್ದಾನೆ. ಅವನ ಹೆಂಡತಿಯೊಬ್ಬಳು ನೂರ್ ಜಹಾನ್‌ ಎಂದಿದ್ದಾಳೆ. ಧರ್ಮಾತೀತ. ಅವನು ಹಿಂದೂ ಅವಳು ಮುಸ್ಲಿಂ. ಅವನು ಹಳೇ ರೌಡಿ. ಅವನು ವೇಶ್ಯಾವಾಟಿಕೆ ನಡೆಸುತ್ತಿದ್ದಾನೆ ಎಂಬ ಮಾಹಿತಿ ಬಂತು. ಯಾವಾಗಲೂ ನಾವು ದಾಳಿ ಮಾಡಲು ಹೋದ್ರೂ ಅವನಿಗೆ ಮಾಹಿತಿ ಸಿಕ್ಕಿಬಿಡುತ್ತಿತ್ತು. ಎಲ್ಲ ಎಸ್ಕೇಪ್‌‌ಆಗಿಬಿಡೋರು. ಸಿಗ್ತಾನೇ ಇರಲಿಲ್ಲ.

ಏನು ಮಾಡೋದು ಎಂದು ಯೋಚಿಸುತ್ತಿದ್ದಾಗ, ಅವನು ಇಲ್ಲಿಗೆ ಗ್ರಾಹಕರನ್ನು ಕರೆದುಕೊಂಡೇ ಬರಲ್ಲ. ಎಂ.ಜಿ.ರಸ್ತೆಯಲ್ಲಿ ಆಟೊ ನಿಲ್ಲಿಸಿರುತ್ತಾನೆ. ಅಲ್ಲಿ ಬರುವ ಹೊರಗಡೆಯವರು ಇವನಿಗೆ ಲಿಂಕ್‌ ಮಾಡುತ್ತಾರೆ. ಅವನು ಅಲ್ಲಿಂದ ಕರೆದುಕೊಂಡು ಬರ್ತಾನೆ ಎಂಬ ಮಾಹಿತಿ ಸಿಕ್ತು. ನಾವು ಎಂ‌.ಜಿ. ರಸ್ತೆಯಲ್ಲಿ ಆಟೊ ನೋಡಿದ್ವಿ. ಅವನಿಗೆ ನನ್ನ ಪರಿಚಯ ಅಷ್ಟಾಗಿ ‍ಇರಲಿಲ್ಲ. ಮಾರುವೇಷದಲ್ಲಿ ಆಟೊ ಬಳಿ ಹೋಗಿ ನಮಗೆ ಕೆಲ ಹುಡುಗಿಯರು ಬೇಕು ಅಂದ್ವಿ. ಯಾರು ಬೇಕು? ಎಂಥವರು ಬೇಕು... ಹೀಗೆ ಅದು, ಇದು ಎಲ್ಲ ಕೇಳ್ದ. ಅವನು ರೌಡಿತನವನ್ನು ರೂಢಿಸಿಕೊಂಡು ಬಿಟ್ಟಿದ್ದ.

ಕರೆದುಕೊಂಡು ಹೋದ. ಅಷ್ಟರಲ್ಲಿ ನಾವು ಪೊಲೀಸರನ್ನು ಎಲ್ಲೆಲ್ಲಿ ಇಡಬೇಕೋ ಅಲ್ಲೆಲ್ಲ ಇಟ್ಟಿದ್ವಿ. ಇವನ ಮನೆಗೆ ದಾಳಿ ಮಾಡಿದ್ವಿ. ಅವನಿಗೆ ಗೊತ್ತೇ ಆಗಿಲ್ಲ. ನನ್ನ ಜೊತೆ ಬಂದವರು ಪೊಲೀಸ್‌ ಎಂದು. ದಾಳಿ ಮಾಡಿದಾಗ ಒಂದು ದೊಡ್ಡ ವಠಾರದ ತರಹ ಇತ್ತು. ಅಲ್ಲಲ್ಲಿ ಬಟ್ಟೆಗಳನ್ನು ಇಳಿ ಬಿಟ್ಟು, ರೂಂ ತರಹ ಮಾಡಿದ್ರು. ಕೆಲವರು ಓಡಿ ಹೋದರು. ಕೆಲವರನ್ನು ವಶಕ್ಕೆ ಪಡೆದುಕೊಂಡ್ವಿ. ಹೆಣ್ಣುಮಕ್ಕಳು ಅಳುತ್ತ ಇದ್ರು. ಆಗ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ಕೇಸಲ್ಲಿ ಅರೆಸ್ಟ್‌ ಮಾಡಬಹುದಿತ್ತು. ಈಗ ಮಾಡುವ ಹಾಗಿಲ್ಲ. ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕು.


ದಾಳಿ ಮಾಡಿದಾಗ ನೂರ್ ಜಹಾನ್‌ ಕೂಡ ಸಿಕ್ಕಿ ಹಾಕಿಕೊಂಡ್ಳು. ಅಜಾನುಬಾಹು ವ್ಯಕ್ತಿ. ಆಕೆನೇ ರೌಡಿ ತರಹ ಇದ್ಳು. ಒಂದು ಪಾರ್ಟಿಷಿಯನ್‌ನಲ್ಲಿ ಇದ್ದ ಗಂಡು, ಹೆಣ್ಣು ಬಟ್ಟೆ ಸರಿ ಮಾಡಿಕೊಂಡು ಹೊರಗೆ ಬಂದ್ರು. ಅಷ್ಟು ಸುಂದರವಾದ, ಲಕ್ಷಣವಾದ ಹೆಣ್ಣು ಮಗು ಈ ದಂಧೆಯಲ್ಲಿದ್ದಾಳಾ? ಅದು ಕೊಂಪೆಯಲ್ಲಿ, ಸ್ಲಂನಲ್ಲಿ ದಂಧೆ ಮಾಡುತ್ತಿದ್ದಾಳಾ ಎಂದು ನಂಬಲೂ ಸಾಧ್ಯವೇ ಆಗಲಿಲ್ಲ. ಅದಕ್ಕಿಂತ ಆಶ್ಚರ್ಯ ಆಗಿದ್ದು, ಹೊರಭಾಗದಲ್ಲಿ ಹೆಣ್ಣು ಮಗು ಅಳುತ್ತಿತ್ತು. ಅದಕ್ಕೆ ಐದು ವರ್ಷ ಇದ್ದಿರಬಹುದು. ಸ್ಫುರದ್ರೂಪಿ ಲಕ್ಷಣವಾದ ಮಗು. ಆ ಮಗುವಿನ ಕಾಂತಿ, ಬಣ್ಣವನ್ನು ವರ್ಣಿಸುವುದಕ್ಕೆ ಸಾಧ್ಯವೇ ಇಲ್ಲ. ನನಗೆ ಅದನ್ನು ನೋಡಿ ಇಲ್ಲಿ ಭಿಕ್ಷಾಟನೆಗೆ ಮಕ್ಕಳನ್ನು ಅಪಹರಿಸಿರುವುದು ನಡೆಯುತ್ತಿದಿಯಾ ಎಂದು ಭಯ ಶುರುವಾಯಿತು.


ತನ್ನ ಪಾಡಿಗೆ ತಾನು ಆಡುತ್ತಿದ್ದ ಮಗು. ನಾವು ದಾಳಿ ಮಾಡಿದ್ದನ್ನು ನೋಡಿ ಅಳಲು ಶುರು ಮಾಡಿತು. ಆಕೆ ಅದನ್ನು ಸಮಾಧಾನ ಮಾಡಿದಳು. ಆಗ ಅನಿಸಿತು. ಈಕೆಗೂ ಮಗುವಿಗೂ ಸಂಬಂಧ ಇದೆ ಎಂದು. ಯಾರದೀ ಮಗು ಎಂದೆ. ನನ್ನದು ಎಂದ್ಳು. ದಂಧೆ ಹೀಗೂ ನಡೆಯುತ್ತಾ ಎಂದು ನನಗೆ ದಿಗ್ಭ್ರಮೆ ಆಯಿತು. ನಿನಗೇನು ನಾಚಿಕೆ ಆಗಲ್ವಾ ಎಂದೆ. ನಿನ್ನ ಬಗ್ಗೆ ನನಗೇನು ಬೇಡ. ಆದರೆ, ಮಗು ಬಗ್ಗೆ ನನಗೆ ಬಹಳ ಕಾಳಜಿ ಇದೆ. ಆ ಮಗುವನ್ನು ಇಲ್ಲಿ ಬೆಳೆಸುತ್ತಿದ್ದಿಯಲ್ಲಾ ಎಂದೆ. ಅದಕ್ಕೆ ಅವಳು, ನಾನೇನು ಮಾಡ್ಲಿ ಸರ್‌, ಮಗುವನ್ನು ಯಾರು ನೋಡಿಕೊಳ್ಳುತ್ತಾರೆ ಎಂದ್ಳು. ನನ್ನನ್ನು ನೀವು ತಪ್ಪು ತಿಳಿದುಕೊಳ್ಳಬೇಡಿ.. ದಂಧೆಗೆ ಬಂದು ಬಿಟ್ಟಿದ್ದೇನೆ ಕ್ಷಮಿಸಬೇಕು ಎಂದ್ಳು.


ನಿನ್ನನ್ನು ಅರೆಸ್ಟ್‌ ಮಾಡಿದ್ರೆ ಜೈಲಿಗೆ ಹೋಗುತ್ತಿಯಲ್ಲಾ ಈ ಮಗುವನ್ನು ಎಲ್ಲಿ ಬಿಡುತ್ತೀಯಾ ಎಂದೆ. ಎಲ್ಲಿ ಬಿಡೋದು ಸರ್‌, ನನ್ನ ಜೊತೆಗೆ ಕರೆದುಕೊಂದು ಹೋಗಬೇಕು ಎಂದ್ಳು. ಒಳಗೆ ಮಗು ಬಿಡೋಲ್ಲ ಅಲ್ವಾ ಎಂದೆ. ಇಲ್ಲಿ ಬಿಟ್ಟು ಹೋಗಬೇಕಲ್ಲಾ ಎಂದಳು. ನನಗೆ ಬಹಳ ಬೇಸರ ಎನಿಸಿತು. ನೀನು ಇಷ್ಟು ಒಳ್ಳೆಯ ರೂಪ ಹೊಂದಿದ್ದೀಯಾ, ಲಕ್ಷಣವಾಗಿದ್ದೀಯಾ, ಒಳ್ಳೆಯ ಮನೆತನದ ಹೆಣ್ಣುಮಗಳ ತರಹ ಕಾಣುತ್ತೀಯಾ, ಮತ್ಯಾಕೆ ಈ ದಂಧೆಯಲ್ಲಿ ಇದ್ದೀಯಾ ಎಂದೆ. ಅದಕ್ಕವಳು ಅಳಲು ಶುರು ಮಾಡಿದಳು. ಹೀಗೆಲ್ಲ ಮಾಡುವವರಿಗೆ ಅಳುವುದೊಂದೇ ಗೊತ್ತಿರುವುದು, ನಾಟಕ ಮಾಡ್ತಾರೆ. ಕರೆದುಕೊಂಡು ನಡೀರಿ ಸರ್‌ ವ್ಯಾನ್‌ ಬಂದಿದೆ ಎಂದೆಲ್ಲ ಪೊಲೀಸ್‌ನವರು ಬೈಯಲು ಶುರು ಮಾಡಿದ್ರು.


ಇವಳು ಸ್ಲಂನವಳು ಅಲ್ಲೇ ಅಲ್ಲ. ಮಗುವನ್ನು ಹಿಡ್ಕೊಂಡು ಈ ದಂಧೆ ಮಾಡುತ್ತಿದ್ದಾಳೆ ಎಂದು ನನಗೆ ಕುತೂಹಲ ಉಂಟಾಯಿತು. ಮಧ್ಯಮ ಅಥವಾ ಮೇಲ್ಮಧ್ಯಮ ಕುಟುಂಬದ ಹೆಣ್ಣುಮಗಳಿವಳು ಎಂದು ಅನಿಸುತ್ತಿತ್ತು. ಆಮೇಲೆ ನಾನು ಕೇಳಿದೆ. ಅದಕ್ಕವಳು, ದಂಧೆ ಮಾಡ್ತಿದ್ದೇನೆ, ಸಿಕ್ಕಿ ಹಾಕಿಕೊಂಡಿದ್ದೇನೆ, ಪೊಲೀಸವರು ಬೈತಿದ್ದಾರೆ, ನನ್ನ ಕಥೆ ಕೇಳಿದ್ರೆ ಬಿಟ್ಟು ಬಿಡ್ತೀರಾ ಅಂದ್ಳು. ಬಿಡೋ ಅವಕಾಶನೂ ಇರುತ್ತೇ. ಯಾಕೆ ಈ ದಂಧೆ ಮಾಡ್ತಿದ್ದೀಯಾ ಎಂದೆ.


ಸರ್‌, ನನ್ನ ಬಿಡುವುದಾದರೆ ಮಾತ್ರ ನನ್ನ ಕಥೆ ಹೇಳ್ತೇನೆ. ಇಲ್ಲದಿದ್ರೆ ಹೇಳೊಲ್ಲ... ಅನುಭವಿಸುತ್ತೇನೆ ಬಿಡಿ ಸರ್‌ ಅಂದ್ಳು. ಈ ಮಗು ಏನ್ಮಾಡ್ತೀಯಾ ಎಂದೆ. ಏನೋ ಮಾಡ್ಕೊತೇನೆ ಬಿಡಿ ಸರ್‌ ಅಂದ್ಳು. ಈ ಮಗುವನ್ನು ಇಲ್ಲಿರೋದಕ್ಕೆ ಬಿಡೋದೇ ಇಲ್ಲ ನಾನು. ಅದನ್ನು ರಿಮ್ಯಾಂಡ್‌ ಹೋಂಗೆ ಕಳುಹಿಸುತ್ತೇನೆ ಎಂದೆ. ಆಗ ಸ್ವಲ್ಪ ಅವಳಿಗೆ ಭಯ ಶುರುವಾಯಿತು. ಗೊಳೋ ಎಂದು ಅಳಲು ಶುರುಮಾಡಿದಳು. ಕಥೆ ಹೇಳ್ತೀನಿ ನೀವು ಕೇಳಲೇ ಬೇಕು ಅಂದ್ಳು. ಹೇಳಮ್ಮ ಎಂದೆ. ಆ ಹೊತ್ತಿಗೆ ನಾನು ಪೊಲೀಸ್ ದರ್ಪವನ್ನೆಲ್ಲ ಬಿಟ್ಟುಬಿಟ್ಟಿದ್ದೆ. ಮಗುವನ್ನು ನೋಡಿ ಅವಳ ಮುಂದೆ ಮೆತ್ತಗೆ ಆಗಿದ್ದೆ. ಕಥೆ ಹೇಳಲು ಪ್ರಾರಂಭಿಸಿದಳು.


“ಸರ್‌ ನಾನು ಈ ಊರಿನವಳು ಅಲ್ಲ. ನನ್ನ ಹೆಸರು ಮೇರಿ. ಕಾರಾವಾರದ ಕುಗ್ರಾಮದಲ್ಲಿ ಇದ್ದವಳು. ಸಾಂಪ್ರದಾಯಿಕ ಕ್ರಿಶ್ಚಿಯನ್‌ ಕುಟುಂಬದಿಂದ ಬಂದವಳು. ಗೋವಾಕ್ಕೆ ಬಹಳ ಹತ್ತಿರ ನಮ್ಮೂರು. ನನ್ನ ಕುಟುಂಬದವರೆಲ್ಲ ಅಲ್ಲಿಯೇ ಇರುವುದು. ಅನುಕೂಲಸ್ಥ ಕೃಷಿಕರ ಕುಟುಂಬ. ನಮ್ಮೂರಲ್ಲೇ ಒಬ್ಬನಿಗೆ ಪ್ರೀತಿಸಿದೆ. ಅವನು ಕ್ರಿಶ್ಚಿಯನ್‌. ನಾವಿಬ್ಬರೂ ತುಂಬಾ ಪ್ರೀತಿಸಿದ್ವಿ. ಆದರೆ, ನಮ್ಮ ಮನೆಯಲ್ಲಿ ಮದುವೆಗೆ ಒಪ್ಪಿಲ್ಲ. ನಾವಿಬ್ಬರೂ ಸ್ವರ್ಗನೇ ಭೂಮಿ ಮೇಲಿದೆ ಎನ್ನುವ ಮಟ್ಟಕ್ಕೆ ಪ್ರೀತಿಸುತ್ತಿದ್ವಿ”. ನನಗೆ ಕೂತೂಹಲ ಹೆಚ್ಚಾಯಿತು. ಮತ್ತ್ಯಾಕೆ ಇಲ್ಲಿದ್ದೀ. ಅವನೆಲ್ಲಿ ಎಂದೆ. ತಿರುಗ ಅಳಲು ಶುರು ಮಾಡಿದಳು. ಅವನು ಸತ್ತು ಹೋಗಿದ್ದಾನೆ ಅಂದ್ಳು. ಯಾಕೆ ಸತ್ತ ಎಂದೆ. ಸರ್‌ ಚೆನ್ನಾಗಿದ್ವಿ. ನಾನು ಮನೆಯಿಂದ ದುಡ್ಡು ತಂದಿದ್ದೆ. ಅವನು ತಂದಿದ್ದ. ಆಟೊ ರಿಕ್ಷಾ ಕೊಂಡುಕೊಂಡ್ವಿ. ಅದನ್ನು ಓಡಿಸಿಕೊಂಡು ಲಿಂಗರಾಜಪುರದಲ್ಲಿ ಇದ್ವಿ. ತುಂಬ ಚೆನ್ನಾಗಿ ಜೀವನ ಮಾಡುತ್ತಿದ್ವಿ. ಭಾನುವಾರ ತಪ್ಪದೇ ಮಗಳನ್ನು ಕರೆದುಕೊಂಡು ಚರ್ಚ್‌ಗೆ ಹೋಗುತ್ತಿದ್ವಿ, ನೆಮ್ಮದಿಯಾಗಿದ್ವಿ. ಒಬ್ಬ ಮಗಳು ಸಾಕು, ಈಕೆಯನ್ನು ಚೆನ್ನಾಗಿ ಓದಿಸಬೇಕು. ಒಳ್ಳೆಯ ಸ್ಕೂಲ್‌ಗೆ ಸೇರಿಸಬೇಕು ಎಂದೆಲ್ಲ ಮಾತನಾಡುತ್ತಿದ್ವಿ. ಅವನಿಗೆ ಇದಕ್ಕಿದ್ದಂತೆ ಕ್ಯಾನ್ಸರ್‌ ಬಂದುಬಿಡ್ತು ಎಂದ್ಳು. ಕ್ಯಾನ್ಸರ್‌ ಏನು ದೊಡ್ಡದಲ್ಲಮ್ಮ ನೀನು ಚಿಕಿತ್ಸೆ ಕೊಡಿಸಿದ್ರೆ ಆಗುತ್ತಿತ್ತು ಎಂದೆ. ಎಲ್ಲ ಮಾಡಿಸಿದೆ ಸರ್‌. ಅವನ ಚಿಕಿತ್ಸೆಗಾಗಿ ಎಲ್ಲವನ್ನು ಕಳೆದುಕೊಂಡೆ. ಆದರೂ, ನನ್ನ ಕೈಯಲ್ಲಿ ಉಳಿಸಿಕೊಳ್ಳಲು ಆಗಲಿಲ್ಲ ತೀರಿಹೋದ.


ಮತ್ತೆ ಮನೆಗೆ ಹೋದ್ರೆ ಒಪ್ಪಲ್ಲ ಎಂದು, ಮನೆ ಕೆಲಸ ಮಾಡಿ ಈ ಮಗಳನ್ನು ಓದಿಸ್ಬೇಕು ಎಂದು ಹಟಕ್ಕೆ ಬಿದ್ದೆ. ನಾನು ಯಾವ ಮನೆ ಕೆಲಸಕ್ಕೆ ಹೋದ್ರೂ, ಆ ಮನೆಯ ಗಂಡಸರು ಒಂದು ವಾರದಲ್ಲಿ ನನ್ನ ಮೇಲೆ ಕಣ್ಣು ಹಾಕುತ್ತಿದ್ರು. ನಾನಿದಕ್ಕೆ ಬಲಿಯಾಗಬಾರದು ಎಂದು ಹೊರಗೆ ಬಂದೆ. ನನ್ನ ಗಂಡನ ಪ್ರಾಣ ಸ್ನೇಹಿತನೊಬ್ಬ ಇಲ್ಲಿದ್ದ. ಅವನು ನಮ್ಮನ್ನು ಕಾಪಾಡಿಕೊಂಡು ಅವನು ಆಟೊ ರಿಕ್ಷಾ ಓಡಿಸಲು ಶುರು ಮಾಡಿದ. ಆದರೆ, ಜನ ಕೆಟ್ಟದಾಗಿ ಮಾತನಾಡಲು ಶುರು ಮಾಡಿದ್ರು. ಗಂಡ ಸತ್ತು ಹೋದ ಮೇಲೆ ಅವನನ್ನು ಇಟ್ಟುಕೊಂಡಿದ್ದಾಳೆ ಎನ್ನುತ್ತಿದ್ರು. ಆಗ ನಾನು, ಅವನು ಒಂದು ತೀರ್ಮಾನಕ್ಕೆ ಬಂದ್ವಿ. ಮಗುವನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅದನ್ನು ಸಾಕುವ ಜವಾಬ್ದಾರಿ ನನ್ನದು ಎಂದ. ಜನ ಏನಾದ್ರು ಹೇಳಲಿ. ನಾವಿಬ್ಬರೂ ಗಂಡ ಹೆಂಡತಿ ಅಂದುಕೊಂಡೇ ತಿರುಗೋಣ. ಆಗ ಮಗುವನ್ನು ಕಾಪಾಡಲು ಆಗುತ್ತೆ ಎಂದ. ಅದಕ್ಕೆ ನಾನು ಒಪ್ಪಿದೆ. ನನ್ನನ್ನು ರಕ್ಷಣೆ ಮಾಡಿಕೊಂಡು, ನನ್ನೆಲ್ಲ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದ. ನಾನು ಗಂಡನನ್ನು ಕಳೆದುಕೊಂಡಿದ್ರೂ, ದೇವರು ಇನ್ನೊಬ್ಬನನ್ನು ದಯಪಾಲಿಸಿದ್ದಾನೆ ಅಂದ್ಕೊಂಡು ಜೀವನ ಸಾಗಿಸುತ್ತಿದ್ದೆ. ನಾವಿಬ್ಬರೂ ಸಮಾಜವನ್ನು ಧಿಕ್ಕರಿಸಿ ಚೆನ್ನಾಗಿ ಬದುಕುತ್ತಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಅವನೂ ಸತ್ತುಹೋದ. ಆಗೇನು ಮಾಡ್ಲಿ ಎಂದಾಗ, ನನಗೆ ಉತ್ತರವೇ ಇರಲಿಲ್ಲ.

ನಮ್ಮ ದೇಶದಲ್ಲಿ ಬಡ ಹೆಣ್ಣುಮಕ್ಕಳು ಈ ಜಾಲಕ್ಕೆ ಬೀಳುತ್ತಾರೆ ಎಂಬುದು ನನಗೆ ಗೊತ್ತಿತ್ತು. ಆದರೆ, ಇಷ್ಟು ಕಠೋರವಾಗಿ, ಕ್ರೂರವಾಗಿ ಈ ವಿಧಿ ನಡೆದುಕೊಳ್ಳುತ್ತದೆ ಎಂಬುದು ಅವತ್ತೇ ಗೊತ್ತಾಗಿದ್ದು. ನನಗೆ ತುಂಬಾ ಬೇಸರವಾಯಿತು. ಆಮೇಲೆ ಏನು ಮಾಡ್ದೆ ಎಂದೆ. ಎಲ್ಲ ಪ್ರಯತ್ನ ಮಾಡಿದೆ ಸರ್‌. ಆದರೆ, ಮನೆ ಅಕ್ಕಪಕ್ಕದವರು, ಕಳ್ಳರು ಕಾಕರು ಎಲ್ಲರೂ ನನ್ನ ಮೇಲೆ ಕಣ್ಣು ಹಾಕುತ್ತಿದ್ರು. ಕೆಲಸ ಮಾಡೋಕ್ಕೆ ಆಗುತ್ತಾನೆ ಇರಲಿಲ್ಲ. ವಿಧಿಯಿಲ್ಲದೇ ಬ್ರೆಡ್‌ ತೆಗೆದುಕೊಂಡು ನೀರಿನಲ್ಲಿ ಅದ್ದಿ ಮಗುವಿಗೆ ಕೊಡುತ್ತಿದ್ದೆ. ನನ್ನ ಮಗುವಿನ ಹಸಿವನ್ನು ನೋಡಲು ಆಗಲಿಲ್ಲ. ಆಗ ದಾರಿ ತಪ್ಪಿದೆ. ಇಲ್ಲಿ ಬಂದು ಬಿದ್ದೆ. ಇವನು ರಾಕ್ಷಸ. ಅವಳು ರಾಕ್ಷಸಿ. ಇವರಿಬ್ಬರೂ ರೌಡಿಗಳು. ಆದರೆ ಇವರಿಬ್ಬರಿಂದಾಗಿ ನನಗೆ ಬೇರೆ ರೌಡಿಗಳ ಆತಂಕವೇ ಇರಲಿಲ್ಲ. ಇವರಿಬ್ಬರ ಭಯಕ್ಕೆ ಯಾರು ನನ್ನ ಹತ್ತಿರ ಮಾತನಾಡಿಸುತ್ತಲೇ ಇರಲಿಲ್ಲ. ಅದಕ್ಕೆ ನನಗೆ ಇದೇ ಕ್ಷೇಮವಾದ ಸ್ಥಳ ಎಂದು ಇಲ್ಲೇ ಇದ್ದುಬಿಟ್ಟೆ ಸರ್‌ಎಂದಳು.


ನನ್ನನ್ನು ಬಿಡುತ್ತೀರಾ ಸರ್‌ ಎಂದಳು. ನನಗೊಂದು ಮಾತು ಕೊಡಬೇಕು ಆಗ ಬಿಡುತ್ತೇನೆ ಎಂದೆ. ಈ ದಂಧೆಯನ್ನು ಬಿಡುತ್ತೀನಿ ಎಂದು ಮಾತು ಕೊಡಬೇಕು ಎಂದೆ. ನಿನಗೆ ನಾನು ಬೇರೆ ಏನಾದ್ರು ವ್ಯವಸ್ಥೆ ಮಾಡ್ತೇನೆ. ಏನಾದ್ರು ಕೆಲಸ ಕೊಡಿಸಲು ಪ್ರಯತ್ನ ಮಾಡೋಣ ಎಂದೆ. ಬಿಡುತ್ತೀನಿ ಸರ್‌, ನನ್ನ ಮಗುವಿಗೋಸ್ಕರ ಬದುಕಲೇ ಬೇಕು ನಾನು ಅಂದ್ಳು. ನನ್ನ ಮಗುವಿನ ಸಮೇತ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಎಷ್ಟೋ ಸಲ ಅಂದುಕೊಂಡಿದ್ದೆ. ಆದರೆ, ಮಗುವಿನ ಮುಖ ನೋಡಿದಾಗ ಅದು ನನಗೆ ಸಾಧ್ಯವೇ ಆಗಲಿಲ್ಲ. ನಾನು ಬದುಕಬೇಕು, ಮಗುವನ್ನು ಕಾಪಾಡಲೇ ಬೇಕು. ನನಗೊಂದು ದಾರಿ ತೋರಿಸಿ ಎಂದಳು.


ನಾನು ಅವಳನ್ನು ಅರೆಸ್ಟ್‌ ಮಾಡಲೇ ಇಲ್ಲ ಬಿಟ್ಟುಬಿಟ್ಟೆ. ಒಳ್ಳೆಯ ಉದ್ದೇಶ ಇದ್ದಾಗ( General exception) ಎಂದು ಕಾನೂನಿನಲ್ಲಿಯೇ ಇದೆ. ದರೋಡೆ ಮಾಡಲು ಮನೆಗೆ ನುಗ್ಗಿದಾಗ ಹೊಡೆದು ಸಾಯಿಸಿದರೆ, ಗಲಭೆ ಮಾಡುವ ಸಂದರ್ಭದಲ್ಲಿ ಪೊಲೀಸ್‌ನವರು ಗುಂಡು ಹೊಡೆದಾಗ, ಗಲಭೆ ಮಾಡುವವನು ಬಿಟ್ಟು ಪಕ್ಕದವನಿಗೆ ಬಿದ್ದಾಗ General exception ಇರುತ್ತದೆ.


ಇವತ್ತು ಕೆ.ಜಿ ಹಳ್ಳಿಯಲ್ಲಿ ನಾಲ್ಕೈದು ಪೊಲೀಸ್‌ ಸ್ಟೇಷನ್‌ ಇದೆ. ನಾನು ಕೆ.ಜಿ ಹಳ್ಳಿಯಲ್ಲಿ ಇರಬೇಕಾದ್ರೆ ಟ್ಯಾನರಿ ರಸ್ತೆಯಿಂದ, ಕೊತ್ತನೂರು ಗ್ರಾಮ ಅಲ್ಲಿಂದ ಕಾವಲ್‌ ಭೈರಸಂದ್ರ, ಅಲ್ಲಿಂದ ಬಾಣಸವಾಡಿ, ಬೈರತಿ ವರೆಗೂ ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆ ಸರಹದ್ದು ಇತ್ತು. ನನ್ನ ಕೆಲಸದಲ್ಲಿ ಬ್ಯುಸಿ ಆಗಿದ್ದೆ. ನಂತರ ಆಕೆಯನ್ನು ಮರೆತು ಹೋದೆ.


ಯಾರೋ ಹೀಗೆ ಹೇಳಿದ್ರು. ಅಲ್ಲಿನ್ನೂ ದಂಧೆ ನಿಂತಿಲ್ಲ. ಪೊಲೀಸ್‌ನವರು ಶಾಮೀಲಾಗಿದ್ದಾರೆ ಎಂದು ಎಲ್ಲ ಮಾತಾಡುತ್ತಿದ್ದಾರೆ ಎಂದು ಯಾರೊ ಹೇಳಿದ್ರು. ಅದು ನನಗೆ ಬಹಳ ಬೇಸರ ಎನಿಸಿತು. ಒಂದು ದಿವಸ ವಿಶೇಷವಾಗಿ ರೇಡ್‌ ಮಾಡೋಣ ಎಂದು ನೇರವಾಗಿ ರಾತ್ರಿ ದಾಳಿ ಮಾಡಿದೆ. ಒಂದಷ್ಟು ಜನ ಸಿಕ್ಕಿಹಾಕಿಕೊಂಡ್ರು. ಒಂದು ರೂಮ್‌ನಿಂದ ಒಬ್ಬ ಹೆಣ್ಣುಮಗಳು ಹೊರಗೆ ಬರೋದಕ್ಕೆ ರೆಡಿ ಇರಲಿಲ್ಲ. ನಮ್ಮ ಲೇಡಿ ಕಾನ್‌ಸ್ಟೆಬಲ್‌ ಒಳಗೆ ಹೋಗಿ ಈಚೆಗೆ ಕರೆದುಕೊಂಡು ಬಂದ್ರು. ನೋಡಿದ್ರೆ ಅದೇ ಮೇರಿ. ಪಕ್ಕದಲ್ಲಿ ಮಗಳು. ತಲೆ ತಗ್ಗಿಸಿಕೊಂಡು ಅಳಲು ಶುರು ಮಾಡಿದ್ಳು. ಮಾತೇ ಇಲ್ಲ ಅವಳಿಗೆ. ನನಗೆ ಥೂ ನಾವು ಒಳ್ಳೆಯದು ಮಾಡಿದ್ರೆ, ಯಾರೂ ಬೆಂಬಲವೇ ಕೊಡಲ್ವಲ್ಲ ಈಕೆ ಮೋಸ ಮಾಡಿ ಬಿಟ್ಟಳ್ಳಲ್ಲ ಎಂಬ ಭಾವನೆ ನನಗೆ.


ನೀನು ತಪ್ಪು ಮಾಡುತ್ತಿದ್ದೀಯಾ, ನೀನು ಸರಿ ಹೋಗಲ್ಲ ಬಿಡು ಎಂದೆ. ನಿನ್ನನ್ನು ಯಾವ ಕಾರಣಕ್ಕೂ ಕ್ಷಮಿಸೋಲ್ಲ ಎಂದೆ. ಯಥಾ ಪ್ರಕಾರ ಅಳೋದಕ್ಕೆ ಶುರು ಮಾಡಿದ್ಳು. ಮಗುವಿಗೋಸ್ಕರ ದಂಧೆ ಬಿಡು. ನೀನು ಏನಾದ್ರು ಆಗು ಎಂದೆ. ಮಗುವನ್ನು ಸಮಾಜ ದಂಧೆಗೆ ತಂದು ಬಿಡುತ್ತೆ. ಸಮಾಜ ಹೊರಗೆ ಬೇರೆ ಮಾತನಾಡುತ್ತೆ. ಅಂತರಂಗದಲ್ಲಿ ಸಮಾಜನೇ ಬೇರೆ. ಕಾಮದ ವಿಚಾರದಲ್ಲಿ ಸಮಾಜ ತೀರಾ ಕ್ರೂರಿ. ದಯವಿಟ್ಟು ನನ್ನ ಹತ್ತಿರ ಮುಖ ತೋರಿಸಬೇಡ ಎಂದೆ. ಆಗ, ಇದೊಂದು ಅವಕಾಶ ಕೊಡಿ ಸರ್‌, ನನ್ನ ಮಗುವಿಗೋಸ್ಕರ ಏನಾದ್ರು ಮಾಡಬೇಕು. ಈಗಲೂ ಮಗುವಿಗೆ ನೀರಲ್ಲಿ ಬ್ರೆಡ್‌ ಕೊಡುತ್ತಿದ್ದೇನೆ. ಮಗುವಿಗೆ ಅನ್ನ ಕೊಟ್ರೆ ನನಗೆ ನಿದ್ದೆ ಬರುತ್ತೆ. ಇಲ್ಲಂದ್ರೆ ನಿದ್ದೆನೇ ಬರಲ್ಲ ಸರ್‌. ನನಗೆ ಈ ದಂಧೆ ಬಿಟ್ಟು ಬೇರೆ ಗೊತ್ತಿಲ್ಲ ಸರ್‌ ಎಂದ್ಳು. ಈ ಮಗುವನ್ನು ಅನಾಥಾಶ್ರಮಕ್ಕೆ ಸೇರಿಸಿ ನೀನು ಎಲ್ಲೋ ದುಡಿದು ತಿನ್ನಬಹುದಲ್ವಾ ಎಂದೆ.


ನೀನು ಕ್ಯಾಥೋಲಿಕ್‌ ಕ್ರಿಶ್ಚಿಯನ್‌. ನಿಮ್ಮ ಸಮುದಾಯದಲ್ಲಿ ಎಷ್ಟೊಂದು ಅನಾಥಾಶ್ರಮ ಇದೆ. ಕ್ರಿಶ್ಚಿಯನ್‌ ಧರ್ಮ ಗುರುತಿಸಿಕೊಂಡಿರುವುದೇ ಸೇವೆ ಮತ್ತು ಶಿಕ್ಷಣದಿಂದ. ದೀನ ದಲಿತರು, ರೋಗಿಗಳು, ಶಿಕ್ಷಣ ಮತ್ತು ವೈದ್ಯಕೀಯ ಸೇವೆ... ಹೀಗೆ ಎಲ್ಲರಿಗೂ ನೆರವಾಗಿ, ಧರ್ಮಾತೀತವಾಗಿ ನೆರವು ನೀಡುವ ಸ್ಥಳವದು. ನೀನ್ಯಾಕೆ ಆ ಅನಾಥಾಶ್ರಮವನ್ನು ಸಂಪರ್ಕ ಮಾಡಬಾರದು ಎಂದು ಆ ಮಹಿಳೆಗೆ ಹೇಳಿದೆ. ನನಗ್ಯಾರೂ ಬೆಂಗಳೂರಿನಲ್ಲಿ ಗೊತ್ತಿಲ್ಲ ಎಂದು ಆಕೆ ಹೇಳಿದಳು. ನಾನು ಫ್ರೇಜರ್‌ ಟೌನ್‌ನಲ್ಲಿ ಬಹಳ ದೊಡ್ಡ ಅನಾಥಾಶ್ರಮವೊಂದಿದೆ. ಅಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಆಶ್ರಯ ಒದಗಿಸುತ್ತಾರೆ. ನೀನು ನೇರವಾಗಿ ಹೋಗಿ ಅವರ ಹತ್ತಿರ ಕೇಳು. ಅಲ್ಲಿ ಒಬ್ಬರು ಫಾದರ್‌ ಇನ್‌ಚಾರ್ಚ್‌ ಇದ್ದಾರೆ. ಅವರು ಬಹಳ ಹೆಸರುವಾಸಿ. ಅವರು ನಿನ್ನ ಕೈಬಿಡುವುದಿಲ್ಲ. ನಾನು ಮೊದಲು ಕೆಲಸ ಮಾಡುತ್ತಿದ್ದ ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿದ್ದಾಗ ಕೆಲಸದ ಮೇಲೆ ಅಲ್ಲಿಗೆ ಹೋಗಿದ್ದೇನೆ ಎಂದೆ.


ಮುಂದುವರೆಯುವುದು…


ಸಂದರ್ಶಕರು - ಕೆ.ಎಸ್. ಪರಮೇಶ್ವರ


42 views