“ಕಾರು ಕಳ್ಳನ ತಂಗಿ ಹತ್ರ ಉಟ್ಟುಕೊಳ್ಳೋಕೆ ಸೀರೆ ಕೂಡ ಇರಲಿಲ್ಲ”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು ಭಾಗ 7


ನಾನು ಸಿಸಿಬಿಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ಆಗಿ ಕೆಲಸ ಮಾಡಿದ್ದಂತಹ ಪೊಲೀಸ್‌ ಅಧಿಕಾರಿ. ಸೆಂಟ್ರಲ್‌ ಕ್ರೈಂ ಬ್ರ್ಯಾಂಚ್‌ ಅದು. ಬೆಂಗಳೂರು ನಿದ್ರಾವಸ್ಥೆಯಲ್ಲಿ ಇದ್ದಂತಹ ನಗರ. ನಿವೃತ್ತಿ ಜೀವನದ ಸ್ವರ್ಗ, ಗಾರ್ಡನ್‌ ಸಿಟಿ, ಒಳ್ಳೆಯ ವಾತಾವರಣದ ಸ್ಥಳ. ನಿವೃತ್ತಿ ಜೀವನ ಮಾಡಲು ಬೆಂಗಳೂರಿನಂತಹ ನಗರ ಎಲ್ಲೂ ಇಲ್ಲ ಎಂಬ ಹೆಸರಿತ್ತು.


ಕೈಗಾರೀಕರಣ ಬಂದಂತಹ ಸಂದರ್ಭದಲ್ಲಿ ಪಂಡಿತ್‌ ಜವಾಹರ್‌ಲಾಲ್‌ ಅವರ ಕಾಲಘಟ್ಟದಲ್ಲಿ ಪಬ್ಲಿಕ್‌ ಸೆಕ್ಟರ್‌ಗಳು ಪ್ರಾರಂಭವಾಯಿತು. ಎಚ್‌ಎಂಟಿ, ಎಚ್‌ಎಎಲ್‌, ಬಿಇಎಲ್‌...ಈ ರೀತಿ ಬೇರೆ, ಬೇರೆ ಪಬ್ಲಿಕ್‌ ಸೆಕ್ಟರ್‌ಗಳು ಹಂತ ಹಂತವಾಗಿ ಶುರುವಾಯಿತು. ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತ ಬಂತು. ಯುವಕರಿಗೆ ಕೆಲಸ ಸಿಗಲು ಆರಂಭವಾಯಿತು. ಯುವಕ ಅನುಕೂಲಸ್ಥ ಆಗುತ್ತಿದ್ದಂತೆ ಮೊದಲು ಸೈಕಲ್‌ ತೆಗೆದುಕೊಳ್ಳುತ್ತಿದ್ದ. ಆಗ ಸೈಕಲ್‌ ಐಷಾರಾಮಿ. ಹಸಿರು ಬಣ್ಣದ ರ‍್ಯಾಲಿ ಸೈಕಲ್‌ ತೆಗೆದುಕೊಂಡನೆಂದರೆ ಅವನು ಸಾಹುಕಾರ ಎಂದೇ ಅರ್ಥ. ಪುಣೆ ಬಿಟ್ರೆ ಅತಿ ಹೆಚ್ಚು ಸೈಕಲ್‌ ಇದ್ದುದು ಬೆಂಗಳೂರು ನಗರದಲ್ಲಿ. ನಿಮಗೆ ಆಶ್ಚರ್ಯ ಆಗಬಹುದು. ಆಗ ಸೈಕಲ್‌ಗಳ ಕಳ್ಳತನ ಆರಂಭವಾಗಿ ಅದನ್ನು ತಡೆಯುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಈಗ ಹೇಗೆ ಬೆಂಗಳೂರು ನಗರದಲ್ಲಿ ಕಾರು, ಸ್ಕೂಟರ್‌, ಸರಗಳ್ಳತನವಾದರೆ ಪೊಲೀಸರು ತಡಬಡಾಯಿಸುತ್ತಾರೋ ಹಾಗೆ ಆಗ, ಸೈಕಲ್‌ ಕಳುವಾದ್ರೆ, ತಡಬಡಾಯಿಸಲು ಶುರು ಮಾಡುತ್ತಿದ್ರು.ಸಿಸಿಬಿ ಬೇಡ ಎಂದು ಮುಚ್ಚಲು ಹೊರಟಿದ್ರು. ಇದು ಎಷ್ಟೋ ಜನ ಪೊಲೀಸ್‌ ಅಧಿಕಾರಿಗಳಿಗೆ ಗೊತ್ತೇ ಇಲ್ಲ. ಆ ಕಾಲದಲ್ಲಿ ಸೈಕಲ್‌ ಸ್ಕ್ವಾಡ್‌ ಎಂದೇ ಸ್ಕ್ವಾಡ್‌ಮಾಡಿದ್ರು. ಅದಕ್ಕೆ ಘಟನಾನುಘಟಿ ಪೊಲೀಸ್‌ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡ್ರು. ಪತ್ತೇದಾರಿಕೆಯಲ್ಲಿ ಮೇಧಾವಿ ಆದವರನ್ನು ಹುಡುಕಿ ಹಾಕಿದ್ರು. ಅಂಥ ಒಬ್ಬ ಅಧಿಕಾರಿ ಮೇಲಯ್ಯ. ಅವರ ಕುಟುಂಬದಲ್ಲಿ ಎಷ್ಟೋ ಪೊಲೀಸ್‌ ಅಧಿಕಾರಿಗಳಿದ್ರು. ಈಗಲೂ ಇದ್ದಾರೆ. ಆಮೇಲೆ ಮರಿಸ್ವಾಮಿ ಅಂಥ ಒಬ್ಬರಿದ್ರು. ಮೇಲಯ್ಯ ಅವರ ಸಂಬಂಧಿ. ಬಹುತೇಕರು ಕಾನ್‌ಸ್ಟೆಬಲ್‌, ಹೆಡ್‌ಕಾನ್‌ಸ್ಟೆಬಲ್‌ ಆಗಿ ಸೇರಿ, ಇನ್‌ಸ್ಪೆಕ್ಟರ್‌, ಡಿವೈಎಸ್ಪಿಗಳಾಗಿ ನಿವೃತ್ತಿ ಹೊಂದಿದ್ದಾರೆ.


ಬೆಂಗಳೂರು ನಗರ ಬೆಳೆಯುತ್ತ ಉದ್ಯಮ ಬೆಳೆಯಲು ಶುರುವಾಯಿತು. ವಾಹನಗಳು ಹೆಚ್ಚಾಗುತ್ತ ಹೋಯಿತು. ಈಗ ಸರಗಳುವು ಇರುವ ಹಾಗೆ ಸೈಕಲ್‌ ಕಳುವು ಪೊಲೀಸರಿಗೆ ತಲೆ ಬಿಸಿಯಾಗಿ ಬಿಡೋದು. ಒಂದು ಸೈಕಲ್‌ ಕಳುವಾದರೆ ಡಿಸಿಪಿ, ಡಿವೈಎಸ್ಪಿ, ಎಸಿಪಿಗಳಿಗೆ ಹೇಳೋದೆ ಕಷ್ಟವಾಗಿ ಬಿಡುತ್ತಿತ್ತು. ಏನ್ಮಾಡ್ತಿದ್ದೀರಿ, ಯಾಕೆ ನೀವು ತಡೆಗಟ್ಟೋದಕ್ಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಜೋರು ಮಾಡೋರು. ಇದನ್ನು ತಡೆಯಲು ನಿಮ್ಮ ಕೈಯಲ್ಲಿ ಆಗೊಲ್ಲ ಎಂದು ಸೈಕಲ್‌ಸ್ಕ್ವಾಡ್ ಮಾಡಿದ್ರು. ಅದನ್ನು ಮಾಡಿದಾಗ ನಗರ ಬೆಳೆಯೋಕ್ಕೆ ಶುರುವಾಯಿತು. ದಂಧೆಗಳು ಪ್ರಾರಂಭವಾಯಿತು. ಅದರೊಳಗೆ ಒಂದು ದಂಧೆ ವೇಶ್ಯಾವಾಟಿಕೆ. ಆ ವೇಳೆ ವೇಶ್ಯಾವಾಟಿಕೆ ಮೇಲೆ ದಾಳಿ ಮಾಡಲು ಸ್ಪೆಷಲ್‌ಸ್ಕ್ವಾಡ್ ‌ಮಾಡಿದ್ರು. ಅದರಲ್ಲಿ ಸಿಸಿಬಿ ಮತ್ತು ಸ್ಪೆಷಲ್‌ ಸ್ಕ್ವಾಡ್‌ ಮರ್ಜ್‌ ಮಾಡಿ, ಬೆಂಗಳೂರು ಸ್ಪೆಷಲ್ ಸ್ಕ್ವಾಡ್ ‌ಎಂದು ಮಾಡಿದ್ರು. ಸ್ಪೆಷಲ್‌ಸ್ಕ್ವಾಡ್‌ ಆಫೀಸ್‌ ಕಮಿಷನರ್‌ ಕಚೇರಿಯಲ್ಲಿಯೇ ಇತ್ತು. ಸಿಸಿಬಿಯ ಕಚೇರಿ ಸೇಂಟ್‌ ಮಾರ್ಥಸ್‌ ಆಸ್ಪತ್ರೆ ಪಕ್ಕದಲ್ಲಿ ಡಿಸಿ ಕಚೇರಿ ಇದೆಯಲ್ವಾ ಅಲ್ಲೇ ಶೆಡ್‌ನಲ್ಲಿತ್ತು. ಆ ಶೆಡ್‌ ನಲ್ಲಿರಬೇಕಾದ್ರೆ ನಾನು ಸಬ್‌ ಇನ್‌ಸ್ಪೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದೆ. ಆಗ ಸಿಸಿಬಿಯಲ್ಲಿ ಕೆಲಸ ಮಾಡಲು ಅಧಿಕಾರಿಗಳು ಇಷ್ಟ ಪಡುತ್ತಿರಲಿಲ್ಲ. ಸವಲತ್ತು ಕಡಿಮೆ. ಮತ್ತು ಪತ್ತೇದಾರಿಕೆ ಬಹಳ ಕಷ್ಟ. ಲಾ ಅಂಡ್‌ ಅರ್ಡರ್‌ನಲ್ಲಿ ನೂರು ಜನರ ಜತೆ ನಾನು ಒಬ್ಬ ಬಂದೋಬಸ್ತ್‌ ಮಾಡಬಹುದು. ಆದರೆ, ಪತ್ತೇದಾರಿಕೆ ಸುಲಭವಲ್ಲ. ಅದರಲ್ಲಿ ಇನ್ವಾಲ್‌ಮೆಂಟ್‌, ಕಮಿಟ್‌ಮೆಂಟ್‌, ಬುದ್ಧಿವಂತಿಕೆಯೂ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನರ ಜೊತೆ ಹೊಂದಿಕೊಂಡು ಅವರ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಪತ್ತೇದಾರಿಕೆ ಮುಖ್ಯವಾದುದು ಮಾಹಿತಿ. ಇವೆಲ್ಲ ತಲೆಬಿಸಿ ಯಾಕೆ ಎಂದು ಯಾರು ಹೋಗುತ್ತಲೇ ಇರಲಿಲ್ಲ. ಸ್ಪೆಷಲ್‌ಸ್ಕ್ವಾಡ್‌ಹೋಗೋರು. ಯಾಕಂದ್ರೆ ಅಲ್ಲಿ ಬರೀ ರೈಡ್‌ಮಾಡೋದಲ್ವಾ ಅದಕ್ಕೆ.


ಸಿಸಿಬಿ ಮತ್ತು ಸ್ಪೆಷಲ್‌ಸ್ಕ್ವಾಡ್‌ ಒಂದಾಗಿತ್ತು. ಅದಕ್ಕೆ ಸ್ಪೆಷಲ್‌ಸ್ಕ್ವಾಡ್‌ ಎಂದು ಹೆಸರಿಟ್ರು. ಆಮೇಲೆ ಸಿಸಿಬಿ ಮತ್ತು ಸ್ಪೆಷಲ್‌ಸ್ಕ್ವಾಡನ್ನು ಪ್ರತ್ಯೇಕ ವಿಂಗ್‌ ಮಾಡಿದ್ರು. ಇದಕ್ಕೊಬ್ಬರು ಎಸಿಪಿಯನ್ನು ಇಟ್ರು. ಎಸಿಪಿ ಕ್ರೈಂ ಅಂಥ. ಸಿಸಿಬಿಗೆ ಎರಡು ಇನ್‌ಸ್ಪೆಕ್ಟರ್‌ ಮತ್ತು ಸ್ಪೆಷಲ್‌ಸ್ಕ್ವಾಡ್‌ಗೆ ಇಬ್ಬರಿಂದ ಮೂರು ಇನ್‌ಸ್ಪೆಕ್ಟರ್‌ ಇದ್ರು. ಎಸಿಪಿ ಕ್ರೈಂ ಆದ ಮೇಲೆ ಬೆಂಗಳೂರು ಬೆಳೆಯಲು ಶುರುವಾಯಿತು. ಪೊಲೀಸ್‌ ಠಾಣೆಗಳು ಹೆಚ್ಚಾದವು. ಸಿಸಿಬಿಗೆ ಬರೋದಕ್ಕೆ ಯಾರೂ ಇಷ್ಟಪಡುತ್ತಿರಲಿಲ್ಲ. ಆಗ ಸಿಸಿಬಿ ಮನೆ ಕಳವು ಪತ್ತೆ ಮಾಡೋದಕ್ಕೆ ಒಂದು ಟೀಮ್‌ ಅಂಥೆಲ್ಲ ಮಾಡೋದು ಬೇಡ ಎಂದು, ಸ್ಪೆಷಲ್‌ಸ್ಕ್ವಾಡನ್ನು ಮುಚಿದ್ರು. ಸಿಸಿಬಿಯನ್ನು ಉಳಿಸಿಕೊಂಡು ಬಂದ್ರು. ಅದಕ್ಕೊಂದಷ್ಟು ಜನ ಇನ್‌ಸ್ಪೆಕ್ಟರ್‌ ಎಸಿಬಿಯನ್ನು ಕೊಟ್ರು. ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಇನ್‌ಸ್ಪೆಕ್ಟರ್‌ ಆಗಿ ನಾನು ಸಿಸಿಬಿಯಲ್ಲಿ ಕೆಲಸ ಮಾಡಿದ್ದೇನೆ. ಸಿಸಿಬಿಯಿಂದ ನನ್ನನ್ನು ಪೊಲೀಸ್‌ ಠಾಣೆಗೆ ವರ್ಗ ಮಾಡಿದ್ರು. ಆಗ ಸಿಸಿಬಿ ಏನು ಕೆಲಸ ಮಾಡ್ತಿಲ್ಲ. ಕೆಲವರ ಮೇಲೆಲ್ಲ ಆಪಾದನೆ ಬಂತು. ಕ್ಯಾಷ್‌ ಕಲಕ್ಟಿಂಗ್‌ ಬ್ಯುರೊ ಎಂದೆಲ್ಲ ಜನ, ಪೊಲೀಸ್‌ ಅಧಿಕಾರಿಗಳು ಕೆಟ್ಟದಾಗಿ ಮಾತಾಡಲು ಶುರು ಮಾಡಿದ್ರು. ಆಗ ಅದನ್ನು ಮುಚ್ಚೇ ಬಿಡಬೇಕು ಎನ್ನುವ ಮಟ್ಟಕ್ಕೆ ಮಾತನಾಡುತ್ತಿದ್ರು. ಆಗ ನಮಗೆಲ್ಲ ಬೇಜಾರಾಗೋದು. ಯಾಕಂದ್ರೆ ಸಿಸಿಬಿಯಲ್ಲಿ ಕೆಲಸ ಮಾಡಲು ತುಂಬ ಅವಕಾಶಗಳಿವೆ. ಅದರೊಳಗೆ ಪತ್ತೇದಾರಿಕೆ ಕೆಲಸ ಮಾಡಲು ಆಸಕ್ತಿ ಇರುವವರಿಗೆ ಹಲವು ಅವಕಾಶವಿದೆ. ಆ ಕಾಲಘಟ್ಟದಲ್ಲಿ ಮರಿಸ್ವಾಮಿ ಕಮಿಷನರ್‌ ಆಗಿದ್ದಾಗ ಸಿಸಿಬಿಗೆ ಹೊಸ ರೂಪ ಕೊಟ್ರು. ಐದು ವಿಭಾಗಗಳನ್ನಾಗಿ ಮಾಡಿ ಐದು ಎಸಿಪಿಗಳನ್ನು ಮುಖ್ಯಸ್ಥರನ್ನಾಗಿ ಮಾಡಿದ್ರು. ಆಗಲೂ ಎಸಿಪಿಯಾಗಿ ಸಿಸಿಬಿಯಲ್ಲಿ ಕೆಲಸ ಮಾಡಿದ್ದೇನೆ. ಆಗ ನನಗೆ ಒಸಿಡಬ್ಲ್ಯೂ ಎಂದು ವಿಂಗ್‌ಕೊಟ್ರು.


ಈಗ ದೊಡ್ಡ ದೊಡ್ಡ ಕೇಸ್‌ಗಳನ್ನು ಸಿಸಿಬಿ ಮಾಡುತ್ತಿದೆ. ಭೂಗತ ಲೋಕವನ್ನು ಮಟ್ಟ ಹಾಕಿರುವುದು ಸಿಸಿಬಿ. ಒಳ್ಳೊಳ್ಳೆ ಕೇಸ್‌ಗಳನ್ನು ಪತ್ತೆ ಮಾಡುತ್ತಿದೆ. ಅದು ಒಳ್ಳೆಯ ಹೆಸರು ತೆಗೆದುಕೊಂಡಿದೆ. ನಾನು ಸಬ್‌ ಇನ್‌ಸ್ಪೆಕ್ಟರ್‌ ಆಗಿರಬೇಕಾದ್ರೆ, ಬೆಂಗಳೂರು ನಗರದಲ್ಲಿ ಸಿಕ್ಕಾಪಟ್ಟೆ ಕಾರು ಕಳ್ಳತನ ಆಗುತ್ತಿತ್ತು. ದಿನಕ್ಕೊಂದು ಕಾರು, ವಾರಕ್ಕೆ ಎರಡ್ಮೂರು ಕಾರು ಕಳ್ಳತನವಾಗುತ್ತಿತ್ತು. ಅಂಬಾಸಿಡರ್‌ ಮತ್ತು ಫಿಯಟ್‌ 83 ರಲ್ಲಿ ಇದ್ದ ಕಾರುಗಳು. ಈ ಕಾರುಗಳು ಕಳ್ಳತನವಾಗಿದ್ದು, ಅಲ್ಲಲ್ಲಿ ಸಿಕ್ಕಿ ಬೀಳುತ್ತಿತ್ತು. ಸಿಕ್ಕಿಬಿದ್ದ ಕಾರುಗಳು ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಪತ್ತೆಯಾಗುತ್ತಿತ್ತು. ಇವೆಲ್ಲ ಬೆಂಗಳೂರಿನ ಕಾರುಗಳು. ಶ್ರೀಗಂಧ ಕಳ್ಳ ಸಾಗಣೆಗೆ ಇವುಗಳನ್ನು ಉಪಯೋಗಿಸುತ್ತಿದ್ರು. ನಾನು ಸಿಸಿಬಿಯಲ್ಲಿ ಇರಬೇಕಾದ್ರೆ ಕುಖ್ಯಾತ ಕಾರುಗಳ್ಳ ರಘು ಅಂಥ, ಅವನನ್ನು ಹಿಡಿದಿದ್ದೇ ಒಂದು ಕಥೆಯಿದೆ. ಅದು ವಿಶೇಷವಾದ ಪತ್ತೇದಾರಿಕೆ ಮತ್ತು ತನಿಖೆ. ಬಹಳ ಎದೆಗಾರಿಕೆ ಪತ್ತೇದಾರಿಕೆ. ಅದರಲ್ಲಿ ಇಬ್ಬರು ಪೊಲೀಸ್‌ ಸಿಬ್ಬಂದಿಯ ಕೆಲಸ ಇದೆಯಲ್ಲಾ ಬಹುಶಃ ಆ ತರಹ ಈಗಿನ ಪೊಲೀಸ್‌ನವರು ಮಾಡಲು ಸಾಧ್ಯವೇ ಇಲ್ಲ. ಯಾವ ತಾಂತ್ರಿಕತೆಯೂ ಇಲ್ಲದೇ ಆ ಕೇಸನ್ನು ಪತ್ತೆ ಮಾಡಿದ್ದಾರೆ. ನನ್ನ ಜೀವನದಲ್ಲಿ ಮೊದಲ ಎನ್‌ಕೌಂಟರ್‌ ಮಾಡಿದ್ದು ಅದೇ ರಘುವನ್ನು. ಅದು ದೊಡ್ಡ ಕಥೆ. ಅದನ್ನು ಇನ್ನೊಮ್ಮೆ ಹೇಳುವೆ.


ಸಕಲೇಶಪುರದ ಹತ್ತಿರ ಕಾಡಿನ ಒಳಗೆ ಒಂದು ಸಣ್ಣ ಗ್ರಾಮದಲ್ಲಿ ಒಂದು ಮನೆಯಿದೆ. ಆ ಮನೆಯಲ್ಲಿರುವವನು ಈ ಶ್ರೀಗಂಧ ಮತ್ತು ಕಾರು ಕಳ್ಳರಿಗೆ ಬಹಳ ಪರಿಚಯವಿದ್ದಾನೆ. ಅವನನ್ನು ನೀವು ಪತ್ತೆ ಮಾಡಿದ್ರೆ, ಈ ತಂಡವನ್ನು ಹಿಡಿಯಬಹುದು ಎಂಬ ಮಾಹಿತಿ ನಮಗೆ ಬಂತು. ನಾವು ದೊಡ್ಡ ತಂಡ ಕಟ್ಟಿಕೊಂಡು ಸಕಲೇಶಪುರ, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕಾಡಿನ ನಡುವೆ ಇರುವ ಮನೆ, ಅಲ್ಲಿಗೆ ಹೋಗಬೇಕಾದ್ರೆ ಎಷ್ಟೋ ಕಾಡು ಪ್ರಾಣಿಗಳು ಅಡ್ಡ ಬಂದಿವೆ. ದಡ್ಡ ಅರಣ್ಯ ಅದು. ಕಳ್ಳನ ಪತ್ತೆ ಮಾಡಲೇಬೇಕೆಂದು ಕಾಡಿನ ಮನೆಗೆ ಹೋದ್ವಿ. ರಾತ್ರಿ 12 ಗಂಟೆ ಇರಬಹುದು. 8 ಗಂಟೆಗೆ ಅಲ್ಲಿ ಊರುಗಳೇ ಮಲಗಿಕೊಂಡು ಬಿಡುತ್ತದೆ. ಮನೆ ಒಳಗಡೆ ಲೈಟ್‌ ಇದೆ. ಉಪ್ಪರಿಗೆ ಇರುವ ಹಂಚಿನ ಮನೆ. ಸುಣ್ಣ, ಬಣ್ಣ ಕಾಣದೇ ಎಷ್ಟೋ ವರ್ಷವಾದಂತೆ ಇತ್ತು. ಇದೆ ಸರ್‌ ಮನೆ ಎಂದು ನಮ್ಮ ಬಾತ್ಮೀದಾರ ತೋರಿಸಿದ. 12 ಗಂಟೆಗೆ ಲೈಟಿದೆ ಅಂದ್ರೆ ಅವನು ಇದ್ದಾನೆ ಅಂಥ ಆಯ್ತು ಸರ್‌ ಎಂದ. ನಮ್ಮ ದೊಡ್ಡ ತಂಡ ಅವರ ಮನೆಯನ್ನು ಸುತ್ತುವರೆದೆವು. ಎಲ್ಲರ ಹತ್ತಿರ ಟಾರ್ಚ್‌, ಲಾಠಿ, ರಿವಾಲ್ವರ್‌, ಪಿಸ್ತೂಲ್‌ಗಳಿದ್ದವು. ನಾವೆಲ್ಲರೂ ಮಫ್ತಿಯಲ್ಲಿದ್ವಿ. ಸಿಸಿಬಿ ಮಫ್ತಿಯಲ್ಲಿ ಕೆಲಸ ಮಾಡೋದು. ಈ ಮನೆಯಿಂದ ಬೇರೆ ಮನೆಗಳು 500– 400 ಮೀಟರ್‌ ದೂರ ಇದ್ದವು. ಮೊದಲು ಬಾಗಿಲು ತಟ್ಟಿದ್ವಿ. ಶಬ್ದನೇ ಬರಲಿಲ್ಲ. ನಮ್ಮ ಜೊತೆಗೆ ಇದ್ದ ಬಾತ್ಮೀದಾರ ಇದಾನೆ ಕಳ್ಳ ಎಂದ. ಬೆಂಗಳೂರಿನಿಂದ ಬಂದ ನಮಗೆ ಇದೊಂದು ಯಶಸ್ವಿ ಕಾರ್ಯಾಚರಣೆ ಆಗುತ್ತದೆ ಎಂಬ ಖುಷಿ. ಜೋರಾಗಿ ಬಾಗಿಲು ತಟ್ಟಲು ಶುರು ಮಾಡಿದ್ವಿ. ಮನೆಯೊಳಗೆಲ್ಲ ಟಾರ್ಚ್‌ ಬಿಟ್ಟು ನೋಡಿದ್ವಿ. ಯಾವ ವ್ಯಕ್ತಿಯ ಓಡಾಟವೂ ಇರಲಿಲ್ಲ. ನಾವು ಜೋರಾಗಿ ಬಾಗಿಲು ತಟ್ಟಿದ ಮೇಲೆ ಒಬ್ಬ ಹೆಂಗಸು, ಯಾಕ್ರೀ ಹಂಗಾಡುತ್ತೀರಿ ಬಾಗಿಲು ತಟ್ಟಬೇಡಿ ನೀವು ಎಂದು ಜೋರು ಮಾಡಿದ್ರು. ನೀವು ಬಾಗಿಲು ತೆಗೆಯಬೇಕು ಎಂದು ನಾವು ಹೇಳಿದ್ವಿ. ರಘು ಹೆಸರು ಹೇಳಿ, ನಿಂಗೇನು ಆಗಬೇಕು ಅವನು ಅಂದೆ. ಇದ್ದಾನಾ ಮನೆಯಲ್ಲಿ ಅದ್ವಿ. ಮನೆಯಲ್ಲಿ ಇಲ್ಲ, ಅವನು ಬರುತ್ತಿಲ್ಲ ಅಂದ್ಲು. ಅವನನ್ನು ಹೋಗಿ ಹಿಡ್ಕೋಳಿ, ನಮಗ್ಯಾಕೆ ತೊಂದ್ರೆ ಕೊಡ್ತೀರಾ ಅಂದ್ಲು. ನೋಡಮ್ಮ ನಾವು ಬೆಂಗಳೂರು ಪೊಲೀಸರು ಅಂದೆವು. ನೀವು ಬೆಂಗಳೂರಾಗಲಿ, ಹಾಸನ ಆಗ್ಲಿ, ನಾವು ಬಾಗಿಲು ತೆಗೆಯೋಲ್ಲ ಅಂದ್ಲು. ಬಾಗಿಲು ತೆಗಿಯಲೇ ಬೇಕು ಇಲ್ಲಾಂದ್ರೆ ಬಾಗಿಲು ಒಡಿತೀವಿ ಅಂದ್ವಿ. ಒಡೀರಿ ನೋಡೋಣ ಅಂದ್ಲು. ವಾರಂಟ್‌ ಇದೆಯಾ ಅಂದ್ಲು. ನಮಗೆ ಆವಾಗ ಕಳ್ಳ ಒಳಗಿದ್ದಾನೆ. ಇವಳು ಬಾರಿ ಕಾನೂನು ಮಾತಾಡ್ತಾಳೆ ಅನಿಸಿತು. ವಾರಂಟ್‌ ಇದೆ, ಬಾಗಿಲು ತೆಗಿ ಅಂದ್ವಿ. ನೀವು ದರೋಡೆಕೋರರಾಗಿರಬಹುದು. ಪೊಲೀಸ್ ಅಂಥ ಹೇಗೆ ನಂಬೋದು ಅಂದ್ಲು. ನೀವೆಲ್ಲ ಮಫ್ತಿಲ್ಲಿ ಇದ್ದೀರಿ ನನಗೆ ಕಾಣಿಸುತ್ತಿದ್ದೀರಿ ಅಂದ್ಲು. ನಮಗೆ ಕುತೂಹಲ ಆಗೋಯ್ತು. ಎಲ್ಲರನ್ನು ಅವಳು ನೋಡಿದ್ದಾಳೆ. ಬಾ ನೀನು ಮುಖ ತೋರಿಸು ಅಂದ್ವಿ. ನಾನು ತೋರಿಸೊಲ್ಲ, ತೆಗೆಯೋದಿಲ್ಲ. ಬೆಳಿಗ್ಗೆ ಊರಿನವರು ಎಲ್ಲ ಬಂದ ಮೇಲೆ ಅವರ ಸಮುಖದಲ್ಲಿ ತೆಗಿತೇನೆ ಅಂದ್ಲು. ನಿಜ ಹೇಳಬೇಕಂದ್ರೆ ನಮ್ಮ ಬಳಿ ವಾರಂಟ್‌ ಇರಲಿಲ್ಲ. ವಾರಂಟ್‌ ಇಲ್ಲದೇ ಹೋಗುವ ಹಾಗಿಲ್ಲ. ಆದರೆ, ಕಳ್ಳ ಸಿಕ್ಕಾಗ ವಾರಂಟ್‌ ಅವಶ್ಯಕತೆ ಇರೋದಿಲ್ಲ. ಆಮೇಲೆ ನಾವು ನ್ಯಾಯಾಲಯದಲ್ಲಿ ಹೇಳುವ ಅವಕಾಶಗಳಿವೆ. ಬಾಗಿಲು ತೆಗೆಯದಿದ್ರೆ ಒಡೆದು ಒಳಗೆ ಬರುತ್ತೇವೆ ಅಂದೆವು. ಒಡೀರಿ ಅಂದ್ಲು. ಇದಕ್ಕಿದ್ದಂತೆ ಮಗಳೇ ಕತ್ತಿ ತಗೋ ಅಂದ್ಲು. ನೀನೊಂದೆರಡು ನಾನೊಂದೆರಡು ಕತ್ತಿ ಇಟ್ಕೋಳೋಣ ಅಂದ್ಲು. ನೀನು ಕತ್ತಿ ವಿಷಯಕ್ಕೆ ಬಂದ್ರೆ ಬಾಗಿ ಒಡೆಸಿ ಒಳಗೆ ಬರ್ತೇನಿ ಅಂದೆ. ನೀನು ಯಾರು ಅಂದ್ಲು. ನಾನು ಸಬ್‌ಇನ್‌ಸ್ಪೆಕ್ಟರ್‌ ಅಂದೆ. ಏನು ಪ್ರೂಫ್‌ ಇದೆ ಅಂದ್ಲು. ವರಾಂಡಕ್ಕೆ ಲೈಟ್‌ ಹಾಕಿ ಹೊರಗೆ ಬಂದು ನೋಡು ಅಂದೆ. ನನ್ನ ಐಡಿ ಕಾರ್ಡ್‌ ನೋಡು. ಬಂದು ನೋಡಿದ್ರೆ ನಾನು ಯಾರು ಅಂಥ ಗೊತ್ತಾಗುತ್ತೆ ಅಂದೆ. ನಾನು ಬಿ.ಕೆ.ಶಿವರಾಂ ಅಂಥ. ಬೆಂಗಳೂರು ಸಿಸಿಬಿ ಸಬ್‌ಇನ್‌ಸ್ಪೆಕ್ಟರ್‌ ಅಂದೆ. ನೀವು ಸಬ್‌ಇನ್‌ಸ್ಪೆಕ್ಟರ್‌ ಆದ್ರು, ನಾನು ಬೆಳಿಗ್ಗೆವರೆಗೂ ಬಾಗಿಲು ತೆಗೆಯೋಲ್ಲ ಅಂದ್ಲು. ನಾವು ಬಾಗಿಲು ಒಡಿತೀವಿ ಎಂದು ಬಾಗಿಲನ್ನು ದಬ್ಬಲು ಹೋದ್ವಿ, ಆಗ ಮಗಳಿಗೆ ಕತ್ತಿ ತಗೋ ಅಂದ್ಲು. ಕತ್ತಿ ಇಟ್ಕೊಡಿದ್ದೀವಿ. ನೀವು ಎಷ್ಟು ಜನ ಬಂದ್ರು, ಕೊಂದು ನಾನು ಸಾಯ್ತೀನಿ, ನನ್ನ ಮಗಳು ಸಾಯ್ತಾಳೆ ಅಂಥ ಶುರು ಮಾಡಿಕೊಂಡಳು. ನೀನು ಇಷ್ಟು ಮಾತಾಡ್ತೀಯಾ, ಮಗ ಎಲ್ಲಿ ಅಂದ್ವಿ. ನನ್ನ ಮಗ ಯಾಕ್ರೀ ಬರ‍್ತಾನೆ. ಅವನು ಸರಿಯಾಗಿದಿದ್ರೆ, ನಾನ್ಯಾಕೆ ಕೂಲಿ ಮಾಡ್ಕೊಂಡು ಇರ್ತಿದೆ ಅಂದ್ಲು. ಮಗ ಇಲ್ಲದಿದ್ರೆ ಬಾಗಿಲು ತೆರೆಯೋಕ್ಕೆ ಏನು ನಿನಗೆ ಅಂದ್ವಿ. ನಿಮ್ಮನ್ನು ನಾನು ಹೇಗೆ ನಂಬೋದು ಅಂದ್ಲು. ಬಾಗಿಲು ಹೊಡೆದು ಒಳಗೆ ಹೋದಾಗ ಅವನು ಎಸ್ಕೇಪ್‌ ಆದ್ರೆ, ಈ ಹೆಣ್ಣುಮಕ್ಕಳಿಗೆ ಹೊಡೆದು, ಬಡಿದು ಮಾಡೋದು ಸರಿ ಇರಲ್ಲ ಅಂಥ, ಒಂದು ಗಂಟೆಗಳ ಕಾಲ ನಮಗೂ ಆಕೆಗೂ ಜಟಾಪಟಿಯಾಯಿತು. ಆಗ ಇದಕ್ಕಿದ್ದಂತೆ ತುಳುವಲ್ಲಿ ಮಗಳಿಗೆ, ನೀನು ಕತ್ತಿ ತಗೋ ಬಂದವರನ್ನು ಕಡಿಯೋಣ. ಆಮೇಲೆ ನೀನು ನನ್ನನ್ನು ಕಡಿ. ನಾನು ನಿನ್ನನ್ನು ಕಡೀತೀನಿ ಅಂದ್ಲು.


ಆಗ ನನಗೆ ಇದರೊಳಗೆ ಏನೋ ಬೇರೆ ಇದೆ ಎಂದು ಅನಿಸಿತು. ನನಗೆ ತುಳು ಬರುವುದರಿಂದ ಆಕೆಗೆ ನೀನು ಏನು ಮಾತಾಡಿದ್ದೀಯ ಅಂಥ ನನಗೆ ಗೊತ್ತು ಅಂದೆ. ನಿಮಗೆ ತುಳು ಬರುತ್ತಾ ಅಂದ್ಲು. ಹೌದು ಅಂದೆ. ನೀನು ಹೇಳಿದ ಹಾಗೆ ನಾವು ದರೋಡೆಕೋರರಲ್ಲ. ಪೊಲೀಸರು. ನನಗೂ ಐದು ಅಕ್ಕ, ತಂಗಿಯರಿದ್ದಾರೆ. ಅದಕ್ಕೆ ನಿನ್ನ ಮನೆಯೊಳಗೆ ಇದುವರೆಗೆ ನುಗ್ಗಿಲ್ಲ. ನಾನು ಅಕ್ಕ, ತಂಗಿಯರ ಜೊತೆಗೆ ಹುಟ್ಟಿದವನು. ದಯವಿಟ್ಟು ಬಾಗಿಲು ತೆಗಿ ಪೊಲೀಸರ ಜೊತೆ ಆಟವಾಡಬೇಡ. ನಿನಗೆ ತೊಂದರೆಯಾಗುತ್ತದೆ ಅಂದೆ. ನೀವು ಅಕ್ಕ, ತಂಗಿಯರ ಜೊತೆಗೆ ಹುಟ್ಟಿದ್ದೀವಿ ಅಂತೀರಿ. ಇಬ್ಬರೇ ಹೆಣ್ಣುಮಕ್ಕಳು ಇದ್ದೀವಿ ಅಂದ್ರು ಮನೆಯೊಳಗೆ ನುಗ್ಗುತ್ತೇವೆ ಅಂತೀರಾ, ಇದು ಸರಿನಾ ಅಂದ್ಲು. ಸರಿ ಅಂಥ ಅಲ್ಲ, ನಿನ್ನ ಮಗ ಕಳ್ಳ ಅಂಥ ನೀನೆ ಹೇಳ್ತಿದ್ದೀಯಲ್ಲಾ ಅಂದೆ. ಈಗಲೂ ಮಗ ಕಳ್ಳ ಅಂಥ ಹೇಳ್ತೇನೆ ಅಂದ್ಲು. ಅವನ ದುಡ್ಡಲ್ಲಿ ಒಂದು ಕಾಫಿ ಕುಡಿದಿಲ್ಲ ನಾನು. ದಯವಿಟ್ಟು ನನ್ನ ಅರ್ಥ ಮಾಡ್ಕೊಳ್ಳಿ. ಬಾಗಿಲು ತೆರೆಯೊಲ್ಲ ನಾನು ಅಂದ್ಲು. ನೋಡಮ್ಮ ನಿನಗೆ ಹೇಳಿದ್ದೇನೆ, ಬಾಗಿಲು ತೆಗೆಯದಿದ್ರೆ ಅನಾಹುತಕ್ಕೆ ನೀನೆ ಕಾರಣವಾಗುತ್ತೀಯ ಅಂದೆ. ಅಷ್ಟರೊಳಗೆ ಸಿಬ್ಬಂದಿ ಹಂಚಿನ ಮೇಲೆ ಹತ್ತಿದ್ರು. ಅದಕ್ಕೆ ಆಕೆ, ನೋಡಿ ಸರ್‌, ಹಂಚಿನ ಮೇಲೆ ಹತ್ತುತ್ತಿದ್ದೀರಾ, ನೋಡಿ ಈಗ ಮಗಳನ್ನು ನಾನು ಕಡೀತೀನಿ. ಅವಳು ನನ್ನನ್ನು ಕಡಿತ್ತಾಳೆ ಅಂದ್ಲು. ನೀವೇ ಹೊಡೆದ್ರಿ ಅಂಥ ಕಥೆ ಆಗುತ್ತೆ. ಅದನ್ನು ಎದುರಿಸೋಕೆ ತಯಾರಿದ್ದೀರಾ ಅಂದ್ಲು. ನಮಗೆ ಆತಂಕವಾಯಿತು. ಬೇಡ ಹಾಗೆ ಮಾಡಬೇಡ. ನೀನು ಮುಖ ತೋರಿಸುತ್ತಿಲ್ಲ. ಒಬ್ಬ ಅಣ್ಣ, ತಮ್ಮನಾಗಿ ಹೇಳುತ್ತಿದ್ದೀನಿ, ದಯವಿಟ್ಟು ಬಾಗಿಲು ತೆಗಿ ಅಂದೆ.


ಅಣ್ಣ, ತಮ್ಮ ಅನುತ್ತಿದ್ದೀರಾ, ನಂಬೋದಾ ಅಂದ್ಲು. ಪೊಲೀಸವರನ್ನು ನಂಬಬಾರದು ಅಂಥಾರಲ್ಲ ಅಂದ್ಲು. ಇಲ್ಲ ನಂಬು ನೀನು. ದಯವಿಟ್ಟು ನಂಬು ನಾವು ಸಿಸಿಬಿಯಿಂದ ಬಂದವರು ಅಂದೆ. ಸರ್‌, ಎಲ್ಲ ಪೊಲೀಸರು ಒಂದೇ ಅಲ್ವಾ ಅಂದ್ಲು. ಸರ್‌ ನನಗೆ ಹತ್ತು ನಿಮಿಷ ಟೈಮ್‌ಕೊಡಿ ಅಂದ್ಲು. ನಮಗೆ ಖಾತರಿ ಆಗೋಯ್ತು ಒಳಗೆ ಕಳ್ಳ ಇದ್ದಾನೆ. ಹತ್ತು ನಿಮಿಷದಲ್ಲಿ ಎಸ್ಕೇಪ್‌ ಮಾಡ್ತಾಳೆ ಅಂಥ. ಆವಾಗ ಹೇಳಿದ್ವಿ ನೋಡು ಎಲ್ಲ ಕಡೆ ಪಿಸ್ತೂಲ್‌ ಇದೆ ನೀನು ನೋಡ್ತಿದ್ದೀಯಾ, ನಿನ್ನ ಮಗ ಓಡಿ ಹೋಗಲು ಪ್ರಯತ್ನಿಸಿದರೆ, ಗುಂಡು ಹೋಡಿತೀವಿ ಅಂದ್ವಿ. ಹತ್ತು ನಿಮಿಷ ಟೈಮ್‌ ಕೊಡಿ. ಇಲ್ಲಂದ್ರೆ ಏನು ಮಾಡಿದ್ರು ಬಾಗಿಲು ತೆಗೆಯೋಲ್ಲ ಅಂದಳು. ಅಷ್ಟೊತ್ತಿಗೆ ಹಳೆ ಮಂಚವನ್ನು ಬಾಗಿಲಿಗೆ ಅಡ್ಡ ಇಟ್ಲು. ನೀನು ಏನು ಆಟ ಆಡಿದ್ರು ಇಲ್ಲಿಂದ ಕದಲೊಲ್ಲ ಅಂದ್ವಿ. ಹತ್ತು ನಿಮಿಷ ಟೈಮ್‌ ಕೊಡಿ. ಬಾಗಿಲು ತೆಗೆಯದಿದ್ರೆ ಒಡೆದು ಒಳಗೆ ಬನ್ನಿ ಅಂದ್ಲು.


ಕಾದ್ವಿ. ನಮಗೆ ಆತಂಕ. ಕಾಡ್ಗತ್ತಲು. ಅವಳು ಹೇಳಿದ ಹಾಗೆ ಹೊಡೆದಾಡಿಕೊಂಡ್ರೆ, ಆ ತನಿಖೆನೇ ಎಷ್ಟೋ ವರ್ಷ ನಡೆಯೊತ್ತೆ. ಪೊಲೀಸರ ವಿರುದ್ಧ ಎಲ್ಲರೂ ಮಾತಾಡ್ತಾರೆ. ಕೊಲೆ ಕೇಸಿಗೆ ನಾವು ಭಾಗಿಯಾಗಬೇಕು. ಅಥವಾ ಕೊಲೆಯನ್ನು ಅವರವರೇ ಮಾಡಿಕೊಂಡ್ರೆ, ಪ್ರೇರೇಪಿಸಿದ್ದೀವಿ ಅಂಥ ನಮ್ಮ ಮೇಲೆ ಬರುತ್ತೆ. ಅವರೇ ಆತ್ಮಹತ್ಯೆ ಮಾಡಿಕೊಂಡ್ರು ನಮಗೆ ತೊಂದ್ರೆ. ಅದು ಕೊಲೆ ಪ್ರಕರಣಕ್ಕಿಂತ ಘೋರ. ನಾವು ಎಲ್ಲ ಯೋಚನೆ ಮಾಡಿದ್ವಿ. ನಮಗೆ ಒಂದು ಗಂಟೆ ಆದ ಹಾಗೆ ಆಗೋಯ್ತು. ತಾಳ್ಮೆ ಇರಲಿಲ್ಲ.


ಸರ್‌ ನಾನು ಲೈಟ್‌ ಹಾಕ್ತೇನೆ. ನೀವೊಬ್ಬರು ಮಾತ್ರವೇ ಬಾಗಿಲಲ್ಲಿ ನಿಂತುಕೊಳ್ಳಬೇಕು. ಬೇರೆಯವರೆಲ್ಲ ಹಿಂದಕ್ಕೆ ಹೋಗಬೇಕು ಸರ್‌. ನಿಮ್ಮ ಜೊತೆಗೆ ಲೇಡಿ ಕಾನ್‌ಸ್ಟೆಬಲ್‌ ಇದ್ದಾರಾ ಅಂದ್ಲು. ನಾನು ಇವಳೇನೊ ಮಾಡ್ತಾಳೆ ಅನ್ಕೊಂಡೆ. ಇಲ್ಲಮ್ಮ ಅಂದೆ. ಮತ್ತೆ ತಪ್ಪಲ್ವಾ ಸರ್‌. ಇಬ್ಬರು ಹೆಣ್ಣುಮಕ್ಕಳು ಇರುವ ಮನೆಗೆ ಲೇಡಿ ಕಾನ್‌ಸ್ಟೆಬಲ್‌ ಇಲ್ಲದೇ ಬಂದಿದ್ದೀರಲ್ಲ ಅಂದ್ಲು. ನನಗೆ ಹೌದಲ್ವಾ ಅನಿಸಿತು. ಆದರೂ, ನಿನಗೆ ಹೇಳಿದ್ದೇನೆ, ಅಕ್ಕ, ತಂಗಿಯರ ತರಹ ನೋಡ್ಕೋತ್ತೇನೆ ಅಂಥ ಅಲ್ವಾ ಅಂದೆ. ಅದಕ್ಕೆ ನಾನು ತೆಗಿತ್ತೇನೆ. ಆದ್ರೆ ನೀವೊಬ್ಬರೆ ಇರಬೇಕು ಅಂದ್ಲು. ಆದರೆ, ನಮ್ಮ ಪೊಲೀಸ್‌ನವರು ನನನ್ನು ಬಿಡೋಕ್ಕೆ ತಯಾರಿರಲಿಲ್ಲ. ಸರ್, ಅವಳಿಷ್ಟು ಮಾತನಾಡೋಳು ನಿಮಗೆ ದಾಳಿ ಮಾಡಿಬಿಡ್ತಾಳೆ ನೋಡಿ ಅಂಥ. ನಮಗೆ ಸಸ್ಪೆನ್ಸ್‌ ಅವಳು ಬಾಗಿಲು ತೆಗೆಯುತ್ತಾಳೋ ಇಲ್ಲವೋ ಅಂಥ. ತೆಗೆದ ಮೇಲೆ ದಾಳಿ ಮಾಡ್ತಾಳಾ, ಇಲ್ಲ ತಪಾಸಣೆಗೆ ಅವಕಾಶ ಕೊಡ್ತಾಳಾ ಅಂಥ ಅಂದುಕೊಳ್ಳುತ್ತ ಇದ್ವಿ. 10 ನಿಮಿಷ ಆಯ್ತು. ಏನಮ್ಮ ಅಂದೆ. 2 ನಿಮಿಷ ಬಂದೆ ಅಂದ್ಲು. ನೀನು ಬರುವ ಮುಂಚೆ ಎಲ್ಲ ಕೋಣೆಯ ಲೈಟ್‌ ಹಾಕು ಅಂದೆ. ನಾನು ಮಾಡ್ತೇನೆ ಅಂದು. ಎಲ್ಲ ಲೈಟ್‌ ಹಾಕಿದ್ಲು.


ಮನೆ ಒಳಗಡೆ ಈ ಹೆಂಗಸು ಮತ್ತು ಆಕೆಯ ಮಗಳು ಇಬ್ರೆ ಇದ್ರು. ಎಲ್ಲಿದ್ದಾನೆ ಅವನು ಎಂದಾಗ, ಇಲ್ಲ ಅಂದಿದ್ದೇನೆ, ನೀವು ದೂರು ನಿಂತುಕೊಳ್ಳಿ. ನನ್ನ ಮೇಲೆ ನಂಬಿಕೆ ಇಲ್ಲದಿದ್ರೆ, ನೀವೊಬ್ರೆ ಒಳಗೆ ಬನ್ನಿ ಅಂದ್ಲು. ಎರಡು ನಿಮಿಷದಲ್ಲಿ ತಾಯಿ, ಮಗಳು ಮುಂದೆ ಬಂದು ನಿಂತುಕೊಂಡ್ರು. ನಿನ್ನ ಮಗನ ಕಳಿಸು ಅಂದ್ವಿ. ಸರ್‌, ನನ್ನ ಮಗ ಇಲ್ಲ. ನಾನು ಕೂಲಿ ಕೆಲಸ ಮಾಡಿ ಜೀವನ ಮಾಡ್ತೇನೆ. ಅವನ ದುಡ್ಡಲ್ಲಿ ಒಂದು ಕಾಫಿ ಕುಡಿದಿಲ್ಲ. ನನ್ನ ಮಗಳು ಕೂಲಿ ಕೆಲಸ ಮಾಡಿ ಜೀವನ ಮಾಡ್ತಾಳೆ. ಅವಳ ಬಳಿ ಇರೋದೇ ಒಂದು ಸೀರೆ. ನನ್ನ ಹತ್ತಿರ ಹರಕಲು ಸೀರೆ, ಹರಕಲು ಲಂಗ. ನನ್ನ ಮಗಳು ರಾತ್ರಿ ಅರೆಬೆತ್ತಲಾಗಿ ಮಲಗುತ್ತಾಳೆ ಸರ್. ನಾನು ಅರೆಬೆತ್ತಲೇ ಮಲಗೋದು. ನೀವು ಬಂದಾಗ ಅರೆ ಲುಂಗಿ ಕಟ್ಟಿಕೊಂಡು ಮಲಗಿದ್ದೆ. ನನ್ನ ಮಗಳು ಹರಿದು ಹೋದ ಲಂಗ ಮತ್ತು ಟವಲ್‌ ಹಾಕ್ಕೊಂಡು ಮಲಗುತ್ತಾಳೆ. ನಾವಿಬ್ಬರೇ ಇರೋದು. ಅವಳ ಹತ್ತಿರ ಇರೋದು ಇದೊಂದೇ ಸೀರೆ. ನಾನು ತೋಟದಲ್ಲಿ ಕೂಲಿ ಕೆಲಸ ಮಾಡಲು ಹಾಕಿಕೊಳ್ಳುವ ಗಂಡಸರ ಶರ್ಟ್‌ ಹಾಕಿಕೊಂಡಿದ್ದೇನೆ. ನನ್ನ ಮಗಳಿಗೆ ಹದಿನೆಂಟು ವರ್ಷ. ಆಕೆಯ ಮೇಲೆ ದಾಳಿ ಮಾಡಿದ್ರೆ ನನ್ನ ಗತಿ ಏನು ಅಂದ್ಲು. ಮಗನ ಹುಡುಕುತ್ತಿದ್ದೀರಾ ಹುಡ್ಕೋಳಿ. ನನ್ನ ಮಗಳ ಮಾನ ರಕ್ಷಣೆಗೋಸ್ಕರ ಇಷ್ಟೆಲ್ಲ ಮಾಡ್ದೆ ಸರ್‌ ಅಂದ್ಲು. ಮನೆಯೊಳಗೆ ನೋಡಿದ್ರೆ ನಿಜವಾಗ್ಲು ಕಳ್ಳ ಇರಲಿಲ್ಲ. ಆಗ ನಾನು, ನಿನ್ನ ಬಳಿ ದೊಡ್ಡ ಕ್ಷಮೆ ಕೇಳ್ತೇನೆ. ಕ್ಷಮಿಸು ಅಂದೆ. ಇಲ್ಲ ನೀವು ಅಕ್ಕ, ತಂಗಿ ವಿಷಯ ಮಾತನಾಡಿದ್ದಕ್ಕೆ ನಿಮ್ಮ ಮೇಲೆ ನಂಬಿಕೆ ಬಂದು ಬಾಗಿಲು ತೆಗೆದಿದ್ದೇನೆ. ಕ್ಷಮಿಸುವುದು ಏನು ಇಲ್ಲ. ನನ್ನ ಮಗ ಮಾಡಿದ ತಪ್ಪಿಗೆ ಶಿಕ್ಷೆ ಇದು. ನನ್ನನ್ನು ಈ ಮಟ್ಟಿಗೆ ಟ್ರೀಟ್‌ ಮಾಡಿದ್ದಕ್ಕೆ ತುಂಬಾ ಸಂತೋಷ. ನೀವು ಕೂತಿದ್ರೆ, ಹಾಲು ಕರೆದು ಟೀ ಮಾಡಿ ಕೊಡ್ತೇನೆ ಅಂದ್ಲು. ಇದು ಮಾನವೀಯ ಮುಖ. ನಾನು ಅವಳಿಗೆ ದೊಡ್ಡ ನಮಸ್ಕಾರ ಮಾಡಿ. ಅಮ್ಮ, ನಾನು ತಪ್ಪು ಮಾಡಿದ್ದೇನೆ ಅಂಥ ನಿನಗೆ ಅನಿಸಿದರೆ ಕ್ಷಮಿಸಿ ಬಿಡು ಅಂದೆ. ನನ್ನ ಮಗ ಮಾಡಿದ ತಪ್ಪಿಗೆ ನಾನು ಅನುಭಿಸುತ್ತಿದ್ದೇನೆ. ಇಲ್ಲಂದ್ರೆ ನೀವ್ಯಾಕೆ ಬರುತ್ತಿದ್ರಿ. ಈ ಪ್ರಕರಣದಲ್ಲಿ ಮಿಷನ್‌ ಫೆಲ್ಯೂರ್‌. ಆದರೆ, ನನ್ನ ಅನುಭವಕ್ಕೆ ಒಂದು ಪಾಠ.


ಈ ಘಟನೆಯನ್ನು ನನ್ನ ತಾಯಿಗೆ ಹೇಳಿದೆ. ಕಾಡಿನಲ್ಲಿ ಹೀಗಾಯಿತು ಎಂದೆ. ಹೌದಾ, ಸೀರೆಗಳಿಲ್ವಾ ಅಂದ್ರು. ಇಲ್ಲ ಅವರು ತೋಟದಲ್ಲಿ ಹೀಗೆ ಕೆಲಸ ಮಾಡ್ತಾರೆ ಅಂದೆ. ಕಳ್ಳ ಯಾವಾಗ್ಲಾದ್ರು ಸಿಕ್ತಾನಾ ಅಂದ್ರು. ಸಿಗುತ್ತಾನೋ ಇಲ್ವೋ ಗೊತ್ತಿಲ್ಲ ಅಂದೆ. ಆದರೆ, ಅವನನ್ನು ಹಿಡಿಯುತ್ತೇವೆ ಅಂದೆ. ಅವನನ್ನು ಹಿಡಿದು ಚೆನ್ನಾಗಿ ಒದಿಬೇಕು ಅಂದ್ರು. ಆಮೇಲೆ, ಒಂದು ಕೆಲಸ ಮಾಡಪ್ಪ, ನನ್ನ ಮನೆಯಲ್ಲಿ ಹಳೆ ಲಂಗ, ಸೀರೆ ತುಂಬಾ ಇದೆ. ಏಳೆಂಟು ಇರಬಹುದು. ಅದನ್ನು ಚೆನ್ನಾಗಿ ಒಗೆದು ಪ್ಯಾಕ್‌ ಮಾಡ್ತೇನೆ. ಯಾರನಾದ್ರು ಕಳುಹಿಸಿ ಅವರಿಗೆ ಕೊಡು ಅಂದ್ರು. ಹೊಸದು ಬೇಕಾದ್ರು ಒಂದೆರಡು ಕೊಡಿಸೋಣ. ತಾಯಿ, ಮಗಳಿಗೆ ಕೊಡು ಅಂದ್ರು.


ಮುಂದೊಂದು ದಿನ ಆ ಕಳ್ಳ ಸಿಕ್ಕ. ಅವನಿಗೆ ನಾನು ಕೇಳಿದ ಮೊದಲ ಪ್ರಶ್ನೆ, ಇಷ್ಟು ವರ್ಷದಿಂದ ಕಾರು ಕಳವು, ಗಂಧವನ್ನು ಕದ್ದಿದ್ದೀಯಾ, ಲಕ್ಷಾಂತರ ರೂಪಾಯಿ ಸಂಪಾದಿಸಿದ್ದೀಯ, ಕುಡಿದಿದ್ದೀಯ, ಹಾಳು ಮಾಡಿದ್ದೀಯ... ನಿನ್ನ ತಾಯಿಗೆ ಒಂದು ಮಸಾಲೆ ದೋಸೆ ಕೊಡಿಸಿದ್ದೀಯಾ ಅಂದಾಗ, ಅವನಿಗೆ ಹೊಡೆಯದಿದ್ರು, ಗೊಳೋ ಎಂದು ಅಳಲು ಶುರು ಮಾಡಿದ. ಆಮೇಲೆ ಅವನಿಗೆ ಹೇಳಿದೆ. ನನ್ನ ಅಮ್ಮ ಒಂದು ಕಟ್ಟನ್ನು ಇಟ್ಟಿದ್ದಾರೆ. ನಿನ್ನ ಅಮ್ಮನ ಬಳಿ ಹೋಗೋಕ್ಕೆ ಆಗಿಲ್ಲ. ನೀನು ಜೈಲಿಗೆ ಹೋಗ್ತ ಕೊಡ್ತೇನೆ. ನಿನ್ನ ತಾಯಿಗೆ, ತಂಗಿಗೆ ಕಳುಹಿಸು ಅಂದಾಗ, ಮತ್ತೆ ಅಳಲು ಶುರು ಮಾಡಿದ. ನಾನು ಇನ್ಮೇಲೆ ಕಳ್ಳತನ ಮಾಡಲ್ಲ. ನನಗಿದೊಂದು ಪಾಠ. ನೀವು ನನ್ನ ಮನೆಗೆ ನುಗ್ಗಿಲ್ವಲ್ಲ ಸಾರ್‌... ಅಂದ. ಇದು ಪೊಲೀಸರ ಇನ್ನೊಂದು ಮುಖ.


ಮುಂದುವರೆಯುವುದು…


ಸಂದರ್ಶಕರು - ಕೆ.ಎಸ್. ಪರಮೇಶ್ವರ35 views