ಗುಡಿಸಲು ಮನೆಯ ಹುಡುಗ ಬದುಕು ಕಟ್ಟಿಕೊಂಡ ಕಥೆ

ಹಿರಿಯ ಕಲಾವಿದ ಬ್ಯಾಂಕ್ ಜನಾರ್ಧನ್ ಅವರ ಲೈಫ್ ಸ್ಟೋರಿ

ಭಾಗ-2ಎಸ್‌.ಎಸ್.ಎಲ್.ಸಿ ಪಾಸ್ ಆದ್ಮೇಲೆ ಕೆಲಸ ಇಲ್ಲ. ಬಹಳ ಬಡತನ. ನಮ್ಮ ತಂದೆ ಅವರು ಜೀಪ್ ಡ್ರೈವರ್ ಆಗಿದ್ರು. ನಾನು ಎಸ್.ಎಸ್.ಎಲ್.ಸಿ ಬರೋದ್ರೊಳಗೆ ಅವರಿಗೆ ರಿಟಾಯರ್ಡ್ ಆಗೋಯ್ತು. ಬಹಳ ಬಡತನದ ಜೀವನದಲ್ಲಿದ್ವಿ. ನಾವು ಕಡ್ಡಿ ಗುಡಿಸಲಲ್ಲಿದ್ವಿ. ರಿಟಾಯರ್ಡ್ ಆದ್ಮೇಲೆ ಸಂಬಳ ಇಲ್ಲ. ಆಗ ಇನ್ನೂ ಬ್ರಿಟೀಶರ ಕಾಲ ನಮ್ಮ ತಂದೆಯವರು ಕೆಲಸಕ್ಕೆ ಸೇರ್ದಾಗ. ಪೆನ್ಶನ್ ಎಲ್ಲಾ ಬರೋದು ಬಹಳ ಲೇಟ್. ಅಲ್ಲಿಂದ ಒಂದು ಮೂರು ನಾಲ್ಕು ವರ್ಷ ಬಹಳ ಕಷ್ಟ ಆಯ್ತು. ಊಟಕ್ಕೂ ತೊಂದರೆ ಅನ್ನೋವಂತಹ ಪರಿಸ್ಥಿತಿ ಉಂಟಾಗಿತ್ತು. ಅವಾಗ ನಮ್ಮ ತಾಯಿಯವರು ಕೂಲಿ ಕೆಲಸಕ್ಕೆ ಹೋಗ್ತಾ ಇದ್ರು. ಕಳೆ ಕೀಳೋದು, ಕಡಲೇಕಾಯಿ ಹಾಸೋದು ಇಂತಹ ಕೆಲಸಗಳಿಗೆ ಹೊಗ್ತಾ ಇದ್ರು. ಆಗ ನಾನೂ ಅವರ ಜೊತೆ ಹೋಗ್ತಾ ಇದ್ದೆ. ಬದುಕು ನಡಿಬೇಕಲ್ವಾ? ನಾನೂ ನಮ್ಮ ತಾಯಿ ಜೊತೆ ತೋಟಕ್ಕೆ ಹೋಗಿ ತೆಂಗಿನ ಕಾಯಿ ಎಲ್ಲಾ ಹಾಸೊದು, ಎಲ್ಲಾ ತಂದು ಗುಡ್ಡೆ ಹಾಕೊದು ಈ ತರದ ಕೂಲಿ ಕೆಲಸಕ್ಕೆಲ್ಲಾ ಹೋಗ್ತಾ ಇದ್ದೆ. ಒಂದು ಮೂರು ನಾಲ್ಕು ವರ್ಷ ಹೀಗೇ ನಡೀತು.


ನಮ್ಮ ಹೊಳಲ್ಕೆರೆಯಲ್ಲಿ ಶಂಕರ್ ಶೆಟ್ಟಿ ಅಂತ ಇದ್ದಾರೆ. ಅವರು ಫೇಮಸ್ ಡಾಕ್ಟರ್. ಅವರ ತೋಟಕ್ಕೆ ಕೆಲಸಕ್ಕೆ ಹೋಗ್ತಾ ಇದ್ದೆ ನಾನು. ಅವಾಗ ವಾರಕ್ಕೊಂದ್ಸಲ ಕೂಲಿ ಕೊಡೋದು. ಅವರದ್ದು ಒಂದು ಕ್ಲಿನಿಕ್ ಇತ್ತು. ನಾವು ವಾರಕ್ಕೊಂದು ದಿವ್ಸ ಕೂಲಿ ತಗೊಂಡು, ಚೀಲ ಹಿಡ್ಕೊಂಡು, ಸಂತೆ ಮಾಡ್ಕೊಂಡು ಮನೆಗೆ ಹೋಗ್ಬೇಕು. ಹಾಗಾಗಿ ಪ್ರತೀ ವಾರ ನಾನು ಅವರ ಕ್ಲಿನಿಕ್‍ಗೆ ಹೋಗಿ ಕೂಲಿ ಇಸ್ಕೊಂಡು ಸಂತೆ ಮಾಡ್ಕೊಂಡು ಮನೆಗೆ ಬರ್ತಾ ಇದ್ದೆ. ಯಾವತ್ತೋ ಒಂದು ದಿವ್ಸ ಮೇಸ್ತ್ರಿ ಹತ್ರ ಅವರು ಕೇಳಿದ್ರು “ಇವನು ಏನು ಮಾಡಕ್ಕೆ ಬರ್ತಾನೆ?” ಅಂತ. “ಇಲ್ಲ ಸಾರ್ ತೋಟದಲ್ಲಿ ತೆಂಗಿನ ಕಾಯಿ ಹಾಸಕ್ಕೆ ಬರ್ತಾನೆ” ಅಂದ್ರು. “ಎಸ್.ಎಸ್.ಎಲ್.ಸಿ ಏನಾಯ್ತು?” ಅಂತ ಕೇಳಿದ್ರು. “ಮೊದಲನೇ ಸಲ ಫೇಲ್ ಆದೆ. ಎರಡನೇ ಸಲಕ್ಕೆ ಪಾಸ್ ಮಾಡಿದ್ದೀನಿ” ಅಂತ ಹೇಳ್ದೆ. “ಹೌದಾ? ಸರಿ ನಾಳೆ ಬೆಳಗ್ಗೆ ಬಂದು ಮನೆಯಲ್ಲಿ ಕಾಣು” ಅಂದ್ರು. ಏನೋ ತೋಟದಲ್ಲಿ ಕೆಲ್ಸ ಹೇಳ್ತಾರೇನೋ ಅಂತ ಮಾರನೇ ದಿವ್ಸ ಬೆಳಗ್ಗೆ ಅವರ ಮನೆ ಹತ್ರ ಹೋದೆ.


ಅವರು ನನ್ನ ಕರ್ಕೊಂಡೋಗಿ ಅಲ್ಲಿ ಮೊದಲು ಜಯಲಕ್ಷ್ಮೀ ಬ್ಯಾಂಕ್ ಅಂತ ಇತ್ತು. ಆ ಜಯಲಕ್ಷ್ಮೀ ಬ್ಯಾಂಕ್‍ಗೆ ನನ್ನನ್ನ ಜವಾನನಾಗಿ ಕೆಲಸಕ್ಕೆ ಸೇರ್ಸಿದ್ರು. ಅವಾಗ ನಂಗೆ ಸಂಬಳ ಐವತ್ತು ರೂಪಾಯಿ 1965 ರಲ್ಲಿ. ನಂತರ ಸ್ವಲ್ಪ ತಲೆ ಎತ್ತಿ ನಡೆಯೋ ಹಾಗಾಯ್ತು. ಯಾಕಂದ್ರೆ ತಿಂಗ್ಳಿಗೆ ಐವತ್ತು ರೂಪಾಯಿ ಬರುತ್ತೆ ಅಂತ ಗ್ಯಾರೆಂಟಿ ಆಯ್ತಲ್ಲಾ? ಬ್ಯಾಂಕಲ್ಲಿ ಕೆಲ್ಸ ಐವತ್ತು ರೂಪಾಯಿ ಸಿಗುತ್ತಲ್ಲಾ ಅಂತ. ಆಗಿನ ಕಾಲದಲ್ಲಿ ಐವತ್ತು ರೂಪಾಯಿ ಅಂದ್ರೆ ಬಹಳ ಹೆಚ್ಚು. ಐವತ್ತು ರೂಪಾಯಿ ತಿಂಗಳಾಗುವಾಗ ಸಿಗುತ್ತೆ, ಪ್ರತೀ ದಿನಕ್ಕೆ ಏನು ಮಾಡ್ಬೇಕು ಅಂತ ರಜೆ ಇದ್ದಾಗ ಕೂಲಿ ಕೆಲ್ಸಕ್ಕೆ ಹೋಗ್ತಾ ಇದ್ದೆ. ಶನಿವಾರ ಮಧ್ಯಾಹ್ನದ ನಂತರ ಹಾಗೂ ಭಾನುವಾರ ಫುಲ್ ಹೋಗ್ತಾ ಇದ್ದೆ. ಆಮೇಲೆ ಯಾವಾಗ ಬ್ಯಾಂಕಲ್ಲಿ ಇಂಪ್ರೂಮೆಂಟ್ ಆಗ್ತಾ ಸಂಬಳ ಜಾಸ್ತಿ ಆಗ್ತಾ ಬಂತು.ಮುಂದುವರೆಯುವುದು…

21 views