
ಕೊತ್ವಾಲ್ ರಾಮಚಂದ್ರನ ಕೈಗೆ ಗೊತ್ತಿಲ್ಲದೇ ತಗಲಾಕ್ಕೊಂಡಿದ್ದೆ
ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 76

ಅತ್ಯಂತ ದೊಡ್ಡ ರೌಡಿಗಳು ಮತ್ತು ಅತ್ಯಂತ ದೊಡ್ಡ ಪೊಲೀಸ್ ಆಫೀಸರ ನಡವಳಿಕೆ ಒಂದೇ ರೀತಿಯಾಗಿರುತ್ತದೆ. ಅವರು ಹಾಸ್ಯವನ್ನು, ಕಲಾವಿದರನ್ನು, ಚೆನ್ನಾಗಿ ಊಟಮಾಡುವವರನ್ನು ಇಷ್ಟಪಡುತ್ತಾರೆ. ಅವರಿಗೆ ಬಹಳ ಮೃದು ಸ್ವಭಾವ ಇರುತ್ತದೆ. ಯಾರಾದ್ರೂ ತುಂಬಾ ಕಷ್ಟದ ಮಾತನಾಡಿದ್ರೆ ಎದ್ದು ಹೋಗ್ತಾರೆ. ಯಾಕಂದ್ರೆ ಅವರ ಮುಂದೆ ಅತ್ತರೆ ಇವರ ಮರ್ಯಾದೆ ಹೋಗುತ್ತದೆ ಎಂದು.
ದೊಡ್ಡ ರೌಡಿಗಳು ನನಗೆ ಹೇಗೆ ಗೊತ್ತು ಎಂದು ನಿಮಗೆ ಅನಿಸಬಹುದು. ಕೊತ್ವಾಲ್ ರಾಮಚಂದ್ರ ಅವರ ಮುಂದೆ ಒಂದು ಗಂಟೆಗೂ ಹೆಚ್ಚು ಮಿಮಿಕ್ರಿ ಮಾಡಿದ್ದೇನೆ. ಆದರೆ, ಅವರು ಕೊತ್ವಾಲ್ ಎಂದು ಗೊತ್ತಿರಲಿಲ್ಲ. ತುಮಕೂರು ಮಹದೇವ ಅವರು ನನ್ನ ಗುರುಗಳಲ್ಲೊಬ್ಬರು. ಅವರು ಸಂಗೀತ ಹೋಟೆಲ್ನಲ್ಲಿ ಇರುವಂತೆ ನನಗೆ ಹೇಳಿದ್ರು. ಅಲ್ಲಿ ಗುಂಗುರು ಕೂದಲಿನ ವ್ಯಕ್ತಿ ಕೂತಿದ್ರು. ನೀವೇನು ಮಾಡ್ತೀರಾ ಎಂದ್ರು ಮಿಮಿಕ್ರಿ ಎಂದೆ. ಯಾರದ್ದೆಲ್ಲ ಮಾಡ್ತೀರಾ ಎಂದು ಕೇಳಿದ್ರು. ನಾನು ಸುಮಾರು ಜನರದ್ದು ಮಾಡಿದೆ. ಒಂದು ಕಾಲು ಗಂಟೆ ನಗಿಸಿದ್ದೇನೆ. ನಂತರ ಮಹದೇವಣ್ಣ ಬಾರಯ್ಯ ಇಲ್ಲಿ ಎಂದ್ರು. ನಾನು ಇರಿ ಸರ್, ಮಾತನಾಡುತ್ತಿದ್ದೇನೆ. ಬರ್ತೇನೆ ಎಂದೆ. ಅವರು ಯಾರು ಗೊತ್ತಾ ಎಂದ್ರು. ನಿಮ್ಮ ಫ್ರೆಂಡ್ ಅಂತಲ್ವಾ ಸರ್. ಮಾತಾಡಿಸುತ್ತಿದ್ದೇನೆ ಎಂದೆ. ಕೊತ್ವಾಲ್ ಎಂದ್ರು. ನನಗೆ ತುಟಿಗಳೆರಡು ಅಂಟಿಕೊಂಡಿತು. ಮಾತನಾಡಲೇ ಆಗುತ್ತಿರಲಿಲ್ಲ. ಅವರು ಯಾಕ್ರೀ ಹೇಳೋದಕ್ಕೆ ಹೋದ್ರಿ. ಹುಡುಗ ಎಷ್ಟು ಚೆನ್ನಾಗಿ ಮಾತನಾಡುತ್ತಿದ್ದ ಎಂದ್ರು. ಈ ಘಟನೆ ನಡೆದಿದ್ದು 1982ರಲ್ಲಿ.
ಮುಂದುವರಿಯುವುದು...