
“ಗಾಳಿಮಾತು ಕತೆ ಚೆನ್ನಾಗಿಲ್ಲ ಅಂತ ಸ್ಕ್ರಿಪ್ಟ್ಬಿಸಾಡಿದ್ದರು”
ದೊರೆ-ಭಗವಾನ್ ಲೈಫ್ ಸ್ಟೋರಿ - ಭಾಗ 16
(ಎಸ್.ಕೆ ಭಗವಾನ್ ಅವರ ನಿರೂಪಣೆಯಲ್ಲಿ)
ಚಂದನದ ಗೊಂಬೆಯನ್ನು ಮೈಸೂರು ಹತ್ತಿರ ಹಳ್ಳಿಯಲ್ಲಿ ಚಿತ್ರೀಕರಣ ಮಾಡಿದೆವು. ಸುಂದರ್ರಾಜ್ ಅವರನ್ನು ಆ ಸಿನಿಮಾದಲ್ಲಿ ಪರಿಚಯಿಸಿದೆವು. ಬಿ.ವಿ. ಕಾರಂತ ಅವರು ನನಗೆ ಒಳ್ಳೆಯ ಸ್ನೇಹಿತ. ಹಯವದನ ನಾಟಕ ನಡೆಯುತ್ತಿತ್ತು. ನೋಡಲು ಹೋಗಿದ್ದೆ. ಅದರಲ್ಲಿ ಎರಡು ಪಾತ್ರ ಬರುತ್ತದೆ. ಒಂದನ್ನು ನಾಗಾಭರಣ, ಇನ್ನೊಂದನ್ನು ಸುಂದರ್ರಾಜ್ ಮಾಡಿದ್ರು. ನನಗೆ ಚಂದನದ ಗೊಂಬೆಗೆ ಒಬ್ಬ ವಿಲನ್ ಬೇಕಿತ್ತು. ನಾಗಾಭರಣ ಅವರಿಗೆ ಚಂದನದ ಗೊಂಬೆ ಸಿನಿಮಾ ಮಾಡುತ್ತಿದ್ದೇವೆ. ಪಾತ್ರ ಮಾಡುತ್ತೀಯಾ ಎಂದು ಕೇಳಿದೆ. ಆಗಲ್ಲ ಸರ್, ತುಂಬಾ ನಾಟಕಗಳ ಕಮಿಟ್ಮೆಂಟ್ಸ್ ಇದೆ. ನಾಟಕ ಹೇಳಿಕೊಡುವುದರ ಜೊತೆಗೆ ಮಾಡುವುದು ಇದೆ. ಸಿನಿಮಾ ಆಗಲ್ಲ ಅಂದ. ಸುಂದರ್ರಾಜ್ನನ್ನು ಕೇಳಿದಾಗ ಆತ ಒಪ್ಪಿಕೊಂಡ. ತುಂಬಾ ಒಳ್ಳೆಯ ಪಾತ್ರ ಇತ್ತು ಅದರಲ್ಲಿ ಅವನಿಗೆ.
ಚಂದನದ ಗೊಂಬೆಯಲ್ಲಿ ರಜನೀಕಾಂತ್ ಅವರನ್ನು ವಿಲನ್ ಮಾಡಬೇಕೆಂದು ಯೋಚಿಸಿದೆವು. ಅವರಿಗೆ ಆ ಪುಸ್ತಕವನ್ನು ಕೊಟ್ಟಿದ್ವಿ. ರಾಯಪಟ್ಟ ಪೊಲೀಸ್ ಠಾಣೆಯ ಹಿಂದೆ ಅವರ ಚಿಕ್ಕ ಮನೆಯಿತ್ತು. ಇಷ್ಟು ಪ್ರವರ್ಧಮಾನಕ್ಕೆ ಅವರು ಬಂದಿರಲಿಲ್ಲ. ರಜನೀಕಾಂತ್ ಹಾಕಿಕೊಂಡು ಸಿನಿಮಾ ಮಾಡಬೇಕೆಂಬ ಆಸೆ ನನಗಿತ್ತು. ಆದ್ರೆ ನಾನು ಹೋಗಿ ಕೇಳಿದಾಗಲೆಲ್ಲ ನಾನಿನ್ನು ಓದಿಲ್ಲ, ಹೇಳುತ್ತೇನೆ ಅಂತಿದ್ರು. ಹೆಚ್ಚುಕಮ್ಮಿ ಒಂದು ತಿಂಗಳು ಅಲ್ಲಿ ಇದ್ದೆ. ಅಥವಾ ಕಥೆಯನ್ನು ಓದಿದ್ದು, ಇಷ್ಟವಾಗಿದ್ರು, ಗಿರಿಕನ್ಯೆ ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಹಾಗೆ ಹೇಳಿದ್ರೊ ಗೊತ್ತಿಲ್ಲ. ಯಾವುದೇ ಒಬ್ಬ ಮನುಷ್ಯನಿಗೆ ಕಹಿ ಘಟನೆ ನಡೆದ್ರೆ ಅದನ್ನು ಮರೆಯೋಕೆ ಆಗುವುದಿಲ್ಲ. ಸಿಹಿ ಘಟನೆಗಳನ್ನು ಬೇಕಾದ್ರೆ ಮರೆತುಬಿಡ್ತಾರೆ. ಒಂದು ತಿಂಗಳು ಅವರ ಮನೆಗೆ ಅಲೆಸಿದ್ರು. ಆಮೇಲೆ ಸಾಕಾಗಿ ನಾನು ಬಿಟ್ಟುಬಿಟ್ಟೆ.
ಲೋಕೇಶ್ ಅವರನ್ನು ಆ ಪಾತ್ರಕ್ಕೆ ಹಾಕಿಕೊಂಡೆ. ಬಹಳ ಒಳ್ಳೆಯ ಪಾತ್ರ ಅದು. ತರಾಸು ಅವರು ಬರೆಯುತ್ತಿದ್ದ ಪ್ರತಿಯೊಂದು ಕಥೆಯೂ ಹಾಗೆ ಇರುತ್ತಿತ್ತು. ಇದಾದ ಮೇಲೆ ‘ನಾನೊಬ್ಬ ಕಳ್ಳ’ ಸಿನಿಮಾ ಮಾಡಿದೆವು. ನಾವು ಅದನ್ನು ಪ್ರೊಡ್ಯೂಸ್ ಮಾಡಲಿಲ್ಲ. ನಿರ್ದೇಶನ ಮಾತ್ರ ಮಾಡಿದೆವು. ರಾಮನಾಥನ್ ಮತ್ತು ಶಿವರಾಂ ಅದರ ಪ್ರೊಡ್ಯೂಸರ್ಸ್. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹಿರಿಯರು ಶಿವರಾಂ. ಅವರು ಪ್ರತಿ ವರ್ಷ ಮೂರ್ನಾಲ್ಕು ಸಲ ಅಯ್ಯಪ್ಪ ಬೆಟ್ಟಕ್ಕೆ ಹೋಗಿ ಬರುತ್ತಾರೆ. ರಾಜ್ಕುಮಾರ್ ಅವರು ಹೇಗೆ ರಾಘವೇಂದ್ರ ಸ್ವಾಮಿಗಳ ಭಕ್ತರೋ ಅದರಂತೆ, ಶಿವರಾಂ ಅವರು ಅಯ್ಯಪ್ಪ ಸ್ವಾಮಿಯ ಪ್ರಿಯ ಭಕ್ತ.
ಮೂವತ್ತೈದು ದಿವಸಕ್ಕಿಂತ ಹೆಚ್ಚಾಗಿ ಯಾವ ಚಿತ್ರವನ್ನೂ ಶೂಟಿಂಗ್ ಮಾಡೇ ಇಲ್ಲ. ಹಾಡು, ಫೈಟಿಂಗ್ಎಲ್ಲ ಸೇರಿ 35 ದಿನಗಳೊಳಗೆ ಮುಗಿಸಿ ಬಿಡುತ್ತಿದ್ವಿ. ಅಷ್ಟು ಚೆನ್ನಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ವಿ. ಟೀಂ ವರ್ಕ್ ತುಂಬಾ ಚೆನ್ನಾಗಿತ್ತು. ನಮ್ಮ ಎಲ್ಲ ಸಿನಿಮಾಗಳಿಗೂ ರಾಮಣ್ಣ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ. ಭಾಗ್ಯ ದೇವತೆ ಸಿನಿಮಾ ತೆಗೆದಾಗ ಆತ ಪ್ರಕಾಶ್ ಸ್ಟುಡಿಯೊದಲ್ಲಿ ಫ್ಲೋರ್ ಮ್ಯಾನೇಜರ್ ಆಗಿದ್ದ. ಸಿನಿಮಾದ ಸೆಟ್ ಹಾಕಲು ಒಂದು ಫ್ಲೋರ್ ಬಿಟ್ಟು ಕೊಡಿ ಎಂದ್ರೆ, ಆಗಲ್ಲ, ಒಂದು ವಾರ ಬಿಟ್ಟು ಬನ್ನಿ ಆಮೇಲೆ ಕೊಡ್ತೇನೆ ಎಂದು ಹೇಳಿದ್ದ. ಪ್ರಕಾಶ್ ಸ್ಟುಡಿಯೊ ಮುಚ್ಚಿ ಹೋದ ಮೇಲೆ ಕೆಲಸ ಇರಲಿಲ್ಲ ಅವನಿಗೆ. ನಂತರ ನಮ್ಮ ಬಳಿ ಸೇರಿಕೊಂಡ. ನಿಮ್ಮ ಹೆಸರು ಹೇಳಿ ನಾನು ದೀಪ ಹಚ್ಚಬೇಕು ಸರ್.. ಅಂಥ ಈಗ್ಲೂ ಹೇಳ್ತಾನೆ. ಎಲ್ಲ ಸಿನಿಮಾಗಳಲ್ಲೂ ಡಾನ್ಸ್ ಡೈರೆಕ್ಟರ್ ಆಗಿ ಜಯರಾಂ ಇರುತ್ತಿದ್ದ. ಡಾನ್ಸ್ ಇಲ್ಲದೇ ಇದ್ರೂ, ಬರೀ ಹಾಡು ಇದ್ರು ಅವನು ಇರಲೇ ಬೇಕಿತ್ತು. ಕಲಾವಿದರ ನೃತ್ಯದ ಮಿತಿ ಅವನಿಗೆ ಗೊತ್ತಿರುತ್ತಿತ್ತು. ಯಾವ ಸ್ಟೆಪ್ ಹೇಳಿಕೊಟ್ರೆ ನಟ–ನಟಿಯರು ಮಾಡ್ತಾರೆ, ಮಾಡಲ್ಲ ಎಂಬ ಜ್ಞಾನ ಅವನಿಗಿತ್ತು. ಅವರ ಕೆಲಸಗಳಲ್ಲಿ ನಾವು ತಲೆ ಹಾಕುತ್ತಿರಲಿಲ್ಲ. ಚೆನ್ನಾಗಿರಲಿಲ್ಲ ಎಂದ್ರೆ ಬದಲಾಯಿಸು ಅಂತಿದ್ವಿ. ಆದ್ರೆ, ಮಧ್ಯೆ ತಲೆ ಹಾಕಲು ಹೋಗುತ್ತಿರಲಿಲ್ಲ. ಸಂಪೂರ್ಣ ಸ್ವಾತಂತ್ರ ಕೊಡುತ್ತಿದ್ವಿ. ಪ್ರೋತ್ಸಾಹ ಮಾಡುತ್ತಿದ್ವಿ.
ಅಶ್ವತ್ಥ ಅವರ ಕಾದಂಬರಿ ಆಧಾರಿತ ಚಿತ್ರ ‘ಮುನಿಯನ ಮಾದರಿ’. ಕಾದಂಬರಿ ಆಧಾರಿತ ಸಿನಿಮಾಗಳನ್ನೇ ನಾವು ಹೆಚ್ಚಾಗಿ ಮಾಡಿದ್ದು. ನಾನು, ದೊರೆ ಇಬ್ಬರೂ ಕಾದಂಬರಿಗಳನ್ನು ಹೆಚ್ಚು ಓದುತ್ತಿದೆವು. ಪಾರ್ವತಮ್ಮ ರಾಜ್ಕುಮಾರ್ ಅವರು ನಮಗೆ ಬಹುದೊಡ್ಡ ಬೆಂಬಲಿಗರಾಗಿದ್ರು. ‘ಮುನಿಯನ ಮಾದರಿ’ಗೆ ರಾಜ್ಯ ಪ್ರಶಸ್ತಿ ಬಂತು. ಆದ್ರೆ, ರಿಮೇಕ್ ರೈಟ್ಸ್ ಹೋಗಲಿಲ್ಲ. ಅನಂತ್ನಾಗ್ ಸಿನಿಮಾಗಳಿಗೆ ಡಬ್ಬಿಂಗ್, ರಿಮೇಕ್ ರೈಟ್ಸ್ ಸಿಗುತ್ತಿರಲಿಲ್ಲ. ಚಂದನದ ಗೊಂಬೆ ರಿಮೇಕ್ ರೈಟ್ಸ್ ಹೋಗಿತ್ತು. 2 ಲಕ್ಷ ಕೊಟ್ಟಿದ್ರು. ಅದಕ್ಕೂ ರಾಜ್ಯ ಪ್ರಶಸ್ತಿ ಬಂತು. ಕೊಂಚ ಲಾಭ ಕಮ್ಮಿಯಾಗಿದ್ದು, ಮುನಿಯನ ಮಾದರಿ ಸಿನಿಮಾದಲ್ಲಿ. ಆದರೆ ನಷ್ಟ ಆಗಲಿಲ್ಲ. ಮುನಿಯನ ಮಾದರಿ ಮತ್ತು ಹೆಣ್ಣಿನ ಕೂಗು ಸಿನಿಮಾಗಳಿಗೆ ಮಾತ್ರವೇ ಲಾಭ ಬಂದಿಲ್ಲ. ಆದರೆ ನಷ್ಟವೂ ಆಗಿರಲಿಲ್ಲ.
ಹತ್ತಾರು ಕಥೆಗಳನ್ನು ಓದಿ, ಜನರ ಅಭಿರುಚಿಗೆ ತಕ್ಕಂತೆ ಕಥೆ ಆರಿಸಿಕೊಳ್ಳುತ್ತಿದ್ವಿ. ಆಯ್ಕೆ ಮಾಡುವಾಗ ಜನಪ್ರಿಯತೆಯನ್ನು ದೃಷ್ಟಿಯಲ್ಲಿ ಇರಿಸಿಕೊಳ್ಳುತ್ತಿದೆವು. ಶಂಕರ್ನಾಗ್ ಚಿನಕುರಳಿ ಇದ್ದಂತೆ. ಹತ್ತು ಕೆಲಸವನ್ನು ಒಂದೇ ಕ್ಷಣದಲ್ಲಿ ಮಾಡುತ್ತಿದ್ದ. ನಟನೆಯಲ್ಲೂ ಅಷ್ಟೇ. ರಾಜ್ಕುಮಾರ್ ತರಹ, ಸಂಭಾಷಣೆಯನ್ನು ಒಂದು ಸಲ ಒದಿದ್ರೂ ಸಾಕು, ಎಲ್ಲ ಮನಸ್ಸಿನಲ್ಲಿ ಇದ್ದು ಬಿಡುತ್ತಿತ್ತು. ಅನಂತ್ನಾಗ್ ಕೂಡ ಹಾಗೆ ಒಂದು ಸಲ ಸೀನ್ ಓದಿದ್ರೂ ಸಾಕಿತ್ತು. ಆಗಿನ ಕಲಾವಿದರಿಗೆ ಅದೊಂದು ಕೊಡುಗೆ. ಒಂದು ದೃಶ್ಯವನ್ನು ಹತ್ತು ಸಲ ವಿವರಿಸುವ ಅಗತ್ಯವಿರಲಿಲ್ಲ. ಅವರಿಗೆ ನಟನೆಯನ್ನು ಕಲಿಸುವ ಅಗತ್ಯವೇ ಇರಲಿಲ್ಲ. ನಟ–ನಟಿಯರಿಬ್ಬರಿಗೂ ಈ ಮಾತು ಅನ್ವಯ. ನಿರ್ದೇಶಕರಿಗೆ ಬಹಳ ಖುಷಿ ಆಗುತ್ತಿತ್ತು.
ಮುನಿಯನ ಮಾದರಿಯಲ್ಲಿ ಲಾಭ ಬಂದಿಲ್ಲ ಎಂಬ ಬೇಸರ ದೊರೆಯವರಿಗಿತ್ತು. ನಿರೀಕ್ಷೆಯಂತೆ ಸಿನಿಮಾ ಓಡಿಲ್ಲ. ನಾನು ಆರಿಸಿದ ಕಾದಂಬರಿ ಎಂಬ ಅಸಮಾಧಾನವಿತ್ತು ಅವರಿಗೆ.
ನಾನು ‘ಗಾಳಿಮಾತು’ ಆರಿಸಿದೆ. ಇದನ್ನು ಸಿನಿಮಾ ಮಾಡೋಣ ಎಂದೆ. ಉದಯಶಂಕರ್ ಸಾಹಿತ್ಯ ಬರೆದ. ಎರಡನೇ ದಿವಸದ ಚಿತ್ರೀಕರಣ ಮಾಡುತ್ತಿದ್ವಿ. ಆಗ, ದೊರೆ ಅವರು ಯಾಕೋ ನನಗೆ ಸಿನಿಮಾ ಮಾಡಲು ಇಷ್ಟವಿಲ್ಲ. ಚಿತ್ರೀಕರಣ ನಿಲ್ಲಿಸೋಣ ಅಂದ್ರು. ಏಕೆ ಎಂದೆ. ಇದೊಂದು ಕಥೆನಾ ಎಂದು ಫೈಲನ್ನು ಎತ್ತಿ ಎಸೆದ್ರು. ಇದಕ್ಕೆ ಸಾಕ್ಷಿ ನನ್ನ ಸಹಾಯಕ ನಿರ್ದೇಶಕ ರೇಣುಕಾ ಶರ್ಮಾ.
ನಮ್ಮ ಸಿನಿಮಾಗಳಲ್ಲಿ ಮೇಕಪ್ ಕಲಾವಿದರಾಗಿ ಸುಬ್ಬಣ್ಣ ಇದ್ರು. ಕಸ್ತೂರಿ ನಿವಾಸ ಸಿನಿಮಾದಲ್ಲಿ ರಾಜ್ಕುಮಾರ್ ಅವರಿಗೆ ಮೇಕಪ್ ಮಾಡುವಾಗ, ಭಗವಾನ್ ನಿಮ್ಮ ಹತ್ತಿರ ಒಂದು ವಿಷಯ ಮಾತನಾಡಬೇಕು ಎಂದ್ರು. ಏನು ಎಂದೆ, ನನ್ನ ಮಗನಿಗೆ ಏನು ಕೆಲಸ ಇಲ್ಲ. ಸಮ್ನೆ ಅಲೆದಾಡುತ್ತಿದ್ದಾನೆ. ನಿಮ್ಮ ಕೈಕೆಳಗೆ ಒಂದು ಕೆಲಸ ಕೊಡಬೇಕು ಎಂದ್ರು. ಆಯ್ತು ಕಳುಹಿಸಿ, ನಾಳೆಯಿಂದ ತರಬೇತಿ ಕೊಡ್ತೇನೆ. ಅವನು ಬಂದು ಕ್ಲ್ಯಾಪ್ ಹಿಡ್ಕೊಳಲ್ಲಿ ಅಷ್ಟು ಸಾಕು. ಶಾಟ್ ನೊಡ್ಕೊತ್ತ ಇರಲಿ ಎಂದೆ. ಎಂ.ಎಸ್.ರಾಜ್ಶೇಖರ್ ಅವರ ಮಗ. ಮೊದಲ ದಿನ ಅವನಿಗೆ ಕ್ಲ್ಯಾಪ್ ಹೇಗೆ ಮಾಡಬೇಕು ಎಂದು ಹೇಳಿಕೊಟ್ಟೆ. ಹತ್ತಾರು ಸಿನಿಮಾಗಳಲ್ಲಿ ನಮ್ಮ ಜೊತೆಗೆ ಮಾಡಿದ್ದ. ಪುಟ್ಟಣ್ಣ ಕಣಗಾಲ್ ಅವಾರ್ಡ್ಗಳನ್ನೆಲ್ಲ ನಂತರದಲ್ಲಿ ಅವನು ತೆಗೆದುಕೊಂಡ.
ರಾಜ್ಕುಮಾರ್ ಅವರಿಗೆ ತುಂಬಾ ಬೇಕಾದಂತವನು ಅವನು. ಸುಬ್ಬಣ್ಣ ಅವರ ಮಗ ಆದ್ದರಿಂದ ಬಹಳ ಪ್ರಿಯ ಅವರಿಗೆ.
ರಾಜ್ಕುಮಾರ್ ಅವರ ಸಿನಿಮಾ ನಿರ್ದೇಶನಕ್ಕೆ ಅವಕಾಶ ಕೊಡಲಿಲ್ಲ ಎಂಬ ಬೇಸರ ಅವನಿಗಿತ್ತು. ಅದನ್ನು ನನ್ನ ಮೇಲೆ ತೀರಿಸಿಬಿಟ್ಟ. ಇಂಥವರೆಲ್ಲ ಇರುವುದರಿಂದಲೇ ನನಗೆ ಅವಕಾಶ ಸಿಗುತ್ತಿಲ್ಲ ಎಂದು ಬಿಟ್ಟ. ಅವನಿಗೆ ಅವಕಾಶ ಸಿಗುವುದಕ್ಕೂ ನಮಗೂ ಸಂಬಂಧವೇ ಇರಲಿಲ್ಲ. ಅವನು ಹೇಳಿದ್ದನ್ನು ನಾನು ಗಂಭೀರವಾಗಿ ತೆಗೆದುಕೊಂಡಿಲ್ಲ. ಅದು ಬೇರೆ ಯಾರ ಬಳಿಯೋ ಹೇಳಿದನೆಂದು ಸುದ್ದಿ. ಇವೆಲ್ಲ ಅಂತೆ–ಕಂಥೆ ಅದು ನಿಜವೋ, ಸುಳ್ಳೋ ಎಂಬುದು ನನಗೆ ಗೊತ್ತಿಲ್ಲ. ಅವರವರ ಧರ್ಮ ಅವರನ್ನು ಕಾಪಾಡುತ್ತದೆ ಅಷ್ಟೆ. ಇದು ಕಸ್ತೂರಿ ನಿವಾಸದ ಫ್ಲ್ಯಾಶ್ ಬ್ಯಾಕ್.
ಗಾಳಿಮಾತಿನ ಫೈಲ್ ಎಸೆದು ಬಿಟ್ರು. ದೊರೆ ಇದನ್ನು ಮಾಡೋಣ, ನನಗೆ ವಿಶ್ವಾಸ ಇದೆ. ನೀವು ಈ ರೀತಿ ಫೈಲ್ ಬಿಸಾಕಿದ್ದು, ನನಗೆ ತುಂಬಾ ನೋವಾಗುತ್ತಿದೆ ಎಂದೆ. ಗಿರಿಕನ್ಯೆಯನ್ನು ನಿಮ್ಮ ಆಸೆಯಂತೆ ನಿಲ್ಲಿಸಿದ್ದೇವೆ. ಇದನ್ನು ನಿಲ್ಲಿಸೋಣ, ನಿಮಗೆ ಬೇಡ ಎಂದ್ರೆ, ನನಗೂ ಬೇಡ ಎಂದೆ. ನಾನು ಎದುರಾಡದೇ ಇದ್ದಾಗ, ಅವರು ಕೊಡಿ ಫೈಲ್ ಕೊಡಿ ಏನಿದೆ ನೋಡೋಣ ಎಂದು ಶರ್ಮಾಗೆ ಹೇಳಿ, ತಗೊಂಡ್ರು.
ಗಾಳಿಮಾತು ಮುಗಿಸಿದ್ವಿ. ವಿಜಯ ಪಿಕ್ಚರ್ಸ್ ಅವರು ಅದರ ಡಿಸ್ಟ್ರಿಬ್ಯೂಟರ್ಸ್. ಮುನಿಯನ ಮಾದರಿಗೂ ಅವರೇ ಡಿಸ್ಟ್ರಿಬ್ಯೂಟರ್ಸ್ ಆಗಿದ್ರು. ಮುನಿಯನ ಮಾದರಿಗೆ ಒಂದು ಚೆಕ್ಕನ್ನೂ ಅವರು ಕೊಟ್ಟಿರಲಿಲ್ಲ. ಗಾಳಿಮಾತು ರಿಲೀಸ್ ಆದ ಮೇಲೆ ತಿಂಗಳಿಗೆ ಒಂದು ಚೆಕ್ ಕಳುಹಿಸುತ್ತಿದ್ರು. ಆಗ ದೊರೆಯವರಿಗೆ ಹೇಳಿದೆ, ನೀವು ಕೋಪ ಮಾಡಿಕೊಂಡು ಫೈಲ್ ಬಿಸಾಕಿದ್ದು ಒಳ್ಳೇಯದೇ ಆಯ್ತು. ನಮಗೆ ಚೆಕ್ ಮೇಲೆ ಚೆಕ್ ಬರುತ್ತಿದೆ. ನಂತರದಲ್ಲಿ ನೀವು ಆಸಕ್ತಿಯಿಂದ, ಅಷ್ಟು ಚೆನ್ನಾಗಿ ಸಿನಿಮಾ ಮಾಡಿದ್ರಿ ಎಂದೆ. ರಾಜನ್–ನಾಗೇಂದ್ರ ಅವರನ್ನು ಎಷ್ಟು ಹೊಗಳಿದರೂ ಸಾಲದು. ಅಂಥ ಹಾಡುಗಳನ್ನು ಈ ಸಿನಿಮಾಕ್ಕೆ ಕೊಟ್ಟಿದ್ದಾರೆ. ‘ಒಮ್ಮೆ ನಿನ್ನನ್ನು’, ‘ನಮ್ಮೂರ ಸಂತೆಯಲ್ಲಿ’, ‘ಬಯಸದೇ ಬಳಿ ಬಂದೇ’, ‘ನಗಿಸಲು ನೀನು, ನಗುವೆನು ನಾನು’... ಎಲ್ಲ ಅದ್ಭುತವಾದಂತಹ ಹಾಡುಗಳೇ.
ಗಾಳಿಮಾತುವಿನಲ್ಲಿ ಅನಂತ್ನಾಗ್ ನಟಿಸಬೇಕಿತ್ತು. ಬಾಂಬೆಯಿಂದ ಮೈಸೂರಿಗೆ ಬರುತ್ತೇನೆ ಎಂದಿದ್ರು. ನಾವು ಮೈಸೂರಿಗೆ ಹೋಗಿ ಶೂಟಿಂಗ್ಗೆ ರೆಡಿ ಮಾಡಿಕೊಂಡಿದ್ದೆವು. ಎರಡು ದಿನ ಮುಂಚೆನೇ ಅಲ್ಲಿಗೆ ಹೋಗಿದ್ವಿ. ಆಗ ಒಂದು ಟೆಲಿಗ್ರಾಂ ಬಂತು. ಒಂದು ವಾರ ಶೂಟಿಂಗ್ ಮುಂದೂಡಿ. ನಾನು ಬಾಂಬೆಯಲ್ಲಿಯೇ ಇದ್ದೇನೆ ಎಂದು ಕಳುಹಿಸಿದ್ರು. ಎಲ್ಲರನ್ನೂ ಕರೆದುಕೊಂಡು ಹೋಗಿದ್ವಿ. ನಮಗೆ ಏನು ಮಾಡುವುದು ಎಂದು ಚಿಂತೆಯಾಯ್ತು. ಶೂಟಿಂಗ್ ಕ್ಯಾನ್ಸಲ್ ಮಾಡಿದ್ರೆ ಸಿಕ್ಕಾಪಟ್ಟೆ ಲಾಸ್ ಆಗುತ್ತಿತ್ತು. ನಾನು ದೊರೆ ಏನು ಮಾಡುವುದೆಂದು ರೂಮಿನಿಂದ ಆಚೆ ಬಂದು ಯೋಚನೆ ಮಾಡುತ್ತ ನಿಂತಿದ್ವಿ. ಎರಡನೇ ಮಹಡಿಯಲ್ಲಿದ್ದೆವು. ಕೆಳಗೆ ಒಂದು ಹುಡುಗ ಹೋಗುತ್ತಿದ್ದ. ದಾಸ ಪ್ರಕಾಶ್ನಲ್ಲಿ ಮಸಾಲಾ ದೋಸೆ ಬಹಳ ಫೇಮಸ್. ಅವನು ಒಳಗೆ ಹೋಗಿ, ಹೊರಗೆ ಬಂದು ಯಾರದೋ ಬಳಿ ಮಾತನಾಡುತ್ತಿದ್ದ. ನಾವು ನಮ್ಮ ಮ್ಯಾನೇಜರ್ ರಾಮಣ್ಣ ಅವರನ್ನು ಕರೆದು, ಆ ಹುಡುಗ ಯಾರು ನೋಡು. ಅವನನ್ನು ಎಲ್ಲೋ ನೋಡಿದ್ದೀವಿ ಎಂದೆವು. ಅವನು ಜೈ ಜಗದೀಶ್. ‘ಫಲಿತಾಂಶ’ದಲ್ಲಿ ನಟಿಸಿದ್ದಾನೆ. ಪುಟ್ಟಣ್ಣ ಅವರು ಪರಿಚಯಿಸಿದ್ರಲ್ಲಾ ಆ ಹುಡುಗ ಸರ್ ಅಂದ ರಾಮಣ್ಣ. ಕರಿ ಅವನನ್ನು ಅಂದ್ವಿ. ಅವನು ಕರೆದುಕೊಂಡು ಬಂದ. ಏನಪ್ಪ, ಹೀಗೆ ನಾಡಿದ್ದು ಒಂದು ಸಿನಿಮಾ ಶೂಟಿಂಗ್ ಇದೆ ಮಾಡ್ತೀಯಾ ಎಂದೆವು. ಸರ್, ನಿಮ್ಮ ಸಿನಿಮಾದಲ್ಲಿ ನಾನು ಮಾಡದೇ ಇರುತ್ತೇನಾ, ಹೇಳಿ ಸರ್ ಎಂದ. ಅವನು ದುಡ್ಡು ಕೇಳಲೇ ಇಲ್ಲ. ಎಷ್ಟು ದುಡ್ಡು ಕೊಡಬೇಕು ಎಂದ್ರೆ, ನೀವು ಅದೆಲ್ಲ ಮಾತಾಡಬೇಡಿ ಸರ್. ನೀವು ಪಿಕ್ಚರ್ ಮಾಡಿ. ಆಮೇಲೆ ಇಷ್ಟ ಬಂದಷ್ಟು ಕೊಡಿ ಎಂದ. ಅವನನ್ನು ಹಾಕ್ಕೊಂಡು ಪಿಕ್ಚರ್ ಶುರು ಮಾಡೆದೆವು. ಒಂದು ವಾರ ಆದ ಮೇಲೆ ದಾಸಪ್ರಕಾಶ್ ಹೋಟೆಲ್ಗೆ ಒಂದು ಕವರ್ ಬಂತು. ಅದನ್ನು ಓಪನ್ ಮಾಡಿದ್ರೆ, ಅನಂತ್ನಾಗ್ ಅವರ ಲೆಟರ್. ಗಾಳಿಮಾತು ಸಿನಿಮಾವನ್ನು ಬೇರೆ ಹೀರೊ ಹಾಕಿಕೊಂಡು ಮಾಡುತ್ತಿದ್ದೀರಾ ಎಂಬುದು ತಿಳಿಯಿತು. ನನಗೆ ತುಂಬಾ ಖುಷಿಯಾಯ್ತು. ಸಿನಿಮಾ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ. ಈ ಸಿನಿಮಾಕ್ಕೆ ನನಗೆ ಕೊಟ್ಟ 25 ಅಡ್ವಾನ್ಸ್ಚೆಕನ್ನು ವಾಪಸ್ಸು ಕಳುಹಿಸುತ್ತಿದ್ದೇನೆ (ಇಂಗ್ಲಿಷ್ನಲ್ಲಿ) ಎಂದು ಬರೆದಿದ್ರು.
ಮುಂದುವರೆಯುವುದು...
ಸಂದರ್ಶಕರು - ಕೆ.ಎಸ್ ಪರಮೇಶ್ವರ