“ಗೋರಿ ಪಾಳ್ಯದಲ್ಲಿ ಡಿಸಿಪಿ ಮೇಲೆ ಆಸಿಡ್‌ ದಾಳಿಗೆ ಶರ್ಟ್‌ ಚಿಂದಿ ಆಗಿಹೋಗಿತ್ತು”

ನಿವೃತ್ತ ಪೋಲಿಸ್‌ ಅಧಿಕಾರಿ ಬಿ.ಕೆ ಶಿವರಾಂ ಅವರ ಪೋಲಿಸ್‌ ಅನುಭವಗಳು ಭಾಗ 11


ಯಾವುದಾದರೂ ಗಲಭೆ ಕೈ ಮೀರಿ ಹೋದಾಗ, ಗಲಭೆ ಕೋರರನ್ನು ನಿಯಂತ್ರಣ ಮಾಡಲು ತುಂಬಾ ಕಷ್ಟ ಆಗುತ್ತದೆ ಎಂಬ ಸಂದರ್ಭದಲ್ಲಿ ಕರ್ಫ್ಯೂ ಜಾರಿ ಮಾಡ್ತಾರೆ. ಕರ್ಫ್ಯೂ ಎಂದರೆ ಕಂಡಲ್ಲಿ ಗುಂಡು ಎಂಬ ಭಾವನೆ ಜನ ಸಾಮಾನ್ಯರಲ್ಲಿದೆ. ಸಮಾಜದಲ್ಲಿ ಕಾನೂನಿನ ಅರಿವಿಲ್ಲದೇ ಇರುವವರು ಅದನ್ನು ಬೇರೆ ಬೇರೆ ರೀತಿಯಾಗಿ ವ್ಯಾಖ್ಯಾನ ಮಾಡ್ತಾರೆ. ಜಿಲ್ಲಾ ಪ್ರದೇಶದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌, ಬೆಂಗಳೂರು ನಗರದಲ್ಲಿ ಜಿಲ್ಲಾಧಿಕಾರಿಯ ಅಧಿಕಾರವನ್ನು ಪೊಲೀಸ್‌ಕಮಿಷನರ್‌ಗೆ ಕೊಟ್ಟಿರುತ್ತಾರೆ. ಸಂವಿಧಾನದತ್ತವಾಗಿಯೇ ಅವರಿಗೆ ಜಿಲ್ಲಾಧಿಕಾರಿಯ ಅಧಿಕಾರ ಬಂದಿರುತ್ತದೆ. ಅವರು ಕರ್ಫ್ಯೂ ಜಾರಿ ಮಾಡಬಹುದು. ಈ ಕೋಮು ಗಲಭೆಗಳನ್ನು ತುಂಬಾ ಬೇಗ ನಿಯಂತ್ರಣ ಮಾಡುವುದು ಬಹಳ ಕಷ್ಟ. ಪೊಲೀಸರ ಸೇವಾ ಅವಧಿಯಲ್ಲಿ ಕೋಮು ಗಲಭೆ ಆಗಲೇಬಾರದು ಎಂದು ಎಲ್ಲರೂ ಬಯಸುತ್ತಾರೆ. ಯಾಕಂದ್ರೆ, ಇಡೀ ಪೊಲೀಸ್‌ ವ್ಯವಸ್ಥೆ ಹೈರಾಣ ಆಗಿಬಿಡುತ್ತದೆ.


ನಾನು ಸೇವೆಗೆ ಸೇರಿದಾಗ ಹಲವಾರು ಇಂಥ ಗಲಭೆಗಳು ಬೆಂಗಳೂರು ನಗರದಲ್ಲಿ ನಡೆದಿವೆ. ಇಂದಿರಾ ಗಾಂಧಿ ಅವರು ದಸ್ತಗಿರಿ ಆದಾಗ 79ರಲ್ಲಿ ದೊಡ್ಡ ಕೋಮುಗಲಭೆ ನಡೆಯಿತು. ಎಷ್ಟು ಗಂಭೀರವಾಗಿತ್ತು ಅಂದ್ರೆ, ಗಲಭೆಕೋರರು ಇಷ್ಟೊಂದು ತಯಾರಿ ಮಾಡಿಕೊಂಡಿರುತ್ತಾರಾ ಎಂದು ಆಶ್ಚರ್ಯ ಆಗಿಬಿಡುತ್ತದೆ. ಕೋಮುಗಲಭೆ ಸಂದರ್ಭದಲ್ಲಿ ಪೊಲೀಸರಿಗೆ ಹಾಕಿದ ಶೂಗಳನ್ನು ಎರಡು– ಮೂರು ದಿನಗಳವರೆಗೆ ಬದಲಾಯಿಸಲು ಸಮಯ ಇರೋದಿಲ್ಲ. ಆ ಮಟ್ಟಿಗೆ ಕರ್ತವ್ಯ ನಿರತರಾಗಿರುತ್ತಾರೆ. ನಾನು ಎಂಟು ಗಂಟೆ ಡ್ಯೂಟಿ ಮಾಡಿದ್ದೇನೆ, ಮನೆಗೆ ಹೋಗಬೇಕು ಎಂದು ಹೇಳಲು ಆಗುವುದಿಲ್ಲ. ತಿಂಡಿ, ಊಟ ಬಂದಿಲ್ಲ ಎಂದು ಹೇಳಲು ಆಗುವುದಿಲ್ಲ. ಅಂತಹ ‍‍ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ರಾಜ್‌ಕುಮಾರ್‌ ಅವರು ನಿಧನರಾಗಿದ್ದಂತಹ ಸಂದರ್ಭದಲ್ಲಿಯೂ ಗಲಭೆ ನಡೆಯಿತು. ಕೆಲವೊಮ್ಮೆ ಕ್ಷುಲಕ ಕಾರಣಕ್ಕೆ ಗಲಭೆಗಳಾಗುತ್ತವೆ.ಜೆ.ಜೆ ನಗರದಲ್ಲಿ ಇದ್ದಕ್ಕಿದ್ದಂತೆ ಕೋಮು ಗಲಭೆ ಪ್ರಾರಂಭವಾಯಿತು. ಕ್ಷುಲ್ಲಕ ಕಾರಣಕ್ಕೆ ಕೋಮು ಗಲಭೆ ನಡೆಯಿತು. ನಿಯಂತ್ರಣಕ್ಕೆ ಬರಲಿಲ್ಲ. ಅದು ಪ್ರಕ್ಷುಬ್ಧ ಪ್ರದೇಶ. ಅಲ್ಲಿ ಮರದ ಬಾಗಿಲಿನ ಒಂದು ಮನೆಯೂ ಇಲ್ಲ. ಎಲ್ಲರೂ, ಕಬ್ಬಿಣದ ದಪ್ಪದ ಶೀಟ್‌ಗಳಲ್ಲಿ ಬಾಗಿಲು ಮಾಡಿಕೊಂಡಿರುತ್ತಾರೆ. ಇಲ್ಲವೇ ಗ್ರಿಲ್ಸ್‌ ಹಾಕಿಸಿರುತ್ತಾರೆ. ಬಾಗಿಲು ಒಡೆದು ಯಾರೂ ಒಳಗೆ ಬರಬಾರದು ಎಂಬ ಉದ್ದೇಶದಿಂದ ಹಾಗೆ ಮಾಡಿರುತ್ತಾರೆ. ಕೊಲ್ಯಾಪ್ಸ ಬಲ್‌ ಗೇಟ್‌ಗಳನ್ನು ಮುರಿದು ಹಾಕುತ್ತಾರೆ. ಅಂತಹ ರಾಕ್ಷಸ ಪ್ರವೃತ್ತಿಯವರೇ ಕೋಮು ಗಲಭೆಗೆ ಇಳಿಯುವುದು. ಇಷ್ಟೆಲ್ಲ ಮನೆಗೆ ಸುರಕ್ಷತೆ ಮಾಡುವ ಅರಿವು ಹೊಂದಿರುವ ಜನರಿಗೆ ಕೋಮು ಗಲಭೆಯನ್ನು ತಪ್ಪಿಸುವಂತಹ ಅರಿವು ಏಕೆ ಇಲ್ಲ ಎಂದು ನನಗೆ ಆಶ್ಚರ್ಯವಾಗುತ್ತಿತ್ತು. ಭಾವೈಕ್ಯದ ಬಗ್ಗೆ ಯಾರೂ ಅರಿವು ಮೂಡಿಸುವುದಿಲ್ಲವಾ ಅನಿಸುತ್ತಿತ್ತು. ಭಾವೈಕ್ಯದ ಬಗ್ಗೆ ಮಾತನಾಡುವವನು ಮೂರ್ಖ ಆಗಿ ಬಿಡುತ್ತಾನೆ. ಇಂಥ ಧರ್ಮದವರೇ ಕೋಮು ಗಲಭೆ ಮಾಡುತ್ತಾರೆ ಎಂದು ಹೇಳಲು ಬರುವುದಿಲ್ಲ.


2,000ನೇ ಇಸವಿ ಸಂದರ್ಭದಲ್ಲಿ ಜೆ.ಜೆ ನಗರದಲ್ಲಿ ದೊಡ್ಡ ಗಲಭೆ ನಡೆಯುತ್ತದೆ. ಅಲ್ಲಿ ಒಬ್ಬರ ಕೊಲೆಯೂ ನಡೆಯುತ್ತದೆ. ಛಬ್ಬಿಯವರು ಡಿಸಿಪಿ ಆಗಿದ್ದರು. ಸಾಂಗ್ಲಿಯಾನ ಅವರು ಬೆಂಗಳೂರು ನಗರದ ಕಮಿಷನರ್‌ ಆಗಿದ್ದರು. ಅವರು ಇರಲಿಲ್ಲ. ಇಸ್ರೇಲ್‌ಗೆ ಹೋಗಿದ್ದರು. ಗಾಂವ್‌ಕರ್‌ ಎನ್ನುವವರು ಅಡಿಷನಲ್‌ ಕಮಿಷನರ್‌ ಇನ್‌ಚಾರ್ಜ್‌ ಇದ್ರು. ಅಲ್ಲಿ ಕೋಮು ಗಲಭೆ ಇಡೀ ದಿನ ನಿಯಂತ್ರಣಕ್ಕೆ ಬರುವುದಿಲ್ಲ. ರಾತ್ರಿ ವೇಳೆ ಚೂರಿ ಇರಿತ, ಅಟ್ಟಾಡಿಸಿ ಕೊಂಡು ಬರುವುದು, ಬೆಂಕಿ... ಇವೆಲ್ಲ ಶುರುವಾಗುತ್ತದೆ. ಆ ಕ್ಷಣದಲ್ಲಿ ಕರ್ಫ್ಯೂ ಜಾರಿ ಮಾಡಿದರೇನೇ ಸರಿ ಹೋಗುತ್ತದೆ. ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು.


ಜೆ.ಜೆ ನಗರದಲ್ಲಿ ರ‍್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ ಬಂತು. ಪಥಸಂಚಲನ ಮಾಡಲಾಯಿತು. ಆದರೂ, ನಿಯಂತ್ರಣಕ್ಕೆ ಬಂದಿರಲಿಲ್ಲ. ಕರ್ಫ್ಯೂ ಜಾರಿಯಾದಾಗ ಒಂದು ದಿನ ಯಾರೂ ಓಡಾಡದ ಹಾಗೆ ಪೊಲೀಸರು ಮಾಡಿದ್ರು. ಬಹಳ ಶ್ರಮಪಟ್ಟು ಕೆಲಸ ಮಾಡಿದ್ರು. ಎರಡನೇ ದಿನವೂ ಕರ್ಫ್ಯೂ ಮುಂದುವರಿಯಿತು. ಆಗ ನಾವು ಗಸ್ತು ಮಾಡುತ್ತಿದೆವು. ಬೇರೆ, ಬೇರೆ ತಂಡವಾಗಿ ಪೊಲೀಸರು ಗಸ್ತು ಮಾಡುತ್ತಿದ್ವಿ. ನಾನು, ಅಶೋಕ್‌, ಡಿಸಿಪಿ ಛಬ್ಬಿ, ಅಡಿಷನಲ್‌ ಕಮಿಷನರ್‌ ಗಾಂವ್‌ಕರ್‌.. ಹೀಗೆ ಬೇರೆ, ಬೇರೆ ಪೊಲೀಸ್ ಅಧಿಕಾರಿಗಳು ಅಲ್ಲಲ್ಲಿ ಗಸ್ತು ಮಾಡುತ್ತಿದ್ರು. ಕರ್ಫ್ಯೂ ಆದೇಶವನ್ನು ಪೊಲೀಸ್‌ನವರು ಅನೌನ್ಸ್‌ ಮಾಡಿಕೊಂಡು ಹೋಗುತ್ತಿದ್ರು. ನಮ್ಮ ದೇಶ ಈ ಸ್ಥಿತಿಯಲ್ಲೂ ಇದಿಯಾ ಎಂದು ಅಲ್ಲಿ ಗಸ್ತು ಮಾಡಬೇಕಾದರೆ ನನಗೆ ಅನಿಸಿತು. ಒಳಚರಂಡಿ ವ್ಯವಸ್ಥೆ ಇರಲಿಲ್ಲ. ಗಲ್ಲಿಗಳು ಎಲ್ಲಿ ಮುಕ್ತಾಯವಾಗುತ್ತವೆಯೋ ಎನ್ನುವುದೇ ತಿಳಿಯಲ್ಲ. ಹೇಗೆ ಇಲ್ಲಿಯ ಜನ ಬದುಕು ನಡೆಸುತ್ತಾರೆ ಎಂದು ಆಶ್ಚರ್ಯವಾಗುತ್ತದೆ.


ಗಸ್ತು ಮಾಡಬೇಕಾದರೆ ಕಿಟಕಿಯಿಂದ ಮಕ್ಕಳು ಮಾತನಾಡಿಸುತ್ತಿದ್ರು. ಪೊಲೀಸ್‌ ಅಂಕಲ್‌, ಮಾಮಾ ಟಾಟಾ ಎನ್ನುತ್ತಿದ್ರು. ಹಕ್ಕಿಗಳನ್ನು ಪಂಜರದಲ್ಲಿ ಹಾಕಿ ಇಟ್ಟಾಗ ಅದು ತಪ್ಪಿಸಿಕೊಳ್ಳಲು ಪ್ರಯತ್ನಿಸುವಂತೆ ಕಾಣಿಸುತ್ತಿತ್ತು. ನನಗೆ ನಿಜಕ್ಕೂ ಬೇಸರವಾಯಿತು. ಧರ್ಮದ ಬಗ್ಗೆ ಕಿಂಚಿತ್ತೂ ಮಕ್ಕಳ ಮನಸ್ಸಿನಲ್ಲಿ ಇರುವುದಿಲ್ಲ. ಅವರಲ್ಲಿ ಬೇಧ, ಭಾವ ಇರುವುದಿಲ್ಲ. ಆ ಮಕ್ಕಳು ಸ್ವಚ್ಛಂದವಾಗಿ ಆಡಬೇಕು. ಕೋಮುಗಲಭೆ ಸಂದರ್ಭದಲ್ಲಿ ಸುಸ್ತಾಗಿ ಬಿಡುತ್ತೇವೆ ಎಂದು ಪೆಪ್ಪರ್‌ ಮೆಂಟ್‌ಗಳನ್ನು ಇಟ್ಟುಕೊಂಡಿರುತ್ತೇವೆ. ಬಾಯಲ್ಲಿ ಹಾಕಿಕೊಂಡ್ರೆ ಬಾಯಾರಿಕೆ ಆಗೊಲ್ಲ ಎನ್ನುವ ಕಾರಣಕ್ಕೆ. ನಾನಾಗ ಇನ್‌ಸ್ಪೆಕ್ಟರ್‌ ಆಗಿದ್ದೆ. ನನ್ನ ಜೊತೆ ಕೆಲಸ ಮಾಡುತ್ತಿದ್ದ ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ಯಾರ‍್ಯಾರ ಬಳಿ ಪೆಪ್ಪರ್‌ಮೆಂಟ್‌, ಚಾಕೊಲೆಟ್‌ ಇದೆ ಕೊಡ್ರಿ ಎಂದೆ. ನಾವು ಕೊಡಲು ನಿಂತಾಗ ಎಲ್ಲ ಮಕ್ಕಳು ಬಾಗಿಲು ಹಾಕಿಕೊಂಡ್ರು. ಅವರೆಲ್ಲ ನರ್ಸರಿಗೆ ಹೋಗುತ್ತಿದ್ದ ಚಿಕ್ಕ ಮಕ್ಕಳು. ನಾವು ಪೊಲೀಸ್‌ನವರು ಇಷ್ಟು ಭಯಂಕರವಾಗಿ ಇವರಿಗೆ ಕಾಣಿಸುತ್ತೀವಾ ಎಂದು ನನಗೆ ಬೇಸರವಾಯಿತು. ಬಾಗಿಲು ತೆಗೀರಿ ಎಂದೆ, ಅವರು ಬಾಗಿಲು ತೆಗೆಯಲು ಹೆದರಿಕೊಂಡ್ರು. ಧೈರ್ಯ ಹೇಳಿ ತೆಗೆಸಿದ್ವಿ. ಆಮೇಲೆ ಎಲ್ಲರಿಗೂ ಎರಡೆರಡು ಚಾಕೊಲೆಟ್‌ ಕೊಟ್ವಿ. ಆಮೇಲೆ ನಾವು ಗಸ್ತು ಮಾಡುವಾಗಲೆಲ್ಲ ಸೆಲ್ಯೂಟ್‌ ಮಾಡುತ್ತಿದ್ರು.


ಎರಡನೇ ದಿನ ಕರ್ಫ್ಯೂ ಮುಂದುವರಿದಾಗ, ಅಜ್ಜಿ ಒಂದು ಹೊರಗೆ ಬಂತು. ಕರ್ಫ್ಯೂ ಇದೆ ಓಡಾಡಬಾರದು, ಒಳಗೆ ಹೋಗಿ, ನೀವ್ಯಾಕೆ ಈಚೆ ಬರುತ್ತಿದ್ದೀರಾ ಎಂದು ಪೊಲೀಸ್‌ನವರು ಮೈಕ್‌ನಲ್ಲಿ ಹೇಳುತ್ತಿದ್ರು. ಆ ಅಜ್ಜಿ ಏನು ಕೇರ್‌ ಮಾಡಿಲ್ಲ. ಸೀದಾ ರಸ್ತೆಗೆ ಬಂದು ಪೊಲೀಸ್‌ನವರ ಕಡೆಗೇನೆ ನಡೆದುಕೊಂಡು ಬಂದ್ರು. ಮುಸ್ಲಿಂ ಸಮುದಾಯದ ಅಜ್ಜಿ ಅವರು, ‘ಬೇಟಾ ತುಮ್ಸೆ ಬಾತ್‌ ಕರ್‌ ನಾ ಹೇ’ ಅಂದ್ರು. ಈ ಪರಿಸ್ಥಿತಿಯಲ್ಲಿ ಯಾರಿಗಾದ್ರು ಆರೋಗ್ಯ ಕೆಟ್ಟು ಹೋಗಿದೆಯೇ ಅನಿಸಿತು. ಬೋಲಿಯೇ ಎಂದು ಹೇಳಿದೆ. ನಾನು ಮಾತಾಡಬೇಕು ಎಂದ್ರು. ಏನಪ್ಪ ಹೀಗೆ ಮಾಡಿ ಬಿಟ್ರೆ, ಆ ಮಕ್ಕಳಿಗೆ ನೀರಿಲ್ಲ, ಬಾಯಾರಿಕೆಯಲ್ಲಿ ಸತ್ತು ಹೋಗಿ ಬಿಡ್ತಾರೆ. ಹೊಟ್ಟೆ ಹಸಿವಿನಲ್ಲಿ ಸತ್ತು ಹೋಗ್ತಾರೆ. ನೀವು ಮಾಡಿರುವುದು ಸರೀನಾ ಅಂದ್ರು. ಗಲಾಟೆ ಆಗುತ್ತಿದೆ. ನೀವು ಗಲಾಟೆ ಮಾಡುವವರಿಗೆ ಹೇಳಬೇಕಲ್ವಾ ಅಂದೆ. ಅಷ್ಟೊತ್ತಿಗೆ ಐದಾರು ಅಜ್ಜಿಯಂದಿರು ಬಂದ್ರು.


ಅದರಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ್, ಕನ್ನಡ, ತೆಲುಗು, ತಮಿಳು... ಎಲ್ಲ ಭಾಷೆ, ಜನಾಂಗದ ಅಜ್ಜಿಯಂದಿರು ಇದ್ರು. ಭಾವೈಕ್ಯದ ಭಾರತ ಅಲ್ಲಿ ಕಾಣಿಸಿತು ನಮಗೆ. ಅಲ್ಲಿ ದ್ವೇಷ, ಅಸೂಯೆ ಯಾವುದೂ ಇರಲಿಲ್ಲ. ಎಲ್ಲರೂ ನಮ್ಮ ಹತ್ತಿರ ಬಂದು ಹಸಿವಿನ ಕಥೆ, ನೋವಿನ ಕಥೆ ಹೇಳುತ್ತಿದ್ರು. ನೀವು ಅಂಗಡಿಗಳನ್ನು ತೆರೆಸಬೇಕು. ಇಲ್ಲಂದ್ರೆ ಮಕ್ಕಳು ಹಾಲಿಲ್ಲದೇ ಸತ್ತು ಹೋಗಿ ಬಿಡ್ತಾರೆ. ಹಾಲಿನವನನ್ನು ತಡೆದಿಲ್ವಲ್ಲಾ ನಾವು ಅಂದ್ವಿ. ಅಲ್ಲೊಂದು ಕಾಕಾ ಅಂಗಡಿ ಇದೆ. ಅವನು ಇಲ್ವಲ್ಲ, ಓಡಿ ಹೋಗಿ ಬಿಟ್ಟಿದ್ದಾನೆ ಅಂದ್ರು.


ಆಗ ಆ ಅಜ್ಜಿ, ನಾನು ಮುಸಲ್ಮಾನ ಹಿರಿಯ ಮಹಿಳೆಯಾಗಿ ಮಾತಾಡುತ್ತೇನೆ. ಧರ್ಮ ನಮಗೆ ಏನೂ ಕೊಡುವುದಿಲ್ಲ. ನಾನು ಹಿಂದೂವಾಗಿ ಮಾತಾಡ್ತೇನೆ, ಕ್ರಿಶ್ಚಿಯನ್‌ ಆಗಿ ಮಾತಾಡ್ತೇವೆ ಎಂದು ಇನ್ನಿಬ್ಬರು ಮಾತು ಸೇರಿಸಿದ್ರು. ಧರ್ಮ ಮಗುವಿನ ಹಸಿವು, ಬಾಯಾರಿಕೆಯನ್ನು ನೀಗಿಸುವುದಿಲ್ಲ. ನಮಗೆ ಬೇಕಿರುವುದು ಊಟ, ನೀರು, ಮಕ್ಕಳಿಗೆ ಹಾಲು, ಮಲಗಲು ಜಾಗ ಅಂದ್ರು. ಈ ಗಂಡಸರು ಯಾರು ಕೋಮು ಗಲಭೆ ಮಾಡುತ್ತಿದ್ದಾರೋ ಅವರಿಗೆ ಕಂಡಲ್ಲಿ ಗುಂಡು ಹೊಡೆದು ನೀವು ಸಾಯಿಸಬೇಕು ಅಂದ್ರು. ಅವರಿಗೆ ಇದು ಗೊತ್ತಾಗುವುದಿಲ್ಲ ಮಾಡಿ ಓಡೋಗಿ ಬಿಡ್ತಾರೆ. ಒಬ್ಬ ಗಂಡಸು ಇಲ್ಲ ನೋಡಿ ನಮ್ಮ ಮನೆಯಲ್ಲಿ. ಎಲ್ಲಾ ಓಡೋಗಿ ಬಿಟ್ಟಿದ್ದಾರೆ ಅಂದ್ರು. ಹಸಿವಾಗುತ್ತಿದೆ ಎಂದು ಮಕ್ಕಳು ಅಳುವುದು ನಮಗೆ ಕೇಳಿಸುತ್ತಿತ್ತು. ನಾವೇನು ಮಾಡಬೇಕು ಅಂದ್ವಿ. ಅಂಗಡಿಯವನಿಗೆ ಬಾಗಿಲು ತೆಗಿಯಲು ಫೋನ್‌ ಮಾಡಿ ಹೇಳಿದ್ವಿ. ಅವನು ಆಗಲ್ಲ ಅಂದ. ಫೋನ್‌ ನಂಬರ್‌ ಕೊಡಿ ನಾವು ಮಾತಾಡ್ತೇನೆ ಅಂದೆ. ಫೋನ್‌ ಮಾಡಿದ್ರೆ, ನಾನು ಬರ್ತೇನೆ ಅವರು ಬರಬೇಕಲ್ಲ ಅಂದ. ಈ ಅಜ್ಜಿಯಂದಿರ ಬಳಿ ನೀವು ಬರಲ್ಲ ಅಂತಿದ್ದಾರೆ ಅಲ್ವಾ ಅಂದೆ. ಹೌದಪ್ಪ ಖಂಡಿತ ಬರಲ್ಲ ನಾವು. ಯಾಕೆ ಬರಲ್ಲ ಅಂದ್ರೆ ನಮ್ಮ ಹತ್ತಿರ ದುಡ್ಡಿಲ್ಲ. ಬೀಡಿಯ ಎಲೆ, ಬೀಡಿಯ ಕಾಂಟ್ರಾಕ್ಟ್‌ ಅಂಗಡಿ ತೆರೆಸಬೇಕು ನೀವು. ಊದುಬತ್ತಿಯ ಮಂಡಿ ಮಾಡಿಸಬೇಕು. ಅದೆಲ್ಲ ಕರ್ಫ್ಯೂ ಇದ್ದಾಗ ಹೇಗೆ ಓಪನ್‌ ಮಾಡಿಸಲು ಆಗುತ್ತೆ ಅಂದೆ. ನಿನಗೆ ಗೊತ್ತಾಗಲ್ಲಪ್ಪ, ಊದುಬತ್ತಿಯ ಕಚ್ಚಾ ವಸ್ತುಗಳನ್ನು ನಾವು ಉಜ್ಜಿ ಬತ್ತಿ ಮಾಡಿ ಕೊಡಬೇಕು ನಮ್ಮ ಕೈಗಳನ್ನು ನೋಡು. ಬತ್ತಿ ಮಾಡಿ, ಮಾಡಿ ಹೇಗಾಗಿದೆ. ಒಬ್ಬ ಗಂಡಸು ದುಡಿದು ನಮಗೆ ಕೊಡುವುದಿಲ್ಲ. ಮಕ್ಕಳನ್ನು ನಾವು ಸಾಕುತ್ತಿದ್ದೇವೆ. ಬತ್ತಿಗೆ ಕಡ್ಡಿ, ಅಂಟು ಅವನು ಕೊಟ್ರೆ, ಅದನ್ನು ಒಣಗಿಸಿ ಅವನಿಗೆ ನಾವು ಕೊಡುತ್ತೇವೆ. ಅವನು ದುಡ್ಡು ಕೊಡಬೇಕು. ಆಗ ನಾವಿಲ್ಲಿ ಹಾಲು ತೆಗೆದುಕೊಳ್ತೇವೆ. ಅವನಿಗೆ ಫೋನ್‌ ಮಾಡಿದ್ರೆ. ಈಗ್ಲೇ ದುಡ್ಡು ಕೊಡಲು ಆಗಲ್ಲ. ಅವರಿಗೆ ಕಚ್ಚಾವಸ್ತು ಕೊಡ್ತೇನೆ. ಅವರು ಬತ್ತಿ ಕೊಟ್ಟ ಮೇಲೆಯೇ ದುಡ್ಡು ಕೊಡಲು ಆಗುವುದು ಅಂದ. ಇಲ್ಲಪ್ಪ, ನೀನು ದುಡ್ಡು ಕೊಡು. ಆಮೇಲೆ ಅವರು ಕೆಲಸ ಮಾಡಿ ಕೊಡ್ತಾರೆ ಅಂದೆ. ಆಯ್ತು ಸರ್‌, ಅಂದ.


ಅಂಗಡಿಯಲ್ಲಿ ತಿನ್ನುವ ಪದಾರ್ಥಗಳು ಏನು ಉಳಿದಿರಲಿಲ್ಲ. ಬಿಸ್ಕತ್, ಚಾಕೊಲೆಟ್‌, ಬಾಳೆಹಣ್ಣು ಎಲ್ಲವೂ ಖಾಲಿ ಆಗಿತ್ತು. ನೋಡಪ್ಪ, ನಾನು ಅವನು ಕೊಡುವ ಕಚ್ಚಾ ಸಾಮಗ್ರಿಯಲ್ಲಿ ಬತ್ತಿ ಮಾಡಿ ಕೊಡಬೇಕು. ಅವನು ಕೊಟ್ಟ ದುಡ್ಡಿನಲ್ಲಿ ಹಾಲು ತರಬೇಕು. ಅಂಗಡಿಯಲ್ಲಿ ಎಲ್ಲವೂ ಖಾಲಿ ಆಗಿರುವುದರಿಂದ ನನ್ನ ಮಕ್ಕಳ ಪರಿಸ್ಥಿತಿ ಏನು ಅಂದ್ರು ಅಜ್ಜಿ. ಈಗ ಏನು ಮಾಡಬೇಕು ಅಂದೆ. ಬರೀ ಹಾಲು ಓಪನ್‌ ಮಾಡಿಸಿದ್ರೆ ಆಗಲ್ಲ ಅಂಗಡಿಯನ್ನೇ ತೆರೆಸಬೇಕು ಅಂದ್ರು. ಅಕ್ಕಿ, ಬೇಳೆ, ಎಲ್ಲವೂ ಬೇಕು. ಅವತ್ತಿಂದು ಅವತ್ತೇ ದುಡಿದು ತಿನ್ನುವವರು ಅವರು. ಎರಡು ದಿವಸ ಅಷ್ಟೇ, ಮೂರನೇ ದಿನಕ್ಕೆ ಅವರ ಬಳಿ ಏನೂ ಇರುವುದಿಲ್ಲ. ಇದು ಎಲ್ಲ ಧರ್ಮ, ಜಾತಿಯ ಬಡವರ ಸ್ಥಿತಿ. ಎಲ್ಲ ಇರುವ, ಹೊಟ್ಟೆ ತುಂಬಿದ ದುರಂಹಕಾರಿಗಳು ಮಾತ್ರವೇ ಕೋಮು ಗಲಭೆ ಮಾಡ್ತಾರೆ.


ಅಂಗಡಿ ತೆರೆಯುವಂತೆ ಹೇಳಿದ್ರೆ ಅವನು ಎಲ್ಲ ಖಾಲಿ ಆಗಿದೆ ಸರ್‌. ನನಗೆ ಮಂಡಿಯಿಂದ ಸಾಮಗ್ರಿ ತರಲು ಕರ್ಫ್ಯೂ ಪಾಸ್‌ ಕೊಡ್ತಾರ ಸರ್‌, ನನಗೆ ಹೊಡೆದು ಸಾಯಿಸ್ತಾರೆ ಅಂದ. ಆಮೇಲೆ ಅವನಿಗೊಂದು ಪೊಲೀಸ್ ಪಾಸ್‌ ಕೊಟ್ಟು, ಅಂಗಡಿ ತೆರೆಸಿದರೆ, ಅಂಗಡಿ ಮುಂದೆ ನೂರಾರು ಜನ ಬಂದು ಬಿಟ್ರು. ನನಗೆ ವೈರ್‌ಲೇಸ್‌ ಮೆಸೇಜ್‌ ಬಂತು. ಕರ್ಫ್ಯೂ ಇರುವಾಗ ಜನ ಸೇರಿದ್ದಾರೆ, ಯಾರು ಅಲ್ಲಿಯ ಅಧಿಕಾರಿ, ಅವರನ್ನು ಸಸ್ಪೆಂಡ್‌ ಮಾಡುತ್ತೀವಿ ಅಂಥ ಹೇಳಿ ಅಂದ್ರು. ಕಡೆಗೆ ನಾನೇ ಪರ್ಮಿಷನ್‌ ಕೊಟ್ಟಿದ್ದು ಅಂದೆ. ನೀವ್ಯಾರು ಪರ್ಮಿಷನ್‌ ಕೊಡಲು ಅಂಥ ಕಂಟ್ರೊಲ್‌ ರೂಂ ನವರು ಕೇಳಿದ್ರು. ಅಲ್ಲಿ 100ಕ್ಕೂ ಹೆಚ್ಚು ಜನ ಸೇರಿದ್ದಾರೆ. ಅಲ್ಲಿ ಹೆಚ್ಚುಕಮ್ಮಿ ಆದ್ರೆ ನೀವೆ ಜವಾಬ್ದಾರಿ ಅಂದ್ರು. ನಾನು ಡಿಸಿಪಿ ಅವರ ಬಳಿ ಮಾತಾಡಿ, ಸರ್‌, ಪರಿಸ್ಥಿತಿ ಹೀಗಿದೆ. ನಾನು ಅದಕ್ಕಾಗಿ ಅಂಗಡಿ ತೆರೆಸಿದೆ. ಇಲ್ಲದಿದ್ರೆ ಆ ಮಕ್ಕಳನ್ನು ನಾವೇ ನೋಡಬೇಕಾಗುತ್ತದೆ ಅಂದೆ.


ಡಿಸಿಪಿ ಛಬ್ಬಿ ಅವರ ಮೇಲೆ ಅದೇ ಕೋಮು ಗಲಭೆಯಲ್ಲಿ ದಾಳಿ ನಡೆದಿತ್ತು. ಅವರ ಮೇಲೆ ಆ್ಯಸಿಡ್‌ ಬಾಟಲಿ ಬಿಸಾಕಿದ್ದರು. ಅವರಿಗೆ ಅದು ಆ್ಯಸಿಡ್‌ ಬಾಟಲ್‌ ಅಂತಾ ಗೊತ್ತೇ ಇರಲಿಲ್ಲ. ಅದು ಡೈಲೂಟೆಡ್‌ ಆ್ಯಸಿಡ್‌ ಅಂಥ ಕಾಣುತ್ತದೆ. ರಾತ್ರಿಯೆಲ್ಲ ಕೆಲಸ ಮಾಡಿದ್ದಾರೆ. ಬೆಳಿಗ್ಗೆ ಹೋಗಿ ಬಟ್ಟೆಯನ್ನು ನೀರಿನಲ್ಲಿ ಹಾಕಿದಾಗ ಇಡೀ ಬಟ್ಟೆ ತೂತಾಗಿ ಹೋಗಿತ್ತು. ಅವರಿಗೆ ಎಷ್ಟು ಕೋಪ ಇರಬೇಕು. ಆದರೆ, ಆ ವೇಳೆ ಅವರು ಹೇಳಿದ್ದು, ನೀವು ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮ ನಿಲುವನ್ನು ಪ್ರಶಂಸಿಸುತ್ತೇನೆ. ನಿಮ್ಮ ಪರವಾಗಿ ನಾನು ಮಾತಾಡ್ತೇನೆ. ಅಲ್ಲಿ ಗಲಭೆಯಾಗದ ಹಾಗೆ ನೋಡಿ. ಬರೀ ಹೆಂಗಸರು ಮತ್ತು ಮಕ್ಕಳು ಅವರವರಿಗೆ ಬೇಕಾದ ಸಾಮಗ್ರಿ ತೆಗೆದುಕೊಂಡ್ರು. ಅಂಗಡಿಯವನಿಗೆ,ದಯಮಾಡಿ ನಾವು ರಕ್ಷಣೆ ಕೊಡುತ್ತೇವೆ. ಅಗತ್ಯ ಸಾಮಗ್ರಿ ತೆಗೆದುಕೊಂಡು ಬಾ ಅಂದ್ವಿ. ಈ ಪ್ರಕರಣದ ಕೊಂಡಿ ನೋಡಿ. ಒಂದು ಕೊಂಡಿ ತಪ್ಪಿ ಹೋದರೂ, ಬಡವನ ಬದುಕು ಮೂರಾಬಟ್ಟೆಯಾಗುತ್ತದೆ.


ಇದು ಕೋಮುಗಲಭೆಯಲ್ಲಿ ಹೈರಾಣವಾಗುವ ಪರಿಸ್ಥಿತಿ. ಪೊಲೀಸರು ಸ್ವಲ್ಪ ದುಡುಕಿದರೂ, ಮಕ್ಕಳು ಹಸಿವಿನಲ್ಲಿ ಸತ್ತು ಹೋಗ್ತಾರೆ. ನಾನು ಪರ್ಮಿಷನ್‌ ಕೊಟ್ಟಾಗ, ಯಾವ್ಯಾವ ಅಜ್ಜಿಯಂದಿರು ನಮ್ಮ ಬಳಿ ಬಂದು ಕೇಳಿದ್ರಲ್ಲಾ ಅವರೆಲ್ಲ ಬಂದು ಆಶೀರ್ವಾದ ಮಾಡಿ, ಒಳ್ಳೆಯದಾಗಲಿ ಎಂದು ಹೇಳಿದ್ರು. ಬಡವರಿಗಿರುವ ಹೃದಯ ಶ್ರೀಮಂತಿಕೆ. ಶ್ರೀಮಂತಿಗರಿಗೆ ಇರುವುದಿಲ್ಲ. ನಾವು ಊಟ, ತಿಂಡಿಯ ವ್ಯವಸ್ಥೆ ಮಾಡಿಕೊಂಡಿದ್ವಿ. ಆದರೂ, ಆ ಅಜ್ಜಿ ಕೇಳಿದ್ರು. ನೀವು ಇಷ್ಟೆಲ್ಲಾ ಮಾಡಿದ್ದೀರಾ, ನಾವು ಒಂದು ಟೀ ಮಾಡಿಕೊಡ್ತೇವೆ ಕುಡಿತೀಯಾ ಅಂದ್ರು. ಆ ಬಡ ಪರಿಸ್ಥಿತಿಯಲ್ಲೂ ಅವರ ಹೃದಯ ಶ್ರೀಮಂತಿಕೆ ನೋಡಿ. ಕೆಟ್ಟದಾಗಿ ಆಲೋಚನೆ ಮಾಡುವವರಿಗೆ ಮಾತ್ರವೇ ಕೋಮು ಗಲಭೆ ಬೇಕಿರುವುದು. ಮಾನವೀಯತೆ ಬಗ್ಗೆ ಯೋಚಿಸುವವನಿಗೆ ಕೋಮು ಗಲಭೆ ಬೇಡವೇ ಬೇಡ. ಇದು ಕೋಮುಗಲಭೆಯ ಒಂದು ಭಾಗ.


ಮುಂದುವರೆಯುವುದು…

ಸಂದರ್ಶಕರು - ಕೆ.ಎಸ್. ಪರಮೇಶ್ವರ13 views