ಕೊಪ್ಪಳದ ಜನ ನನ್ನ ಕಾರ್ಟೂನ್‌ ತರ ನೋಡ್ತಿದ್ರು

ಮಿಮಿಕ್ರಿ ದಯಾನಂದ ಲೈಫ್‌ಸ್ಟೋರಿ ಭಾಗ 66ಉಳಿದುಕೊಳ್ಳಲು ಹೋಟೆಲ್‌ ಎಲ್ಲಿದೆ ಎಂದು ಒಬ್ಬರನ್ನು ಕೇಳಿದೆ, ಗಾರ್ಡನ್‌ ಹೋಟೆಲ್‌ ಎಂದಿದೆ. ಇಲ್ಲಿ ಅದೇ ಫೇಮಸ್‌ ಎಂದ್ರು. ನಾನು ಬೇರೆ ಮೈಸೂರಿನವರು. ಕೆಆರ್‌ಎಸ್‌ ತರಹ ಸುಂದರವಾದ ಗಾರ್ಡನ್‌ ಮಧ್ಯೆ ಹೋಟೆಲ್‌ ಇರಬಹುದು ಎಂಬ ಯೋಚನೆಯಲ್ಲಿ ಹೋದೆ. ಅಲ್ಲಿ ನೋಡಿದ್ರೆ, ಮಾರ್ಕೆಟ್‌ ಮಧ್ಯೆ ಚಿಕ್ಕ ಹೋಟೆಲ್‌ ಅದರ ಗೋಡೆ ಮೇಲೆ ಗಾರ್ಡನ್‌ ಚಿತ್ರ ಬಿಡಿಸಿ, ಅದರ ಮೇಲೆ ‘ಗಾರ್ಡನ್‌’ ಎಂದು ಬರೆದಿದ್ರು. ನನಗೆ ನಿದ್ರೆ ಎಳೆಯುತ್ತಿತ್ತು. ಎರಡು ರಾತ್ರಿ ನಿದ್ರೆ ಇರಲಿಲ್ಲ. 8.ರೂ ಕೊಟ್ಟು ರೂಂ ಬುಕ್‌ ಮಾಡಿದೆ. ಈ ಘಟನೆ ನಡೆದಿದ್ದು 1975–76ರಲ್ಲಿ. ಹೋದ ತಕ್ಷಣವೇ ಮಲಗಿಕೊಂಡೆ. ಅಷ್ಟು ಜೋರಾಗಿ ನಿದ್ದೆ ಬಂದಿತ್ತು. ಬಿಳಿ ಬೆಡ್‌ ಶಿಟ್‌ ಹಾಕಿದ್ದ. ಎಚ್ಚರವಾದಾಗ ರಾತ್ರಿ 1 ಗಂಟೆ. ಬಿಳಿ ಬೆಡ್‌ ಶಿಟ್‌ ನೋಡಿದ್ದ ನೆನಪಿದೆ. ಅದರ ಮೇಲೆಲ್ಲ ಚುಕ್ಕಿ, ಚುಕ್ಕಿ ಕಾಣಿಸುತ್ತಿತ್ತು. ಏನಪ್ಪ ಇದು ಎಂದು ನೋಡಿದ್ರೆ. ಅದರ ಮೇಲೆ ಅಷ್ಟೊಂದು ತಿಗಣೆ ಇತ್ತು. ಯಪ್ಪಾ ಎಂದು ಎದ್ದೆ. ನಾನು ಜೀವಮಾನದಲ್ಲಿ ಅಷ್ಟೊಂದು ತಿಗಣೆ ನೋಡಿರಲಿಲ್ಲ.


ಬೆಳಿಗ್ಗೆ ಸ್ನಾನ ಮಾಡಲು ಹೋದ್ರೆ, ಟ್ಯಾಂಕರ್‌ ಒಳಗೆ ಫುಲ್‌ ಜಿರಳೆ ಇತ್ತು. ಜನ ಅದರ ಜೊತೆಗೆ ಬದುಕುವುದನ್ನು ಕಲಿತಿದ್ರು. ಅವರಿಗೆ ಯಾವ ಸಾಂಕ್ರಾಮಿಕ ರೋಗವೂ ಬಂದಿರಲಿಲ್ಲ. ನಾನು ಟಿಪ್‌ಟಾಪ್‌ ರೆಡಿ ಆಗಿ ಹೋಗುತ್ತಿದ್ರೆ ಜನ ಎಲ್ಲ ನನ್ನ ಕಾರ್ಟೂನ್‌ ನೋಡಿದ ಹಾಗೆ ನೋಡುತ್ತಿದ್ರು. ಪ್ಯಾಂಟ್‌ ಹಾಕಿ, ಸೌಂಡ್‌ ಬರುವ ಶೂ ಹಾಕಿದ್ದರಿಂದ, ನನ್ನ ಪರ್ಸ್‌ನಾಲಿಟಿ ನೋಡಿ, ಪೊಲೀಸ್‌ ಬಂದಿದ್ದಾರೆ ಎಂದು ನನ್ನ ಕಚೇರಿಯವರು ಹೆದರಿಕೊಂಡಿದ್ರು. ಆಫೀಸ್‌ನವರು ರಸ್ತೆ ಬದಿಯ ಕೊಳಯಿ ಬಳಿಯೇ ಸ್ನಾನ ಮಾಡುತ್ತಿದ್ರು. ರಸ್ತೆ ಬದಿ ಸ್ನಾನ ಮಾಡ್ತೀರಾ ಎಂದ್ರೆ ಹೌದು ಅನ್ನುತ್ತಿದ್ರು.ಮುಂದುವರೆಯುವುದು...

7 views