ಕಾಶೀನಾಥ ಅವರ ಶಿಷ್ಯಕೋಟಿ ದೊಡ್ಡದು…

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ – 10ಅಜಗಜಾಂತರ ಸಿನಿಮಾ ಮಾಡ್ಬೇಕಾದ್ರೆ ಅಲ್ಲಿ ಸುನೀಲ್ ಕುಮಾರ್ ದೇಸಾಯಿ, ಉಪೇಂದ್ರ, ಕೃಷ್ಣ ಪೆರೋಡಿ, ಮನೋಹರ್, ಬಾಲಾಜಿ, ಮುರುಳಿ ಮೋಹನ್ ಎಲ್ಲಾ ಒಂದು ಟ್ರೂಪ್. ಕಾಶೀನಾಥ್ ಅವರ ಶಿಶ್ಯಕೋಟಿಗಳು ಇವು. ವಿಜಯನಗರದಲ್ಲಿ ಮನೆ. ತಿಳಿ ಸಾರು ಅನ್ನ, ಮಜ್ಜಿಗೆ ಅಷ್ಟೇ ಅಲ್ಲಿ. ಉಪೇಂದ್ರ ಅವಾಗ್ಲೇ ಡೈಲಾಗ್ ಎಲ್ಲಾ ಬರಿತಾ ಇದ್ದ. ವಿ.ಕೆ ಮನೋಹರ್ ಸಂಗೀತ ಮಾಡ್ತಾ ಇದ್ರು. ಅವರೆಲ್ಲಾ ಒಂದು ಟ್ರೂಪ್ ಆಗಿದ್ರು. ನಾನೂ ಆ ಟ್ರೂಪ್‍ಗೆ ಸೇರ್ಕೊಂಡ್ಬಿಟ್ನಲ್ಲಾ?


ಒಂದು ದಿನ ನಾವೆಲ್ಲಾ ಕೂತ್ಕೊಂಡು ಮಾತಾಡ್ತಿರ್ಬೇಕಾದ್ರೆ ಉಪೇಂದ್ರ “ನಾನೊಂದು ಸಬ್ಜಕ್ಟ್ ಮಾಡಿದ್ದೀನಪ್ಪಾ. ಅದನ್ನ ಡೈರಕ್ಷನ್ ಮಾಡುವ ಅವಕಾಶ ನಂಗೇನಾದ್ರೂ ಸಿಕ್ಕಿದ್ರೆ ಆ ಪಾರ್ಟ್ ನೀನೇ ಮಾಡ್ಬೇಕು” ಅಂದ. “ಅಯ್ಯೋ ಏನು ಮಾರಾಯ, ನಿಮ್ಮ ಈ ಸಮೂಹ, ಈ ಕೂಟದಲ್ಲಿ ನನ್ನೂ ಸೇರಿಸ್ಕೊಂಡಿದ್ದೀರ. ಮಾಡದೇ ಇರ್ತೀನಾ? ಮಾಡ್ತೀನಿ ಹೋಗಯ್ಯಾ” ಅಂತ ಹೇಳ್ದೆ.


ಪರಮ್: ಅವರು ಅವಾಗಿನ್ನೂ ಡೈರೆಕ್ಟರ್ ಆಗಿರ್ಲಿಲ್ಲ?


ಬ್ಯಾಂಕ್ ಜನಾರ್ಧನ್: ಡೈರೆಕ್ಟರ್ ಆಗಿರ್ಲಿಲ್ಲ ಅವನು. ತರ್ಲೆ ನನ್ಮಗ ಅಂತ ಒಂದು ಸಬ್ಜೆಕ್ಟ್ ಇತ್ತು. ಈ ಸೂಪರ್ ಬಾಬು ಇದ್ದಾನಲ್ಲಾ?


ಪರಮ್: ಸೂರಪ್ಪ ಬಾಬು?


ಬ್ಯಾಂಕ್ ಜನಾರ್ಧನ್: ಸೂರಪ್ಪ ಬಾಬು ಈಗ ಕೋಟಿಗೊಬ್ಬ ಮಾಡಿದ್ದಾನಲ್ಲಾ ಅವನು ಫಸ್ಟ್ ಪ್ರೊಡ್ಯೂಸರ್ ಆ ಸಿನಿಮಾಕ್ಕೆ. ಅವನು ಮತ್ತೆ ರಾಮಸ್ವಾಮಿ. ಇವರಿಬ್ಬರೂ ಸೇರ್ಕೊಂಡು ಪಿಚ್ಚರ್ ಮಾಡ್ಬೇಕು ಅಂತ ಹೊರಟ್ರು. ಉಪೇಂದ್ರನಿಗೆ ಕೇಳ್ಕೊಂಡ್ರು. ಉಪೇಂದ್ರ ಡೈರೆಕ್ಟರ್ ಆದ. ಅವನ ಮೊಟ್ಟ ಮೊದಲನೇ ಚಿತ್ರ ತರ್ಲೆ ನನ್ಮಗ. ಈ ಗಲಾಟೆಯಲ್ಲಿ ಜಗ್ಗೇಶ್ ಹೀರೋ ಆದ. ಅವನು ಅಲೆದಾಟದಲ್ಲಿ ಇದ್ನಲ್ಲಾ ಎಲ್ಲಾ ಕಡೆ? ಅವನನ್ನ ಹೀರೋ ಮಾಡಿದ್ರು. ನನ್ನ ಅವರಪ್ಪ ಮಾಡಿದ್ರು. ನನ್ನ ಹೆಂಡತಿಯಾಗಿ ಸತ್ಯಭಾಮ ಮಾಡಿದ್ರು. ಆ ಇಡೀ ಚಿತ್ರಕ್ಕೆ ನನ್ನ ಸಂಭಾವನೆ 5000ರೂಪಾಯಿ.ಮುಂದುವರೆಯುವುದು…

112 views