ಗೋಕಾಕ್‌ ಚಳುವಳಿಯಲ್ಲಿ ಬಸ್‌ ಡ್ರೈವರ್ ಆದ ಶಂಕರ್‌ ನಾಗ್

ದೊರೆ-ಭಗವಾನ್‌ ಲೈಫ್ ಸ್ಟೋರಿ - ಭಾಗ 99


(ಎಸ್.ಕೆ ಭಗವಾನ್‌ ಅವರ ನಿರೂಪಣೆಯಲ್ಲಿ)‌
ರಾಜ್‌ಕುಮಾರ್‌ ಅವರು ಮದ್ರಾಸ್ ನಿಂದ ಸೀದಾ ಬೆಂಗಳೂರಿಗೆ ಬಂದರು. ಗೋಕಾಕ್ ಚಳವಳಿಯಲ್ಲಿ ಭಾಗವಹಿಸುವಂತೆ ಕಲಾವಿದರೆಲ್ಲರಿಗೂ ಹೇಳಿದರು. ಶಂಕರ್‌ನಾಗ್‌, ಅನಂತ್‌ನಾಗ್‌, ವಿಷ್ಣುವರ್ಧನ್‌, ಅಂಬರೀಷ್‌, ಲೋಕೇಶ್‌, ಲೀಲಾವತಿ, ಹೇಮಾಚೌಧರಿ, ಅಶೋಕ್‌... ಹೀಗೆ ಸಂಘದ ಸದಸ್ಯರೆಲ್ಲರೂ ಸೇರಿಕೊಂಡರು. ಇಡೀ ಕರ್ನಾಟಕ ಸುತ್ತಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಜ್‌ಕುಮಾರ್‌ ಹೇಳಿದರು. ಮೈಸೂರು ಸರ್ಕಲ್‌ನಿಂದ ಚಳವಳಿ ಪ್ರಾರಂಭಿಸಿದೆವು. ಒಂದು ಬಸ್‌ನಲ್ಲಿ ನಾವು 30 ಜನ ಕುಳಿತುಕೊಂಡು ನೀರಿನ ಟ್ಯಾಂಕ್‌ ಎಲ್ಲ ಇಟ್ಟುಕೊಂಡು, ಒಟ್ಟು 27 ದಿವಸ ಇಡೀ ಕರ್ನಾಟಕ ಸುತ್ತಿ ವಾಪಸ್‌ ಬೆಂಗಳೂರಿಗೆ ಬಂದೆವು. ಊಟ, ತಿಂಡಿ, ನಿದ್ದೆ ಯಾವುದು ಸರಿಯಾಗಿ ಇರಲಿಲ್ಲ. ಇಷ್ಟೊಂದು ಜನ ಕಲಾವಿದರು ಬರುತ್ತಾರೆ ಎಂದ ಮೇಲೆ ಕೇಳಬೇಕಾ? ಸಾವಿರಾರು ಜನ ಸೇರುತ್ತಿದ್ದರು. ಹಳ್ಳಿಗಳಲ್ಲಿ ಐದಾರು ಸಾವಿರ ಜನ ಸೇರಿದ್ರೆ, ಪಟ್ಟಣಗಳಲ್ಲಿ 15 ಸಾವಿರದವರೆಗೆ ಜನ ಸೇರುತ್ತಿದ್ದರು. ಡ್ರೈವರ್‌ ಸುಸ್ತಾಗುತ್ತಿದ್ದರಿಂದ ಆತನಿಗೆ ಬಿಡುವು ನೀಡಿ, ಶಂಕರ್‌ನಾಗ್‌ ಬಸ್‌ ಓಡಿಸುತ್ತಿದ್ದರು. ಅವನಿಗೆ ಬೇಜಾರು ಆದಾಗ ನಾನು ಓಡಿಸುತ್ತಿದ್ದೆ. ಜನಪ್ರಿಯ ಕಲಾವಿದರ ಭಾಷಣ ಕೇಳಲು ಜನರ ಕಾಯುತ್ತಿದ್ದರು. ಕನ್ನಡ ಚಳವಳಿಗೆ ದೊಡ್ಡ ಶಕ್ತಿ ಬಂತು. ಕೊನೆಗೆ ಸರ್ಕಾರ ಆ ಚಳವಳಿಗೆ ಮಣಿಯಿತು.ಮುಂದುವರೆಯುವುದು...

17 views