“ಕೊತ್ವಾಲ್‌ ರಾಮಚಂದ್ರನ ಹಿಂದೆ ಒಂಭತ್ತು ತಿಂಗಳು ಬಿದ್ದಿದ್ದೆ”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು ಭಾಗ 10


ಆ ಮೆಟಡಾರ್‌ನಲ್ಲಿ ಹತ್ತು ಪೊಲೀಸರಿದ್ರು. ಅವರು ಸೈಡ್‌ ಕೊಟ್ರು ಅವನು ಕಾರು ತಗೊಂಡು ಹೋಗಿಬಿಟ್ಟ. ನಮಗೆ ತುಂಬಾ ಬೇಜಾರಾಯಿತು. ನೀವು ಯಾಕೆ ಅಡ್ಡ ಹಾಕಿಲ್ಲ ಎಂದು ಕೇಳಿದ್ವಿ. ನಮಗೇನು ಕನಸು ಬಿದ್ದಿರುತ್ತಾ ಅಂದ್ರು ಎಸಿಪಿ. ಡ್ರೈವರ್‌ ಮಲ್ಲೇಗೌಡ ಅವರಿಗೆ ಬೈಯಲು ಶುರು ಮಾಡಿದೆ. ನಿಮ್ಗೂ ಗೊತ್ತಾಗಿಲ್ವಾ ಅಂದೆ. ಸ್ವಾಮಿ, ಜಾಗ ಬಿಡು ಅಂದ್ರು ಬಿಟ್ಟೆ, ನಾನೇನು ಮಾಡ್ಲಿ ಸರ್‌ಅಂದ್ರು. ನನಗೂ ಸರಿಯಾಗಿ ಬೈದ್ರು. ಸರ್‌, ನಾನು ಒಂದು ರೌಂಡ್‌ ಫೈಯರ್‌ ಮಾಡಿದ್ದೇನೆ ಅಂದೆ. ನಾಲ್ಕು ರೌಂಡ್‌ ಗುಂಡು ಮಿಕ್ಕಿತು. ಗುಂಡು ಬಿದ್ದಿದಿಯಾ ಅಂದ್ರು, ಖಂಡಿತಾ ಬಿದ್ದಿರುತ್ತೆ. ಅವನು ಮಚ್ಚಿನಲ್ಲಿ ಹೊಡೆದ್ರೆ ನಾನೇನು ಮಾಡ್ಲಿ ಅಂದೆ. ನಿನ್ನ ಮೇಲೆ ಮರ್ಡರ್‌ ಕೇಸ್‌ ರಿಜಿಸ್ಟರ್ ಆಗುತ್ತೆ ಅಂದ್ರು.


ಈಗ ಆಯುಧ ಪೂಜೆ ರಜೆ ಇರುತ್ತೆ. ಪಾರ್ಟಿ ಮಾಡಲು ಯಾರೊ ಬಂದಿರುತ್ತಾರೆ. ಬೇಟೆ ಆಡಲು ಬಂದಿರ್ತಾರೆ. ನೀನು ಯಾರಿಗೋ ಗುಂಡು ಹೊಡೆದು ಬಿಟ್ಟಿದ್ದೀಯಾ. ಹೆಚ್ಚುಕಮ್ಮಿ ಆದ್ರೆ ನಿನ್ನ ಮೇಲೆ ಮರ್ಡರ್‌ ಕೇಸ್‌ ಆಗುತ್ತೆ. ಜೈಲಿಗೆ ಹೋಗಬೇಕಾಗುತ್ತೆ ಅಂತೆಲ್ಲ ಅಂದು ಬಿಟ್ರು. ಆ ಚಳಿಗೆ ನನಗೆ ಜ್ವರ ಬಂದಂಗೆ ಆಗಿಹೋಯ್ತು. ಈ ಕೇಸ್‌, ಜೈಲು ಎಲ್ಲ ನನಿಗ್ಯಾಕೆ ಬೇಕಿತ್ತು ಅನಿಸಿತು. ಅವರ ಹತ್ತಿರ ಜಗಳ ಆಡಲು ಆಗಲ್ಲ. ಸೀನಿಯರ್‌ ಆಫೀಸರ್‌. ನಮ್ಮ ಇನ್‌ಸ್ಪೆಕ್ಟರ್‌ ಸಮಾಧಾನ ಮಾಡಿದ್ರು.
ಬೇಟೆ ಆಡೋರು, ಪಾರ್ಟಿ ಮಾಡೋರು ಅಂಥೆಲ್ಲ ಹೇಳಿದ್ರಲ್ಲ, ಆತಂಕದಿಂದಲೇ ಮತ್ತೆ ಸ್ಪಾಟ್‌ಗೆ ಬಂದ್ವಿ. ಪೆಟ್ರೊಮ್ಯಾ ಕ್ಸ್‌ಬಳಿ ಕಾರು ನಿಲ್ಲಿಸಿ ಚೆಕ್‌ ಮಾಡಿದ್ರೆ, ಕಾರು ತುಂಬಾ ಮಚ್ಚುಗಳು, ಡಿಕ್ಕಿ ತೆಗೆದ್ರೆ ಅದರ ತುಂಬಾ ಶ್ರೀಗಂಧ. ಸದ್ಯ ದೊಡ್ಡ ಅಪರೇಷನ್‌ ಸಕ್ಸಸ್‌ ಆಗಿದೆ. ನಾವು ತೊಂದರೆಗೆ ಸಿಲುಕಿಕೊಳ್ಳಲ್ಲ ಎಂಬ ನಂಬಿಕೆ ಬಂತು. ಆದರೂ ಅವರಿಗೆ ಅಸಮಾಧಾನ. ನೀನು ಯಾಕೆ? ಯಾರನ್ನು ಕೇಳಿ ಫೈಯರ್‌ ಮಾಡ್ದೆ ಎಂದು ಮತ್ತೆ ಕೇಳಲು ಶುರು ಮಾಡಿದ್ರು. ನೋಡಿ ಸರ್‌, ನನ್ನ ಮತ್ತು ಪೊಲೀಸರ ಆತ್ಮರಕ್ಷಣೆಗೆ ಫೈಯರ್‌ ಮಾಡ್ದೆ ವಿಧಿ ಇರಲಿಲ್ಲ. ನನಗೆ ಕೆಲಸ ಹೇಳಿಕೊಟ್ಟವರು ಇದನ್ನು ಕಲಿಸಿದ್ದಾರೆ. ನಾನೇ ಎದುರಿಸುತ್ತೇನೆ ಎಂದೆ. ಜಾಸ್ತಿ ಬೈಯಬೇಡಿ. ಆಫೀಸರ್‌ ಅಂತಾ ಗೌರವ ಕೊಡುತ್ತಿದ್ದೇನೆ ಎಂದೆ. ಅವರು ಅದು, ಇದು ಅಂತಾ ಮತ್ತೆ ಬೈಯಲು ಶುರು ಹಚ್ಚಿಕೊಂಡ್ರು. ನನಗೆ ಕೋಪ ಜಾಸ್ತಿ ಆಯಿತು. ನಾನು ಸಾಯಕ್ಕೆ ಬಂದಿಲ್ಲ ಪೊಲೀಸ್‌ ಕೆಲಸಕ್ಕೆ ಅಂದೆ. ಆಗ ಇನ್‌ಸ್ಪೆಕ್ಟರ್‌ ಸಮಾಧಾನ ಮಾಡಿದ್ರು.


ಗಾಡಿಗೆ ಶ್ರೀಗಂಧವನ್ನು ತುಂಬಿಸಿಕೊಂಡ್ವಿ. ಸಕಲೇಶಪುರ ಗ್ರಾಮೀಣ ಪೊಲೀಸ್‌ಠಾಣೆಗೆ ಮಾಹಿತಿ ಕೊಡಲು ಎಲ್ಲವನ್ನೂ ತೆಗೆದುಕೊಂಡು ಹೋದ್ವಿ. ಅವರು ಇದು ನಮ್ಮ ವ್ಯಾಪ್ತಿಗೆ ಬರಲ್ಲ ಆಲೂರಿಗೆ ಬರುತ್ತದೆ ಅಂದ್ರು. ನಾವು ಇಲ್ಲಿ ಬಂದಿದ್ದೀವಿ. ಕೇಸ್‌ ರಿಜಿಸ್ಟರ್‌ ಮಾಡಿಕೊಳ್ಳಿ. ಆಮೇಲೆ ನೀವು ಆಲೂರಿಗೆ ಕಳುಹಿಸಿಕೊಳ್ಳಿ. ಬಂದು ಸೀಜ್‌ಮಾಡಿ ಎಂದು ನಮ್ಮ ಜೊತೆಗಿದ್ದ ಸೀನಿಯರ್‌ ಆಫೀಸರ್‌ಗಳು ಹೇಳಿದ್ರು. ಜಟಾಪಟಿ ಆದಮೇಲೆ ಸೀಜ್‌ ಮಾಡಿದ್ರು. ಅಲ್ಲಿ ನಡೆದ ಎಲ್ಲ ಮಾಹಿತಿಗಳನ್ನು ಬರೆದು ಕೊಟ್ವಿ.


ತಿಮ್ಮಯ್ಯನಿಗೆ ಆ ಚಳಿಗೆ ಜ್ವರ ಬಂದಂಗೆ ಆಗಿತ್ತು. ಅಲ್ಲಿ ನಡೆದ ಗಲಾಟೆ ಮತ್ತು ಮೋರಿಯಲ್ಲಿ ಹೋಗಿದ್ದರಿಂದ ಇಬ್ಬರಿಗೂ ಕೈ, ಕಾಲೆಲ್ಲ ತರಚಿತ್ತು. ಅಲ್ಲಿ ಸಿಕ್ಕ ಕಾರುಗಳು ಬೆಂಗಳೂರಿನಿಂದ ಕಳುವಾಗಿದ್ದವಾಗಿದ್ವು. ನಮಗೆ ಬಹಳ ಖುಷಿಯಾಯಿತು. ಅಲ್ಲಿಂದ ವಾಪಸು ಬರಬೇಕಿತ್ತು. ಟ್ರಂಕ್‌ಕಾಲ್‌ನಲ್ಲಿ ಕಮಿಷನರ್‌ಗೆ ಸುದ್ದಿ ಹೇಳಿದಾಗ ಅವರು ತುಂಬಾ ಪ್ರಶಂಸೆ ವ್ಯಕ್ತಪಡಿಸಿದ್ರು. ಹಾಸನ ಎಸ್ಪಿಗೆ ವರದಿ ಸಲ್ಲಿಸಿ ಬನ್ನಿ ಎಂದು ಹೇಳಿದ್ರು. ಬೋರ್ಕರ್‌ ಎಸ್ಪಿ ಆಗಿದ್ರು ಆಗ. ಒಳ್ಳೆಯ ಕೆಲಸ ಮಾಡಿದ್ರಿ. ಆದರೆ, ಇಲ್ಲಿ ಆನೆಗಡ್ಲೆ ಎನ್ನುವ ಊರಿನ ಬಳಿ ಕಾರು ಹಳ್ಳಕ್ಕೆ ಬಿದ್ದಿದೆ, ಪಂಕ್ಚರ್‌ ಆಗಿದೆ. ಅದರಲ್ಲಿ ಒಂದು ಡೆಡ್‌ಬಾಡಿ ಇದೆ ಅಂದ್ರು. ನನಗೆ ಆತಂಕ ಶುರುವಾಯಿತು. ನೋಡಪ್ಪ ಡೆಡ್‌ಬಾಡಿ ಇದೆಯಂತೆ ಏನ್‌ಮಾಡಿಬಿಟ್ರಪ್ಪ ನೀವು ಅಂದ್ರು.


ಆದರೆ, ಎಸ್ಪಿ ಏನೂ ಹೇಳಿಲ್ಲ. ನೋಡಿ, ಚೆಕ್‌ಮಾಡಿ, ನಿಮ್ಮದೇ ಪ್ರಕರಣ ಆಗಿದ್ರೆ ಅಲ್ಲಿ ಆಫೀಸರ್ಸ್‌ ಇದ್ದಾರೆ ಅವರಿಗೆ ವಿವರಣೆ ಕೊಡಿ ಅಂದ್ರು. ಅಲ್ಲಿ ಹೋದರೆ, ಆಫೀಸರ್ಸ್‌ ಫಿಂಗರ್‌ ಪ್ರಿಂಟ್, ಫೊರೆನ್ಸಿಕ್ ಎಕ್ಸ್‌ಪರ್ಟ್‌, ಫೋಟೊಗ್ರಾಫರ್‌ಗಳಿಗೆ ಕಾಯುತ್ತಿದ್ರು. ಅಲ್ಲಿವರೆಗೂ ಅವರ‍್ಯಾರೂ ಹತ್ತಿರ ಹೋಗಿರಲಿಲ್ಲ. ಎಸ್ಟೇಟ್‌ ನವರ‍್ಯಾರೋ ಕಾರು ಬಿದ್ದಿರುವ ಮಾಹಿತಿ ಕೊಟ್ಟಿದ್ರು. ಅಂಬಾಸಿಡರ್‌ ಕಾರಿನ ಸ್ಟೇರಿಂಗ್‌ ಮೇಲೆ ಡೆಡ್‌ಬಾಡಿಯ ತಲೆ ಇತ್ತು. ಕಾರು ನೋಡಿದ ತಕ್ಷಣ ಅದೇ ಕಾರು ಅಂಥ ಗೊತ್ತಾಯ್ತು. ನನಗೂ, ತಿಮ್ಮಯ್ಯನಿಗೂ ಬದುಕಿನ ಪ್ರಶ್ನೆಯಾಗಿತ್ತು. ಸ್ಟೇರಿಂಗ್‌ ಮೇಲಿದ್ದ ಡೆಡ್‌ಬಾಡಿಯ ಮುಖ ತೆಗೆದು ನೋಡಿದ್ರೆ... ಜಾಮೀನು ತೆಗೆದುಕೊಂಡು ಹೋಗಿದ್ದ ರಘು ಮೃತದೇಹವಾಗಿತ್ತು. ಸರ್‌, ರಘುದು ಡೆಡ್‌ಬಾಡಿ ಎಂದು ಖುಷಿಯಲ್ಲಿ ಕೂಗಿದೆ. ಅಲ್ಲಿದ್ದವರೆಲ್ಲ, ನಾನು ಫೈರ್‌ ಮಾಡಿದ್ದು, ಎಂಥ ಕೇಸ್‌ ಅಂಥೆಲ್ಲ ಶುರು ಮಾಡಿಕೊಂಡ್ರು. ಅಲ್ಲಿದ್ದ ಡಿವೈಎಸ್ಪಿ, ಸಿಐಡಿಯಲ್ಲೆಲ್ಲ ಕೆಲಸ ಮಾಡಿದ್ರು. ಬಹಳ ಎಕ್ಸಿಪಿರಿಯನ್ಸ್‌ ಪೊಲೀಸ್ ಅಧಿಕಾರಿ ಅವರು. ಯಾರೋ ಫೈಯರ್‌ ಮಾಡಿದ್ದು ಶಿವರಾಂ ಅಂದ್ರು? ನಾನು ಸರ್‌, ಅಂದೆ. ನೋಡು ಆಫೀಸರ್‌ಗಳು ಹುಷಾರು, ಅವರೇ ಹೆಸರು ಹಾಕಿಕೊಂಡು ಬಿಡ್ತಾರೆ ಅಂದ್ರು. ಒಳ್ಳೆಯ ಕೆಲಸ ಮಾಡಿದ್ದೀಯಪ್ಪ ಹುಡುಗ ಎಂದು ಬೆನ್ನು ತಟ್ಟಿದ್ರು. ಎಸ್ಪಿಗೆ ಹೋಗಿ ಹೇಳಿದ್ರು ಅವರು ಖುಷಿಪಟ್ರು.


ಸಿಸಿಬಿ ಪೊಲೀಸರು ರಘು ಎನ್‌ಕೌಂಟರ್‌ ಮಾಡಿದ್ದಾರೆ ಅನ್ನೋ ವಿಷಯ ಕಮಿಷನರ್‌ಗೆ ಗೊತ್ತಾಯ್ತು. ಸುದ್ದಿಗೋಷ್ಠಿ ಕರೆದ್ರು. ನನ್ನ ಪೊಲೀಸ್‌ ಅಧಿಕಾರಿಗಳಿಗೆ ಕಿಂಚಿತ್ತೂ ತೊಂದರೆ ಆಗಬಾರದು. ಎಸ್ಕಾರ್ಟ್‌ನಲ್ಲಿ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬರಬೇಕು. ಕೆಎಸ್‌ಆರ್‌ಪಿಸಿ ಕಳುಹಿಸುತ್ತೇನೆ ಅಲ್ಲಿಯವರೆಗೂ ಬರವುದು ಬೇಡ. ನಾನೇ ಫೊರೆನ್ಸಿಕ್ ಎಕ್ಸ್ ಪರ್ಟ್ ಗೆ ಕಳುಹಿಸುತ್ತೇನೆ. ಬೆಂಗಳೂರಿನಲ್ಲಿರುವ ಪೊಲೀಸ್‌ ಫೋಟೊಗ್ರಾಫರ್‌ ಬರ್ತಾರೆ ಎಂದೆಲ್ಲ ಹೇಳಿದ್ರು.


ಬೆಂಗಳೂರಿಗೆ ಬಂದ್ವಿ. ನಾನು ಆಗ ಪೊಲೀಸ್‌ ಇಲಾಖೆಯ ಹಸುಗೂಸು. ನಾನು, ತಿಮ್ಮಯ್ಯ ಸಾವಿನ ಮನೆಯ ಬಾಗಿಲನ್ನು ತಟ್ಟಿ ಬಂದಿರುವವರು. ಎರಡನೇ ಪೋಸ್ಟಿಂಗ್‌ ನನ್ನದು. ಕಮಿಷನರ್‌ಎಲ್ಲ ಬೆನ್ನು ತಟ್ಟುತ್ತಾರೆ. ಸುದ್ದಿಗೋಷ್ಠಿಯಲ್ಲಿ ನಿಲ್ಲಿಸುತ್ತಾರೆ ಅಂತೆಲ್ಲ ಕನಸು ಕಂಡಿದ್ದೆ. ಆದರೆ, ನನ್ನನ್ನು ಡಿಸಿಪಿ, ಕಮಿಷನರ್‌ ಹತ್ತಿರ ಬಿಡಲೇ ಇಲ್ಲ. ಫೈಲ್‌ಗಳನ್ನು ಇಟ್ಟುಕೊಂಟು ಅವರೇ ಓಡಾಡಿದ್ರು. ಎಫ್‌ಐಆರ್‌ ತಕ್ಷಣಕ್ಕೆ ಸಿಗಲಿಲ್ಲ. ಡಿಸಿಪಿ, ಕಮಿಷನರ್‌ಗೆ ಎಫ್‌ಐಆರ್‌ ನೋಡಲು ಸಿಗಲೇ ಇಲ್ಲ. ಅವರು ಹೇಳಿದ ಕಥೆಗಳನ್ನು ನಂಬಿದ್ರು. ಎಲ್ಲ ಸಿಬ್ಬಂದಿಯನ್ನು ಪ್ರಶಂಸಿಸುತ್ತೇವೆ ಎಂದು ಕಮಿಷನರ್‌ ಹೇಳಿದ್ರು. ಸಿಬ್ಬಂದಿಯನ್ನು ಕರೆಸಿ ಮಾತನಾಡಿದ್ರೂ ನಾನು ಹೇಳಿ ಬಿಡುತ್ತಿದ್ದೆ. ಒಳ್ಳೆಯ ಕಮಿಷನರ್‌ ಹರ್ಲಂಕರ್‌ ಸಾಹೇಬ್ರು. ಪೇಪರ್‌ನಲ್ಲೆಲ್ಲ ಸುದ್ದಿ ಬಂತು. ಸಹೋದ್ಯೋಗಿಗಳೆಲ್ಲ ತುಂಬಾ ಪ್ರಶಂಸೆ ವ್ಯಕ್ತಪಡಿಸಿದ್ರು. ಕಮಿಷನರ್‌ ರಿವಾರ್ಡ್‌ ಪಾಸ್‌ ಮಾಡಿದ್ರು. ನನಗೆ 500 ರೂಪಾಯಿ, ಪ್ರಶಂಸೆಯ ಪತ್ರ ಇತ್ತು. ಉಳಿದವರಿಗೆ 250 ಬಂತು. ಭಾರಿ ಖುಷಿ ಆಯ್ತು. ಇಷ್ಟೇ ಇರಬೇಕು ಅಂದುಕೊಂಡೆ.


ಕೆಲವು ಆಫೀಸರ್‌ಗಳು ಇಷ್ಟು ಒಳ್ಳೆಯ ಕೆಲಸ ಮಾಡಿದ್ದೀಯಾ, ಶೌರ್ಯ ಪ್ರಶಸ್ತಿಗೆ ಅರ್ಹವಾದ ಕೇಸ್‌ಇದು. ಕಮಿಷನರ್‌ ಗಮನಕ್ಕೆ ತಂದಿಲ್ವಾ ಅಂದ್ರು. ನನ್ನನ್ನು ಅವರ ಹತ್ತಿರ ಬಿಡಲೇ ಇಲ್ಲ ಅಂದೆ. ನಾನು ಹೇಳುವ ಹಾಗೂ ಇರಲಿಲ್ಲ. ಹೇಳಿದ್ರೆ ಚಾಡಿ ಹೇಳಿದ ಹಾಗೆ ಆಗೋದು. ನುಂಗಿಕೊಂಡು ಬಿಟ್ಟೆ. ಮುಖ್ಯಮಂತ್ರಿವರೆಗೂ ಸುದ್ದಿ ಹೋಗುತ್ತೆ ಅಂತಾ ಇಬ್ಬರು ಅಧಿಕಾರಿಗಳು ಹೇಳಿದ್ರು. ಸಿ.ವಿ.ತಿಮ್ಮಯ್ಯ ಅವರಿಗೆ ಬೆಳ್ಳಿ ಪದಕ, ನನಗೆ ಚಿನ್ನದ ಪದಕ ಬರುತ್ತದೆ ಎಂದುಕೊಂಡಿದ್ದೆ. ಆದರೆ, ಎಸಿಪಿಗೆ ಚಿನ್ನದ ಪದಕ, ಇನ್‌ಸ್ಪೆಕ್ಟರ್‌ಗೆ ಬೆಳ್ಳಿ ಪದಕ ಬಂತು.


ನಾನು ಆ ದಿನ ಶೌರ್ಯ ಪ್ರಶಸ್ತಿ ಪಡೆದಿದ್ದರೆ, ಅತಿ ಕಿರಿಯ ವಯಸ್ಸಿಗೆ ಶೌರ್ಯ ಪ್ರಶಸ್ತಿ ಪಡೆದ ಕೀರ್ತಿಗೆ ಪಾತ್ರವಾಗುತ್ತಿದ್ದೆ. ಆದರೆ, ಸಿಗಲಿಲ್ಲ. ನಾವು ನಮ್ಮ ಮನಸ್ಸಿನ ತೃಪ್ತಿಗೆ ಕೆಲಸ ಮಾಡಬೇಕು. ಇನ್ನೊಬ್ಬರಿಗೆ ತೃಪ್ತಿ ಮಾಡಲು ಕೆಲಸ ಮಾಡಿದರೆ ಪ್ರಯೋಜನವಿಲ್ಲ ಎಂದು ಆಗ ನನಗೆ ಅರಿವಾಯಿತು. ಮುಂದೆ ಅಧಿಕಾರಿಗಳಿಗೆ ನಮ್ಮ ಸಾಧನೆ ಅರಿವಾಗುತ್ತ ಹೋಯಿತು. ಅವರು ಖುಷಿಪಟ್ಟು ಗುಡ್‌ ಅನ್ನುತ್ತಿದ್ರು.


ಕೆ.ಜಿ.ಹಳ್ಳಿಯಲ್ಲಿ ಒಬ್ಬ ಮೂರ್ಖ, ಅಪ್ರಯೋಜಕ ವ್ಯಕ್ತಿ ಎಂಎಲ್‌ಎ ಇದ್ದ. ರಾಮಕೃಷ್ಣ ಹೆಗಡೆ ಸರ್ಕಾರ ಉಳಿಯಲು ಅವನು ಮಹತ್ವದ ಪಾತ್ರ ವಹಿಸಿದ್ದ. ಅವನು ಸ್ವಲ್ಪ ಹಿಂಗ್‌ ಅಂದ್ರೆ ಸರ್ಕಾರ ಉರುಳಿಹೋಗೋದು. ಅವನಿಗೆ ರಾಜಾತಿಥ್ಯ ನೀಡುತ್ತಿದ್ರು. ಆ ಎಂಎಲ್‌ಎ ಸಬ್‌ಇನ್‌ಸ್ಪೆಕ್ಟರ್‌ ಜೊತೆ ದೊಡ್ಡ ಜಗಳ ಆಯ್ತು ಎಂದು ದೊಡ್ಡ ಗಲಾಟೆ ಮಾಡಿದ. ಹಾಗಾಗಿ, ಅಲ್ಲಿದ್ದ ಸಬ್‌ಇನ್‌ಸ್ಪೆಕ್ಟರನ್ನು ವರ್ಗಾವಣೆ ಮಾಡಿದ್ರು. ಆ ಎಂಎಲ್‌ಎನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕೆ ನನ್ನನ್ನು ಅಲ್ಲಿಗೆ ನೇಮಕ ಮಾಡಿದ್ರು. ಕಮ್ಯುನಲ್‌ ಹಾಟ್‌ಬೆಡ್‌ ಅದು. ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯ ಥಣಿಸಂದ್ರ ದಾಟಿ, ಭೈರತಿ, ಕೊತನೂರು. ಈ ಕಡೆ ಲಿಂಗರಾಜಪುರ, ಕಾವಲ್‌ ಭೈರಸಂದ್ರ, ಆರ್‌.ಟಿನಗರದವರೆಗೂ, ಟ್ಯಾರ್ನಿ ರಸ್ತೆ ಮೂಲೆವರೆಗೂ ವರೆಗೂ ವ್ಯಾಪ್ತಿ ಇತ್ತು. ಇವತ್ತು ನಾಲ್ಕೈದು ಪೊಲೀಸ್‌ಠಾಣೆ ಆಗಿದೆ. ಒಳ್ಳೆಯ ಹೆಸರು ತೆಗೆದುಕೊಂಡು ಕೆ.ಜಿ.ಹಳ್ಳಿ ಪೊಲೀಸ್‌ಠಾಣೆಗೆ ಹೋದೆ.


ಕೆ.ಜಿ. ಹಳ್ಳಿಯಲ್ಲಿ ನಾನಿದ್ದಾಗ ಮರಿಸ್ವಾಮಿಯವರು ಡಿಸಿಪಿ ಈಸ್ಟ್‌ ಆಗಿ ಬರುತ್ತಾರೆ. ಅವರು ನನಗೆ ಒಂದು ಅಸೈನ್‌ಮೆಂಟ್‌ ಕೊಟ್ಟಿದ್ರು. ಚಲನಚಿತ್ರ ನಟಿ ಆರತಿ, ರಾಮಕೃಷ್ಣ ಅವರ ಘಟನೆಯೊಂದು ನಡೆದಿತ್ತು. ರಾಮಕೃಷ್ಣನ ಮಗು ನಾಪತ್ತೆಯಾಗಿರುತ್ತದೆ. ಅದನ್ನು ಪತ್ತೆ ಮಾಡಲು ಜೆ.ಪಿ.ನಗರದಲ್ಲಿ ಪ್ರಕರಣ ದಾಖಲಾಗಿರುತ್ತದೆ. ಅಲ್ಲಿ ಇನ್‌ಸ್ಪೆಕ್ಟರ್‌, ಸಬ್‌ಇನ್‌ಸ್ಪೆಕ್ಟರ್‌, ಎಸಿಪಿ ಎಲ್ಲ ಹಬ್ಬದ ಸಂದರ್ಭ ಆಗಿದ್ದರಿಂದ ರಜೆ ಹಾಕಿರುತ್ತಾರೆ. ಆಗ ಈ ಪ್ರಕರಣ ಅಸೆಂಬ್ಲಿಯಲ್ಲೆಲ್ಲ ಚರ್ಚೆ ಆಗುತ್ತದೆ. ಸಿ.ಕೆ. ನಾಗರಾಜ್‌ ಅವರು ಇನ್‌ಸ್ಪೆಕ್ಟರ್‌ ಮತ್ತು ನನ್ನನ್ನು ನೇಮಕ ಮಾಡುತ್ತಾರೆ. ಆ ಮಗು ಎಲ್ಲಿದೆ ಎಂಬುದನ್ನು ನಾವು ಪತ್ತೆ ಮಾಡುತ್ತೇವೆ. ನಂತರ, ದೊಡ್ಡ ರಾಜಕೀಯ ವಿಷಯ ಎಲ್ಲ ಬರುತ್ತದೆ. ತುಂಬಾ ನಾಜೂಕಾಗಿ ಹ್ಯಾಂಡಲ್‌ ಮಾಡ್ತೇವೆ. ಆಗ ಆರತಿ ಎಂಎಲ್‌ಸಿ ಆಗಿದ್ರು. ಅವರನ್ನು ನಾವು ಮಾತಾಡಿಸಬೇಕಿತ್ತು. ಅವರನ್ನು ಹೆಂಗ್ರಿ ಮಾತಾಡ್ತೀರಾ, ನಿರೀಕ್ಷಣಾ ಜಾಮೀನಿದೆ. ಅವರನ್ನು ಬಂಧಿಸಲು ಆಗೋಲ್ಲ ಅಂಥೆಲ್ಲ ಅವರ ವಕೀಲರು ಹೇಳಿದ್ರು. ಪ್ರಶ್ನೆ ಮಾಡಬಹುದಲ್ವಾ ಎಂದು ನಾನು ಕೇಳಿದ್ರೆ. ಇನ್ನು ಸರ್ವಿಸ್‌ಆಗಿಲ್ಲ, ನನಗೆ ಮಾತಾಡ್ತೀರಾ ಎಂದು ಹಿರಿಯ ವಕೀಲರೊಬ್ಬರು ಹೇಳಿದ್ರು.


ಛಲ ಬಿಡದ ಹಾಗೆ ಪತ್ತೆ ಮಾಡಿದ್ದೆ. ಮರಿಸ್ವಾಮಿ ಅವರಿಗೆ ತುಂಬಾ ಖುಷಿ ಆಗಿತ್ತು. ಆಗ ಅವರು, ಶಿವರಾಂ ನೀವು ಕೊತ್ವಾಲ್‌ ರಾಮಚಂದ್ರನ ಬಗ್ಗೆ ಕೇಳಿದ್ದೀರಾ ಅಂದ್ರು. ಚೆನ್ನಾಗಿ ಕೇಳಿದ್ದೇನೆ ಅಂದೆ. ನೋಡಿದ್ದೀರಾ ಅಂದ್ರು. ನೋಡಿದ್ದೇನೆ. ಆತನ ಬಗ್ಗೆ ಎಲ್ಲವೂ ಗೊತ್ತು ಅಂದೆ. ಮತ್ಯಾಕೆ ಅವನನ್ನು ಯಾರೂ ಹಿಡೀತಿಲ್ಲ. 32 ವಾರಂಟ್‌ ಇದೆ ಅಲ್ವಾ ಅಂದ್ರು. ನನಗೆ ಗೊತ್ತಿಲ್ಲ ಅಂದೆ. ಅವನನ್ನು ಹಿಡಿಯಲು ಸ್ಕ್ವಾಡ್‌ ಮಾಡುತ್ತಿದ್ದೇವೆ. ಹಿಡಿತೀರಾ ಅಂದ್ರು. ಮಾಹಿತಿಯಂತೂ ಯಾರೂ ಕಲೆಕ್ಟ್‌ ಮಾಡದಿರುವಷ್ಟು ಮಾಡ್ತೇನೆ. ಆದರೆ, ನನಗೆ ಮಾಡಲು ಇಷ್ಟ ಇಲ್ಲ ಅಂದೆ.


ನಮಗೆ ಕೀಳರಿಮೆಯನ್ನು ತೊಲಗಿಸಿದಂತಹ ಅಧಿಕಾರಿ ಮರಿಸ್ವಾಮಿ ಅವರು. ಸಬ್‌ಇನ್‌ಸ್ಪೆಕ್ಟರ್‌, ಇನ್‌ಸ್ಪೆಕ್ಟರ್‌ ಮುಂದೆ ಕೂರುವ ಹಾಗಿಲ್ಲ, ಅಧಿಕಾರಿಗಳ ಮುಂದೆ ಮಾತಾಡುವ ಹಾಗಿಲ್ಲ. ಅವರು ಹೇಳಿದ್ದಕ್ಕೆಲ್ಲ ಹೂಂ ಅನ್ನಬೇಕು. ಅವರು ಹೇಳಿದ್ರೆ ಮಾತ್ರವೇ ಮಾತಾಡಬೇಕು ಎಂಬ ಕೀಳರಿಮೆಯನ್ನು ತುಂಬಿ ಇಟ್ಟಿದ್ರು. ಅದನ್ನು ಕಿತ್ತು ಬಿಸಾಕಿದ್ದು ಮರಿಸ್ವಾಮಿ ಅವರು. ಕೂರಿಸಿ ಮಾತಾಡುತ್ತಿದ್ರು. ನಮ್ಮ ಮಾತನ್ನು ಕೇಳುತ್ತಿದ್ರು. ಕಷ್ಟ, ಸುಖವನ್ನು ಕೇಳುತ್ತಿದ್ರು. ನೀವು ಯಾರಿಗೂ ತಲೆ ಬಾಗಿಸಬೇಡಿ. ನೀವು ಫೀಲ್ಡ್‌ ಆಫಿಸರ್ಸ್‌ ಎಂದು ನಮ್ಮನ್ನು ಹುರಿದುಂಬಿಸುತ್ತಿದ್ರು.


ಯಾಕೆ ಮಾಡಬಾರದು ಅಂದ್ರು. ನಾನು ಮಾಡಲ್ಲ ಅಂದೆ. ಅವರಿಗೆ ಆಶ್ಚರ್ಯ ಆಯ್ತು. ನಾನು ಬೈತಾರೆ ಅಂದುಕೊಂಡೆ. ಅವರು ನಗಾಡಿಕೊಂಡೆ, ಯಾಕೆ ಮಾಡಲ್ಲ ಹೇಳಿ ಅಂದ್ರು. ನಾನು ರಘು ಘಟನೆ ಹೇಳಿದೆ. ಈ ಘಟನೆಯಲ್ಲಿ ನಿಮಗೆ ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡಿಲ್ವಾ ಅಂದ್ರು. ಖಂಡಿತ ಮಾಡಿಲ್ಲ ಅಂದೆ. ಮುಖ್ಯಮಂತ್ರಿಗಳ ಚಿನ್ನದ ಪದಕ.. ಇಲ್ಲ ಸರ್‌, ಅದು ಕೊಟ್ಟಿಲ್ಲ ಅಂದೆ. ಇನ್ನೇನು ಕೊಟ್ರು ಅಂದ್ರು. 250 ರೂಪಾಯಿ ರಿವಾರ್ಡ್‌ಕೊಟ್ರು ಅಂದೆ. ಅವರಿಗೆ ಶಾಕ್‌ ಆಯಿತು. ಈ ಕೇಸ್‌ಪತ್ತೆ ಮಾಡಿ. ನಾನು ಎಲ್ಲಾ ಅವಾರ್ಡ್‌ ಕೊಡಿಸ್ತೇನೆ ಅಂದ್ರು. ಬೇಡ ಸರ್‌ ಅಂದೆ. ನನಗೆ ಗೊತ್ತಾಗುತ್ತೆ, ಹರ್ಟ್‌ ಆಗಿದೆ. ಶೌರ್ಯ ಪ್ರಶಸ್ತಿಗೆ ಹೇಳಿ ಮಾಡಿದ ಕೆಲಸ. ನಿಮ್ಮೊಬ್ಬರಿಗೆ ಅಲ್ಲ, ಸಿ.ವಿ. ತಿಮ್ಮಯ್ಯ ಅವರಿಗೂ ಅಂದ್ರು. ಅವರ ನಂಬಿಕೆ ಮತ್ತು ವಿಶ್ವಾಸ ತುಂಬಿದ ಕಾರಣಕ್ಕೆ ಮಾಡ್ತೇನೆ ಅಂದೆ. ನನ್ನನ್ನು ಸ್ಕ್ವಾಡ್‌ನಲ್ಲಿ ಹಾಕಿದ್ರು. 9 ತಿಂಗಳು ಕೊತ್ವಾಲ್‌ ರಾಮಚಂದ್ರನ ಕೇಸ್‌ ಮಾಡಿದ್ವಿ. ಅವನ ಇಡೀ ಗ್ಯಾಂಗ್‌ಅನ್ನು ನಿರ್ನಾಮ ಮಾಡಿದಂತಹ ಘಟನೆ ನಡೆಯಿತು. ಅವನ ಗ್ಯಾಂಗ್‌ ವಿಶೇಷತೆ ಅಂದ್ರೆ. ಅವರೆಲ್ಲ ಇವತ್ತು ಪ್ರತಿಷ್ಠಿತ ರಾಜಕಾರಣಿಗಳು. ಆಗಿನ ಕಾಲದಲ್ಲೂ ಪ್ರತಿಷ್ಠಿತ ರಾಜಕಾರಣಿಗಳು, ದೊಡ್ಡದೊಡ್ಡವರೆಲ್ಲ ಅವನಿಗೆ ಬೆಂಬಲವಾಗಿದ್ರು.


ಭೂಗತ ಲೋಕದಲ್ಲಿ ನಾನು ಎಲ್ಲವನ್ನೂ ನೋಡಿದ್ದೇನೆ. ಕಾರ್ಮಿಕ ನಾಯಕರು, ರಾಜಕೀಯ ನಾಯಕರು, ವಿದ್ಯಾರ್ಥಿ ನಾಯಕರು ಬಲಿಪಶುಗಳಾಗಿರುವುದು. ಹೊಡೆತ ತಿಂದಿರುವುದು, ಅವರು ತೊಡಗಿಕೊಂಡಿರುವುದು, ಪ್ರೇರೇಪಿಸಿರುವುದು ಎಲ್ಲವನ್ನೂ ಕಂಡಿದ್ದೇನೆ. ಆದರೆ, ಕೊತ್ವಾಲ್‌ ರಾಮಚಂದ್ರನ ತರಹ ಮಾಸ್ಟರ್‌ ಪ್ಲ್ಯಾನ್‌ ಮಾಡುವಂತಹ ಅಂಡರ್‌ ವರ್ಲ್ಡ್ ಡಾನ್‌ಗಳನ್ನು ನಾನು ನೋಡ್ಲೇ ಇಲ್ಲ. ಅವನ ಇಡೀ ಗ್ಯಾಂಗನ್ನು ನಿರ್ನಾಮ ಮಾಡಿದ ಮೇಲೆ ಮರಿಸ್ವಾಮಿ ಅವರು, ಮುಖ್ಯಮಂತ್ರಿ ಅವರ ಚಿನ್ನದ ಪದಕವನ್ನು ನನಗೆ ಮೊದಲು ಕೊಡಿಸಿದ್ರು. ಅದು ಕೊಟ್ಟಿರಲಿಲ್ಲ. ಶಿಫಾರಸು ಆಗಿರಲಿಲ್ಲ. ಕೊತ್ವಾಲ್‌ ರಾಮಚಂದ್ರನನ್ನು ಉಪಯೋಗಿಸಿಕೊಂಡು ಒಬ್ಬ ರಾಜಕಾರಣಿ ಮಗ, ರಾಜಕಾರಣಿ ಎಲ್ಲರಿಗೂ ಹೆದರಿಸಿಕೊಂಡು ತಿರುಗುತ್ತಿದ್ರು. ಆ ರಾಜಕಾರಣಿ ಎಂಎಲ್‌ಸಿ ಆಗಿದ್ರು. ಮುಖ್ಯ ಸಚೇತಕರಾಗಿದ್ರು. ಅವರ ಮಗನಿಗೆ ದಸ್ತಗಿರಿ ಮಾಡಿದ್ದೆ. ಆಗಿನ ಕಮಿಷನರ್‌ಗೆ ಅದು ಇಷ್ಟವಾಗಲಿಲ್ಲ. ಅವನಿಗೆ ಸ್ವಲ್ಪ ಫೋರ್ಸ್‌ ಬಳಸಿದ್ವಿ. ಆಗಿನ ಕಾಲಕ್ಕೆ ಆಗರ್ಭ ಶ್ರೀಮಂತ ರಾಜಕಾರಣಿ. ಅದು ಡಿಜಿಗೆ ಇಷ್ಟವಾಗಲಿಲ್ಲ. ಅವರ ಧರ್ಮದವನೇ ಆಗಿದ್ದ. ನನ್ನನ್ನು ಸಸ್ಪೆಂಡ್‌ ಮಾಡಬೇಕು ಎಂದು ಪಟ್ಟು ಹಿಡಿದ್ರು.


ಡಿಸಿಪಿ ಮರಿಸ್ವಾಮಿ ಅವರು ನನ್ನನ್ನು ಕರೆಸಿ ಅವರ ಮಗನನ್ನು ಹಿಡ್ಕೊಂಡು ಹೋಗಿದ್ರಾ ಅಂದ್ರು. ಹೌದು ಅಂದೆ. ಏನಾಗಿದೆ ಅಂದ್ರು. ಹಿಡ್ಕೊಳ್ಳಕ್ಕೆ ಹೋದಾಗ, ಜೋರು ಮಾಡಿದ, ನಾವು ಫೋರ್ಸ್‌ ಬಳಸಿದ್ವಿ. ತಡೆದುಕೊಳ್ಳಲು ಆಗದೇ ಪ್ರಜ್ಞೆ ತಪ್ಪಿದ್ದಾನೆ ಅಂದೆ. ಬದುಕುತ್ತಾನಾ ಅಂದ್ರು. ಗೊತ್ತಿಲ್ಲ, ಆಸ್ಪತ್ರೆಗೆ ಕಳುಹಿಸಿದ್ದೇವೆ. ಬದುಕುವ ಚಾನ್ಸ್‌ ಇದೆ ಅಂತಾರೆ, ಆದರೆ, ಸೀರಿಯಸ್‌ ಇದೆ ಅಂತಾರೆ ಡಾಕ್ಟರ್‌ ಅಂದೆ. ಕಸ್ಟೋಡಿಯಲ್‌ ಪ್ರಕರಣ ಆಗುತ್ತೆ ಅಂಥ ಭಯ ಆಗಿತ್ತು. ಮರಿಸ್ವಾಮಿ ಅವರು ಏನೂ ಹೆದರಬೇಡಿ ಅಂದ್ರು. ನೀವು ಕ್ಷಮೆ ಕೇಳಬೇಕು ಅಂತಿದ್ದಾರೆ. ಇವತ್ತು ರಜೆ ಇದೆ ಸೋಮವಾರ ಬನ್ನಿ ಎಂದು ಕಮಿಷನರ್‌ ಹೇಳಿದ್ದಾರೆ. ಸಿಕ್ಕಾಪಟ್ಟೆ ಕೂಗಾಡುತ್ತಿದ್ದಾರೆ. ನಿಮ್ಮ ಅಭಿಪ್ರಾಯ ಏನು ಅಂದ್ರು. ಕ್ಷಮೆ ಕೇಳಲ್ಲ, ಬೇಕಿದ್ರೆ ಸಸ್ಪೆಂಡ್‌ ಆಗುತ್ತೇನೆ ಅಂದೆ. ಅದಕ್ಕೆ ಕ್ಷಮೆನೂ ಕೇಳೋದು ಬೇಡ, ಸಸ್ಪೆಂಡ್‌ ಕೂಡ ಮಾಡೋದಿಲ್ಲ. ಅವನು ಸತ್ತು ಹೋದ್ರು ಹೆದರಬೇಡಿ ನಾವಿದ್ದೇವೆ ಅಂದ್ರು. ಕಮಿಷನರ್‌ ಹರ್ಲಂಕರ್‌ ಅವರು ಯಾವುದೇ ಕಾರಣಕ್ಕೂ ಆ ಯುವ ಪೊಲೀಸ್‌ ಅಧಿಕಾರಿಗೆ ತೊಂದರೆ ಕೊಡಬೇಡಿ ಅಂದಿದ್ರಂತೆ. ಆದ್ರೆ, ಇನ್ನೊಬ್ರು ಅಡಿಷನಲ್‌ ಕಮಿಷನರ್‌ ಇದ್ರು, ಅವರು ಕ್ಷಮೆ ಕೇಳಿಬಿಡ್ರಿ, ಏನಾಗುತ್ತೆ ಅಂದ್ರು. ಅವರ ಕೈಗೆ ನೀವು ಸಿಗಬೇಡಿ. ಸಿಕ್ಕರೂ, ಕ್ಷಮೆ ಕೇಳಲ್ಲ ಅಂಥ ಹೇಳಿಬಿಡಿ ಅಂದ್ರು. ರಾಜಕಾರಣಿ ದೊಡ್ಡ ಗಲಾಟೆ ಮಾಡ್ದ. ಕೌನ್ಸಿಲ್‌ನಲ್ಲಿ ವಿಷಯ ಬರುತ್ತೆ. ನಾನು ಪ್ರಸ್ತಾಪಿಸುತ್ತೇನೆ ಎಂದ. ನೀವು ಮಾಡಿ ಅಂದ್ರು. ನಮ್ಮ ಹತ್ತಿರ ರೌಡಿ ಇದ್ದ ಫೋಟೊಗಳಿದ್ದವು. ನಾವು ಫೋಟೊ ಕೊಡ್ತೇವೆ, ನಿಮ್ಮ ಸಂಸ್ಥೆಯೊಳಗೆ ಕುರ್ಚಿಯಲ್ಲಿ ಬಂದು ರೌಡಿ ಕೂತಿದ್ದಾನೆ. ಒಂದೇ ವೇದಿಕೆಯಲ್ಲಿ ಇರುವ ಫೋಟೊ ಕೊಡ್ತೇವೆ ಎಂದು ಕಮಿಷನರ್‌ ಹೇಳಿದ್ರು. ಆಮೇಲೆ, ದಯವಿಟ್ಟು ಕ್ಷಮಿಸಿ, ನಮ್ಮ ಹೆಸರು ಎಲ್ಲೂ ತರಬೇಡಿ ಎಂದು ಕೈ ಮುಗಿದು ಹೊರಟು ಹೋದ್ರು.


ಮುಂದುವರೆಯುವುದು…


ಸಂದರ್ಶಕರು - ಕೆ.ಎಸ್. ಪರಮೇಶ್ವರ22 views